ಪದ್ಯ ೪೫: ಪಾಂಡವರು ಜಯವಾಗಲು ಕಾರಣವೇನು?

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಜಯನು ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರನ್ನು ನೋಡಿ, ಇವರು ಶತ್ರುರಥಿಕರಾಗಿರಲಾರರು ಎಂದುಕೊಂಡನು. ಭರತಕುಲ ಒಂದಾಗಿದ್ದುದು ಬಳಿಕ ಎರಡಾಯ್ತು. ಒಂದು ಪಕ್ಷಕ್ಕೆ ಶ್ರೀಕೃಷ್ಣನ ದಯೆಯಿಂದ ಜಯವುಂಟಾಯಿತು ಎಂದು ಚಿಂತಿಸಿದನು.

ಅರ್ಥ:
ಬರುತ: ಆಗಮಿಸು; ದೂರ: ಅಂತರ; ಗುರು: ಆಚಾರ್ಯ; ಸುತ: ಮಗ; ಕಂಡು: ನೋಡಿ; ಅರಿ: ವೈರಿ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ಪರಾಕ್ರಮ; ಕುಲ: ವಂಶ; ಬಳಿಕ: ನಂತರ; ಕವಲು: ವಂಶ ಯಾ ಕುಲದ ಶಾಖೆ; ಜಯ: ಗೆಲುವು; ವಿಸ್ತರಣ: ಹಬ್ಬುಗೆ, ವಿಸ್ತಾರ; ಕರುಣ: ದಯೆ;

ಪದವಿಂಗಡಣೆ:
ಬರುತ +ಸಂಜಯ +ದೂರದಲಿ +ಕೃಪ
ಗುರುಸುತರ +ಕೃತವರ್ಮಕನ +ಕಂಡ್
ಅರಿ+ರಥಿಗಳ್+ಇವರಲ್ಲಲೇ +ಶಿವಶಿವ +ಮಹಾದೇವ
ಭರತಕುಲ+ ಮೊದಲೊಂದು +ಬಳಿಕಾಯ್ತ್
ಎರಡು+ಕವಲ್+ಒಬ್ಬರಿಗೆ +ಜಯ+ವಿ
ಸ್ತರಣ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪರಿ – ಶಿವಶಿವ ಮಹಾದೇವ

ಪದ್ಯ ೧೦: ಕೌರವನ ಸಿರಿ ಏಕೆ ಸೂರೆಗೊಂಡಿತು?

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ (ಭೀಷ್ಮ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೀರಭಟರಲ್ಲಿ ಶಿವನಾದ ಭೀಷ್ಮನು ಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿದನು. ಕೌರವನ ಐಶ್ವರ್ಯವು ಸೂರೆಯಾಯಿತೇ! ವೈರಿಗೆ ಗೆಲುವಾಯಿತೇ! ಘೋರ ವಿಧಿಯು ಯಾರಿಗೆ ಯಾವ ಗತಿಯನ್ನು ತರುವುದೋ ಯಾರು ಬಲ್ಲರು ಶಿವ ಶಿವಾ ಎನ್ನುತ್ತಾ ಭೀಷ್ಮನ ಸಾರಥಿಯು ಕಡು ದುಃಖದಿಂದ ನೊಂದು ಕಂಬನಿ ಹರಿಸಿದನು.

ಅರ್ಥ:
ವೀರ: ಶೂರ; ಭಟ: ಸೈನಿಕ; ಭಾಳಾಕ್ಷ: ಹಣೆಯಲ್ಲಿ ಕಣ್ಣಿರುವ (ಶಿವ); ಸಾರು: ಡಂಗುರ ಹೊಡೆಸು; ಧಾರುಣಿ: ಭೂಮಿ; ಅಕಟ: ಅಯ್ಯೋ; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಹಗೆ: ವೈರ; ಗೆಲವು: ಜಯ; ಬರಿಸು: ತುಂಬು; ಘೋರ: ಭಯಂಕರವಾದ; ವಿಧಿ: ನಿಯಮ; ಸಾರಥಿ: ಸೂತ; ಕಡು: ತುಂಬ; ಖೇದ: ದುಃಖ; ತುಂಬು: ಭರ್ತಿಯಾಗು; ಕಂಬನಿ: ಕಣ್ಣೀರು;

