ಪದ್ಯ ೮: ವ್ಯಾಸರು ಭಾರತದ ಕಥೆಯನ್ನು ಹೇಳಲು ಯಾರನ್ನು ಕರೆದರು?

ರಾಯ ಕೇಳೈ ನಿಮ್ಮ ಪಾಂಡವ
ರಾಯ ಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ (ಆದಿ ಪರ್ವ, ೨ ಸಂಧಿ, ೮ ಪದ್ಯ)

ತಾತ್ಪರ್ಯ:
ರಾಜ, ನಿಮ್ಮ ಪೂರ್ವಜರಾದ ಪಾಂಡವರ ಚರಿತ್ರೆಯನ್ನು ವೈಶಂಪಾಯನನಿಮ್ದ ಕೇಳು, ಎಂದು ಹೇಳಿ ಅವನಿಗೆ ಮಹಾಭಾರತ ಗ್ರಮ್ಥವನ್ನು ಕೊಟ್ಟನು. ಆಗ ಜನಮೇಜಯನು ಅತಿ ಭಕ್ತಿಯಿಂದ ವೈಶಂಪಾಯನನಿಗೆ ನಮಸ್ಕರಿಸಿ ಅವನಿಂದ ತನ್ನ ಅಭಿಪ್ರಾಯವನ್ನು ಕೇಳಿದನು. ಈ ಕಥೆಯನ್ನೇ ಋಷಿಶ್ರೇಷ್ಠರಾದ ನೀವೂ ಕೇಳಿರಿ ಎಂದು ಹೇಳಿದನು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಚರಿತ: ಕಥೆ, ಹಿಂದೆ ನಡೆದುದು; ಬೆಸಸು: ಹೇಳು, ಆಜ್ಞಾಪಿಸು; ಬಳಿಕ: ನಂತರ; ಪುಸ್ತಕ: ಗ್ರಂಥ, ಹೊತ್ತಿಗೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ವಂದಿಸು: ನಮಸ್ಕರಿಸು; ಅಭಿಪ್ರಾಯ: ವಿಚಾರ; ಕೇಳು: ಆಲಿಸು; ಚಿತ್ತೈಸು: ಗಮನವಿಟ್ಟು ಕೇಲು; ಮುನಿ: ಋಷಿ; ನಿಕರ: ಗುಂಪು;

ಪದವಿಂಗಡಣೆ:
ರಾಯ +ಕೇಳೈ +ನಿಮ್ಮ +ಪಾಂಡವ
ರಾಯ +ಚರಿತವನೆಂದು+ ವೈಶಂ
ಪಾಯನಿಗೆ +ಬೆಸಸಿದನು +ಕೊಟ್ಟನು +ಬಳಿಕ +ಪುಸ್ತಕವ
ರಾಯನತಿ +ಭಕ್ತಿಯಲಿ +ವೈಶಂ
ಪಾಯನಗೆ +ವಂದಿಸಿ +ನಿಜಾಭಿ
ಪ್ರಾಯವನು +ಕೇಳಿದನು +ಚಿತ್ತೈಸುವುದು +ಮುನಿನಿಕರ

ಅಚ್ಚರಿ:
(೧) ರಾಯ, ಪ್ರಾಯ – ಪದಗಳ ಬಳಕೆ
(೨) ವೈಶಂಪಾಯ – ೨, ೪ ಸಾಲಿನ ಕೊನೆಯ ಪದ

ಪದ್ಯ ೪೭: ಕೌರವರೇಕೆ ತಮ್ಮ ತಮ್ಮಲ್ಲೇ ಕಾದಾಡಿದರು?

ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾವುತರು ಆನೆಗಳನ್ನು , ಜೋದರು ಕುದುರೆಗಳನ್ನು, ಕಾಲಾಳುಗಳು ರಥಗಳನ್ನು ಹತ್ತಿದರು. ಮಹಾರಥರು ಈಟಿ, ಸಬಳ ಕಠಾರಿ ಉಬ್ಬಣಗಳನ್ನು ಹಿಡಿದು ಕಾಲಾಳುಗಳಾದರು. ಯುದ್ಧವು ಸಮೀಪಿಸಿ ಉಗ್ರವಾಗಿದೆಯೆಂದು ಭಯಗೊಂಡು ತಮ್ಮ ಪಕ್ಕದಲ್ಲಿದ್ದವರೇ ಪಾಂಡವ ಯೋಧರೆಂದು ತಿಳಿದು ತಮ್ಮ ತಮ್ಮಲ್ಲೇ ಕಾದಾಡಿದರು.

