ಪದ್ಯ ೨೨: ಕುಂತಿಯು ಮಾದ್ರಿಗೆ ಏನು ಹೇಳಿದಳು?

ಅರಸ ತನಗರುಹದೆ ಸುರಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರುಬ ಕೊಯ್ಸುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀಮಕ್ಕಳನು ಸಂ
ವರಿಸಿ ಕೊಂಡಿಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ (ಆದಿ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ರಾಜ, ನನಗೆ ಹೇಳದೇ ನೀನು ಅಪ್ಸರಸ್ತ್ರೀಯರ ಬಳಿಗೆ ಹೋದೆಯಲ್ಲವೇ? ನಾನು ನೀನಿರುವಲ್ಲಿಗೆ ಬಂದು ಅವರ ತುರುಬನ್ನು ಕೊಯ್ಸಿ ನನ್ನ ದಾಸಿಯರನ್ನಾಗಿ ಮಾಡಿಕೊಳ್ಳುತ್ತೇನೆ. ಮಾದ್ರಿ, ನೀನು ಈ ಮಕ್ಕಳನ್ನು ಸಾಕಿಕೊಂಡಿರು ಎಂದು ಮಾದ್ರಿಯ ಕೈಯನ್ನು ಹಿಡಿದಳು. ಮಾದ್ರಿಯು ವಿನಯದಿಂದ ಕುಂತಿಗೆ ಹೀಗೆಂದಳು.

ಅರ್ಥ:
ಅರಸ: ರಾಜ; ಅರುಹು: ಹೇಳು; ಸುರಸ್ತ್ರೀ: ಅಪ್ಸರೆ; ಹರಿದೈ: ಸೇರು; ವಧು: ಹೆಣ್ಣು, ಹೆಂಡತಿ; ತುರುಬು: ಕೂದಲಿನ ಗಂಟು, ಮುಡಿ; ಕೊಯ್ಸು: ಸೀಳು; ತೊತ್ತು: ದಾಸಿ; ಅರಸಿ: ರಾಣಿ; ಮಕ್ಕಳು: ಕುಮಾರ; ಸಂವರಿಸು: ಕಾಪಾಡು; ಕರ: ಹಸ್ತ; ಹಿಡಿ: ಗ್ರಹಿಸು; ಕಾಂತೆ: ಹೆಣ್ಣು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಅರಸ+ ತನಗ್+ಅರುಹದೆ +ಸುರಸ್ತ್ರೀ
ಯರಿಗೆ +ಹರಿದೈ +ನಿನ್ನ+ ವಧುಗಳ
ತುರುಬ +ಕೊಯ್ಸುವೆನ್+ಅವರ +ತೊತ್ತಿರ+ ಮಾಡುವೆನು +ತನಗೆ
ಅರಸಿ +ನೀನ್+ಈ+ಮಕ್ಕಳನು+ ಸಂ
ವರಿಸಿ +ಕೊಂಡಿಹುದೆಂದು+ ಮಾದ್ರಿಯ
ಕರವ+ ಹಿಡಿದರೆ +ಕುಂತಿಗೆಂದಳು +ಕಾಂತೆ +ವಿನಯದಲಿ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಸುರಸ್ತ್ರೀಯರಿಗೆ ಹರಿದೈ

ಪದ್ಯ ೧೩: ಅಶ್ವತ್ಥಾಮನು ಯಾರ ಭಯವಿಲ್ಲವೆಂದು ಹೇಳಿದನು?

ಆದಡಿರಿ ನೀವಿಬ್ಬರಿಲ್ಲಿ ವಿ
ವಾದ ನಿಮ್ಮೊಡನೇಕೆ ಜನಪರಿ
ವಾದ ಭಯವೆಮಗಿಲ್ಲ ಸಾರಥಿ ರಥವ ತಾಯೆನುತ
ಕೈದುಗಳ ಸಂವರಿಸಿ ರಥದಲಿ
ಹಾಯ್ದು ಹೊರವಡೆ ಭೋಜಕೃಪರನು
ವಾದಡೆಮಗೇನೆನುತ ಬಂದರು ಪಾಳೆಯದ ಹೊರಗೆ (ಗದಾ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ಹಾಗಾದರೆ ನೀವಿಬ್ಬರೂ ಇಲ್ಲಿಯೇ ಇರಿ, ನಿಮ್ಮೊಡನೆ ವಿವಾದ ಮಾಡುವುದು ಬೇಕಿಲ್ಲ. ಜನರು ನಮ್ಮನ್ನು ನಿಂದಿಸಬಹುದು, ಆ ಅಪವಾದದ ಭಯ ನನಗಿಲ್ಲ. ಸಾರಥಿ, ರಥವನ್ನು ಇಲ್ಲಿಗೆ ತಾ ಎಂದು ರಥದಲ್ಲಿ ಆಯುಧಗಳನ್ನು ಜೋಡಿಸಿ ಇಟ್ಟು ಹೊರಡಲು, ನಾವೂ ಹೋದರೆ ಏನಾಗಬಹುದು ಎಂಬ ಕುತೂಹಲದಿಂದ ಪಾಂಡವರ ಪಾಳೆಯದ ಬಳಿಗೆ ಬಂದರು.

