ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ

ಪದ್ಯ ೭: ಕುರುಸೇನೆಯು ಅರ್ಜುನನೆದುರು ಹೇಗೆ ಬಂದರು?

ರಣಪರಚ್ಛೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ (ಗದಾ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ಯುದ್ಧ ವಿಶಾರದರಾದ ಕುರುಸೇನೆಯ ವೀರರು, ರಣವಾದ್ಯಗಳ ರಭಸದೊಡನೆ ಬೆಟ್ಟವನ್ನೇ ಅಲುಗಿಸುವ ಅದ್ಭುತವಾದ ಶಬ್ದವನ್ನು ಮಾಡುತ್ತಾ ಅರ್ಜುನನ ರಥವನ್ನು ತರುಬಿದರು. ರಾವುತರು ಬರಲು ಅವರ ಕುದುರೆಗಳ ಗೊರಸುಗಳು ಅರ್ಜುನನ ರಥದ ಕುದುರೆಗಳಗೊರಸುಗಳನ್ನು ಘಟ್ಟಿಸಿದವು.

ಅರ್ಥ:
ರಣ: ಯುದ್ಧ; ಪರಿಚ್ಛೇದಿ: ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದವ, ವಿದ್ವಾಂಸ; ಮಿಗೆ: ಅಧಿಕ; ಸಂದಣಿಸು: ಗುಂಪುಗೂಡು; ವಾದ್ಯ: ಸಂಗೀತದ ಸಾಧನ; ಅಣಿ: ಸಿದ್ಧವಾಗು; ಅದ್ರಿ: ಬೆಟ್ಟ; ಒದೆ: ನೂಕು; ಅದುಭುತ: ಆಶ್ಚರ್ಯ; ಬೊಬ್ಬೆ: ಕೂಗು; ಲಳಿ: ರಭಸ; ಕುಣಿ: ನರ್ತಿಸು; ಉರು: ಹೆಚ್ಚಾದ, ಶ್ರೇಷ್ಠ; ರಥ: ಬಂಡಿ; ಹಯ: ಕುದುರೆ; ಹೆಣಗು: ಹೋರಾಡು; ಹಯ: ಕುದುರೆ; ಕಂದ: ಕುತ್ತಿಗೆ, ಭುಜಾಗ್ರ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಹೊಯ್ಲು: ಏಟು, ಹೊಡೆತ; ಆರೋಹ: ಹತ್ತುವವ;

ಪದವಿಂಗಡಣೆ:
ರಣ+ಪರಚ್ಛೇದಿಗಳು +ಮಿಗೆ +ಸಂ
ದಣಿಸಿತೋ +ಕುರುಸೇನೆ+ ವಾದ್ಯದ
ರಣಿತವ್+ಅದ್ರಿಯನ್+ಒದೆದುದ್+ಅದುಭತ +ಬೊಬ್ಬೆಗಳ +ಲಳಿಯ
ಕುಣಿದವ್+ಅರ್ಜುನನ್+ಉರು+ರಥದ +ಮುಂ
ಕಣಿಯಲ್+ಆರೋಹಕರು +ರಥ +ಹಯ
ಹೆಣಗಿದವು +ಹಯದೊಡನೆ +ಕಂದದ +ಖುರದ +ಹೊಯ್ಲಿನಲಿ

ಅಚ್ಚರಿ:
(೧) ರಣಪರಿಚ್ಛೇದಿ – ಪದದ ಬಳಕೆ
(೨) ಕುಣಿ ಪದದ ಬಳಕೆ – ಕುಣಿದವರ್ಜುನನುರುರಥದ ಮುಂಕಣಿಯಲಾರೋಹಕರು
(೩) ಪದದ ರಚನೆ – ವಾದ್ಯದರಣಿತವದ್ರಿಯನೊದೆದುದದುಭತ
(೪) ರೂಪಕದ ಪ್ರಯೋಗ – ಕುರುಸೇನೆ ವಾದ್ಯದರಣಿತವದ್ರಿಯನೊದೆದುದದುಭತ ಬೊಬ್ಬೆಗಳ ಲಳಿಯ

ಪದ್ಯ ೬: ಅರ್ಜುನನ ಮೇಲೆ ಯಾರು ಆಕ್ರಮಣ ಮಾಡಿದರು?

