ಪದ್ಯ ೪೩: ಅಶ್ವತ್ಥಾಮನು ಕೃಪನೆದುರು ಹೇಗೆ ಬಂದನು?

ಬಸಿವ ರಕುತದಡಾಯುಧದ ನೆಣ
ವಸೆಯತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ (ಗದಾ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಖಡ್ಗದಿಮ್ದ ರಕ್ತ ಬಸಿಯುತ್ತಿರಲು, ನೆಣ ವಸೆ ಕರುಳ ತುಂಡುಗಳು ಅಂಟಿದ ಬಟ್ಟೆ, ಕೈ, ಮೈಗಳಿಂದ ಕೂಡಿ ಕಠೋರವಾದ ಭಯಂಕರವಾದ ಹುಬ್ಬುಗಳನ್ನು ಗಂಟಿಟ್ಟು ಮುಖವು ಕಠೋರವಾಗಿ ಕಾಣುತ್ತಿರಲು, ಹಲ್ಲಿನಿಂದ ತುಟಿಯನ್ನು ಕಚ್ಚಿ, ವೈರಿ ಸಂಹಾರ ವ್ಯಸನಿಯಾದ ಅಶ್ವತ್ಥಾಮನು ಕೃಪನ ಬಳಿಗೆ ಬಂದನು.

ಅರ್ಥ:
ಬಸಿ: ಒಸರು, ಸ್ರವಿಸು; ರಕುತ: ನೆತ್ತರು; ಆಯುಧ: ಶಸ್ತ್ರ; ನೆಣ: ಕೊಬ್ಬು, ಮೇದಸ್ಸು; ತೊಂಗಲು: ಗೊಂಚಲು, ಗೊಂಡೆ; ಕರುಳು: ಪಚನಾಂಗ; ಬಂಧ: ಕಟ್ಟು, ಬಂಧನ; ವಸನ: ದೇಹ, ವಾಸಿಸುವಿಕೆ, ನೆಲಸುವಿಕೆ; ಕೈ: ಹಸ್ತ; ಮೈ: ದೇಹ; ಕಠೋರ: ಭಯಂಕರ; ಭುಕುಟಿ: ಹುಬ್ಬು; ಭೀಷಣ: ಭಯಂಕರವಾದ; ಮುಸುಡು: ಮುಖ; ಹೊಗರು: ಕಾಂತಿ, ಪ್ರಕಾಶ; ದಂತ: ಹಲ್ಲು; ದಂಶ: ಕಚ್ಚುವುದು; ದಶನ: ಹಲ್ಲು, ದಂತ; ವ್ಯಸನ: ಗೀಳು, ಚಟ; ವೀರಾವೇಶ: ರೋಷ; ಬಂದನು: ಆಗಮಿಸು; ಸಮ್ಮುಖ: ಎದುರು;

ಪದವಿಂಗಡಣೆ:
ಬಸಿವ +ರಕುತದ್+ಅಡಾಯುಧದ +ನೆಣ
ವಸೆಯ+ತೊಂಗಲು+ಕರುಳ +ಬಂಧದ
ವಸನ +ಕೈ+ಮೈಗಳ +ಕಠೋರ+ಭ್ರುಕುಟಿ +ಭೀಷಣದ
ಮುಸುಡ+ ಹೊಗರಿನ +ದಂತ+ದಂಶಿತ
ದಶನವಾಸದ +ವೈರಿ+ಹಿಂಸಾ
ವ್ಯಸನ+ ವೀರಾವೇಶಿ+ ಬಂದನು +ಕೃಪನ +ಸಮ್ಮುಖಕೆ

ಅಚ್ಚರಿ:
(೧) ಅಶ್ವತ್ಥಾಮನನ್ನು ವರ್ಣಿಸುವ ಪರಿ – ದಂತದಂಶಿತದಶನವಾಸದ ವೈರಿಹಿಂಸಾವ್ಯಸನ ವೀರಾವೇಶಿ

ಪದ್ಯ ೫೫: ಭೀಮ ದುರ್ಯೋಧನರು ತಮ್ಮ ಹಗೆಯನ್ನು ಹೇಗೆ ವ್ಯಕ್ತಪಡಿಸಿದರು?

ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ (ಗದಾ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಘೋರವಾದ ಅತಿವೇಗದ ವೀರರಿಬ್ಬರೂ ಒಬ್ಬರನ್ನೊಬ್ಬರು ತರುಬಿ ನಿಂತರು. ಕಣ್ಣಾಲಿಗಳು ನೆಟ್ಟನೋಟದಿಂದ ಲಟಕಟಿಸಿದವು. ಕತುವಚನಗಳಿಂದ ಒಬ್ಬರನ್ನೊಬ್ಬರು ನಿಂದಿಸಿ ರೋಷವನ್ನು ವ್ಯಕ್ತಪಡಿಸಿದರು. ಸಿಟ್ಟಿನಿಂದ ಒಬ್ಬರನ್ನೊಬ್ಬರು ಮೂದಲಿಸಿದರು.

ಅರ್ಥ:
ಚತುಳ: ಚಟುವಟಿಕೆ, ಲವಲವಿಕೆ; ಭಾರಂಕ: ಮಹಾಯುದ್ಧ; ಭಟ: ಸೈನಿಕ; ತರುಬು: ಎದುರಿಸು, ಅಡ್ಡಹಾಕು; ಉಬ್ಬೆ: ಹೆಚ್ಚಳ; ಲಟಕಟ: ಉದ್ರೇಕಗೊಳ್ಳು; ಕಣ್ಣು: ನಯನ; ಕಣ್ಣಾಲಿ: ಕಣ್ಣಿನ ಕೊನೆ, ಓರೆ ಕಣ್ಣು; ಬದ್ಧ: ಕಟ್ಟಿದ, ಬಿಗಿದ; ಭ್ರುಕುಟಿ: ಹುಬ್ಬು; ಭಂಗ: ಮುರಿ; ಕಟುವಚನ: ಒರಟು ಮಾತು; ವಿಕ್ಷೇಪ: ಇಡಲ್ಪಟ್ಟಿದ್ದು; ರೋಷ: ಕೋಪ; ಸ್ಫುಟ: ಸ್ಪಷ್ಟವಾದ; ಘಟ: ಶರೀರ; ವಿಘಟನ: ಬೇರೆ ಮಾಡು; ಮೂದಲಿಸು: ಹಂಗಿಸು; ಮುಳಿಸು: ಕೋಪ;

ಪದವಿಂಗಡಣೆ:
ಚಟುಳತರ +ಭಾರಂಕದ್+ಅಂಕದ
ಭಟರು +ತರುಬಿದರ್+ಉಬ್ಬೆಯಲಿ+ ಲಟ
ಕಟಿಸಿದವು +ಕಣ್ಣಾಲಿ +ಬದ್ಧ+ಭ್ರುಕುಟಿ+ಭಂಗದಲಿ
ಕಟುವಚನ +ವಿಕ್ಷೇಪ+ರೋಷ
ಸ್ಫುಟನವೇಲ್ಲಿತ+ವಾಕ್ಯಭಂಗೀ
ಘಟನ +ವಿಘಟನದಿಂದ +ಮೂದಲಿಸಿದರು +ಮುಳಿಸಿನಲಿ

ಅಚ್ಚರಿ:
(೧) ಪದಗಳ ರಚನೆ – ಘಟನ ವಿಘಟನದಿಂದ
(೨) ಮ ಕಾರದ ಜೋಡಿ ಪದ – ಮೂದಲಿಸಿದರು ಮುಳಿಸಿನಲಿ

ಪದ್ಯ ೫೮: ಕೌರವ ಸೈನಿಕರು ಏನೆಂದು ಕೂಗಿದರು?

ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ (ದ್ರೋಣ ಪರ್ವ, ೧೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಯ್ಯೋ ದೊರೆಯೇ, ಶತ್ರುವಿಗೆ ಸಿಕ್ಕಿದನು. ಮಹಾರಥರಾದ ದ್ರೋಣ ಕೃಪರೆಂಬ ಪಾಪಿಗಳು ದೊರೆಯನ್ನು ಹಿಡಿಂಬಿಯ ಮಗನಿಗೆ ಒಪ್ಪಿಸಿಬಿಟ್ಟು ಅವನನ್ನು ಕೊಂದರು, ಎಂದು ದೊರೆಯ ಪರಿಚಾರಕರು ಮಂತ್ರಿಗಳು ಒರಲಲು, ಆ ಕೂಗನ್ನು ಕೇಳಿ ಹುಬ್ಬುಗಂಟಿಟ್ಟ ಭೀಕರಮುಖದ ರಾಕ್ಷಸರು ಯುದ್ಧಕ್ಕೆ ಬಂದರು.

ಅರ್ಥ:
ಅಕಟ: ಅಯ್ಯೋ; ದೊರೆ: ರಾಜ; ಸಿಕ್ಕು: ಬಂಧನಕ್ಕೊಳಗಾಗು; ಪಾತಕ: ಪಾಪಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಶಿವ: ಶಂಕರ; ಅರ್ಭಕ: ಸಣ್ಣ ಹುಡುಗ; ಒಪ್ಪಿಸು: ಒಪ್ಪಿಗೆ, ಸಮ್ಮತಿ; ಕೊಂದು: ಸಾಯಿಸು; ಸಕಲ: ಎಲ್ಲಾ; ಪರಿಚಾರಕ: ಆಳು, ಸೇವಕ; ಪ್ರಕರ: ಗುಂಪು, ಸಮೂಹ; ಕೇಳು: ಆಲಿಸು; ಭ್ರುಕುಟಿ: ಹುಬ್ಬು; ಬದ್ಧ: ಬಂಧಿಸು, ಗಟ್ಟಿ; ಭೀಷಣ: ಭಯಂಕರವಾದ; ಮಸಗು: ಹರಡು; ಕೆರಳು; ದೈತ್ಯ: ರಾಕ್ಷಸ; ಬಲ: ಸೈನ್ಯ; ಜಲಧಿ: ಸಾಗರ;

ಪದವಿಂಗಡಣೆ:
ಅಕಟ +ದೊರೆಯೋ +ಸಿಕ್ಕಿದನು +ಪಾ
ತಕರು +ರಥಿಕರು +ಶಿವ +ಹಿಡಿಂಬ
ಅರ್ಭಕನಿಗ್+ಒಪ್ಪಿಸಿಕೊಟ್ಟು +ಕೊಂದರು +ದ್ರೋಣ +ಕೃಪರೆನುತ
ಸಕಲ+ ಪರಿಚಾರಕರು+ ಮಂತ್ರಿ
ಪ್ರಕರವ್+ಒರಲಲು +ಕೇಳಿ +ಬದ್ಧ
ಭ್ರುಕುಟಿ +ಭೀಷಣಮುಖರು +ಮಸಗಿತು +ದೈತ್ಯ+ಬಲ+ಜಲಧಿ

ಅಚ್ಚರಿ:
(೧) ಘಟೋತ್ಕಚನನ್ನು ಹಿಡಿಂಬಾರ್ಭಕ ಎಂದು ಕರೆದಿರುವುದು
(೨) ಬ ಕಾರದ ತ್ರಿವಳಿ ಪದ – ಬದ್ಧ ಭ್ರುಕುಟಿ ಭೀಷಣಮುಖರು

ಪದ್ಯ ೪೪: ಕೃಷ್ಣನು ತಂತ್ರವನ್ನರಿತ ಬಲರಾಮನು ಹೇಗೆ ಸ್ಪಂದಿಸಿದನು?

