ಪದ್ಯ ೧೨: ಅರ್ಜುನನ್ನೇಕೆ ಮರುಳೇ ಎಂದು ಕೃಷ್ಣನು ಕರೆದನು?

ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮ್ಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ (ದ್ರೋಣ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಕೇಳಿ, ಅರ್ಜುನನು, ದೇವ, ನಮ್ಮದ ಧರ್ಮಯುದ್ಧವೆಂದು ಹೇಳಿದೆ, ಆದರೆ ಇದೇನು ಅಪ್ಪಣೆ ಕೊಡುತ್ತಿದ್ದೀರಿ? ಸಾತ್ಯಕಿಯ ತಲೆಯನ್ನು ಕಾಯುವುದು ಕಷ್ಟವೇನಲ್ಲ. ಇದು ಧರ್ಮವೇ, ಎಂದು ನಾನು ಕೇಳುತ್ತಿದ್ದೇನೆ ಎಂಬ ಪ್ರಶ್ನೆಗೆ, ಕೃಷ್ಣನು ನಸುನಗುತ್ತಾ ಅಯ್ಯೋ ಮರುಳೇ, ಕೌರವನಲ್ಲಿ ಯಾವ ಧರ್ಮವಿತ್ತು ಎಂದು ಮರು ಪ್ರಶ್ನಿಸಿದನು.

ಅರ್ಥ:
ದೇವ: ಭಗವಂತ; ಧರ್ಮ: ಧಾರಣೆ ಮಾಡಿದುದು; ಯುದ್ಧ: ರಣರಂಗ; ಹದ: ಸ್ಥಿತಿ, ರೀತಿ; ಬೆಸಸು: ಕಾರ್ಯ; ತಲೆ: ಶಿರ; ಕಾವುದು: ರಕ್ಷಿಸು; ಅರಿ: ತಿಳಿ; ಮೊದಲು: ಆದಿ; ನುಡಿ: ಮಾತು; ಸಮಯ: ಕಾಲ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಮುಗುಳುನಗೆ: ಮಂದಸ್ಮಿತ; ಅಂತಕ: ಯಮ; ಮರುಳ: ಮೂಢ; ನಿರುತ: ದಿಟ, ಸತ್ಯ, ನಿಶ್ಚಯ;

ಪದವಿಂಗಡಣೆ:
ದೇವ +ನಮ್ಮದು +ಧರ್ಮಯುದ್ಧವ್+
ಇದಾವ +ಹದನನು +ಬೆಸಸಿದಿರಿ +ತಲೆ
ಕಾವುದೇನ್+ಅರಿದಲ್ಲ +ಮೊದಲಲಿ+ ನುಡಿದ +ಸಮಯವನು
ಭಾವಿಸುವುದ್+ಎನೆ +ಮುಗುಳುನಗೆಯಲಿ
ರಾವಣಾಂತಕನ್+ಎಂದನ್+ಎಲೆ +ಮರುಳ್
ಆವ +ನಿರುತದ +ಧರ್ಮವಿದ್ದುದು +ಕೌರವೇಂದ್ರನಲಿ

ಅಚ್ಚರಿ:
(೧) ಕೃಷ್ಣನನ್ನು ರಾವಣಾಂತಕ ಎಂದು ಕರೆದಿರುವುದು
(೨) ಕೌರವರು ಅಧರ್ಮಿಗಳೆಂದು ಹೇಳುವ ಪರಿ – ಆವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ

ಪದ್ಯ ೫೦: ದ್ರೋಣರಲ್ಲಿ ಅರ್ಜುನನು ಏನು ಬೇಡಿದನು?

ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ (ದ್ರೋಣ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ನೀವು ಮಹಾಸಾಹಸಿಗರಾಗಿ ಶತ್ರುಗಳನ್ನು ಕಾಪಾಡುವ ಹಠ ತೊಟ್ಟರೆ ಹೇಳಿಬಿಡಿ, ನಾನು ಇಲ್ಲಿಂದಲೇ ಹಿಂದಿರುಗಿ ಬಿಡುತ್ತೇನೆ, ಕರುಣೆದೋರಿ ನನ್ನನ್ನು ನೋಡಿದರೆ ನಿಮ್ಮನ್ನು ಎದುರಿಸಿ ಹೋರಾಡುತ್ತೇನೆ, ಯಾವುದನ್ನೂ ಹೇಳಿಬಿಡಿ, ನಮ್ಮ ತಲೆಯನ್ನು ರಕ್ಷಿಸುವ ಅಭಿಪ್ರಾಯ ಮನಸ್ಸಿನಲ್ಲಿದೆಯೇ, ನಿಮ್ಮ ಅಭಿಪ್ರಾಯವೇನು, ಎಂದು ಅರ್ಜುನನು ಕೇಳಿಕೊಳ್ಳಲು ದ್ರೋಣನು ಮುಗುಳುನಗೆಯಿಂದ ಹೀಗೆಂದನು.