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು (ಗದಾ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅರ್ಜುನನ ಮೇಲೆ ಆಕ್ರಮಣ ಮಾಡಿತು. ರಥಗಳು ವೇಗದಿಂದ ನುಗ್ಗಿದವು. ಗಜಘಟೆಗಳು ಮುಂದಾದವು. ಜೋಡಿ ಬೆರಳುಗಳಿಂದ ಬಾಣವನ್ನೆಳೆದು ಬಿಲ್ಲುಗಾರರು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟು ಅವನ ಆಕ್ರಮಣವನ್ನು ತಡೆದರು. ಈಟಿಯನ್ನು ಹಿಡಿದವರು ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು, ಮುತ್ತು; ದುವ್ವಾಳಿ: ತೀವ್ರಗತಿ, ಓಟ; ರಥ: ಬಂಡಿ; ನಿವಹ: ಗುಂಪು; ಬಿಡು: ತೊರೆ; ಕುದುರೆ: ಅಶ್ವ; ಸೂಠಿ: ವೇಗ; ಅವಗಡಿಸು: ಕಡೆಗಣಿಸು, ಸೋಲಿಸು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡ ಆನೆ; ಸಂದಣಿಸು: ಗುಂಪುಗೂಡು; ಸವಡಿ: ಜೊತೆ, ಜೋಡಿ; ಸೇದು: ಸೆಳೆ, ದೋಚು; ಅಂಬು: ಬಾಣ; ತವಕ: ಬಯಕೆ, ಆತುರ; ತರುಬು: ತಡೆ, ನಿಲ್ಲಿಸು; ಬಲುಬಿಲ್ಲವರು: ಶ್ರೇಷ್ಠನಾದ ಬಿಲ್ಲುಗಾರ; ಮೊನೆ: ತುದಿ; ಮೋಹಿತ: ಆಕರ್ಷ್ತಿಸಲ್ಪಟ್ಟ; ಮಿಕ್ಕ: ಉಳಿದ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಕವಿದುದಿದು +ದುವ್ವಾಳಿಸುತ +ರಥ
ನಿವಹ +ಬಿಟ್ಟವು +ಕುದುರೆ +ಸೂಠಿಯಲ್
ಅವಗಡಿಸಿ +ತೂಳಿದವು +ಹೇರಾನೆಗಳು +ಸಂದಣಿಸಿ
ಸವಡಿ+ಬೆರಳಲಿ +ಸೇದುವ್+ಅಂಬಿನ
ತವಕಿಗರು +ತರುಬಿದರು +ಬಲುಬಿ
ಲ್ಲವರು +ಮೊನೆ+ಮುಂತಾಗಿ +ಮೋಹಿತು +ಮಿಕ್ಕ +ಸಬಳಿಗರು

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊನೆ ಮುಂತಾಗಿ ಮೋಹಿತು ಮಿಕ್ಕ
(೨) ಬಿಲ್ಲುಗಾರರನ್ನು ವಿವರಿಸುವ ಪರಿ – ಸವಡಿವೆರಳಲಿ ಸೇದುವಂಬಿನ ತವಕಿಗರು ತರುಬಿದರು

ಪದ್ಯ ೫೮: ಪಾಂಡವ ಸೇನೆಯು ಯಾವ ಮಾತುಗಳನ್ನಾಡುತ್ತಿತ್ತು?

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ (ಶಲ್ಯ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮಜನನ್ನು ಗೆದ್ದ, ಛೇ, ಇಲ್ಲ ಅವನು ನಮ್ಮ ದಳಪತಿಯನ್ನು ಸೋಲಿಸಿದನು, ಧರ್ಮಜನು ಹೆದರಿದ, ಅಜೇಯನಾದ ಶಲ್ಯನು ಹೆದರಿದನು, ಎಂಬ ತರತರದ ಮಾತುಗಳನ್ನು ಪಾಂಡವ ಸೇನೆಯು ಆಡುತ್ತಿತ್ತು.

