ಪದ್ಯ ೨೬: ಸಂಜಯನಿಗೆ ವ್ಯಾಸರು ಯಾವ ಅಪ್ಪಣೆ ನೀಡಿದರು?

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ (ಗದಾ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಷ್ಟು ಬೇಗದಿಂದ ವೇದವ್ಯಾಸ ಮುನಿಗಳು ಪ್ರಕಟವಾಗಿ ನನ್ನ ಕೊರಳಿಗೆ ಹೂಡಿದ್ದ ಕತ್ತಿಯನ್ನು ಹಿಡಿದುಕೊಂಡರೋ ತಿಳಿಯಲಿಲ್ಲ. ಸಾವು ತಪ್ಪಿತು. ಬಾದರಾಯಣನು ಪ್ರೀತಿಯಿಂದ ನನ್ನ ಮೈದಡವಿ ಕೌರವನನ್ನು ಹುಡುಕು ಎಂದು ಅಪ್ಪಣೆಕೊಟ್ಟನು.

ಅರ್ಥ:
ವಹಿಲ: ಬೇಗ, ತ್ವರೆ; ಆವಿರ್ಭಾವ: ಹುಟ್ಟುವುದು, ಪ್ರಕಟವಾಗುವುದು; ಅರಿ: ತಿಳಿ; ಮುನಿ: ಋಷಿ; ಅಡ್ಡೈಸು: ಅಡ್ಡ ಬಂದು; ಹಿಡಿ: ಗ್ರಹಿಸು; ಕೊರಳು: ಗಂಟಲು ಆಯುಧ: ಶಸ್ತ್ರ; ಸಾವು: ಮರಣ; ಕೃಪೆ: ದಯೆ; ಮೈದಡವಿ: ನೇವರಿಸು; ಸಂಭಾವಿಸು: ತೃಪ್ತಿಪಡಿಸು, ಗೌರವಿಸು; ಅರಸು: ಹುಡುಕು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆವ+ ವಹಿಲದೊಳ್+ಆದುದ್+ಆವಿ
ರ್ಭಾವವೆಂದ್+ಆನ್+ಅರಿಯೆನ್+ಆಗಳೆ
ದೇವಮುನಿ+ಅಡ್ಡೈಸಿ +ಹಿಡಿದನು +ಕೊರಳಡ್+ಆಯುಧವ
ಸಾವು +ತಪ್ಪಿತು +ಬಾದರಾಯಣನ್
ಓವಿ+ ಕೃಪೆಯಲಿ +ಮೈದಡವಿ +ಸಂ
ಭಾವಿಸುತ +ಕುರುಪತಿಯನ್+ಅರಸ್+ಎಂದೆನಗೆ +ನೇಮಿಸಿದ

ಅಚ್ಚರಿ:
(೧) ಅ ಕಾರದ ಪದಗಳ ಬಳಕೆ – ಆವ ವಹಿಲದೊಳಾದುದಾವಿರ್ಭಾವವೆಂದಾನರಿಯೆನಾಗಳೆ
(೨) ವ್ಯಾಸರನ್ನು ಕರೆದ ಪರಿ – ಬಾದರಾಯಣ, ದೇವಮುನಿ

ಪದ್ಯ ೩೫: ಕುದುರೆಗಳ ಪುಣ್ಯವು ಎಂತಹದು?

ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ (ದ್ರೋಣ ಪರ್ವ, ೧೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅವನು ಕೈಯಿಂದ ಅವುಗಲ ಮೈದಡವಿ, ನಟ್ಟಿದ್ದ ಬಾಣಗಳನ್ನು ಕಿತ್ತು, ಗಾಯಕ್ಕೆ ಔಷಧವನ್ನು ಲೇಪಿಸಿ, ಕರುಣದಿಂದ ಅವುಗಲ ಕತ್ತನ್ನು ಚಪ್ಪರಿಸಿದನು. ಕುದುರೆಗಳು ಹರ್ಷಾತಿರೇಕದಿಂದ ಕೊರಳನ್ನೆತ್ತಿ, ಕಣ್ಣುಗಳನ್ನು ತಿರುಗಿಸಿ ಕೃಷ್ಣನನ್ನು ನೋಡುತ್ತಿದ್ದವು. ಆ ಕುದುರೆಗಳ ಪುಣ್ಯ ಸನಕಾದಿಗಳಿಗೂ ಇಲ್ಲ.