ಪದವಿಂಗಡಣೆ:
ವೀರಭಟ +ಭಾಳಾಕ್ಷ +ಭೀಷ್ಮನು
ಸಾರಿದನು +ಧಾರುಣಿಯನ್+ಅಕಟಾ
ಕೌರವನ +ಸಿರಿ +ಸೂರೆಯೋದುದೆ +ಹಗೆಗೆ +ಗೆಲವಾಯ್ತೆ
ಆರನ್+ಆವಂಗದಲಿ+ ಬರಿಸದು
ಘೋರ +ವಿಧಿ +ಶಿವಶಿವ+ ಎನುತ್ತಾ
ಸಾರಥಿಯು +ಕಡು+ಖೇದದಲಿ +ತುಂಬಿದನು +ಕಂಬನಿಯ

ಅಚ್ಚರಿ:
(೧)ಭೀಷ್ಮರನ್ನು ಶಿವನಿಗೆ ಹೋಲಿಸುವ ಪರಿ – ವೀರಭಟ ಭಾಳಾಕ್ಷ ಭೀಷ್ಮನು
(೨) ವಿಧಿಯ ಘೋರ ಆಟ – ಆರನಾವಂಗದಲಿ ಬರಿಸದು ಘೋರ ವಿಧಿ ಶಿವಶಿವ

ಪದ್ಯ ೧೫: ಭೀಷ್ಮನು ಕೃಷ್ಣನನ್ನು ಹೇಗೆ ಬರೆಮಾಡಿಕೊಂಡನು?

ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ (ಭೀಷ್ಮ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಕಾವಲುಗಾರರಿಂದ ಈ ಸುದ್ದಿಯನ್ನು ಕೇಳಿ ತನ್ನ ಮನಸ್ಸಿನಲ್ಲಿ, ಧರ್ಮಜನು ಬಂದನೇ? ಶ್ರೀಕೃಷ್ಣನು ಪಾಂಡವರನ್ನು ಕರೆ ತಂದನೇ? ಕೌರವರನ್ನು ಕೊಂದನೇ! ಶಿವ ಶಿವಾ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ಉಳಿದವರೆಲ್ಲರನ್ನು ಹೊರಗಿಟ್ಟು ಶ್ರೀಕೃಷ್ಣ ಮತ್ತು ಪಾಂಡವರನ್ನು ಮಾತ್ರ ಒಳಕ್ಕೆ ಕಳಿಸಿರಿ ಎನಲು, ಅವರು ಒಳಕ್ಕೆ ಹೋಗಲು ವಿನಯದಿಂದ ಶ್ರೀಕೃಷ್ಣನನ್ನು ಎದುರುಗೊಂಡನು.

ಅರ್ಥ:
ಬಂದು: ಆಗಮಿಸು; ಮುರರಿಪು: ಕೃಷ್ಣ; ಅಕಟಾ: ಅಯ್ಯೋ; ಕೊಂದು: ಕೊಲ್ಲು, ಸಾಯಿಸು; ಮೌನ: ಮಾತನಾಡದಿರುವಿಕೆ; ಮುಳುಗು: ಮರೆಯಾಗು, ಒಳಸೇರು; ಮಂದಿ: ಜನರು; ಹೊರಗೆ: ಆಚೆ; ಬರಹೇಳು: ಒಳಗೆ ಕರೆದು; ನಂದನ: ಮಕ್ಕಳು; ಬರಲು: ಆಗಮಿಸಲು; ಇದಿರು: ಎದುರು; ವಿನಯ: ಆದರ, ವಿಶ್ವಾಸ;

ಪದವಿಂಗಡಣೆ:
ಬಂದನೇ +ಧರ್ಮಜನು +ಮುರರಿಪು
ತಂದನೇ +ಕೌರವರನ್+ಅಕಟಾ
ಕೊಂದನೇ +ಶಿವಶಿವಯೆನುತ +ಮೌನದಲಿ +ಮುಳುಗಿರ್ದು
ಮಂದಿಯನು +ಹೊರಗಿರಿಸಿ+ ಬರಹೇ
ಳೆಂದರ್+ಆಗಲೆ+ ಕೃಷ್ಣ +ಕೊಂತೀ
ನಂದನರು+ ಬರಲ್+ಇದಿರುವಂದನು +ಭೀಷ್ಮ +ವಿನಯದಲಿ

ಅಚ್ಚರಿ:
(೧) ಬಂದನೇ, ತಂದನೇ, ಕೊಂದನೇ – ಪ್ರಾಸ ಪದಗಳು
(೨) ಮ ಕಾರದ ತ್ರಿವಳಿ ಪದ – ಮೌನದಲಿ ಮುಳುಗಿರ್ದು ಮಂದಿಯನು

ಪದ್ಯ ೨೪: ಭೀಷ್ಮನು ಯಾರ ಹಣೆಗೆ ಬಾಣವನ್ನು ಬಿಟ್ಟನು?

