ಪದ್ಯ ೨೭: ಧರ್ಮಜನು ಯಾವ ಮಾತನ್ನು ಒಪ್ಪುವೆವೆಂದನು?

ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿಮನ್ನಿಸಿದನಿತ್ತನು ನಗುತ ವೀಳೆಯವ
ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆ ಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತ ನಮ್ಮ ಮತವೆಂದ (ವಿರಾಟ ಪರ್ವ, ೧೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಮಗೆ ಅರ್ಜುನನಾದರೇನು, ಅಭಿಮನ್ಯುವಾದರೇನು, ಮದುವೆಯಾದರೆ ಒಳಿತು ಎಂದು ವಿರಾಟನು ಹೇಳಲು, ಧರ್ಮಜನು ಅವನಿಗೆ ವೀಳೆಯನ್ನು ಕೊಟ್ಟು, ನಮ್ಮ ಪರಮ ಸ್ವಾಮಿಯೂ, ನಮ್ಮೈವರ ಪ್ರಾನವೂ ಆದ ಯಾದವ ಕುಲಶ್ರೇಷ್ಠನಾದ ಕೃಷ್ಣನು ಹೇಳಿದಂತೆ ನಾವು ಕೇಳುತ್ತೇವೆ ಎಂದನು.

ಅರ್ಥ:
ಉತ್ಸವ: ಸಂಭ್ರಮ; ಅವನಿಪತಿ: ರಾಜ; ಮನ್ನಿಸು: ಗೌರವಿಸು; ನಗು: ಸಂತಸ; ವೀಳೆಯ: ತಾಂಬೂಲ; ಸ್ವಾಮಿ: ಒಡೆಯ; ನೆಲೆ: ಸ್ಥಾನ; ಶಿರೋಮಣಿ: ಶ್ರೇಷ್ಠ, ತಿಲಕಪ್ರಾಯ; ಅಭಿಮತ: ವಿಚಾರ; ಮತ: ಅಭಿಪ್ರಾಯ;

ಪದವಿಂಗಡಣೆ:
ಎವಗೆ +ನೀವೆನ್+ಆತನೇನ್
ಉತ್ಸವದೊಳಾಗಲಿ+ಎನೆ+ ವಿರಾಟನನ್
ಅವನಿಪತಿ+ಮನ್ನಿಸಿದನ್+ಇತ್ತನು +ನಗುತ+ ವೀಳೆಯವ
ಯೆವಗೆ+ ಪರಮಸ್ವಾಮಿ+ಎಮ್ಮು
ತ್ಸವದ +ನೆಲೆ +ಯೆಮ್ಮೈವರಸು+ ಯಾ
ದವ +ಶಿರೋಮಣಿ +ಕೃಷ್ಣನ್+ಅಭಿಮತ +ನಮ್ಮ +ಮತವೆಂದ

ಅಚ್ಚರಿ:
(೧) ಕೃಷ್ಣನ ಮೇಲಿನ ಗೌರವವನ್ನು ಸೂಚಿಸುವ ಪರಿ – ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆ ಯೆಮ್ಮೈವರಸು ಯಾದವ ಶಿರೋಮಣಿ ಕೃಷ್ಣನಭಿಮತ ನಮ್ಮ ಮತವೆಂದ

ಪದ್ಯ ೨೧: ದುರ್ಯೋಧನನು ಯಾವ ಕುತಂತ್ರದ ಉಪಾಯವನ್ನು ಹೇಳಿದನು?

ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ (ಸಭಾ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕುತಂತ್ರದ ಉಪಾಯವನ್ನು ಹೇಳಿದನು. ತಂದೆ ನೀವು ಇಲ್ಲಿಗೆ ಪಾಂಡವರನ್ನು ಕರೆಸಿರಿ, ಒಂದೇ ಹಲಗೆಯ ಪಗಡೆಯಾಟ. ಅದರಲ್ಲಿ ಅವರನ್ನು ಸೋಲಿಸಿ ಹನ್ನೆರಡು ವರುಷ ವನವಾಸ ಒಂದು ವರ್ಷ ಅಜ್ಞಾತವಾಸಕ್ಕೆ ಕಳಿಸಿಬಿಡುತ್ತೇವೆ. ಅಜ್ಞಾತವಾಸದಲ್ಲಿ ಅವರನ್ನು ನಾವು ಗುರುತಿಸಿದರೆ ಅವರು ಮತ್ತೆ ಹನ್ನೆರಡು ವರ್ಷ ವನವಾಸಕ್ಕೆ ಹೋಗಬೇಕೆಂಬುದು ಪಣ ಎಂದು ತಿಳಿಸಿದನು.