ಅರ್ಥ:
ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ರಿಪು: ವೈರಿ; ಕಾವು: ಕಾಪಾಡು; ತೊಲಗು: ದೂರ ಸರಿ; ಕರುಣ: ದಯೆ; ಅವಲೋಕ: ನೋಡು; ಇದಿರು: ಎದುರು; ಗತಿ: ಸ್ಥಿತಿ; ತಲೆ: ಶಿರ; ಮತ: ವಿಚಾರ; ಚಿತ್ತ: ಮನಸ್ಸು; ಹದ: ಸ್ಥಿತಿ; ಮುಗುಳುನಗೆ: ಮಂದಸ್ಮಿತ;

ಪದವಿಂಗಡಣೆ:
ನೀವು +ಹೂಣಿಗರಾಗಿ +ರಿಪುವನು
ಕಾವಡ್+ಇತ್ತಲೆ +ತೊಲಗುವೆನು +ಕರು
ಣಾವಲೋಕನವ್+ಎನ್ನ +ಮೇಲುಂಟಾದಡ್+ ಇದಿರಹೆನು
ಆವುದನು +ನಮಗೇನು +ಗತಿ +ತಲೆ
ಗಾವ +ಮತವೇ +ನಿಮ್ಮ +ಚಿತ್ತದೊಳ್
ಆವ +ಹದನ್+ಎನೆ+ ಮುಗುಳುನಗೆಯಲಿ +ದ್ರೋಣನಿಂತೆಂದ

ಅಚ್ಚರಿ:
(೧) ಗತಿ, ಹದ – ಸಾಮ್ಯಾರ್ಥ ಪದ

ಪದ್ಯ ೧೨: ಕೃಷ್ಣನು ಭೀಷ್ಮನನ್ನು ಗೆಲ್ಲಲು ಯಾವ ಮಾರ್ಗವನ್ನು ಸೂಚಿಸಿದನು?

ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ (ಭೀಷ್ಮ ಪರ್ವ, ೭ ಸಂಧಿ, ೧೨
ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖದಲ್ಲಿ ಮಂದಸ್ಮಿತವು ಅರಳಿತು, ಧರ್ಮಜನಿಗೆ ವನವಾಸದಲ್ಲೇ ಹೆಚ್ಚು ಆಸಕ್ತಿ, ಯುದ್ಧದಲ್ಲಿ ಅವನಿಗೆ ಮನಸ್ಸಿಲ್ಲವೆಂದು ತೋರುತ್ತದೆ ಎಂದು ಭೀಮನೇ ಮೊದಲಾದವರಿಗೆ ಹೇಳಿದನು. ಭೀಷ್ಮನನ್ನು ಬೆರಗುಗೊಳಿಸಿ ಗೆಲ್ಲಲು ಶಿವನಿಗೂ ಅಸಾಧ್ಯ, ಆದುದರಿಂದ ಭೀಷ್ಮನನ್ನು ಸಂಧಾನದಿಂದ ಗೆಲ್ಲಬೇಕು ಎಂದನು.

ಅರ್ಥ:
ಮುಗುಳುನಗೆ: ಹಸನ್ಮುಖ, ಮಂದಸ್ಮಿತ; ನಸು: ಸ್ವಲ್ಪ; ಮೊಳೆ: ಕುಡಿ, ಚಿಗುರು; ಆದಿ: ಮುಂತಾದ; ಅರಸ: ರಾಜ; ಸೊಗಸು: ಅಂದ, ಚೆಲುವು; ಬನ: ಕಾಡು; ಬರಿ: ಕೇವಲ; ಮನ: ಮನಸ್ಸು; ಕದನ: ಯುದ್ಧ; ಕೇಳಿ: ವಿನೋದ; ವಿಗಡ: ಶೌರ್ಯ, ಪರಾಕ್ರಮ; ಬೆಗಡು: ಭಯಪಡು, ಆಶ್ಚರ್ಯ; ಹರ: ಶಿವ; ಹವಣ: ಸಿದ್ಧತೆ, ಪ್ರಯತ್ನ; ಅಗಣಿತ: ಅಸಂಖ್ಯಾತ; ಸಾಮ: ಶಾಂತಗೊಳಿಸುವಿಕೆ; ಮುರಿ: ಸೀಳು;

