ಪದ್ಯ ೨೯: ದುರ್ಯೋಧನನು ಭೀಮನ ಹೊಟ್ಟೆಯಿಂದ ಯಾರನ್ನು ತೆಗೆಯುತ್ತೇನೆಂದನು?

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದೆಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ (ಗದಾ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ನನ್ನ ಮನಸ್ಸು ಕದಡಿದೆ, ಆದರೆ ಪರಾಕ್ರಮದ ಕಡಲು ಬತ್ತಿಲ್ಲ, ನೆಲೆನಿಂತಿದೆ. ಅರ್ಥವಿಲ್ಲದೆ ಮಾತಾಡಿ ಏನು ಪ್ರಯೋಜನ? ಸಂಜಯ ಹಿಂದಾದುದನ್ನು ಲೆಕ್ಕಿಸಬೇಡ. ಯುದ್ಧದಲ್ಲಿ ಭೀಮನು ದುಶ್ಯಾಸನನನ್ನು ತಿಂದು ತೇಗಿದನಲ್ಲವೇ? ನನ್ನ ತಮ್ಮನನ್ನು ಭೀಮನ ಹೊಟ್ಟೆಯಿಂದ ತೆಗೆಯುತ್ತೇನೆ, ಆ ವಿಚಿತ್ರವನು ನೋಡು ಎಂದು ಹೇಳಿದನು.

ಅರ್ಥ:
ಕದಡು: ಬಗ್ಗಡ, ರಾಡಿ; ಅಂತಃಕರಣ: ಒಳ ಮನಸ್ಸು; ವಿಕ್ರಮ: ಪರಾಕ್ರಮಿ; ಉದಧಿ: ಸಾಗರ; ನೆಲೆ: ಸ್ಥಾನ; ನಿರರ್ಥಕ: ಪ್ರಯೋಜನವಿಲ್ಲದ; ಒದರು: ಹೇಳು, ಹೊರಹಾಕು; ಫಲ: ಪ್ರಯೋಜನ; ಹಿಂದನ: ಪೂರ್ವ, ನಡೆದ; ಎಣಿಸು: ಲೆಕ್ಕಿಸು; ಕದನ: ಯುದ್ಧ; ತೇಗು: ಢರಕೆ, ತಿಂದು ಮುಗಿಸು; ಬಕ: ಭೀಮಸೇನನಿಂದ ಹತನಾದ ಒಬ್ಬ ರಾಕ್ಷಸ; ಬಕವೈರಿ: ಭೀಮ; ತಮ್ಮ: ಸಹೋಅರ; ಉದರ: ಹೊಟ್ಟೆ; ತೆಗೆ: ಈಚೆಗೆ ತರು, ಹೊರತರು; ವಿಚಿತ್ರ: ಬೆರಗುಗೊಳಿಸುವಂತಹುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಕದಡಿತ್+ಅಂತಃಕರಣ+ ವಿಕ್ರಮದ್
ಉದಧಿ +ನೆಲೆಯಾಯಿತು +ನಿರರ್ಥಕೆ
ಒದರಿದೆಡೆ +ಫಲವೇನು +ಸಂಜಯ +ಹಿಂದನ್+ಎಣಿಸದಿರು
ಕದನದಲಿ +ದುಶ್ಯಾಸನನ +ತೇ
ಗಿದನಲಾ +ಬಕವೈರಿ +ತಮ್ಮನನ್
ಉದರದಲಿ +ತೆಗೆವೆನು +ವಿಚಿತ್ರವ +ನೋಡು +ನೀನೆಂದ

ಅಚ್ಚರಿ:
(೧) ದುರ್ಯೋಧನನ ಶಕ್ತಿಯನ್ನು ವಿವರಿಸುವ ಪರಿ – ವಿಕ್ರಮದುದಧಿ ನೆಲೆಯಾಯಿತು
(೨) ಭೀಮನನ್ನು ಬಕವೈರಿ ಎಂದು ಕರೆದಿರುವುದು