ಅರ್ಥ:
ಕರ: ಕೈ; ಕರತಳ: ಅಂಗೈ; ಮೈ: ತನು; ತಡವು: ನೇವರಿಸು; ಗಾಯ: ಪೆಟ್ಟು; ಸರಳ: ಬಾಣ; ಕಿತ್ತು: ಹೊರಹಾಕು; ಔಷಧಿ: ಮದ್ದು; ಲೇಪಿಸು: ಬಳಿ, ಹಚ್ಚು; ಒರಸು: ಸಾರಿಸು, ನಾಶಮಾಡು, ಅಳಿಸು; ಕರುಣ: ದಯೆ; ಚಪ್ಪರಿಸು: ಸವಿ, ರುಚಿನೋಡು; ಕಂಧರ: ಕೊರಳು; ಹರುಷ: ನಗು; ಮಿಗೆ: ಹೆಚ್ಚು; ಕೊರಳು: ಗಂಟಲು; ನಯನ: ಕಣ್ಣು; ತಿರುಹು: ತಿರುಗಿಸು; ದೇವ: ಭಗವಮ್ತ; ನೋಡು: ವೀಕ್ಷಿಸು; ತುರಗ: ಅಶ್ವ; ಪುಣ್ಯ: ಸದಾಚಾರ; ಆದಿ: ಮುಂತಾದ;

ಪದವಿಂಗಡಣೆ:
ಕರತಳದಿ +ಮೈದಡವಿ +ಗಾಯದ
ಸರಳ +ಕಿತ್+ಔಷಧಿಯ +ಲೇಪವನ್
ಒರಸಿದನು+ ಕರುಣದಲಿ +ಚಪ್ಪರಿಸಿದನು +ಕಂಧರವ
ಹರುಷ +ಮಿಗೆ +ಕೊರಳೆತ್ತಿ+ ನಯನವ
ತಿರುಹಿ +ದೇವನ+ ನೋಡುತಿರ್ದುವು
ತುರಗ +ನಾಲ್ಕರ +ಪುಣ್ಯ +ಸನಕಾದಿಗಳಿಗಿಲ್ಲೆಂದ

ಅಚ್ಚರಿ:
(೧) ಕುದುರೆಗಳು ಕೃಷ್ಣನನ್ನು ನೋಡಿದ ಪರಿ – ಹರುಷ ಮಿಗೆ ಕೊರಳೆತ್ತಿ ನಯನವ ತಿರುಹಿ ದೇವನ ನೋಡುತಿರ್ದುವು

ಪದ್ಯ ೩೫: ಕೃಷ್ಣನು ಅರ್ಜುನನನ್ನು ಹೇಗೆ ಹರಸಿದನು?

ಇಳಿದು ರಥವನು ಮುರಹರನ ಪದ
ತಳದ ಧೂಳಿಯ ಕೊಂಡನತಿ ನಿ
ರ್ಮಲ ಸಮಾಧಾನದಲಿ ಕೃಷ್ಣನ ಚರಣಕೆರಗಿದನು
ತಲೆಯ ಹಿಡಿದೆತ್ತಿದನು ಹರಿ ಕೋ
ಮಳ ಕರಾಂಬುಜದಿಂದ ಪಾರ್ಥನ
ನೊಲಿದು ಮೈದಡವಿದನು ಗೆಲು ಹೋಗೆಂದು ಹರಸಿದನು (ದ್ರೋಣ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ರಥದಿಂದಿಳಿದು ಅರ್ಜುನನು ಶ್ರೀಕೃಷ್ಣನನ್ ಪಾದಧೂಳಿಯನ್ನು ಸ್ವೀಕರಿಸಿ ಸಮಾಧಾನದಿಂದ ಅವನ ಪಾದಗಳಿಗೆ ನಮಸ್ಕರಿಸಿದನು. ಶ್ರೀಕೃಷ್ಣನು ತನ್ನ ಕೋಮಲವಾದ ಕೈಗಳಿಂದ ಅರ್ಜುನನನ್ನು ಪ್ರೀತಿಯಿಂದ ಮೈದಡವಿ ಗೆಲ್ಲುಹೋಗು ಎಂದು ಹರಸಿದನು.