ಅಕಟ ದುರ್ಯೋಧನಗೆ ತಪ್ಪಿಸಿ
ಸಕಲಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ ನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ (ಆದಿ ಪರ್ವ, ೧೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ನನ್ನ ಬಯಕೆಯಂತೆ ಸುಭದ್ರೆಯನು ದುರ್ಯೋಧನನಿಗೆ ಕೊಡುವುದನ್ನು ತಪ್ಪಿಸಲು ಯಾದವರೆಲ್ಲರೂ ಇಲ್ಲಿರುವರಲ್ಲ, ಕೃಷ್ಣನ ಕಪಟಮಂತ್ರವಿದು, ಅದನ್ನು ತಿಳಿದುಕೊಳ್ಳಲಾರದ ದಡ್ಡ ನಾನು. ಮರ್ಯಾದೆಯಿರುವವರಿಗೆ ಕುಟಿಲವನ್ನರಿಯದ ಅಂತಃಕರಣವು ತೊಂದರೆಕೊಡುತ್ತದೆ, ಎಂದು ಹುಬ್ಬುಗಂಟಿಟ್ಟುಕೊಂದು ಮುಖವು ಭಯಾನಕರೂಪವನ್ನು ತಾಳಿರಲು ಬಲರಾಮನು ದ್ವಾರಕೆಗೆ ಹೋದನು.

ಅರ್ಥ:
ಅಕಟ: ಅಯ್ಯೋ; ತಪ್ಪಿಸು: ಅಡ್ಡಿಪಡಿಸು; ಸಕಲ: ಎಲ್ಲಾ; ಐದು: ಹೋಗಿಸೇರು;ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಮತಿ: ಬುದ್ಧಿ; ಐಸಲೆ: ಅಲ್ಲವೆ; ಕುಮಂತ್ರ: ಕೆಟ್ಟ, ಕಪಟಮಂತ್ರ; ಕುಟಿಲ:ವಂಚನೆಯಲ್ಲಿ ನಿಪುಣ; ಅಂತಃಕರಣ: ಚಿತ್ತವೃತ್ತಿ, ದಯೆ; ಬಾಧಕ: ತಡೆ; ಗರುವ:ಶ್ರೇಷ್ಠ, ಉತ್ತಮ; ನುತ: ಸ್ತುತಿಸಲ್ಪಡುವ; ಸಭ್ರುಕುಟಿ: ಹುಬ್ಬುಗಂಟಿಟ್ಟುಕೊಂಡು; ರೌದ್ರ: ಭಯಾನಕ; ಆನನ: ಮುಖ; ಮುರಿ: ತೆರಳು; ಪುರ: ಊರು;

ಪದವಿಂಗಡಣೆ:
ಅಕಟ +ದುರ್ಯೋಧನಗೆ +ತಪ್ಪಿಸಿ
ಸಕಲ+ಯಾದವರ್+ಇಲ್ಲಿಗ್+ಐದರೆ
ವಿಕಳಮತಿ +ನಾನ್+ಐಸಲೇ +ಕೃಷ್ಣನ +ಕುಮಂತ್ರವಿದು
ಅ+ಕುಟಿಲ+ಅಂತಃಕರಣತನ+ ಬಾ
ಧಕವಲೇ +ಗರುವರಿಗ್+ ಎನುತ+ ಸ
ಭ್ರುಕುಟಿ +ರೌದ್ರ+ಆನನನು+ ಮುರಿದನು +ಪುರಕೆ +ಬಲರಾಮ

ಅಚ್ಚರಿ:
(೧) ಅಕಟ, ಅಕುಟಿಲ, ಭ್ರುಕುಟಿ – “ಟ” ಕಾರದ ಕೆಲ ಪದಗಳ ಬಳಕೆ
(೨) ಒಳ್ಳೆಯ ಬುದ್ದಿ (ಕುಟಿಲವಿಲ್ಲದ) ಬಾಧೆಯಾಗುತ್ತದೆ ಎಂದು ಹೇಳಿರುವ ಬಗೆ – ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