ಅರ್ಥ:
ಕರಿ: ಆನೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಜೋಧ: ಆನೆಮೇಲೆ ಕೂತು ಯುದ್ಧಮಾಡುವವ; ತುರಗ: ಅಶ್ವ; ಕಾಲಾಳು: ಸೈನಿಕ; ರಥ: ಬಂಡಿ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಸಬಳ: ಈಟಿ; ಕಠಾರಿ: ಬಾಕು, ಚೂರಿ, ಕತ್ತಿ; ಉಬ್ಬಣ: ಹೆಚ್ಚು, ಅಧಿಕ; ಧುರ: ಯುದ್ಧ, ಕಾಳಗ; ಭರ: ರಭಸ; ಮಿಗೆ: ಮತ್ತು,ಅಧಿಕವಾಗಿ; ಬೆದರು: ಹೆದರು; ಅಳ್ಳಿರಿ: ಚುಚ್ಚು; ಬೆರಗು: ಆಶ್ಚರ್ಯಪಡು, ವಿಸ್ಮಯ; ಬಳಿ: ಹತ್ತಿರ; ಒದಗು: ಲಭ್ಯ, ದೊರೆತುದು; ಅರರೆ: ಓಹೋ; ಹೊಯ್ದಾಡು: ಹೋರಾಡು;

ಪದವಿಂಗಡಣೆ:
ಕರಿಗಳನು+ ರಾವುತರು +ಜೋಧರು
ತುರಗವನು +ಕಾಲಾಳು +ರಥವನು
ವರ+ಮಹಾರಥರ್+ಈಟಿ +ಸಬಳ +ಕಠಾರಿ+ಉಬ್ಬಣವ
ಧುರದ +ಭರ +ಮಿಗೆ +ಕೊಂಡು +ಬೆದರ್
ಅಳ್ಳಿರಿಯೆ +ಬೆರಗಿನ +ಬಳಿಯಲ್+ಒದಗಿತ್ತ್
ಅರರೆ +ಪಾಂಡವರೆನುತ+ ಹೊಯ್ದಾಡಿದರು +ತಮ್ಮೊಳಗೆ

ಅಚ್ಚರಿ:
(೧) ಕೌರವರಲ್ಲಿನ ಗೊಂದಲವನ್ನು ಸೂಚಿಸುವ ಪರಿ – ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ

ಪದ್ಯ ೪೬: ರಾಜರ ಡೇರೆಗಳಿಗೆ ಯಾವ ರೀತಿ ಭದ್ರತೆ ಒದಗಿಸಲಾಗಿತ್ತು?

ವೀರ ಪಾಂಡವರಿವರರಸುಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ್ಯರ
ಭೂರಿ ಬಲ ಬಿಟ್ಟುದು ಮಹೀಶನ ಗುಡಿಯ ಬಳಸಿನಲಿ (ಉದ್ಯೋಗ ಪರ್ವ, ೧೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉಪಪಾಂಡವರ, ರಾಜಪುತ್ರರ, ಗುಡಾರ ಮಂಟಪಗಳ ಸುತ್ತಲೂ ಮರದ ಕೊರಡುಗಳ ಕೋಟೆ ಆನೆಗಳ ಸಾಲುಗಳು, ಅದರ ಸುತ್ತಲೂ ಪಾಂಚಾಲ ಮತ್ಸ್ಯರ ಮಹಾಸೈನ್ಯಗಳು ಧರ್ಮಜನ ಮನೆಯ ಸುತ್ತಲೂ ಬಳಸಿ ನಿಂತವು.

