ಪದ್ಯ ೪೭: ಕವಚವು ದ್ರೋಣನ ಬಳಿ ಹೇಗೆ ಬಂದಿತು?

ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶನಿ
ನಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ (ದ್ರೋಣ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇದು ಶಿವನ ಕವಚ, ವೃತ್ರನೊಡನೆ ಯುದ್ಧಮಾದುವಾಗ ಶಿವನು ದೇವೇಂದ್ರನಿಗೆ ಕೊಟ್ಟನು, ಇಂದ್ರನು ಇದನ್ನು ಆಂಗಿರನಿಗೆ ನೀಡಿದನು, ಅವನು ಇದನ್ನು ಬೃಹಸ್ಪತಿಗೆ ಕೊಟ್ಟನು. ಅದು ಬೃಹಸ್ಪತಿಯಿಂದ ಭರದ್ವಾಜನಿಗೆ ಬಂದಿತು, ಭರದ್ವಾಜನು ಇದನ್ನು ನನಗೆ ನೀಡಿದನು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಹಾದೇವ: ಶಿವ, ಶಂಕರ; ಕದನ: ಯುದ್ಧ; ಸುರೇಂದ್ರ: ಇಂದ್ರ; ಇತ್ತು: ನೀಡು; ಬಳಿಕ: ನಂತರ; ಕರುಣ: ದಯೆ;

ಪದವಿಂಗಡಣೆ:
ಇದು +ಮಹಾದೇವರದು +ವೃತ್ರನ
ಕದನದಲಿ +ಕೈ +ಸಾರ್ದುದ್+ಈಶನಿ
ನಿದು +ಸುರೇಂದ್ರಂಗ್+ಆ+ ಸುರೇಶ್ವರನ್+ಆಗಿರಂಗಿತ್ತ
ಇದು +ಬೃಹಸ್ಪತಿಗ್+ಆಂಗಿರನನಿನಾ
ದುದು +ಭರದ್ವಾಜಂಗೆ +ಬಳಿಕಾ
ದುದು +ಭರದ್ವಾಜಾಖ್ಯನಿತ್ತನು +ತನಗೆ +ಕರುಣದಲಿ

ಅಚ್ಚರಿ:
(೧) ಕವಚವು ಬಂದ ಪರಿ – ಮಹಾದೇವ, ಸುರೇಂದ್ರ, ಆಂಗಿರ, ಬೃಹಸ್ಪತಿ, ಭಾರದ್ವಾಜ, ದ್ರೋಣ

ಪದ್ಯ ೬೬: ಗ್ರಹಗಳ ನಿಜಗೃಹ ಯಾವುದು?

ಹರಿ ತರಣಿಗಿಂದುವಿಗೆ ಕರ್ಕಟ
ಧರಣಿಜಂಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯಝಷತುಲೆ ವೃಷಭದಾನದ
ಗುರುವಿನವು ಮೃಗ ಕುಂಭ ಮಂದಂ
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹವು (ಅರಣ್ಯ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ಸೂರ್ಯನಿಗೆ ಸಿಂಹರಾಶಿ, ಚಂದ್ರನಿಗೆ ಕರ್ಕಾಟಕ, ಮಂಗಳ ಗ್ರಹನಿಗೆ ಮೇಷ ಮತ್ತು ವೃಷ್ಕಿಕ ರಾಶಿ, ಬುಧಗ್ರಹಕ್ಕೆ ಮಿಥುನ, ಕನ್ಯೆ, ಬೃಹಸ್ಪತಿ (ಗುರು) ವಿಗೆ ಧನು ಮತ್ತು ಮೀನ, ವೃಷಭ, ತುಲಾ ರಾಶಿ ಶುಕ್ರಗ್ರಹಕ್ಕೆ , ಮಕರ, ಕುಂಭ ರಾಶಿಯು ಶನಿಗ್ರಹಕ್ಕೆ , ರಾಹು – ಕನ್ಯಾ, ಕೇತು ಮೀನ ರಾಶಿ ಇವು ಆಯಾ ಗ್ರಹಗಳ ಸ್ವಕ್ಷೇತ್ರವು.

