ಪದ್ಯ ೨೫: ಅರ್ಜುನನಿಗೆ ಯಾರು ಧೈರ್ಯ ತುಂಬಿದರು?

ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ (ದ್ರೋಣ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನಿಗೆ, ಇತ್ತ ಸೂರ್ಯ ಕಿರಣಗಳು ಕೆಂಪಾದವು. ಈ ಸೈನ್ಯದ ದಟ್ಟಣೆಯಲ್ಲಿ ಸೈಂಧವನೆಲ್ಲಿರುವನೋ ಕಾಣಿಸುತ್ತಿಲ್ಲ. ನೀನು ಮಾಡಿದ ಪ್ರತಿಜ್ಞೆಗೆ ಸೋಲು ಹತ್ತಿರವಾಗುತ್ತಿದೆ, ಅರ್ಜುನ ಸೈರಿಸು ಧೃತಿಗೆಡಬೇಡ ಎನ್ನುತ್ತಾ ರಥವನ್ನು ಸೈಂಧವನಿದ್ದ ಕೊನೆಯ ವ್ಯೂಹಕ್ಕೆ ಅತಿವೇಗದಿಂದ ನಡೆಸಿದನು.

ಅರ್ಥ:
ರವಿ: ಸೂರ್ಯ; ರಶ್ಮಿ: ಕಿರಣ, ಕಾಂತಿ; ನೆರೆ: ಗುಂಪು; ಕೆಂಪು: ಅರುಣ ಬಣ್ಣ; ಒತ್ತು: ಲೇಪಿಸು, ಮುತ್ತು, ದಟ್ಟಣೆ; ನೆಲೆ: ಸ್ಥಾನ; ಕಾಣು: ತೋರು; ಸಾಕು: ನಿಲ್ಲು; ದುಮ್ಮಾನ: ದುಃಖ; ನಿಜ: ತನ್ನ; ಭಾಷೆ: ನುಡಿ; ಪರಾಭವ: ಸೋಲು; ಹತ್ತಿರ: ಸಮೀಪ; ನರ: ಅರ್ಜುನ; ನಿದಾನಿಸು: ಸೈರಿಸು; ಮುರರಿಪು: ಕೃಷ್ಣ; ರಥ: ಬಂಡಿ; ಬಿಡು: ತೊರೆ; ಕಡೆ: ಕೊನೆ; ಮೋಹರ: ಯುದ್ಧ;

ಪದವಿಂಗಡಣೆ:
ಇತ್ತ+ ರವಿರಶ್ಮಿಗಳು +ನೆರೆ +ಕೆಂಪ್
ಒತ್ತಿದವು +ಸೈಂಧವನನೀಗ್
ಒತ್ತೊತ್ತೆಯಲಿ +ನೆಲೆ +ಕಾಣಬಾರದು +ಸಾಕು +ದುಮ್ಮಾನ
ಇತ್ತ +ನಿಜ +ಭಾಷೆಗೆ +ಪರಾಭವ
ಹತ್ತಿರಾಯಿತು +ನರ+ ನಿದಾನಿಸ್
ಎನುತ್ತ +ಮುರರಿಪು +ರಥವ +ಬಿಟ್ಟನು +ಕಡೆಯ +ಮೋಹರಕೆ

ಅಚ್ಚರಿ:
(೧) ಸಂಜೆಯಾಯಿತೆಂದು ವಿವರಿಸುವ ಪರಿ – ರವಿರಶ್ಮಿಗಳು ನೆರೆ ಕೆಂಪೊತ್ತಿದವು

ಪದ್ಯ ೧೧: ಕೃಷ್ಣನು ಅರ್ಜುನನಿಗೇಕೆ ಜರೆದನು?

ಕೊಡಹಿ ಕುಸುಕಿರಿದಡ್ಡಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತರಹಿಲ್ಲೆಂದು ಮುರರಿಪು ಜರೆದನರ್ಜುನನ (ದ್ರೋಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೂರಿಶ್ರವನು ಸಾತ್ಯಕಿಯ ಕೂದಲು ಹಿಡಿದು ಕೊಡವಿ, ನೆಲಕ್ಕೆ ಕುಕ್ಕಿ ಅಡ್ಡಗೆಡವಿ ಭೂಜದಿಂದ ಹೊಡೆದು ಕತ್ತಿಯಿಂದ ಕೊರಳನ್ನು ಕತ್ತರಿಸಲು ಮುಂಬರಿದನು. ಆಗ ಶ್ರೀಕೃಷ್ಣನು, ಅರ್ಜುನ ನಿನ್ನ ಶಿಷ್ಯನಾದ ಸಾತ್ಯಕಿ ಹೀನ ದುರ್ಗತಿಯನ್ನು ನೋಡು, ಚರ್ಚೆಗೆ ಸಮಯವಿಲ್ಲ ಎಂದು ಜರೆದನು.

