ಪದ್ಯ ೫: ಕರ್ಣನು ಕೋಪದಿಂದ ಏನೆಂದು ನುಡಿದನು?

ಇತ್ತ ದುಗುಡವ ಹಿಡಿದ ರಾಯನ
ಕೆತ್ತ ಮುಖವನು ಕಂಡು ಭಟರೆದೆ
ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ
ಇತ್ತ ನೋಡವನೀಶ ಸೈಂಧವ
ನೆತ್ತಲಿಹನತ್ತಲು ಮುರಾರಿಯ
ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ (ದ್ರೋಣ ಪರ್ವ, ೧೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕೌರವರ ಪಾಳಯದಲ್ಲಿ ದುಃಖಿಸುತ್ತಿದ್ದ ದುರ್ಯೋಧನನ ಮುಖ ವಿವರ್ಣವಾಗಿತ್ತು. ಅದನ್ನು ಕಂಡು ಕೌರವ ಸೈನ್ಯದ ವೀರರ ಎದೆಗಳಲ್ಲಿ ಕೋಪಾಗ್ನಿಯುಕ್ಕಿತು. ಮುಖ ಕಪ್ಪಿಟ್ಟವು. ಕರ್ಣನು ರಾಜಾ ಇತ್ತ ನೋಡು, ಸೈಂಧವನೆಲ್ಲಿರುವನೋ ಅಲ್ಲಿಗೆ ಕೃಷ್ಣನ ಆಶ್ರಿತರನ್ನು (ಪಾಂಡವರನ್ನಿ) ಕಳಿಸುತ್ತೇನೆ ಎಂದು ಕೋಪದಿಂದ ನುಡಿದನು.

ಅರ್ಥ:
ದುಗುಡ: ದುಃಖ; ಹಿಡಿ: ಗ್ರಹಿಸು; ರಾಯ: ರಾಜ; ಮುಖ: ಆನನ; ಕಂಡು: ನೋಡು; ಭಟ: ಸೈನಿಕ; ಹೊತ್ತು: ಹತ್ತಿಕೊಳ್ಳು, ಉರಿ; ಹೊಗೆ: ಧೂಮ; ತೋರು: ಗೋಚರಿಸು; ಮೋರೆ: ಮುಖ; ಪಟುಭಟ: ಶೂರನಾದ ಯೋಧ; ಅವನೀಶ: ರಾಜ; ಮುರಾರಿ: ಕೃಷ್ಣ; ತೆತ್ತು: ಮೋಸ; ಖಾತಿ: ಕೋಪ; ತೆತ್ತಿಗ: ನೆಂಟ, ಗೆಳೆಯ;

ಪದವಿಂಗಡಣೆ:
ಇತ್ತ +ದುಗುಡವ +ಹಿಡಿದ +ರಾಯನಕ್
ಎತ್ತ +ಮುಖವನು +ಕಂಡು +ಭಟರೆದೆ
ಹೊತ್ತಿದವು +ಹೊಗೆ+ತೋರಿದವು +ಮೋರೆಗಳು +ಪಟುಭಟರ
ಇತ್ತ +ನೋಡ್+ಅವನೀಶ +ಸೈಂಧವನ್
ಎತ್ತಲಿಹನ್+ಅತ್ತಲು +ಮುರಾರಿಯ
ತೆತ್ತಿಗರ +ಕಳುಹಿಸುವೆನೆಂದನು +ಖಾತಿಯಲಿ +ಕರ್ಣ

ಅಚ್ಚರಿ:
(೧) ಇತ್ತ, ಎತ್ತ – ೧,೨,೪, ೫ ಸಾಲಿನ ಮೊದಲ ಪದ
(೨) ಪಾಂಡವರು ಎಂದು ಹೇಳುವ ಪರಿ – ಮುರಾರಿಯ ತೆತ್ತಿಗರ

ಪದ್ಯ ೩೮: ಅರ್ಜುನನ ಮುಂದೆ ಯಾರು ಬಂದು ನಿಂತರು?

ವರ ಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸಿ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ (ದ್ರೋಣ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯುಧಾಮನ್ಯು ಉತ್ತಮೌಂಜಸರು ಅಕ್ಕ ಪಕ್ಕದಲ್ಲಿ ಬರುತ್ತಿರಲು ಶ್ರೀಕೃಷ್ಣನ ಅತಿಶಯ ಬೆಂಬಲದಿಂದ ಸಾಹಸಮಲ್ಲನಾದ ಅರ್ಜುನನು ಶತ್ರು ಸೈನ್ಯವನ್ನು ಕೆಣಕಿದನು. ಅರ್ಜುನನು ಬಂದುದನ್ನು ನೋಡಿ ದುಶ್ಯಾಸನನು ತನ್ನ ಸೇನೆಗೆ ಚೌರಿಯನ್ನು ಬೀಸಿ ಅರ್ಜುನನ ಮುಂದೆ ಬಂದು ನಿಂತನು.

