ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ

ಪದ್ಯ ೨೩: ಸೈನ್ಯವು ಹೇಗೆ ಸಿದ್ಧವಾಯಿತು?

ನರನ ಕರೆ ಕರೆ ಸಿಂಧುರಾಜನ
ಹರಿಬವೆಮ್ಮದು ತಮ್ಮದೆಂದ
ಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
ಸರಿಸದಲಿ ಲಟಕಟಿಸಿ ಮೋಹರ
ಮರಳಿ ನಿಂದುದು ರಣಕೆ ರಜನೀ
ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ (ದ್ರೋಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುದ್ಧ ಲಂಪಟರಾದ ವೀರರು, ಸೈಂಧವನ ಸೇಡು ನಮ್ಮದು, ಅರ್ಜುನನನ್ನು ಕರೆಯಿರಿ ಎಂದು ಅಬ್ಬರಿಸಿ ನುಗ್ಗಿದರು. ಒಂದೇ ಸಾಲಿನಲ್ಲಿ ಉತ್ಸಾಹಿಸಿ ಸೈನ್ಯವು ರಾತ್ರಿಯಲ್ಲಿ ನಿಂತಿತು. ಅವರ ಉತ್ಸಾಹವು ಶತ್ರು ವೀರರ ಧೈರ್ಯವನ್ನು ಅಲುಗಾಡಿಸಿತು.

ಅರ್ಥ:
ನರ: ಅರ್ಜುನ; ಕರೆ: ಬರೆಮಾಡು; ರಾಜ: ಅರಸ; ಹರಿಬ: ಕೆಲಸ, ಕಾರ್ಯ; ಅಬ್ಬರಿಸು: ಗರ್ಜಿಸು; ನೂಕು: ತಳ್ಳು; ಕದನ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ಪಟುಭಟ: ಪರಾಕ್ರಮಿ; ಸರಿಸ:ನೇರವಾಗಿ, ಸರಳವಾಗಿ; ಲಟಕಟ: ಉದ್ರೇಕ, ಚಕಿತನಾಗು; ಮೋಹರ: ಯುದ್ಧ; ಮರಳಿ: ಹಿಂದಿರುಗು ನಿಂದು: ನಿಲ್ಲು; ರಣ: ಯುದ್ಧ; ರಜನೀ: ರಾತ್ರಿ; ಚರರು: ಓಡಾಡುವ; ಥಟ್ಟಣೆ: ಗುಂಪು; ಧಾತು: ತೇಜಸ್ಸು, ಮೂಲವಸ್ತು; ಕೆಡಿಸು: ಹಾಳುಮಾಡು; ದಿಟ್ಟ: ವೀರ; ಉಬ್ಬಟೆ: ಅತಿಶಯ, ಹಿರಿಮೆ;

ಪದವಿಂಗಡಣೆ:
ನರನ +ಕರೆ +ಕರೆ +ಸಿಂಧುರಾಜನ
ಹರಿಬವ್+ಎಮ್ಮದು +ತಮ್ಮದೆಂದ್
ಅಬ್ಬರಿಸಿ +ನೂಕಿತು +ಕದನ +ಲಂಪಟರಾಗಿ +ಪಟುಭಟರು
ಸರಿಸದಲಿ +ಲಟಕಟಿಸಿ +ಮೋಹರ
ಮರಳಿ +ನಿಂದುದು +ರಣಕೆ +ರಜನೀ
ಚರರ +ಥಟ್ಟಣೆ +ಧಾತುಗೆಡಿಸಿತು +ದಿಟ್ಟರ್+ಉಬ್ಬಟೆಯ

ಅಚ್ಚರಿ:
(೧) ಶೂರರ ಉತ್ಸಾಹ – ಅಬ್ಬರಿಸಿ ನೂಕಿತು ಕದನ ಲಂಪಟರಾಗಿ ಪಟುಭಟರು
(೨) ಲಟಕಟಿಸಿ, ಲಂಪಟ – ಲ ಕಾರದ ಪದಗಳ ಬಳಕೆ

ಪದ್ಯ ೨೨: ರಣವಾದ್ಯಗಳ ಶಬ್ದವು ಹೇಗಿತ್ತು?

