ಪದ್ಯ ೩೬: ಭಾನುಮತಿಗೆ ಯಾವ ಸಂದೇಶವನ್ನು ನೀಡಲು ದುರ್ಯೋಧನನು ಹೇಳಿದನು?

ತೆಗಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ (ಗದಾ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಮ್ಮ ಪಾಳೆಯವನ್ನು ತೆರವು ಮಾಡಿಸಿ ಹಸ್ತಿನಾಪುರಕ್ಕೆ ಕಳುಹಿಸು. ದುಶ್ಯಾಸನ ಕರ್ಣರ ರಾಣೀವಾಸವನ್ನು ಊರಿಗೆ ಕಳಿಸು. ಪಾಂಡವರ ವಿಜಯ ವಾರ್ತೆಯನ್ನು ಹಬಿಸಬೇಡ. ಭಾನುಮತಿಯು ನಂಬುವಂತೆ ಮಾತಾಡಿ ಸಮಾಧಾನ ಪಡಿಸು ಎಂದು ದುರ್ಯೋಧನನು ಹೇಳಿದನು.

ಅರ್ಥ:
ತೆಗಸು: ಹೊರತರು; ಪಾಳೆಯ: ಬೀಡು, ಶಿಬಿರ; ಗಜ: ಆನೆ; ನಗರ: ಊರು; ಐದು: ಹೋಗಿಸೇರು; ರಾಣಿ: ಅರಸಿ; ದಂಡಿಗೆ: ಮೇನಾ, ಪಲ್ಲಕ್ಕಿ; ಕಳುಹಿಸು: ತೆರಳು; ಸೂತಸುತ: ಕರ್ಣ; ಸೂತ: ಸಾರಥಿ; ಸುತ: ಮಗ; ಆದಿ: ಮೊದಲಾದ; ಹಗೆ: ವೈರಿ, ಶತ್ರು; ವಿಜಯ: ಗೆಲುವು; ಹರಹು: ವಿಸ್ತಾರ, ವೈಶಾಲ್ಯ; ನಂಬು: ವಿಶ್ವಾಸವಿಡು; ನುಡಿ: ಮಾತು; ಬಗೆ: ಎಣಿಸು; ಸಂತೈಸು: ಸಾಂತ್ವನಗೊಳಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ತೆಗಸು +ಪಾಳೆಯವೆಲ್ಲವನು +ಗಜ
ನಗರಿಗ್+ಐದಿಸು +ರಾಣಿಯರ +ದಂ
ಡಿಗೆಯ +ಕಳುಹಿಸು +ಸೂತಸುತ +ದುಶ್ಯಾಸನಾದಿಗಳ
ಹಗೆಯ +ವಿಜಯವ +ಹರಹದಿರು +ನಂ
ಬುಗೆಯ +ನುಡಿಯಲಿ +ಭಾನುಮತಿಯರ
ಬಗೆಯ +ಸಂತೈಸೆಂದು+ ಬೋಳೈಸಿದನು +ಸಂಜಯನ

ಅಚ್ಚರಿ:
(೧) ಹಗೆ, ನಂಬುಗೆ, ಬಗೆ, ದಂಡಿಗೆ – ಪ್ರಾಸ ಪದಗಳು
(೨) ಸಂತೈಸು, ಬೋಳೈಸು – ಸಮಾನಾರ್ಥಕ ಪದ

ಪದ್ಯ ೫೩: ಪಾಂಡವರು ಅಭಿಮನ್ಯುವನ್ನು ಹೇಗೆ ಬೀಳ್ಕೊಟ್ಟರು?