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ (ಭೀಷ್ಮ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ರಥವನ್ನು ನಡೆಸಿ ಭೀಷ್ಮನ ಎದುರಿನಲ್ಲೇ ಮುಖಾಮುಖಿ ತಂದು ನಿಲ್ಲಿಸಲು, ಪಿತಾಮಹನು ಅರ್ಜುನನಿಗೆ ಸೆರೆ ಸಿಕ್ಕನೆಂದು ಕೌರವ ಸೈನ್ಯವು ಬೆದರಿ ಉದ್ಗರಿಸಿತು. ಆಗ ಭೀಷ್ಮನು ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಹೊಡೆದು ಪರಶುರಾಮರು ಕೊಟ್ಟಿದ್ದ ಬಾಣವನ್ನು ಶ್ರೀಕೃಷ್ಣನ ಹಣೆಗೆ ಗುರಿಯಿಟ್ಟು ಬಿಟ್ಟನು.

ಅರ್ಥ:
ರಥ: ಬಂಡಿ; ಹರಿಸು: ಓಡಾಡು; ಹತ್ತೆ: ಹತ್ತಿರ, ಸಮೀಪ; ಬರೆ: ಆಗಮಿಸು; ಅಳವಿ: ಶಕ್ತಿ, ಯುದ್ಧ; ಮುತ್ತಯ: ಮುತ್ತಾತ; ಸಿಲುಕು: ಬಂಧನಕ್ಕೊಳಗಾಗು; ಬಲ: ಶಕ್ತಿ; ಬೆದರು: ಹೆದರು; ಶರ: ಬಾಣ; ಮುಸುಕು: ಹೊದಿಕೆ; ಭಾರ್ಗವ: ಪರಶುರಾಮ; ತೊಡಚು: ಕಟ್ಟು, ಬಂಧಿಸು; ನೊಸಲು: ಹಣೆ; ಕೀಲಿಸು: ಜೋಡಿಸು, ನಾಟು; ದತ್ತ: ನೀಡಿದ;

ಪದವಿಂಗಡಣೆ:
ಮತ್ತೆ +ರಥವನು +ಹರಿಸಿ +ಭೀಷ್ಮನ
ಹತ್ತೆ +ಬರೆ +ಕಟ್ಟಳವಿಯಲಿ +ಹಾ
ಮುತ್ತಯನು +ಸಿಲುಕಿದನು+ ಶಿವಶಿವಯೆನುತ+ ಬಲ+ ಬೆದರೆ
ಹತ್ತು +ಶರದಲಿ +ಕೃಷ್ಣರಾಯನ
ಮತ್ತೆ +ಮುಸುಕಿದ+ ಬಹಳ +ಭಾರ್ಗವ
ದತ್ತ +ಬಾಣವ +ತೊಡಚಿ +ದೇವನ+ ನೊಸಲ+ ಕೀಲಿಸಿದ

ಅಚ್ಚರಿ:
(೧) ಮತ್ತೆ, ಹತ್ತೆ; ಮುತ್ತ, ದತ್ತ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಹಳ ಭಾರ್ಗವದತ್ತ ಬಾಣವ

ಪದ್ಯ ೫: ಉತ್ತರನು ಸೈನ್ಯದ ಬಲವನ್ನು ಹೇಗೆ ಕಂಡನು?