ಅರ್ಥ:
ಕೊಡಹು: ಜಗ್ಗು, ಅಲ್ಲಾಡಿಸು; ಕುಸುಕಿರಿ: ಹೊಡೆ; ಬೀಳು: ಕುಸಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೃಪಾಣ: ಕತ್ತಿ, ಖಡ್ಗ; ಜಡಿ: ಬೆದರಿಕೆ; ಗಂಟಲು: ಕಂಠ; ಬಳಿಗೆ: ಹತ್ತಿರ; ಹೂಡು: ಅಣಿಗೊಳಿಸು; ಅರಿ: ಸೀಳು; ಕೊರಳು: ಗಂಟಲು; ಹಿಡಿ: ಗ್ರಹಿಸು; ಅಸ್ತ್ರ: ಶಸ್ತ್ರ; ಶಿಷ್ಯ: ವಿದ್ಯಾರ್ಥಿ; ಕಡು: ಬಹಳ; ನಿರೋಧ: ಪ್ರತಿಬಂಧ; ನೋಡು: ವೀಕ್ಷಿಸು; ನುಡಿ: ಮಾತು; ತರಹರಿಸು: ಸೈರಿಸು; ಮುರರಿಪು: ಕೃಷ್ಣ; ಜರೆ: ಬಯ್ಯು;

ಪದವಿಂಗಡಣೆ:
ಕೊಡಹಿ +ಕುಸುಕಿರಿದ್+ಅಡ್ಡಬೀಳಿಕಿ
ಮಡದಲ್+ಉರೆ +ಘಟ್ಟಿಸಿ +ಕೃಪಾಣವ
ಜಡಿದು +ಗಂಟಲ +ಬಳಿಗೆ +ಹೂಡಿದನ್+ಅರಿವುದಕೆ +ಕೊರಳ
ಹಿಡಿ +ಮಹಾಸ್ತ್ರವ +ನಿನ್ನ + ಶಿಷ್ಯನ
ಕಡು +ನಿರೋಧವ +ನೋಡು +ಫಲುಗುಣ
ನುಡಿಗೆ +ತರಹಿಲ್ಲೆಂದು +ಮುರರಿಪು+ ಜರೆದನ್+ಅರ್ಜುನನ

ಅಚ್ಚರಿ:
(೧) ಹೋರಾಟವನ್ನು ವಿವರಿಸುವ ಪರಿ – ಕೊಡಹಿ ಕುಸುಕಿರಿದಡ್ಡಬೀಳಿಕಿಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
(೨) ಗಂಟಲ, ಕೊರಳು – ಸಮಾನಾರ್ಥಕ ಪದ

ಪದ್ಯ ೬೧: ಕೃಷ್ಣನು ಯಾವ ನಾದವನ್ನು ಮೊಳಗಿಸಿದನು?

ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯಸಾಗರವ (ದ್ರೋಣ ಪರ್ವ, ೧೦ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶತ್ರುವೀರರು ಅತಿಸಮೀಪಕ್ಕೆ ಬಂದು ಮುತ್ತಲು, ಶ್ರೀಕೃಷ್ಣನು ಪಾಂಚಜನ್ಯವನ್ನೂದಿದನು. ಧ್ವಜದಲ್ಲಿದ್ದ ಹನುಮಂತನು ಗರ್ಜಿಸಿದನು. ದೇವತೆಗಳು ಅಸುರರ ಕಾಳಗದಂತೆ ಇತ್ತ ಘೋರ ಕದನವಾಗುತ್ತಿರಲು, ಅತ್ತ ದ್ರೋಣನು ಪಾಂಡವ ಸೈನ್ಯಸಮುದ್ರವನ್ನು ಕಠೋರನಾಗಿ ಮುತ್ತಿದನು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಅಳವಿ: ಯುದ್ಧ; ಮುಕ್ಕುರ: ಆವರಿಸು; ಮುರರಿಪು: ಕೃಷ್ಣ; ಮೊಳಗು: ಕೂಗು; ಗರ್ಜಿಸು: ಕೂಗು; ಪತಾಕೆ: ಬಾವುಟ; ಸುರ: ದೇವತೆ; ದೈತ್ಯ: ರಾಕ್ಷಸ; ಸಮರ: ಯುದ್ಧ; ಸಿರಿ: ಐಶ್ವರ್ಯ; ವಿಸ್ತರಿಸು: ಹರಡು; ತೆರಳು: ಹೊರಡು; ಪುತ್ರ: ಸುತ; ಸೈನ್ಯ: ದಳ; ಸಾಗರ: ಸಮುದ್ರ;

