ಪದ್ಯ ೩೭: ದುರ್ಯೋಧನನು ಏನು ಹೇಳುತ್ತಾ ಗದೆಯನ್ನು ತಿರುಗಿಸಿದನು?

ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ (ಗದಾ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವನು ಗರ್ಜಿಸುತ್ತಾ, ಸತ್ತು ಹೋದವನನ್ನು ನಾನು ಹೊಡೆಯುವುದಿಲ್ಲ, ಅರ್ಜುನ ಮಹಾಸ್ತ್ರವನ್ನು ಹೂದು, ಧರ್ಮಜ ಬಿಲ್ಲನ್ನು ಹಿಡಿ, ನಕುಲ ಸಹದೇವರು ಆಯುಧಗಳನ್ನು ಹಿದಿಯಲಿ, ಸಾತ್ಯಕಿ ಬಿಲ್ಲನ್ನು ಹಿಡಿ, ಶಿಖಂಡಿ, ಧೃಷ್ಟದ್ಯುಮ್ನರೇ ನನ್ನನ್ನು ಇದಿರಿಸಿ, ನಿಮ್ಮವನ ಸೇಡನ್ನು ತೀರಿಸಲು ಬನ್ನಿ ಎಂದು ಕೌರವನು ಗದೆಯನ್ನು ತಿರುಗಿಸಿದನು.

ಅರ್ಥ:
ಮಡಿ: ಸಾವು; ಹೊಯ್ಯು: ಹೊಡೆ; ತೊಡು: ಹೂಡು; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಿಲು: ಬಿಲ್ಲು, ಚಾಪ; ತುಡುಕು: ಹೋರಾಡು, ಸೆಣಸು; ಯಮಳರು: ಅವಳಿ ಮಕ್ಕಳು; ಕೈದು: ಆಯುಧ; ಶರ: ಬಾಣ; ಶರಾಸನ: ಬಿಲ್ಲು; ಹಿಡಿ: ಗ್ರಹಿಸು; ಸುತ: ಮಗ; ಅವಗಡಿಸು: ಸೋಲಿಸು; ಹರಿಬ: ಕೆಲಸ, ಕಾರ್ಯ; ಮಿಡುಕು: ಅಲುಗಾಟ, ಚಲನೆ; ತೂಗು: ಅಲ್ಲಾಡಿಸು; ಅವನಿಪತಿ: ರಾಜ; ಗದೆ: ಮುದ್ಗರ;

ಪದವಿಂಗಡಣೆ:
ಮಡಿದವನ +ಹೊಯ್ಯೆನು+ ಧನಂಜಯ
ತೊಡು +ಮಹಾಸ್ತ್ರವನ್+ಅವನಿಪತಿ +ಬಿಲು
ದುಡುಕು +ಯಮಳರು +ಕೈದುಗೊಳಿ +ಸಾತ್ಯಕಿ +ಶರಾಸನವ
ಹಿಡಿ +ಶಿಖಂಡಿ +ದ್ರುಪದಸುತರ್+ಅವ
ಗಡಿಸಿರೈ +ನಿಮ್ಮವನ+ ಹರಿಬಕೆ
ಮಿಡುಕುವಡೆ +ಬಹುದೆನುತ +ತೂಗಿದನ್+ಅವನಿಪತಿ +ಗದೆಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ

ಪದ್ಯ ೩೪: ಯಾವ ರೀತಿಯ ಕೂಗುಗಳು ಕೇಳಿ ಬಂದವು?

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ತಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದಲ್ಲಿ ಹಾ ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನಾ, ಅಯ್ಯೋ ಅಪ್ಪಾ, ಅಯ್ಯೋ ಅಣ್ಣಾ, ಅಯ್ಯೋ ಮಗನೇ ಎಂಬ ಕೂಗುಗಳು ಕೇಳಿ ಬಂದವು. ಹೋಗಿ ಹೊಕ್ಕೇವೆಂದರೆ ಸಮುದ್ರ ಬಹುದೂರದಲ್ಲಿದೆ, ಭೂಮಿಯಾದರೂ ಬಾಯನ್ನು ಬಿಡಬಾರದೇ? ನಾವೀ ಮಹಾಸ್ತ್ರಕ್ಕೆ ಸಿಕ್ಕು ಹಾಕಿಕೊಂಡೆವು ಎಂಬ ಕೂಗುಗಳು ಕೇಳಿ ಬಂದವು.