ಒಡನೆ ಕಳುಹುತ ಬಂದನಾ ನೆಲ
ದೊಡೆಯನನುಜರು ಸಹಿತ ನಯನದಿ
ಬಿಡುದನಿಯ ಸಾಲಿನಲಿ ನನೆದರು ಬಂದು ಕಿರಿದೆಡೆಯ
ನಡೆ ವಿಜಯನಾಗೆಂದು ತನುವನು
ತಡವಿದರು ಕಡುಮೋಹವೆಡೆಯಲಿ
ಘುಡುಘುಡಿಸೆ ಶಿಶು ಬೀಳುಕೊಂಡನು ಪಿತೃಚತುಷ್ಟಯವ (ದ್ರೋಣ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಅಭಿಮನ್ಯುವನ್ನು ಕಳಿಸಲು ಸ್ವಲ್ಪದೂರ ಹೋದನು. ಅವರ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಹೋಗಿ ವಿಜಯಶಾಲಿಯಾಗು ಎಂದಠರಸಿ ಅತಿಶಯ ಮೋಹವುಕ್ಕಲು ಅವನ ಮೈದಡವಿದರು. ಯುಧಿಷ್ಠಿರ, ಭೀಮ, ನಕುಲ, ಸಹದೇವರನ್ನು ಅಭಿಮನ್ಯುವು ಬೀಳ್ಕೊಂಡು ಮುಂದೆ ನಡೆದನು.

ಅರ್ಥ:
ಒಡನೆ: ಕೂಡಲೆ; ಕಳುಹು: ತೆರಳು; ಬಂದು: ಆಗಮಿಸು; ನೆಲ: ಭೂಮಿ; ಒಡೆಯ:ರಾಜ; ನೆಲದೊಡೆಯ: ರಾಜ; ಅನುಜ: ತಮ್ಮ; ಸಹಿತ: ಜೊತೆ; ನಯನ: ಕಣ್ಣು; ಬಿಡುವನಿ: ಹರಿಯುವ ನೀರು; ಸಾಲು: ಆವಳಿ; ನನೆ: ಒದ್ದೆಯಾಗು; ಕಿದಿ: ಚಿಕ್ಕ; ನಡೆ: ಚಲಿಸು; ವಿಜಯ: ಗೆಲುವು; ತನು: ದೇಹ; ತಡವು: ನೇವರಿಸು, ನಿಲ್ಲು; ಕಡು: ತುಂಬ; ಮೋಹ: ಆಸೆ; ಶಿಶು: ಮಕ್ಕಳು; ಬೀಳುಕೊಂಡು: ತೆರಳು; ಪಿತೃ: ತಂದೆ; ಚತುಷ್ಟಯ: ನಾಲ್ಕು;

ಪದವಿಂಗಡಣೆ:
ಒಡನೆ +ಕಳುಹುತ +ಬಂದನಾ +ನೆಲ
ದೊಡೆಯನ್+ಅನುಜರು +ಸಹಿತ +ನಯನದಿ
ಬಿಡುವನಿಯ +ಸಾಲಿನಲಿ +ನನೆದರು +ಬಂದು +ಕಿರಿದೆಡೆಯ
ನಡೆ +ವಿಜಯನಾಗೆಂದು +ತನುವನು
ತಡವಿದರು +ಕಡು+ಮೋಹವ್+ಎಡೆಯಲಿ
ಘುಡುಘುಡಿಸೆ +ಶಿಶು +ಬೀಳುಕೊಂಡನು +ಪಿತೃಚತುಷ್ಟಯವ

ಅಚ್ಚರಿ:
(೧) ನೆಲದೊಡೆಯ – ರಾಜನನ್ನು ಕರೆದ ಪರಿ
(೨) ಕಣ್ಣೀರು ಎಂದು ಹೇಳಲು – ನಯನದಿ ಬಿಡುವನಿಯ ಸಾಲಿನಲಿ ನನೆದರು

ಪದ್ಯ ೧೨: ಯಾರಿಗೆ ವೀಳೆಯವನ್ನು ನೀಡಲಾಯಿತು?

ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ (ದ್ರೋಣ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಈ ಬಂಗಾರದ ಬಟ್ಟಲಿನಲ್ಲಿ ಸಂಶಪ್ತಕರಿಗೆ ವೀಳೆಯವನ್ನು ಕೊಟ್ಟು, ನಮ್ಮ ಸೇನೆಯಲ್ಲಿ ನೀವೇ ವಿಜಯಶಾಲಿಗಳು. ಯುದ್ಧದಲ್ಲಿ ಇನ್ನು ಜಯವನ್ನು ಸಾಧಿಸಬಹುದು ಎಂದು ದ್ರೋಣನು ಹೊಗಳಿದನು.