ಪದವಿಂಗಡಣೆ:
ಅರಿಭಟರು+ ಕಟ್ಟಳವಿಯಲಿ +ಮು
ಕ್ಕುರುಕೆ +ಮುರರಿಪು +ಪಾಂಚಜನ್ಯವನ್
ಇರದೆ+ ಮೊಳಗಿದ +ಹನುಮ +ಗರ್ಜಿಸಿದನು +ಪತಾಕೆಯಲಿ
ಸುರರ +ದೈತ್ಯರ +ಸಮರಸಿರಿ +ವಿ
ಸ್ತರಿಸಿತ್+ಇತ್ತಲು +ದ್ರೋಣನ್+ಅತ್ತಲು
ತೆರಳಿಚಿದನೈ +ಪಾಂಡುಪುತ್ರರ +ಸೈನ್ಯ+ಸಾಗರವ

ಅಚ್ಚರಿ:
(೧) ಯುದ್ಧವನ್ನು ಹೋಲಿಸುವ ಪರಿ – ಸುರರ ದೈತ್ಯರ ಸಮರಸಿರಿ ವಿಸ್ತರಿಸಿತ್
(೨) ಸೈನ್ಯದ ಅಗಾಧತೆಯನ್ನು ಹೇಳುವ ಪರಿ – ಸೈನ್ಯಸಾಗರ

ಪದ್ಯ ೩೪: ಪಾಂಡವರು ಭೀಷ್ಮನನ್ನು ಬೀಳ್ಕೊಂಡು ಎಲ್ಲಿಗೆ ಬಂದರು?

ಹರುಷ ಬಲಿದುದು ಮನದ ಸಂಶಯ
ಹರೆದುದಾಹವ ವಿಜಯವಾರ್ತೆಯ
ಹರಹಿನಲಿ ಹೊರೆಯೇರಿ ಹೊಂಪುಳಿಯೋದರಡಿಗಡಿಗೆ
ಸುರನದೀನಂದನನ ಹರಹಿನ
ಹರಕೆಗಳ ಕೈಕೊಂಡು ಬೀಳ್ಕೊಂ
ಡರಸ ಮುರರಿಪು ಸಹಿತ ಬಂದನು ತನ್ನ ಪಾಳಯಕೆ (ಭೀಷ್ಮ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಧರ್ಮಜನು ಹೆಚ್ಚಿನ ಹರ್ಷದಿಂದ ನಲಿದನು. ಮನಸ್ಸಿನ ಸಂಶಯ ತೊಲಗಿತು. ತಾನಿನ್ನು ಜಯಿಸುವುದು ಖಂಡಿತವೆಂದು ನಿರ್ಧರಿಸಿ ಹೆಜ್ಜೆ ಹೆಜ್ಜೆಗೂ ರೋಮಾಂಚನಗೊಂಡನು. ಭೀಷ್ಮನ ವಿಶಾಲ ಆಶೀರ್ವಾದಗಳನ್ನು ಪಡೆದು ಶ್ರೀಕೃಷ್ಣ ಮತ್ತು ತನ್ನ ತಮ್ಮಂದಿರೊಡನೆ ತನ್ನ ಪಾಳಯಕ್ಕೆ ಬಂದನು.

ಅರ್ಥ:
ಹರುಷ: ಸಂತಸ; ಬಲಿ: ಹೆಚ್ಚಾಗು; ಮನ: ಮನಸ್ಸು; ಸಂಶಯ: ಅನುಮಾನ; ಹರೆ: ವ್ಯಾಪಿಸು; ಆಹವ: ಯುದ್ಧ; ವಿಜಯ: ಗೆಲುವು; ವಾರ್ತೆ: ವಿಚಾರ; ಹರಹು: ಹಬ್ಬುವಿಕೆ, ಪ್ರಸರ; ಏರು: ಹೆಚ್ಚಾಗು; ಹೊಂಪುಳಿ: ಹೆಚ್ಚಳ, ಆಧಿಕ್ಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಸುರನದೀ: ಗಂಗೆ; ನಂದನ: ಮಗ; ಹರಕೆ: ಆಶೀರ್ವಚನ; ಕೈಕೊಂಡು: ತೆಗೆದುಕೊಂಡು; ಬೀಳ್ಕೊಂಡು: ತೆರಳು; ಅರಸ: ರಾಜ; ಮುರರಿಪು: ವೈರಿ; ಸಹಿತ: ಜೊತೆ; ಬಂದು: ಆಗಮಿಸು; ಪಾಳಯ: ಬೀಡು;