ಅರ್ಥ:
ಮುರಾಂತಕ: ಕೃಷ್ಣ; ಮರುತ್ಸುತ: ವಾಯುಪುತ್ರ (ಭೀಮ); ಮಗ: ಸುತ; ತಂದೆ: ಪಿತ; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಭೂಮಿ: ವಸುಧೆ; ತೆರೆ: ಬಿಚ್ಚುವಿಕೆ; ಅಕಟಕಟ: ಅಯ್ಯೋ; ಮಹೋದಧಿ: ಮಹಾ ಸಾಗರ; ದೂರ: ಅಂತರ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಿಕ್ಕು: ಒದಗು; ಬಂಧನ; ಒರಲು: ಅರಚು, ಕೂಗಿಕೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಹಾ+ ಮುರಾಂತಕ +ಹಾ +ಯುಧಿಷ್ಠಿರ
ಹಾ +ಮರುತ್ಸುತ +ಹಾ +ಧನಂಜಯ
ಹಾ +ಮಗನೆ +ಹಾ +ತಂದೆ +ಹಾ +ಒಡವುಟ್ಟಿದನೆ+ಎನುತ
ಭೂಮಿ +ತೆರೆಯಳೆ +ಬಾಯನ್+ಅಕಟಕ
ಟಾ +ಮಹೋದಧಿ+ ದೂರವಿನ್ನೇನ್
ಈ ಮಹಾಸ್ತ್ರಕೆ +ಸಿಕ್ಕಿದೆವೆಂದ್+ಒರಲಿತ್+ಅರಿಸೇನೆ

ಅಚ್ಚರಿ:
(೧) ನೋವನ್ನು ಸೂಚಿಸುವ ಹಾ ಪದದ ಬಳಕೆ
(೨) ಸುತ, ಮಗ – ಸಮಾನಾರ್ಥಕ ಪದ
(೩) ಮಹಾಸ್ತ್ರ, ಮಹೋದಧಿ – ಮಹಾ ಪದದ ಬಳಕೆ

ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೫೦: ಕರ್ಣನು ಯಾವ ಅಸ್ತ್ರವನ್ನು ತೆಗೆದನು?

ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾರನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸೈನಿಕರ ಈ ಮಾತನ್ನು ಕೇಳಿ ಕರ್ಣನು, ಇವನು ಇದಿರು ನಿಂತರೆ ಇವನ ಪ್ರಾಣವನ್ನು ತೆಗೆಯುತ್ತೇನೆ, ಅಲ್ಲಿಯವರೆಗೆ ಬಾಯಿಗೆ ಬಂದಂತೆ ಮಾತಾಡಬೇಡಿ, ಓಡಿಹೋಗಬೇಡಿ, ಮದ್ಯಪಾಯಿಯ (ರಾಕ್ಷಸ) ಕರುಳನ್ನು ನೆಲದಮೇಲೆ ಹರಡುತ್ತೇನೆ, ಎಂದು ತನ್ನವರಿಗೆ ಅಭಯಹಸ್ತವನ್ನು ತೋರಿಸಿದನು. ಉಗ್ರಧಾರೆಯುಳ್ಳ, ಕಿಡಿಯುಗುಳುವ, ಉರಿಯುಗುಳುವ ಮಹಾಸ್ತ್ರವನ್ನು ಕರ್ಣನು ಬತ್ತಳಿಕೆಯಿಂದ ಎಳೆದನು.