ಅರ್ಥ:
ವರ: ಶ್ರೇಷ್ಠ; ಮುರಾರಿ: ಕೃಷ್ಣ; ಪರಮ: ಶ್ರೇಷ್ಠ; ಸಾಹಾಯ: ಬೆಂಬಲ; ಸಾಹಸ: ಪರಾಕ್ರಮ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅರಿ: ವೈರಿ; ಬಲ: ಶಕ್ತಿ; ಕೆಣಕು: ರೇಗಿಸು; ಬರವು: ಬರುವಿಕೆ; ಈಕ್ಷಿಸು: ನೋಡು; ಸೇನೆ: ಸೈನ್ಯ; ಬೆರಳು: ಅಂಗುಲಿ; ಚೌರಿ: ಚೌರಿಯ ಕೂದಲು, ಗಂಗಾವನ; ಬೀಸು: ಬೀಸುವಿಕೆ, ತೂಗುವಿಕೆ; ಮಾರಾಂತು: ಎದುರಾಗು;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಎರಡು +ಕಡೆಯಲಿ +ಬರೆ +ಮುರಾರಿಯ
ಪರಮ+ ಸಾಹಾಯ್ಯದಲಿ +ಸಾಹಸಮಲ್ಲನ್+ಉರವಣಿಸಿ
ಅರಿಬಲವ +ಕೆಣಕಿದನು +ಪಾರ್ಥನ
ಬರವನೀಕ್ಷಿಸಿ +ತನ್ನ +ಸೇನೆಗೆ
ಬೆರಳ +ಚೌರಿಯ +ಬೀಸಿ +ದುಶ್ಯಾಸನನು +ಮಾರಾಂತ

ಅಚ್ಚರಿ:
(೧) ವರ, ಪರಮ – ಸಾಮ್ಯಾರ್ಥ ಪದ

ಪದ್ಯ ೬೨: ದ್ರೋಣನು ಕೃಷ್ಣನ ಲೀಲೆಯನ್ನು ಹೇಗೆ ವಿವರಿಸಿದನು?

ಇದು ಮುರಾರಿಯ ಲೀಲೆಗೋಸುಗ
ಉದಯಿಸಿದ ಜಗವಿದರೊಳೊಬ್ಬನ
ಸದೆವನೊಬ್ಬನ ಹಿಡಿದು ಸಲಹುವನೊಬ್ಬನೊಬ್ಬನಲಿ
ಇದರೊಳಾತಂಗಿಲ್ಲ ಕರುಣಾ
ಸ್ಪದತೆ ನಿಷ್ಕಾರುಣ್ಯ ಭೂಯಂ
ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ (ದ್ರೋಣ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಈ ಜಗತ್ತು ಶ್ರೀಕೃಷ್ಣನ ಲೀಲಾ ವಿನೋದ. ಇದರಲ್ಲಿ ಒಬ್ಬನನ್ನು ಹಿಡಿದು ಕಾಪಾಡುತ್ತಾನೆ, ಒಬ್ಬನನ್ನು ಕೊಲ್ಲುತ್ತಾನೆ, ಕಾಪಾಡಿದವನ ಮೇಲೆ ಅವನಿಗೆ ಕರುಣೆಯಿಲ್ಲ, ಕೊಂದರೆ ಅವನು ನಿಷ್ಕರುಣಿಯಲ್ಲ ಭೂಯಂತ್ರದ ವಿನೋದವು ಅವನ ಲೀಲೆ ಎಂದು ದ್ರೋಣನು ಹೇಳಿದನು.

ಅರ್ಥ:
ಮುರಾರಿ: ಕೃಷ್ಣ; ಲೀಲೆ: ಕ್ರೀಡೆ; ಓಸುಗ: ಕಾರಣ; ಉದಯಿಸು: ಹುಟ್ಟು; ಜಗ: ಪ್ರಪಂಚ; ಸದೆ: ಸಾಯಿಸು; ಹಿಡಿ: ಗ್ರಹಿಸು; ಸಲಹು: ಕಾಪಾದು; ಕರುಣ: ದಯೆ; ಕಾರುಣ್ಯ: ದಯೆ; ಭೂ: ಭೂಮಿ; ಯಂತ್ರ: ಉಪಕರಣ; ವಿನೋದ: ತಮಾಷೆ, ಕ್ರೀಡೆ;