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಪೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜ ಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ (ದ್ರೋಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಯುದ್ಧಕ್ಕೆ ಅತಿ ಉತ್ಸಾಹದಿಂದ ಹೊರಟಿತು. ತಮ್ಮಟೆ, ಡಮರುಗ, ಮೃದಮ್ಗ, ಭೇರಿ, ಕಹಳೆಗಳು ಮೊಳಗುತ್ತಿದ್ದವು. ರಣವಾದ್ಯಗಳ ಶಬ್ದವು ಎಲ್ಲೆಡೆ ವ್ಯಾಪಿಸಲು, ಬ್ರಹ್ಮಾಂಡವು ಬಿರಿಯಿತು. ದ್ರೋಣನ ಸಮರಸನ್ನಾಹ ಪ್ರಬಲವಾಗಿತ್ತು.

ಅರ್ಥ:
ಲಟಕಟ: ಉದ್ರೇಕಗೊಳ್ಳು; ಆಹವ: ಯುದ್ಧ; ರಾಯ: ರಾಜ; ಕಟಕ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಪಟಹ: ನಗಾರಿ; ಡಮರು: ಒಂದು ಬಗೆಯ ಚರ್ಮವಾದ್ಯ; ಮೃದಂಗ: ಒಂದು ಬಗೆಯ ಚರ್ಮವಾದ್ಯ/ತಾಳವಾದ್ಯ; ಘನ: ಶ್ರೇಷ್ಠ; ಗಂಭೀರ: ಆಳವಾದುದು, ಗಾಂಭೀರ್ಯ; ಭೇರಿ: ಚರ್ಮವಾದ್ಯ; ಚಟುಳ: ಲವಲವಿಕೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗಜರು: ಆರ್ಭಟಿಸು; ಮಿಗಲು: ಹೆಚ್ಚು; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಅಂಬುಜ: ತಾವರೆ; ಭವನ: ಮನೆ; ನಿರ್ಮಿತ: ಕಟ್ಟಿದ; ಘಟ: ಕೊಡ, ಗಡಿಗೆ; ಬಿರಿ: ತುಂಬು; ಬಿಗುಹು: ಗಟ್ಟಿ; ಸಮರ: ಯುದ್ಧ; ಸನ್ನಾಹ: ಗುಂಪು;

ಪದವಿಂಗಡಣೆ:
ಲಟಕಟಿಸಿತ್+ಆಹವಕೆ +ರಾಯನ
ಕಟಕ +ಸುಮ್ಮಾನದಲಿ +ಪೊಳಗುವ
ಪಟಹ +ಡಮರು +ಮೃದಂಗ +ಘನಗಂಭೀರ +ಭೇರಿಗಳ
ಚಟುಳ +ಕಹಳೆಯ +ಗಜರು +ಮಿಗಲ್
ಉತ್ಕಟಿಸಿತ್+ಅಂಬುಜ +ಭವನ +ನಿರ್ಮಿತ
ಘಟ +ಬಿರಿಯೆ +ಬಿಗುಹಾಯ್ತು +ದ್ರೋಣನ +ಸಮರ+ಸನ್ನಾಹ

ಅಚ್ಚರಿ:
(೧) ರಣವಾದ್ಯಗಳ ಪರಿಚಯ – ಪಟಹ, ಡಮರು, ಮೃದಂಗ, ಭೇರಿ, ಕಹಳೆ
(೨) ಬ್ರಹ್ಮಾಂಡ ಎಂದು ಹೇಳುವ ಪರಿ – ಮಿಗಲುತ್ಕಟಿಸಿತಂಬುಜ ಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು

ಪದ್ಯ ೧೯: ಭೀಮನೇಕೆ ಆಶ್ಚರ್ಯಗೊಂಡನು?