ಅರ್ಥ:
ಅಸು: ಪ್ರಾಣ; ಮೈ; ತನು, ದೇಹ; ತೋರು: ಗೋಚರಿಸು; ನಿಂದು: ನಿಲ್ಲು; ನಿಮಿಷ: ಕ್ಷಣ; ಕರುಳು: ಪಚನಾಂಗ; ಹರಹು: ವಿಸ್ತಾರ, ವೈಶಾಲ್ಯ; ಜಾರು: ಕೆಳಕ್ಕೆ ಬೀಳು; ಅಭಯ: ನಿರ್ಭಯತೆ, ರಕ್ಷಣೆ; ಹಸ್ತ: ಕೈ; ತೋರು: ಗೋಚರಿಸು; ತುಡುಕು: ಹೋರಾಡು, ಸೆಣಸು; ಉಗ್ರ: ಪ್ರಚಂಡತೆ, ಭಯಂಕರ; ಧಾರೆ: ಮಳೆ; ತೂರು: ಹೊರಸೂಸು; ಕಿಡಿ: ಬೆಂಕಿ; ತುರುಗು: ಸಂದಣಿಸು; ಮಹಾಸ್ತ್ರ: ದೊಡ್ಡ ಅಸ್ತ್ರ; ಕಳ್ಳೇರು: ಕಪಟ; ಕಳ್ಳೇರುಕಾರ: ಕಪಟ ಯುದ್ಧ ಮಾಡುವವ;

ಪದವಿಂಗಡಣೆ:
ಕಾರಿಸುವೆನಿವನ್+ಅಸುವನ್+ಇವ+ ಮೈ
ದೋರಿ +ನಿಂದರೆ +ನಿಮಿಷದಲಿ+ ಬಾ
ಯಾರದಿರಿ+ ಕಳ್ಳೇರುಕಾರನ +ಕರುಳ +ಹರಹುವೆನು
ಜಾರದಿರಿ+ಎನುತ್+ಅಭಯ+ಹಸ್ತವ
ತೋರಿ +ತುಡುಕಿದನ್+ಉಗ್ರಧಾರೆಯ
ತೂರು+ಕಿಡಿಗಳ +ತುರುಗಿದ್+ಉರಿಯ +ಮಹಾಸ್ತ್ರವನು +ಕರ್ಣ

ಅಚ್ಚರಿ:
(೧) ಘಟೋತ್ಕಚನನ್ನು ಕಳ್ಳೇರುಕಾರ ಎಂದು ಕರೆದಿರುವುದು
(೨) ತ ಕಾರದ ಸಾಲು ಪದ – ತೋರಿ ತುಡುಕಿದನುಗ್ರಧಾರೆಯ ತೂರುಗಿಡಿಗಳ ತುರುಗಿದುರಿಯ

ಪದ್ಯ ೪೨: ಸೈಂಧವನ ತಂದೆ ಯಾವ ಶಾಪವನ್ನಿತ್ತಿದ್ದನು?

ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ (ದ್ರೋಣ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಇವನ ತಲೆಯನ್ನು ಯಾರು ನೆಲಕ್ಕೆ ಕೆಡಹುವರೋ ಅವನ ತಲೆ ಬಿರಿದು ಬೀಳಲಿ ಎಂದು ಇವನ ತಂದೆಯ ಶಾಪವಿದೆ. ಈ ತಲೆಯು ಇವನ ತಂದೆಯ ಕೈಗೆ ಬೀಳುವ ಹಾಗೆ ಉಪಾಯವನ್ನು ಮಾಡು ಎಂದು ಕೃಷ್ಣನು ಹೇಳಲು, ಅರ್ಜುನನು ಹಾಗೆ ಆಗಲಿ ಎಂದು ಪಾಶುಪತಾಸ್ತ್ರಕ್ಕೆ ಆದೇಶವನ್ನಿತ್ತನು.

