ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೩೬: ಕರ್ಣನೇಕೆ ಭೂಮಿಗಿಳಿದು ಯುದ್ಧ ಮಾಡಿದನು?

ತರಹರಿಸು ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ ಪವನಜ
ಬಿರುಗಣೆಯಲಿರದೆಚ್ಚನಹಿತನ ಧನುವ ಸಾರಥಿಯ
ತುರಗವನು ಸಿಂಧವನು ಮಾರ್ಗಣ
ವೆರಡರಲಿ ನುಗ್ಗೊತ್ತೆ ರಥದಿಂ
ಧರಣಿಗಿಳಿದನು ಕರ್ಣ ಕೊಂಡನು ಹಲಗೆ ಖಂಡೆಯವ (ದ್ರೋಣ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನೀನು ಬಿಲ್ಲುಗಾರನೇ ಆದರೆ, ಸ್ವಲ್ಪ ಸಹಿಸು, ನನ್ನ ಬಾಣಗಳನ್ನು ನಿವಾರಿಸಿಕೋ ಎನ್ನುತ್ತಾ ಭೀಮನು ಕರ್ಣನ ಧನುಸ್ಸು, ಸಾರಥಿ, ಕುದುರೆಗಳು, ಧ್ವಜಗಳನ್ನು ಎರಡು ಬಾಣಗಳಿಂದ ಕಡಿದು ಹಾಕಲು, ಕರ್ಣನು ಭೂಮಿಗಿಳಿದು ಕತ್ತಿ ಗುರಾಣಿಗಳನ್ನು ಹಿಡಿದು ಯುದ್ಧಮಾಡಲು ನಿಂತನು.

ಅರ್ಥ:
ತರಹರಿಸು: ಕಳವಳಿಸು, ಸೈರಿಸು; ಬಿಲುಗಾರ: ಧನುರ್ಧರ; ಪರಿಹರಿಸು: ನಿವಾರಿಸು; ಪವನಜ: ವಾಯುಪುತ್ರ; ಕಣೆ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ಧನು: ಬಿಲ್ಲು; ಸಾರಥಿ: ಸೂತ; ತುರಗ: ಅಶ್ವ; ಸಿಂಧ: ಪತಾಕೆ, ಬಾವುಟ; ಮಾರ್ಗಣ: ಬಾಣ; ನುಗ್ಗು: ತಳ್ಳು; ಒತ್ತು: ಮುತ್ತು; ರಥ: ಬಂಡಿ; ಧರಣಿ: ಭೂಮಿ; ಇಳಿ: ಕುಸಿ; ಕೊಂಡು: ಧರಿಸು; ಹಲಗೆ: ಒಂದು ಬಗೆಯ ಗುರಾಣಿ; ಖಂಡೆಯ: ಕತ್ತಿ, ಖಡ್ಗ;

ಪದವಿಂಗಡಣೆ:
ತರಹರಿಸು +ಬಿಲುಗಾರನಾದರೆ
ಪರಿಹರಿಸಿಕೊಳ್ಳೆನುತ +ಪವನಜ
ಬಿರುಗಣೆಯಲಿರದ್+ಎಚ್ಚನ್+ಅಹಿತನ +ಧನುವ +ಸಾರಥಿಯ
ತುರಗವನು +ಸಿಂಧವನು +ಮಾರ್ಗಣವ್
ಎರಡರಲಿ +ನುಗ್ಗೊತ್ತೆ +ರಥದಿಂ
ಧರಣಿಗಿಳಿದನು +ಕರ್ಣ +ಕೊಂಡನು+ ಹಲಗೆ+ ಖಂಡೆಯವ