ಅರ್ಥ:
ವಿವಾದ: ವಾಗ್ದಾನ, ಚರ್ಚೆ; ಭಯ: ಹೆದರಿಕೆ; ಜನ: ಮನುಷ್ಯ; ಪರಿವಾದ: ನಿಂದೆ, ತೆಗಳಿಕೆ; ಸಾರಥಿ: ಸೂತ; ರಥ: ಬಂಡಿ; ಕೈದು: ಆಯುಧ; ಸಂವರಿಸು: ಗುಂಪುಗೂಡು, ಸರಿಪಡಿಸು, ಸಜ್ಜು ಮಾಡು; ಹಾಯ್ದು: ಹತ್ತು, ಏರು; ಹೊರವಡೆ: ಹೊರಡು; ಅನುವು: ರೀತಿ, ಅವಕಾಶ; ಬಂದರು: ಆಗಮಿಸು; ಪಾಳೆಯ: ಬಿಡಾರ; ಹೊರಗೆ: ಆಚೆ;

ಪದವಿಂಗಡಣೆ:
ಆದಡ್+ಇರಿ +ನೀವಿಬ್ಬರ್+ಇಲ್ಲಿ+ ವಿ
ವಾದ +ನಿಮ್ಮೊಡನೇಕೆ +ಜನ+ಪರಿ
ವಾದ +ಭಯವ್+ಎಮಗಿಲ್ಲ+ ಸಾರಥಿ +ರಥವ +ತಾ+ಎನುತ
ಕೈದುಗಳ +ಸಂವರಿಸಿ +ರಥದಲಿ
ಹಾಯ್ದು +ಹೊರವಡೆ +ಭೋಜ+ಕೃಪರ್+ಅನು
ವಾದಡ್+ಎಮಗೇನ್+ಎನುತ +ಬಂದರು +ಪಾಳೆಯದ +ಹೊರಗೆ

ಅಚ್ಚರಿ:
(೧) ವಿವಾದ, ಪರಿವಾದ, ಅನುವಾದ – ಪದಗಳ ಬಳಕೆ

ಪದ್ಯ ೭: ಕೌರವನು ಎಲ್ಲಿ ಸೇರಿದನೆಂದು ಸಂಜಯನು ತಿಳಿಸಿದನು?

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ (ಗದಾ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನನ್ನು ಸಂತೈಸುತ್ತಾ ಒಂದು ಸರೋವರದ ತೀರಕ್ಕೆ ಕರೆದುಕೊಂಡು ಹೋಗಿ, ಗದೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ತಂದೆಗೆ ಈ ವಿಷಯವನ್ನು ಹೇಳು ಎಂದು ನನಗೆ ತಿಳಿಸಿ, ಎಲ್ಲಾ ಕಡೆಯೂ ನೋಡಿ, ನೀರಿನಲ್ಲಿ ಮುಳುಗಿದನು. ಆನಂತರ ನನಗೆ ಮತ್ತೆ ಕಾಣಿಸಲಿಲ್ಲ ಎಂದು ಸಂಜಯನು ಕೃಪ ಅಶ್ವತ್ಥಾಮರಿಗೆ ತಿಳಿಸಿದನು.

ಅರ್ಥ:
ಬಂದು: ಆಗಮಿಸು; ಸಂತ: ಸೌಖ್ಯ, ಕ್ಷೇಮ; ಸರಸಿ: ಸರೋವರ; ತಡಿ: ದಡ; ಅಳವು: ಅಳತೆ, ನೆಲೆ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಗದೆ: ಮುದ್ಗರ; ಬಾಹು: ತೋಳು; ಬಾಹುಮೂಲ: ಕಂಕಳು; ತಂದೆ: ಜನಕ; ಅರುಹು: ತಿಳಿಸು, ಹೇಳು; ಹಿಂದೆ: ಭೂತ; ಮುಂದೆ: ಎದುರು; ಎಡಬಲ: ಅಕ್ಕ ಪಕ್ಕ; ನೀರು: ಜಲ; ಹೊಕ್ಕು: ಸೇರು; ಕಾಣೆ: ತೊರಾದಾಗು; ಅವನಿಪನ: ರಾಜ;

