ಪದ್ಯ ೨೬: ದ್ರೌಪದಿಯು ಭೀಮಾರ್ಜುನರನ್ನು ಏಕೆ ತಡೆದಳು?

ಬಂದಳಾ ದ್ರೌಪದಿಯಹಹ ಗುರು
ನಂದನ ಕೊಲಬಾರದಕಟೀ
ನಂದನರ ಮರಣದ ಮಹಾ ವ್ಯಥೆಯೀತನಳಿವಿನಲಿ
ಕೊಂದು ಕೂಗದೆ ಕೃಪೆಯಸಬಲಾ
ವೃಂದ ಸಮಸುಖದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ (ಗದಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ಕೊಲ್ಲಲು ಸಜ್ಜಾಗಿದ್ದ ಭೀಮಾರ್ಜುನರನ್ನು ದ್ರೌಪದಿಯು ಮುಂದೆ ಬಂದು ತಡೆದಳು. ಅಹಹಾ ಗುರುಪುತ್ರನನ್ನು ಕೊಲ್ಲಬಾರದು. ಹಾಗೆ ಮಾಡಿದರೆ ಪುತ್ರಶೋಕವು ಕೃಪೆಯನ್ನು ಘಾತಿಸುವುದಿಲ್ಲವೇ? ಹೆಣ್ಣು ಮಕ್ಕಳು ಸುಖ ದುಃಖದಲ್ಲಿ ಸಮಾನರು. ಬೇಡ, ಗುರುಪುತ್ರನನ್ನು ಬಿಡಿ ಎಂದು ಭೀಮಾರ್ಜುನರನ್ನು ನಿಲ್ಲಿಸಿದಳು.

ಅರ್ಥ:
ಬಂದಳು: ಆಗಮಿಸು; ಗುರು: ಆಚಾರ್ಯ; ನಂದನ: ಮಗ; ಕೊಲು: ಸಾಯಿಸು; ಅಕಟ: ಅಯ್ಯೋ; ಮರಣ: ಸವು; ವ್ಯಥೆ: ದುಃಖ; ಅಳಿವು: ನಾಶ; ಕೂಗು: ಕಿರುಚು, ಆರ್ಭಟಿಸು; ವೃಂದ: ಗುಮ್ಫು; ಅಬಲ: ಹೆಣ್ಣು; ಸಮ: ಸರಿಸಾಟಿ; ಸುಖ: ಸಂತಸ; ದುಃಖ: ನೋವು; ಸಾರು: ತಳ್ಳು; ತೆಗೆ: ಈಚೆಗೆ ತರು, ಹೊರತರು; ಬಳಿಕ: ನಂತರ;

ಪದವಿಂಗಡಣೆ:
ಬಂದಳಾ +ದ್ರೌಪದಿ+ಅಹಹ +ಗುರು
ನಂದನ +ಕೊಲಬಾರದ್+ಅಕಟೀ
ನಂದನರ +ಮರಣದ +ಮಹಾ +ವ್ಯಥೆ+ಈತನ್+ಅಳಿವಿನಲಿ
ಕೊಂದು +ಕೂಗದೆ +ಕೃಪೆಯಸ್+ಅಬಲಾ
ವೃಂದ +ಸಮಸುಖದುಃಖಿಗಳು +ಸಾ
ರೆಂದು +ಭೀಮಾರ್ಜುನರ+ ತೆಗೆದಳು +ಬಳಿಕ +ಪಾಂಚಾಲಿ

ಅಚ್ಚರಿ:
(೧) ದ್ರೌಪದಿಯ ಮೇರು ಚಿಂತನೆ – ಕೊಂದು ಕೂಗದೆ ಕೃಪೆಯಸಬಲಾವೃಂದ ಸಮಸುಖದುಃಖಿಗಳು
(೨) ಕೊಂದು, ಕೊಲು, ಮರನ, ಅಳಿವು – ಸಾಮ್ಯಾರ್ಥ ಪದಗಳು

ಪದ್ಯ ೫೮: ದುರ್ಯೊಧನನು ಕೃಪ, ಅಶ್ವತ್ಥಾಮರಿಗೆ ಏನು ಹೇಳಿದನು?

ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ (ಗದಾ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕೌರವನು ಕೃಪ, ಅಶ್ವತ್ಥಾಮ, ಕೃತವರ್ಮರ ಅಳಲನ್ನು ನೋಡಿ ನಗುತ್ತಾ, ನೀವೆಲ್ಲರೂ ಸಮಾಧಾನ ತಂದುಕೊಂಡು ಏಳಿರಿ. ಈ ದುಃಖ ಇನ್ನು ಸಾಕು. ದೈವದ ಮನೋಕ್ಷೋಭೆಯು ನಮಗೆ ಈ ಕಂಟಕದ ವ್ಯಥೆಯನ್ನು ತಮ್ದಿತು. ನಾವು ನಾಳೆ ಉದಯ ಕಾಲದಲ್ಲಿ ಈ ಶರೀರವನ್ನು ಒದೆದು ಹಾಯುತ್ತೇವೆ. ನಿಮ್ಮ ದಾರಿಯಲ್ಲಿ ನೀವು ಬಿಜಯಂಗೈಯಿರಿ ಎಂದು ಹೇಳಿದನು.

ಅರ್ಥ:
ಹದುಳ: ಉತ್ಸಾಹ, ಹುರುಪು; ಸಾಕು: ನಿಲ್ಲು; ದೈವ: ಭಗವಂತ; ಕದಡು: ಕ್ಷೋಭೆಗೊಳಿಸು, ಕಲಕು; ಮನ: ಮನಸ್ಸು; ಕಾಣಿಸು: ತೋರು; ಕಂಟಕ: ತೊಂದರೆ; ವ್ಯಥೆ: ನೋವು; ಉದಯ: ಹುಟ್ಟು; ಶರೀರ: ದೇಹ; ಒದೆ: ನೂಕು; ಹಾಯ್ವು: ನೆಗೆ, ಹಾರು; ಮಾರ್ಗ: ದಾರಿ; ಬಿಜಯಂಗೈ: ದಯಮಾಡಿಸಿ, ತೆರಳಿ; ನಗು: ಹರ್ಷ;

ಪದವಿಂಗಡಣೆ:
ಹದುಳಿಸಿರೆ +ಸಾಕೇಳಿ +ಸಾಕಿನ್
ಇದರಲ್+ಇನ್ನೇನ್+ಅಹುದು +ದೈವದ
ಕದಡು +ಮನಗಾಣಿಸಿತು +ನಮಗೀ +ಕಂಟಕ+ವ್ಯಥೆಯ
ಉದಯದಲಿ +ನಾವೀ +ಶರೀರವನ್
ಒದೆದು +ಹಾಯ್ವೆವು+ ನೀವು +ನಿಜ+ಮಾ
ರ್ಗದಲಿ +ಬಿಜಯಂಗೈವುದ್+ಎಂದನು +ನಗುತ +ಕುರುರಾಯ

ಅಚ್ಚರಿ:
(೧) ದುರ್ಯೋಧನ ತನ್ನ ಸಾವಿನ ಬಗ್ಗೆ ಹೇಳುವ ಪರಿ – ಉದಯದಲಿ ನಾವೀ ಶರೀರವನೊದೆದು ಹಾಯ್ವೆವು

ಪದ್ಯ ೪೬: ಧರ್ಮಜನೇಕೆ ನಿಟ್ಟುಸಿರು ಬಿಟ್ಟನು?

ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ (ಗದಾ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೂತರು ಕೌರವನನ್ನು ಕಾಣದೆ ಹಿಂದಿರುಗಿದರು. ಭೀಷ್ಮಾದಿಗಳನ್ನು ಗೆದ್ದರೂ ಕೊನೆಗೆ ಈ ವ್ಯಥೆ ಸಂಭವಿಸಿತು. ಹಸ್ತಿನಪುರದ ಐಶ್ವರ್ಯ ಲಕ್ಷ್ಮಿಯು ನನ್ನಿಂದ ತಪ್ಪಿಸಿಕೊಂಡಳು ಎಂದು ಧರ್ಮಜನು ನಿಟ್ಟುಸಿರು ಬಿಟ್ಟನು.