ಅಚ್ಚರಿ:
(೧) ಬಿಲು, ಧನು; ಕಣೆ, ಮಾರ್ಗಣ – ಸಮಾನಾರ್ಥಕ ಪದ

ಪದ್ಯ ೩೩: ಕರ್ಣನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ತಗರು ತೊಲಗಿದಡೇನು ಬಲುಗಾ
ಳೆಗದ ಗಾಢಿಕೆ ಮೇಲೆ ಶೌರ್ಯದ
ಸೊಗಡ ಸೈರಿಸಲರಿಯೆ ಕಲಿತನದಂಗ ನಿನಗೇಕೆ
ಉಗಿ ಸರಳ ಬಿಲುಗಾರನಾದರೆ
ತೆಗೆದು ಕೈದುವ ಕೊಳ್ಳೆನುತ ತನಿ
ಹೊಗರುಗಣೆಗಳ ಸೂಸಿದನು ರವಿಸೂನು ಸಮರದಲಿ (ದ್ರೋಣ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನು ಮಾತನಾಡುತ್ತಾ, ನಾನು ಹಿಂದಕ್ಕೆ ಹೊದೆ, ನಿಜ, ಆದರೆ ಟಗರು ಕಾಳಗದಲ್ಲಿ ಹಿಮ್ಮೆಟ್ಟುವುದು ಮೇಲೆ ಬೀಳುವುದಕ್ಕೆ, ನನ್ನ ಶೌರ್ಯದ ಸೊಗಡನ್ನು ಕೂಡ ನೀನು ಸಹಿಸಲಾರೆ. ಪರಾಕ್ರಮದ ರೀತಿ, ನಿನಗೆಲ್ಲಿ? ನೀನು ಬಿಲುಗಾರನಾಗಿದ್ದರೆ ಬಾಣವನ್ನು ಎಳೆದುಕೋ ಎನ್ನುತ್ತಾ ಭೀಮನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ತಗರು: ತಡೆಹಿಡಿ, ಟಗರು; ತೊಲಗು: ದೂರ ಸರಿ; ಬಲು: ಬಹಳ; ಕಾಳೆಗ: ಯುದ್ಧ; ಗಾಢ: ಹೆಚ್ಚಳ; ಶೌರ್ಯ: ಸಾಹಸ; ಸೊಗಡು: ಕಂಪು, ವಾಸನೆ; ಸೈರಿಸು: ತಾಳು; ಅರಿ: ತಿಳಿ; ಕಲಿ: ಶೂರ; ಉಗಿ: ಹೊರಹಾಕು; ಸರಳು: ಬಾಣ; ಬಿಲುಗಾರ: ಧನುರ್ಧಾರಿ; ತೆಗೆ: ಹೊರಹಾಕು; ಕೈದು: ಕತ್ತಿ, ಆಯುಧ; ಹೊಗರು: ಕಾಂತಿ, ಪ್ರಕಾಶ; ಕಣೆ: ಬಾಣ; ಸೂಸು: ಹೊರಹೊಮ್ಮು; ರವಿಸೂನು: ಕರ್ಣ; ಸಮರ: ಯುದ್ಧ;

ಪದವಿಂಗಡಣೆ:
ತಗರು +ತೊಲಗಿದಡೇನು +ಬಲು+ಕಾ
ಳೆಗದ +ಗಾಢಿಕೆ +ಮೇಲೆ +ಶೌರ್ಯದ
ಸೊಗಡ +ಸೈರಿಸಲ್+ಅರಿಯೆ +ಕಲಿತನದಂಗ +ನಿನಗೇಕೆ
ಉಗಿ +ಸರಳ +ಬಿಲುಗಾರನಾದರೆ
ತೆಗೆದು +ಕೈದುವ +ಕೊಳ್ಳೆನುತ+ ತನಿ
ಹೊಗರು+ಕಣೆಗಳ +ಸೂಸಿದನು +ರವಿಸೂನು +ಸಮರದಲಿ

ಅಚ್ಚರಿ:
(೧) ಕರ್ಣನು ಉದಾಹರಣೆ ನೀಡುವ ಪರಿ – ತಗರು ತೊಲಗಿದಡೇನು ಬಲುಗಾಳೆಗದ ಗಾಢಿಕೆ ಮೇಲೆ ಶೌರ್ಯದ
ಸೊಗಡ ಸೈರಿಸಲರಿಯೆ

ಪದ್ಯ ೩: ಶಲ್ಯನ ಮೇಲಿನ ಸಾತ್ಯಕಿಯ ಬಾಣಪ್ರಯೋಗ ಹೇಗಿತ್ತು?