ಅರ್ಥ:
ನಯ: ಶಾಸ್ತ್ರ ರಾಜನೀತಿ, ನುಣುಪು; ಹೊಂಬಟ್ಟಲು: ಚಿನ್ನದ ಪಾತ್ರೆ; ವೀಳೆಯ: ತಾಂಬೂಲ; ಅನಿಬರು: ಅಷ್ಟುಜನ; ಮರು: ಮತ್ತೆ, ಪುನಃ; ಮಾತು: ವಾಣಿ; ವಿಜಯ: ಗೆಲುವು; ಜಯ: ಗೆಲುವು; ಆಹ: ಆಗುವವ; ನಿರ್ಣಯ: ನಿರ್ಧಾರ; ಗುರು: ಆಚಾರ್ಯ; ಪಾಳಯ: ಸೀಮೆ; ನೇಮ: ನಿಯಮ; ಕೊಟ್ಟು: ನೀಡು; ಓಲಗ: ದರ್ಬಾರು; ಹರೆ: ಚೆಲ್ಲು, ಚೆದರು; ಕ್ಷಣ: ತಕ್ಷಣ, ಕಾಲದ ಪ್ರಮಾಣ;

ಪದವಿಂಗಡಣೆ:
ನಯವಿದನು +ಹೊಂಬಟ್ಟಲಲಿ+ ವೀ
ಳೆಯವನ್+ಅನಿಬರಿಗಿತ್ತು +ಕುರುಸೇ
ನೆಯಲಿ +ಮರುಮಾತೇಕೆ +ನೀವೇ +ವಿಜಯವುಳ್ಳವರು
ಜಯವನಿನ್ನ್+ಆಹದೊಳಗೆ +ನಿ
ರ್ಣಯಿಸಬಹುದ್+ಎಮಗೆನುತ +ಗುರು +ಪಾ
ಳಯಕೆ +ನೇಮವ +ಕೊಟ್ಟನ್+ಓಲಗ +ಹರೆದುದಾ +ಕ್ಷಣಕೆ

ಅಚ್ಚರಿ:
(೧) ವಿಜಯ, ಜಯ – ಸಮಾನಾರ್ಥಕ ಪದ
(೨) ಜಯ, ವಿಜಯ, ನಯ, ಪಾಳಯ, ವೀಳಯ – ಪ್ರಾಸ ಪದಗಳು

ಪದ್ಯ ೩೨: ಕರ್ಣನು ಭೀಷ್ಮರನ್ನು ಹೇಗೆ ಬೀಳ್ಕೊಟ್ಟನು?

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿ ಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ (ದ್ರೋಣ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿ ಭೀಷ್ಮನು, ಎಲೈ ಸೂರ್ಯಸಮಾನನೇ, ನೀನು ಹಿಂದಿರುಗು, ಕೌರವನ ಹಾನಿ ಅಭಿವೃದ್ಧಿಗಳು ನಿನಗೆ ಸೇರಿವೆ, ನೀನು ಪಂಥದಲ್ಲಿ ಬುದ್ಧಿವಂತನಲ್ಲವೇ, ವಿಜಯಶಾಲಿಯಾಗು ಹೋಗು ಎನ್ನಲು ಕರ್ಣನು ಭೀಷ್ಮನ ಪಾದಗಳಿಗೆ ನಮಸ್ಕರಿಸಿ ಅವನನ್ನು ಬೀಳ್ಕೊಂಡು ಕೌರವನ ದರ್ಬಾರಿಗೆ ಬಂದನು.

