ಪದ್ಯ ೪೨: ಧೃತರಾಷ್ಟ್ರನು ಪಾಂಡವರನ್ನು ಹೇಗೆ ಉಪಚರಿಸಿದನು?

ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ (ಗದಾ ಪರ್ವ, ೧೧ ಪದ್ಯ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಭೀಮ ಬಾ, ಅರ್ಜುನನೇ ಬಾ, ಮಾದ್ರಿಯಮಕ್ಕಳೇ ಬನ್ನಿ ಎಂದು ಅವರನ್ನೆಲ್ಲಾ ಆಲಂಗಿಸಿಕೊಂಡು, ಕೌರವ ಕುಲಾಗ್ರಣಿಗಳೇ ಕುಳಿತುಕೊಳ್ಳಿ ಎಂದು ಅವರನ್ನು ಉಪಚರಿಸಿದನು.

ಅರ್ಥ:
ಪವನಸುತ: ವಾಯುಪುತ್ರ; ಬಾ: ಆಗಮಿಸು; ತಕ್ಕವಿಸು: ಆಲಂಗಿಸು; ಬಳಿಕ: ನಂತರ; ಎರಗು: ನಮಸ್ಕರಿಸು; ವಾಸವ: ಇಂದ್ರ; ಸುತ: ಮಗ; ಕಂದ: ಮಗು; ಅಪ್ಪು: ಆಲಂಗಿಸು; ತವಕ: ಬಯಕೆ, ಆತುರ; ಜವಳಿ: ಜೋಡಿ; ಮಕ್ಕಳು: ಪುತ್ರ; ಅಗ್ರಣಿ: ಶ್ರೇಷ್ಠ; ಕುಲ: ವಂಶ; ಕುಳ್ಳಿರಿ: ಆಸೀನ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಪವನಸುತನೇ +ಬಾ +ಎನುತ +ತ
ಕ್ಕವಿಸಿದನು +ಬಳಿಕ್+ಎರಗಿದಡೆ +ವಾ
ಸವನ +ಸುತ +ಬಾ +ಕಂದ +ಎಂದಪ್ಪಿದನು +ಫಲುಗುಣನ
ತವಕದಿಂದ್+ಎರಗಿದಡೆ +ಮಾದ್ರಿಯ
ಜವಳಿಮಕ್ಕಳನ್+ಅಪ್ಪಿದನು +ಕೌ
ರವ+ಕುಲಾಗ್ರಣಿಗಳಿರ +ಕುಳ್ಳಿರಿ+ಎಂದನ್+ಅಂಧನೃಪ

ಅಚ್ಚರಿ:
(೧) ಪವನಸುತ, ವಾಸವನ ಸುತ – ಭೀಮ, ಅರ್ಜುನನನ್ನು ಕರೆದ ಪರಿ
(೨) ಸುತ, ಮಕ್ಕಳು, ಕಂದ – ಸಾಮ್ಯಾರ್ಥ ಪದ

ಪದ್ಯ ೪೨: ಕೃಷ್ಣನು ಭೀಮನಿಗೆ ಏನು ಮಾಡಲು ಹೇಳಿದನು?

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಅವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ (ದ್ರೋಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಎಲ್ಲರೂ ಶಸ್ತ್ರವನ್ನು ತ್ಯಜಿಸಿರುವುದನ್ನು ಕಂಡ ನಾರಾಯಣಾಸ್ತ್ರವು, ಶಸ್ತ್ರವನ್ನು ಹಿಡಿದವರನ್ನು ಹುಡುಕುತ್ತಾ ಬರುತ್ತಿತ್ತು. ಆಗ ಕೃಷ್ಣನು ಭೀಮನಿಗೆ ಕೋಪದಿಂದ, ತನ್ನ ಕೈಯಲ್ಲಿರುವ ಆಯುಧವನ್ನು ಭೂಮಿಗೆ ಎಸೆದು ನನ್ನನ್ನೇ ನೋಡೆಂದು ಹೇಳಲು ಭೀಮನು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಕೈದು: ಶಸ್ತ್ರ; ಒತ್ತ: ಹಿಡಿದ; ಅಸರು: ಹುಡುಕು; ಬರಲು: ಆಗಮಿಸು; ಪವನಸುತ: ಭೀಮ; ಸುತ: ಮಗ; ಥಟ್ಟು: ಪಕ್ಕ, ಕಡೆ, ಗುಂಪು; ದನುಜರಿಪು: ಕೃಷ್ಣ; ಮುಳಿ: ಸಿಟ್ಟು, ಕೋಪ; ಅವನಿ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಕಳೆ: ಬೀಡು, ತೊರೆ; ಕೈದು: ಆಯುಧ; ಮೊದಲು: ಮುಂಚೆ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅನಿಲಸುತ: ಭೀಮ; ನಸುನಗು: ಹಸನ್ಮುಖ;