ಅರ್ಥ:
ಹರಿ: ಹರಡು; ದೂತ: ಸೇವಕ; ನೃಪ: ರಾಜ; ಕಾಣು: ತೋರು; ಮರಳು: ಹಿಂದಿರುಗು; ಸೂನು: ಮಗ; ದುಗುಡ: ದುಃಖ; ಭರ: ಹೊರೆ; ಭಾರವಣೆ: ಘನತೆ, ಗೌರವ; ಹೊಕ್ಕು: ಸೇರು; ಪಾಳೆಯ: ಬಿಡಾರ; ನೃಪತಿ: ರಾಜ; ತಪ್ಪು: ಸರಿಯಲ್ಲದ; ಆದಿ: ಮುಂತಾದ; ವಿಜಯ: ಗೆಲುವು; ವ್ಯಥೆ: ನೋವು, ಯಾತನೆ; ಸಿರಿ: ಐಶ್ವರ್ಯ; ಜಾರು: ಬೀಳು; ಅರಸ: ರಾಜ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಹರಿದು +ದೂತರು +ನೃಪನ +ಕಾಣದೆ
ಮರಳಿದರು +ಯಮಸೂನು +ದುಗುಡದ
ಭರದ+ ಭಾರವಣೆಯಲಿ +ಹೊಕ್ಕನು +ತನ್ನ +ಪಾಳೆಯವ
ಕುರುನೃಪತಿ +ತಪ್ಪಿದನು +ಭೀಷ್ಮಾ
ದ್ಯರ +ವಿಜಯ +ವ್ಯಥೆಯಾಯ್ತು +ಹಸ್ತಿನ
ಪುರದ +ಸಿರಿ+ ಜಾರಿದಳು +ತನಗೆಂದ್+ಅರಸ +ಬಿಸುಸುಯ್ದ

ಅಚ್ಚರಿ:
(೧) ರಾಜ್ಯತಪ್ಪಿತು ಎಂದು ಹೇಳುವ ಪರಿ – ಹಸ್ತಿನಪುರದ ಸಿರಿ ಜಾರಿದಳು

ಪದ್ಯ ೬೧: ಶಲ್ಯನು ಧರ್ಮಜನನ್ನು ಹೇಗೆ ಮೂದಲಿಸಿದನು?

ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವ್ಯಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ (ಶಲ್ಯ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶಲ್ಯನು ರಥವನ್ನೇರಿ ಸಾರಥಿಗೆ ಉಡುಗೊರೆಯನ್ನು ಕೊಟ್ಟು ಬಿಲ್ಲು ಬಾಣಗಳನ್ನು ರಥದಲ್ಲಿ ತುಂಬಿಸಿ, ಸುಯೋಧನನಿಗೆ ನಂಬುಗೆ ಕೊಟ್ಟು, ಕುಂತಿಯ ಮಕ್ಕಳದು ವೃಥಾ ಪರಾಕ್ರಮ, ಕರ್ಣಾದಿ ವೀರರ ಮರಣದ ವ್ಯಥೆಯನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಮೂದಲಿಸಿದನು.

ಅರ್ಥ:
ರಥ: ಬಂಡಿ; ಪಸಾಯ: ಉಡುಗೊರೆ, ಬಹುಮಾನ; ಸಾರಥಿ: ಸೂತ; ಕೊಡು: ನೀಡು; ಚಾಪ: ಬಿಲ್ಲು; ಶರ: ಬಾಣ; ರಥ: ಬಂಡಿ; ತುಂಬು: ಭರ್ತಿಮಾಡು; ನಂಬು: ವಿಶ್ವಾಸವಿಡು; ಪೃಥೆ: ಕುಂತಿ; ಮಕ್ಕಳು: ಪುತ್ರರು; ರಣ: ಯುದ್ಧ; ಪರಾಕ್ರಮ: ಶೂರ; ವ್ಯಥೆ: ದುಃಖ; ಆದಿ: ಮುಂತಾದ; ಸುಭಟ: ಪರಾಕ್ರಮಿ; ನಿಲಿಸು: ತಡೆ; ಮೂದಲಿಸು: ಹಂಗಿಸು;

