ಪದ್ಯ ೩೮: ಧರ್ಮಜನು ಕೌರವನಿಗೆ ಏನು ಹೇಳಿದನು?

ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಸಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ (ಗದಾ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ಧರ್ಮಜನು ಕೌರವನನ್ನು ನೋಡಿ, ಭಲೇ, ಭೇಷ್ ದುರ್ಯೋಧನ, ಅತಿಶಯ ಸತ್ವಶಾಲಿ, ಕುರುಕುಲದಲ್ಲಿ ಶ್ರೇಷ್ಠರಾದ ಪುರೂರವ ಪರಂಪರೆಯಲ್ಲಿ ಬಂದ ಪ್ರಖ್ಯಾತ, ಧೀರನಲ್ಲವೇ, ಏನೋ ನೀರಿನಲ್ಲಿ ಅಡಗಿದನೆಂಬ ಒಂದು ಅಪಖ್ಯಾತಿಯಿತ್ತು, ಈಗ ನೀರಿನಿಂದ ಹೊರಕ್ಕೆ ಬಂದಿದ್ದಾನೆ, ಇವನ ಸರಿಸಮಾನರಾರು ಎಂದನು.

ಅರ್ಥ:
ಪೂತು: ಭೇಷ್; ಮಝ: ಭಲೇ; ಘನ: ಶ್ರೇಷ್ಠ; ಸತ್ವ: ಸಾರ; ಅತಿಶಯ: ಹೆಚ್ಚು; ಅನ್ವಯ: ವಂಶ; ಜಾತ: ಹುಟ್ಟಿದ; ಬುಧ: ಪಂಡಿತ; ಕ್ರಮ: ಸರದಿ; ಆಗತ: ಬಂದ; ಖ್ಯಾತ: ಪ್ರಸಿದ್ಧ; ಅಖ್ಯಾತಿ: ಅಪ್ರಸಿದ್ಧ; ಸಲಿಲ: ನೀರು; ಗಾಹು: ಮೋಸ, ವಂಚನೆ; ದೊರೆ: ರಾಜ; ಸರಿ: ಸಮ; ಮಹೀಪಾಲ: ರಾಜ;

ಪದವಿಂಗಡಣೆ:
ಪೂತು +ಮಝ +ಕುರುಪತಿಯ +ಘನ+ಸತ್ವ
ಅತಿಶಯವೈ +ಕೌರವ+ಅನ್ವಯ
ಜಾತನಲ್ಲಾ +ಬುಧ +ಪುರೂರವ+ಸಕ್ರಮಾಗತರ
ಖ್ಯಾತನಲ್ಲಾ +ಬಂದುದ್+ಒಂದ್
ಅಖ್ಯಾತಿ +ಸಲಿಲದ +ಗಾಹವುಳಿದಂತ್
ಈತನೊಳು +ದೊರೆಯಾರು +ಸರಿಯೆಂದನು +ಮಹೀಪಾಲ

ಅಚ್ಚರಿ:
(೧) ಕೌರವನನ್ನು ಹೊಗಳುವ ಪರಿ – ಘನಸತ್ವಾತಿಶಯ; ಈತನೊಳು ದೊರೆಯಾರು ಸರಿ
(೨) ಖ್ಯಾತಿ, ಅಖ್ಯಾತಿ – ವಿರುದ್ಧ ಪದಗಳು

ಪದ್ಯ ೩೦: ವಂದಿ ಮಾಗಧರು ಏನೆಂದು ಹೊಗಳಿದರು?

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಮ್ದುದು ವಂದಿಜನಜಲಧಿ (ಶಲ್ಯ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಂದಿಗಳು ನುಡಿಯುತ್ತಾ ಜೀಯಾ, ಬುಧ, ಪುರೂರವ ಅವನ ಮಗ ಆಯು, ನಹುಷ, ಯಯಾತಿಗಳು ಅನುಭವಿಸಿದ ರಾಜ್ಯಭೋಗವನ್ನು ಅನುಭವಿಸಲು ನೀನು ಭೂಮಿಯಲ್ಲಿ ಅವತರಿಸಿರುವೆ. ಜೂಜಿನಲ್ಲಿ ಸೋತೆ, ಯುದ್ಧದಲ್ಲಿ ಕೌರವನು ಸೋಲುತ್ತಾನೆ, ನಿನ್ನ ಘನತೆಯನ್ನು ಯುದ್ಧದಲ್ಲಿ ತೋರಿಸು ಎಂದು ವಂದಿ ಮಾಗಧರು ಹೊಗಳಿದರು.