ಪದವಿಂಗಡಣೆ:
ಹರುಷ +ಬಲಿದುದು +ಮನದ +ಸಂಶಯ
ಹರೆದುದ್+ಆಹವ +ವಿಜಯ+ವಾರ್ತೆಯ
ಹರಹಿನಲಿ+ ಹೊರೆ+ಏರಿ +ಹೊಂಪುಳಿಯೋದರ್+ಅಡಿಗಡಿಗೆ
ಸುರನದೀ+ನಂದನನ+ ಹರಹಿನ
ಹರಕೆಗಳ+ ಕೈಕೊಂಡು +ಬೀಳ್ಕೊಂಡ್
ಅರಸ +ಮುರರಿಪು+ ಸಹಿತ +ಬಂದನು +ತನ್ನ +ಪಾಳಯಕೆ

ಅಚ್ಚರಿ:
(೧) ಹರುಷ, ಹರೆ, ಹರಹು, ಹೊಂಪು, ಹರಕೆ – ಹ ಕಾರದ ಪದಗಳ ಬಳಕೆ
(೨) ಹ ಕಾರದ ತ್ರಿವಳಿ ಪದಗಳು – ಹರಹಿನಲಿ ಹೊರೆಯೇರಿ ಹೊಂಪುಳಿಯೋದರಡಿಗಡಿಗೆ

ಪದ್ಯ ೧೫: ಭೀಷ್ಮನು ಕೃಷ್ಣನನ್ನು ಹೇಗೆ ಬರೆಮಾಡಿಕೊಂಡನು?

ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ (ಭೀಷ್ಮ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಕಾವಲುಗಾರರಿಂದ ಈ ಸುದ್ದಿಯನ್ನು ಕೇಳಿ ತನ್ನ ಮನಸ್ಸಿನಲ್ಲಿ, ಧರ್ಮಜನು ಬಂದನೇ? ಶ್ರೀಕೃಷ್ಣನು ಪಾಂಡವರನ್ನು ಕರೆ ತಂದನೇ? ಕೌರವರನ್ನು ಕೊಂದನೇ! ಶಿವ ಶಿವಾ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ಉಳಿದವರೆಲ್ಲರನ್ನು ಹೊರಗಿಟ್ಟು ಶ್ರೀಕೃಷ್ಣ ಮತ್ತು ಪಾಂಡವರನ್ನು ಮಾತ್ರ ಒಳಕ್ಕೆ ಕಳಿಸಿರಿ ಎನಲು, ಅವರು ಒಳಕ್ಕೆ ಹೋಗಲು ವಿನಯದಿಂದ ಶ್ರೀಕೃಷ್ಣನನ್ನು ಎದುರುಗೊಂಡನು.

ಅರ್ಥ:
ಬಂದು: ಆಗಮಿಸು; ಮುರರಿಪು: ಕೃಷ್ಣ; ಅಕಟಾ: ಅಯ್ಯೋ; ಕೊಂದು: ಕೊಲ್ಲು, ಸಾಯಿಸು; ಮೌನ: ಮಾತನಾಡದಿರುವಿಕೆ; ಮುಳುಗು: ಮರೆಯಾಗು, ಒಳಸೇರು; ಮಂದಿ: ಜನರು; ಹೊರಗೆ: ಆಚೆ; ಬರಹೇಳು: ಒಳಗೆ ಕರೆದು; ನಂದನ: ಮಕ್ಕಳು; ಬರಲು: ಆಗಮಿಸಲು; ಇದಿರು: ಎದುರು; ವಿನಯ: ಆದರ, ವಿಶ್ವಾಸ;

ಪದವಿಂಗಡಣೆ:
ಬಂದನೇ +ಧರ್ಮಜನು +ಮುರರಿಪು
ತಂದನೇ +ಕೌರವರನ್+ಅಕಟಾ
ಕೊಂದನೇ +ಶಿವಶಿವಯೆನುತ +ಮೌನದಲಿ +ಮುಳುಗಿರ್ದು
ಮಂದಿಯನು +ಹೊರಗಿರಿಸಿ+ ಬರಹೇ
ಳೆಂದರ್+ಆಗಲೆ+ ಕೃಷ್ಣ +ಕೊಂತೀ
ನಂದನರು+ ಬರಲ್+ಇದಿರುವಂದನು +ಭೀಷ್ಮ +ವಿನಯದಲಿ

ಅಚ್ಚರಿ:
(೧) ಬಂದನೇ, ತಂದನೇ, ಕೊಂದನೇ – ಪ್ರಾಸ ಪದಗಳು
(೨) ಮ ಕಾರದ ತ್ರಿವಳಿ ಪದ – ಮೌನದಲಿ ಮುಳುಗಿರ್ದು ಮಂದಿಯನು

ಪದ್ಯ ೧೪: ಧರ್ಮಜನು ಯಾರನ್ನು ಭೇಟಿಯಾಗಲು ರಾತ್ರಿಯಲ್ಲಿ ಹೊರಟನು?

