ಪದ್ಯ ೪: ಧರ್ಮಜನ ಪಟ್ಟಾಭಿಷೇಕಕ್ಕೆ ಯಾರು ಮುಹೂರ್ತವನ್ನು ನೊಡಿದರು?

ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು (ಗದಾ ಪರ್ವ, ೧೩ ಸಂಧಿ, ೪ ಸಂಧಿ)

ತಾತ್ಪರ್ಯ:
ವ್ಯಾಸ, ನಾರದ, ಅಸಿತ ಮೊದಲಾದ ಸಮಸ್ತ ಮುನಿಶ್ರೇಷ್ಠರು ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಯುಧಿಷ್ಠಿರನನ್ನು ಒಪ್ಪಿಸಿದರು. ಗಾರ್ಗ್ಯನೇ ಮೊದಲಾದ ಜೋಯಿಸರು ಭಾನುವಾರ, ದೋಷರಹಿತ ಲಗ್ನ ಮುಹೂರ್ತ; ಶುಭಗ್ರಹಗಳ ಉದಯವನ್ನು ಲೆಕ್ಕಹಾಕಿ ಅತ್ಯುತ್ತಮ ಮುಹೂರ್ತವನ್ನು ನಿಶ್ಚಯಿಸಿದರು.

ಅರ್ಥ:
ಸಮಸ್ತ: ಎಲ್ಲಾ; ಮುನಿ: ಋಷಿ; ಮಹೀಶ: ರಾಜ; ಪಟ್ಟಾಭಿಷೇಕ: ವಿಧ್ಯುಕ್ತವಾಗಿ ಪವಿತ್ರ ಜಲಗಳಿಂದ ಅಭಿಷೇಕ ಮಾಡುವಿಕೆ, ಸಿಂಹಾಸನಾರೋಹಣ ಸಮಾರಂಭ; ಮನ: ಮನಸ್ಸು; ಒಡಬಡಿಸು: ಒಪ್ಪಿಸಿ; ದೋಷ: ತಪ್ಪು; ರಹಿತ: ಇಲ್ಲದ; ಮುಹೂರ್ತ: ಒಳ್ಳೆಯ ಸಮಯ; ಲಗ್ನ: ಮುಹೂರ್ತ, ನಿಶ್ಚಿತವಾದ ಕಾಲ; ದಿನೇಶ: ಸೂರ್ಯ; ಶುಭ: ಮಂಗಳ; ಉದಯ: ಹುಟ್ಟು; ಲೇಸು: ಒಳಿತು; ನೋಡು: ವೀಕ್ಷಿಸು; ಮಿಗೆ: ಮತ್ತು, ಅಧಿಕವಾಗಿ; ಜೋಯಿಸು: ಜೋತಿಷಿ;

ಪದವಿಂಗಡಣೆ:
ವ್ಯಾಸ +ನಾರದ +ಕೃಷ್ಣ +ಮೊದಲಾದ್
ಈ+ ಸಮಸ್ತ +ಮುನೀಂದ್ರ+ನಿಕರ +ಮ
ಹೀಶನನು +ಪಟ್ಟಾಭಿಷೇಕಕೆ +ಮನವನ್+ಒಡಬಡಿಸಿ
ದೋಷರಹಿತ +ಮುಹೂರ್ತ+ ಲಗ್ನ+ ದಿ
ನೇಶವಾರ +ಶುಭಗ್ರಹ+ಉದಯ
ಲೇಸೆನಲು +ನೋಡಿದರು +ಮಿಗೆ +ಗಾರ್ಗ್ಯಾದಿ+ ಜೋಯಿಸರು

ಅಚ್ಚರಿ:
(೧) ಪಟ್ಟಾಭಿಷೇಕದ ದಿನ – ದೋಷರಹಿತ ಮುಹೂರ್ತ ಲಗ್ನ ದಿನೇಶವಾರ
(೨) ಭಾನುವಾರವನ್ನು ದಿನೇಶವಾರ ಎಂದು ಕರೆದಿರುವುದು
(೩) ಮಹೀಶ, ದಿನೀಶ – ಪ್ರಾಸ ಪದಗಳು

ಪದ್ಯ ೮: ಭೀಷ್ಮರು ಧರ್ಮರಾಯನನ್ನು ಹೇಗೆ ಸಮಾಧಾನ ಪಡಿಸಿದರು?

