ಪದ್ಯ ೫೩: ಧರ್ಮಜನೇಕೆ ಅಳುಕಿದನು?

ಎದ್ದು ವಾಘೆಯೊಳೆತ್ತಿ ಭೀಮನ
ಗುದ್ದಿದನು ಲೇಸಾಗಿ ಮಲ್ಲನ
ನದ್ದಿದನು ನೆಲಕಿಕ್ಕಿ ಭೀಮನು ಬಾಹುಸತ್ವದಲಿ
ತಿದ್ದಿತಾತನ ದೆಸೆಯೆನಲು ಸಿಡಿ
ದೆದ್ದು ಮಲ್ಲನು ಭೀಮನನು ನೆಲ

ಕುದ್ದಿ ಮಂಡಿಯಕೊಂಡು ಹೋರಿದನಳುಕೆ ಭೂಪಾಲ (ವಿರಾಟ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕೆಳಗೆ ಬಿದ್ದ ಭೀಮನ ಮುಖವನ್ನು ಹಿಡಿದು ಜೀಮೂತನು ಬೆನ್ನಿನ ಮೇಲೆ ಗುದ್ದಿದನು. ಭೀಮನು ತೋಳ ಸತ್ವದಿಂದ ಜೀಮೂತನನ್ನು ನೆಲಕ್ಕೆ ಕೆಡವಿ ಒತ್ತಿದನು. ಇನ್ನೇನು ಜೀಮೂತನು ಹೋದನೆಂದು ತಿಳಿಯಲು, ಅವನು ಸಿಡಿದೆದ್ದು ಭೀಮನನ್ನು ನೆಲಕ್ಕೆ ಕೆಡವಿ ಮಂಡಿಯೂರಿ ಹೋರಾಡಿದನು. ಇದನ್ನು ಕಂಡು ಧರ್ಮಜನು ಅಳುಕಿದನು.

ಅರ್ಥ:
ಎದ್ದು: ಮೇಲೇಳು; ವಾಘೆ: ಲಗಾಮು; ಗುದ್ದು: ಅಪ್ಪಳಿಸು; ಲೇಸು: ಒಳಿತು; ಮಲ್ಲ: ಜಟ್ಟಿ; ಅದ್ದು: ಮುಳುಗಿಸು; ನೆಲ: ಭೂಮಿ; ಇಕ್ಕು: ಇರಿಸು, ಇಡು; ಬಾಹು: ಭುಜ; ಸತ್ವ: ಸಾರ; ತಿದ್ದು: ಸರಿಪಡಿಸು; ದೆಸೆ: ದಿಕ್ಕು; ಸಿಡಿದೆದ್ದು: ಜೋರಾಗಿ ಮೇಲೇಳು; ಉದ್ದು:ಒರಸು, ಅಳಿಸು; ಮಂಡಿ: ಮೊಳಕಾಲು, ಜಾನು; ಹೋರು: ಸೆಣಸು, ಕಾದಾಡು; ಅಳುಕು: ಹೆದರು; ಭೂಪಾಲ: ರಾಜ;

ಪದವಿಂಗಡಣೆ:
ಎದ್ದು +ವಾಘೆಯೊಳ್+ಎತ್ತಿ +ಭೀಮನ
ಗುದ್ದಿದನು +ಲೇಸಾಗಿ +ಮಲ್ಲನನ್
ಅದ್ದಿದನು +ನೆಲಕ್+ಇಕ್ಕಿ+ ಭೀಮನು +ಬಾಹು+ಸತ್ವದಲಿ
ತಿದ್ದಿತ್+ಆತನ+ ದೆಸೆ+ಎನಲು +ಸಿಡಿದ್
ಎದ್ದು +ಮಲ್ಲನು +ಭೀಮನನು +ನೆಲಕ್
ಉದ್ದಿ +ಮಂಡಿಯಕೊಂಡು +ಹೋರಿದನ್+ಅಳುಕೆ+ ಭೂಪಾಲ

ಅಚ್ಚರಿ:
(೧) ಎದ್ದು, ಗುದ್ದು, ಅದ್ದು,ಉದ್ದು, ತಿದ್ದು, ಇಕ್ಕು – ಯುದ್ಧವನ್ನು ವಿವರಿಸಲು ಬಳಸಿದ ಪದಗಳು

ಪದ್ಯ ೯೦: ಭೀಮನು ಕೀಚಕನನ್ನು ಹೇಗೆ ಬಡಿದನು?