ಪದವಿಂಗಡಣೆ:
ಇವರೊಳ್+ಉಂಟೇ +ಕೈದು+ ವೊತ್ತವರ್
ಅವರನ್+ಅರಸುವೆನ್+ಎನುತ +ಬರಲ್+ಆ
ಪವನಸುತನನು+ ಥಟ್ಟಿಸಿದನಾ +ದನುಜರಿಪು+ ಮುಳಿದು
ಅವನಿಗ್+ಇಳಿದ್+ಈಡಾಡಿ +ಕಳೆ +ಕೈ
ದುವನು +ತಾ +ಮೊದಲಾಗಿ +ನಿಂದಂದ್
ಅವನು+ ನೋಡೆನಲ್+ಅನಿಲಸುತ +ನಸುನಗುತಲ್+ಇಂತೆಂದ

ಅಚ್ಚರಿ:
(೧) ಪವನಸುತ, ಅನಿಲಸುತ – ಭೀಮನನ್ನು ಕರೆದ ಪರಿ

ಪದ್ಯ ೬೬: ಭೀಮನು ದ್ರೋಣರನ್ನು ಹೇಗೆ ಮೂದಲಿಸಿದನು?

ಈಸು ಭರದಲಿ ಭೂತಹಿಂಸಾ
ದೋಷವನು ನೆರೆ ಮಾಡಿ ಮಕ್ಕಳಿ
ಗೋಸುಗವಲೇ ಹಣವ ಗಳಿಸುವುದಾತ ತಾನಳಿಯೆ
ಆಸೆಯಿದರೊಳಗೇಕೆ ಧುರದಾ
ವೇಶವಳಿಯದು ಶಿವ ಶಿವಾ ಸುತ
ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ (ದ್ರೋಣ ಪರ್ವ, ೧೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ಇಷ್ಟು ಆವೇಶದಿಂದ ಪ್ರಾಣಿ ಹಿಂಸೆಯನ್ನು ಮಾಡಿ ಹಣವನ್ನು ಗಳಿಸುವುದು ಮಕ್ಕಳಿಗಾಗಿ ತಾನೇ? ಮಗನು ಹೋದರೂ ಯುದ್ಧದ ಆವೇಶ ಆಶೆ ತಗ್ಗಲಿಲ್ಲ. ಪುತ್ರನಾಶವನ್ನೂ ಇವನು ಲೆಕ್ಕಿಸಲಿಲ್ಲ ಎಂದು ಭೀಮನು ನಗುತ್ತ ದ್ರೋಣರನ್ನು ಮೂದಲಿಸಿದನು.

ಅರ್ಥ:
ಈಸು: ಇಷ್ಟು; ಭರ: ವೇಗ; ಭೂತ: ಪ್ರಾಣಿವರ್ಗ; ಹಿಂಸೆ: ನೋವು; ದೋಷ: ತಪ್ಪು; ನೆರೆ: ಗುಂಪು; ಮಕ್ಕಳು: ಪುತ್ರ; ಓಸುಗ: ಓಸ್ಕರ; ಹಣ: ಐಶ್ವರ್ಯ; ಗಳಿಸು: ಪಡೆ; ಅಳಿ: ನಾಶ; ಆಸೆ: ಇಚ್ಛೆ; ಧುರ: ಯುದ್ಧ, ಕಾಳಗ; ಆವೇಶ: ರೋಷ; ಅಳಿ: ನಾಶ; ಸುತ: ಪುತ್ರ; ನಾಶ: ಹಾಳು; ಬಗೆ; ರೀತಿ; ಪವನಸುತ: ವಾಯುಪುತ್ರ; ನಗು: ಹರ್ಷ;

ಪದವಿಂಗಡಣೆ:
ಈಸು +ಭರದಲಿ +ಭೂತ+ಹಿಂಸಾ
ದೋಷವನು +ನೆರೆ +ಮಾಡಿ +ಮಕ್ಕಳಿಗ್
ಓಸುಗವಲೇ +ಹಣವ +ಗಳಿಸುವುದ್+ಆತ +ತಾನಳಿಯೆ
ಆಸೆಯಿದರೊಳಗೇಕೆ +ಧುರದ್
ಆವೇಶವಳಿಯದು +ಶಿವ+ ಶಿವಾ+ ಸುತ
ನಾಶವನು +ಬಗೆಗೊಳ್ಳನೆಂದನು +ಪವನಸುತ +ನಗುತ

ಅಚ್ಚರಿ:
(೧) ಹಂಗಿಸುವ ಪರಿ – ಸುತ ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ

ಪದ್ಯ ೪೦: ಅಶ್ವತ್ಥಾಮನು ಹತವಾಯಿತೆಂದು ಯಾರು ಹೇಳಿದರು?