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವಿಲಾಡಲಾರದು
ಒಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವಶಿವ ಕಾದಿಗೆಲಿದೆವು ಬಲಕೆ ನಮೊ ಎಂದ (ವಿರಾಟ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕಣ್ಣೂಗಳು ಈ ಸೈನ್ಯದ ಕಡೆಗೆ ಹಾಯುವುದೇ ಇಲ್ಲ. ಈ ಸೈನ್ಯ ಸಮುದ್ರವನ್ನು ಮನಸ್ಸು ಈಜಿ ದಾಟಲು ಸಾಧ್ಯವಿಲ್ಲ. ಬದುಕಿದ್ದರೆ ಎಂತೆಂತಹ ಅದ್ಭುತಗಳನ್ನೋ ನೋಡಬಹುದು. ಭೂಮಿಯೇ ಈ ಸೈನ್ಯವನ್ನು ಈದಿರಬೇಕು. ಇದರೊಡನೆ ಯಾರು ಯುದ್ಧ ಮಾಡುವನೋ ಅವನೇ ಶಿವ, ಶಿವ ಶಿವಾ ಇದರೊಡನೆ ಯುದ್ಧ ಮಾಡಿದೆ, ಗೆದ್ದೆ, ಈ ಸೈನ್ಯಕ್ಕೆ ನಮೋ ಎಂದು ಚಿಂತಿಸಿದನು.

ಅರ್ಥ:
ಕಡೆ: ಕೊನೆ; ಹಾಯು: ಕೊಂಡೊಯ್ಯು; ಕಂಗಳು: ಕಣ್ಣು; ಬಲ: ಸೈನ್ಯ; ಕಡಲು: ಸಾಗರ; ಮನ: ಮನಸ್ಸು; ಈಸು: ಈಜು; ಒಡಲು: ದೇಹ; ಕಾಣು: ತೋರು; ಅದ್ಭುತ: ಆಶ್ಚರ್ಯ; ಪೊಡವಿ: ಪೃಥ್ವಿ, ಭೂಮಿ; ಮೋಹರ: ಯುದ್ಧ; ಕಾದು: ಯುದ್ಧ; ಮೃಡ: ಶಿವ; ಗೆಲುವು: ಜಯ;

ಪದವಿಂಗಡಣೆ:
ಕಡೆಗೆ +ಹಾಯವು +ಕಂಗಳ್ +ಈ+ಬಲ
ಕಡಲ +ಮನವ್+ಈಸ್+ಆಡಲಾರದು
ಒಡಲುವ್+ಇಡಿದಿರಲ್+ಏನ +ಕಾಣಲು +ಬಾರದ್+ಅದ್ಭುತವ
ಪೊಡವಿ+ಈದುದೊ +ಮೋಹರವನ್+ಇದರ್
ಒಡನೆ +ಕಾದುವನ್+ಆವನ್+ಆತನೆ
ಮೃಡನು+ ಶಿವಶಿವ+ ಕಾದಿ+ಗೆಲಿದೆವು +ಬಲಕೆ+ ನಮೊ+ ಎಂದ

ಅಚ್ಚರಿ:
(೧) ಉತ್ತರನ ಹೋಲಿಸುವ ಪರಿ – ಪೊಡವಿಯೀದುದೊ ಮೋಹರವನಿದರೊಡನೆ ಕಾದುವನಾವನಾತನೆ
ಮೃಡನು

ಪದ್ಯ ೧೬: ಧರ್ಮಜನು ಹಣ್ಣನ್ನು ನೋಡಿ ಹೇಗೆ ಪ್ರತಿಕ್ರಯಿಸಿದನು?

ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು (ಅರಣ್ಯ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಮರಿಯಾನೆ ಗಾತ್ರದ ಜಂಬೂಫಲವನ್ನು ಕೊಂಡು ಬೇಗನೆ ನಡೆದು ಧರ್ಮಜನಿದ್ದ ಮನೆಗೆ ತಂದನು. ಇದನ್ನು ನೋಡಿದ ಧರ್ಮಜನು ಆಶ್ಚರ್ಯಪಟ್ಟು ತನ್ನ ಹತ್ತಿರದಲ್ಲಿದ್ದ ತಮ್ಮಂದಿರು, ಋಷಿಗಳನ್ನು ಕರೆದು ಈ ವಿಚಿತ್ರ ಹಣ್ಣನ್ನು ತೋರಿಸಿದನು, ಇದನ್ನು ನೀವೆಲ್ಲಾದರೂ ನೋಡಿದ್ದೀರಾ ಎಂದು ಪ್ರಶ್ನೆಯನ್ನು ಕೇಳಲು, ಋಷಿಮುನಿಗಳು ಈ ಪ್ರಶ್ನೆಗೆ ಶ್ರೀಕೃಷ್ಣನೇ ಉತ್ತರಿಸಬಲ್ಲ ಎಂದು ಹೇಳಿದರು.