ಅರ್ಥ:
ಹರಿ: ಸಿಂಹ; ತರಣಿ: ಸೂರ್ಯ; ಇಂದು: ಚಂದ್ರ; ಧರಣಿಜ: ಮಂಗಳ; ಅಜ: ಮೇಷ ರಾಶಿ; ಮಿಥುನ; ಹಿಮಕರ: ಚಂದ್ರ; ತನಯ: ಮಗ; ದಾನವ: ರಾಕ್ಷಸ; ಗುರು: ಆಚಾರ್ಯ; ಚಾಪ: ಬಿಲ್ಲು; ಮಂದ: ನಿಧಾನ; ನಿಜಗೃಹ: ತಮ್ಮ ಮನೆ; ಕೂಡು: ಸೇರು; ಝಷ: ಮೀನು, ಮತ್ಸ್ಯ; ಪಿರಿಯ: ದೊಡ್ಡದು;

ಪದವಿಂಗಡಣೆ:
ಹರಿ +ತರಣಿಗ್+ಇಂದುವಿಗೆ+ ಕರ್ಕಟ
ಧರಣಿಜಂಗ್+ಅಜ +ವೃಶ್ಚಿಕವು +ಹಿಮ
ಕರನ +ತನಯಗೆ +ಮಿಥುನ +ಕನ್ಯೆ +ಬೃಹಸ್ಪತಿಗೆ +ಚಾಪ
ಪಿರಿಯ+ಝಷತುಲೆ +ವೃಷಭ+ದಾನದ
ಗುರುವಿನವು+ ಮೃಗ +ಕುಂಭ +ಮಂದಂ
ಗಿರವು+ ನಿಜಗೃಹ+ ರಾಹು+ಕೇತುಗಳ್+ಅವರ +ಕೂಡಿಹವು

ಅಚ್ಚರಿ:
(೧) ಒಂಬತ್ತು ಗ್ರಹಗಳು ಮತ್ತು ಅವರ ರಾಶಿಯನ್ನು ವರ್ಣಿಸುವ ಪದ್ಯ

ಪದ್ಯ ೩೫: ಬೃಹಸ್ಪತಿಯು ಇಂದ್ರನಿಗೆ ಯಾವ ಉಪದೇಶವ ನೀಡಿದನು?

ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ವಿದುರನು ನಾಲ್ಕು ಮುಖ್ಯವಾದ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು, ಇದನ್ನು ದೇವಗುರು ಬೃಹಸ್ಪತಿಯೇ ಇಂದ್ರನಿಗೆ ಹೇಳಿದ್ದಾನೆ, ಅವು: ದೇವರ ಆರಾಧನೆಯನ್ನು ಸಂಕಲ್ಪ ಪೂರ್ವಕವಾಗಿ ಮಾಡಬೇಕು, ಗುರುಗಳಲ್ಲಿ ವಿನಯವನ್ನು ಪ್ರದರ್ಶಿಸಬೇಕು, ಹಿರಿಯರನ್ನು ಗೌರವಿಸಬೇಕು ಮತ್ತು ಪಾಪಕಾರ್ಯವನ್ನು ಮಾಡಬಾರದು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಚಿತ್ತ: ಮನಸ್ಸು; ಸ್ವರ್ಗ: ನಾಕ; ಒರೆ: ಶೋಧಿಸಿ ನೋಡು, ಹೇಳು, ನಿರೂಪಿಸು; ಅಮರ: ದೇವತೆ; ಗುರು: ಆಚಾರ್ಯ; ದೇವ: ಈಶ್ವರ; ಸಂಕಲ್ಪ: ನಿರ್ಧಾರ, ನಿರ್ಣಯ; ಕೃತ: ಪುಣ್ಯವಂತ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ಹಿರಿಯ: ದೊಡ್ಡವರು; ಸಂಭಾವನೆ: ಮನ್ನಣೆ; ಸಂಹರಣ: ಪ್ರಳಯ, ಅಳಿವು; ಪದ: ನಿಲುವು;

ಪದವಿಂಗಡಣೆ:
ಧರಣಿಪತಿ +ಚಿತ್ತವಿಸು +ಸ್ವರ್ಗದಲ್
ಒರೆದನ್+ಇಂದ್ರಗ್+ಅಮರ +ಗುರು +ದೇ
ವರಲಿ +ಸಂಕಲ್ಪವನು +ಕೃತ ವಿದ್ಯರಲಿ+ ವಿನಯವನು
ಹಿರಿಯರಲಿ +ಸಂಭಾವನೆಯ +ಸಂ
ಹರಣಪದವನು +ಪಾಪ +ಕಾರ್ಯದೊಳ್
ಇರದೆ +ಮಾಡುವುದೆಂಬ+ ನಾಲ್ಕನು +ರಾಯ +ಕೇಳೆಂದ

ಅಚ್ಚರಿ:
(೧) ಧರಣಿಪತಿ, ರಾಯ – ಸಮನಾರ್ಥಕ ಪದ
(೨) ಬೃಹಸ್ಪತಿಯನ್ನು ಅಮರಗುರು ಎಂದು ಕರೆದಿರುವುದು