ಅರ್ಥ:
ಇಳಿದು: ಕೆಳಕ್ಕೆ ಬಂದು; ರಥ: ಬಂಡಿ; ಮುರಹರ: ಕೃಷ್ಣ; ಪದತಳ: ಪಾದ; ಧೂಳು: ಮಣ್ಣಿನ ಪುಡಿ; ಕೊಂಡು: ಪಡೆದು; ನಿರ್ಮಲ: ಶುಭ್ರ; ಸಮಾಧಾನ: ಮನಸ್ಸಿನ ನೆಮ್ಮದಿ, ಶಾಂತಿ; ಚರಣ: ಪಾದ; ಎರಗು: ನಮಸ್ಕರಿಸು; ತಲೆ: ಶಿರ; ಹಿಡಿ: ಗ್ರಹಿಸು; ಎತ್ತು: ಮೇಲಕ್ಕೆ ತರು; ಹರಿ: ಕೃಷ್ಣ; ಕೋಮಲ: ಮೃದು; ಕರಾಂಬುಜ: ಹಸ್ತಕಮಲ; ಒಲಿ: ಪ್ರೀತಿಸು; ಮೈದಡವಿ: ಅಪ್ಪು; ಗೆಲು: ಗೆಲ್ಲು, ಜಯಿಸು; ಹೋಗು: ತೆರಳು; ಹರಸು: ಆಶೀರ್ವದಿಸು;

ಪದವಿಂಗಡಣೆ:
ಇಳಿದು +ರಥವನು +ಮುರಹರನ +ಪದ
ತಳದ +ಧೂಳಿಯ +ಕೊಂಡನ್+ಅತಿ +ನಿ
ರ್ಮಲ +ಸಮಾಧಾನದಲಿ +ಕೃಷ್ಣನ +ಚರಣಕ್+ಎರಗಿದನು
ತಲೆಯ +ಹಿಡಿದೆತ್ತಿದನು +ಹರಿ+ ಕೋ
ಮಳ +ಕರಾಂಬುಜದಿಂದ +ಪಾರ್ಥನನ್
ಒಲಿದು +ಮೈದಡವಿದನು +ಗೆಲು +ಹೋಗೆಂದು +ಹರಸಿದನು

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳುವ ಪರಿ – ಪದತಳದ ಧೂಳಿಯ ಕೊಂಡನು, ಕೃಷ್ಣನ ಚರಣಕೆರಗಿದನು

ಪದ್ಯ ೧೯: ಅರ್ಜುನನು ಯಾರನ್ನು ಕರೆಸಲು ಬೇಡಿದನು?

ಬರಲು ಬಹನಿದಿರಾಗಿ ತನ್ನಯ
ವರ ರಥವ ಬಂದೇರುವನು ನಿಜ
ಕರತಳದಿ ಮೈದಡವಿ ಘಾಯವ ನೋಡಿ ಮರುಗುವನು
ತರುಣನಿದಿರೈತರಲು ತನ್ನಯ
ಧುರದ ಬಳಲಿಕೆ ಹಿಂಗುವುದು ಹೇ
ಳರಸ ಕಂದನ ಸುಳಿವ ಕಾಣೆನು ಕರಸಿ ತೋರೆಂದ (ದ್ರೋಣ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ರಾಜ, ನಾನು ಯುದ್ಧದಿಂದ ಬಂದೊಡನೆ ನನ್ನನ್ನು ಇದಿರಾಗಿ ನನ್ನ ರಥವನ್ನು ಹತ್ತುವನು, ಕೈಯಿಂದ ಮೈದಡವಿ ಗಾಯಗಳನ್ನು ನೋಡಿ ಮರುಗುತ್ತಿದ್ದನು. ಅವನನ್ನು ಕಂಡೊಡನೆ ಯುದ್ಧದ ಆಯಾಸವೆಲ್ಲವೂ ಇಲ್ಲವಾಗುತ್ತಿತ್ತು. ಅರಸ ನನ್ನ ಕಂದನ ಸುಳಿವು ಕಾಣುತ್ತಿಲ್ಲ. ಅವನನ್ನು ಕರೆಸಿ ನನಗೆ ತೋರಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ಬರಲು: ಆಗಮಿಸು; ಇದಿರು: ಎದುರು; ವರ: ಶ್ರೇಷ್ಠ; ರಥ: ಬಂಡಿ; ಏರು: ಮೇಲೆ ಹತ್ತು; ಕರ: ಹಸ್ತ; ಮದಿ: ತನು; ಘಾಯ: ಪೆಟ್ಟು; ನೋಡು: ವೀಕ್ಷಿಸು; ಮರುಗು: ಕೊರಗು; ತರುಣ: ಯುವಕ; ಧುರ: ಯುದ್ಧ; ಬಳಲಿಕೆ: ಆಯಾಸ; ಹಿಂಗು: ಬತ್ತುಹೋಗು; ಅರಸ: ರಾಜ; ಕಂದ: ಮಗ; ಸುಳಿವು: ಕುರುಹು; ಕರಸು: ಬರೆಮಾಡು; ತೋರು: ವೀಕ್ಷಿಸು, ಕಾಣಿಸು;