ಪದವಿಂಗಡಣೆ:
ಇದು+ ಮುರಾರಿಯ +ಲೀಲೆಗೋಸುಗ
ಉದಯಿಸಿದ+ ಜಗವ್+ಇದರೊಳ್+ಒಬ್ಬನ
ಸದೆವನ್+ಒಬ್ಬನ +ಹಿಡಿದು +ಸಲಹುವನ್+ಒಬ್ಬನ್+ಒಬ್ಬನಲಿ
ಇದರೊಳ್+ಆತಂಗಿಲ್ಲ+ ಕರುಣಾ
ಸ್ಪದತೆ +ನಿಷ್ಕಾರುಣ್ಯ +ಭೂಯಂ
ತ್ರದ+ ವಿನೋದಕ್ರೀಡೆ +ಕೃಷ್ಣನದ್+ಎಂದನಾ +ದ್ರೋಣ

ಅಚ್ಚರಿ:
(೧) ಜಗವು ಹುಟ್ಟಿದ ಕಾರಣ – ಇದು ಮುರಾರಿಯ ಲೀಲೆಗೋಸುಗಉದಯಿಸಿದ ಜಗವಿ; ಭೂಯಂ
ತ್ರದ ವಿನೋದಕ್ರೀಡೆ ಕೃಷ್ಣನದೆಂದನಾ ದ್ರೋಣ

ಪದ್ಯ ೬೪: ಕೃಷ್ಣನು ಅರ್ಜುನನು ಮರುಳಾದನೆಂದೇಕೆ ಹೇಳಿದನು?

ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ನನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ನಗುತ ಮುರಾರಿಯಿಂತೆಂದ (ದ್ರೋಣ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣಾ ಯುದ್ಧಮಾದುತ್ತಿರುವವನು ನೀನೇ, ವೈರಿಯು ಪ್ರಯೋಗಿಸಿದ ಆಯುಧವನ್ನು ನೀನೇ ಗೆದ್ದೆ, ಹಾಗಿರುವಾಗ ಇನ್ನು ಮುಂದೆ ನಾನು ಯುದ್ಧಮಾಡುವುದಿಲ್ಲ. ನನಗೆ ಸಾರಥಿತನವೇ ಸಾಕು. ಕೃಷ್ಣಾ ಈ ಆಯುಧಗಳನ್ನು ತೆಗೆದುಕೋ, ಕುದುರೆಯ ಲಗಾಮುಗಳನ್ನು ನನ್ನ ಕೈಗೆ ಕೊಡು ಎಂದು ಅರ್ಜುನನು ಹೇಳಲು, ಅರ್ಜುನನಿಗೆ ಹುಚ್ಚು ಹಿಡಿಯಿತು ಎಂದು ನಗುತ್ತಾ ಕೃಷ್ಣನು ಹೀಗೆ ನುಡಿದನು.

ಅರ್ಥ:
ಕಾದು: ಹೋರಾಟ, ಯುದ್ಧ; ವೈರಿ: ಶತ್ರು; ಕೈದು: ಆಯುಧ, ಶಸ್ತ್ರ; ಗೆಲಿದು: ಜಯಿಸು; ಉರೆ: ಅತಿಶಯವಾಗಿ; ಕಾದು:ಹೋರಾಟ, ಯುದ್ಧ; ಸಾರಥಿ: ಸೂತ; ಸಾಕು: ಇನ್ನು ಬೇಡ; ವಾಘೆ: ಲಗಾಮು; ತಾ: ಕೊಂಡು ಬಾ; ಮರುಳು: ಬುದ್ಧಿಭ್ರಮೆ; ನರ: ಅರ್ಜುನ; ನಗು: ಹರ್ಷ; ಮುರಾರಿ: ಕೃಷ್ಣ;

ಪದವಿಂಗಡಣೆ:
ಕಾದುವಾತನು +ನೀನು +ವೈರಿಯ
ಕೈದುವನು +ನೀ +ಗೆಲಿದೆ+ಇನ್ನುರೆ
ಕಾದುವವರಾವಲ್ಲ +ಸಾರಥಿತನವೆ+ ಸಾಕೆಮಗೆ
ಕೈದುವಿದೆಕೋ +ಕೃಷ್ಣ+ನೀನೇ
ಕಾದು +ವಾಘೆಯ +ತಾಯೆನಲು +ಮರು
ಳಾದನೈ +ನರನೆನುತ +ನಗುತ+ ಮುರಾರಿ+ಇಂತೆಂದ

ಅಚ್ಚರಿ:
(೧) ಕಾದು – ೧, ೩, ೫ ಪದ್ಯದ ಮೊದಲ ಪದ, ಕಾದು – ೨, ೪ ಮೊದಲ ಪದ
(೨) ಅರ್ಜುನನನ್ನು ಸ್ನೇಹದಲಿ ಮಾತನಾಡಿಸುವ ಪರಿ – ಮರುಳಾದನೈ ನರನೆನುತ ನಗುತ ಮುರಾರಿಯಿಂತೆಂದ

ಪದ್ಯ ೧೭: ದೇವತೆಗಳೇಕೆ ಕೋಪಗೊಂಡರು?

ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದ (ಭೀಷ್ಮ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶತ್ರುಗಳ ಬಾಣಪ್ರಯೋಗದಿಂದ ಅರ್ಜುನನ ರಥದ ಕುದುರೆಗಳು ಕಂಗೆಟ್ಟವು. ಶ್ರೀಕೃಷ್ಣನ ಹೃದಯವು ಬಡಿದುಕೊಂಡಿತು. ರಥದ ಗಾಲಿಗಳು ಅದುರಿದವು. ರಥದಲ್ಲಿದ್ದ ಹನುಮಮ್ತನು ಗಾಮ್ಭೀರ್ಯವನ್ನು ಕಳೆದುಕೊಂಡು ಒರಲಿದನು. ಪಾಂಡವರ ಪರಾಕ್ರಮ ಮುರಿದು ಪಾಂಡವ ನಾಯಕರು ಹೆದರಿದರು. ಯುದ್ಧವನ್ನು ನೋಡುತ್ತಿದ್ದ ದೇವತೆಗಳು ತಾವು ಅರ್ಜುನನ ಪಕ್ಷವನ್ನು ಹಿಡಿದುದು ವ್ಯರ್ಥವಾಯಿತೆಂದು ಮನಸ್ಸಿನಲ್ಲೇ ಕುದಿದರು.

ಅರ್ಥ:
ಕುದುರೆ: ಅಶ್ವ; ಕಂಗೆಡು: ಗಾಬರಿಯಾಗು; ಮುರಾರಿ: ಕೃಷ್ಣ; ಹೃದಯ: ಎದೆ; ಸಂಚಲ: ಚಲನೆ, ಚಾಂಚಲ್ಯ; ಗಾಲಿ: ಚಕ್ರ; ಉದುರು: ಕೆಳಗೆ ಬೀಳು; ಗರುವಾಯಿ: ದೊಡ್ಡತನ, ಠೀವಿ; ಕೆಡು: ಹಾಳು; ಹೆದರು: ಭಯಗೊಳ್ಳು; ನಾಯಕ: ಒಡೆಯ; ಅದಟು: ಪರಾಕ್ರಮ, ಶೌರ್ಯ; ಮುರಿ: ಸೀಳು; ಸುರ: ದೇವತೆ; ಚಿಂತಿಸು: ಯೋಚಿಸು; ಕುದಿ: ಕೋಪಗೊಳ್ಳು; ಪಕ್ಷ: ಗುಂಪು; ವ್ಯರ್ಥ: ನಿರುಪಯುಕ್ತತೆ;

ಪದವಿಂಗಡಣೆ:
ಕುದುರೆ +ಕಂಗೆಟ್ಟವು +ಮುರಾರಿಯ
ಹೃದಯ +ಸಂಚಲವಾಯ್ತು +ಗಾಲಿಗಳ್
ಅದುರಿದುವು+ ಗರುವಾಯಿಗೆಟ್ಟನು +ಮೇಲೆ +ಹನುಮಂತ
ಹೆದರಿದರು+ ನಾಯಕರು+ ಪಾಂಡವರ್
ಅದಟು +ಮುರಿದುದು +ಸುರರು+ ಚಿಂತಿಸಿ
ಕುದಿದರ್+ಅರ್ಜುನ+ಪಕ್ಷಪಾತ +ವ್ಯರ್ಥವಾಯ್ತೆಂದ

ಅಚ್ಚರಿ:
(೧) ಕಂಗೆಟ್ಟು, ಸಂಚಲ, ಅದುರು, ಹೆದರು, ಅದಟು, ಮುರಿ – ಆತಂಕವನ್ನು ವಿವರಿಸಲು ಬಳಸಿದ ಪದಗಳು

ಪದ್ಯ ೮೭: ಕೃಷ್ಣನ ವಿಶ್ವರೂಪದಲ್ಲಿದ್ದ ಜಗಗಳೆಷ್ಟು?

ಅಣಲೋಳಷ್ಪಾದಶ ಮಹಾಕ್ಷೋ
ಹಿಣಿಗಳಡಗಿದವೆಂಬುದಿದು ಭೂ
ಷಣವೆ ಜೀಯ ಮುರಾರಿ ನಿನ್ನಯ ರೋಮಕೂಪದಲಿ
ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳ
ನೆಣಿಸಬಲ್ಲವರಾರು ಸಾಕಿನ್ನೆನ್ನ ಸಲಹೆಂದ (ಭೀಷ್ಮ ಪರ್ವ, ೩ ಸಂಧಿ, ೮೭ ಪದ್ಯ)