ಪದವಿಂಗಡಣೆ:
ರಥಕೆ +ಬಂದು +ಪಸಾಯವನು +ಸಾ
ರಥಿಗೆ +ಕೊಟ್ಟನು +ಚಾಪ+ಶರವನು
ರಥದೊಳಗೆ +ತುಂಬಿದನು +ನಂಬಿಸಿದನು +ಸುಯೋಧನನ
ಪೃಥೆಯ +ಮಕ್ಕಳ +ರಣ+ಪರಾಕ್ರಮ
ವ್ಯಥೆ +ಕಣಾ +ಕರ್ಣಾದಿ +ಸುಭಟ
ವ್ಯಥೆಯ +ನಿಲಿಸುವೆನೆನುತ +ಮೂದಲಿಸಿದನು +ಧರ್ಮಜನ

ಅಚ್ಚರಿ:
(೧) ಪಾಂಡವರನ್ನು ಮೂದಲಿಸುವ ಪರಿ – ಪೃಥೆಯ ಮಕ್ಕಳ ರಣಪರಾಕ್ರಮ ವ್ಯಥೆ ಕಣಾ

ಪದ್ಯ ೯: ಧೃತರಾಷ್ಟ್ರನೇಕೆ ವ್ಯಥೆಪಟ್ಟನು?

ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ (ಅರಣ್ಯ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ನೋವನ್ನು ಹೇಳುತ್ತಾ, ದುಃಖವೇಕೆಂದು ಕೇಳುವಿರಾ? ಮಕ್ಕಳು ಬೀದಿಯಲ್ಲಿ ಅಲೆಯುವ ಬಿಟ್ಟಿ ಕರುಗಳಂತೆ ಅನಾಥರಾದರು. ಕಾಡಿನಲ್ಲಿ ಅವರಿಗೊದಗಿದ ಸಂಕಟವನ್ನು ಕೇಳಿ ನನ್ನ ದೇಹ ಸಂಕಟಪಟ್ಟಿತು. ಉದಯ ಮತ್ತು ಮುಳುಗುವ ಪ್ರತಿದಿನವೂ ಮಂದೇಹರೊಡನೆ ಹೋರವ ಸೂರ್ಯನಂತೆ ಇವರು ಬೆಳಗಾದರೆ ಬೈಗಾದರೆ ರಾಕ್ಷಸರೊಡನೆ ಹೋರಾಡಬೇಕಾಗಿ ಬಂದಿದೆ ಎಂದು ನಿಟ್ಟುಸಿರಿಟ್ಟನು.

ಅರ್ಥ:
ಖೇದ: ದುಃಖ; ಮಕ್ಕಳು: ತನುಜ; ಬೀದಿ: ದಾರಿ; ಕರು: ಹಸುವಿನ ಮರಿ; ವನ: ಕಾಡು; ಅಂತ: ಅಂಚು, ಸಮೀಪ; ಚಿತ್ತ: ಮನಸ್ಸು; ವ್ಯಥೆ: ದುಃಖ; ಕೇಳು: ಆಲಿಸು; ಬೇಯು: ಸಂಕಟಕ್ಕೊಳಗಾಗು; ಒಡಲು: ದೇಹ; ದಿವಾಕರ: ಸೂರ್ಯ; ನಿಚ್ಚ: ನಿತ್ಯ; ಕಾದು: ಹೋರಾಡು; ಉದಯ: ಹುಟ್ಟು; ಅಸ್ತಂಗತ: ಮುಳುಗು; ಜಾದಿ: ಜಾಜಿಗಿಡ ಮತ್ತು ಅದರ ಹೂವು; ಖಳ: ದುಷ್ಟ; ಅಟವಿ: ಕಾದು; ಕೋಟಲೆ: ತೊಂದರೆ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ಖೇದವೇಕೆಂದೇನು+ ಮಕ್ಕಳು
ಬೀದಿ+ಕರುವಾದರು+ ವನಾಂತದ
ಲಾದ +ಚಿತ್ತ+ವ್ಯಥೆಯ +ಕೇಳಿದು +ಬೆಂದುದ್+ಎನ್ನೊಡಲು
ಆ +ದಿವಾಕರನಂತೆ +ನಿಚ್ಚಲು
ಕಾದುದ್+ಉದಯ+ಅಸ್ತಂಗಳಲ್+ಇದನು
ಜಾದಿ +ಖಳರೊಡನ್+ಅಟವಿ+ಕೋಟಲೆಯೆಂದು +ಬಿಸುಸುಯ್ದ

ಅಚ್ಚರಿ:
(೧) ಮಕ್ಕಳು ಅನಾಥರಾದರು ಎಂದು ಹೇಳುವ ಪರಿ – ಮಕ್ಕಳು ಬೀದಿಗರುವಾದರು
(೨) ಉಪಮಾನದ ಪ್ರಯೋಗ – ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆ

ಪದ್ಯ ೯: ಭೀಮನು ಹೇಗೆ ದುಃಖಿಸಿದನು?

