ಪದ್ಯ ೨೭: ಧೃಷ್ಟದ್ಯುಮ್ನನು ಸಾತ್ಯಕಿಗೆ ಏನು ಹೇಳಿದನು?

ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ (ದ್ರೋಣ ಪರ್ವ, ೧೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಸೆರೆಯಿಂದ ಕತ್ತಿಯನ್ನು ಹೊರಗೆಳೆದು, ಭೀಮ ಈ ಬಾಯಿಬಡಕನನ್ನು ಬಿಡು, ಅವನಿಗೆ ಕತ್ತಿಯನ್ನು ಕೊಡು, ಎಲವೋ ಸಾತ್ಯಕಿ, ಕೃಷ್ಣನಿಗೆ ಹೆದರಿ ನಾನು ಸುಮ್ಮನಿದ್ದೆ. ನೀನು ನನ್ನನ್ನು ನಿಂದಿಸುವೆಯಾ? ನಿನ್ನ ನಾಲಗೆಯನ್ನು ಹಿಂದಲೆಯಿಂದ ಹೊರಗೆಳೆಯುತ್ತೇನೆ ಎಂದು ವೀರಾವೇಶದಿಂದ ನುಡಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಒರೆ: ಉಜ್ಜು, ತಿಕ್ಕು; ಆಯುಧ: ಶಸ್ತ್ರ; ಅವ್ವಳಿಸು: ತಟ್ಟು, ತಾಗು; ಸುತ: ಮಗ; ಗಳಹ: ಬಾಯಿಬಡಕ; ಬಿಡು: ತೊರೆ; ಕೊಡು: ನೀಡು; ಖಂಡೆಯ: ಕತ್ತಿ; ಅಳುಕು: ಹೆದರು; ಸೈರಿಸು: ತಾಳ್ಮೆ; ದೊಠಾರ: ಶೂರ, ಕಲಿ; ನುಡಿ: ಮಾತು; ಹೆಡತಲೆ: ಹಿಂದಲೆ; ಅಲುಗು: ಅಳ್ಳಾಡು, ಅದುರು; ನಾಲಗೆ: ಜಿಹ್ವೆ;

ಪದವಿಂಗಡಣೆ:
ಸೆಳೆದನ್+ಒರೆಯಲಡ್+ಆಯುಧವನ್
ಅವ್ವಳಿಸಿದನು +ಪಾಂಚಾಲಸುತನ್+ಈ
ಗಳಹನನು +ಬಿಡು +ಭೀಮ +ಕೊಡು +ಸಾತ್ಯಕಿಯ +ಖಂಡೆಯವ
ಎಲವೊ +ಸಾತ್ಯಕಿ +ಕೃಷ್ಣ+ದೇವರಿಗ್
ಅಳುಕಿ +ಸೈರಿಸಿದರೆ +ದೊಠಾರಿಸಿ
ಗೆಲನುಡಿವೆ +ಹೆಡತಲೆ+ಅಲುಗಿವೆನು +ನಿನ್ನ +ನಾಲಗೆಯ

ಅಚ್ಚರಿ:
(೧) ಬಿಡು, ಕೊಡು – ಪ್ರಾಸ ಪದಗಳು
(೨) ಸಾತ್ಯಕಿಯನ್ನು ಗದರಿಸುವ ಪರಿ – ದೊಠಾರಿಸಿ ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ

ಪದ್ಯ ೧: ದ್ರೋಣನ ರಥದ ಬಳಿಗೆ ಯಾರು ಬಂದರು?