ಅರ್ಥ:
ಕರೆಸು: ಬರೆಮಾಡು; ಜೂಜು: ದ್ಯೂತ; ಹಲಗೆ: ಜೂಜಿನ ಪಟ, ಅಗಲವಾದ ಹಾಗೂ ತೆಳುವಾದ ಸೀಳು; ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಅಬುದ: ವರ್ಷ; ವಿಪಿನ: ಕಾಡು; ವರುಷ: ಸಂವತ್ಸರ; ಅಜ್ಞಾತ: ಯಾರಿಗೂ ತಿಳಿಯದ; ಅರಿ: ತಿಳಿ; ಮರಳಿ: ಪುನಃ; ವೀಳೆಯ: ಆಮಂತ್ರಿಸು, ಕೊಡು;

ಪದವಿಂಗಡಣೆ:
ಕರೆಸಿಕೊಡಿ +ನೀವಿಲ್ಲಿಗ್+ಅವರ್+
ಐವರನು +ಜೂಜಿನಲ್+ಒಂದು +ಹಲಗೆಯಲ್
ಅರಸ +ನೀ +ಚಿತ್ತವಿಸು +ಹನ್ನೆರಡ್+ಅಬುದ +ವಿಪಿನದಲಿ
ವರುಷವ್+ಒಂದ್+ ಅಜ್ಞಾತವ್+ಅದರೊಳಗ್
ಅರಿದೆವಾದಡೆ+ ಮರಳಿ +ವಿಪಿನಕೆ
ವರುಷ +ಹನ್ನೆರಡಕ್ಕೆ+ ಕೊಡುವೆವು +ಮತ್ತೆ +ವೀಳೆಯವ

ಅಚ್ಚರಿ:
(೧) ದುರ್ಯೋಧನನ ಕುತಂತ್ರ ಉಪಾಯವನ್ನು ಹೇಳುವ ಪರಿ – ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ

ಪದ್ಯ ೪೭: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.

ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;

ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ

ಪದ್ಯ ೨೮: ದುರ್ಯೋಧನನು ವಿದುರನಿಗೆ ಏನು ಹೇಳಿದನು?

ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು (ಉದ್ಯೋಗ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನಿಗೆ ಕೃಷ್ಣನು ನಾಳೆ ಬರಲೆಂದು ಹೇಳಿ ಗೂಢಚಾರ್ಯರಿಗೆ ಅಪ್ಪಣೆಯನ್ನು ನೀಡಿ ಸಭೆಯನ್ನು ವಿಸರ್ಜಿಸಿದನು. ಅಂಧಕಾರವನ್ನು ಹೊರದೂಡಿ ಪೂರ್ವದ ಬೆಟ್ಟದ ಮೇಲೆ ರವಿ ಉದಯಿಸಿದನು, ದುರ್ಯೋಧನನು ಅಂದು ದೊಡ್ಡ ಸಭೆಯನ್ನು ರಚಿಸಿದನು.

ಅರ್ಥ:
ನಾಳೆ: ಮರುದಿನ; ಬರು: ಆಗಮಿಸು; ಹೇಳು: ತಿಳಿಸು; ಬೀಳುಕೊಟ್ಟು: ಕಳುಹಿಸಿ; ಬೇಹು:ಗುಪ್ತಚಾರಿಕೆ; ಭಟ:ಸೈನಿಕ ; ವೀಳೆಯ: ಒಪ್ಪಿಗೆ ಕೊಡು, ಆಮಂತ್ರಿಸು; ನೀಡು: ಕೊಡು; ಹರಿ: ಮುಗಿ, ತೀರು; ಆಸ್ಥಾನ: ದರ್ಬಾರು; ರಾಯ: ರಾಜ; ಜಾಳಿಸು: ಚಲಿಸು, ನಡೆ; ತಮ: ಅಂಧಕಾರ; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಮೇಲೆ: ತುದಿಯಲ್ಲಿ, ಅಗ್ರಭಾಗ; ತಲೆದೋರು: ತೋರು, ಕಾಣಿಸು; ರವಿ: ಸೂರ್ಯ; ಭೂಪಾಲ: ರಾಜ; ಒಡ್ಡೋಲಗ: ಸಭೆ, ದೊಡ್ಡ ದರ್ಬಾರು; ರಚಿಸು: ರೂಪಿಸು, ಸಜ್ಜುಗೊಳಿಸು;

ಪದವಿಂಗಡಣೆ:
ನಾಳೆ +ಬರಹೇಳ್+ಎಂದು +ವಿದುರನ
ಬೀಳುಕೊಟ್ಟನು +ಬೇಹ +ಭಟರಿಗೆ
ವೀಳೆಯವ +ನೀಡಿದನು +ಹರಿದುದು +ರಾಯನಾಸ್ಥಾನ
ಜಾಳಿಸಿತು +ತಮ +ಮೂಡಣ+ಅದ್ರಿಯ
ಮೇಲೆ +ತಲೆದೋರಿದನು +ರವಿ+ ಭೂ
ಪಾಲ +ಕೌರವನ್+ಅಂದಿನ+ಒಡ್ಡೋಲಗವ+ ರಚಿಸಿದನು

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬೀಳುಕೊಟ್ಟನು ಬೇಹ ಭಟರಿಗೆ
(೨) ಮುಂಜಾನೆಯ ವರ್ಣನೆ: ಜಾಳಿಸಿತು ತಮ ಮೂಡಣಾದ್ರಿಯಮೇಲೆ ತಲೆದೋರಿದನು ರವಿ
(೩) ಸಭೆಯನ್ನು ವಿಸರ್ಜಿಸಿದನು ಎಂದು ಹೇಳಲು – ಹರಿದುದು ರಾಯನಾಸ್ಥಾನ ಪದದ ಬಳಕೆ