ಅರ್ಥ:
ಭಾನು: ಸೂರ್ಯ; ಸನ್ನಿಭ: ಸಮಾನನಾದವನು, ಸದೃಶನಾದವನು; ಮರಳು: ಹಿಂದಿರುಗು; ಭೂಪ: ರಾಜ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಪಂಥ: ಛಲ, ಸ್ಪರ್ಧೆ; ಜಾಣ: ಬುದ್ಧಿವಂತ; ವಿಜಯ: ಗೆಲುವು, ಜಯ; ನದೀಸುತ: ಭೀಷ್ಮ; ಸುತ: ಮಗ; ಅಡಿ: ಪಾದ; ಎರಗು: ನಮಸ್ಕರಿಸು; ರವಿ: ಭಾನು; ಸೂನು: ಮಗ; ಕಳುಹಿಸು: ಬೀಳ್ಕೊಡು; ಬಹಳ: ತುಂಬ; ಮನ: ಮನಸ್ಸು; ಅನುರಾಗ: ಪ್ರೀತಿ; ಐದು: ಬಂದುಸೇರು; ಓಲಗ: ದರ್ಬಾರು; ರಾಯ: ರಾಜ;

ಪದವಿಂಗಡಣೆ:
ಭಾನು+ಸನ್ನಿಭ+ ಮರಳು +ಭೂಪನ
ಹಾನಿ +ವೃದ್ಧಿಗಳೆಲ್ಲ +ನಿನ್ನದು
ನೀನು +ಪಂಥದ +ಜಾಣನಲ್ಲಾ +ವಿಜಯನಾಗ್+ಎನಲು
ಆ +ನದೀಸುತನ್+ಅಡಿಗ್+ಎರಗಿ +ರವಿ
ಸೂನು +ಕಳುಹಿಸಿ +ಕೊಂಡು +ಬಹಳ+ ಮ
ನೋನುರಾಗದಲ್+ಐದಿದನು +ಕುರುರಾಯನ್+ಓಲಗವ

ಅಚ್ಚರಿ:
(೧) ಭಾನು, ರವಿ; ಸುತ, ಸೂನು; ಭೂಪ, ರಾಯ – ಸಮಾನಾರ್ಥಕ ಪದ

ಪದ್ಯ ೩: ಅರ್ಜುನನು ಉತ್ತರನಿಗೆ ಏನು ಹೇಳಿದನು?

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ (ವಿರಾಟ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಬಳಿ ಮಾತನಾಡುತ್ತಾ, ಎಲೈ ಉತ್ತರ ಕುಮಾರ ನೀನು ದೂತರನ್ನು ಕರೆದು ನೀನೇ ಯುದ್ಧಮಾಡಿ ಗೆದ್ದೆನೆಂದು ಹೇಳು, ನಾವು ಇಲ್ಲಿರುವುದನ್ನು ಇಂದು ಯಾರಿಗೂ ಹೇಳಬೇಡ, ಪುರಜನರೂ, ಪರಿಜನರೂ ನಿನ್ನ ವಿಜಯೋತ್ಸವದ ಹರುಷದಲ್ಲಿರಲಿ. ನಿನ್ನ ತಂದೆ ನಿನ್ನನ್ನೇ ಮನ್ನಿಸಲಿ, ನಾನು ಹೇಳಿದಂತೆ ಮಾಡು ಎಂದು ಹೇಳಿದನು.