ಅಂಜದಿರು ಭಯಬೇಡ ನರರಿಗೆ
ನಂಜು ಪಥ್ಯವೆ ಗಿಳಿಯ ಮರಿಗಳು
ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ
ಮಂಜು ಮಧ್ಯಾಹ್ನದ ದಿನೇಶನ
ನೆಂಜಲಿಸುವುದೆ ಕುಪಿತ ಸಿಂಹವ
ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ (ಸಭಾ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲೈ ಧರ್ಮರಾಯ ಹೆದರಬೇಡ, ಮನುಷ್ಯರು ವಿಷವನ್ನು ಕುಡಿಯುತ್ತೇನೆಂದರೆ ಅವರಿಗೆ ಅದು ಯೋಗ್ಯವಾದುದೇ? ಗಿಣಿಯ ಮರಿಗಳು ಬೆಕ್ಕನ್ನು ಎದುರಿಸಿ ಬದುಕುತ್ತವೆಯೇ? ಮಧ್ಯಾಹ್ನದ ಸೂರ್ಯನನ್ನು ಮಂಜು ತಿನ್ನುತ್ತದೆಯೇ? ಕೋಪಗೊಂಡ ಸಿಂಹವನ್ನು ನಾಯಿಗಳು ಹೆದರಿಸಬಲ್ಲವೇ? ಹೆದರಬೇಡ ಎಂದು ಅಭಯವನ್ನು ಭೀಷ್ಮರು ಧರ್ಮರಾಯನಿಗೆ ನೀಡಿದರು.

ಅರ್ಥ:
ಅಂಜು: ಹೆದರು; ಭಯ: ಭೀತಿ, ಹೆದರು; ನರ: ಮನುಷ್ಯ; ನಂಜು: ವಿಷ; ಪಥ್ಯ: ಯೋಗ್ಯವಾದುದು; ಗಿಳಿ: ಶುಕ; ಮರಿ: ಚಿಕ್ಕ, ಎಳೆಯದು, ಕೂಸು; ಮಂಜರ: ಬೆಕ್ಕು, ಮಾರ್ಜಾಲ; ಮೇಲ್ವಾಯ್ದು: ಹೋರಾಡು, ಮೇಲೆಬೀಳು; ಬದುಕು: ಜೀವಿಸು; ಮಹೀಪತಿ: ರಾಜ; ಮಂಜು: ಹಿಮ; ಮಧ್ಯಾಹ್ನ: ಅಪರಾಹ್ನ; ದಿನೇಶ: ಸೂರ್ಯ; ಎಂಜಲಿಸು: ತಿನ್ನು; ಕುಪಿತ: ಕೋಪಗೊಂಡ; ಸಿಂಹ: ಕೇಸರಿ; ಅಂಜಿಸು: ಬೆದರಿಸು; ನಾಯಿ: ಕುನ್ನಿ, ಶ್ವಾನ; ಭೂಪತಿ: ರಾಜ;

ಪದವಿಂಗಡಣೆ:
ಅಂಜದಿರು +ಭಯಬೇಡ +ನರರಿಗೆ
ನಂಜು+ ಪಥ್ಯವೆ+ ಗಿಳಿಯ +ಮರಿಗಳು
ಮಂಜರನ +ಮೇಲ್ವಾಯ್ದು +ಬದುಕುವವೇ +ಮಹೀಪತಿಯೆ
ಮಂಜು +ಮಧ್ಯಾಹ್ನದ +ದಿನೇಶನನ್
ಎಂಜಲಿಸುವುದೆ +ಕುಪಿತ +ಸಿಂಹವನ್
ಅಂಜಿಸುವವೇ +ನಾಯ್ಗಳ್+ಎಂದನು +ಭೂಪತಿಗೆ+ ಭೀಷ್ಮ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದಗಳು – ಮರಿಗಳು ಮಂಜರನ ಮೇಲ್ವಾಯ್ದು; ಮಹೀಪತಿಯೆ
ಮಂಜು ಮಧ್ಯಾಹ್ನದ
(೨) ಉಪಮಾನಗಳ ಬಳಕೆ – ನರರಿಗೆ ನಂಜು ಪಥ್ಯವೆ; ಗಿಳಿಯ ಮರಿಗಳು ಮಂಜರನ ಮೇಲ್ವಾಯ್ದು ಬದುಕುವವೇ; ಮಂಜು ಮಧ್ಯಾಹ್ನದ ದಿನೇಶನನೆಂಜಲಿಸುವುದೆ; ಕುಪಿತ ಸಿಂಹವ ನಂಜಿಸುವವೇ ನಾಯ್ಗಳೆಂದನು

ಪದ್ಯ ೧೩: ಸುಯೋಧನನು ಶಲ್ಯನನ್ನು ನಂಬೆ ಕೆಟ್ಟನೆಂದು ಕರ್ಣನು ಏಕೆಂದು ಕೊಂಡನು?