ತಾತ್ಪರ್ಯ:
ಹದಿನೆಂಟು ಅಕ್ಷೋಹಿಣೀ ಸೈನ್ಯವು ನಿನ್ನ ಬಾಯಲ್ಲಿ ಅಡಗಿದವು. ಇದೇನೂ ನಿನ್ನ ಹಿರಿಮೆಯಲ್ಲ, ನಿನ್ನ ರೋಮಕೂಪಗಳಲ್ಲಿ ಲೆಕ್ಕವಿಲ್ಲದಷ್ಟು ಬ್ರಹ್ಮ ರುದ್ರರ ಗುಂಪುಗಳಿವೆ. ನಿನ್ನ ಜಠರದಲ್ಲಿರುವ ವಿಶ್ವಗಳೇಷ್ಟು ಎನ್ನುವುದೆನ್ನೆಣಿಸಲು ಯಾರಿಗೆ ಸಾಧ್ಯ? ಇನ್ನು ಈ ವಿಶ್ವರೂಪವನ್ನು ಬಿಟ್ಟು ನನ್ನನ್ನು ಕಾಪಾಡು ಎಂದು ಬೇಡಿದನು.

ಅರ್ಥ:
ಅಣಲು: ಬಾಯಿಯ ಒಳಭಾಗ; ಅಷ್ಟಾದಶ: ಹದಿನೆಂಟು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಅಡಗು: ಅವಿತುಕೊಳ್ಳು; ಭೂಷಣ: ಅಲಂಕರಿಸುವುದು; ಜೀಯ: ಒಡೆಯ; ಮುರಾರಿ: ಕೃಷ್ಣ; ರೋಮ: ಕೂದಲು; ಕೂಪ: ಬಾವಿ; ಗಣನೆ: ಎಣಿಕೆ; ರುದ್ರ: ಶಿವನ ಗಣ; ಸುರ: ದೇವತೆ; ಸಂದಣಿ: ಗುಂಪು; ಜಠರ: ಹೊಟ್ಟೆ; ಜಗ: ಜಗತ್ತು; ಎಣಿಸು: ಲೆಕ್ಕಮಾಡು; ಬಲ್ಲವ: ತಿಳಿದವ; ಸಾಕು: ನಿಲ್ಲಿಸು; ಸಲಹು: ಕಾಪಾಡು;

ಪದವಿಂಗಡಣೆ:
ಅಣಲೊಳ್+ಅಷ್ಪಾದಶ+ ಮಹ+ಅಕ್ಷೋ
ಹಿಣಿಗಳ್+ಅಡಗಿದವ್+ಎಂಬುದ್+ಇದು+ ಭೂ
ಷಣವೆ +ಜೀಯ +ಮುರಾರಿ+ ನಿನ್ನಯ +ರೋಮ+ಕೂಪದಲಿ
ಗಣನೆಗೆಟ್ಟಜ+ ರುದ್ರ+ಸುರ+ಸಂ
ದಣಿಗಳಿವೆ +ಜಠರದ +ಜಗಂಗಳನ್
ಎಣಿಸಬಲ್ಲವರಾರು +ಸಾಕಿನ್+ಎನ್ನ +ಸಲಹೆಂದ

ಅಚ್ಚರಿ:
(೧) ವಿಶ್ವರೂಪದ ವಿವರಣೆ – ನಿನ್ನಯ ರೋಮಕೂಪದಲಿ ಗಣನೆಗೆಟ್ಟಜರುದ್ರಸುರಸಂ
ದಣಿಗಳಿವೆ ಜಠರದ ಜಗಂಗಳನೆಣಿಸಬಲ್ಲವರಾರು

ಪದ್ಯ ೮೧: ಕೃಷ್ಣನನ್ನು ಅರ್ಜುನನು ಹೇಗೆ ಹೊಗಳಿದನು?

ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯಪಾವಕ ಭಕ್ತವತ್ಸಲ ಭಕ್ತಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಿಕ ಕೃಷ್ಣ ಕೇಶವ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ಕಮಲನಾಭ, ಮುಕುಂದ ಮಂಗಳಗಳ ಆವಾಸಸ್ಥಾನವೇ, ಭಕ್ತರೊಡನಾಡುವ ಚಿಂತೆಯುಳ್ಳವನೇ, ರಾಕ್ಷಸರಿಗೆ ಪ್ರಳಯಾಗ್ನಿಯಂತಿರುವವನೇ, ಭಕ್ತವತ್ಸಲ, ಭಕ್ತರಿಗೆ ಕಾಮಧೇನುವಿನಂತಿರುವವನೇ, ಸುಂದರನಾದ ಮೇಘಶ್ಯಾಮನೇ, ಸೇವಕರಿಗೆ ಸುಲಭನಾಗಿರುವವನೇ, ಶೌರಿ, ಮುರಾರಿ, ಭಕ್ತ ಕುಟುಂಬಿ, ಕೃಷ್ಣ, ಕೇಶವ ನನ್ನಲ್ಲಿ ಕರುಣೆ ತೋರು ಎಂದು ಕೃಷ್ಣನನ್ನು ಹೊಗಳಿದನು.