ಪದವಿಂಗಡಣೆ:
ಮುಗುಳುನಗೆ+ ನಸು +ಮೊಳೆಯೆ +ಭೀಮಾ
ದಿಗಳಿಗ್+ಎಂದನು +ಕೃಷ್ಣನ್+ಅರಸಗೆ
ಸೊಗಸು +ಬನದಲಿ +ಬರಿಯ +ಮನವೀ +ಕದನ+ಕೇಳಿಯಲಿ
ವಿಗಡತನವಂತಿರಲಿ+ ಭೀಷ್ಮನ
ಬೆಗಡು+ಗೊಳಿಸಲು +ಹರನ +ಹವಣಲ್ಲ್
ಅಗಣಿತನ +ಸಾಮದಲಿ +ಮುರಿಯಲುಬೇಕು +ನಾವೆಂದ

ಅಚ್ಚರಿ:
(೧) ಧರ್ಮಜನನ್ನು ತಮಾಷೆ ಮಾಡುವ ಪರಿ – ಅರಸಗೆ ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ

ಪದ್ಯ ೨೦: ಧರ್ಮಜನು ಎಲ್ಲರನ್ನು ಹೇಗೆ ಕಂಡನು?

ಮುಗುಳುನಗೆಯಲಿ ಭೀಮ ಪಾರ್ಥರ
ಮೊಗವ ನೋಡಿದನವನಿಪತಿ ಕೈ
ಮುಗಿದು ತಲೆವಾಗಿದರು ತಮ್ಮಂದಿರು ಮಹೀಪತಿಗೆ
ತೆಗೆಸಿದರು ಕಾಣಿಕೆಯ ನಾ ಮಂ
ತ್ರಿಗಳನಾ ಪರಿವಾರವನು ದೃಗು
ಯುಗದ ಕರುಣಾರಸದಲನಿಬರ ಹೊರೆದು ಮನ್ನಿಸಿದ (ವಿರಾಟ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧರ್ಮರಾಜನು ಮಂದಹಾಸದಿಂದ ಭೀಮಾರ್ಜುನರನ್ನು ನೋಡಲು, ವಿರಾಟನನ್ನು ಸಂಹರಿಸಬೇಕೆಂದು ತಾವು ಕೋಪಗೊಂಡದ್ದು ತಪ್ಪು ಎಂದು ಒಪ್ಪಿಕೊಂಡು ಅವರು ಕೈಮುಗಿದು ತಲೆಬಾಗಿದರು. ಕಾಣಿಕೆಯನ್ನು ತೆಗೆಸಿ, ಮಂತ್ರಿಗಳು ಮತ್ತು ಅಲ್ಲಿ ಬಂದಿದ್ದ ಎಲ್ಲರನ್ನು ಧರ್ಮಜನು ಕರುಣಾದೃಷ್ಟಿಯಿಂದ ನೋಡಿದನು.

ಅರ್ಥ:
ಮುಗುಳುನಗೆ: ಹಸನ್ಮುಖ; ಮೊಗ: ಮುಖ; ನೋಡು: ವೀಕ್ಷಿಸು; ಅವನಿಪತಿ: ರಾಜ; ಕೈಮುಗಿ: ನಮಸ್ಕರಿಸು; ತಲೆವಾಗು: ಎರಗು; ತಲೆ: ಶಿರ: ತಮ್ಮ: ಸಹೋದರ; ಮಹೀಪತಿ: ರಾಜ; ತೆಗೆಸು: ಈಚೆಗೆ ತರು, ಹೊರತರು; ಕಾಣಿಕೆ: ಉಡುಗೊರೆ; ಮಂತ್ರಿ: ಸಚಿವ; ಪರಿವಾರ: ಪರಿಜನ; ದೃಗು: ಕಣ್ಣು; ಯುಗ: ಜೊತೆ; ಕರುಣಾರಸ: ದಯೆ; ಅನಿಬರು: ಅಷ್ಟು ಜನ; ಹೊರೆ: ರಕ್ಷಣೆ, ಆಶ್ರಯ; ಮನ್ನಿಸು: ಗೌರವಿಸು;