ಅರ್ಥ:
ತಂದೆ: ಅಪ್ಪ, ಪಿತ; ಶಾಪ: ನಿಷ್ಠುರದ ನುಡಿ; ತಲೆ: ಶಿರ; ನೆಲ: ಭೂಮಿ; ಕೆಡಹು: ಬೀಳು; ಮಸ್ತಕ: ತಲೆ; ಬಿರಿ: ಸೀಳು; ಬೀಳು: ಕುಸಿ; ಕೈ: ಹಸ್ತ; ಉಪಾಯ: ಯೋಚನೆ; ದಿವಿಜಪತಿ: ದೇವತೆಗಳ ರಾಜ (ಇಂದ್ರ); ಅಸ್ತ್ರ: ಶಸ್ತ್ರ; ಬೆಸಸು: ಕಾರ್ಯ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಇವನ +ತಂದೆಯ +ಶಾಪವ್+ಆವವನ್
ಇವನ +ತಲೆಯನು +ನೆಲಕೆ +ಕೆಡಹುವನ್
ಅವನ +ಮಸ್ತಕ +ಬಿರಿದು +ಬೀಳಲಿ+ಎಂದನ್+ಈ+ ತಲೆಯ
ಇವನ +ತಂದೆಯ +ಕೈಯೊಳಗೆ +ಬೀ
ಳುವ+ಉಪಾಯವ +ಮಾಡು +ನೀನ್+ಎನೆ
ದಿವಿಜಪತಿ+ಸುತನ್+ಆ+ ಮಹಾಸ್ತ್ರಕೆ +ಬೆಸಸಿದನು +ಹದನ

ಅಚ್ಚರಿ:
(೧) ತಲೆ, ಮಸ್ತಕ – ಸಮಾನಾರ್ಥಕ ಪದ
(೨) ಇವನ ತಂದೆಯ – ೧, ೪ ಸಾಲಿನ ಮೊದಲ ಪದ

ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೧೧: ಕೃಷ್ಣನು ಅರ್ಜುನನಿಗೇಕೆ ಜರೆದನು?

ಕೊಡಹಿ ಕುಸುಕಿರಿದಡ್ಡಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತರಹಿಲ್ಲೆಂದು ಮುರರಿಪು ಜರೆದನರ್ಜುನನ (ದ್ರೋಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೂರಿಶ್ರವನು ಸಾತ್ಯಕಿಯ ಕೂದಲು ಹಿಡಿದು ಕೊಡವಿ, ನೆಲಕ್ಕೆ ಕುಕ್ಕಿ ಅಡ್ಡಗೆಡವಿ ಭೂಜದಿಂದ ಹೊಡೆದು ಕತ್ತಿಯಿಂದ ಕೊರಳನ್ನು ಕತ್ತರಿಸಲು ಮುಂಬರಿದನು. ಆಗ ಶ್ರೀಕೃಷ್ಣನು, ಅರ್ಜುನ ನಿನ್ನ ಶಿಷ್ಯನಾದ ಸಾತ್ಯಕಿ ಹೀನ ದುರ್ಗತಿಯನ್ನು ನೋಡು, ಚರ್ಚೆಗೆ ಸಮಯವಿಲ್ಲ ಎಂದು ಜರೆದನು.

ಅರ್ಥ:
ಕೊಡಹು: ಜಗ್ಗು, ಅಲ್ಲಾಡಿಸು; ಕುಸುಕಿರಿ: ಹೊಡೆ; ಬೀಳು: ಕುಸಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೃಪಾಣ: ಕತ್ತಿ, ಖಡ್ಗ; ಜಡಿ: ಬೆದರಿಕೆ; ಗಂಟಲು: ಕಂಠ; ಬಳಿಗೆ: ಹತ್ತಿರ; ಹೂಡು: ಅಣಿಗೊಳಿಸು; ಅರಿ: ಸೀಳು; ಕೊರಳು: ಗಂಟಲು; ಹಿಡಿ: ಗ್ರಹಿಸು; ಅಸ್ತ್ರ: ಶಸ್ತ್ರ; ಶಿಷ್ಯ: ವಿದ್ಯಾರ್ಥಿ; ಕಡು: ಬಹಳ; ನಿರೋಧ: ಪ್ರತಿಬಂಧ; ನೋಡು: ವೀಕ್ಷಿಸು; ನುಡಿ: ಮಾತು; ತರಹರಿಸು: ಸೈರಿಸು; ಮುರರಿಪು: ಕೃಷ್ಣ; ಜರೆ: ಬಯ್ಯು;