ಅರ್ಥ:
ನಳಿನನಾಭ: ಹೊಕ್ಕಳಲ್ಲಿ ಕಮಲವನ್ನಿಟ್ಟುಕೊಂಡಿರುವವನೇ; ಮಂಗಳ: ಶುಭ; ನಿಳಯ: ಆಲಯ; ಭಕ್ತ: ಆರಾಧಕ; ವ್ಯಸನಿ: ತಲ್ಲೀನ; ದೈತ್ಯ: ರಾಕ್ಷಸ; ಪ್ರಳಯ: ಸಾವು, ಮರಣ; ಪಾವಕ: ಅಗ್ನಿ, ಬೆಂಕಿ; ವತ್ಸಲ: ಪ್ರೀತಿಸುವ; ಸುರಧೇನು: ಕಾಮಧೇನು; ಲಲಿತ: ಸುಂದರವಾದ; ಮೇಘ: ಮೋಡ; ಶ್ಯಾಮ: ಕಪ್ಪು; ಸೇವಕ: ದಾಸ; ಸುಲಭ: ನಿರಾಯಾಸ; ಆವಳಿ: ಗುಂಪು, ಸಾಲು; ಕುಟುಂಬಿ: ಮನೆಯ ಯಜಮಾನ; ಕರುಣಿಸು: ದಯೆತೋರು;

ಪದವಿಂಗಡಣೆ:
ನಳಿನನಾಭ +ಮುಕುಂದ +ಮಂಗಳ
ನಿಳಯ +ಭಕ್ತವ್ಯಸನಿ +ದೈತ್ಯ
ಪ್ರಳಯಪಾವಕ +ಭಕ್ತವತ್ಸಲ+ ಭಕ್ತ+ಸುರಧೇನು
ಲಲಿತ+ಮೇಘಶ್ಯಾಮ +ಸೇವಕ
ಸುಲಭ +ಶೌರಿ +ಮುರಾರಿ +ಭಕ್ತಾ
ವಳಿ +ಕುಟುಂಬಿಕ +ಕೃಷ್ಣ +ಕೇಶವ+ ಕರುಣಿಸೆನಗೆಂದ

ಅಚ್ಚರಿ:
(೧) ಕ ಕಾರದ ಸಾಲು ಪದ – ಕುಟುಂಬಿಕ ಕೃಷ್ಣ ಕೇಶವ ಕರುಣಿಸೆನಗೆಂದ
(೨) ಕೃಷ್ಣನನ್ನು ವರ್ಣಿಸಿದ ಪರಿ – ನಳಿನನಾಭ ಮುಕುಂದ ಮಂಗಳ ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯಪಾವಕ ಭಕ್ತವತ್ಸಲ ಭಕ್ತಸುರಧೇನು

ಪದ್ಯ ೩೦: ಕೃಷ್ಣನ ಬಗ್ಗೆ ಅರ್ಜುನನು ಏನೆಂದು ಯೋಚಿಸಿದನು?

ಇದಿರುಗಾಣದೆ ಕೊಲೆಗೆ ನಿರ್ಬಂ
ಧದಲಿ ಬೆಸಸುವ ಕೃಷ್ಣನಕಟಾ
ಮದಮುಖನೊ ದುರ್ಬೋಧಕನೊ ವಂಚಕನೊ ಘಾತಕನೊ
ಯದುಗಳನ್ವಯದೊಳಗೆ ಕರುಣಾ
ಸ್ಪದರು ಜನಿಸರಲಾ ಮುರಾರಿಯ
ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ (ಭೀಷ್ಮ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅರ್ಜುನನು ಅಯ್ಯೋ ಕೃಷ್ಣನು ಯುದ್ಧಮಾಡೆಂದು ನಿರ್ಬಂಧಿಸುತ್ತಿದ್ದಾನೆ, ಇವನು ಮದೋನ್ಮತ್ತನೋ, ದುರ್ಬೋಧೆ ಮಾಡುವವನೋ, ವಂಚಕನೋ, ಘಾತಕನೋ, ಮನಸ್ಸಿನಲ್ಲಿ ಕರುಣೆಗೆ ಜಾಗಕೊಡುವರು ಯದುವಂಶದಲ್ಲಿ ಹುಟ್ಟುವುದಿಲ್ಲವಷೇ, ಕೃಷ್ಣನ ಹೃದಯ ಕಠೋರವಾದುದು ಎಂದು ಯೋಚಿಸಿದನು.