ಅರ್ಥ:
ಕರೆದು: ಬರೆಮಾಡು; ದೂತ: ಸೇವಕ; ಅರುಹು: ಹೇಳು; ಧುರ: ಯುದ್ಧ; ಜಯಿಸು: ಗೆಲ್ಲು; ಪಸರಿಸು: ಹೇಳು, ಹರದು; ವಿಕ್ರಮ: ಪರಾಕ್ರಮ, ಬಲ; ಅರಸ: ರಾಜ; ಮನ್ನಿಸು: ಗೌರವಿಸು; ಪುರ: ಊರು; ಪರಿಜನ: ಸೇವೆ ಮಾಡುವ ಜನ, ಸೇವಕ ವರ್ಗ; ವಿಜಯ: ಗೆಲುವು; ಹರುಷ: ಸಂತಸ; ಹೆಚ್ಚು: ಅಧಿಕ; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಕರೆದು +ದೂತರಿಗ್+ಅರುಹು +ನೀನೇ
ಧುರವ +ಜಯಿಸಿದೆನ್+ಎನ್ನು+ ನಾವ್
ಇದ್ದಿರವನ್+ಅರುಹದಿರ್+ಇಂದು +ಪಸರಿಸು +ನಿನ್ನ +ವಿಕ್ರಮವ
ಅರಸ +ನಿನ್ನನೆ +ಮನ್ನಿಸಲಿ +ಪುರ
ಪರಿಜನಂಗಳು+ ನಿನ್ನ +ವಿಜಯದ
ಹರುಷದಲಿ +ಹೆಚ್ಚಿರಲಿ +ನೇಮಿಸಿದಂತೆ +ಮಾಡೆಂದ

ಅಚ್ಚರಿ:
(೧) ಜಯ, ವಿಜಯ – ಸಮನಾರ್ಥಕ ಪದಗಳು

ಪದ್ಯ ೯೯: ದ್ರೌಪದಿಯ ಆಕ್ರಂದನವನ್ನು ಯಾರು ಕೇಳಿದರು?

ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು
ಬೀಳಿಕುವರಗ್ನಿಯಲಿ ನೀವಿದ
ಕೇಳಿ ತಡಮಾಡದಿರಿಯೆನಲದ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ (ವಿರಾಟ ಪರ್ವ, ೩ ಸಂಧಿ, ೯೯ ಪದ್ಯ)

ತಾತ್ಪರ್ಯ:
ಜಯ, ಜಯಂತ, ವಿಜಯ, ಜಯೋದ್ಭವ, ಜಯಸೇನ (ವಿರಾಟ ನಗರದಲ್ಲಿ ಪಾಂಡವರ ಹೆಸರು)ನೀವೆಲ್ಲರೂ ಕೇಳಿರಿ, ಈ ದುರಾತ್ಮರು ನನ್ನನ್ನು ಎಳೆದುಕೊಂಡು ಬೆಂಕಿಯಲ್ಲಿ ಹಾಕಲು ತೆರಳುತ್ತಿದ್ದಾರೆ. ತಡಮಾಡಬೇಡಿ ಎಂದು ದ್ರೌಪದಿಯು ಕೂಗಿಕೊಳ್ಳಲು, ಭೀಮನು ಅವಳ ಆಕ್ರಂದನವನ್ನು ಕೇಳಿದನು.

ಅರ್ಥ:
ಕೇಳು: ಆಲಿಸು; ದುರಾತ್ಮ: ದುಷ್ಟ; ಎಳೆ: ತನ್ನ ಕಡೆಗೆ ಸೆಳೆದುಕೊ; ಬೀಳಿಸು: ತಳ್ಳು; ಅಗ್ನಿ: ಬೆಂಕಿ; ತಡ: ನಿಧಾನ; ಕಲಿ: ಶೂರ; ಸತಿ: ಹೆಂಡತಿ; ಆಕ್ರಂದನ: ಗೋಳು, ರೋದನೆ; ಧ್ವನಿ: ರವ;

ಪದವಿಂಗಡಣೆ:
ಕೇಳ್+ಅಕಟ +ಜಯನೇ +ಜಯಂತನೆ
ಕೇಳು +ವಿಜಯ +ಜಯೋದ್ಭವನೆ +ನೀ
ಕೇಳು +ಜಯಸೇನನೆ +ದುರಾತ್ಮಕರ್+ಎನ್ನನ್+ಎಳೆದೊಯ್ದು
ಬೀಳಿಕುವರ್+ಅಗ್ನಿಯಲಿ +ನೀವ್+ಇದ
ಕೇಳಿ +ತಡಮಾಡದಿರಿ+ಎನಲ್+ಅದ
ಕೇಳಿದನು +ಕಲಿಭೀಮ +ಸತಿ+ಆಕ್ರಂದನ+ ಧ್ವನಿಯ

ಅಚ್ಚರಿ:
(೧) ಪಾಂಡವರ ಹೆಸರು – ಜಯ, ಜಯಂತ, ವಿಜಯ, ಜಯೋದ್ಭವ, ಜಯಸೇನ

ಪದ್ಯ ೩೭: ಕರ್ಣನು ಸೈನಿಕರಿಗೆ ಯಾವ ಉಡುಗೊರೆ ಕೊಡುವೆನೆಂದು ಘೋಷಿಸಿದನು?

