ಪದ್ಯ ೧೭: ದೇವತೆಗಳೇಕೆ ಕೋಪಗೊಂಡರು?

ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದ (ಭೀಷ್ಮ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶತ್ರುಗಳ ಬಾಣಪ್ರಯೋಗದಿಂದ ಅರ್ಜುನನ ರಥದ ಕುದುರೆಗಳು ಕಂಗೆಟ್ಟವು. ಶ್ರೀಕೃಷ್ಣನ ಹೃದಯವು ಬಡಿದುಕೊಂಡಿತು. ರಥದ ಗಾಲಿಗಳು ಅದುರಿದವು. ರಥದಲ್ಲಿದ್ದ ಹನುಮಮ್ತನು ಗಾಮ್ಭೀರ್ಯವನ್ನು ಕಳೆದುಕೊಂಡು ಒರಲಿದನು. ಪಾಂಡವರ ಪರಾಕ್ರಮ ಮುರಿದು ಪಾಂಡವ ನಾಯಕರು ಹೆದರಿದರು. ಯುದ್ಧವನ್ನು ನೋಡುತ್ತಿದ್ದ ದೇವತೆಗಳು ತಾವು ಅರ್ಜುನನ ಪಕ್ಷವನ್ನು ಹಿಡಿದುದು ವ್ಯರ್ಥವಾಯಿತೆಂದು ಮನಸ್ಸಿನಲ್ಲೇ ಕುದಿದರು.

ಅರ್ಥ:
ಕುದುರೆ: ಅಶ್ವ; ಕಂಗೆಡು: ಗಾಬರಿಯಾಗು; ಮುರಾರಿ: ಕೃಷ್ಣ; ಹೃದಯ: ಎದೆ; ಸಂಚಲ: ಚಲನೆ, ಚಾಂಚಲ್ಯ; ಗಾಲಿ: ಚಕ್ರ; ಉದುರು: ಕೆಳಗೆ ಬೀಳು; ಗರುವಾಯಿ: ದೊಡ್ಡತನ, ಠೀವಿ; ಕೆಡು: ಹಾಳು; ಹೆದರು: ಭಯಗೊಳ್ಳು; ನಾಯಕ: ಒಡೆಯ; ಅದಟು: ಪರಾಕ್ರಮ, ಶೌರ್ಯ; ಮುರಿ: ಸೀಳು; ಸುರ: ದೇವತೆ; ಚಿಂತಿಸು: ಯೋಚಿಸು; ಕುದಿ: ಕೋಪಗೊಳ್ಳು; ಪಕ್ಷ: ಗುಂಪು; ವ್ಯರ್ಥ: ನಿರುಪಯುಕ್ತತೆ;

ಪದವಿಂಗಡಣೆ:
ಕುದುರೆ +ಕಂಗೆಟ್ಟವು +ಮುರಾರಿಯ
ಹೃದಯ +ಸಂಚಲವಾಯ್ತು +ಗಾಲಿಗಳ್
ಅದುರಿದುವು+ ಗರುವಾಯಿಗೆಟ್ಟನು +ಮೇಲೆ +ಹನುಮಂತ
ಹೆದರಿದರು+ ನಾಯಕರು+ ಪಾಂಡವರ್
ಅದಟು +ಮುರಿದುದು +ಸುರರು+ ಚಿಂತಿಸಿ
ಕುದಿದರ್+ಅರ್ಜುನ+ಪಕ್ಷಪಾತ +ವ್ಯರ್ಥವಾಯ್ತೆಂದ

ಅಚ್ಚರಿ:
(೧) ಕಂಗೆಟ್ಟು, ಸಂಚಲ, ಅದುರು, ಹೆದರು, ಅದಟು, ಮುರಿ – ಆತಂಕವನ್ನು ವಿವರಿಸಲು ಬಳಸಿದ ಪದಗಳು

ಪದ್ಯ ೨೧: ಹನುಮಂತ ಕರ್ಣನ ಗುಣಗಾನವನ್ನು ಹೇಗೆ ಮಾಡಿದ?

ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ (ಕರ್ಣ ಪರ್ವ, ೨೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಪರಮತೇಜಃಪುಂಜವೊಂದು ಕರ್ಣನ ದೇಹದಿಂದ ಹೊರಟು ಮೇಲಕ್ಕೆ ಹಾರಿ ಸೂರ್ಯಮಂಡಲದ ಮಧ್ಯವನ್ನು ಪ್ರವೇಶಿಸಿತು. ಇದನ್ನು ನೋಡುತ್ತಿದ್ದ ಆಂಜನೇಯನು, ಭಲೇ ಕರ್ಣ ಭಲೇ ಪರಾಕ್ರಮಿಗಳಲ್ಲಿ ಅಗ್ರಗಣ್ಯನಾದ ನಿನಗೆ ಸರಿಸಮಾನರಾದವರನ್ನು ನಾನು ಎರಡು ಯುಗಗಳಲ್ಲಿ ಕಾಣಲಿಲ್ಲ ಎಂದು ದುಃಖಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒಡಲು: ದೇಹ; ಪರಮ: ಶ್ರೇಷ್ಠ; ತೇಜ: ಹೊಳಪು, ಕಾಂತಿ; ಪುಂಜ: ಸಮೂಹ, ಗುಂಪು; ಒದೆ: ತಳ್ಳು; ಉಪ್ಪರ: ಎತ್ತರ; ಹಾಯ್ದು: ಹಾರು; ಹೊಳೆ: ಪ್ರಕಾಶಿಸು; ದಿನಮಂಡಲ: ಸೂರ್ಯಮಂಡಲ; ಮಧ್ಯ: ನಡುವೆ; ಅರರೆ: ಓಹೋ; ಭಾಪುರೆ: ಭೇಷ್; ಮಝ: ಭಲೇ; ಭಟಾಗ್ರಣಿ: ಪರಾಕ್ರಮಿ, ಭಟರಲ್ಲಿ ಅಗ್ರಗಣ್ಯ; ಸರಿದೊರೆ: ಸಮಾನರು; ಯುಗ: ಕಾಲದ ಪ್ರಮಾಣ; ಕಾಣು: ತೋರು; ಅಳಲು: ದುಃಖಿಸು;

ಪದವಿಂಗಡಣೆ:
ಅರಸ+ ಕೇಳೈ +ಕರ್ಣನ್+ಒಡಲಲಿ
ಪರಮ+ತೇಜಃಪುಂಜವ್+ಒದೆದ್
ಉಪ್ಪರಿಸಿ +ಹಾಯ್ದುದು +ಹೊಳೆದು+ ದಿನಮಂಡಲದ+ ಮಧ್ಯದಲಿ
ಅರರೆ+ ಭಾಪುರೆ+ ಕರ್ಣ +ಮಝ +ಭಾ
ಪುರೆ +ಭಟಾಗ್ರಣಿ+ ನಿನ್ನ+ ಸರಿದೊರೆ
ಎರಡು +ಯುಗದಲಿ +ಕಾಣೆನೆಂದ್+ಅಳಲಿದನು +ಹನುಮಂತ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪದಗಳು – ಭಾಪುರೆ, ಮಝ, ಭಟಾಗ್ರಣಿ

ಪದ್ಯ ೫೬: ಹನುಮನು ಕರ್ಣನನ್ನು ಹೇಗೆ ಹೊಗಳಿದನು?