ಕಿವಿಯ ಮುಚ್ಚಿದನರ್ಜುನನು ಹರಿ
ಯವಗಡಿಸೆ ಕೈಕೊಂಡನರಸನು
ಪವನಸುತನಾ ಮಾತಕೊಂಡನು ಹೊಕ್ಕನಾಹವವ
ತವಕದಲಿ ತೆಗೆದೆಸುತ ರಿಪುಶರ
ನಿವಹವನು ಖಂಡಿಸುತಲಿಂದಿನ
ಬವರದಲಿ ಕಡಿವಡೆದುದಶ್ವತ್ಥಾಮ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮಾತನ್ನು ಕೇಳಿ ಅರ್ಜುನನು ಕಿವಿಗಳನ್ನು ಮುಚ್ಚಿಕೊಂಡನು. ಕೃಷ್ಣನು ಅವನನ್ನು ಹೀಯಾಳಿಸಲು ಧರ್ಮಜನು ಒಪ್ಪಿಕೊಂಡನು. ಆ ಮಾತನ್ನು ಕೇಳಿ ಭೀಮನು ಅವಸರದಿಂದ ಶತ್ರುಸೈನ್ಯವನ್ನು ಬಾನಗಳಿಂದ ಹೊಡೆದುರುಳಿಸುತ್ತಾ ದ್ರೋಣನ ಬಳಿಗೆ ಹೋಗಿ, ಈ ದಿನ ಯುದ್ಧದಲ್ಲಿ ಅಶ್ವತ್ಥಾಮ ಹತವಾಯಿತು ಎಂದನು.

ಅರ್ಥ:
ಕಿವಿ: ಕರ್ಣ; ಮುಚ್ಚು: ಅಡಗಿಸು, ಮರೆಮಾಡು; ಹರಿ: ಕೃಷ್ಣ; ಅವಗಡಿಸು: ಕಡೆಗಣಿಸು; ಅರಸು: ರಾಜ; ಪವನಸುತ: ವಾಯುಪುತ್ರ; ಮಾತು: ವಾಣಿ; ಹೊಕ್ಕು: ಸೇರು; ಆಹವ: ಯುದ್ಧ; ತವಕ: ಬಯಕೆ, ಆತುರ; ತೆಗೆ: ಹೊರತರು; ಸುತ: ಮಗ; ರಿಪು: ವೈರಿ; ಶರ: ಬಾಣ; ನಿವಹ: ಗುಂಪು; ಖಂಡಿಸು: ಕಡಿ, ಕತ್ತರಿಸು; ಬವರ: ಯುದ್ಧ; ಕಡಿ: ಸೀಳು; ಕೇಳು: ಆಲಿಸು;

ಪದವಿಂಗಡಣೆ:
ಕಿವಿಯ +ಮುಚ್ಚಿದನ್+ಅರ್ಜುನನು +ಹರಿ
ಅವಗಡಿಸೆ +ಕೈಕೊಂಡನ್+ಅರಸನು
ಪವನಸುತನ+ಆ +ಮಾತಕೊಂಡನು+ ಹೊಕ್ಕನ್+ಆಹವವ
ತವಕದಲಿ+ ತೆಗೆದ್+ಎಸುತ +ರಿಪು+ಶರ
ನಿವಹವನು +ಖಂಡಿಸುತಲ್+ಇಂದಿನ
ಬವರದಲಿ+ ಕಡಿವಡೆದುದ್+ಅಶ್ವತ್ಥಾಮ +ಕೇಳೆಂದ

ಅಚ್ಚರಿ:
(೧) ಬವರ, ಆಹವ – ಸಮಾನಾರ್ಥಕ ಪದಗಳು
(೨) ತವಕದಲಿ, ಬವರದಲಿ – ಪ್ರಾಸ ಪದಗಳು

ಪದ್ಯ ೧೯: ಭೀಷ್ಮನ ಪಕ್ಕದಲ್ಲಿ ಯಾರು ನಿಂತರು?

ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು (ಭೀಷ್ಮ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾಸಿದ ಮುಖಕ್ಕೆ ಮುಸುಕಿಟ್ಟು ಧರ್ಮಜನು ಭೀಷ್ಮನ ಒಂದು ಪಕ್ಕಕ್ಕೆ ಹೋಗಿ ಕೈಯನ್ನು ಕೆನ್ನೆಗೆ ತಂದು ನಿಂತುಕೊಂಡನು. ಭೀಮ, ಅರ್ಜುನ, ಸಹದೇವ, ಸಾತ್ಯಕಿ ಮೊದಲಾದವರು ಶೋಕಾಗ್ನಿಯಿಂದ ಬೆಂದು ಪಕ್ಕದಲ್ಲಿ ಸಾಲಾಗಿ ನಿಂತರು.