ಪದವಿಂಗಡಣೆ:
ಕೊಡಹಿ +ಕುಸುಕಿರಿದ್+ಅಡ್ಡಬೀಳಿಕಿ
ಮಡದಲ್+ಉರೆ +ಘಟ್ಟಿಸಿ +ಕೃಪಾಣವ
ಜಡಿದು +ಗಂಟಲ +ಬಳಿಗೆ +ಹೂಡಿದನ್+ಅರಿವುದಕೆ +ಕೊರಳ
ಹಿಡಿ +ಮಹಾಸ್ತ್ರವ +ನಿನ್ನ + ಶಿಷ್ಯನ
ಕಡು +ನಿರೋಧವ +ನೋಡು +ಫಲುಗುಣ
ನುಡಿಗೆ +ತರಹಿಲ್ಲೆಂದು +ಮುರರಿಪು+ ಜರೆದನ್+ಅರ್ಜುನನ

ಅಚ್ಚರಿ:
(೧) ಹೋರಾಟವನ್ನು ವಿವರಿಸುವ ಪರಿ – ಕೊಡಹಿ ಕುಸುಕಿರಿದಡ್ಡಬೀಳಿಕಿಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
(೨) ಗಂಟಲ, ಕೊರಳು – ಸಮಾನಾರ್ಥಕ ಪದ

ಪದ್ಯ ೪೭: ಕೃಷ್ಣನು ಅರ್ಜುನನಿಗೆ ಯಾವ ರೀತಿ ಗುರಗಳನ್ನು ಗೆಲ್ಲಲು ಹೇಳಿದನು?

ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ (ದ್ರೋಣ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳನ್ನು ದ್ರೋಣನು ಕಡಿದು ಹಾಕಿ, ಬಾಣಗಳಿಂದ ಅವನಿಗೆ ಹೊಡೆದು, ಅರ್ಜುನ, ನೀನು ದಿಟ್ಟ, ಆದರೆ ಈ ಯುದ್ಧವು ನಮಗೆ ಗಿಟ್ಟುತ್ತದೆ ಎಂದನು. ಆಗ ಕೃಷ್ಣನು ಅರ್ಜುನನ ಮೇಲೆ ಕೆರಳಿ, ಅರ್ಜುನ ನೀನು ಯುದ್ಧಮಾಡಿ ಗುರುವನ್ನು ಗೆಲ್ಲುವೆಯಾ? ಹುಚ್ಚೇ ವಿನಯದಿಂದ ಅವರನ್ನು ಗೆಲ್ಲು ಎಂದು ಹೇಳಿದನು.

ಅರ್ಥ:
ಸರಳು: ಬಾಣ; ಸವರು: ನಾಶಗೊಳಿಸು; ಅಸ್ತ್ರ: ಶಸ್ತ್ರ; ಚಯ: ಸಮೂಹ; ಎಚ್ಚು: ಬಾಣ ಪ್ರಯೋಗ ಮಾಡು; ಲಾಗು: ನೆಗೆಯುವಿಕೆ, ಲಂಘನ; ಧುರ: ಯುದ್ಧ, ಕಾಳಗ; ದಿಟ್ಟ: ಧೈರ್ಯಶಾಲಿ, ಸಾಹಸಿ; ಲೇಸು: ಒಳಿತು; ಸುರಿ: ವರ್ಷಿಸು; ಕೆರಳು: ಕೋಪಗೊಳ್ಳು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮರುಳ: ಮೂಢ; ಗುಣ:ನಡತೆ, ಸ್ವಭಾವ; ಗುರು: ಆಚಾರ್ಯ; ಗೆಲುವು: ಜಯ; ಕಾದು: ಹೋರಾಡು;