ನರನ ಖಾತಿಗೆ ದ್ರೌಪದಿಯ ತೊ
ತ್ತಿರುಗಳುಪಹಾಸ್ಯಕ್ಕೆ ನೃಪತಿಯ
ಮರಣ ಸಾದೃಶ್ಯ ಪ್ರಹಾರವ್ಯಥೆಯ ಕಾಣಿಕೆಗೆ
ಅರರೆ ಭಾಜನವಾದೆನೈ ಹರ
ಹರ ಮಹಾದೇವಾ ಎನುತ ತುದಿ
ವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ (ಕರ್ಣ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಅಯ್ಯೋ ನಾನು ಅರ್ಜುನನ ಸಿಟ್ಟಿಗೆ ಪಾತ್ರನಾದೆನಲ್ಲಾ, ದ್ರೌಪದಿಯ ದಾಸಿಯರ ಹಂಗಿಸುವ ಮಾತಿಗೆ ಭಾಜಕನಾದೆ, ರಾಜನ ಮರಣ ಸದೃಶ್ಯವಾದ ನೋವಿಗೆ ನಾನೇ ಪಾತ್ರನಾದೆನಲ್ಲಾ!! ಅಯ್ಯೋ ಮಹಾದೇವ, ಎಂದು ಅಳುತ್ತಾ ತನ್ನ ತುದಿ ಬೆರಳಿನಿಂದ ಕಣ್ಣೀರನ್ನೊರಸಿಕೊಂಡು ದುಃಖಿಸಿದನು.

ಅರ್ಥ:
ನರ: ಅರ್ಜುನ; ಖಾತಿ: ಸಿಟ್ಟು; ತೊತ್ತು: ದಾಸಿ; ಉಪಹಾಸ್ಯ: ಅಪಹಾಸ್ಯ, ಹಂಗಿಸು; ನೃಪತಿ: ರಾಜ; ಮರಣ: ಸಾವು; ಸಾದೃಶ್ಯ: ಹೋಲಿಕೆ; ಪ್ರಹಾರ: ಹೊಡೆತ, ಪೆಟ್ಟು; ವ್ಯಥೆ: ದುಃಖ; ಕಾಣಿಕೆ: ಕೊಡುಗೆ; ಅರರೆ: ಅಯ್ಯೋ; ಭಾಜನ: ಅರ್ಹವ್ಯಕ್ತಿ, ಯೋಗ್ಯ; ಎನುತ: ಹೇಳು; ತುದಿ: ಅಗ್ರ; ವೆರಳು: ಬೆರಳು, ಅಂಗುಲಿ; ಆಲಿ: ಕಣ್ಣು; ನೀರು: ಜಲ; ಮಿಡಿ: ತವಕಿಸು; ಅಳಲು: ದುಃಖ; ಕಲಿ: ವೀರ;

ಪದವಿಂಗಡಣೆ:
ನರನ +ಖಾತಿಗೆ +ದ್ರೌಪದಿಯ +ತೊ
ತ್ತಿರುಗಳ+ಉಪಹಾಸ್ಯಕ್ಕೆ +ನೃಪತಿಯ
ಮರಣ+ ಸಾದೃಶ್ಯ+ ಪ್ರಹಾರ+ವ್ಯಥೆಯ +ಕಾಣಿಕೆಗೆ
ಅರರೆ +ಭಾಜನವಾದೆನೈ +ಹರ
ಹರ+ ಮಹಾದೇವಾ +ಎನುತ +ತುದಿ
ವೆರಳಲ್+ಆಲಿಯ +ನೀರ +ಮಿಡಿದ್+ಅಳಲಿದನು +ಕಲಿಭೀಮ