ಅರ್ಥ:
ಜೀಯ: ಒಡೆಯ; ಸುತ: ಮಗ; ಭೋಗ: ಸುಖವನ್ನು ಅನುಭವಿಸುವುದು; ನಿಧಿ: ಐಶ್ವರ್ಯ; ಅವತರಿಸು: ಕಾಣಿಸು; ಧರೆ: ಭೂಮಿ; ಜೀಯ: ಒಡೆಯ; ಜೂಜು: ಜುಗಾರಿ, ಸಟ್ಟ; ರಣ: ಯುದ್ಧ; ಆಯತಿ: ವಿಸ್ತಾರ; ಸಂಭಾಸಿವು: ಯೋಚಿಸು, ಯೋಚಿಸು; ವಂದಿ: ಹೊಗಳುಭಟ್ಟ; ಜಲಧಿ: ಸಾಗರ; ಜನ: ಮನುಷ್ಯ; ಜೇಯ: ಗೆಲುವು;

ಪದವಿಂಗಡಣೆ:
ಜೀಯ +ಬುಧನ +ಪುರೂರವನ+ ಸುತನ್
ಆಯುವಿನ +ನಹುಷನ+ ಯಯಾತಿಯದ್
ಆಯಭಾಗದ+ ಭೋಗ+ನಿಧಿ+ಅವತರಿಸಿದೈ+ ಧರೆಗೆ
ಜೇಯನ್+ಎನಿಸಿದೆ +ಜೂಜಿನಲಿ +ರಣ
ಜೇಯನಹನ್+ಈ +ಕೌರವನು+ ನಿನ್ನ್
ಆಯತಿಯ +ಸಂಭಾವಿಸೆಂದುದು +ವಂದಿ+ಜನಜಲಧಿ

ಅಚ್ಚರಿ:
(೧) ಜೇಯ ಪದದ ಬಳಕೆ – ೪, ೫ ಸಾಲು
(೨) ಬಹಳ ಹೊಗಳುಭಟರು ಎಂದು ಹೇಳಲು – ವಂದಿಜನಜಲಧಿ ಪದದ ಬಳಕೆ

ಪದ್ಯ ೩೮: ಯಾರು ಮೃತ್ಯುವಶರಾದ ರಾಜರು?

ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭರತ, ಪೃಥು, ಪೌರವ, ಭಗೀರಥ, ಯಯಾತಿ, ಮರುತ್ತ, ನಹುಷ, ಪುರೂರವ, ರಂತಿದೇವ, ಗಯ, ಅಂಬರೀಷ, ಪರಶುರಾಮ, ದಿಲೀಪ, ಮಾಂಧಾತ, ಹರಿಶ್ಚಂದ್ರ ಮೊದಲಾದ ಲೆಕ್ಕವಿಲ್ಲದಷ್ಟು ರಾಜರು ಮೃತ್ಯುವಿಗೆ ವಶವಾದರು.

ಅರ್ಥ:
ವರ: ಶ್ರೇಷ್ಠ; ಆದಿ: ಮುಂತಾದ; ಪೃಥ್ವೀಶ್ವರ: ರಾಜ; ಪೃಥ್ವಿ: ಭೂಮಿ; ಮೃತ್ಯು: ಸಾವು; ವಶ: ಅಧೀನ; ಕೇಳು: ಆಲಿಸು; ಅನಂತ: ಲೆಕ್ಕವಿಲ್ಲದಷ್ಟು;

ಪದವಿಂಗಡಣೆ:
ಭರತ +ಪೃಥು +ಪೌರವ+ ಭಗೀರಥ
ವರ +ಯಯಾತಿ +ಮರುತ್ತ +ನಹುಷೇ
ಶ್ವರ +ಪುರೂರವ +ರಂತಿದೇವ +ಗಯ+ಅಂಬರೀಷಕರು
ಪರಶುರಾಮ +ದಿಲೀಪ +ಮಾಂಧಾ
ತರು +ಹರಿಶ್ಚಂದ್ರ+ಆದಿ +ಪೃಥ್ವೀ
ಶ್ವರರ್+ಅನಂತರು +ಮೃತ್ಯುವಶವರ್ತಿಗಳು+ ಕೇಳೆಂದ

ಅಚ್ಚರಿ:
(೧) ಈಶ್ವರ ಪದದ ಬಳಕೆ – ನಹುಷೇಶ್ವರ, ಪೃಥ್ವೀಶ್ವರ

ಪದ್ಯ ೩೬: ಚಂದ್ರವಂಶಕ್ಕೆ ಯಾರು ಮೊದಲಿಗರು?

ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದೊಳವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ (ಅರಣ್ಯ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃತಯುಗವು ಮೊದಲನೆಯ ಯುಗ. ಹರಿಶ್ಚಂದ್ರನೇ ಮೊದಲಾದವರು ಆಗ ಸೂರ್ಯವಂಶದ ರಾಜರು. ನಿಮ್ಮ ಚಂದ್ರ ವಂಶಕೆ ಬುಧನೇ ಮೊದಲು. ಆನಂತರ ಪುರೂರವ. ಆ ಯುಗದಲ್ಲಿ ಅವರ ಹಾಗೆ ರಾಜ್ಯಭಾರ ಮಾಡಿದವರಾರು ಇಲ್ಲ. ವೈದಿಕ ಧರ್ಮವು ಆಗ ಸೂರ್ಯ ಪ್ರಕಾಶಕ್ಕೆ ಸರಿಯಾಗಿ ಬೆಳಗಿತು.

ಅರ್ಥ:
ಆದಿ: ಮುಂಚೆ, ಮೊದಲು; ಕೃತಯುಗ: ಸತ್ಯಯುಗ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಆದಿ: ಮೊದಲಾದ; ಅನ್ವಯ: ವಂಶ; ಬಳಿಕ: ನಂತರ; ಕ್ಷಿತಿಪ: ರಾಜ; ಮೇದಿನಿ: ಭೂಮಿ; ಉಪಾಧಿ: ಕಾರಣ; ಸಲಹು: ಪೋಷಿಸು; ಬೆಳಗು: ಪ್ರಜ್ವಲಿಸು; ವೇದ: ಶೃತಿ; ಬೋಧಿತ: ಹೇಳಿದ; ಧರ್ಮ: ಧಾರಣ ಮಾಡಿದುದು, ನಿಯಮ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಸರಿ: ಸಮ;

ಪದವಿಂಗಡಣೆ:
ಆದಿಯಲಿ +ಕೃತಯುಗ +ಹರಿಶ್ಚಂ
ದ್ರಾದಿಗಳು +ಸೂರ್ಯ+ಅನ್ವಯಕೆ+ ಬುಧ
ನಾದಿ +ನಿಮ್ಮ್+ಅನ್ವಯಕೆ +ಬಳಿಕ+ ಪುರೂರವ +ಕ್ಷಿತಿಪ
ಮೇದಿನಿಯನ್+ಆ+ ಯುಗದೊಳ್+ಅವರೋ
ಪಾದಿ +ಸಲಹಿದರಿಲ್ಲ+ ಬೆಳಗಿತು
ವೇದ+ ಬೋಧಿತ+ ಧರ್ಮ +ಸೂರ್ಯಪ್ರಭೆಗೆ+ ಸರಿಯಾಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆಳಗಿತು ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ

ಪದ್ಯ ೬೯: ದುರ್ಯೋಧನನನ್ನು ವಿದುರನು ಹೇಗೆ ಬೈದನು?

ವರ ಪುರೂರವ ನಹುಷನವನೀ
ಶ್ವರ ತಿಲಕ ದುಷ್ಯಂತ ಕುರು ಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ (ಸಭಾ ಪರ್ವ, ೧೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶ್ರೇಷ್ಠ ರಾಜರುಗಳಾದ ಪುರೂರವ, ನಹುಷ, ದುಷ್ಯಂತ, ಕುರು, ಸಂವರಣ, ಯಯಾತಿ, ಮೊದಲಾದವರ ಪರಂಪರೆಯಿಂದ ಬಂದ ಈ ಭರತ ವಂಶದಲ್ಲಿ ವಂಶೋದ್ಧಾರಕರು ಹುಟ್ಟಿದರು, ನೀನು ಹುಟ್ಟಿ ಈ ವಂಶಕ್ಕೆ ಕೆಡುಕನ್ನು ತಂದೆ ಎಂದು ವಿದುರನು ಹೇಳಿದನು.