ಐಸಲೇ ತಪ್ಪೇನೆನುತ ತನ
ಗೇಸು ಬಲುಹುಂಟೈಸರಲಿ ಕ
ಟ್ಟಾಸುರದಲೌಕಿದನು ಬಾಲವನೊದರಿ ಬೊಬ್ಬಿರಿದು
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲವೂರ್ದ್ವ
ಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಕೋರಿಕೆಯನ್ನು ಕೇಳಿ, ಅಷ್ಟೇ ತಾನೆ, ಇದರಲ್ಲೇನು ತಪ್ಪು ಎಂದು ಹೇಳಿ ಭೀಮನು ತನಗೆಷ್ಟು ಸತ್ವವಿತ್ತೋ ಆ ಬಲವನ್ನೇಲ್ಲ ಒಟ್ಟುಗೂಡಿಸಿ ಜೋರಾಗಿ ಬೊಬ್ಬೆಯಿಡುತ್ತಾ ಬಾಲವನ್ನು ಅಲುಗಾಡಿಸಿದರೂ ಆ ಬಾಲವು ಒಂದು ಎಳ್ಳಿನಷ್ಟೂ ಅಲುಗಲಿಲ್ಲ. ಭೀಮನಿಗೆ ಮೇಲುಸಿರು ಬಂತು, ಆಶ್ಚರ್ಯಚಕಿತನಾಗಿ ಭೀಮನು ಬೆಂಡಾದನು.

ಅರ್ಥ:
ಐಸಲೇ: ಅಲ್ಲವೇ; ಏಸು: ಎಷ್ಟು; ಬಲ: ಶಕ್ತಿ; ಐಸರ್: ಅಷ್ಟರಲ್ಲಿ; ಕಟ್ಟಾಸುರ: ಅತ್ಯಂತ ಭಯಂಕರ; ಔಕು: ನೂಕು; ಬಾಲ: ಪುಚ್ಛ; ಒದರು: ಕೊಡಹು, ಜಾಡಿಸು; ಬೊಬ್ಬೆ: ಗರ್ಜಿಸು; ಗಾಸಿ: ತೊಂದರೆ, ಕಷ್ಟ; ಪವನಸುತ: ವಾಯುಪುತ್ರ (ಭೀಮ); ಎಳ್ಳೈಸು: ಎಳ್ಳಿನಷ್ಟು, ಸ್ವಲ್ಪವೂ; ಮಿಡುಕು: ಅಲ್ಲಾಡು; ಊರ್ಧ್ವ: ಮೇಲ್ಭಾಗ; ಶ್ವಾಸ: ಉಸಿರು; ಲಹರಿ: ರಭಸ, ಆವೇಗ; ಅಡಿಗಡಿಗೆ: ಮತ್ತೆ ಮತ್ತೆ; ಲಟಕಟಿಸು: ಉದ್ವೇಗ, ಆಶ್ಚರ್ಯ;

ಪದವಿಂಗಡಣೆ:
ಐಸಲೇ +ತಪ್ಪೇನ್+ಎನುತ +ತನಗ್
ಏಸು+ ಬಲುಹುಂಟ್+ಐಸರಲಿ +ಕ
ಟ್ಟಾಸುರದಲ್+ಔಕಿದನು +ಬಾಲವನ್+ಒದರಿ +ಬೊಬ್ಬಿರಿದು
ಗಾಸಿಯಾದನು+ ಪವನಸುತನ್
ಎಳ್ಳೈಸು +ಮಿಡುಕದು +ಬಾಲವ್+ಊರ್ದ್ವ
ಶ್ವಾಸ+ಲಹರಿಯಲ್+ಅಡಿಗಡಿಗೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಭೀಮನು ಆಯಾಸಗೊಂಡ ಪರಿ – ಊರ್ದ್ವಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ

ಪದ್ಯ ೬: ಬಾಣದ ಹೊಗೆಯು ಯಾವುದನ್ನು ಆವರಿಸಿತು?