ಕೇಳು ಧೃತರಾಷ್ಟ್ರವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದ್ರೋಣನು ದೇಹತ್ಯಾಗ ಮಾಡಿದನು. ಅವನಿಗೆ ಬಂದ ವಿಧಿಯು ನಮ್ಮ ಸೋಲಿಗೆ ತವನಿಧಿ, ನಂತರ ವೈರಿರಾಜರಿಗೆ ಕಷ್ಟ ಬಂದಿತು. ದ್ರೋಣನ ದೇಹತ್ಯಾಗವನ್ನು ಕೇಳಿದ ಧೃಷ್ಟದ್ಯುಮ್ನನು ಕತ್ತಿಯನ್ನು ಝಳಪಿಸುತ್ತಾ ದ್ರೋಣನ ರಥದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಗುರು: ಆಚಾರ್ಯ; ಬೀಳುಕೊಡು: ತೆರಳು; ದೇಹ: ಶರೀರ; ಆಳು: ಸೇವಕ; ವಿಧಿ: ನಿಯಮ; ಅಪಜಯ: ಸೋಲು; ನಿಧಿ: ಐಶ್ವರ್ಯ; ಬಂದು: ಆಗಮಿಸು; ಕಷ್ಟ: ತೊಂದರೆ; ಅರಿ: ವೈರಿ; ಭೂಪಾಲ: ರಾಜ; ಕೇಳು: ಆಲಿಸು; ಖಳ: ದುಷ್ಟ; ಸುತ: ಮಗ; ಐತಂದು: ಬಂದು ಸೇರು; ಜಡಿ: ಬೆದರಿಕೆ; ಆಯುಧ: ಶಸ್ತ್ರ; ತವ: ನಿನ್ನ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ಗುರು
ಬೀಳುಕೊಟ್ಟನು +ದೇಹವನು +ನ
ಮ್ಮಾಳ +ವಿಧಿಯೇನ್+ಅಪಜಯದ +ತವನಿಧಿಯಲೇ +ನಮಗೆ
ಮೇಲೆ +ಬಂದುದು +ಕಷ್ಟವ್+ಅರಿ+ಭೂ
ಪಾಲರಿಗೆ +ಕೇಳ್+ಇದನು +ಖಳ+ ಪಾಂ
ಚಾಲಸುತನ್ +ಐತಂದನ್+ಅಲ್ಲಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೨) ದ್ರೋಣನು ಸತ್ತನು ಎಂದು ಹೇಳಲು – ಗುರು ಬೀಳುಕೊಟ್ಟನು ದೇಹವನು

ಪದ್ಯ ೨೯: ಯುದ್ಧರಂಗದ ಧೂಳಿನಬ್ಬರ ಹೇಗಿತ್ತು?

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ (ದ್ರೋಣ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ರಾಜ ಧೃತರಾಷ್ಟ್ರನೇ ಕೇಳು, ಪಾಂಡವರು ಶ್ರೀಕೃಷ್ಣನೊಡನೆ ಮಾತನಾಡುತ್ತಾ ಯುದ್ಧರಂಗವನ್ನು ಹೊಕ್ಕರು. ಧೃಷ್ಟದ್ಯುಮ್ನನು ಸೈನ್ಯವನ್ನು ವ್ಯೂಹಾಕಾರವಾಗಿ ನಿಲ್ಲಿಸಿದನು. ಕೆಂಧೂಳು ಮೇಲೆದ್ದು ರೆಪ್ಪೆಯಿಲ್ಲದ ದೇವತೆಗಳು ಕಣ್ಣುಮುಚ್ಚಿಕೊಳ್ಳುವ ಹಾಗಾಯಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಸಿರಿಲೋಲ: ಲಕ್ಷ್ಮೀಲೋಲ, ಕೃಷ್ಣ; ಆದಿ: ಮುಂತಾದ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ; ಅರಿ: ತಿಳಿ; ಸೇನೆ: ಸೈನ್ಯ; ಸುತ: ಮಗ; ಮೋಹರ: ಸೈನ್ಯ, ದಂಡು, ಯುದ್ಧ; ಕೆಂಧೂಳಿ: ಕೆಂಪಾದ ಧೂಳು; ಮಾಣಿಸು: ನಿಲ್ಲುವಂತೆ ಮಾಡು; ಅನಿಮಿಷ: ದೇವತೆ, ಕಣ್ಣು ಮಿಟುಕಿಸದ; ಅಮರ: ದೇವತೆ; ಸಂತತಿ: ವಂಶ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ಸಿರಿ
ಲೋಲಸಹಿತ+ ಯುಧಿಷ್ಠಿರ್+ಆದಿಗಳ್
ಅಳಮೇಳಾಪದಲಿ+ ಹೊಕ್ಕರು +ಕಾಳೆಗದ +ಕಳನ
ಸಾಲರಿದು +ನಿಜಸೇನೆಯನು +ಪಾಂ
ಚಾಲಸುತ +ಮೋಹರಿಸಿದನು +ಕೆಂ
ಧೂಳಿ +ಮಾಣಿಸಿತ್+ಅನಿಮಿಷತ್ವವನ್+ಅಮರ +ಸಂತತಿಯ

ಅಚ್ಚರಿ:
(೧) ಯುದ್ಧರಂಗದ ರಭಸವನ್ನು ವಿವರಿಸುವ ಪರಿ – ಕೆಂಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ
(೨) ಕೃಷ್ಣನನ್ನು ಸಿರಿಲೋಲ ಎಂದು ಕರೆದಿರುವುದು