ಅರ್ಥ:
ಗೆಲಿ: ಜಯಿಸು; ಅವನಿಪ: ರಾಜ; ತಿಲಕ: ಶ್ರೇಷ್ಠ; ಫಡ: ತಿರಸ್ಕಾರದ ಮಾತು; ಸುತ: ಮಗ; ದಳಪತಿ: ಸೇನಾಧಿಪತಿ; ಅದ್ದು: ತೋಯಿಸು, ಮುಳುಗು; ಪರಿಭವ: ಅನಾದರ, ತಿರಸ್ಕಾರ; ಸಮುದ್ರ: ಸಾಗರ; ಅಳುಕು: ಹೆದರು; ನೃಪ: ರಾಜ; ಬಲಾಧಿಪ: ಪರಾಕ್ರಮಿ; ಉಲುಕು: ಅಲ್ಲಾಡು, ನಡುಗು; ಅಂಜು: ಹೆದರು; ಲಗ್ಗೆ: ಆಕ್ರಮಣ; ಅಳಿ: ನಾಶ; ಮಸಗು: ಹರಡು; ಕೆರಳು; ಮೈದೋರು: ಎದುರು ನಿಲ್ಲು; ಆಚೆ: ಹೊರಗಡೆ; ಸಂದಣಿ: ಗುಂಪು;

ಪದವಿಂಗಡಣೆ:
ಗೆಲಿದನೋ +ಮಾದ್ರೇಶನ್+ಅವನಿಪ
ತಿಲಕನನು +ಫಡ +ಧರ್ಮಸುತನ್+ಈ
ದಳಪತಿಯನ್+ಅದ್ದಿದನು +ಪರಿಭವಮಯ +ಸಮುದ್ರದಲಿ
ಅಳುಕಿದನು +ನೃಪನ್+ಈ+ ಬಲಾಧಿಪನ್
ಅಲುಕನ್+ಅಂಜಿದನೆಂಬ +ಲಗ್ಗೆಯಲ್
ಅಳಿ +ಮಸಗಿ +ಮೈದೋರಿತ್+ಆಚೆಯ +ಸೇನೆ +ಸಂದಣಿಸಿ

ಅಚ್ಚರಿ:
(೧) ರೂಪಕದ ಪ್ರಯೋಗ – ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
(೨) ಜೋಡಿ ಪದಗಳ ಬಳಕೆ – ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ

ಪದ್ಯ ೩೬: ಪಾಂಚಾಲ ಸೈನ್ಯದಲ್ಲಿ ಎಷ್ಟು ಮಂದಿ ಅಳಿದರು?

ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರು ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆರು ಸಾವಿರ ರಥಗಳು, ಹದಿನಾರು ಸಾವಿರ ಆನೆಗಳು, ಲಕ್ಷ ಕುದುರೆಗಳು, ಆರು ಕೋಟಿ ಕಾಲಾಳುಗಳು ಸತ್ತರು. ಮತ್ತೆ ಸೈನ್ಯವು ಒಂದಾಗಿ ಮುತ್ತಿತು. ಆಗ ಪಾಂಚಾಲ ಸೇನೆಯಲ್ಲಿ ಆರು ಲಕ್ಷ ಕುದುರೆಗಳು, ಐನೂರು ರಾಜರು, ಲಕ್ಷ ಆನೆಗಳು, ಹದಿಮೂರು ಸಾವಿರ ರಥಗಳು ನಿರ್ನಾಮವಾದವು.

ಅರ್ಥ:
ಸಾವಿರ: ಸಹಸ್ರ; ತೇರು: ಬಂಡಿ, ರಥ; ಗಜ: ಆನೆ; ಕುದುರೆ: ಅಶ್ವ; ಪದಾತಿ: ಕಾಲಾಳು; ಮುಗ್ಗು: ಬಾಗು, ಮಣಿ; ಸಂದಣಿ: ಗುಂಪು; ನೃಪ: ರಾಜ; ಗಜಘಟೆ: ಆನೆಗಳ ಗುಂಪು; ರಥ: ಬಂಡಿ; ಅಳಿ: ನಾಶ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಆರು +ಸಾವಿರ +ತೇರು +ಗಜ +ಹದಿ
ನಾರು+ಸಾವಿರ +ಲಕ್ಷ +ಕುದುರೆಗಳ್
ಆರು +ಕೋಟಿ +ಪದಾತಿ +ಮುಗ್ಗಿತು +ಮತ್ತೆ +ಸಂದಣಿಸಿ
ಆರು +ಲಕ್ಷ +ತುರಂಗ +ನೃಪರ್
ಐನೂರು +ಗಜಘಟೆ +ಲಕ್ಷ +ರಥ +ಹದಿ
ಮೂರು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಆರು, ಹದಿನಾರು; ಮೂರು, ಐನೂರು – ಪ್ರಾಸ ಪದಗಳು
(೨) ನೂರು, ಸಾವಿರ, ಲಕ್ಷ, ಕೋಟಿ – ಸಂಖ್ಯೆಗಳನ್ನು ಎಣಿಸುವ ಪದಗಳು