ಪೂತು ಮಝರೇ ಕರ್ಣ ವಿಶಿಖ
ವ್ರಾತವೊಂದಿನಿತಿಲ್ಲ ಲಂಕೆಯ
ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ
ಈತನತಿಶಯಬಾಣರಚನಾ
ಜಾತಿಯಿದು ಭೀಷ್ಮಾದಿಸುಭಟ
ವ್ರಾತಕೆಲ್ಲಿಯದೆಂದು ತಲೆದೂಗಿದನು ಹನುಮಂತ (ಕರ್ಣ ಪರ್ವ, ೨೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹನುಮಂತನು ಕರ್ಣನ ಬಿಲ್ಲುಪ್ರಯೋಗದ ಪ್ರವೀಣತೆಯನ್ನು ಕಂಡು, ಭಲೇ ಕರ್ಣ, ನಿನ್ನ ಬಾಣಪ್ರಯೋಗಕ್ಕೆ ಸರಿಯಾದುದು ಇಲ್ಲವೇ ಇಲ್ಲ. ಇಂತಹ ಬಾಣ ಪ್ರಯೋಗವನ್ನು ಲಂಕೆಯ ರಾಕ್ಷಸರಲ್ಲಿ ನೋಡಿದ್ದೆ, ಇವನ ಬಾಣರಚನಾ ಕೌಶಲ್ಯವು ಭೀಷ್ಮಾದಿ ವೀರರಿಗೆ ಎಲ್ಲಿಂದ ಬರಬೇಕು ಎಂದು ಹನುಮನು ಕರ್ಣನನ್ನು ಹೊಗಳಿದನು.

ಅರ್ಥ:
ಪೂತು: ಭಲೇ; ಮಝ: ಭೇಷ್; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಇನಿತು: ಇಷ್ಟು; ಘಾತಕ: ದುಷ್ಟ; ಚಾಪ: ಬಿಲ್ಲು; ಕಂಡು: ನೋಡು; ಚಾಪತಂತ್ರ: ಬಿಲ್ಲುವಿದ್ಯೆಯ ಪ್ರಯೋಗ; ಅತಿಶಯ: ಶ್ರೇಷ್ಠ; ಬಾಣ: ಶರ; ರಚನೆ: ನಿರ್ಮಾಣ, ಸೃಷ್ಟಿ; ಜಾತಿ: ವಂಶ; ಸುಭಟ: ಶ್ರೇಷ್ಠ ಸೈನಿಕ; ವ್ರಾತ: ಗುಂಪು; ತಲೆ: ಶಿರ; ತೂಗು: ತೂಗಾಡಿಸು; ಹನುಮಂತ: ಆಂಜನೇಯ;

ಪದವಿಂಗಡಣೆ:
ಪೂತು +ಮಝರೇ +ಕರ್ಣ +ವಿಶಿಖ
ವ್ರಾತ+ಒಂದಿನಿತಿಲ್ಲ+ ಲಂಕೆಯ
ಘಾತಕರ +ಚಾಪಳವ+ ಕಂಡೆನು +ಚಾಪ+ತಂತ್ರದಲಿ
ಈತನ್+ಅತಿಶಯ+ಬಾಣ+ರಚನಾ
ಜಾತಿಯಿದು +ಭೀಷ್ಮಾದಿ+ಸುಭಟ
ವ್ರಾತಕ್+ಎಲ್ಲಿಯದೆಂದು +ತಲೆದೂಗಿದನು +ಹನುಮಂತ

ಅಚ್ಚರಿ:
(೧) ಪೂತು, ಮಝರೇ – ಹೊಗಳುವ ನುಡಿ
(೨) ಕರ್ಣನನ್ನು ಹೋಲಿಸುವ ಪರಿ – ಲಂಕೆಯ ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ

ಪದ್ಯ ೭೯: ಯಾವುದನ್ನು ಒಳಗೂಡಿಸಿಕೊಂಡರೆ ಅದು ಉತ್ತಮ ಜೀವನ?

ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲಹು ಹನುಮಾನುವಿನ ಭುಜಬಲ ವೀರರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೯ ಪದ್ಯ)

ತಾತ್ಪರ್ಯ:
ಉತ್ತಮರಾಗಲು ಯಾವ ಗುಣವನ್ನು ಅನುಸರಿಸಬೇಕೆಂದು ಇಲ್ಲಿ ಹೇಳಲಾಗಿದೆ. ಬಲಿ ಚಕ್ರವರ್ತಿಯ ರಾಜ್ಯ, ವಿಭೀಷಣನ ಐಶ್ವರ್ಯ, ಸಮುದ್ರದ ಗಾಂಭೀರ್ಯ, ಬಾಣನ ಶೌರ್ಯ, ಹನುಮಂತನ ಬಾಹುಬಲ, ರಾಮನ ಛಲ, ದಧೀಚಿಯ ದಾನದ ಗುಣ, ಪಾರ್ಥನ ಸ್ನೇಹದ ಗುಣ, ಯುಧಿಷ್ಠಿರನ ಸಹನೆ ಈ ಗುಣಗಳನ್ನು ಹೊಂದಿಸಿಕೊಳ್ಳುವವನೇ ಉತ್ತಮ ಖ್ಯಾತಿಯನ್ನು ಹೊಂದುತ್ತಾನೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಬಲಿ: ಚಕ್ರವರ್ತಿಯ ಹೆಸರು; ರಾಜ್ಯ: ರಾಷ್ಟ್ರ, ದೇಶ; ಸಿರಿ: ಸಂಪತ್ತು, ಐಶ್ವರ್ಯ; ಜಲನಿಧಿ: ಸಮುದ್ರ; ಗಾಂಭೀರ್ಯ: ಆಳ, ಘನತೆ; ಬಾಣ: ಬಲೀಂದ್ರನ ಮಗ; ಬಲುಹು: ಬಲ, ಶಕ್ತಿ; ಭುಜಬಲ: ತೋಳ್ಬಲ, ಶಕ್ತಿ; ವೀರ: ಕಲಿ, ಶೂರ; ರಾಘವ: ರಾಮ; ಛಲ: ದೃಢ ನಿಶ್ಚಯ; ದಾನ: ನೀಡು; ಕೆಳೆ: ಸ್ನೇಹ, ಗೆಳೆತನ; ನೃಪ: ರಾಜ; ಸೈರಣೆ: ತಾಳ್ಮೆ, ಸಹನೆ; ಅಳವಡು: ಹೊಂದು, ಸೇರು, ಕೂಡು; ಬದುಕು: ಜೀವಿಸು; ವಿಖ್ಯಾತಿ: ಪ್ರಸಿದ್ಧ; ಕೇಳು: ಆಲಿಸು;

ಪದವಿಂಗಡಣೆ:
ಬಲಿಯ +ರಾಜ್ಯ +ವಿಭೀಷಣನ +ಸಿರಿ
ಜಲನಿಧಿಯ +ಗಾಂಭೀರ್ಯ +ಬಾಣನ
ಬಲಹು +ಹನುಮಾನುವಿನ+ ಭುಜಬಲ+ ವೀರ+ರಾಘವನ
ಛಲ +ದಧೀಚಿಯ +ದಾನ +ಪಾರ್ಥನ
ಕೆಳೆ+ ಯುಧಿಷ್ಠಿರ +ನೃಪನ +ಸೈರಣೆಗ್
ಅಳವಡುವ +ಬದುಕುಳ್ಳಡ್+ಅದು +ವಿಖ್ಯಾತಿ +ಕೇಳೆಂದ

ಅಚ್ಚರಿ:
(೧) ಬಲಿ, ವಿಭೀಷಣ, ಜಲನಿಧಿ, ಬಾಣ, ಹನುಮಂತ, ರಾಮ, ದಧೀಚಿ, ಪಾರ್ಥ, ಯುಧಿಷ್ಠಿರ – ೯ ಗುಣಗಳನ್ನು ಉಪಮಾನದ ಮೂಲಕ ತಿಳಿಸುವ ಪದ್ಯ