ಪದ್ಯ ೩೪: ದ್ರುಪದನು ದ್ರೋಣನ ಸ್ನೇಹವನ್ನು ಏಕೆ ಅಲ್ಲಗಳೆದನು?

ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ (ಆದಿ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ವಿದ್ವಾಂಸರಿಗೂ, ಮುರ್ಖರಿಗೂ, ಗಂಭೀರಾದವರಿಗೂ, ನಾಚಿಕೆಗೆಟ್ಟ ಭಂಡರಿಗೂ, ವೇದವಿಹಿತವಾದ ಆಚಾರವುಳ್ಳವರಿಗೂ, ಅನಾಚಾರದಲ್ಲಿ ಮುಳುಗಿರುವವರಿಗೂ, ಧೀರರಿಗೂ, ಹೇಡಿಗಳಿಗೂ, ಎಲ್ಲಿ ಹೊಂದಿಕೆಯಾಗುತ್ತದೆ? ರಾಜರಿಗೂ, ಬಡ ಬ್ರಾಹ್ಮಣರಿಗೂ ಎಲ್ಲಿಯ ಸ್ನೇಹ ಎಂದು ದ್ರುಪದನು ಕೇಳಿದನು.

ಅರ್ಥ:
ಸೂರಿ: ವಿದ್ವಾಂಸ; ಅತಿ: ಬಹಳ; ಮೂರ್ಖ: ಮೂಢ; ಗಂಭೀರ: ಘನವಾದ; ಭಂಡ: ನಾಚಿಕೆ ಇಲ್ಲದವನು; ವೇದಾಚಾರ: ವೇದವಿಹಿತವಾದ ಆಚಾರವುಳ್ಳವ; ಪ್ರಸಕ್ತ: ಸದ್ಯದ, ತೊಡಗಿದ; ಧೀರ: ಶೂರ; ಹಂದೆ: ಅಂಜುಬುರುಕ, ಹೇಡಿ; ಸೇರು: ಜೋಡಿ; ಭೂಪ: ರಾಜ; ಬಡ: ದಾರಿದ್ರ; ಹಾರುವ: ಬ್ರಾಹ್ಮಣ; ಎತ್ತಣ: ಎಲ್ಲಿಯ; ಸಖತನ: ಮೈತ್ರಿ;

ಪದವಿಂಗಡಣೆ:
ಸೂರಿಗಳಿಗ್+ಅತಿ +ಮೂರ್ಖರಿಗೆ+ ಗಂ
ಭೀರರಿಗೆ +ಭಂಡರಿಗೆ +ವೇದಾ
ಚಾರ +ಸಂಯುಕ್ತರಿಗ್+ಅನಾಚಾರ +ಪ್ರಸಕ್ತರಿಗೆ
ಧೀರರಿಗೆ+ ಹಂದೆಗಳಿಗ್+ಎತ್ತಣ
ಸೇರುವೆಗಳೈ+ ಭೂಪರಿಗೆ+ ಬಡ
ಹಾರುವರಿಗ್+ಎತ್ತಣದು+ ಸಖತನವ್+ಎಂದನಾ +ದ್ರುಪದ

ಅಚ್ಚರಿ:
(೧) ವೈರುದ್ಯ ಪದಗಳ ಬಳಕೆ – ಸೂರಿ, ಮೂರ್ಖ; ಗಂಭೀರ, ಭಂಡ, ವೇದಾಚಾರ, ಅನಾಚಾರ; ಧೀರ, ಹಂದೆ;

ಪದ್ಯ ೮೨: ಯಾರು ಮಗನಾಗಲು ಯೋಗ್ಯ?

ಇಹಪರದ ಸುಖ ಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯ ಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ಈ ಲೋಕ ಮತ್ತು ಪರಲೋಕದಲ್ಲಿಯೂ ಸುಖವನ್ನು ಹೊಂದುವ ಆಚಾರವನ್ನು ನಡೆಸುತ್ತಾ, ವೇದವಿಹಿತ ಮಾರ್ಗದಲ್ಲಿ ಜೀವನವನ್ನು ನಡೆಸುತ್ತಾ, ಎಲ್ಲಾ ಕಲೆಗಳಲ್ಲಿಯೂ ನಿಪುಣನಾಗಿ, ಶತ್ರುಗಳನ್ನು ನಿಗ್ರಹಿಸಿ, ಶರಣಾಗತರನ್ನು ಪಾಲಿಸುತ್ತಿದ್ದರೆ ಅವನು ಮಗನೆಂದು ಕರೆಸಿಕೊಳ್ಳಲು ಯೋಗ್ಯನಾಗುತ್ತಾನೆ ಎಂದು ವಿದುರ ತಿಳಿಸಿದರು.

ಅರ್ಥ:
ಇಹ: ಈ ಲೋಕ, ಭೂಮಿ; ಪರ: ಪರಲೋಕ; ಸುಖ: ಸಂತೋಷ, ನಲಿವು; ಸಂಗತಿ: ವಿಚಾರ; ಸಂಗ್ರಹ: ಕ್ರೂಡಿಸು; ವೇದ: ಜ್ಞಾನ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸನ್ನಿಹಿತ:ಹತ್ತಿರದಲ್ಲಿರುವ, ಸಮೀಪದ; ಸಮಸ್ತ: ಎಲ್ಲಾ; ಕಳೆ: ಕಲೆ, ಲಲಿತವಿದ್ಯೆ, ಕುಶಲವಿದ್ಯೆ ಸಮರ: ಯುದ್ಧ; ನಿರ್ವಹಿಸು:ಕೆಲಸವನ್ನು ನೆರ ವೇರಿಸುವಿಕೆ; ಶರಣಾಗತ: ರಕ್ಷಣೆ ಬೇಡುವವ; ಪಾಲಿಸು: ಪೋಷಿಸು; ಮಗ: ಸುತ; ಭೂಪಾಲ: ರಾಜ; ಅಭಿಜ್ಞ: ತಿಳಿದವ, ಜ್ಞಾನಿ;

ಪದವಿಂಗಡಣೆ:
ಇಹಪರದ+ ಸುಖ +ಸಂಗತಿಯ +ಸಂ
ಗ್ರಹಿಸಿ+ ವೇದಾಚಾರದಲಿ +ಸ
ನ್ನಿಹಿತನಾಗಿ +ಸಮಸ್ತ+ ಕಳೆಯಲ್ +ಅಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ

ಅಚ್ಚರಿ:
(೧) ಸುಖ ಸಂಗತಿಯ ಸಂಗ್ರಹಿಸಿ – ಸ ಕಾರದ ಪದಗಳ ಬಳಕೆ
(೨) ಒಳ್ಳೆಯ ಮಗನಾಗಲು ೫ ರೀತಿಯ ಗುಣಗಳನ್ನು ತಿಳಿಸಿರುವ ಪದ್ಯ