ಪದವಿಂಗಡಣೆ:
ಮುಗುಳುನಗೆಯಲಿ +ಭೀಮ +ಪಾರ್ಥರ
ಮೊಗವ +ನೋಡಿದನ್+ಅವನಿಪತಿ +ಕೈ
ಮುಗಿದು +ತಲೆವಾಗಿದರು +ತಮ್ಮಂದಿರು +ಮಹೀಪತಿಗೆ
ತೆಗೆಸಿದರು+ ಕಾಣಿಕೆಯ+ ನಾ +ಮಂ
ತ್ರಿಗಳನ್+ಆ+ ಪರಿವಾರವನು+ ದೃಗು
ಯುಗದ +ಕರುಣಾರಸದಲ್+ಅನಿಬರ +ಹೊರೆದು +ಮನ್ನಿಸಿದ

ಅಚ್ಚರಿ:
(೧) ಅವನಿಪತಿ, ಮಹೀಪತಿ – ಸಮನಾರ್ಥಕ ಪದ

ಪದ್ಯ ೧೦೫: ದ್ರೌಪದಿಯು ಭೀಮನನ್ನು ಹೇಗೆ ಹೊಗಳಿದಳು?

ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋನಮೋಯೆನುತ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಲಯಕೆ
ಮುಗುದೆ ಬಂದಳು ಸೂರ್ಯನಡರಿದನುದಯಪರ್ವತವ (ವಿರಾಟ ಪರ್ವ, ೩ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಮುಗುಳ್ನಗುತ್ತಾ ಕಡೆಗಣ್ಣಿನ ನೋಟದಿಂದ ಭೀಮನನ್ನು ನೋಡುತ್ತಾ ಗಂಧರ್ವರೊಡೆಯನಿಗೆ ನಾವು ಕೈಮುಗಿದೆವು. ನಮೋ ನಮೋ ಎಂದಳು. ಅವಳ ಹರ್ಷ ಮೇರೆ ಮೀರಿತ್ತು, ರೋಮಾಂಚನಗೊಂಡಿದ್ದಳು, ಅವಳು ತನ್ನ ಮನೆಗೆ ಬಂದಳು, ಸ್ವಲ್ಪ ಹೊತ್ತಿನಲ್ಲೇ ಸೂರ್ಯೋದಯವಾಯಿತು.

ಅರ್ಥ:
ಮುಗುಳುನಗೆ: ಮಂದಸ್ಮಿತೆ; ಕಣ್ಣು: ನಯನ; ಕಡೆ: ತುದಿ; ವಿಗಡ: ಶೌರ್ಯ, ಪರಾಕ್ರಮ; ನೋಡು: ವೀಕ್ಷಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ಕೈಮುಗಿ: ನಮಸ್ಕರಿಸು; ಪತಿ: ಒಡೆಯ; ಹೊಗರು: ಕಾಂತಿ, ಪ್ರಕಾಶ; ಹರುಷ: ಸಂತಸ; ರೋಮ: ಕೂದಲು; ಗುಡಿ: ಕುಟೀರ, ಮನೆ; ನಿಳಯ: ಮನೆ; ಮುಗುದೆ: ಕಪಟವರಿಯದವಳು, ಮುಗ್ಧೆ; ಬಂದಳು: ಆಗಮಿಸು; ಸೂರ್ಯ: ರವಿ; ಅಡರು: ಮೇಲಕ್ಕೆ ಹತ್ತು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಮುಗುಳುನಗೆಯಲಿ +ಕಣ್ಣ+ ಕಡೆಯಲಿ
ವಿಗಡ+ ಭೀಮನ +ನೋಡಿ +ಕೈಗಳ
ಮುಗಿದೆವಾವ್ +ಗಂಧರ್ವಪತಿಗೆ +ನಮೋ+ನಮೋ+ಎನುತ
ಹೊಗರಿಡುವ+ ಹರುಷದಲಿ+ ರೋಮಾ
ಳಿಗಳ+ ಗುಡಿಯಲಿ +ತನ್ನ +ನಿಲಯಕೆ
ಮುಗುದೆ +ಬಂದಳು +ಸೂರ್ಯನ್+ಅಡರಿದನ್+ಉದಯ+ಪರ್ವತವ

ಅಚ್ಚರಿ:
(೧) ಸೂರ್ಯೋದಯವನ್ನು ಹೇಳುವ ಪರಿ – ಸೂರ್ಯನಡರಿದನುದಯಪರ್ವತವ

ಪದ್ಯ ೯೬: ಕೀಚಕನ ತಮ್ಮಂದಿರು ಹೇಗೆ ದುಃಖಿಸಿದರು?