ಅರ್ಥ:
ವರ: ಶ್ರೇಷ್ಠ; ಅವನೀಶ್ವರ: ರಾಜ; ತಿಲಕ: ಶ್ರೇಷ್ಠ; ಅಮಲ: ನಿರ್ಮಲ; ಆದಿ: ಮುಂತಾದ; ಪರಂಪರೆ: ಕುಲ, ವಂಶ, ಪೀಳಿಗೆ; ಕುಲ: ವಂಶ; ಉದ್ಧಾರ: ಏಳಿಗೆ; ಇಳೆ: ಭೂಮಿ; ಬೆಳಗು: ಪ್ರಜ್ವಲಿಸು; ಅವತರಿಸು: ಹುಟ್ಟು; ತೊಡಕು: ಕೆಡುಕು, ತೊಂದರೆ; ಖಾತಿ: ಕೋಪ;

ಪದವಿಂಗಡಣೆ:
ವರ +ಪುರೂರವ+ ನಹುಷನ್+ಅವನೀ
ಶ್ವರ +ತಿಲಕ +ದುಷ್ಯಂತ +ಕುರು +ಸಂ
ವರಣನ್+ಅಮಲ +ಯಯಾತಿಯಾದಿ+ ಪರಂಪರಾಗತದ
ಭರತ+ ಕುಲವ್+ಇದರೊಳಗೆ +ವಂಶೋ
ದ್ಧರರ್+ಇಳೆಯ +ಬೆಳಗಿದರು +ನೀನ್+ಅವ
ತರಿಸಿ+ ತಂದೈ +ತೊಡಕನ್+ಎಂದನು +ಖಾತಿಯಲಿ +ವಿದುರ

ಅಚ್ಚರಿ:
(೧) ಭರತ ಕುಲದ ಶ್ರೇಷ್ಠರು – ಪುರೂರವ, ನಹುಷ, ದುಷ್ಯಂತ, ಯಯಾತಿ, ಕುರುಸಂವರಣ
(೨) ದುರ್ಯೋಧನನನ್ನು ಬಯ್ಯುವ ಪರಿ – ನೀನವತರಿಸಿ ತಂದೈ ತೊಡಕ

ಪದ್ಯ ೨೦: ಅರ್ಜುನನ ಭಟ್ಟರು ಏನೆಂದು ಎಚ್ಚರಿಸಿದರು?

ಭರತಕುಲಸಂಭಾಳು ಜಯ ಹಿಮ
ಕರ ಪುರೂರವ ನಹುಷ ನಳ ನೃಗ
ವರ ಯಯಾತಿಪ್ರಕಟ ವಿಮಳಾನ್ವಯದೊಳವತರಿಸಿ
ಧುರಕೆ ಮನವಳುಕಿದರೆ ಹಜ್ಜೆಯ
ತಿರುಪಿದಡೆ ಕುಲಕೋಟಿಕೋಟಿಗೆ
ನರಕವೆಂದೆಚ್ಚರಿಸಿದರು ಭಟ್ಟರು ನಿಜಾನ್ವಯದ (ಕರ್ಣ ಪರ್ವ, ೨೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಭಟ್ಟರು “ಭರತವಂಶಜನೇ, ಎಚ್ಚರಗೊಂಡು ನಿಲ್ಲು, ನಿನಗೆ ಜಯವಾಗಲಿ. ಚಂದ್ರ, ಪುರೂರುವ, ನಹುಷ, ನಳ, ನೃಗ, ಯಯಾತಿಗಳ ನಿರ್ಮಲ ವಂಶದಲ್ಲಿ ಹುಟ್ಟಿದವನು ನೀನು. ಯುದ್ಧಕ್ಕೆ ಬೆದರಿದರೆ, ಹೆಜ್ಜೆಯನ್ನು ಹಿಂದಿಟ್ಟರೆ, ನಿನ್ನ ಕುಲಕೋಟಿಗೆ ನರಕ ಪ್ರಾಪ್ತಿಯಾಗುತ್ತದೆ ಎಂದು ಎಚ್ಚರಿಸಿದರು.