ಅರ್ಥ:
ಕವಿ: ಆವರಿಸು; ಮುಸುಕು: ಹೊದಿಕೆ; ಕಂದು: ಮಸಕಾಗು; ಆನನ: ಮುಖ; ಅವನಿಪತಿ: ರಾಜ; ಯಮ: ಜವರಾಯ; ಸೂನು: ಮಗ; ಭವ: ಹುಟ್ಟು; ಮಗ್ಗುಲ: ಪಕ್ಕ; ಸರು: ಹರಡು; ಕೈ: ಹಸ್ತ; ಚಾಚು: ಹರಡು; ಕದಪು: ಕೆನ್ನೆ; ಪವನಸುತ: ವಾಯುಪುತ್ರ (ಭೀಮ); ದಿವಿಜ: ದೇವತೆ; ದಿವಿಜಪತಿ: ಇಂದ್ರ; ಸುತ: ಮಗ; ಆದಿ: ಮೊದಲಾದ; ಅವಿರಳ: ಬಿಡುವಿಲ್ಲದೆ; ಶೋಕ: ದುಃಖ; ಅಗ್ನಿ: ಬೆಂಕಿ; ತಪ್ತ: ನೊಂದ, ಸಂಕಟ; ಪಂತಿ: ಸಾಲು; ಕಟ್ಟು: ರಚಿಸು;

ಪದವಿಂಗಡಣೆ:
ಕವಿದ +ಮುಸುಕಿನ +ಕಂದಿದ್+ಆನನದ್
ಅವನಿಪತಿ +ಯಮಸೂನು +ಗಂಗಾ
ಭವನ+ ಮಗ್ಗುಲ+ ಸಾರಿದನು+ ಕೈಚಾಚಿ +ಕದಪಿನಲಿ
ಪವನಸುತ +ಸಹದೇವ +ಸಾತ್ಯಕಿ
ದಿವಿಜಪತಿಸುತರ್+ಆದಿ+ ಯಾದವರ್
ಅವಿರಳದ +ಶೊಕಾಗ್ನಿ +ತಪ್ತರು +ಪಂತಿ+ಕಟ್ಟಿದರು

ಅಚ್ಚರಿ:
(೧) ಧರ್ಮಜನ ಸ್ಥಿತಿ – ಕವಿದ ಮುಸುಕಿನ ಕಂದಿದಾನನದವನಿಪತಿ ಯಮಸೂನು
(೨) ಧರ್ಮಜ, ಅರ್ಜುನ, ಭೀಮನನ್ನು ಕರೆದ ಪರಿ – ದಿವಿಜಪತಿಸುತ, ಪವನಸುತ, ಯಮಸೂನು;
(೩) ದುಃಖಿತರಾದರು ಎಂದು ಹೇಳುವ ಪರಿ – ಅವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು

ಪದ್ಯ ೧೭: ಭೀಷ್ಮನು ಭೀಮನನ್ನು ಹೇಗೆ ಸೋಲಿಸಿದನು?

ಎಲೆ ಪಿತಾಮಹ ನೀವು ಕರುಣಿಸಿ
ದಳವ ನಿಮಗೊಪ್ಪಿಸುವೆ ಜಯವೆಮ
ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ
ಚಳಕದಲಿ ತೆಗೆದೆಚ್ಚಡಹಿತನ
ಹಿಳುಕ ಸೀಳಿದು ಬಿಸುಟು ಭೀಮನ
ಗೆಲಿದನೆಂಟಂಬಿನಲಿ ಗಂಗಾಸೂನು ಸಮರದಲಿ (ಭೀಷ್ಮ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಪಿತಾಮಹರೇ, ನೀವು ಕಲಿಸಿದ ಪಾಥವನ್ನು ನಿಮಗೊಪ್ಪಿಸುತ್ತೇನೆ ಎಂದು ಭೀಮನು ಭೀಷ್ಮನ ಮೇಲೆ ಬಹು ಬೇಗ ಬಾಣಗಳನ್ನು ಬಿಟ್ಟನು. ಭೀಷ್ಮನು ಭೀಮನ ಬಾಣಗಳನ್ನು ಕಡಿದು ಎಂಟು ಬಾಣಗಳಿಂದ ಅವನನ್ನು ಗೆದ್ದನು.