ಅರ್ಥ:
ಫಲ: ಹಣ್ಣು; ಕೊಂಡು: ತೆಗೆದು; ಬೇಗ: ಶೀಘ್ರ; ನಲವು: ಸಂತಸ; ನಡೆ: ಚಲಿಸು; ಭೂಪಳ್ ರಾಜ; ನಿಳಯ: ಮನೆ; ಇಳುಹು: ಇಳಿಸು; ಸೂನು: ಮಗ; ಬೆರಗು: ಆಶ್ಚರ್ಯ; ಕೆಲ: ಹತ್ತಿರ; ಅನುಜ: ತಮ್ಮ; ಋಷಿ: ಮುನಿ; ನೋಡಿ: ವೀಕ್ಷಿಸಿ; ನಳಿನನಾಭ: ವಿಷ್ಣು, ಕೃಷ್ಣ; ನಳಿನ: ಕಮಲ; ಬಲ್ಲ: ತಿಳಿ; ಸಕಲ: ಎಲ್ಲಾ;

ಪದವಿಂಗಡಣೆ:
ಫಲವ +ಕೊಂಡ್+ಆ+ ಭೀಮ+ ಬೇಗದಿ
ನಲವಿನಲಿ +ನಡೆತಂದು +ಭೂಪನ
ನಿಳಯದಲಿ +ತಂದ್+ಇಳುಹಿದರೆ+ ಯಮಸೂನು +ಬೆರಗಾಗಿ
ಕೆಲದಲ್+ಇದ್ದ್+ಅನುಜರಿರ+ ಋಷಿ+ ಜನ
ಗಳಿರ+ ನೋಡಿರೆ+ಎನಲು +ಶಿವಶಿವ
ನಳಿನನಾಭನೆ+ ಬಲ್ಲನೆಂದರು +ಸಕಲ +ಋಷಿವರರು

ಅಚ್ಚರಿ:
(೧) ಆಶ್ಚರ್ಯಗೊಂಡಾಗ ಹೇಳುವ ಪದ – ಶಿವ ಶಿವ
(೨) ಧರ್ಮಜನನ್ನು ಯಮಸೂನು, ಕೃಷ್ಣನನ್ನು ನಳಿನನಾಭ ಎಂದು ಕರೆದಿರುವುದು

ಪದ್ಯ ೬೯: ಧೃತರಾಷ್ಟ್ರನ ತಳಮಳಕ್ಕೆ ಕಾರಣವೇನು?

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವೆನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವಶಿವಯೆನುತ ಮರುಗಿದನು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ನಾನೇನಾದರು ಕೌರವನ ವಿರುದ್ಧವಾಗಿ ನಡೆದರೆ ಇವನು ಇವರ ಸಹೋದರರ ಜೊತೆ ಸೇರಿ ನಮ್ಮನ್ನು ಬಿಟ್ಟುಬಿಡುತ್ತಾರೆ. ಅವರು ಹೇಳಿದಂತೆ ಕೇಳಿದರೆ ಮುಂದೆ ಪಾಂಡವರು ಈ ನೂರ್ವರನ್ನು ಕತ್ತರಿಸಿ ಹಾಕುತ್ತಾರೆ. ಹೀಗಿರಲು ಏನುಮಾಡಬೇಕೆಂದು ನಿರ್ಧರಿಸಲಾರೆ. ಮಕ್ಕಳ ಮೋಹ ಜೀವದಿಂದಿರುವವರೆಗೆ ಬಿಡುವುದಿಲ್ಲ, ಶಿವ ಶಿವಾ ಎಂದು ಧೃತರಾಷ್ಟ್ರನು ಮರುಗಿದನು.