ಅರ್ಥ:
ಕುಲ: ವಂಶ; ಸಂಭಾಳು: ಎಚ್ಚರವಾಗಿ ನಿಭಾಯಿಸು; ಜಯ: ಉಘೆ; ಹಿಮಕರ: ಚಂದ್ರ; ಧುರ: ಯುದ್ಧ, ಕಾಳಗ; ಮನ: ಮನಸ್ಸು; ಅಳುಕು: ಹೆದರು; ಹಜ್ಜೆ: ಪಾದ; ತಿರುಪು: ಸುತ್ತುವುದು; ಕುಲ: ವಂಶ; ಕೋಟಿ: ಬಹಳ, ಲೆಕ್ಕವಿಲ್ಲದಷ್ಟು; ನರಕ: ಅಧೋಲೋಕ; ಅಚ್ಚರಿ: ಆಶ್ಚರ್ಯ; ಭಟ್ಟರು: ಸೈನಿಕರು; ಅನ್ವಯ: ವಂಶ,ಸಂಬಂಧ;

ಪದವಿಂಗಡಣೆ:
ಭರತಕುಲ+ಸಂಭಾಳು +ಜಯ+ ಹಿಮ
ಕರ +ಪುರೂರವ +ನಹುಷ +ನಳ +ನೃಗ
ವರ +ಯಯಾತಿ+ಪ್ರಕಟ +ವಿಮಳ+ಅನ್ವಯದೊಳ್+ಅವತರಿಸಿ
ಧುರಕೆ+ ಮನವ್+ಅಳುಕಿದರೆ +ಹಜ್ಜೆಯ
ತಿರುಪಿದಡೆ +ಕುಲಕೋಟಿಕೋಟಿಗೆ
ನರಕವೆಂದ್+ಎಚ್ಚರಿಸಿದರು +ಭಟ್ಟರು +ನಿಜಾನ್ವಯದ

ಅಚ್ಚರಿ:
(೧) ಕುರುವಂಶದ ಶ್ರೇಷ್ಠರು – ಪುರೂರವ, ನಹುಷ, ನಳ, ನೃಗವರ, ಯಯಾತಿ
(೨) ಅಸಂಖ್ಯಾತವೆಂದು ಹೇಳಲು – ಕೋಟಿಕೋಟಿಗೆ

ಪದ್ಯ ೧೧: ಧರ್ಮಜನ ರಾಜ್ಯವನ್ನು ಯಾರಿಗೆ ಹೋಲಿಸಬಹುದು?

ನೃಗನ ಭರತನ ದುಂದುಮಾರನ
ಸಗರನಾ ಪುರುವಿನ ಪುರೂರನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರೊಳು ಯಮಸೂನು ಸರಿಯೋ
ಮಿಗಿಲೊ ಬಲ್ಲವರಾರೆನಲು ಸಲಹಿದನು ಭೂತಳವ (ಸಭಾ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ನೃಗ, ಭರತ, ದುಂದುಮಾರ, ಸಗರ, ಪುರು, ಪುರೂರವ, ಆಯು, ನಹುಷ, ಕಾರ್ತವೀರ್ಯ, ನಳ, ದಶರಥ ಮೊದಲಾದ ಸೂರ್ಯವಂಶ ಚಂದ್ರವಂಶಗಳ ಮಹಾಬಲಾಢ್ಯರಿಗೆ ಧರ್ಮರಾಯನು ಸರಿಯೋ ಹೆಚ್ಚೋ ತಿಳಿದವರಾರು? ಎನ್ನುವಂತೆ ದರ್ಮಜನು ರಾಜ್ಯವನ್ನು ಪರಿಪಾಲಿಸುತ್ತಿದ್ದನು.