ಎರಗಿದೊಡೆ ಕೀಚಕನ ಗಾಯಕೆ
ತರಹರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದೊಳೌಡನೊಡೆಯುಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ (ವಿರಾಟ ಪರ್ವ, ೩ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕೀಚಕನ ಒಂದಾನೊಂದು ಪೆಟ್ಟನ್ನು ಭೀಮನು ಸಹಿಸಿಕೊಂಡು ಮಂಡಿ ಹಾಕಿ ಕುಳಿತು, ಅವನ ಪೆಟ್ಟುಗಳನ್ನು ತಪ್ಪಿಸಿಕೊಂಡು, ಮೇಲೆದ್ದು ರೋಷದಿಂದ ತುಟಿಯನ್ನು ಕಚ್ಚಿ ಬರಸಿಡಿಲು ಪರ್ವತದ ಶಿಖರವನ್ನು ಅಪ್ಪಳಿಸುವಂತೆ, ಮುಷ್ಟಿಕಟ್ಟಿ ಬಾಹು ಸತ್ವದಿಂದ ಕಿಚಕನ ನೆತ್ತಿಯನ್ನು ಬಡಿದನು.

ಅರ್ಥ:
ಎರಗು: ಬಾಗು; ಗಾಯ: ಪೆಟ್ಟು; ತರಹರಿಸು: ತಡಮಾಡು; ಕಲಿ: ಶೂರ; ಮಂಡಿಸು: ಬಾಗಿಸು; ಮರೆ: ತಪ್ಪಿಸು; ಮುರಿ: ಸೀಳು; ಎದ್ದು: ಮೇಲೇಳು; ರೋಷ: ಕೋಪಲ್ ಔಡು: ಕೆಳತುಟಿ, ಹಲ್ಲಿನಿಂದ ಕಚ್ಚು; ಉಗಿ: ಇರಿತ, ತಿವಿತ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಪರ್ವತ: ಬೆಟ್ಟ; ಶಿಖರ: ತುದಿ; ಖಳ: ದುಷ್ಟ; ನೆತ್ತಿ: ತಲೆ; ರಣಧೀರ: ಪರಾಕ್ರಮಿ; ಉನ್ನತ: ಹಿರಿಯ, ಉತ್ತಮ; ಬಾಹು: ತೋಳು, ಭುಜ; ಸತ್ವ: ಶಕ್ತಿ, ಬಲ;

ಪದವಿಂಗಡಣೆ:
ಎರಗಿದೊಡೆ +ಕೀಚಕನ +ಗಾಯಕೆ
ತರಹರಿಸಿ+ ಕಲಿಭೀಮ +ಮಂಡಿಸಿ
ಮರೆವಡೆದು +ಮುರಿದೆದ್ದು +ರೋಷದೊಳ್+ಔಡನ್+ಒಡೆ+ಉಗಿದು
ಬರಸಿಡಿಲು +ಪರ್ವತದ +ಶಿಖರವನ್
ಎರಗುವಂತಿರೆ +ಖಳನ +ನೆತ್ತಿಯನ್
ಎರಗಿದನು+ ರಣಧೀರನ್+ಉನ್ನತ +ಬಾಹು+ಸತ್ವದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ
(೨) ಕಲಿ, ರಣಧೀರ – ಸಮನಾರ್ಥಕ ಪದ

ಪದ್ಯ ೨೫: ಅರ್ಜುನನ ಪರಾಕ್ರಮದ ಬಗ್ಗೆ ಶಿವನು ಪಾರ್ವತಿಗೆ ಏನು ಹೇಳಿದ?