ಪದವಿಂಗಡಣೆ:
ಬರಲು ಬಹನ್+ಇದಿರಾಗಿ +ತನ್ನಯ
ವರ +ರಥವ+ ಬಂದ್+ಏರುವನು +ನಿಜ
ಕರತಳದಿ +ಮೈದಡವಿ +ಘಾಯವ +ನೋಡಿ +ಮರುಗುವನು
ತರುಣನ್+ಇದಿರ್+ಐತರಲು +ತನ್ನಯ
ಧುರದ +ಬಳಲಿಕೆ +ಹಿಂಗುವುದು +ಹೇಳ್
ಅರಸ +ಕಂದನ +ಸುಳಿವ +ಕಾಣೆನು +ಕರಸಿ +ತೋರೆಂದ

ಅಚ್ಚರಿ:
(೧) ಮಗನ ಪ್ರಭಾವ – ತರುಣನಿದಿರೈತರಲು ತನ್ನಯ ಧುರದ ಬಳಲಿಕೆ ಹಿಂಗುವುದು

ಪದ್ಯ ೨೩: ಭೀಷ್ಮರು ಕರ್ಣನಿಗೆ ಹೇಗೆ ಆಶೀರ್ವದಿಸಿದರು?

ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೊಗೆಂದ (ದ್ರೋಣ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ ದುಃಖಿಸಬೇಡ, ಬಾ ಮಗನೇ, ದುರ್ಯೋಧನನ ಮದದಾನೆಯೇ, ವೈರಿ ಮಾಂಡಲೀಕರ ತಲೆಯ ಶೂಲವೇ, ಬಾ ಎಂದು ಪ್ರೀತಿಯಿಂದ ಕರೆದು ಕಣ್ಣೀರು ತುಂಬಿದ ಕಣ್ಣುಗಳಿಂದ ತಮ್ಮ ಮೃದುವಾದ ಕರಕಮಲಗಳಿಂದ ಕರ್ಣನ ಮೈಯನ್ನು ಸವರಿ ಕರ್ಣ ಕೌರವನ ಉಳಿವು ನಿನ್ನದು, ಕಂದಾ, ಯುದ್ಧವನ್ನು ಜಯಿಸು ಹೋಗು ಎಂದು ಹೇಳಿದರು.

ಅರ್ಥ:
ಅಳಲು: ದುಃಖಿಸು; ಬಾ: ಆಗಮನ; ಮಗ: ಸುತ; ಕುಲ: ವಂಶ; ತಿಲಕ: ಶ್ರೇಷ್ಠ; ಅವಸರ: ಕಾರ್ಯ; ಸಂದರ್ಭ; ಆನೆ: ಗಜ; ರಿಪು: ವೈರಿ; ಮಂಡಳಿಕ: ಸಾಮಂತರಾಜ; ಮಸ್ತಕ: ಶಿರ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ತುಳುಕು: ಅಲ್ಲಾಡು; ಕಂಬನಿ: ಕಣ್ಣೀರು; ಕೋಮಳ: ಮೃದು; ತಳ: ಅಂಗೈ; ಮೈದಡವಿ: ದೇಹವನ್ನು ಸವರಿ; ಉಳಿವು: ಜೀವನ; ಕಂದ: ಮಗು; ಕದನ: ಯುದ್ಧ; ಜಯಿಸು: ಗೆಲ್ಲು; ಹೊಗು: ತೆರಳು;

ಪದವಿಂಗಡಣೆ:
ಅಳಲದಿರು+ ಬಾ +ಮಗನೆ +ಕುರುಕುಲ
ತಿಲಕನ್+ಅವಸರದ್+ಆನೆ+ ರಿಪು +ಮಂ
ಡಳಿಕ+ಮಸ್ತಕ+ಶೂಲ +ಬಾರೈ +ಕರ್ಣ +ಬಾಯೆನುತ
ತುಳುಕಿದನು +ಕಂಬನಿಯ +ಕೋಮಳ
ತಳದಿ +ಮೈದಡವಿದನು+ ಕೌರವನ್
ಉಳಿವು +ನಿನ್ನದು +ಕಂದ +ಕದನವ +ಜಯಿಸು +ಹೊಗೆಂದ

ಅಚ್ಚರಿ:
(೧) ಕರ್ಣನನ್ನು ಹೊಗಳಿದ ಪರಿ – ಕುರುಕುಲತಿಲಕನವಸರದಾನೆ ರಿಪು ಮಂಡಳಿಕಮಸ್ತಕಶೂಲ
(೨) ಪ್ರೀತಿಯನ್ನು ತೋರಿದ ಪರಿ – ತುಳುಕಿದನು ಕಂಬನಿಯ ಕೋಮಳತಳದಿ ಮೈದಡವಿದನು

ಪದ್ಯ ೨: ಅರ್ಜುನ ಮತ್ತು ಉತ್ತರ ಕುಮಾರರು ಊರಿಗೆ ಹೇಗೆ ಹಿಂದಿರುಗಿದರು?