ಅರ್ಥ:
ಇದಿರು: ಎದುರು; ಕಾಣು: ತೋರು; ಕೊಲೆ: ಸಾಯಿಸು; ನಿರ್ಬಂಧ: ಮೊಂಡುತನ, ಹಠ; ಬೆಸಸು: ಹೇಳು, ಆಜ್ಞಾಪಿಸು; ಅಕಟಾ: ಅಯ್ಯೋ; ಮದಮುಖ: ಮತ್ತರಾದವರಲ್ಲಿ ಮುಖ್ಯನಾದವನು; ದುರ್ಬೋಧಕ: ಕೆಟ್ಟ ಶಿಕ್ಷಕ; ವಂಚಕ: ಮೋಸ; ಘಾತಕ: ಕೊಲೆಗೆಡುಕ; ಅನ್ವಯ: ವಂಶ; ಕರುಣ: ದಯೆ; ಆಸ್ಪದ: ನೆಲೆ, ಅಶ್ರಯ; ಜನಿಸು: ಹುಟ್ಟು; ಮುರಾರಿ: ಕೃಷ್ಣ; ಹೃದಯ: ಎದೆ; ಬೆಟ್ಟಿತು: ಕಠಿಣವಾದದು; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಇದಿರು+ಕಾಣದೆ +ಕೊಲೆಗೆ +ನಿರ್ಬಂ
ಧದಲಿ +ಬೆಸಸುವ +ಕೃಷ್ಣನ್+ಅಕಟಾ
ಮದಮುಖನೊ+ ದುರ್ಬೋಧಕನೊ+ ವಂಚಕನೊ+ ಘಾತಕನೊ
ಯದುಗಳ್+ಅನ್ವಯದೊಳಗೆ+ ಕರುಣಾ
ಸ್ಪದರು +ಜನಿಸರಲಾ +ಮುರಾರಿಯ
ಹೃದಯ +ಬೆಟ್ಟಿತೆನುತ್ತ+ ಫಲುಗುಣ +ತೂಗಿದನು +ಶಿರವ

ಅಚ್ಚರಿ:
(೧) ಕೃಷ್ಣನನ್ನು ಕಠೋರನೆಂದು ಕರೆದ ಪರಿ – ಯದುಗಳನ್ವಯದೊಳಗೆ ಕರುಣಾಸ್ಪದರು ಜನಿಸರಲಾ ಮುರಾರಿಯ ಹೃದಯ ಬೆಟ್ಟಿತೆನುತ್ತ ಫಲುಗುಣ ತೂಗಿದನು ಶಿರವ
(೨) ಕೃಷ್ಣನನ್ನು ಕರೆದ ಪರಿ – ಮದಮುಖನೊ, ದುರ್ಬೋಧಕನೊ, ವಂಚಕನೊ, ಘಾತಕನೊ

ಪದ್ಯ ೨೦: ಯಾರಿಗೆ ಯುದ್ಧದ ಅಂತ್ಯ ತಿಳಿದಿದೆ?

ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ (ಭೀಷ್ಮ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗು ದುರ್ಯೋಧನ ದುರಂತದ ಕೆಟ್ಟ ಕೂಗು ಕಾದಿದೆ, ಅದನ್ನು ನಾನು ವರ್ಣಿಸಲಾರೆನು. ಯುದ್ಧಾಂತ್ಯದಲ್ಲಿ ತಿಳಿಯುತ್ತದೆ, ಇಲ್ಲಿರುವ ಸಾಮಂತರು, ನಾಯಕರು ಈ ಯುದ್ಧದ ಹೊಡೆತವನ್ನು ತಡೆಯಲಾರರು. ಕೊನೆಗೆ ಯಾರಿಗೆ ಅಭ್ಯುದಯವಾಗಬಹುದು ನಮಗೋ ಪಾಂಡವರಿಗೋ ನನಗೇಕೆ ಈ ಚಿಂತೆ, ಕೃಷ್ಣನೇ ಇದನ್ನು ಬಲ್ಲ ಮಗು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ದುರಂತ: ದುಃಖಾಂತ; ದುರುಳ: ದುಷ್ಟ; ದೊದ್ದೆ: ಗುಂಪು, ಸಮೂಹ; ಹದ: ಸ್ಥಿತಿ; ಬಣ್ಣಿಸು: ವಿವರಿಸು; ನೂಕು: ತಳ್ಳು; ತುದಿ: ಕೊನೆ; ಅರಿ: ತಿಳಿ; ದಳ: ಸೈನ್ಯ; ಮನ್ನೆಯ: ಮೆಚ್ಚಿನ, ಮೌನ್ಯ; ಮಂಡಲೀಕ: ಸಣ್ಣ ಪ್ರಾಂತ್ಯದ ಒಡೆಯ; ಕದನ: ಯುದ್ಧ; ಭಾರಂಕ: ಮಹಾಯುದ್ಧ; ಅಭ್ಯುದಯ: ಏಳಿಗೆ; ತಲೆದೋರು: ಕಾಣಿಸಿಕೋ; ಚಿಂತೆ: ಯೋಚನೆ; ಮುರಾರಿ: ಕೃಷ್ಣ; ಬಲ್ಲ: ತಿಳಿ; ಕಂದ: ಮಗು; ಕೇಳು: ಆಲಿಸು;