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ (ಕರ್ಣ ಪರ್ವ, ೨೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಪ್ರಭಾವದಿಂದ ಅಕ್ಕಪಕ್ಕದವರ ಮೈಗಳು ಮರಗಟ್ಟಿದವು. ರಥದ ಕುದುರೆಗಳು ಆಯಾಸಗೊಂಡವು. ಶಲ್ಯನು ಅತಿಶಯ ವಿಸ್ಮಯದಲ್ಲಿ ಮುಳುಗಿಹೋದನು. ಉರಿ ಸುತ್ತಲೂ ಹಬ್ಬಿತು. ಹೊಗೆಯು ಆಗಸವನ್ನೇ ತುಂಬಿತು.

ಅರ್ಥ:
ಹೊರೆ: ರಕ್ಷಣೆ, ಆಶ್ರಯ, ಸಮೀಪ; ಮರನಾದರು: ಗಟ್ಟಿಯಾಗು, ಬಿರುಸಾದ; ರಥ: ಬಂಡಿ; ತುರಗ: ಕುದುರೆ; ತತಿ: ಗುಂಪು, ಸಮೂಹ; ಲಟಕಟಿಸು: ಉದ್ರೇಕಗೊಳ್ಳು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಅದ್ದು: ತೋಯ್ದು; ನಿಮಿಷ: ಕಾಲ ಪ್ರಮಾಣ; ಉರಿ: ಬೆಂಕಿಯ ಕಿಡಿ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಪೂತ: ತೂರಿದ; ಕೃತಿ: ಕೆಲಸ; ಪಂಜರ: ಹಕ್ಕಿ, ಪ್ರಾಣಿಗಳನ್ನು ಕೂಡುವ ಸಾಧನ; ಪಲ್ಲವಿಸು: ವಿಕಸಿಸು; ಉಬ್ಬು: ಹೆಚ್ಚಾಗು, ಹಿಗ್ಗು; ಹೊರಳು: ತಿರುವು, ಬಾಗು; ಹೊಗೆ: ಧೂಮ; ಅಂಬರ: ಆಗಸ; ತುಂಬು: ಪೂರ್ತಿಗೊಳ್ಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊರೆಯವರು +ಮರನಾದರ್+ಆ+ ರಥ
ತುರಗ+ತತಿ +ಲಟಕಟಿಸಿದವು+ ನಿ
ಬ್ಬರದ +ಬೆರಗಿನೊಳ್+ಅದ್ದು +ಹೋದನು +ಶಲ್ಯ +ನಿಮಿಷದಲಿ
ಉರಿ+ ಛಡಾಳಿಸಿ +ಪೂತ್ಕೃತಿಯ+ ಪಂ
ಜರದೊಳಗೆ +ಪಲ್ಲವಿಸಿತ್+ಉಬ್ಬಿದ
ಹೊರಳಿ+ಹೊಗೆ+ಅಂಬರವ+ ತುಂಬಿತು +ಭೂಪ +ಕೇಳೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪೂತ್ಕೃತಿಯ ಪಂಜರದೊಳಗೆ ಪಲ್ಲವಿಸಿತುಬ್ಬಿದ

ಪದ್ಯ ೪೬: ಅರ್ಜುನನು ಕೃಪ ಮತ್ತು ಅಶ್ವತ್ಥಾಮರನ್ನು ಹೇಗೆ ಯುದ್ಧಕ್ಕೆ ಕರೆದ?

ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸುಗೊಳ್ಳಿರೈ ಕೌ
ರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ (ಕರ್ಣ ಪರ್ವ, ೨೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇವರ ಹಣೆಬರಹವು ಇಷ್ಟಾಯಿತು, ಕರ್ಣನ ಮೋಸದ ಮಾತೇನು ಕೇಳಿರಿ, ಕೌರವನ ಸರ್ವಸ್ವವನ್ನು ನುಂಗಲು ರಾಹುಗಳು ಆತುರದಿಂದಿವೆ. ಈ ಯುದ್ಧದಲ್ಲಿ ನಿಮ್ಮದೂ ಒಂದು ಪಣವಿದ್ದರೆ ಅದನ್ನು ಕಟ್ಟಿ ಆಟವಾಡಿ, ನಾನು ನೋಡುತ್ತೇನೆ ಎಂದು ಕೃಪ ಮತ್ತು ಅಶ್ವತ್ಥಾಮರನ್ನು ಅರ್ಜುನನು ಆಹ್ವಾನಿಸಿದನು.

ಅರ್ಥ:
ಹದ: ಸರಿಯಾದ ಸ್ಥಿತಿ; ಆಡು: ಮಾತಾಡು; ಕವಡಿಕೆ: ಮೋಸ; ಬೆಸುಗೊಳ್: ಕೇಳು, ಪ್ರಾರ್ಥಿಸು; ಸರ್ವ: ಎಲ್ಲಾ; ಗ್ರಾಸ:ತುತ್ತು, ಆಹಾರ, ಊಟ; ರಾಹು: ನವಗ್ರಹಗಳಲ್ಲಿ ಒಂದು; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಹರಿಬ:ಯುದ್ಧ, ಕಾರ್ಯ; ಮುಟ್ಟಿಗೆ: ಮುಚ್ಚಿದ ಅಂಗೈ, ಮುಷ್ಟಿ, ಹಿಡಿ; ರವಣ: ಹಾಯ್ಕು: ಇಡು, ಇರಿಸು, ತೊಡು; ಆಟ: ಕ್ರೀಡೆ; ನೋಡು: ವೀಕ್ಷಿಸು; ಕರೆ: ಬರೆಮಾಡು; ಸುತ: ಮಗ; ಗುರು: ಆಚಾರ್ಯ;

ಪದವಿಂಗಡಣೆ:
ಇವರ+ ಹದನಿದು +ಕರ್ಣನಾಡಿದ
ಕವಡಿಕೆಯ +ಬೆಸುಗೊಳ್ಳಿರೈ+ ಕೌ
ರವನ +ಸರ್ವಗ್ರಾಸಕಿವೆ +ರಾಹುಗಳು +ಲಟಕಟಿಸಿ
ನಿವಗೆ +ಹರಿಬದೊಳ್+ಒಂದು +ಮುಟ್ಟಿಗೆ
ರವಣವುಂಟೇ +ಹಾಯ್ಕಿ +ನಿಮ್ಮಾ
ಟವನು +ನೋಡುವೆನೆಂದು +ಕರೆದನು +ಕೃಪನ +ಗುರುಸುತನ

ಅಚ್ಚರಿ:
(೧) ಪದಬಳಕೆ – ಕೌರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ

ಪದ್ಯ ೪೮: ದುಶ್ಯಾಸನನ ಮೇಲೆ ಭೀಮನು ಹೇಗೆ ಎರಗಿದನು?

ಹೊಯ್ದು ತರುಬನು ಹಿಡಿದು ತಡೆಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದ ವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ ಕೈ
ಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನನ್ನು ಹೊಯ್ದು ತಲೆಗೂದಲನ್ನು ಹಿಡಿದು ತಡೆಗಾಲಿನಿಂದ ಹೊಡೆದು ಕೆಡವಿ ಬಟ್ಟೆಯನ್ನು ಬಂಡೆಗೆ ಸೆಳೆದಂತೆ ಬಡಿ ಬಡಿದು, ಪಕ್ಕೆಗಳಲ್ಲಿ ಗುದ್ದಿದನು. ದುಶ್ಯಾಸನನ ಕಣ್ಣಾಲಿಗಳು ಮುಂದೆ ಬಂದವು. ಕಂಠದಲ್ಲಿದ್ದ ಪ್ರಾಣ ವಾಯುಗಳ ಬೀಡು ಮೂಗಿಗೆ ಬಂದವು. ದುಶ್ಯಾಸನನ ರಕ್ತವನ್ನು ತುಡುಕಲು ಭೀಮನು ಅತಿ ಆತುರದಿಂದ ಕೈಚಾಚಿದನು.