ಪದವಿಂಗಡಣೆ:
ಬಂದನ್+ಎನ್ನನು +ಸಂತವಿಡುತಲದ್
ಒಂದು +ಸರಸಿಯ +ತಡಿಯಲ್+ಅಳವಡೆ
ನಿಂದು +ಸಂವರಿಸಿದನು+ ಗದೆಯನು +ಬಾಹುಮೂಲದಲಿ
ತಂದೆಗ್+ಅರುಹೆಂದ್+ಎನಗೆ +ಹೇಳಿದು
ಹಿಂದೆ +ಮುಂದ್+ಎಡ+ಬಲನನಾರೈ
ದಂದವಳಿಯದೆ +ನೀರ+ ಹೊಕ್ಕನು +ಕಾಣೆನ್+ಅವನಿಪನ

ಅಚ್ಚರಿ:
(೧) ಎಲ್ಲಾ ದಿಕ್ಕುಗಳು ಎಂದು ಹೇಳುವ ಪರಿ – ಹಿಂದೆ ಮುಂದೆಡಬಲ
(೨) ಕಂಕಳು ಎಂದು ಹೇಳುವ ಪರಿ – ಬಾಹುಮೂಲ

ಪದ್ಯ ೨೩: ಧರ್ಮಜನು ಯಾವ ಅಪ್ಪಣೆಯನ್ನು ನೀಡಿದನು?

ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶಲ್ಯನು ಬಂಗಾರದ ರಥವನ್ನು ತರಿಸಿ ಸಜ್ಜು ಮಾಡಿಸಿ, ಧ್ವಜವನ್ನು ಮೇಲೆ ಹಾರಿಸಿದನು. ಬಾಣಗಳು ತುಮ್ಬಿದ ಬಂಡಿಗಳನ್ನು ರಥದ ಮಗ್ಗುಲಿಗೆ ಒಪ್ಪ್ವಾಗಿ ಜೋಡಿಸಿದನು. ಬಿರುದನ್ನು ಹೊಗಳುವ ಪಾಠಕರಿಗೆ ರತ್ನಗಳನ್ನೂ, ಬಂಗಾರವನ್ನೂ ಕೊಟ್ಟು ಉತ್ಸಾಹದಿಂದುಬ್ಬಿ, ಧರ್ಮಜನನ್ನು ಯುದ್ಧಕ್ಕೆ ಕರೆಯಿರಿ ಎಂದಪ್ಪಣೆ ನೀಡಿದನು.

ಅರ್ಥ:
ತರಿಸು: ಬರೆಮಾಡು; ಕಾಂಚನ: ಹೊನ್ನು, ಚಿನ್ನ; ರಥ: ಬಂಡಿ; ಸಂವರಿಸು: ಸಂಗ್ರಹಿಸು; ಟೆಕ್ಕೆ:ಬಾವುಟ, ಧ್ವಜ; ಸರಳ: ಬಾಣ; ತುಂಬು: ಪೂರ್ಣವಾದ; ಬಂಡಿ: ರಥ; ಕೆಲಬಲ: ಅಕ್ಕಪಕ್ಕ; ಜೋಡಿಸು: ಕೂಡಿಸು; ಬಿರುದು: ಗೌರವ ಸೂಚಕ ಪದ; ಒದರು: ಹೊರಹಾಕು, ಹೇಳು; ಪಾಠಕ: ಹೊಗಳುಭಟ್ಟ; ಮೋಹರ: ಯುದ್ಧ; ಮಣಿ: ಬೆಲೆಬಾಳುವ ರತ್ನ; ಮೊಗೆ: ಹೊರಹಾಕು, ಹೊರಹೊಮ್ಮಿಸು; ಅರರೆ: ಅಶ್ಚರ್ಯ ಸೂಚಕ ಪದ; ಕರೆ: ಬರೆಮಾಡು; ಉಬ್ಬು: ಹಿಗ್ಗು, ಗರ್ವಿಸು;