ಅರ್ಥ:
ಮಗ: ಸುತ; ವಂಶ: ಕುಲ; ಸೂನು: ಮಗ; ಬಲ್ಲವ: ತಿಳಿದವ; ಮಿಗಿಲು: ಹೆಚ್ಚು; ಸಲಹು: ನೋಡಿಕೊ; ಭೂತಳ: ಭೂಮಿ; ವಲ್ಲಭ:ಒಡೆಯ, ಪ್ರಭು; ವಿಗಡ: ಶೌರ್ಯ, ಪರಾಕ್ರಮ; ಹಗಲು: ಬೆಳಗ್ಗೆ; ಇರುಳು: ರಾತ್ರಿ;

ಪದವಿಂಗಡಣೆ:
ನೃಗನ +ಭರತನ +ದುಂದುಮಾರನ
ಸಗರನಾ +ಪುರುವಿನ+ ಪುರೂರನ
ಮಗನ+ ನಹುಷನ+ ಕಾರ್ತವೀರ್ಯನ +ನಳನ +ದಶರಥನ
ಹಗಲಿರುಳು +ವಲ್ಲಭರ+ ವಂಶದ
ವಿಗಡರೊಳು +ಯಮಸೂನು +ಸರಿಯೋ
ಮಿಗಿಲೊ +ಬಲ್ಲವರಾರೆನಲು+ ಸಲಹಿದನು +ಭೂತಳವ

ಅಚ್ಚರಿ:
(೧) ಮಗ, ಸೂನು – ಸಮನಾರ್ಥಕ ಪದ
(೨) ೧೧ ಹೆಸರುಗಳನ್ನು ಮೊದಲ ೩ ಸಾಲಲ್ಲಿ ಉಲ್ಲೇಖಿಸಿರುವುದು
(೩) ೨, ೪ ಸಾಲಿನ ಜೋಡಿ ಪದಗಳು: ಪುರುವಿನ ಪುರೂರನ; ವಲ್ಲಭರ ವಂಶದ

ಪದ್ಯ ೯೦: ಇಂದ್ರನ ಸಭೆಯ ವೈಶಿಷ್ಟ್ಯವೇನು?

ಜನಪ ಕೇಳುತ್ಸೇದ ಶತಯೋ
ಜನ ತದರ್ಧದೊಳಗಲದಳತೆ ಯಿ
ದೆನಿಪುದಿಂದ್ರ ಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ (ಸಭಾ ಪರ್ವ, ೧ ಸಂಧಿ, ೯೦ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೆ ಕೇಳು, ” ಊರ್ಧ್ವಲೋಕದಲ್ಲಿರುವ ಇಂದ್ರನ ಸಭೆಯು ಒಂದು ನೂರು ಯೋಜನ ಉದ್ದವಿದ್ದು ಅದರ ಅಗಲ ೫೦ ಯೋಜವದಿದೆ. ಅಲ್ಲಿ ಎಲ್ಲಾ ದೇವತೆಗಳು ವಾಸಿಸುತ್ತಾರೆ, ರಾಜರಲ್ಲಿ ಯಯಾತಿ ಆತನ ತಂದೆ ನಹುಷ, ನೃಗ, ನಳ, ಭರತ ಪುರೂರವ ಮೊದಲಾದ ರಾಜರು ಸಮಸ್ತಯಜ್ಞಗಳನ್ನೂ ಮಾಡಿ ಸ್ವರ್ಗದಲ್ಲಿರುವ ಆ ಸಭೆಯಲ್ಲಿ ಸ್ಥಾನ ಪಡೆದಿದ್ದಾರೆ” ಎಂದು
ನಾರದರು ವಿವರಿಸಿದರು

ಅರ್ಥ:
ಜನಪ: ರಾಜ; ಕೇಳು: ಆಲಿಸು; ಉತ್ಸೇದ: ಎತ್ತರ; ಶತ: ನೂರು; ಯೋಜನ: ಅಳತೆಯ ಪ್ರಮಾಣ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಅಗಲ:ವಿಸ್ತಾರ;ಇಂದ್ರ: ಶಕ್ರ; ಸ್ಥಾನ: ವಾಸಿಸುವ ಪ್ರದೇಶ; ಅಖಿಳ: ಎಲ್ಲಾ; ಸುರ: ದೇವತೆಗಳು; ನಿಕರ: ಗುಂಪು; ಜನಕ: ತಂದೆ; ಕ್ರತು:ಯಾಗ, ಯಜ್ಞ; ಸಾಧಿಸು: ಸ್ವಾಧೀನ ಪಡಿಸಿಕೊಳ್ಳು; ಸಭೆ: ದರ್ಬಾರು;