ತೋರಿರೈ ಫಲುಗುಣನೈದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವ ರಾಯನಾಣೆಂದ (ಕರ್ಣ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನನ್ನು ನನ್ನಿದಿರಿನಲ್ಲಿ ತೋರಿಸಿ, ಶ್ವೇತವಾಹನನನ್ನು ತೋರಿಸಿ, ವಿಜಯನನ್ನು ತೋರಿಸಿ, ಹಾಗೆ ತೋರಿಸುವುದು ನಿಮಗೆ ಸ್ವಾಮಿಕಾರ್ಯವಲ್ಲವೇ? ಪಾರ್ಥನನ್ನು ನನಗೆ ತೋರಿಸಿದರೆ ಅವನ ರಕ್ತವು ಶಾಕಿನಿಯರಿಗೆ ಸೂರೆಯಾದರೆ ನಿಮಗೆ ಭಂಡಾರವೇ ಸೂರೆಹೊಡೆಯಲು ಅವಕಾಶ, ಇದು ಕೌರವರಾಜನ ಮೇಲಾಣೆ ಎಂದು ಘೋಷಿಸಿದನು.

ಅರ್ಥ:
ತೋರು: ಗೋಚರ, ಕಾಣು; ಫಲುಗುಣ: ಅರ್ಜುನ; ಇದಿರು: ಎದುರ್; ಐದು: ಹೋಗಿಸೇರು; ಸಿತ: ಬಿಳುಪು; ಹಯ: ಕುದುರೆ; ಅಕಟಾ: ಅಯ್ಯೋ; ವಿಜಯ: ಗೆಲುವು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಪಾರ್ಥ: ಅರ್ಜುನ; ನೆತ್ತರು: ರಕ್ತ; ಸೂರೆ:ಕೊಳ್ಳೆ, ಲೂಟಿ; ಶಾಕಿನಿ: ಕ್ಷುದ್ರ ದೇವತೆ; ಉರೆ: ಅತಿಶಯವಾಗಿ; ಸೂರೆ: ಲೂಟಿ; ಭಂಡಾರ: ಬೊಕ್ಕಸ, ಖಜಾನೆ; ರಾಯ: ರಾಜ; ಆಣೆ: ಪ್ರಮಾಣ;

ಪದವಿಂಗಡಣೆ:
ತೋರಿರೈ +ಫಲುಗುಣನ್+ಐದಿರಲಿ
ತೋರಿರೈ +ಸಿತಹಯನನ್+ಅಕಟಾ
ತೋರಿರೈ +ವಿಜಯನನು+ ನಿಮಗೆಯು +ಸ್ವಾಮಿ+ಕಾರ್ಯವಲ
ತೋರಿ+ ಪಾರ್ಥನನ್+ಅವನ +ನೆತ್ತರ
ಸೂರೆ +ಶಾಕಿನಿಯರಿಗೆ +ನಿಮಗ್+ಉರೆ
ಸೂರೆಯೋ +ಭಂಡಾರ +ಕೌರವ+ ರಾಯನಾಣೆಂದ

ಅಚ್ಚರಿ:
(೧) ತೋರಿರೈ – ೧-೩ ಸಾಲಿನ ಮೊದಲ ಪದ
(೨) ಫಲುಗುಣ, ಪಾರ್ಥ, ವಿಜಯ, ಸಿತಹಯನ – ಅರ್ಜುನನನ್ನು ಸಂಭೋದಿಸಲು ಬಳಸಿದ ಪದಗಳು