ಅರ್ಥ:
ಪಿತಾಮಹ: ಅಜ್ಜ; ಕರುಣಿಸು: ದಯೆ ತೋರು; ದಳ: ಸೈನ್ಯ; ಒಪ್ಪು: ಅಂಗೀಕರಿಸು, ಸಮ್ಮತಿಸು; ಜಯ: ಗೆಲುವು; ಉಳಿವು: ಜೀವ; ಕೊಂಡನು: ಧರಿಸಿದನು; ಪವನಸುತ: ವಾಯುಪುತ್ರ; ಧನು: ಬಿಲ್ಲು; ಚಳಕ: ಚಾತುರ್ಯ; ಎಚ್ಚು: ಬಾಣ ಪ್ರಯೋಗ ಮಾಡು; ಅಹಿತ: ವೈರಿ; ಹಿಳುಕು: ಬಾಣದ ಗರಿ; ಸೀಳು: ಚೂರು, ತುಂಡು; ಬಿಸುಟು: ಹೊರಹಾಕು; ಗೆಲಿ: ಜಯಿಸು; ಅಂಬು: ಬಾಣ; ಸೂನು: ಪುತ್ರ; ಸಮರ: ಯುದ್ಧ; ಅಳವು: ಶಕ್ತಿ;

ಪದವಿಂಗಡಣೆ:
ಎಲೆ +ಪಿತಾಮಹ +ನೀವು +ಕರುಣಿಸಿದ್
ಅಳವ+ ನಿಮಗ್+ಒಪ್ಪಿಸುವೆ +ಜಯವೆಮಗ್
ಉಳಿವು+ ಬೇರೆಂತ್+ಎನುತ +ಕೊಂಡನು +ಪವನಸುತ +ಧನುವ
ಚಳಕದಲಿ+ ತೆಗೆದ್+ಎಚ್ಚಡ್+ಅಹಿತನ
ಹಿಳುಕ+ ಸೀಳಿದು +ಬಿಸುಟು +ಭೀಮನ
ಗೆಲಿದನ್+ಎಂಟ್+ಅಂಬಿನಲಿ +ಗಂಗಾಸೂನು +ಸಮರದಲಿ

ಅಚ್ಚರಿ:
(೧) ಭೀಷ್ಮನ ಸಾಮರ್ಥ್ಯ – ಅಹಿತನ ಹಿಳುಕ ಸೀಳಿದು ಬಿಸುಟು ಭೀಮನ ಗೆಲಿದನೆಂಟಂಬಿನಲಿ ಗಂಗಾಸೂನು

ಪದ್ಯ ೧೨: ಸುಯೋಧನನು ಭೀಮನನ್ನು ಹೇಗೆ ಹಂಗಿಸಿದನು?

ಎಲವೊ ಮಾರುತಿ ನಿಮ್ಮೊಳಗೆ ಕೋ
ಮಳೆಯ ಹುದುವನು ಮೆಚ್ಚಿ ನಮ್ಮೊಳ
ಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ
ನೆಲನ ಬೇಟವ ಬಿಸುಟು ಜೀವದ
ಲುಳಿದು ತೊಲಗೆನೆ ಪವನಸುತ ಕಳ
ಕಳಸಿ ನಗುತವೆ ಕೌರವೇಂದ್ರಂಗೆಂದನುತ್ತರವ (ಭೀಷ್ಮ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೌರವನು, ಎಲವೋ ಭೀಮ, ನಿಮ್ಮ ನಿಮ್ಮಲ್ಲಿ ದ್ರೌಪದಿಯನ್ನು ಹಂಚಿಕೊಂಡು, ರಾಜ್ಯವನ್ನು ಹಂಚಿಕೊಳ್ಳಲು ನನ್ನ ಬಳಿಗೆ ಬಂದೆಯಾ ನೆಲದ ಆಶೆಯನ್ನು ಬಿಟ್ಟು, ಜೀವವನ್ನುಳಿಸಿಕೊಂಡು ಓಡಿಹೋಗು, ಎನ್ನಲು ಭೀಮನು ನಗುತ್ತಾ ಕೌರವನಿಗೆ ಉತ್ತರವನ್ನಿತ್ತನು.