ಪದವಿಂಗಡಣೆ:
ಜನಪ+ ಕೇಳ್+ ಉತ್ಸೇದ +ಶತಯೋ
ಜನ +ತದ್+ಅರ್ಧದೊಳ್+ಅಗಲದ್+ಅಳತೆ+ ಯಿದ್
ಎನಿಪುದ್+ಇಂದ್ರ +ಸ್ಥಾನ+ಅಲ್ಲಿಹುದ್+ಅಖಿಳ +ಸುರನಿ+ಕರ
ಜನಪರಲ್ಲಿ +ಯಯಾತಿ+ ಆತನ
ಜನಕ +ನೃಗ +ನಳ +ಭರತ +ಪೌರವರ್
ಎನಿಪರ್+ಅಖಿಳ +ಕ್ರತುಗಳಲಿ +ಸಾಧಿಸಿದರ್+ಆ+ ಸಭೆಯ

ಅಚ್ಚರಿ:
(೧) ಜನಪ – ೧, ೪ ಸಾಲಿನ ಮೊದಲ ಪದ
(೨) ಜನ – ೧,೨, ೪, ೫ ಸಾಲಿನ ಮೊದಲ ಪದ
(೩) ೩, ೬ ಸಾಲಿನ ಕೊನೆಯ ಎರಡು ಪದ “ಸ” ಕಾರದಿಂದ ಪ್ರಾರಂಭ – ಸ್ಥಾನವಲ್ಲಿಹುದಖಿಳ ಸುರನಿಕರ, ಸಾಧಿಸಿದರಾ ಸಭೆಯ

ಪದ್ಯ ೮೬: ನಾರದರು ಯುಧಿಷ್ಠಿರನನ್ನು ಯಾರಿಗೆ ಹೋಲಿಸಿದರು?

ನೃಗನ ಭರತನ ದುಂದುಮಾರನ
ಸಗರನ ಪುರೂರವ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳುವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೮೬ ಪದ್ಯ)

ತಾತ್ಪರ್ಯ:
ನೃಗ, ಭರತ, ದುಂದುಮಾರ, ಸಗರ, ಪುರೂರವ, ಯಯಾತಿಯ ಮಗನಾದ ಪುರು, ನಹುಷ, ಕಾರ್ತವೀರ್ಯ, ನಳ, ದಶರಥ, ಇವರಲ್ಲದೆ ಚಂದ್ರವಂಶ ಮತ್ತು ಸೂರ್ಯವಂಶಗಳಲ್ಲಿ ಹುಟ್ಟಿ ಭೂಮಿಯನ್ನಾಳಿದ ಹಲವು ರಾಜರಿದ್ದಾರೆ, ಇವರೆಲ್ಲರಿಗೆ ನೀನು ಸರಿಸಮವೋ ಹೆಚ್ಚೋ ಎಂದು ಗಣಿಸುವ ರಾಜನೀತಿ ನಿನ್ನಲ್ಲಿದೆಯೆ, ಎಂದು ನಾರದರು ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ಹಗಲು: ದಿನ; ಇರುಳು: ರಾತ್ರಿ; ವಲ್ಲಭ: ಪ್ರಭು, ಒಡೆಯ; ವಂಶ: ಕುಲ; ವಿಗಡ: ಶೌರ್ಯ, ಸಾಹಸ; ಸೂನು: ಪುತ್ರ; ಮಿಗಿಲು: ಹೆಚ್ಚು; ನೀತಿ:ಮಾರ್ಗ, ದರ್ಶನ; ರಾಯ: ರಾಜ;

ಪದವಿಂಗಡಣೆ:
ನೃಗನ +ಭರತನ+ ದುಂದುಮಾರನ
ಸಗರನ+ ಪುರೂರವ+ ಯಯಾತಿಯ
ಮಗನ +ನಹುಷನ +ಕಾರ್ತವೀರ್ಯನ +ನಳನ+ ದಶರಥನ
ಹಗಲ್+ಇರುಳು+ವಲ್ಲಭರ+ ವಂಶದ
ವಿಗಡರಲಿ +ಯಮಸೂನು +ಸರಿಯೋ
ಮಿಗಿಲೊ+ಎನಿಸುವ +ನೀತಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಮೊದಲ ೩ ಸಾಲುಗಳಲ್ಲಿ ೧೦ ರಾಜರ ಹೆಸರನ್ನು ಹೇಳಿರುವುದು
(೨) ವಲ್ಲಭ, ರಾಯ – ಸಮನಾರ್ಥಕ ಪದ