ಅರ್ಥ:
ಮುರಿ: ಸೀಳು; ಮುನಿ: ಸಿಟ್ಟಾಗು, ಕೋಪಗೊಳ್ಳು; ನೂರು: ಶತ; ತೊರೆ: ಬಿಡು, ತ್ಯಜಿಸು; ತೊಡಕು: ಸಿಕ್ಕಿಕೊಳ್ಳು; ತೊಡಕಿಸು: ಸಿಕ್ಕಿಸು; ತರಿ: ಕಡಿ, ಕತ್ತರಿಸು, ಛೇದಿಸು; ಬಿಸುಡು: ಹೊರಹಾಕು, ಬಿಸಾಕು, ತ್ಯಜಿಸು; ಬಳಿಕ: ನಂತರ; ಹೊರಗೆ: ಆಚೆ; ಒಳಗೆ: ಆಂತರ್ಯ; ಹದ: ಸ್ಥಿತಿ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಅರಿ: ತಿಳಿ; ಅಸು: ಜೀವ; ಹೃದಯ: ಎದೆ; ಸೆರೆ: ಬಂಧನ; ಬಿಡು: ತ್ಯಜಿಸು; ಮರುಗು: ತಳಮಳ, ಸಂಕಟ;

ಪದವಿಂಗಡಣೆ:
ಮುರಿವೆನೇ +ಮುನಿದ್+ಇವರು +ನೂರ್ವರು
ತೊರೆವರ್+ಎನ್ನನು +ತೊಡಕಿಸುವೆನ್+
ಈತರಿದು+ ಬಿಸುಡುವರ್+ಅವರು +ಕೌರವ +ಶತಕವನು +ಬಳಿಕ
ಹೊರಗೊಳಗೆ+ ಹದನಿದು +ನಿಧಾನಿಸಲ್
ಅರಿಯೆನ್+ಎನ್+ಅಸುವಿನಲಿ +ಹೃದಯದ
ಸೆರೆ+ ಬಿಡದು +ಶಿವಶಿವಯೆನುತ+ ಮರುಗಿದನು +ಧೃತರಾಷ್ಟ್ರ

ಅಚ್ಚರಿ:
(೧) ಮಕ್ಕಳ ವ್ಯಾಮೋಹ – ಅಸುವಿನಲಿ ಹೃದಯದ ಸೆರೆ ಬಿಡದು
(೨) ನೂರು, ಶತ – ಸಮನಾರ್ಥಕ ಪದ

ಪದ್ಯ ೧೩: ಸುಯೋಧನನು ಶಲ್ಯನನ್ನು ನಂಬೆ ಕೆಟ್ಟನೆಂದು ಕರ್ಣನು ಏಕೆಂದು ಕೊಂಡನು?

ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀತನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ (ಕರ್ಣ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಮೇಲಿನ ಪಕ್ಷಪಾತವು ಶಲ್ಯನಿಗೆ ಇಷ್ಟು ಬಲವಾಗಿದೆಯೇ? ಶಿವ ಶಿವಾ ದುರ್ಯೋಧನನು ಇವನನ್ನು ಇಷ್ಟು ನಂಬಿರುವವನು, ನಾನೀಗ ಏನು ಮಾಡಲಿ, ಸೂರ್ಯಕಾಂತ ಶಿಲೆಯ ಶಿರಸ್ತ್ರಾಣವನ್ನು ಧರಿಸಿ ಸೂರ್ಯನೊಡನೆ ಕಾಳಗ ಮಾದುವವನಂತೆ, ಅಯ್ಯೋ ನನ್ನ ಒಡೆಯನು ಇವನನ್ನು ನಂಬಿ ಕೆಟ್ಟನಲ್ಲಾ ಎಂದುಕೊಂಡನು.

ಅರ್ಥ:
ಈಸು: ಇಷ್ಟು; ಪಕ್ಷ: ಕಡೆ, ಪಂಗಡ; ಪಕ್ಷಾವೇಶಿ: ಒಂದು ಗುಂಪಿನ ಮೇಲೆ ರೋಷ; ನಂಬು: ವಿಶ್ವಾಸವಿಡು; ಸೀಸಕ: ಶಿರಸ್ತ್ರಾಣ; ರವಿ: ಭಾನು; ಕಾಂತಿ: ಪ್ರಕಾಶ; ದಿನೇಶ: ಭಾನು,ಸೂರ್ಯ; ಕೆಣಕು: ಪ್ರಚೋದಿಸು; ಅವನೀಶ: ರಾಜ; ಕೆಟ್ಟನು: ಹಾಳಾದನು; ಅಕಟ: ಅಯ್ಯೋ;