ಅಚ್ಚರಿ:
(೧) ಭೀಮನು ದುಃಖಿಸುವ ಚಿತ್ರಣ – ತುದಿವೆರಳಲಾಲಿಯ ನೀರ ಮಿಡಿದಳಲಿದನು ಕಲಿಭೀಮ
(೨) ಖಾತಿ, ಉಪಹಾಸ್ಯ, ವ್ಯಥೆ – ಭೀಮನ ದುಃಖಕ್ಕೆ ಕಾರಣ

ಪದ್ಯ ೨೬: ಕರ್ಣನಿಗೆ ಸೇನಾಧಿಪತ್ಯ ಪಟ್ಟ ಕಟ್ಟುವ ಪ್ರಸ್ತಾಪಕ್ಕೆ ಅಶ್ವತ್ಥಾಮನ ಅಭಿಪ್ರಾಯವೇನು?

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ (ಕರ್ಣ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲ್ಲರೂ ಅಶ್ವತ್ಥಾಮನ ಕಡೆ ನೋಡಲು, ನಮ್ಮನ್ನು ತೋರಿಸಲು ಹೋಗಬೇಡಿ, ನಿನ್ನ ಮನಸ್ಸಿಗೆ ಬಂದಂತೆ ಮಾಡು, ನಮ್ಮ ಮನೋವ್ಯಥೆಯನ್ನು ಬಾಯಿ ಬಿಟ್ಟು ಆಡಿ ಫಲವೇನು? ನಮ್ಮ ಪುಣ್ಯಾ ಬೆಳೆಗಳು ಒಣಗಿ ಹೋದವು. ಹೋರಾಡಿ ಏನು ಮಾಡಬಹುದು ಕರ್ಣನೇ ನಮ್ಮ ಸೇನಾಧಿಪತಿ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಎಮ್ಮ: ನಮ್ಮ; ತೋರು: ಗೋಚರ, ಕಾಣು; ಸುಖ: ಆನಂದ, ಸಂತೋಷ; ಚಿತ್ತ: ಮನಸ್ಸು; ಬಹುದು: ಬರುವುದೋ; ಮಾಡು: ಕಾರ್ಯ ರೂಪಕ್ಕೆ ತರುವುದು; ಹೃದಯ: ವಕ್ಷಸ್ಥಳ; ವ್ಯಥೆ: ದುಃಖ; ಫಲ: ಪ್ರಯೋಜನ; ಪುಣ್ಯ:ಸದಾಚಾರ; ಬೆಳೆ: ಪೈರು; ಒಣಗು: ಬಾಡು, ಸಾರಹೀನ; ದಳವಾಯಿ: ಸೇನಾಧಿಪತಿ; ಅರಸ: ರಾಜ;

ಪದವಿಂಗಡಣೆ:
ಎಮ್ಮ +ತೋರಿಸಬೇಡ +ಸುಖದಲಿ
ನಿಮ್ಮ +ಚಿತ್ತಕೆ +ಬಹುದ +ಮಾಡುವುದ್
ಎಮ್ಮ +ಹೃದಯ +ವ್ಯಥೆಯ +ನಾವಿನ್ನಾಡಿ +ಫಲವೇನು
ಎಮ್ಮ +ಪುಣ್ಯದ +ಬೆಳೆಗಳ್+ಒಣಗಿದ
ಡಮ್ಮಿ +ಮಾಡುವುದೇನು +ಕರ್ಣನು
ನಮ್ಮ +ದಳವಾಯೆಂದನ್+ಅಶ್ವತ್ಥಾಮನ್+ಅರಸಂಗೆ

ಅಚ್ಚರಿ:
(೧) ಎಮ್ಮ – ೩ ಬಾರಿ ಪ್ರಯೋಗ
(೨) ಪುಣ್ಯವು ಹೋಯಿತೆನಲು ಬೆಳೆಗಳ ಉಪಮಾನ – ಎಮ್ಮ ಪುಣ್ಯದ ಬೆಳೆಗಳೊಣಗಿದಡಮ್ಮಿ ಮಾಡುವುದೇನು

ಪದ್ಯ ೧೪: ಯಾವ ಕಾರಣಗಳನ್ನು ಧೃತರಾಷ್ಟ್ರ ಹುಡುಕುತಿದ್ದನು?