ಅರ್ಥ:
ವೀರ: ಶೂರ; ಅರಸು: ರಾಜ; ಕುಮಾರ: ಮಕ್ಕಳು; ವರ್ಗ: ಗುಂಪು; ಮಂಡವಿಗೆ: ಗುಡಾರ, ಡೇರೆ; ಗುಡಾರ: ಶಿಬಿರ, ಬಟ್ಟೆಮನೆ; ಒಳಕೊಂಡು: ಸೇರಿಸಿ; ಬಿಗಿ: ಗಟ್ಟಿ, ಬಂಧನ; ತಳಿ: ಜಾತಿ, ಬೇಲಿ; ಕಟ್ಟು: ಆವರಿಸು; ವಾರಣ: ಆನೆ; ಸಾಲು: ಆವಳಿ; ಸುತ್ತಲು: ಆವರಿಸು; ಭಾರಿಸಿ: ಹರಡು; ಭೂರಿ: ಹೆಚ್ಚು, ಅಧಿಕ; ಬಲ: ಸೈನ್ಯ; ಬಿಟ್ಟುದು: ಆವರಿಸು, ಹರಡು; ಮಹೀಶ: ರಾಜ; ಗುಡಿ: ಆಲಯ; ಬಳಸು: ಸುತ್ತುವರಿಯುವಿಕೆ;

ಪದವಿಂಗಡಣೆ:
ವೀರ +ಪಾಂಡವರ್+ಇವರ್+ಅರಸು+ಕು
ಮಾರ +ವರ್ಗದ +ಮಂಡವಿಗೆ+ ಗೂ
ಡಾರಗಳನ್+ಒಳಕೊಂಡು +ಬಿಗಿದವು +ತಳಿಯ +ಕಟ್ಟುಗಳು
ವಾರಣದ +ಸಾಲುಗಳ +ಸುತ್ತಲು
ಭಾರಿಸಿತು+ ಪಾಂಚಾಲ +ಮತ್ಸ್ಯರ
ಭೂರಿ +ಬಲ +ಬಿಟ್ಟುದು +ಮಹೀಶನ +ಗುಡಿಯ +ಬಳಸಿನಲಿ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಭೂರಿ ಬಲ ಬಿಟ್ಟುದು
(೨) ಗೂಡಾರ, ಮಂಡವಿಗೆ, ಗುಡಿ; ಬಳಸು, ಸುತ್ತಲು – ಸಾಮ್ಯಾರ್ಥ ಪದಗಳು

ಪದ್ಯ ೧೫: ಕರ್ಣನು ಯಾರ ಜೊತೆಗಿರುವೆ ಎಂದು ಹೇಳಿದ?

ಒಡನೆ ಹುಟ್ಟಿದರೆಂಬ ಕಥನವ
ನೆಡೆಗುಡದೆ ಬಣ್ಣಿಸಿದೆ ಪಾಂಡವ
ರಡಗು ಬಾಣಕೆ ಬಲಿಯೆನಿಪ್ಪೀ ಛಲವ ಮಾಣಿಸಿದೆ
ನುಡಿದ ಫಲವೇನಿನ್ನು ಕೌರವ
ರೊಡೆಯನಾದಂತಹೆನು ಬಾರೆನು
ಪೊಡವಿಯೊಳು ನೀಂ ಹರಹಿಕೊಳು ನಿನ್ನವರ ನಿಲಿಸೆಂದ (ಉದ್ಯೋಗ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರಿಸುತ್ತಾ, ಕೃಷ್ಣ ನೀನು ನನಗೆ ಸ್ವಲ್ಪವೂ ಸಮಯವನ್ನೂ ನೀಡದೆ ಪಾಂಡವರು ನನಗೆ ಒಡಹುಟ್ಟಿದವರೆಂದು ಕಥೆಯನ್ನು ವರ್ಣಿಸಿದೆ. ಪಾಂಡವರ ಮಾಂಸವು ನನ್ನ ಬಾಣಕ್ಕೆ ಬಲಿಯೆಂಬ ಛಲವನ್ನು ಕಳೆದೆ. ಈಗ ಏನು ಹೇಳಿದರೇನು ಪ್ರಯೋಜನ. ದುರ್ಯೋಧನನಿಗೆ ಏನಾಗುವುದೋ ಅದು ನನಗೂ ಆಗಲಿ. ನಿನ್ನ ಪಾಂಡವರನ್ನು ಭೂಮಿಯಲ್ಲಿ ಪಸರಿಸಿಕೋ, ಅವರೇ ಬಾಳಲಿ ಎಂದು ಕರ್ಣನು ಕೃಷ್ಣನಿಗೆ ಹೇಳಿದನು.