ಪದವಿಂಗಡಣೆ:
ತರಿಸಿ +ಕಾಂಚನಮಯ +ರಥವ+ ಸಂ
ವರಿಸಿದನು +ಟೆಕ್ಕೆಯವನ್+ಎತ್ತಿಸಿ
ಸರಳ+ ತುಂಬಿದ +ಬಂಡಿಗಳ +ಕೆಲಬಲಕೆ +ಜೋಡಿಸಿದ
ಬಿರುದನ್+ಒದರುವ +ಪಾಠಕರ+ ಮೋ
ಹರಕೆ+ ಮಣಿ+ಕಾಂಚನವ +ಮೊಗೆದಿತ್ತ್
ಅರರೆ +ಕರೆಯೋ +ಧರ್ಮಜನನ್+ಎಂದುಬ್ಬಿದನು+ ಶಲ್ಯ

ಅಚ್ಚರಿ:
(೧) ಹೊಗಳುಭಟ್ಟರ ಕೆಲಸವನ್ನು ಹೇಳುವ ಪರಿ – ಬಿರುದನೊದರುವ ಪಾಠಕರ

ಪದ್ಯ ೨೫: ಧೃಷ್ಟದ್ಯುಮ್ನನು ಕೌರವ ಸೈನ್ಯವನ್ನು ಹೇಗೆ ಹಂಗಿಸಿದನು?

ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರುಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ (ದ್ರೋಣ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದವರು ಅಬ್ಭಾ ಸೋತು ಹೋಗಿದ್ದ ಸೈನ್ಯ ಸುಧಾರಿಸಿಕೊಂಡು ಯುದ್ಧಕ್ಕೆ ಬಂದಿದೆ. ಯುದ್ಧವು ನಮ್ಮ ಸಹಜ ಶಕ್ತಿ. ಶತ್ರುವೀರರು ಮೂದಲಿಸಿದ ಮಾತ್ರಕ್ಕೆ ರಾಜ್ಯಶ್ರೀಯನ್ನು ಹೇಗೆ ಪಡೆಯಲು ಸಾಧ್ಯ? ಶತ್ರುಗಳ ಮನಸ್ಸಿನಲ್ಲಿ ಭಯ ತುಂಬಿದೆ. ಪೌರುಷ ಮಾತಿನಲ್ಲಿ ಉಕ್ಕುತ್ತಿದೆ. ಕಾಲುಗಳು ತಿರುಗಿ ಓಡುತ್ತಿವೆ. ಕೌರವ ವೀರರು ನಾಚಿಕೆಯಿಲ್ಲದ ಹೇಡಿಗಳು ಎಂದು ಧೃಷ್ಟದ್ಯುಮ್ನನು ಮೂದಲಿಸಿದನು.

ಅರ್ಥ:
ಸೋತು: ಪರಾಭವ; ಸಂವರಿಸು: ಸಮಾಧಾನಗೊಳಿಸು; ಪೂತು: ಭಲೇ; ರಣ: ಯುದ್ಧ; ಧಾತು: ತೇಜಸ್ಸು, ಮೂಲವಸ್ತು; ಕಲಿ: ಶೂರ; ಮೂದಲಿಸು: ಹಂಗಿಸು; ಕರೆ: ಬರೆಮಾಡು; ರಾಜ್ಯ: ರಾಷ್ಟ್ರ; ಸಿರಿ: ಸಂಪತ್ತು; ಭೀತಿ: ಭಯ; ಮನ: ಮನಸ್ಸು; ಪೌರುಷ: ಪರಾಕ್ರಮ; ಮಾತು: ನುಡಿ; ಮುಖ: ಆನನ; ಮುರಿ: ಸೀಳು; ಕಾಲು: ಪಾದ; ಬೂತು: ಕುಚೋದ್ಯ, ಕುಚೇಷ್ಟೆ; ಇದಿರು: ಎದುರು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಸೋತ +ಬಲ +ಸಂವರಿಸಿಕೊಂಡುದು
ಪೂತುರೇ +ರಣವೆಂಬುದ್+ಎಮ್ಮಯ
ಧಾತು +ಕಲಿ+ ಮೂದಲಿಸಿ +ಕರೆದರೆ+ ರಾಜ್ಯಸಿರಿಯೇಕೆ
ಭೀತಿ+ ಮನದಲಿ +ಪೌರುಷಾಂಗದ
ಮಾತು +ಮುಖದಲಿ+ ಮುರಿವು +ಕಾಲಲಿ
ಬೂತುಗಳು+ ಕುರುವೀರರೆನುತ್+ ಇದಿರಾದುದ್+ಅರಿಸೇನೆ

ಅಚ್ಚರಿ:
(೧) ಸೈನಿಕರನ್ನು ಹುರಿದುಂಬಿಸುವ ಪರಿ – ರಣವೆಂಬುದೆಮ್ಮಯ ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