ಆರು ಗತಿಯೆಮಗಕಟ ಕೀಚಕ
ವೀರ ದೇಸಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರ ಕರ್ಮರು ನಿನ್ನ ಕೊಂದವ
ರಾರು ಹಾಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ (ವಿರಾಟ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ಕೀಚಕನ ತಮ್ಮಂದಿರು ಅವನ ದೇಹವನ್ನು ನೋಡಿ ದುಃಖತಪ್ತರಾಗಿ, ಅಯ್ಯೋ ವೀರ ಕೀಚಕನೇ, ನಮಗೆ ಇನ್ನಾರು ಗತಿ, ನಾವು ಅನಾಥರಾದೆವೆಂದು ದುಃಖಿಸಿ ಅವನ ದೇಹವನ್ನು ತಬ್ಬಿಕೊಂಡರು. ನಿನ್ನ ಕೊಂದ ಕ್ರೂರಿಗಳಾರು ಎನ್ನುತ್ತಾ ಹಾಹಾಕಾರ ಮಾಡುತ್ತಿರುವುದನ್ನು ದ್ರೌಪದಿಯು ನೋಡಿ ಮುಗುಳುನಗೆಯನ್ನು ಬೀರಿದಳು.

ಅರ್ಥ:
ಗತಿ: ಮಾರ್ಗ, ಸ್ಥಿತಿ; ಅಕಟ: ಅಯ್ಯೋ; ವೀರ: ಶೂರ; ದೇಸಿಗ:ದೇಶದ ನಿವಾಸಿ, ಅನಾಥ; ಸೇರು: ಜೊತೆ; ಹಲುಬು: ದುಃಖಪಡು; ತಕ್ಕೈಸು: ತಬ್ಬಿಕೊ; ಕ್ರೂರ: ದುಷ್ಟ; ಕರ್ಮ: ಕೆಲಸ; ಕೊಲ್ಲು: ಸಾಯಿಸು; ವಾರಿಜಾನನೆ: ಕಮಲದಂತ ಮುಖವುಳ್ಳವಳು (ದ್ರೌಪದಿ); ಮುಗುಳುನಗೆ: ಹಸನ್ಮುಖಿ; ನೋಡು: ವೀಕ್ಷಿಸು; ಖಳ: ದುಷ್ಟ;

ಪದವಿಂಗಡಣೆ:
ಆರು +ಗತಿ+ಎಮಗ್+ಅಕಟ +ಕೀಚಕ
ವೀರ +ದೇಸಿಗರಾದೆವಾವ್
ಇನ್ನಾರ +ಸೇರುವೆವೆನುತ +ಹಲುಬಿದರ್+ಅವನ +ತಕ್ಕೈಸಿ
ಕ್ರೂರ +ಕರ್ಮರು +ನಿನ್ನ +ಕೊಂದವ
ರಾರು +ಹಾಹಾ+ಎನುತ +ಹಲುಬಲು
ವಾರಿಜಾನನೆ +ಮುಗುಳುನಗೆಯಲಿ +ನೋಡಿದಳು +ಖಳರ

ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಆರು ಗತಿಯೆಮಗಕಟ, ದೇಸಿಗರಾದೆವಾವ್

ಪದ್ಯ ೨೧: ಜಯವಧುವಿನ ಲಕ್ಷಣವೇನು?