ಇರುಳು ಗುಪಿತದಲವನಿಪತಿ ಸೋ
ದರರು ಮುರರಿಪು ಸಹಿತ ಬಂದನು
ಸುರನದೀನಂದನನ ಮಂದಿರಕಾಗಿ ವಹಿಲದಲಿ
ಕರೆದು ಪಡಿಹಾರರಿಗೆ ಬಂದುದ
ನರುಹಲವದಿರು ಹೊಕ್ಕು ಸಮಯವ
ನರಿದು ಭೀಷ್ಮಂಗೀ ಹದನ ಬಿನ್ನಹವ ಮಾಡಿದರು (ಭೀಷ್ಮ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಆ ರಾತ್ರಿ ಧರ್ಮಜನು ತನ್ನ ತಮ್ಮಂದಿರು ಮತ್ತು ಕೃಷ್ಣನೊಡನೆ ಕೌರವ ಸೈನ್ಯವನ್ನು ಗುಪ್ತವಾಗಿ ಹೊಕ್ಕು ಭೀಷ್ಮನ ಬಿಡಾರಕ್ಕೆ ಬಂದು ಬಾಗಿಲು ಕಾಯುವವನಿಗೆ ತಿಳಿಸಲು, ಅವರು ಒಳಹೊಕ್ಕು ಭೀಷ್ಮನಿಗೆ ಈ ವಿಷಯವನ್ನು ತಿಳಿಸಿದರು.

ಅರ್ಥ:
ಇರುಳು: ರಾತ್ರಿ; ಗುಪಿತ: ಗುಪ್ತ, ರಹಸ್ಯ; ಅವನಿಪತಿ: ರಾಜ; ಸೋದರ: ತಮ್ಮಂದಿರು; ಮುರರಿಪು: ಕೃಷ್ಣ; ಸಹಿತ: ಜೊತೆ; ಬಂದು: ಆಗಮಿಸು; ಸುರನದೀನಂದನ: ಗಂಗಾಪುತ್ರ; ಮಂದಿರ: ಆಲಯ; ವಹಿಲ:ಬೇಗ, ತ್ವರೆ; ಕರೆ: ಬರೆಮಾಡು; ಪಡಿಹಾರ: ಬಾಗಿಲು ಕಾಯುವವನು; ಅರುಹು: ಹೇಳು; ಅವದಿರು: ಅವರು; ಹೊಕ್ಕು: ಸೇರು; ಸಮಯ: ಕಾಲ; ಅರಿ: ತಿಳಿ; ಹದನ: ರೀತಿ, ಸ್ಥಿತಿ; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಇರುಳು +ಗುಪಿತದಲ್+ಅವನಿಪತಿ +ಸೋ
ದರರು +ಮುರರಿಪು+ ಸಹಿತ +ಬಂದನು
ಸುರನದೀ+ನಂದನನ +ಮಂದಿರಕಾಗಿ +ವಹಿಲದಲಿ
ಕರೆದು+ ಪಡಿಹಾರರಿಗೆ+ ಬಂದುದನ್
ಅರುಹಲ್+ಅವದಿರು +ಹೊಕ್ಕು +ಸಮಯವನ್
ಅರಿದು +ಭೀಷ್ಮಂಗ್+ಈ+ ಹದನ +ಬಿನ್ನಹವ +ಮಾಡಿದರು

ಅಚ್ಚರಿ:
(೧) ಅವನಿಪತಿ, ಮುರರಿಪು, ಸುರನದೀನಂದನ – ಧರ್ಮಜ, ಕೃಷ್ಣ, ಭೀಷ್ಮರನ್ನು ಕರೆದ ಪರಿ

ಪದ್ಯ ೬೫: ಕೃಷ್ಣನು ಯಾರ ಸಾಹಸವನ್ನು ಕೇಳಲು ಇಚ್ಛಿಸಿದನು?

ಬೊಪ್ಪನವರೇ ಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ (ವಿರಾಟ ಪರ್ವ, ೧೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ವಸುದೇವನು ಹೀಗೆ ಹೇಳುತ್ತಿರಲು ಶ್ರೀಕೃಷ್ಣನು ನಮ್ಮ ತಂದೆಯವರು ನನ್ನ ಮೇಲೆ ದೂರು ಹೇಳದೆ ಬಿಡುವವರಲ್ಲ. ಯುಧಿಷ್ಠಿರ, ಇಲ್ಲಿ ಬಾ ಅರ್ಜುನನು ಗೋಧನವನ್ನು ಹೇಗೆ ಬಿಡಿಸಿದ, ಏನೇನಾಯಿತು ಹೇಳು ಎಂದು ಕೇಳಿದನು.