ಪದವಿಂಗಡಣೆ:
ಸರಳ +ಸವರಿ +ಮಹಾಸ್ತ್ರ+ಚಯದಲಿ
ನರನನ್+ಎಚ್ಚನು +ನಮ್ಮ +ಲಾಗಿನ
ಧುರವು +ತಾನಿದು +ದಿಟ್ಟನಹೆಯೋ +ಪಾರ್ಥ +ಲೇಸೆನುತ
ಸರಳು +ಸುರಿಯಲು +ಕೃಷ್ಣ +ಪಾರ್ಥನ
ಕೆರಳಿದನು +ಫಡ +ಮರುಳೆ +ಗುಣದಲಿ
ಗುರುವ +ಗೆಲುವುದ +ಮಾಡು +ಗೆಲುವಾ+ ಕಾದಿ+ ನೀನೆಂದ

ಅಚ್ಚರಿ:
(೧) ಗುರುಗಳನ್ನು ಗೆಲ್ಲಲು ಕೃಷ್ಣನ ಸಲಹೆ – ಗುಣದಲಿ ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ

ಪದ್ಯ ೩೪: ಅರ್ಜುನನು ಮಹಾಸ್ತ್ರವನ್ನು ಎಲ್ಲಿ ಪಠಿಸಿದನು?

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಿಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಸಾತ್ಯಕಿ ಭೀಮರನ್ನು ಕರೆದು ದೊರೆಯನ್ನು ರಕ್ಷಿಸಲು ನಿಲಿಸಿದನು. ಕೈಕೆಯ ಚೈದ್ಯ ಸೃಂಜಯರ ಸೈನ್ಯಗಳನ್ನು ಶತ್ರು ಸೈನ್ಯವನ್ನೆದುರಿಸಲು ಕಳಿಸಿದನು. ಅರ್ಜುನನು ಸೈನ್ಯದಿಂದ ಐದು ನೂರು ಬಿಲ್ಲುಗಳ ದೂರ ಹೋಗಿ ಮಹಾಸ್ತ್ರ ಮಂತ್ರವನ್ನು ಜಪಿಸಿದನು.

ಅರ್ಥ:
ಕರೆದು: ಬರೆಮಾಡು; ನೃಪ: ರಾಜ; ವರ: ಶ್ರೇಷ್ಠ; ಸುಯ್ದಾನ: ರಕ್ಷಣೆ; ನಿಲಿಸು: ಸ್ಥಿತವಾಗಿರು; ಅರಿ: ವೈರಿ; ಬಲ; ಸೈನ್ಯ; ನೂಕು: ತಳ್ಳು; ಮುರಮಥನ: ಕೃಷ್ಣ; ಒಡಗೂಡು: ಜೊತೆ; ಮೋಹರ: ಯುದ್ಧ; ಅಂತರ: ದೂರ; ತೊಲಗು: ಹೋಗು; ಅಸ್ತ್ರ: ಶಸ್ತ್ರ, ಆಯುಧ; ಜಪಿಸು: ಪಠಿಸು, ಮಂತ್ರಿಸು;

ಪದವಿಂಗಡಣೆ:
ಕರೆದು +ಸಾತ್ಯಕಿ +ಭೀಮನನು +ನೃಪ
ವರನ +ಸುಯ್ದಾನದಲಿ +ನಿಲಿಸಿದನ್
ಅರಿಬಲಕೆ +ನೂಕಿದನು +ಕೈಕೆಯ +ಚೈದ್ಯ +ಸೃಂಜಯರ
ಮುರಮಥನನ್+ಒಡಗೂಡಿ +ನಿಜ +ಮೋ
ಹರವನಂದ್+ಐನೂರು +ಬಿಲ್ಲಂ
ತರಕೆ+ ತೊಲಗಿ +ಮಹಾಸ್ತ್ರಮಂತ್ರವ +ಜಪಿಸಿದನು +ಪಾರ್ಥ

ಪದ್ಯ ೭೩: ಕೃಷ್ಣನು ಅರ್ಜುನನಿಗೆ ಏನೆಂದು ಉಪದೇಶಿಸಿದನು?

ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ (ದ್ರೋಣ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ನುಡಿಯನ್ನು ಮುಂದುವರೆಸುತ್ತಾ, ಭಗದತ್ತನ ಶಕ್ತಿ ಕೊನೆಗೊಂಡಿತು, ಇನ್ನು ನಿನ್ನ ಧನುಸ್ಸಿನ ಹೆದೆಯನ್ನೇರಿಸಿ ಮಹಾಸ್ತ್ರವನ್ನು ತೊಡಿಸು. ಸುಪ್ರತೀಕವನ್ನು ಮುರಿದು ಭಗದತ್ತನನ್ನು ಬೀಳಿಸು. ನನ್ನೊಡನೆ ಮಾತಿನ ಹೋರಾಟದಲ್ಲಿ ತೊಡಗದೆ ಯುದ್ಧವನ್ನಾರಂಭಿಸು ಎಂದು ಹೇಳಲು, ಅರ್ಜುನನು ಅವನ ಪಾದಗಳಿಗೆ ನಮಸ್ಕರಿಸಿ, ಕೃಪಾಸಾಗರನಿಂದ ಅಭಯವನ್ನು ಪಡೆದು ಗಾಂಡೀವವನ್ನು ಹಿಡಿದನು.

ಅರ್ಥ:
ತೀರು: ಮುಗಿಸು; ಶಕ್ತಿ: ಬಲ; ಚಾಪ: ಬಿಲ್ಲು; ನಾರಿ: ಹೆಣ್ಣು; ಚಾಪದನಾರಿ: ಬಿಲ್ಲಿನ ಹೆದೆ; ಬೆಸ: ಕೆಲಸ, ಕಾರ್ಯ; ಮಹಾಸ್ತ್ರ: ದೊಡ್ಡ ಶಸ್ತ್ರ; ಆರುಭಟೆ: ಆರ್ಭಟ, ಗರ್ನಜೆ; ಗಜ: ಆನೆ; ಮುರಿ: ಸೀಳು; ಕೆಡೆ: ಬೀಳು, ಕುಸಿ; ಮಹೀ: ಭೂಮಿ; ಸುತ:ಮಗ; ಹೋರು: ಧರಿಸು; ಹೊಗು: ಬವರ: ಕಾಳಗ, ಯುದ್ಧ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ); ಅಂಘ್ರಿ: ಪಾದ; ಎರಗು: ಬಾಗು, ನಮಸ್ಕರಿಸು; ಕರುಣ: ದಯೆ; ವಾರಿಧಿ: ಸಮುದ್ರ; ಅಭಯ: ರಕ್ಷಣೆ; ಪಡೆ: ದೊರಕು; ತುಡುಕು: ಹೋರಾಡು, ಸೆಣಸು; ಧನು: ಚಾಪ;

ಪದವಿಂಗಡಣೆ:
ತೀರಿತ್+ಆತನ +ಶಕ್ತಿ +ಚಾಪದ
ನಾರಿ +ಬೆಸಲಾಗಲಿ +ಮಹಾಸ್ತ್ರವನ್
ಆರುಭಟೆಯಲಿ+ ಗಜವ +ಮುರಿ +ಕೆಡೆ+ಎಸು+ ಮಹೀಸುತನ
ಹೋರದಿರು +ಹೊಗು +ಬವರಕ್+ಎನಲ್+ಅಸು
ರಾರಿ+ಅಂಘ್ರಿಯೊಳ್+ಎರಗಿ +ಕರುಣಾ
ವಾರಿಧಿಯೊಳ್+ಅಭಯವನು +ಪಡೆದನು +ತುಡುಕಿದನು +ಧನುವ

ಅಚ್ಚರಿ:
(೧) ಭಗದತ್ತನನ್ನು ಮಹೀಸುತ ಎಂದು ಕರೆದಿರುವುದು
(೨) ಅಸುರಾರಿ, ಕರುಣಾವಾರಿಧಿ – ಕೃಷ್ಣನನ್ನು ಕರೆದ ಪರಿ