ಪದ್ಯ ೩೪: ದ್ರೋಣನ ಮೇಲೆ ಯಾರು ಆಕ್ರಮಣ ಮಾಡಿದರು?

ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೋಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ (ದ್ರೋಣ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯವರು ದ್ರೋಣನನ್ನು ಲೆಕ್ಕಿಸದೇ ಸಮರಥರು, ರಾವುತರು, ಜೋಧರು, ಕಾಲಾಳುಗಳು ಅವನ ಮೇಲೆ ಬಿದ್ದರು. ದ್ರೋಣನು ಸೈನ್ಯವನ್ನೂ ದೊರೆಗಳನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು.

ಅರ್ಥ:
ಕೆಣಕು: ರೇಗಿಸು; ನಾಯಕ: ಒಡೆಯ; ರಣ:ಯುದ್ಧ; ಕೈಕೊಳ್ಳು: ಧರಿಸು, ಪಡೆ; ಉರೆ: ಹೆಚ್ಚು; ಸಂದಣಿ: ಗುಂಪು; ಸಮರಥ: ಪರಾಕ್ರಮಿ; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕಣೆ: ಬಾಣ; ಕೆದರು: ಹರಡು; ಹೊದ್ದು: ಹೊಂದು, ಸೇರು; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವ ಯೋಧ; ಕುಣಿ: ನರ್ತಿಸು; ಕಾಲಾಳು: ಸೈನಿಕ; ಔಕು: ನೂಕು; ಕ್ಷಣ: ಸಮಯದ ಪ್ರಮಾಣ; ಅನಿಬರ: ಅಷ್ಟುಜನ; ಒರಸು: ನಾಶಮಾಡು; ಬೆರಸು: ಕೂಡಿಸು; ದೊರೆ: ರಾಜ; ಅಣಕು: ತುರುಕು, ಗಿಡಿ;

ಪದವಿಂಗಡಣೆ:
ಕೆಣಕಿದರು +ಪಾಂಚಾಲ +ನಾಯಕರ್
ಅಣಕಿಗನ +ಕೈಕೋಳ್ಳದ್+ಉರೆ+ ಸಂ
ದಣಿಸಿದರು +ಸಮರಥರು +ಕವಿದರು +ರಾಯ +ರಾವುತರು
ಕಣೆ+ಕೆದರಿ +ಹೊದ್ದಿದರು +ಜೋದರು
ಕುಣಿದು +ಕಾಲಾಳ್+ಔಕಿತ್+ಒಂದೇ
ಕ್ಷಣದೊಳ್+ಅನಿಬರನ್+ಒರಸಿದನು +ಬೆರಸಿದನು +ದೊರೆಗಳಲಿ

ಅಚ್ಚರಿ:
(೧) ರಾವುತರು, ಜೋದರು, ಕಾಳಾಳು, ಸಮರಥರು – ಯೋಧರನ್ನು ಕರೆದ ಪರಿ
(೨) ಕವಿ, ಸಂದಣಿಸು – ಸಮಾನಾರ್ಥಕ ಪದ

ಪದ್ಯ ೨೭: ಪ್ರಾಣವನ್ನು ಸಾಲವಾಗಿ ಯಾರು ತಂದಿದ್ದರು?

ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ (ದ್ರೋಣ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಗೋಪಾಲಕರು ಹಿಡಿಯುವ ಕೋಲುಗಳು, ಈಟಿಗಳನ್ನು ತೂಗುತ್ತಾ ಸೈನಿಕರು ಸಂದಣಿಸಲು ಗಜ, ರಥ, ತುರಗಗಳು ಸಜ್ಜಾದವು. ರಾಜರು ಸಿದ್ಧರಾದರು. ಅವರೆಲ್ಲರೂ ತಮ್ಮ ಪ್ರಾಣಗಳನ್ನು ಭೀಮನಿಂದ ಸಾಲವಾಗಿ ತಂದವರು. ಪದ್ಮವ್ಯೂಹದ ಮುಂಭಾಗದಲ್ಲಿ ಅವರೆಲ್ಲರೂ ಸೇರಿದರು.

ಅರ್ಥ:
ಸಾಲು: ಆವಳಿ; ಗೋವಳ: ದನಗಾಹಿ, ಗೋಪಾಲ; ಕಟ್ಟಿಗೆ: ಕೋಲು; ಕುಂತ: ಈಟಿ, ಭರ್ಜಿ; ತೂಗು: ಅಲ್ಲಾಡಿಸು; ಮಿಗೆ: ಅಧಿಕ; ದುವ್ವಾಳಿ: ತೀವ್ರಗತಿ; ದೆಖ್ಖಾಳ: ಗೊಂದಲ, ಗಲಭೆ; ಗಜ: ಆನೆ; ರಥ: ಬಂಡಿ; ತುರಗ: ಅಶ್ವ; ಸೇನೆ: ಸೈನ್ಯ; ಹೇಳಿಕೆ: ಹೇಳಿದ ಮಾತು; ಕವಿ: ಆವರಿಸು; ನೃಪಾಲ: ರಾಜ; ಹರಣ: ಅಪಹರಿಸುವದು; ಸಾಲಿಗ: ಸಾಲಗಾರ; ಸಂದಣಿ: ಗುಂಪು; ಅಬುಜ: ಕಮಲ; ವ್ಯೂಹ: ಗುಂಪು, ಸಮೂಹ; ಅಗ್ರ: ಮುಂದೆ;

ಪದವಿಂಗಡಣೆ:
ಸಾಲು +ಗೋವಳಿ+ಕಟ್ಟಿಗೆಯ+ ಕುಂ
ತಾಳಿಗಳ+ ತೂಗಾಟ +ಮಿಗೆ +ದು
ವ್ವಾಳಿಗಳ +ದೆಖ್ಖಾಳ +ಗಜ +ರಥ +ತುರಗ +ಸೇನೆಯಲಿ
ಮೇಲೆ +ಹೇಳಿಕೆಯಾಯ್ತು +ಕವಿವ+ ನೃ
ಪಾಲಕರು +ಭೀಮಂಗೆ +ಹರಣದ
ಸಾಲಿಗರು +ಸಂದಣಿಸಿತ್+ಅಬುಜ+ವ್ಯೂಹದ್+ಅಗ್ರದಲಿ

ಅಚ್ಚರಿ:
(೧) ಚತುರಂಗ ಸೇನೆ ಎಂದು ಹೇಳಲು – ಗಜ ರಥ ತುರಗ ಸೇನೆಯಲಿ
(೨) ಭೀಮನ ಪರಾಕ್ರಮವನ್ನು ತೋರಿಸುವ ರೂಪಕ – ನೃಪಾಲಕರು ಭೀಮಂಗೆ ಹರಣದ ಸಾಲಿಗರು

ಪದ್ಯ ೧೯: ಕಾಂಭೋಜರಾಜರನ್ನು ದ್ರೋಣರು ಎಲ್ಲಿ ನಿಲ್ಲಿಸಿದರು?

ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ (ದ್ರೋಣ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಕರವ್ಯೂಹದ ಹಿಮ್ದೆ ಐದು ಯೋಜನ ವಿಸ್ತಾರದಲ್ಲಿ ಚಕ್ರವ್ಯೂಹವನ್ನು ಬಲವಾಗಿ ರಚಿಸಿ ಅಲ್ಲಿ ಕಾಂಬೋಜ ರಾಜ, ವಿಂದ, ಅನುವಿಂದ, ದಾಕ್ಷಿಣಾತ್ಯ ರಾಜರು, ಸಮಸಪ್ತಕರ ಸೈನ್ಯದ ಕೆಲಭಾಗವನ್ನು ನಿಲ್ಲಿಸಿದನು. ಹತ್ತು ಸಹಸ್ರ ರಾಜರು ಅದರಲ್ಲಿದ್ದರು.