ಅರ್ಥ:
ಬೊಪ್ಪ: ತಂದೆ; ದೂರು: ಆರೋಪ ಮಾಡು; ಸಾಕು: ಕೊನೆ; ಮುರರಿಪು: ಕೃಷ್ಣ; ಕರೆ: ಬರೆಮಾಡು; ಅವನಿಪ: ರಾಜ; ಚಪ್ಪರಿಸು: ಸವಿ, ರುಚಿನೋಡು; ತುರು: ಆಕಳು; ದರ್ಪ: ಹೆಮ್ಮೆ, ಗರ್ವ; ಬೆಸ: ಅಪ್ಪಣೆ, ಆದೇಶ; ಮುರಧ್ವಂಸಿ: ಕೃಷ್ಣ;

ಪದವಿಂಗಡಣೆ:
ಬೊಪ್ಪನವರೇ+ ಎಮ್ಮ +ದೂರದೆ
ಯಿಪ್ಪವರು +ತಾವಲ್ಲ+ ಸಾಕಿನ್
ಒಪ್ಪದಲಿ +ಬಾಯೆಂದು +ಮುರರಿಪು+ ಕರೆದನ್+ಅವನಿಪನ
ಚಪ್ಪರಿಸಿ+ ಕೌರವರು+ ತುರುಗಳ
ತಪ್ಪಿಸಿದುದ್+ಏನಾಯ್ತು +ಪಾರ್ಥನ
ದರ್ಪದನುವ್+ಎಂತೆಂದು +ಬೆಸಗೊಂಡನು +ಮುರಧ್ವಂಸಿ

ಅಚ್ಚರಿ:
(೧) ಮುರರಿಪು, ಮುರಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ಕೌರವರನ್ನು ಸೋಲಿಸಿ ಎಂದು ಹೇಳಲು – ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೇನಾಯ್ತು

ಪದ್ಯ ೭೩: ಅರ್ಜುನನು ಕೌರವನಿಗೆ ಹೇಗೆ ಉತ್ತರಿಸಿದನು?

ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರತೆಗಳ ಕಾಣಿಸಿದ (ವಿರಾಟ ಪರ್ವ, ೯ ಸಂಧಿ, ೭೩ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನಿಗೆ ಉತ್ತರಿಸುತ್ತಾ, ನಿಜ ನೀನು ಗರುಡನೇ, ಆದರೆ ನಿನ್ನ ರೆಕ್ಕೆಗಳನ್ನು ಮುರಿದು ನಿನ್ನ ಹೆಡತಲೆಯ ಮೇಲೇರಿ ನಿನ್ನ ಬೆನ್ನೆಲುಬು ಮುರಿಯುವಂತೆ ಸವಾರಿ ಮಾಡುವ ವಿಷ್ಣು ನಾನು, ಇದು ನಿನಗೆ ತಿಳಿದಿಲ್ಲವೇ? ಸುಧಾರಿಸಿಕೋ, ಸ್ವಲ್ಪ ಶೌರ್ಯವನ್ನು ತಂದುಕೋ ಎಂದು ಗರ್ಜಿಸಿ ಎರಡು ಬಾಣಗಳನ್ನು ಬಿಡಲು ಕೌರವನ ಎದೆ ವಿರಿದು ರಕ್ತ ಸುರಿಯಿತು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ಪಕ್ಕ: ರೆಕ್ಕೆ, ಗರಿ; ಮುರಿ: ಸೀಳು; ಹೆಡತಲೆ: ಹಿಂದಲೆ; ಅಡರು: ಮೇಲಕ್ಕೆ ಹತ್ತು; ಬೆನ್ನು: ಹಿಂಭಾಗ; ಎಲು: ಎಲುಬು, ಮೂಳೆ; ಮುರಿ: ಸೀಳು; ದುವ್ವಾಳಿ: ತೀವ್ರಗತಿ, ಓಟ; ಮುರರಿಪು: ಮುರನೆಂಬ ರಾಕ್ಷಸನ ವೈರಿ (ವಿಷ್ಣು); ಅರಿ: ತಿಳಿ; ತರಹರಿಸು: ತಡಮಾಡು, ಕಳವಳ; ಕಲಿ: ಶೂರ; ಅಬ್ಬರ: ಗರ್ಜನೆ, ಆರ್ಭಟ; ಎದೆ: ವಕ್ಷಸ್ಥಳ; ಉಗುಳು: ಹೊರಹಾಕು; ಬಾಣ: ಅಂಬು, ಸರಳು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಒರತೆ: ಚಿಲುಮೆ; ಕಾಣಿಸು: ತೋರು;