ಬಳಿಕ ಫಲಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲುರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥವ ಮೈದಡವಿ ಕಪಿ
ಕುಲ ಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ (ವಿರಾಟ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಬನ್ನಿಯಮರದಲ್ಲಿ ಆಯುಧಗಳನ್ನಿಟ್ಟು, ಊರಿನಿಂದ ತಂದಿದ್ದ ಹುಲುರಥವನ್ನು ಸರಿಪಡಿಸಿ ಅರ್ಜುನನು ಸಾರಥಿಯಾದನು. ಹನುಮಂತನು ಧ್ವಜದಿಂದಿಳಿದು ಅರ್ಜುನನ ಮೈದಡವಿ ತನ್ನ ವನಕ್ಕೆ ಹೋದನು. ಊರ ಹತ್ತಿರ ರಥವನ್ನು ನಿಲ್ಲಿಸಿ ಅರ್ಜುನನು ನಗುತ್ತಾ ಉತ್ತರನಿಗೆ ಹೀಗೆಂದು ಹೇಳಿದನು.

ಅರ್ಥ:
ಬಳಿಕ: ನಂತರ; ಮರ: ತರು; ಕೈದು: ಆಯುಧ; ಇರಿಸು: ಇಡು; ಮುನ್ನ: ಆರಂಭ, ಮೊದಲು; ಹುಲು: ಅಲ್ಪ; ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಸಾರಥಿ: ಸೂತ; ಅಳವಡಿಸು: ಇಳಿ: ಕೆಳಗೆ ಬಾ; ಮೈದಡವಿ: ಮೈಕೊಡವಿ; ಕಪಿ: ಹನುಮ; ಕುಲ: ವಂಶ; ಲಲಾಮ: ಹಣೆ; ವನ: ಕಾದು; ಹಾಯ್ದು: ಮೇಲೆಬೀಳು; ಹೊಳಲು: ಪ್ರಕಾಶ; ಪೊಟರೆ; ಹೊರೆ: ರಕ್ಷಣೆ, ಆಶ್ರಯ; ನಿಂದು: ನಿಲ್ಲು; ನಗುತ: ಹರ್ಷಿಸು; ಒಳಿತು: ಯೋಗ್ಯ;

ಪದವಿಂಗಡಣೆ:
ಬಳಿಕ +ಫಲಗುಣನತ್ತಲಾ +ಮರ
ದೊಳಗೆ +ಕೈದುವನಿರಿಸಿ+ ಮುನ್ನಿನ
ಹುಲು+ರಥವ+ ಮೇಳೈಸಿ +ಸಾರಥಿತನವನ್+ಅಳವಡಿಸೆ
ಇಳಿದು+ ಪಾರ್ಥವ +ಮೈದಡವಿ +ಕಪಿ
ಕುಲ +ಲಲಾಮನು +ವನಕೆ+ ಹಾಯ್ದನು
ಹೊಳಲ +ಹೊರೆಯಲಿ +ನಿಂದು +ನಗುತ್+ಉತ್ತರನ್+ಒಳಿಂತೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಯ್ದನು ಹೊಳಲ ಹೊರೆಯಲಿ

ಪದ್ಯ ೮೬: ಕೀಚಕನು ಏಕೆ ಗಾಬರಿಗೊಂಡನು?

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ (ವಿರಾಟ ಪರ್ವ, ೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ನನಗೆ ಸೋಲದ ಗಂಡಸರೇ ಇಲ್ಲ. ನನಗೆ ನೀನು ಸರಿಸಾಟಿ, ನಿನಗೆ ಮನಸಾರೆ ಒಲಿದಿದ್ದೇನೆ, ನನ್ನ ಹೆಣ್ಣುತನವನ್ನು ನೀನು ನೋಡು ಎಂದು ಭೀಮನು ಹೇಳಲು, ಕೀಚಕನು ಸಂತೋಷದಿಂದ ಉಬ್ಬಿ ಭೀಮನ ಮೈದಡವಿದನು. ಗುಂಡಾಕಾರದ ಸ್ತನಗಳನ್ನು ಕಾಣದೆ ಹೆದರಿ ಹೀಗೆಂದನು.