ಅರ್ಥ:
ಹಿಂದೆ: ಹಿಂಭಾಗ; ಯೋಜನ: ಅಳತೆಯ ಪ್ರಮಾಣ; ಅಳವಿ: ಶಕ್ತಿ; ನಲವು: ಸಂತೋಷ; ಬಲಿ: ಗಟ್ಟಿ; ನಿಲಿಸು: ತಡೆ; ಭೂಪತಿ: ರಾಜ; ವೃಂದ: ಗುಂಪು; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವರು; ಬಲ: ಶಕ್ತಿ; ಸಂದಣಿಸು: ಗುಂಪುಗೂಡಿಸು; ಸಾವಿರ: ಸಹಸ್ರ; ನೃಪ: ರಾಜ; ಗಡಣ: ಕೂಡಿಸುವಿಕೆ;

ಪದವಿಂಗಡಣೆ:
ಹಿಂದೆ +ಯೋಜನವ್+ಐದರ್+ಅಳವಿಯೊಳ್
ಅಂದು +ಚಕ್ರವ್ಯೂಹವನು +ನಲ
ವಿಂದ +ಬಲಿದನು +ನಿಲಿಸಿದನು +ಕಾಂಭೋಜ+ಭೂಪತಿಯ
ವಿಂದನನ್+ಅನುವಿಂದನನು +ದಕ್ಷಿಣ
ವೃಂದ +ಸಮಸಪ್ತಕರ +ಬಲವನು
ಸಂದಣಿಸಿದರು +ಹತ್ತು +ಸಾವಿರ +ನೃಪರ+ ಗಡಣದಲಿ

ಅಚ್ಚರಿ:
(೧) ನಲವಿಂದ, ವಿಂದ, ಅನುವಿಂದ, ವೃಂದ – ಪದಗಳ ಬಳಕೆ

ಪದ್ಯ ೩: ಅಭಿಮನ್ಯುವಿನ ಮಕ್ಕಳಾಟ ಹೇಗಿತ್ತು?

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ (ದ್ರೋಣ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ದಾಳಿಯಿಟ್ಟ ರಾವುತರು ತೆಕ್ಕೆ ತೆಕ್ಕೆಯಾಗಿ ಸತ್ತುಬಿದ್ದರು. ಯುದ್ಧಕ್ಕೆ ಬಂದ ಆನೆಗಳು ಕಾಣಿಸಲೇ ಇಲ್ಲ. ವೇಗವಾಗಿ ಬಂದ ರಥಗಳನ್ನು ಹೊಡೆದೋಡಿಸಿದನು. ಬಾಲಕ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.

ಅರ್ಥ:
ಮಿಕ್ಕು: ಉಳಿದ; ನೂಕು: ತಳ್ಳು; ಕುದುರೆ: ಅಶ್ವ; ಕುದುರೆಕಾರ: ರಾವುತ; ತೆಕ್ಕೆ: ಸುತ್ತಿಕೊಂಡಿರುವಿಕೆ; ಕೆಡೆ: ಬೀಳು, ಕುಸಿ; ಸಂದಣಿಸು: ಗುಂಪುಗೂಡು; ಆನೆ: ಗಜ; ಕಾಣು: ತೋರು; ಅಳವಿ: ಯುದ್ಧ; ಹೊಕ್ಕು: ಸೇರು; ಹರಿಸು: ಚಲಿಸು; ರಥ: ಬಂಡಿ; ಪದಾತಿ: ಕಾಲಾಳು; ಒಕ್ಕಲಿಕ್ಕು: ಬಡಿ, ಹೊಡೆ; ಅಮಮ: ಆಶ್ಚರ್ಯ ಸೂಚಕ ಪದ; ಮಗು: ಚಿಕ್ಕವ, ಕುಮಾರ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಮಾರಿ: ಕ್ಷುದ್ರದೇವತೆ; ವೈರಿ: ಶತ್ರು; ರಾಯ: ರಾಜ;