ಪದವಿಂಗಡಣೆ:
ಗರುಡ +ನೀನಹೆ+ ನಿನ್ನ +ಪಕ್ಕವ
ಮುರಿದು +ಹೆಡತಲೆಗ್+ಅಡರಿ +ಬೆನ್ನಲು
ಮುರಿಯೆ +ದುವ್ವಾಳಿಸುವ +ಮುರರಿಪುವ್+ಎನ್ನ+ ನೀನರಿಯ
ತರಹರಿಸಿ+ ಕಲಿಯಾಗು+ಎಂದ್
ಅಬ್ಬರಿಸಿ +ಕೌರವನ್+ಎದೆಯನ್+ಉಗುಳಿದನ್
ಎರಡು +ಬಾಣದೊಳ್+ಅರುಣ +ಜಲದ್+ಒರತೆಗಳ+ ಕಾಣಿಸಿದ

ಅಚ್ಚರಿ:
(೧) ಅರ್ಜುನನು ತನ್ನ ಪೌರುಷವನ್ನು ಹೇಳುವ ಪರಿ – ನಿನ್ನ ಪಕ್ಕವ ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ

ಪದ್ಯ ೨೧: ಕೃಷ್ಣನು ಭರತಸಂತತಿಯ ಬಗ್ಗೆ ಏನು ಹೇಳಿದ?

ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ (ಅರಣ್ಯ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೃಷ್ಣನು ದ್ರೌಪದಿಯನ್ನು ಸಂತೈಸುತ್ತಾ, ದ್ರೌಪದಿ ನೀನು ಮಹಾ ಪತಿವ್ರತೆ, ತಪಸ್ವಿನಿ. ನಿನ್ನನ್ನು ಆ ಕುನ್ನಿಗಳು ಕೆರಳಿಸಿದರೇ? ಅಯ್ಯೋ! ಭರತ ಸಂತತಿಯು ಹಣ್ಣು ಬಿಟ್ಟ ಬಾಳೆಯಗಿಡದಂತಾಯಿತು. ಧೃತರಾಷ್ಟ್ರನು ಮಕ್ಕಳ ಮೋಹದಿಂದ ಕುರುಡ, ಅವನಿಗೆ ತಿಳಿಯಲಿಲ್ಲವೆಂದರೆ, ಕಣ್ಣಿದ್ದು ಭೀಷ್ಮ, ವಿದುರ ಮುಂತಾದವರು ಕುರುಡರಾದರೇ? ಶಿವ ಶಿವಾ ಎಂದು ಶ್ರೀಕೃಷ್ಣನು ತಲೆದೂಗಿದನು.

ಅರ್ಥ:
ವರ: ಶ್ರೇಷ್ಠ; ತಪಸ್ವಿನಿ: ಸಾಧ್ವಿ; ಕೆರಳಿಸು: ಉದ್ರಿಕ್ತವಾಗು, ರೇಗಿಸು; ಕುನ್ನಿ: ನಾಯಿ; ಮಿಗೆ: ಮತ್ತು; ಸಂತತಿ: ವಂಶ; ಫಲಿತ: ಹಣ್ಣು ಬಿಟ್ಟ; ಕದಳಿ: ಬಾಳೆ; ಕುರುಡ: ಅಂಧ; ಅರಿ: ತಿಳಿ; ಕಂಗುರುಡ: ಕಣ್ಣಿದ್ದು ಕುರುಡ; ಆದಿ: ಮೂಂತಾದ; ಮುರರಿಪು: ಕೃಷ್ಣ; ರಿಪು: ವೈರಿ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ವರ +ತಪಸ್ವಿನಿ +ನೀನು +ನಿನ್ನನು
ಕೆರಳಿಚಿದರೇ +ಕುನ್ನಿಗಳು+ ಮಿಗೆ
ಭರತಸಂತತಿ+ ಫಲಿತ+ ಕದಳಿಯ+ ತೆರದೊಳ್+ಆಯಿತಲ
ಕುರುಡನ್+ಅರಿಯದೆ +ಹೋದರೆಯು+ ಕಂ
ಕುರುಡರಾದರೆ+ ಭೀಷ್ಮ+ ವಿದುರಾ
ದ್ಯರು +ಮಹಾದೇವ+ಎನುತ +ಮುರರಿಪು+ ತೂಗಿದನು +ಶಿರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ

ಪದ್ಯ ೧೮: ಕರ್ಣನು ಹೇಗೆ ತನ್ನ ಕುಂಡಲವನ್ನು ದಾನ ಮಾಡಿದನು?