ಪದವಿಂಗಡಣೆ:
ಈಸು +ನೀನ್+ಅರ್ಜುನನ +ಪಕ್ಷಾ
ವೇಶಿಯೇ +ಶಿವಶಿವ +ಮಹಾದೇವ
ಈಸು +ನಂಬಿಹನೋ +ಸುಯೋಧನನ್+ಏನ +ಮಾಡುವೆನೊ
ಸೀಸಕವೆ+ ರವಿಕಾಂತವಾಗಿ+ ದಿ
ನೇಶನನು +ಕೆಣಕಿದವೊಲ್+ಇಂದ್+ಅವ
ನೀತನ್+ಈತನ +ನಂಬಿ +ಕೆಟ್ಟನು +ಕೆಟ್ಟನ್+ಅಕಟೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದವೊಲು
(೨) ಪದಗಳ ಬಳಕೆ – ಅವನೀತನ ಈತನ, ಕೆಟ್ಟನು ಕೆಟ್ಟನು, ಶಿವಶಿವ ಮಹಾದೇವ

ಪದ್ಯ ೧೦: ಮಗನ ಕಪಟವನು ಕೇಳಿ ಧೃತರಾಷ್ಟ್ರನು ಹೇಗೆ ಬೇಸರಗೊಂಡನು?

ಅವನಿಪತಿ ಕೇಳಿದನು ಕನಲಿದು
ಶಿವಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಳ್ವ ಗಾಂಧಾರಿಯನು ಕರೆಯೆಂದ (ಉದ್ಯೋಗ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮರು ಹೇಳಿದ ಮಾತುಗಳನ್ನು ಕೇಳಿದ ಧೃತರಾಷ್ಟ್ರ ಬೇಸರಗೊಂಡು ಶಿವಶಿವ ಇವನು ನನ್ನ ಮಗನೇ ಎಂದು ಸಂಕಟಪಟ್ಟನು, ಅಲ್ಲಾ ಇವನು ಭರತವಂಶಕ್ಕೆ ಮೃತ್ಯುವಾಗಿರುವನಲ್ಲಾ! ವಿದುರನನ್ನು ಬರೆಮಾಡಲು ಹೇಳಿ, ಗಾಂಧಾರಿಯನ್ನು ಇಲ್ಲಿಗೆ ಬರಲು ಹೇಳು, ಅವಳ ಮಗನ ಆಟವನ್ನು ಆಕೆಯೂ ನೋಡಲಿ, ಮಗನನ್ನು ಎಂತಹ ಮೋಹದಿಂದ ಹೆತ್ತಳೋ ಕೇಳೋಣ ಎಂದು ಗಾಂಧಾರಿಯನ್ನು ಬರಲು ಹೇಳಿದನು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಕೇಳು: ಆಲಿಸು; ಕನಲು:ಸಂಕಟಪಡು; ಕರೆ: ಬರೆಮಾಡು; ಮೃತ್ಯು: ಸಾವು; ಸಂತತಿ: ವಂಶ; ಬರಹೇಳು: ಆಗಮಿಸು, ಬರೆಮಾಡು; ಆಟ: ಸೋಗು, ಉಪಾಯ; ನೋಡು: ವೀಕ್ಷಿಸು; ಹೆತ್ತ: ಜನ್ಮನೀಡಿದ; ಮೋಹ: ಆಸೆ; ಹವಣು:ನಿಯಮ, ಕಾರ್ಯ; ಬೆಸಗೊಳ್ಳು:ಕೇಳುವುದು;

ಪದವಿಂಗಡಣೆ:
ಅವನಿಪತಿ +ಕೇಳಿದನು +ಕನಲಿದು
ಶಿವಶಿವೆಂದನು +ವಿದುರ+ ಕರೆ+ ಕೌ
ರವನು +ಮಗನೇ +ಮೃತ್ಯುವಲ್ಲಾ +ಭರತ +ಸಂತತಿಗೆ
ಅವಳ+ ಬರಹೇಳ್+ಇತ್ತ +ಮಗನ
ಆಟವನು +ನೋಡಲಿ +ಹೆತ್ತ +ಮೋಹದ
ಹವಣುಗಳ+ ಬೆಸಗೊಳ್ವ +ಗಾಂಧಾರಿಯನು +ಕರೆಯೆಂದ

ಅಚ್ಚರಿ:
(೧) ಶಿವಶಿವ – ಆಡು ಭಾಷೆಯ ಪ್ರಯೋಗ
(೨) ಬರಹೇಳು, ಕರೆ – ಸಮನಾರ್ಥಕ ಪದ