ಪದವಿಂಗಡಣೆ:
ಮಿಕ್ಕು +ನೂಕುವ +ಕುದುರೆಕಾರರು
ತೆಕ್ಕೆ+ಕೆಡೆದರು +ಸಂದಣಿಸಿ+ ಕೈ
ಯಿಕ್ಕಿದ್+ಆನೆಯನೇನನ್+ಎಂಬೆನು +ಕಾಣೆನ್+ಅಳವಿಯಲಿ
ಹೊಕ್ಕು +ಹರಿಸುವ +ರಥ +ಪದಾತಿಯನ್
ಒಕ್ಕಲಿಕ್ಕಿದನ್+ಅಮಮ +ಮಗುವಿನ
ಮಕ್ಕಳಾಟಿಕೆ +ಮಾರಿಯಾಯಿತು +ವೈರಿ+ರಾಯರಿಗೆ

ಅಚ್ಚರಿ:
(೧) ಅಭಿಮನ್ಯುವಿನ ಸಾಹಸ – ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ

ಪದ್ಯ ೧೭: ಪದ್ಮವ್ಯೂಹದ ರಚನೆ ಹೇಗಿತ್ತು?

ನಿಲಿಸಿದನು ರಾವುತರನಾ ಹೊರ
ವಳಯದಲಿ ರಾವುತರು ಮುರಿದರೆ
ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ
ತೊಳಗಿದವು ತೇರುಗಳು ತೇರಿನ
ದಳಕೆ ತಾನೊತ್ತಾಗಿ ರಣದ
ಗ್ಗಳೆಯರಿದ್ದುದು ರಾಯನೊಡಹುಟ್ಟಿದರು ಸಂದಣಿಸಿ (ದ್ರೋಣ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೊರವಲಯದಲ್ಲಿ ರಾವುತರನ್ನು ನಿಲ್ಲಿಸಿದನು. ರಾವುತರು ಹಿಮ್ಮೆಟ್ಟಿದರೆ ಆನೆಗಳು ಭದ್ರ ಕೋಟೆಯಂತೆ ಹಿಂದೆ ಬೆಂಬಲವಾಗುವವು, ಆನೆಗಳ ಹಿಂದೆ ರಥಗಳು ನಿಂತವು. ರಥಗಳ ಹಿಂದೆ ರಣಶ್ರರಲ್ಲಿ ಶ್ರೇಷ್ಠರಾದ ಕೌರವನ ತಮ್ಮಂದಿರಿದ್ದರು.

ಅರ್ಥ:
ನಿಲಿಸು: ಸ್ಥಿರವಾಗಿರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊರವಳಯ: ಆಚೆ; ಮುರಿ: ಸೀಳು; ಒಗ್ಗು: ಗುಂಪು, ಸಮೂಹ; ದಂತಿಘಟೆ: ಆನೆಯ ಗುಂಪು; ಗಜ: ಆನೆ; ಸೇನೆ: ಸೈನ್ಯ; ಗಡ: ದುರ್ಗ; ತೊಳಗು:ಕಾಂತಿ, ಪ್ರಕಾಶ; ತೇರು: ಬಂಡಿ; ದಳ: ಸೈನ್ಯ; ರಣ: ಯುದ್ಧರಂಗ; ಅಗ್ಗ: ಶ್ರೇಷ್ಠ; ಅರಿ: ತಿಳಿ; ರಾಯ: ರಾಜ; ಒಡಹುಟ್ಟು: ಜೊತೆಗೆ ಹುಟ್ಟಿದ; ಸಂದಣಿಸು: ಗುಂಪು ಗೂಡು;

ಪದವಿಂಗಡಣೆ:
ನಿಲಿಸಿದನು+ ರಾವುತರನಾ +ಹೊರ
ವಳಯದಲಿ +ರಾವುತರು +ಮುರಿದರೆ
ನಿಲುವುದ್+ಒಗ್ಗಿನ +ದಂತಿಘಟೆ +ಗಜಸೇನೆಗ್+ಅಡಹಾಗಿ
ತೊಳಗಿದವು +ತೇರುಗಳು +ತೇರಿನ
ದಳಕೆ +ತಾನೊತ್ತಾಗಿ +ರಣದ್
ಅಗ್ಗಳೆ+ಅರಿದುದು +ರಾಯನ್+ಒಡಹುಟ್ಟಿದರು +ಸಂದಣಿಸಿ

ಅಚ್ಚರಿ:
(೧) ದಂತಿ, ಗಜ – ಸಮಾನಾರ್ಥಕ ಪದ