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ (ಕರ್ಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತುಗಳನ್ನು ಮುಂದುವರೆಸುತ್ತಾ, ಏಕೆ ಹೀಗಾಯಿತು ನಮಗೆ, ಬಾಣಗಳ ಕೊರತೆಯೇ, ಸಾರಥಿಯ ಮತ್ಸವಏ, ರಥಕ್ಕೆ ಹೊಡೆತ ಬಿದ್ದು ಹಾಳಾಯಿತೇ? ಧನುಸ್ಸು ಮುರಿಯಿತೇ? ಮಹಾಸ್ತ್ರದ ವ್ಯಥೆಯೇ? ಕರ್ಣನನ್ನು ಹೇಗೆ ಕೊಂದರು? ಶತ್ರುಗಳಿಗೆ ನಮ್ಮನ್ನು ಕೊಲ್ಲುವ ಶಕ್ತಿ ಎಲ್ಲಿಂದ ಬರಬೇಕು? ನಮ್ಮ ಪಾಪ ಕರ್ಮಗಳಿಂದಾದ ಕಷ್ಟವೇ ನಮ್ಮನ್ನು ಕೆಡಿಸಿತು ಅಯ್ಯೋ ದೇವರೆ ಶಿವ ಶಿವಾ ಎಂದು ದುಃಖಿಸಿದನು ಧೃತರಾಷ್ಟ್ರ.

ಅರ್ಥ:
ಸರಳ: ಬಾಣ; ಕೊರತೆ: ನ್ಯೂನತೆ; ಸಾರಥಿ: ರಥ ಓಡಿಸುವವ; ಮತ್ಸರ: ಹೊಟ್ಟೆಕಿಚ್ಚು; ರಥ: ಬಂಡಿ; ವಿಘಾತಿ: ಹಾಳು; ದುರ್ಧರ: ಕಠಿಣವಾದ; ಧನುರ್ಭಂಗ: ಬಿಲ್ಲು ಮುರಿದ ಸ್ಥಿತಿ; ಅಸ್ತ್ರ: ಶಸ್ತ್ರ; ವ್ಯಥೆ: ದುಃಖ; ರವಿ: ಭಾನು; ಸುತ; ಮಗ; ಹುರುಳು: ಸತ್ವ, ಸಾಮರ್ಥ್ಯ; ಕೆಡಿಸು: ಹಾಳುಮಾಡು; ರಿಪು: ವೈರಿ; ರಾಯ: ರಾಜ; ಗೋಚರ: ಕಾಣಿಸು; ದುರಿತ: ದುಃಖ, ಕಷ್ಟ; ಉತ್ಕರ್ಷ: ಹೆಚ್ಚಳ; ಕೆಡಿಸು: ಹಾಳು; ಐಸಲೇ: ಅಲ್ಲವೇ;

ಪದವಿಂಗಡಣೆ:
ಸರಳ +ಕೊರತೆಯೊ+ ಸಾರಥಿಯ +ಮ
ತ್ಸರವೊ +ರಥದ +ವಿಘಾತಿಯೋ +ದು
ರ್ಧರ +ಧನುರ್ಭಂಗವೊ +ಮಹಾಸ್ತ್ರ+ವ್ಯಥೆಯೊ +ರವಿಸುತನ
ಹುರುಳು+ ಕೆಡಿಸಿದರೆಂತು +ರಿಪು +ರಾ
ಯರಿಗೆ+ ನಾವ್ +ಗೋಚರವೆ +ದುರಿತ
ಉತ್ಕರುಷವ್+ಐಸಲೆ +ನಮ್ಮ +ಕೆಡಿಸಿತು+ ಶಿವಶಿವಾ +ಎಂದ

ಅಚ್ಚರಿ:
(೧) ಕರ್ಣನನ್ನು ರವಿಸುತ ಎಂದು ಕರೆದಿರುವುದು
(೨) ಆಡು ಭಾಷೆಯ ಪದ ಪ್ರಯೋಗ – ಶಿವ ಶಿವಾ
(೩) ಕೊರತೆ, ಮತ್ಸರ, ವಿಘಾತಿ, ಭಂಗ, ವ್ಯಥೆ – ಪದಪ್ರಯೋಗಗಳು