ಸರಳ ತೆಗೆದನು ಸರಸಿಜಪ್ರಿಯ
ವರಸುತನು ತನ್ನುರವ ಬಗಿದನು
ಘರಿಘರಿಲು ಘರಿಲೆನಲು ತೆಗೆದನು ನಿರ್ಮಲೋದಕವ
ಪರಮ ಸಂತೋಷದಲಿ ಧಾರೆಯ
ನೆರೆದು ಕುಂಡಲವೀಯೆ ಮಿಗೆ ಪು
ಷ್ಕರದ ಜನಜಯಯೆನಲು ಮುರರಿಪುವೊಲಿದು ಕೈಕೊಂಡ (ಕರ್ಣ ಪರ್ವ, ೨೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ತನ್ನ ಹೃದಯದಲ್ಲಿರುವ ನೀರನ್ನು ಕೇಳಿದಾಗಲು ಅಳುಕದೆ, ಸೂರ್ಯನಪುತ್ರನಾದ ಕರ್ಣನು ಆಯುಧವನ್ನು ತೆಗೆದು ಎದೆಯನ್ನು ಘರಿಘರಿಲೆಂದು ಬಗಿದು ತನ್ನ ಹೃದಯದಲ್ಲಿದ್ದ ನಿರ್ಮಲವಾದ ಗಂಗಾಜಲವನ್ನು ತೆಗೆದು ಸಂತೋಷದಿಂದ ಕುಂಡಲಗಳನ್ನು ಧಾರೆಯೆರೆದನು. ಆಕಾಶದಲ್ಲಿದ್ದ ದೇವತೆಗಳು ಜಯಕಾರವನ್ನು ಮೊಳಗಿಸಿದರು, ಶ್ರೀಕೃಷ್ಣನು ಸಂತೋಷದಿಂದ ಆ ದಾನವನ್ನು ಸ್ವೀಕರಿಸಿದನು.

ಅರ್ಥ:
ಸರಳು: ಬಾಣ; ತೆಗೆ: ಹೊರತರು; ಸರಸಿಜ: ಕಮಲ; ಪ್ರಿಯ: ಇಷ್ಟ, ನಲ್ಮೆಯ; ವರ: ಶ್ರೇಷ್ಠ; ಸುತ: ಮಗ; ಉರವ: ಎದೆ; ಬಗಿ: ಸೀಳು; ಘರಿಘರಿ: ಬಗೆಯುವ ಶಬ್ದವನ್ನು ವಿವರಿಸುವ ಪದ; ನಿರ್ಮಲ: ಅಮಳ, ಶುದ್ಧ; ಉದಕ: ನೀರು; ಪರಮ: ಶ್ರೇಷ್ಠ; ಸಂತೋಷ: ಆನಂದ; ಧಾರೆ: ದಾನ ಮಾಡುವಾಗ ಎರೆಯುವ ನೀರು; ಎರೆ: ನೀಡು, ಸುರಿ; ಕುಂಡಲ: ಕಿವಿಗೆ ಹಾಕುವ ಆಭರಣ; ಈಯೆ: ನೀಡಲು; ಮಿಗೆ: ಮತ್ತು; ಪುಷ್ಕರ: ತಾವರೆ, ಕಮಲ; ಜನ: ಮನುಷ್ಯ, ಜೀವಿ; ಜಯ: ಉಘೇ; ಮುರರಿಪು: ಕೃಷ್ಣ; ಒಲಿದು: ಆಶೀರ್ವದಿಸು; ಕೈಕೊಂಡ: ತೆಗೆದುಕೊ;

ಪದವಿಂಗಡಣೆ:
ಸರಳ +ತೆಗೆದನು+ ಸರಸಿಜಪ್ರಿಯ
ವರಸುತನು+ ತನ್ನ್+ಉರವ +ಬಗಿದನು
ಘರಿಘರಿಲು+ ಘರಿಲ್+ಎನಲು +ತೆಗೆದನು+ ನಿರ್ಮಲ+ಉದಕವ
ಪರಮ+ ಸಂತೋಷದಲಿ+ ಧಾರೆಯನ್
ಎರೆದು+ ಕುಂಡಲವ್+ಈಯೆ +ಮಿಗೆ +ಪು
ಷ್ಕರದ+ ಜನ+ಜಯಯೆನಲು+ ಮುರರಿಪು+ಒಲಿದು +ಕೈಕೊಂಡ

ಅಚ್ಚರಿ:
(೧) ಕರ್ಣನನ್ನು ಸರಸಿಜಪ್ರಿಯವರಸುತ ಎಂದು ಕರೆದಿರುವುದು
(೨) ದೇವತೆಗಳನ್ನು ಪುಷ್ಕರದ ಜನ ಎಂದು ಕರೆದಿರುವುದು
(೩) ಬಗೆಯುವುದನ್ನು ಚಿತ್ರಿಸುವ ಶಬ್ದ ಘರಿಘರಿ