ಅರ್ಥ:
ಪುರುಷ: ಗಂಡು; ಸೋಲು: ಪರಾಭವ; ಪಾಸಟಿ: ಸಮಾನ, ಹೋಲಿಕೆ; ಮನ: ಮನಸ್ಸು; ಒಲಿದು: ಬಯಸು, ಸಮ್ಮತಿಸು; ಹೆಣ್ಣು: ಸ್ತ್ರೀ; ಅನುವು: ಸೊಗಸು; ಹರುಷ: ಸಂತಸ; ಉಬ್ಬು: ಹೆಚ್ಚಾಗು; ಅನಿಲಜ: ವಾಯುಪುತ್ರ; ಮೈದಡವು: ದೇಹವನ್ನು ಅಲುಗಾಡಿಸು; ವೃತ್ತ: ಗುಂಡಾಕಾರ; ಸ್ತನ: ಮೊಲೆ; ಕಾಣು: ತೋರು; ಹೆದರು: ಅಂಜಿ; ಬಳಿಕ: ನಂತರ; ನಗುತ: ಸಂತಸ;

ಪದವಿಂಗಡಣೆ:
ಎನಗೆ +ಪುರುಷರು +ಸೋಲದ್+ಅವರಿಲ್
ಎನಗೆ +ಪಾಸಟಿ +ನೀನು +ನಿನಗಾ
ಮನವೊಲಿದೆ +ನೀ +ನೋಡು +ತನ್ನಯ +ಹೆಣ್ಣುತನದ್+ಅನುವ
ಎನಲು+ ಹರುಷದಲ್+ಉಬ್ಬಿ +ಕೀಚಕನ್
ಅನಿಲಜನ+ ಮೈದಡವಿ+ ವೃತ್ತ
ಸ್ತನವ +ಕಾಣದೆ +ಹೆದರಿ +ಬಳಿಕಿಂತೆಂದನ್+ಅವ+ ನಗುತ

ಅಚ್ಚರಿ:
(೧) ಕೀಚಕನು ಅಂಜಲು ಕಾರಣ – ವೃತ್ತ ಸ್ತನವ ಕಾಣದೆ ಹೆದರಿ

ಪದ್ಯ ೧೫: ಭೀಮನು ಯಾರ ಮೇಲೆ ದಾಳಿಮಾಡುವೆನೆಂದು ಹೇಳಿದನು?

ಸುರನಿಕರ ಕಾದಿರಲಿ ಮೇಣೀ
ಧರಣಿಕೊಡೆನೆಂದೆನಲಿ ಹಸ್ತಿನ
ಪುರಿಗೆ ದಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ (ವಿರಾಟ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ಆಯುಧಗಳನ್ನು ದೇವತೆಗಳೇ ಕಾದಿರಲಿ. ಈ ಭೂಮಿಯೇ ಕೊಡುವುದಿಲ್ಲ ಎನ್ನಲಿ, ದೇವತೆಗಳ ಮುಖಕ್ಕೆ ತಿವಿದು ಈ ಅಸ್ತ್ರಗಳನ್ನು ತೆಗೆದುಕೊಂಡು ಹೋಗಿ ಹಸ್ತಿನಾವತಿಯ ಮೇಲೆ ದಾಳಿಯಿಡುತ್ತೇನೆ ಎಂದು ಭೀಮನು ಅಬ್ಬರಿಸಲು, ಧರ್ಮರಾಯನು ಭೀಮನನ್ನು ಬರಸೆಳೆದು ಬಿಗಿಯಾಗಿ ಅಪ್ಪಿಕೊಂಡು ಮೈದಡವಿದನು.

ಅರ್ಥ:
ಸುರ: ದೇವತೆ; ನಿಕರ: ಗುಂಪು; ಕಾದು: ರಕ್ಷಣೆ, ಕಾಯುವುದು; ಮೇಣ್: ಅಥವ; ಧರಣಿ: ಭೂಮಿ; ದಾಳಿ: ಆಕ್ರಮಣ; ಅಮರ: ದೇವತೆ; ಮೋರೆ: ಮುಖ; ತಿವಿ: ಚುಚ್ಚು; ಉರು: ಶ್ರೇಷ್ಠ; ಅಸ್ತ್ರ: ಆಯುಧ; ಒಯ್ವೆ: ತೆಗೆದುಕೊಂಡು; ಅಬ್ಬರಿಸು: ಗರ್ಜಿಸು; ಮಾರುತಿ: ವಾಯುಪುತ್ರ; ನುಡಿ: ಮಾತಾಡು; ತಮ್ಮ: ಸಹೋದರ; ಬರಸೆಳೆ: ಹತ್ತಿರಕ್ಕೆ ಕರೆದುಕೊಂಡು; ಅಪ್ಪು: ಆಲಿಂಗನ; ಮೈದಡವಿ: ಮೈಯನ್ನು ನೇವರಿಸು; ಭೂಪಾಲ: ರಾಜ;