ಅರ್ಥ:
ಒಡನೆ: ಜೊತೆ, ತತ್ಕ್ಷಣ; ಹುಟ್ಟು: ಜನನ; ಕಥನ: ವಿಚಾರ; ಎಡೆಗುಡು: ಅವಕಾಶ ನೀಡು; ಬಣ್ಣಿಸು: ಹೇಳು, ವಿವರಿಸು; ಅಡಗು: ಮಾಂಸ; ಬಾಣ: ಅಂಬು; ಬಲಿ: ಬಲಿಷ್ಠವಾಗು, ದೃಢ, ಆಹುತಿ; ಛಲ: ದೃಢ ನಿಶ್ಚಯ; ಮಾಣು:ತಡಮಾಡು, ತಪ್ಪಿಹೋಗು; ನುಡಿ: ಮಾತು; ಫಲ: ಪ್ರಯೋಜನ; ಒಡೆಯ: ಜೀಯ, ರಾಜ; ಬಾರೆನು: ಬರುವುದಿಲ್ಲ; ಪೊಡವಿ: ಪೃಥ್ವಿ, ಭೂಮಿ; ಹರಹು: ಪಸರಿಸು; ನಿಲಿಸು: ಸ್ಥಾಪಿಸು;

ಪದವಿಂಗಡಣೆ:
ಒಡನೆ +ಹುಟ್ಟಿದರೆಂಬ +ಕಥನವನ್
ಎಡೆಗುಡದೆ +ಬಣ್ಣಿಸಿದೆ +ಪಾಂಡವರ್
ಅಡಗು +ಬಾಣಕೆ +ಬಲಿಯೆನಿಪ್ಪೀ +ಛಲವ +ಮಾಣಿಸಿದೆ
ನುಡಿದ +ಫಲವೇನ್+ಇನ್ನು +ಕೌರವರ್
ಒಡೆಯನ್+ಆದಂತಹೆನು +ಬಾರೆನು
ಪೊಡವಿಯೊಳು +ನೀಂ +ಹರಹಿಕೊಳು+ ನಿನ್ನವರ +ನಿಲಿಸೆಂದ

ಅಚ್ಚರಿ:
(೧) ಅಚಲವಾದ ನುಡಿ – ಕೌರವರೊಡೆಯನಾದಂತಹೆನು, ಬಾರೆನು

ಪದ್ಯ ೭: ಯಾರನ್ನು ಕರ್ಣನ ಪಾದಕ್ಕೆ ಬೀಳಿಸುವೆನೆಂದು ಕೃಷ್ಣನು ಹೇಳಿದನು?

ಅದರಿನಾ ಪಾಂಡವರೊಳೈವರ
ಮೊದಲಿಗನು ನೀನಿರಲು ಧರಣಿಯ
ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು
ಇದು ನಿದಾನವು ಕರ್ಣ ನಿನ್ನ
ಭ್ಯುದಯವನೆ ಬಯಸುವೆನು ನಿನ್ನಯ
ಪದಕೆ ಕೆಡಹುವೆನೈವರನು ಬಹುದೆನ್ನ ಸಂಗಾತ (ಉದ್ಯೋಗ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಕೃಷ್ಣನು ಕುಂತಿಯ ಮಂತ್ರದಿಂದ ಪಾಂಡವರ ಜನನದ ಬಗ್ಗೆ ತಿಳಿಸಿದ ನಂತರ ನೀನು ಪಾಂಡವರಲ್ಲಿ ಮೊದಲಿಗನು. ನೀನಿರಲು ಭೂಮಿಗಾಗಿ ಎರಡು ತಂಡದವರು ಯುದ್ಧ ಮಾಡುವುದು ಆಪೇಕ್ಷಣೀಯವಲ್ಲ. ಇದು ಈ ಸಮಸ್ಯೆಯ ಮೂಲ, ನಿನ್ನ ಅಭ್ಯುದಯವನ್ನೇ ನಾನು ಹಾರೈಸುತ್ತೇನೆ, ನನ್ನ ಜೊತೆಗೆ ಬಂದರೆ ಐದು ಮಂದಿ ಪಾಂಡವರನ್ನು ನಿನ್ನ ಪಾದಗಳಿಗೆ ಕೆಡುವುತ್ತೇನೆ ಎಂದನು.