ಎಲವೊ ಮಾದ್ರಾಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ (ಕರ್ಣ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಶಲ್ಯನನ್ನು ಉದ್ದೇಶಿಸುತ್ತಾ, ಎಲವೋ ಬಾಹಿರನಾದ ಮಾದ್ರದೇಶದವನೇ (ಶಲ್ಯನೇ) ನನ್ನ ಹತ್ತಿರ ಮಿತಿ ಮೀತಿ ಮಾತನಾಡುವೆಯಾ? ನಿನ್ನ ನಾಲಗೆಯನ್ನು ತೋಟ್ಟೂ ಸೇರಿದಂತೆ ಕೊಯ್ಯುತ್ತೇನೆ ಎಂದು ಬಿಲ್ಲನ್ನು ಹೆದೆಯೇರಿಸೆ ಬಾಣವನ್ನು ಎಲ್ಲಾ ದಿಕ್ಕುಗಳೂ ಹಿಡಿಸದಷ್ಟು ಬಾಣಗಳನ್ನು ಬಿಟ್ಟನು.

ಅರ್ಥ:
ಬಾಹಿರ: ಹೊರಗೆ; ಬಿಡು: ತ್ಯಜಿಸು; ಗಳಹತನ: ಬಾಯಿಗೆ ಬಂದಂತೆ ಮಾತನಾಡುವುದು; ಅಳುಕು: ಹೆದರಿಕೆ; ನಾಲಿಗೆ: ಜಿಹ್ವೆ; ಕರಿನಾಲಿಗೆ: ಕಿರುನಾಲಿಗೆ; ಕೊಯ್ವೆ: ಸೀಳು; ಮಾಣು: ನಿಲ್ಲಿಸು; ಬಿಲು: ಬಿಲ್ಲು; ಬಿಲ್ಲದಿರುವು: ಬಿಲ್ಲಿನ ಹಗ್ಗ; ಉಗುಳಿಸು: ಹೊರಕ್ಕೆ ಹಾಕು; ಅಂಬು: ಬಾಣ; ಅಳವಡಿಸು: ಜೋಡಿಸು; ಬೆಳಸು: ಹೆಚ್ಚಾಗಿಸು; ದಿಗುವಳೆಯ: ದಿಕ್ಕುಗಳು; ನೆರೆ: ಸೇರು; ಬಿಲುಗಾರ: ಬಿಲ್ಲುಬಾಣವನ್ನು ಬಿಡುವವ; ಮಾಣ್:ಬಿಡು; ಮಾಣಿಸು:ತಪ್ಪಿಸು;

ಪದವಿಂಗಡಣೆ:
ಎಲವೊ +ಮಾದ್ರಾ+ಬಾಹಿರನೆ +ಬಿಡು
ಗಳಹತನವೇ+ ನಮ್ಮೊಡನೆ +ತೊ
ಟ್ಟಳುಕೆ+ ಗರಿನಾಲಗೆಯ +ಕೊಯ್ವೆನು +ಮಾಣು +ಮಾಣೆನುತ
ಬಿಲುದಿರುವ್+ಅನುಗುಳಿಸಿದನ್+ಅಂಬಿನ
ಬೆಳಸನಾರ್+ಅಳವಡಿಸುವರು+ ದಿಗು
ವಳೆಯ+ ನೆರೆಯದಿದ್+ಎತ್ತಣದು+ ಬಿಲುಗಾರ+ತನವೆಂದ

ಅಚ್ಚರಿ:
(೧) ಮಾಣು ಮಾಣೆನುತ – ಪದಗಳ ಬಳಕೆ
(೨) ಶಲ್ಯನನ್ನು ಕರೆಯುವ ಬಗೆ – ಎಲವೊ ಮಾದ್ರಾಬಾಹಿರನೆ