ಪದವಿಂಗಡಣೆ:
ಸುರ+ನಿಕರ+ ಕಾದಿರಲಿ+ ಮೇಣ್+ಈ
ಧರಣಿ+ಕೊಡೆನೆಂದ್+ಎನಲಿ +ಹಸ್ತಿನ
ಪುರಿಗೆ+ ದಾಳಿಯನ್+ಇಡುವೆನ್+ಅಮರರ +ಮೋರೆಗಳ+ ತಿವಿದು
ಉರುತರಾಸ್ತ್ರವನ್+ಒಯ್ವೆನೆಂದ್
ಅಬ್ಬರಿಸಿ +ಮಾರುತಿ +ನುಡಿಯೆ +ತಮ್ಮನ
ಬರಸೆಳೆದು +ಬಿಗಿಯಪ್ಪಿ+ ಮೈದಡವಿದನು+ ಭೂಪಾಲ

ಅಚ್ಚರಿ:
(೧) ಸುರ, ಅಮರ – ಸಮಾನಾರ್ಥಕ ಪದ
(೨) ತಮ್ಮನ ಮೇಲಿನ ಪ್ರೀತಿ – ತಮ್ಮನಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ

ಪದ್ಯ ೧೮: ವ್ಯಾಸರು ಪುನಃ ಎಲ್ಲಿಗೆ ಹಿಂದಿರುಗಿದರು?

ಇಂದುಮುಖಿಯನು ಭೀಮನನು ಯಮ
ನಂದನನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ (ಅರಣ್ಯ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ವ್ಯಾಸರು ಹೊರಡಲು ಸಿದ್ಧರಾದರು, ದ್ರೌಪದಿ, ಭೀಮ, ಅರ್ಜುನ, ಧರ್ಮಜ, ನಕುಲ ಸಹದೇವರನ್ನು ಹೊಗಳಿ ಪ್ರೀತಿಯಿಂದ ಮೈನೇವರಿಸಿದರು. ಅಲ್ಲಿ ಸೇರಿದ್ದ ಮುನಿವೃಂದವನ್ನು, ಬ್ರಾಹ್ಮಣರ ಗುಂಪನ್ನು ಮನ್ನಿಸಿ ವ್ಯಾಸರು ತಮ್ಮ ಆಶ್ರಮಕ್ಕೆ ಹಿಂದಿರುಗಿದರು.

ಅರ್ಥ:
ಇಂದು: ಚಂದ್ರ; ಇಂದುಮುಖಿ: ಚಂದ್ರನಂತೆ ಮುಖವುಳ್ಳವಳು, ಸುಂದರಿ (ದ್ರೌಪದಿ); ನಂದನ: ಮಗ; ಯಮಳರು: ನಕುಲ ಸಹದೇವ; ಕೊಂಡಾಡು: ಹೊಗಳು, ಪ್ರಶಂಶಿಸು; ಮೈ: ತನು, ದೇಹ;
ತಡವು: ನೇವರಿಸು; ಮೋಹ: ಪ್ರೀತಿ; ಬಂದು: ಆಗಮಿಸು; ಸಂದಣಿ: ಗುಂಪು, ಸಮೂಹ; ಮುನಿ: ಋಷಿ; ದ್ವಿಜ: ಬ್ರಾಹ್ಮಣ; ವೃಂದ: ಗುಂಪು; ಮನ್ನಿಸು:ಅಂಗೀಕರಿಸು; ನಿಜ: ತನ್ನ; ಆಶ್ರಮ: ಕುಟೀರ; ಮಂದಿರ: ಆಲಯ; ಮುದ: ಸಂತಸ; ಬಿಜಯಂಗೈ: ದಯಮಾಡಿಸು, ಹೊರಡು; ಮುನಿಪ: ಋಷಿ;