ಅರ್ಥ:
ಹೊಯ್ದು: ಹೊಡೆದು; ತುರುಬು: ಕೂದಲು ಗಂಟು; ಹಿಡಿ: ಮುಟ್ಟಿಗೆ, ಮುಷ್ಟಿ; ತಡೆಗಾಲು: ತಡೆಯುತ್ತಿರುವ ಕಾಲು; ಓಯ್ದು: ಒದೆದು; ಕೆಡಹು: ಕೆಳಕ್ಕೆ ಬೀಳಿಸು; ಅಸಗ: ಅಗಸ; ಬಡಿ: ಹೊಡೆ; ಹೊಯ್: ಬಟ್ಟೆಯೊಗೆವಾಗ ಬರುವ ಶಬ್ದ, ಬಡಿ ಬಡಿದು; ಖೊಪ್ಪರಿಸು: ಮೀರು, ಹೆಚ್ಚು; ಡೊಕ್ಕರ: ಗುದ್ದು, ಮಲ್ಲಯುದ್ಧದಲ್ಲಿ ಒಂದು ವರಸೆ; ರಾಘೆ: ಕುದುರೆಯನ್ನು ಹತ್ತಲು ಅದರ ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ; ಹಾಯ್ದು: ಹೊಡೆ; ಆಲಿ: ಕಣ್ಣು; ಉಸುರು: ವಾಯು; ಪಾಳೆಯ: ಸ್ಥಾನ; ಬಿಟ್ಟುದು: ತೊರೆ; ಮೂಗು: ನಾಸಿಕ; ಕೈ: ಹಸ್ತ; ತುಡುಕು: ಬೇಗನೆ ಹಿಡಿಯುವುದು, ಹಿಡಿ; ಶೋಣಿತ: ರಕ್ತ; ಲಟಕಟ: ಚಕಿತನಾಗು, ಉದ್ರೇಕಗೊಳ್ಳು;

ಪದವಿಂಗಡಣೆ:
ಹೊಯ್ದು +ತರುಬನು +ಹಿಡಿದು +ತಡೆಗಾಲ್
ಒಯ್ದು +ಕೆಡಹಿದನ್+ಅಸಬಡಿದು +ಹೊಯ್
ಹೊಯ್ದು+ ಬಿಡೆ +ಖೊಪ್ಪರಿಸಿ +ಡೊಕ್ಕರವಿಕ್ಕಿ +ರಾಘೆಯಲಿ
ಹಾಯ್ದವ್ + ಆಲಿಗಳ್+ಉಸುರ+ ಪಾಳೆಯವ್
ಎಯ್ದೆ +ಬಿಟ್ಟುದು +ಮೂಗಿನಲಿ +ಕೈಗ್
ಎಯ್ದು+ ತುಡುಕಿದ +ಶೋಣಿತಕೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಹೊಯ್ದು, ಎಯ್ದು, ಒಯ್ದು – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಕೆಡಹಿದನಸಬಡಿದು ಹೊಯ್ ಹೊಯ್ದು;
(೩) ಉಸುರು ನಿಲ್ಲುತ್ತಿತ್ತು ಎಂದು ಹೇಳಲು – ಉಸುರ ಪಾಳೆಯವೆಯ್ದೆ ಬಿಟ್ಟುದು ಮೂಗಿನಲಿ
(೪) ದುಶ್ಯಾಸನ ರಕ್ತವನ್ನು ಕುಡಿಯುವ ಕಾತುರ – ಕೈಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