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲ್ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ (ಅರಣ್ಯ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಆಯುಧಗಳು ಹಾರಿಹೋದವೆಂದು ಅವನೇನಾದರೂ ಹೆದರಿಕೊಂಡನೇ? ವೀರರಸದ ಮೇಲಿನ ನೊರೆಯಾದರೂ ಆರಿತೇ? ಅವನ ಬಾಹು ಸತ್ವಕ್ಕೆ ಏನಾದರೂ ಕುಂದು ಬಂದೀತೇ? ಕೆಳಕ್ಕೆ ಹಾಕಿದ ಚಂಡಿನಂತೆ ಅವನ ತೋಳುಗಳು ನೆಗೆಯುತ್ತಿವೆ, ಅವನು ಸೆಡ್ಡು ಹೊಡೆಯುವುದನ್ನು ನೋಡು ಎಂದು ಶಿವನು ಪಾರ್ವತಿಗೆ ಹೇಳಿದನು.

ಅರ್ಥ:
ಹಾರು: ಲಂಘಿಸು; ಆಯುಧ: ಶಸ್ತ್ರ; ಭೀತಿ: ಭಯ; ಮಾರುಹೋಗು: ವಶವಾಗು, ಅಧೀನವಾಗು; ವೀರ: ಶೂರ; ಅರಸ: ರಾಜ; ನೊರೆ: ಬುರುಗು; ಆರು: ಬತ್ತುಹೋಗು; ನಿಜ: ತನ್ನ, ದಿಟ; ಬಾಹು: ಭುಜ; ಸತ್ವ: ಸಾರ; ಖಯಖೋಡಿ: ಅಳುಕು, ಅಂಜಿಕೆ; ಮೀರು: ಉಲ್ಲಂಘಿಸು; ಹತ: ಕೊಂದ, ಸಂಹರಿಸಿದ; ಕಂತುಕ: ಚೆಂಡು; ಪುಟ: ನೆಗೆತ; ಏರು: ಹೆಚ್ಚಾಗು; ವಿಕ್ರಮ: ಗತಿ, ಗಮನ; ಚಡಾಳಿಸು: ವೃದ್ಧಿಹೊಂದು, ಅಧಿಕವಾಗು; ಬೀರು: ಒಗೆ, ಎಸೆ, ತೋರು; ಭುಜ: ಬಾಹು; ಭಾರಿ:ಭಾರವಾದುದು, ತೂಕವಾದುದು; ಅಂಕ: ತೊಡೆ, ಯುದ್ಧ; ದೇವಿ: ಭಗವತಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಾರಿತ್+ಆಯುಧವೆಂದು +ಭೀತಿಗೆ
ಮಾರುವೋದನೆ+ ವೀರರಸ+ ನೊರೆ
ಯಾರಿತೇ +ನಿಜ+ ಬಾಹುಸತ್ವದೊಳುಂಟೆ +ಖಯಖೋಡಿ
ಮೀರಿ +ಹತ+ ಕಂತುಕದವೊಲ್+ಪುಟವ್
ಏರುತಿದೆ +ವಿಕ್ರಮ +ಚಡಾಳಿಸಿ
ಬೀರುತಿದೆ +ಭುಜ +ಭಾರಿಯಂಕವ+ ದೇವಿ +ನೋಡೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀರುತಿದೆ ಭುಜ ಭಾರಿಯಂಕವ
(೨) ಅರ್ಜುನನ ಪರಾಕ್ರಮದ ವರ್ಣನೆ – ಹಾರಿತಾಯುಧವೆಂದು ಭೀತಿಗೆ ಮಾರುವೋದನೆ ವೀರರಸ ನೊರೆ ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