ಅರ್ಥ:
ಮಾರುತಿ: ಭೀಮ, ವಾಯುಪುತ್ರ; ಕೋಮಳ: ಮೃದು; ಕೋಮಳೆ: ಹೆಂಗಸು; ಹುದು: ಕೂಡುವಿಕೆ, ಸೇರುವಿಕೆ, ಸಂಬಂಧ; ಮೆಚ್ಚು: ಒಲುಮೆ, ಪ್ರೀತಿ; ಇಳೆ: ಭೂಮಿ; ಬಯಸು: ಇಷ್ಟಪಡು; ಛಲ: ನೆಪ, ವ್ಯಾಜ; ಅಂಕ: ಗುರುತು; ಅರಿ: ತಿಳಿ; ನೆಲ: ಭೂಮಿ; ಬೇಟ: ಪ್ರಣಯ; ಬಿಸುಟು: ಹೊರಹಾಕು; ಜೀವ: ಪ್ರಾಣ; ಉಳಿ: ಬದುಕಿರು, ನಿಲ್ಲು; ತೊಲಗು: ದೂರ ಸರಿ; ಪವನಸುತ: ವಾಯುಪುತ್ರ; ಕಳಕಳ: ಗೊಂದಲ; ನಗುತ: ಹಸನ್ಮುಖ; ಉತ್ತರ: ಸಮಾಧಾನ; ಛಲದಂಕ: ದೃಢ ನಿಶ್ಚಯದ ಶೂರ;

ಪದವಿಂಗಡಣೆ:
ಎಲವೊ +ಮಾರುತಿ +ನಿಮ್ಮೊಳಗೆ +ಕೋ
ಮಳೆಯ +ಹುದುವನು +ಮೆಚ್ಚಿ +ನಮ್ಮೊಳಗ್
ಇಳೆಯ +ಹುದುವನು +ಬಯಸಿದೈ+ ಛಲದಂಕನೆಂದ್+ಅರಿಯ
ನೆಲನ+ ಬೇಟವ+ ಬಿಸುಟು +ಜೀವದಲ್
ಉಳಿದು +ತೊಲಗ್+ಎನೆ +ಪವನಸುತ +ಕಳ
ಕಳಸಿ +ನಗುತವೆ+ ಕೌರವೇಂದ್ರಂಗ್+ಎಂದನ್+ಉತ್ತರವ

ಅಚ್ಚರಿ:
(೧) ಹಂಗಿಸುವ ಪರಿ – ನಿಮ್ಮೊಳಗೆ ಕೋಮಳೆಯ ಹುದುವನು ಮೆಚ್ಚಿ ನಮ್ಮೊಳಗಿಳೆಯ ಹುದುವನು ಬಯಸಿದೈ ಛಲದಂಕನೆಂದರಿಯ

ಪದ್ಯ ೩೬: ಕಂಕನು ಮಲ್ಲಯುದ್ಧಕ್ಕೆ ಯಾರನ್ನು ಕರೆಸಲು ಹೇಳಿದನು?

ಅವನಿಪತಿ ಕೇಳ್ನಿನ್ನ ಬಾಣಸಿ
ನವನು ಮಲ್ಲನು ಭೀಮಸೇನನ
ಭವನದಲಿ ಬಲು ಮಲ್ಲವಿದ್ಯೆಯ ಸಾಧಿಸಿದನವನು
ಪವನಸುತನಿಂ ಬಲುಮೆಯೀತನು
ಜವಕೆ ಜವವೊದಗುವನು ನೀನಿಂ
ದಿವನ ಕರೆಸುವುದೆನಲು ಮತ್ಸ್ಯನೃಪಾಲನಿಂತೆಂದ (ವಿರಾಟ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕಂಕನು ತನ್ನ ಉಪಾಯವನ್ನು ತಿಳಿಸುತ್ತಾ, ರಾಜ ನಿನ್ನ ಅಡಿಗೆಯವನಾದ ವಲಲನು ಮಹಾ ಜಟ್ಟಿ, ಭೀಮನ ಮನೆಯ ಗರುಡಿಯಲ್ಲಿ ಅಭ್ಯಾಸ ಮಾಡಿ ಮಲ್ಲ ವಿದ್ಯೆಯನ್ನು ಸಾಧಿಸಿದ್ದಾನೆ, ಭೀಮನಿಗಿಂತ ಒಂದು ಕೈ ಹೆಚ್ಚು ಬಲಶಾಲಿ, ಯಮನಿಗೆ ಯಮನಾಗಿ ನಿಲ್ಲುವಷ್ಟು ಬಲವಂತ, ಎಂತಹ ವೀರನೇ ಆಗಲಿ ಗೆಲ್ಲಬಲಾವನು. ಅವನನ್ನು ಮಲ್ಲಕಾಳಗಕ್ಕೆ ಕರೆಸು ಎಂದನು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಬಾಣಸಿ: ಅಡುಗೆಯವ; ಮಲ್ಲ: ಜಟ್ಟಿ; ಭವನ: ಆಲಯ; ಬಲು: ಹೆಚ್ಚು; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಪವನಸುತ: ವಾಯುಪುತ್ರ; ಬಲುಮೆ: ಬಲ, ಶಕ್ತಿ; ಜವ: ಯಮ; ಕರೆಸು: ಬರೆಮಾಡು; ನೃಪಾಲ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್+ನಿನ್ನ+ ಬಾಣಸಿನ್
ಅವನು +ಮಲ್ಲನು +ಭೀಮಸೇನನ
ಭವನದಲಿ +ಬಲು +ಮಲ್ಲವಿದ್ಯೆಯ +ಸಾಧಿಸಿದನವನು
ಪವನಸುತನಿಂ+ ಬಲುಮೆ+ಈತನು
ಜವಕೆ+ ಜವ+ ಒದಗುವನು +ನೀನ್+ಇಂದ್
ಇವನ +ಕರೆಸುವುದ್+ಎನಲು +ಮತ್ಸ್ಯ+ನೃಪಾಲನ್+ಇಂತೆಂದ