ಮುಗುಳುನಗೆಯೊಬ್ಬರಲಿ ಸವಿವಾ
ತುಗಳ ರಸವೊಬ್ಬರಲಿ ಕಡೆಗ
ಣ್ಣುಗಳ ಮಿಂಚೊಬ್ಬರಲಿ ನೇವುರದೆಳೆಮೊಳಗು ಸಹಿತ
ಸೊಸಗು ಬೇರೊಬ್ಬರಲಿ ನೇಹದ
ತಗಹು ಬೇರೊಬ್ಬರಲಿ ಸತಿಯರ
ವಿಗಡತನವಿದು ಸಹಜ ಜಯವಧು ಜಾರೆ ನೋಡೆಂದ (ಕರ್ಣ ಪರ್ವ, ೨೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜಯವಧುವು ಒಬ್ಬರನ್ನು ಕಂಡು ಮುಗುಳ್ನಗುತ್ತಾಳೆ. ಇನ್ನೊಬ್ಬರೊಡನೆ ಸವಿಮಾತುಗಳನ್ನಾಡುತ್ತಾಳೆ. ಕಡೆಗಣ್ಣಿನ ನೋಟವನ್ನು ಒಬ್ಬರತ್ತ ಬೀರುತ್ತಾಳೆ. ಕಾಲ್ಗೆಜ್ಜೆಯ ಸದ್ದಿನಿಂದ ಇನ್ನೊಬ್ಬರೊಡನೆ ಹೋಗಿ ಸೇರುತ್ತಾಳೆ. ಮತ್ತೊಬ್ಬರನ್ನು ಪ್ರೀತಿಯಿಂದ ಸೇರುತ್ತಾಳೆ. ಇದು ಸ್ತ್ರೀಸ್ವಭಾವ, ಹೇಳಿ ಕೇಳಿ ಜಯವಧುವು ಜಾರೆ.

ಅರ್ಥ:
ಮುಗುಳು: ಮೊಗ್ಗು, ಚಿಗುರು; ಸವಿ: ಪ್ರೀತಿ, ಒಲವು; ವಾತು: ಮಾತು; ರಸ: ಸಾರ; ಕಡೆಗಣ್ಣು: ಕಣ್ಣಿನ ತುದಿ; ಮಿಂಚು: ಹೊಳಪು, ಕಾಂತಿ; ನೇವುರ: ಅಂದುಗೆ, ನೂಪುರ; ಮೊಳಗು: ಧ್ವನಿ, ಸದ್ದು; ಎಳೆ: ಚಿಕ್ಕ; ಸೆಳೆ, ಆಕರ್ಷಿಸು; ಸಹಿತ: ಜೊತೆ; ಸೊಗಸು: ಅಂದ; ನೇಹ: ಪ್ರೀತಿ, ಒಲುಮೆ; ತಗಹು: ಅಡ್ಡಿ, ತಡೆ; ಸತಿ: ಹೆಂಡತಿ; ವಿಗಡ: ಅತಿಶಯ, ಆಧಿಕ್ಯ; ಸಹಜ: ನೈಜವಾದ, ಸ್ವಭಾವ ಸಿದ್ಧವಾದ; ಜಯ: ಗೆಲುವು; ವಧು:ಹೆಂಗಸು, ಸ್ತ್ರೀ; ಜಾರೆ: ಹಾದರಗಿತ್ತಿ, ವ್ಯಭಿಚಾರಿಣಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಮುಗುಳುನಗೆ+ಒಬ್ಬರಲಿ +ಸವಿವಾ
ತುಗಳ+ ರಸವ್+ಒಬ್ಬರಲಿ +ಕಡೆಗ
ಣ್ಣುಗಳ +ಮಿಂಚ್+ಒಬ್ಬರಲಿ +ನೇವುರದ್+ಎಳೆಮೊಳಗು+ ಸಹಿತ
ಸೊಗಸು+ ಬೇರೊಬ್ಬರಲಿ +ನೇಹದ
ತಗಹು +ಬೇರೊಬ್ಬರಲಿ+ ಸತಿಯರ
ವಿಗಡತನವಿದು +ಸಹಜ +ಜಯವಧು +ಜಾರೆ +ನೋಡೆಂದ

ಅಚ್ಚರಿ:
(೧) ಗೆಲುವನ್ನು ಜಾರೆಗೆ ಹೋಲಿಸಿ ಬರೆದ ಪದ್ಯ
(೨) ಒಬ್ಬರಲಿ – ಪ್ರತಿ ಸಾಲಿನಲ್ಲಿ ಬರುವ ಪದ
(೩) ಜಯವಧುವಿನ ಲಕ್ಷಣಗಳು – ಮುಗುಳುನಗೆ, ಸವಿವಾತು, ಕಡೆಗಣ್ಣು, ಮಿಂಚು, ಎಳೆಮೊಳಗು, ಸೊಗಸು, ನೇಹ