ಅರ್ಥ:
ಮೊದಲು: ಆದಿ; ಧರಣಿ: ಭೂಮಿ; ಕದನ: ಯುದ್ಧ; ತಂಡ: ಗುಂಪು; ಕಾಮಿತ: ಬಯಸಿದ; ಭಾವಿಸು: ತಿಳಿ, ಗೊತ್ತುಪಡಿಸು; ನಿದಾನ:ಮೂಲಕಾರಣ; ಅಭ್ಯುದಯ: ಏಳಿಗೆ; ಬಯಸು: ಇಷ್ಟಪಡು; ಪದ: ಚರಣ; ಕೆಡಹುವೆ: ಬೀಳಿಸುವೆ; ಬಹುದು: ಬಂದರೆ; ಸಂಗಾತ: ಜೊತೆ;

ಪದವಿಂಗಡಣೆ:
ಅದರಿನ್+ಆ+ ಪಾಂಡವರೊಳ್+ಐವರ
ಮೊದಲಿಗನು+ ನೀನಿರಲು +ಧರಣಿಯ
ಕದನವಿತ್+ತಂಡಕ್ಕೆ +ಕಾಮಿತವಲ್ಲ+ ಭಾವಿಸಲು
ಇದು+ ನಿದಾನವು +ಕರ್ಣ +ನಿನ್
ಅಭ್ಯುದಯವನೆ +ಬಯಸುವೆನು +ನಿನ್ನಯ
ಪದಕೆ +ಕೆಡಹುವೆನ್+ಐವರನು+ ಬಹುದೆನ್ನ +ಸಂಗಾತ

ಅಚ್ಚರಿ:
(೧) ಐವರ – ೨ ಬಾರಿ ಪ್ರಯೋಗ

ಪದ್ಯ ೧೬: ದುರ್ಯೋಧನನ ಕಟುವಾದ ಮಾತಾವುದು?

ಅವರು ನಮ್ಮೊಳು ಸರಸವಾಡುವ
ಹವಣಿದಲ್ಲದೆ ರಾಜಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವೆ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿಕೊಳ್ವುದು
ಅವನಿಗಿವನಿಯ ಮಾತ ನೀವಾ
ಡುವರೆ ಪಾಂಡವರೇಕೆ ನಾವೇಕೆಂದು ಖಳ ನುಡಿದ (ಉದ್ಯೋಗ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪಾಂಡವರು ನಮ್ಮೊಳು ಸರಸ, ಚೆಲ್ಲಾಟವಾಡಲೆಂದೇ ನಿನ್ನನ್ನು ಸಂಧಿಯ ಸೋಗಿನಡಿ ಕಳುಹಿಸಿದ್ದಾರೆ. ರಾಜಕಾರ್ಯವನ್ನು ಸರಿಯಾಗಿ ಯೋಚಿಸಿ ನಿನ್ನನ್ನು ಕಳಿಸಿಲ್ಲ. ಇದನ್ನು ನಾನು ಮೆಚ್ಚುವುದಿಲ್ಲ. ಯುದ್ಧ ಬೇಕ್ಕಿದ್ದರೆ ಬೇಡಲಿ, ಭೂಮಿ ಗೀಮಿ ಕೊಡು ಎಂಬ ಮಾತನ್ನು ಆಡುವುದಾದರೆ ನಾವೇಕೆ ಪಾಂಡವರೇಕೆ ಎಂದು ದುರ್ಯೋಧನನು ನುಡಿದನು.

ಅರ್ಥ:
ಸರಸ:ಚೆಲ್ಲಾಟ, ವಿನೋದ; ಹವಣಿಸು: ಸಿದ್ಧಮಾಡು, ಪ್ರಯತ್ನಿಸು; ರಾಜಕಾರ್ಯ: ರಾಜಕಾರಣ; ಯೋಚಿಸು: ಚಿಂತಿಸು; ಕಳುಹು: ಹೋಗು; ಮೆಚ್ಚು: ಪ್ರಶಂಶಿಸು; ಬವರ: ಕಾಳಗ, ಯುದ್ಧ; ಬೇಡು: ಯಾಚಿಸು; ಅವನಿಯ: ಭೂಮಿಯ; ಮಾತು: ನುಡಿ; ಆಡು: ಮಾತಾಡು; ಖಳ: ದುಷ್ಟ; ನುಡಿ: ಮಾತು;