ಅಚ್ಚರಿ:
(೧) ಅವನಿಪತಿ, ನೃಪಾಲ – ಸಮನಾರ್ಥಕ ಪದಗಳು
(೨) ಭೀಮನನ್ನು ಹೊಗಳುವ ಪರಿ – ಪವನಸುತನಿಂ ಬಲುಮೆಯೀತನು ಜವಕೆ ಜವವೊದಗುವನು

ಪದ್ಯ ೮೯: ದ್ರೌಪದಿಯು ಹೋರಾಟವನ್ನು ಹೇಗೆ ಆನಂದಿಸಿದಳು?

ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯೊಡೆ
ಬವರಿಯಲಿ ಟೊಣೆದೌಕಿದೊಡೆ ಮಡಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ (ವಿರಾಟ ಪರ್ವ, ೩ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕೀಚಕನು ಭೀಮನನ್ನು ತಿವಿಯಲು, ಭೀಮನು ಕೀಚಕನ ಮೇಲೆ ಕವಿದು ಬಿದ್ದನು. ಒತ್ತಿ ಹೊಡೆದರೆ, ಸುತ್ತಿ ಇರಿದರು, ಇರಿತವನ್ನು ಲೆಕ್ಕಿಸದೆ ಬಾಗಿ ಪ್ರಹಾರಮಾಡಿದರು. ಎರಡು ಮಂದರ ಪರ್ವತಗಳು ಹೋರಾಡುವಂತೆ ಭೀಮ ಕೀಚಕರು ಸೆಣಸುತ್ತಿರಲು ದ್ರೌಪದಿಯು ಹೊಯ್ಲುಗಳ ಹೋರಾಟವನ್ನು ನೋಡಿ ನಗುತ್ತಿದ್ದಳು.

ಅರ್ಥ:
ತಿವಿ: ಚುಚ್ಚು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮಾರುತಿ: ಭೀಮ; ಕವಿ: ಆವರಿಸು; ಹೆಣಗು: ಹೋರಾಡು, ಕಾಳಗ ಮಾಡು; ಅಡಸು: ಬಿಗಿಯಾಗಿ ಒತ್ತು; ಹೊಯ್ದು: ಹೊಡೆದು; ಬವರಿ: ತಿರುಗುವುದು; ಟೊಣೆ: ಇರಿ, ತಿವಿ; ಔಕು: ಒತ್ತು; ಮಡ: ಪಾದದ ಹಿಂಭಾಗ, ಹಿಮ್ಮಡಿ; ಹೊಕ್ಕು: ಸೇರು; ಸವಡಿ: ಜೊತೆ, ಜೋಡಿ; ಪವನಸುತ: ವಾಯುಪುತ್ರ (ಭೀಮ); ಒಪ್ಪು: ಒಪ್ಪಿಗೆ, ಸಮ್ಮತಿ; ಯುವತಿ: ಹೆಣ್ಣು; ನಗು: ಹಸನ್ಮುಖಿ; ಆಲಿಸು: ಕೇಳು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ;

ಪದವಿಂಗಡಣೆ:
ತಿವಿದನ್+ಅವನ್+ಉರವಣಿಸಿ+ ಮಾರುತಿ
ಕವಿದು +ಹೆಣಗಿದನ್+ಅಡಸಿ +ಹೊಯ್ದೊಡೆ
ಬವರಿಯಲಿ +ಟೊಣೆದ್+ಔಕಿದೊಡೆ +ಮಡ+ಮುರಿಯದ್+ಒಳಹೊಕ್ಕು
ಸವಡಿ +ಮಂದರದಂತೆ +ಕೀಚಕ
ಪವನಸುತರ್+ಒಪ್ಪಿದರು +ಭೀಮನ
ಯುವತಿ+ ನಗುತ್+ಆಲಿಸುತಲಿದ್ದಳು +ಹೊಯ್ಲ +ಹೋರಟೆಯ

ಅಚ್ಚರಿ:
(೧) ಮಾರುತಿ, ಪವನಸುತ – ಭೀಮನಿಗೆ ಬಳಸಿದ ಹೆಸರು;
(೨) ಉಪಮಾನದ ಪ್ರಯೋಗ – ಸವಡಿ ಮಂದರದಂತೆ ಕೀಚಕ ಪವನಸುತರೊಪ್ಪಿದರು

ಪದ್ಯ ೨: ಪಾಂಡವರು ಯಾವ ವೇಷದಲ್ಲಿ ಕಾಲ ಕಳೆದರು?