ಈಸು ನೀನರ್ಜುನನ ಪಕ್ಷಾ
ವೇಶಿಯೇ ಶಿವಶಿವ ಮಹಾದೇ
ವೇಸು ನಂಬಿಹನೋ ಸುಯೋಧನನೇನ ಮಾಡುವೆನೊ
ಸೀಸಕವೆ ರವಿಕಾಂತವಾಗಿ ದಿ
ನೇಶನನು ಕೆಣಕಿದವೊಲಿಂದವ
ನೀತನೀತನ ನಂಬಿ ಕೆಟ್ಟನು ಕೆಟ್ಟನಕಟೆಂದ (ಕರ್ಣ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಮೇಲಿನ ಪಕ್ಷಪಾತವು ಶಲ್ಯನಿಗೆ ಇಷ್ಟು ಬಲವಾಗಿದೆಯೇ? ಶಿವ ಶಿವಾ ದುರ್ಯೋಧನನು ಇವನನ್ನು ಇಷ್ಟು ನಂಬಿರುವವನು, ನಾನೀಗ ಏನು ಮಾಡಲಿ, ಸೂರ್ಯಕಾಂತ ಶಿಲೆಯ ಶಿರಸ್ತ್ರಾಣವನ್ನು ಧರಿಸಿ ಸೂರ್ಯನೊಡನೆ ಕಾಳಗ ಮಾದುವವನಂತೆ, ಅಯ್ಯೋ ನನ್ನ ಒಡೆಯನು ಇವನನ್ನು ನಂಬಿ ಕೆಟ್ಟನಲ್ಲಾ ಎಂದುಕೊಂಡನು.

ಅರ್ಥ:
ಈಸು: ಇಷ್ಟು; ಪಕ್ಷ: ಕಡೆ, ಪಂಗಡ; ಪಕ್ಷಾವೇಶಿ: ಒಂದು ಗುಂಪಿನ ಮೇಲೆ ರೋಷ; ನಂಬು: ವಿಶ್ವಾಸವಿಡು; ಸೀಸಕ: ಶಿರಸ್ತ್ರಾಣ; ರವಿ: ಭಾನು; ಕಾಂತಿ: ಪ್ರಕಾಶ; ದಿನೇಶ: ಭಾನು,ಸೂರ್ಯ; ಕೆಣಕು: ಪ್ರಚೋದಿಸು; ಅವನೀಶ: ರಾಜ; ಕೆಟ್ಟನು: ಹಾಳಾದನು; ಅಕಟ: ಅಯ್ಯೋ;

ಪದವಿಂಗಡಣೆ:
ಈಸು +ನೀನ್+ಅರ್ಜುನನ +ಪಕ್ಷಾ
ವೇಶಿಯೇ +ಶಿವಶಿವ +ಮಹಾದೇವ
ಈಸು +ನಂಬಿಹನೋ +ಸುಯೋಧನನ್+ಏನ +ಮಾಡುವೆನೊ
ಸೀಸಕವೆ+ ರವಿಕಾಂತವಾಗಿ+ ದಿ
ನೇಶನನು +ಕೆಣಕಿದವೊಲ್+ಇಂದ್+ಅವ
ನೀತನ್+ಈತನ +ನಂಬಿ +ಕೆಟ್ಟನು +ಕೆಟ್ಟನ್+ಅಕಟೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೀಸಕವೆ ರವಿಕಾಂತವಾಗಿ ದಿನೇಶನನು ಕೆಣಕಿದವೊಲು
(೨) ಪದಗಳ ಬಳಕೆ – ಅವನೀತನ ಈತನ, ಕೆಟ್ಟನು ಕೆಟ್ಟನು, ಶಿವಶಿವ ಮಹಾದೇವ