ಪದವಿಂಗಡಣೆ:
ಅದೆ +ದುರಂತದ+ ದುರುಳ +ದೊದ್ದೆಯ
ಹದನ +ಬಣ್ಣಿಸಲೆನಗೆ+ ನೂಕದು
ತುದಿಯಲ್+ಅರಿವೆನು +ದಳದ +ಮನ್ನೆಯ +ಮಂಡಲೀಕರಲಿ
ಕದನವಿದು +ಭಾರಂಕವ್+ಆರ್
ಅಭ್ಯುದಯ +ತಲೆದೋರುವುದೊ +ನಮಗೇ
ಕಿದರ+ ಚಿಂತೆ +ಮುರಾರಿ +ಬಲ್ಲನು +ಕಂದ +ಕೇಳೆಂದ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದುರಂತದ ದುರುಳ ದೊದ್ದೆಯ

ಪದ್ಯ ೩೦: ಕೃಷ್ಣನಿಗೆ ದೂತರು ಏನನ್ನು ನೀಡಿದರು?

ಬರವ ಬಿನ್ನಹ ಮಾಡಿ ಪಡಿ
ಹಾರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಒರೆಯಲಿಳುಹಿದರವರು ಕಳುಹಿದ ಬಿನ್ನವತ್ತಳೆಯ (ವಿರಾಟ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಾವಲಿನವರು ಪಾಂಡವ ದೂತರು ಬಂದ ವಿಷಯವನ್ನು ತಿಳಿಸಿದರು. ಶ್ರೀಕೃಷ್ಣನ ಅಪ್ಪಣೆಯಂತೆ ಅವರನ್ನು ಆಸ್ಥಾನಕ್ಕೆ ಕರೆತಂದರು. ಪಾಂಡವರ ದೂತರು ಶ್ರೀಕೃಷ್ಣನಿಗೆ ನಮಸ್ಕರಿಸಿ ಪಾಂಡವರ ಓಲೆಯನ್ನು ನೀಡಿದರು.

ಅರ್ಥ:
ಬರವ: ಆಗಮಿಸು; ಬಿನ್ನಹ: ಕೋರಿಕೆ; ಪಡಿಹಾರ: ಬಾಗಿಲು ಕಾಯುವವ; ಮುರಾರಿ: ಕೃಷ್ಣ; ನೇಮ: ನಿಯಮ; ಚಾರರು: ದೂತರು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಬಂದು: ಆಗಮಿಸು; ಹೊಕ್ಕು: ಸೇರು; ಓಲಗ: ದರ್ಬಾರು; ದರುಶನ: ನೋಟ; ಚರಣಾಂಬುರುಹ: ಪಾದ ಪದ್ಮ; ಅಂಬುರುಹ: ಕಮಲ; ಮೈಯಿಕ್ಕು: ನಮಸ್ಕರಿಸು; ದೇವ: ಭಗವಂತ; ಹೊರೆ: ರಕ್ಷಣೆ, ಆಶ್ರಯ; ಇಳುಹು: ಕೆಳಕ್ಕೆ ಬಾ; ಬಿನ್ನವತ್ತಳೆ: ಮನವಿ ಪತ್ರ;

ಪದವಿಂಗಡಣೆ:
ಬರವ +ಬಿನ್ನಹ +ಮಾಡಿ +ಪಡಿ
ಹಾರರು +ಮುರಾರಿಯ +ನೇಮದಲಿ +ಚಾ
ರರನು+ ಹೊಗಿಸಲು+ ಬಂದು +ಹೊಕ್ಕರು +ಕೃಷ್ಣನ್+ಓಲಗವ
ದರುಶನವ+ ಮಾಡುತ್ತ+ ಚರಣಾಂ
ಬುರುಹದಲಿ +ಮೈಯಿಕ್ಕಿ +ದೇವನ
ಒರೆಯಲ್+ಇಳುಹಿದರ್+ಅವರು +ಕಳುಹಿದ+ ಬಿನ್ನವತ್ತಳೆಯ

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಚರಣಾಂಬುರುಹದಲಿ ಮೈಯಿಕ್ಕಿ
(೨) ಪ ವರ್ಗದ ಪದಗಳ ಬಳಕೆ – ಬರವ ಬಿನ್ನಹ ಮಾಡಿ ಪಡಿಹಾರರು ಮುರಾರಿಯ