ಪದವಿಂಗಡಣೆ:
ಅವರು+ ನಮ್ಮೊಳು +ಸರಸವಾಡುವ
ಹವಣಿದಲ್ಲದೆ +ರಾಜಕಾರ್ಯವ
ನೆವಗೆ+ ಯೋಚಿಸಿ +ಕಳುಹಿದ್+ಅಂದವೆ +ಮೆಚ್ಚೆ +ನಾನಿದನು
ಬವರ +ಬೇಕೇ +ಬೇಡಿಕೊಳ್ವುದು
ಅವನಿ+ಗಿವನಿಯ +ಮಾತ +ನೀವಾ
ಡುವರೆ+ ಪಾಂಡವರೇಕೆ+ ನಾವೇಕೆಂದು +ಖಳ +ನುಡಿದ

ಅಚ್ಚರಿ:
(೧) ಅವನಿ ಗಿವನಿ – ಆಡು ಮಾತಿನ ಪ್ರಯೋಗ
(೨) ‘ಬ’ಕಾರದ ತ್ರಿವಳಿ ಪದಗಳ ಗುಂಪು – ಬವರ ಬೇಕೇ ಬೇಡಿಕೊಳ್ವುದು

ಪದ್ಯ ೧೫: ದುರ್ಯೋಧನನು ಸಂಧಿಯ ಮಾತನ್ನು ಏಕೆ ಮರೆಯಬೇಕೆಂದ?

ಮಾವ ಮೊದಲು ಸಹಾಯ ಮಧ್ಯದೊ
ಳಾವಿರಾಟನ ಸಖ್ಯ ಕಡೆಯೊಳು
ನೀವು ಮಮ ಜೀವಹಿ ಎಂಬಿರಿ ನಿಮ್ಮ ಪಾಂಡವರ
ನಾವು ಕಡೆಯೊಳು ಹೊರಗು ನಮಗಿ
ನ್ನಾವ ಭೂಪರ ಸಖ್ಯವಿರ್ಪುದು
ದೇವ ನಾಚಿಸಬೇಡ ಸಂಧಿಯ ಮಾತ ಮರೆಯೆಂದ (ಉದ್ಯೋಗ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಂಡವರಿಗೆ ಮೊದಲು ಮಾವನಾದ ದ್ರುಪದನ ಸಖ್ಯ, ಮಧ್ಯದಲ್ಲಿ ವಿರಾಟನ ಸ್ನೇಹ ಮತ್ತು ಈಗ ನಿಮ್ಮ ಸಂಗಡ, ನೀವೋ ಪಾಂಡವರು ನನ್ನ ಜೀವ ಎನ್ನುವಿರಿ, ನಾವಾದರೋ ಕಡೆಯವರು, ಹೊರಗಿನವರು, ನಮಗೆ ಇನ್ನಾರ ರಾಜರ ಸಖ್ಯವುಂಟು, ಕೃಷ್ಣ ನಮನ್ನು ನಾಚಿಸಬೇಡ, ಸಂಧಿಯ ಮಾತನ್ನು ಮರೆತುಬಿಡು ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದನು.

ಅರ್ಥ:
ಸಹಾಯ: ನೆರವು; ಮಧ್ಯ: ನಡು; ಸಖ್ಯ: ಸ್ನೇಹ; ಕಡೆ: ಕೊನೆ; ಜೀವ: ಉಸಿರು; ಹೊರಗು: ಬಾಹಿರ; ಭೂಪ: ರಾಜ; ನಾಚಿಕೆ: ಲಜ್ಜೆ, ಸಿಗ್ಗು; ಸಂಧಿ: ಸಂಯೋಗ; ಮಾತ: ನುಡಿ; ಮರೆ: ಕಡೆಗಣಿಸು,ತಿರಸ್ಕರಿಸು;

ಪದವಿಂಗಡಣೆ:
ಮಾವ+ ಮೊದಲು +ಸಹಾಯ +ಮಧ್ಯದೊಳ್
ಆ ವಿರಾಟನ+ ಸಖ್ಯ +ಕಡೆಯೊಳು
ನೀವು +ಮಮ +ಜೀವಹಿ +ಎಂಬಿರಿ+ ನಿಮ್ಮ +ಪಾಂಡವರ
ನಾವು +ಕಡೆಯೊಳು +ಹೊರಗು +ನಮಗಿ
ನ್ನಾವ +ಭೂಪರ +ಸಖ್ಯವಿರ್ಪುದು
ದೇವ+ ನಾಚಿಸಬೇಡ +ಸಂಧಿಯ +ಮಾತ +ಮರೆಯೆಂದ