ಜವನ ಮಗ ಸಂನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜರಾಯನ ತನಯನಿದ್ದ ಶಿಖಂಡಿ ವೇಷದಲಿ
ಜವಳಿಮಕ್ಕಳು ಗೋಹಯಂಗಳ
ನಿವಹಕಧಿಪರು ಕಮಲಮುಖಿ ಕಾ
ಲವನು ಕಳೆದಳು ರಾಯನರಸಿಯ ಕೆಳದಿಯರ ಕೂಡಿ (ವಿರಾಟ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಯಮನ ಮಗನಾದ ಧರ್ಮಜನು ಸಂನ್ಯಾಸಿ ವೇಷದಲ್ಲಿಯೂ, ವಾಯುಪುತ್ರನಾದ ಭೀಮನು ಅಡಿಗೆಯವನಾಗಿಯೂ, ಇಂದ್ರನ ಮಗನಾದ ಅರ್ಜುನನು ಶಿಖಂಡಿಯಾಗಿಯೂ, ಅವಳಿ ಮಕ್ಕಳಾದ ನಕುಲ ಸಹದೇವರು ಗೋವುಗಳನ್ನು ಪಾಲಿಸುವುದರಲ್ಲಿಯೂ ಹಾಗು ದ್ರೌಪದಿಯು ಸುದೇಷ್ಣೇಯರ ಸಖಿಯರೊಡನೆ ಕಾಲವನ್ನು ಕಳೆದಳು.

ಅರ್ಥ:
ಜವ: ಯಮ; ಮಗ: ಪುತ್ರ; ಸಂನ್ಯಾಸಿ: ಋಷಿ; ವೇಷ: ರೂಪ; ಪವನಸುತ: ವಾಯುಪುತ್ರ; ಬಾಣಸಿಗ: ಅಡಿಗೆಯವ; ಮನೆ: ಆಲಯ; ದಿವಿಜರಾಯ: ಇಂದ್ರ; ತನಯ: ಮಗ; ಶಿಖಂಡಿ: ನಪುಂಸಕ; ಜವಳಿ: ಅವಳಿ, ಜೊತೆ; ಗೋ: ಗೋವು, ಆಕಳು; ನಿವಹ: ಗುಂಪು; ಅಧಿಪ: ಒಡೆಯ; ಕಮಲಮುಖಿ: ಕಮಲದಂತಹ ಮುಖವುಳ್ಳವಳು (ದ್ರೌಪದಿ); ಕಾಲ: ಸಮಯ; ಕಳೆ: ತಳ್ಳು; ಅರಸಿ: ರಾಣಿ; ರಾಯ: ರಾಜ; ಕೆಳದಿ: ಸ್ನೇಹಿತೆ, ದಾಸಿ; ಕೂಡಿ: ಜೊತೆ;

ಪದವಿಂಗಡಣೆ:
ಜವನ +ಮಗ+ ಸಂನ್ಯಾಸಿ +ವೇಷದಿ
ಪವನಸುತ +ಬಾಣಸಿನ+ ಮನೆಯಲಿ
ದಿವಿಜ+ರಾಯನ+ ತನಯನಿದ್ದ +ಶಿಖಂಡಿ +ವೇಷದಲಿ
ಜವಳಿ+ಮಕ್ಕಳು +ಗೋಹಯಂಗಳ
ನಿವಹಕ್+ಅಧಿಪರು +ಕಮಲಮುಖಿ +ಕಾ
ಲವನು +ಕಳೆದಳು +ರಾಯನರಸಿಯ +ಕೆಳದಿಯರ +ಕೂಡಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಮಲಮುಖಿ ಕಾಲವನು ಕಳೆದಳು ರಾಯನರಸಿಯ ಕೆಳದಿಯರ ಕೂಡಿ
(೨) ಜವನಮಗ, ಪವನಸುತ, ದಿವಿಜರಾಯನ ತನಯ, ಜವಳಿ ಮಕ್ಕಳು – ಪಾಂಡವರನ್ನು ಕರೆದ ಪರಿ
(೩) ಮಗ, ಸುತ, ತನಯ – ಸಮನಾರ್ಥಕ ಪದ