ಪದವಿಂಗಡಣೆ:
ಇಂದುಮುಖಿಯನು +ಭೀಮನನು+ ಯಮ
ನಂದನನನ್+ಅರ್ಜುನನ +ಯಮಳರನ್
ಅಂದು +ಕೊಂಡಾಡಿದನು +ಮೈದಡವಿದನು +ಮೋಹದಲಿ
ಬಂದು +ಸಂದಣಿಸಿದ +ಮುನಿ+ದ್ವಿಜ
ವೃಂದವನು +ಮನ್ನಿಸಿ +ನಿಜಾಶ್ರಮ
ಮಂದಿರಕೆ+ ಮುದದಿಂದ +ಬಿಜಯಂಗೈದನಾ +ಮುನಿಪ

ಅಚ್ಚರಿ:
(೧) ನಕುಲ ಸಹದೇವರನ್ನು ಯಮಳರು ಎಂದು ಕರೆದಿರುವುದು

ಪದ್ಯ ೪೫: ಕೃಷ್ಣ ಎತ್ತ ಹೋಗಲು ಮನಸ್ಸು ಮಾಡಿದ?

ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿಂದೆ ಫಲಿಸುವದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗ ಮನನಾದ (ಅರಣ್ಯ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೃಷ್ಣನು ಪ್ರೀತಿಯಿಂದ ಪಾಂಡವರ ಮೈಯನ್ನು ಸವರಿ, ಆಲಂಗಿಸಿ, ದ್ರೌಪದಿಯನ್ನುಸಂತೈಸಿ, ಋಷಿಗಳನ್ನುಪಚರಿಸಿ, ಧರ್ಮಜನಿಗೆ ಬುದ್ಧಿಯನ್ನು ಹೇಳಿದನು. ನಿಮಗೆ ಇನ್ನು ಮುಂದೆ ಶ್ರೇಷ್ಠವಾದ ಸಿದ್ಧಿಯು ಫಲಿಸುತ್ತದೆ ಎಂದು ಸೂಚಿಸಿದನು. ನಂತರ ತನ್ನ ಊರಿಗೆ ಹೊರಡಲು ಮನಸ್ಸಿನಲ್ಲೇ ಯೋಚಿಸಿದನು.

ಅರ್ಥ:
ಹರಿ: ಕೃಷ್ಣ; ಒಲಿ: ಸಮ್ಮತಿಸು; ಮೈದಡವಿ: ತನು ಸವರು; ತರುಣಿ: ಹೆಣ್ಣು; ಸಂತೈಸು: ಸಮಾಧಾನಪಡಿಸು; ಮುನಿ: ಋಷಿ; ಉಪಚಾರ: ಸತ್ಕಾರ; ಬುದ್ಧಿ: ತಿಳುವಳಿಕೆ; ಒರೆ:ಸವರು; ಉರು: ಹೆಚ್ಚಾದ; ಉತ್ತರ: ಹೆಚ್ಚು, ಅಭಿವೃದ್ಧಿ; ಸಿದ್ಧಿ: ಕಾರ್ಯಸಫಲತೆ; ಫಲಿಸು: ದಕ್ಕು, ಪ್ರಕಟವಾಗು; ಸೂಚಿಸು: ತೋರಿಸು, ಹೇಳು; ಮರಳಿ: ಹಿಂತಿರುಗಿ; ಪುರಿ: ಊರು; ಗಮನ: ಹೋಗುವುದು, ನಡೆಗೆ; ಉದ್ಯೋಗ: ಕಾರ್ಯ; ಮನನ: ಮನಸ್ಸಿನಲ್ಲಿ ಮಾಡುವ ಚಿಂತನೆ;

ಪದವಿಂಗಡಣೆ:
ಹರಿ+ಒಲಿದು +ಮೈದಡವಿ+ಐವರ
ತರುಣಿಯನು+ ಸಂತೈಸಿ+ಆ+ ಮುನಿ
ವರರನ್+ಉಪಚರಿಸಿದನು+ ಬುದ್ಧಿಯನ್+ಒರೆದು +ಧರ್ಮಜಗೆ
ಉರುತರ್+ಉತ್ತರ +ಸಿದ್ಧಿ +ನಿಮಗಿ
ನ್ನಿಂದೆ +ಫಲಿಸುವದೆಂದು +ಸೂಚಿಸಿ
ಮರಳಿ +ತನ್ನಯ +ಪುರಿಗೆ +ಗಮನೋದ್ಯೋಗ +ಮನನಾದ

ಅಚ್ಚರಿ:
(೧) ಹೊರಡಲು ಯೋಚಿಸಿದ ಎಂದು ಹೇಳುವ ಪರಿ – ತನ್ನಯ ಪುರಿಗೆ ಗಮನೋದ್ಯೋಗ ಮನನಾದ