ಅಚ್ಚರಿ:
(೧) ಕಡೆಯೊಳು – ೨ ಬಾರಿ ಪ್ರಯೋಗ, ೨, ೪ ಸಾಲು
(೨) ನೀವು, ನಾವು – ಪದಗಳ ಪರಯೋಗ, ೩,೪ ಸಾಲಿನ ಮೊದಲ ಪದ
(೩) ಮೊದಲು, ಮಧ್ಯ, ಕಡೆ – ಪದಗಳ ಬಳಕೆ

ಪದ್ಯ ೧೫: ಉಳಿದ ರಾಜರು ಯಾರ ಜೊತೆ ಕೈಗೂಡಿಸಿದರು?

ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರ ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ಬಂದರು
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡವರ ಪೊರೆಗೆ (ಉದ್ಯೋಗ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಂಡಾರ ದೂತರು ಓಲೆ ಉಡುಗೊರೆಗಳೊಡನೆ ಹೋಗಿ ಯುದ್ಧದಲ್ಲಿ ಸಹಾಯಮಾಡಲು ಮಿತ್ರರಾಜರನ್ನು ಕರೆದರು. ದೂರ ದೂರದ ಮೂಲೆಗಳ ರಾಜರು ಸೈನ್ಯ, ಕುದುರೆ ಸಮೇತರಾಗಿ ಹೊರಟು ಕೆಲವರು ಪಾಂಡವರ ಕಡೆಗೆ ಮತ್ತು ಕೆಲವರು ಕೌರವರ ಕಡೆಗೆ ಸೇರಿದರು.

ಅರ್ಥ:
ಓಲೆ: ಪತ್ರ; ಉಡುಗೊರೆ: ಕಾಣಿಕೆ, ಬಳುವಳಿ; ಸಹಿತ: ಜೊತೆ; ಧರಣಿ: ಭೂಮಿ; ದರಣೀಪಾಲ: ರಾಜ; ಶಿಷ್ಟರು: ಉತ್ತಮ ವ್ಯಕ್ತಿ; ಕಾಳಗ: ಯುದ್ಧ; ನೆರವು: ಸಹಾಯ; ಓಸುಗ: ಓಸ್ಕರ; ಕರೆ: ಬರೆಮಾಡು, ಕೂಗು; ಆಳು: ಸೈನ್ಯ; ಕುದುರೆ: ಅಶ್ವ; ಕೂಡಿ: ಜೊರೆ; ಬಂದರು: ಆಗಮಿಸು; ಮೂಲೆ: ಕೊನೆ; ಅರಸು: ರಾಜ; ಭೂಪಾಲ: ರಾಜ; ಪೊರೆ: ಆಶ್ರಯ;

ಪದವಿಂಗಡಣೆ:
ಓಲೆ+ಉಡುಗೊರೆ +ಸಹಿತ+ ಧರಣೀ
ಪಾಲರಿಗೆ+ ಪಾಂಡವರ+ ಶಿಷ್ಟರು
ಕಾಳಗಕೆ+ ನೆರವಾಗಲೋಸುಗ +ಕರೆದರಲ್ಲಲ್ಲಿ
ಆಳು +ಕುದುರೆಯ +ಕೂಡಿ +ಬಂದರು
ಮೂಲೆಯ +ಅರಸುಗಳೆಲ್ಲ+ ಕುರು +ಭೂ
ಪಾಲನಲ್ಲಿಗೆ +ಕೆಲರು +ಕೆಲಬರು +ಪಾಂಡವರ+ ಪೊರೆಗೆ

ಅಚ್ಚರಿ:
(೧) ಭೂಪಾಲ, ಧರಣೀಪಾಲ, ಅರಸು – ರಾಜನ ಸಮನಾರ್ಥಕ ಪದ
(೨) ಕೆಲರು, ಕೆಲಬರು – ಪದಗಳ ಬಳಕೆ
(೩) ಕರೆದರು, ಬಂದರು – ೩, ೪ ಸಾಲಿನ ಪದಗಳ ಬಳಕೆ