ಪದ್ಯ ೪೨: ಬಾಣಗಳನ್ನೊಳಗೊಂಡ ರಣಕೇಳಿ ಹೇಗಿತ್ತು?

ಹಿಳುಕು ಹಿಳುಕುಗಳಡಸಿ ದೆಸೆ ಕ
ತ್ತಲಿಸಿ ಕೈಕೊಂಡವು ಪತತ್ರಾ
ವಳಿಯ ಪವನನ ಹೊಯ್ಲಿನಲಿ ಬಾಯ್ಧಾರೆ ಕಿಡಿಯೇಳೆ
ಬಳಿಸರಳ ಬಿಲ್ಲಾಳ ದಡ್ಡಿಯ
ಬಲುಹು ತರುಬಿತು ಪಡಿಮುಖದ ಮಂ
ಡಳಿಕರೆಸುಗೆಯನಮಮ ಸಮತಳಿಸಿತ್ತು ರಣಕೇಳಿ (ಭೀಷ್ಮ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಬಾಣಗಳು ಒಂದರ ಮೇಲೊಂದು ಬಿದ್ದು ದಿಕ್ಕುಗಲಲ್ಲಿ ಕತ್ತಲು ಕವಿದವು. ಗರಿಗಳ ಗಾಳಿಯಿಂದ ಬಾಣಗಳ ಬಾಯ್ಧಾರೆಯಲ್ಲಿ ಕಿಡಿಗಳೆದ್ದವು. ಹಿಂದೆಯೇ ಬಂದ ಬಾಣಗಳ ಗುಂಪು ಮತ್ತೆ ಬಿಟ್ಟ ಬಾಣಗಳನ್ನು ತರುಬಿದವು. ಯುದ್ಧ ಕ್ರೀಡೆಯು ಸಮಸಮವಾಗಿ ನಡೆಯಿತು.

ಅರ್ಥ:
ಹಿಳುಕು: ಬಾಣದ ಹಿಂಭಾಗ; ಅಡಸು: ಚುಚ್ಚು, ಒತ್ತು; ದೆಸೆ: ದಿಕ್ಕು; ಕತ್ತಲು: ಅಂಧಕಾರ; ಪತತ್ರಾವಳಿ: ಬಾಣಗಳ ಸಮೂಹ; ಪವನ: ವಾಯು; ಹೊಯ್ಲು: ಹೊಡೆತ, ಏಟು; ಧಾರೆ: ಪ್ರವಾಹ; ಕಿಡಿ: ಬೆಂಕಿ; ಏಳು: ಮೇಲೇರು; ಬಳಿ: ಹತ್ತಿರ; ಸರಳ: ಬಾಣ; ಬಿಲ್ಲಾಳ: ಧನುರ್ವಿದ್ಯಾಚತುರ; ದಡ್ಡಿ: ಪಂಜರ; ಬಲುಹು: ಬಹಳ; ತರುಬು: ತಡೆ, ನಿಲ್ಲಿಸು; ಪಡಿ: ಪ್ರತಿ, ಎಣೆ; ಮುಖ: ಆನನ; ಮಂಡಳಿಕ: ಸಾಮಂತ ರಾಜ; ಎಸು: ಬಾಣ ಪ್ರಯೋಗ ಮಾಡು; ಅಮಮ: ಅಬ್ಬಬ್ಬ; ಸಮತಳ: ಸಮವಾಗಿ; ರಣಕೇಳಿ: ಯುದ್ಧ ಕ್ರೀಡೆ;

ಪದವಿಂಗಡಣೆ:
ಹಿಳುಕು+ ಹಿಳುಕುಗಳ್+ಅಡಸಿ +ದೆಸೆ+ ಕ
ತ್ತಲಿಸಿ +ಕೈಕೊಂಡವು +ಪತತ್ರಾ
ವಳಿಯ +ಪವನನ +ಹೊಯ್ಲಿನಲಿ +ಬಾಯ್ಧಾರೆ +ಕಿಡಿಯೇಳೆ
ಬಳಿ+ಸರಳ+ ಬಿಲ್ಲಾಳ+ ದಡ್ಡಿಯ
ಬಲುಹು +ತರುಬಿತು +ಪಡಿ+ಮುಖದ+ ಮಂ
ಡಳಿಕರ್+ಎಸುಗೆಯನ್+ಅಮಮ +ಸಮತಳಿಸಿತ್ತು+ ರಣಕೇಳಿ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಳುಕು ಹಿಳುಕುಗಳಡಸಿ ದೆಸೆ ಕತ್ತಲಿಸಿ ಕೈಕೊಂಡವು

ಪದ್ಯ ೨೦: ಬಾಣದ ರಭಸವು ಹೇಗಿತ್ತು?

ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ (ಭೀಷ್ಮ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಬಿಲ್ಲುಗಾರರ ಬಾಣಗಳ ಗಾಳಿಯಿಂದ ಹುಟ್ಟಿತೋ, ಅಬ್ಬರಿಸಿ ಬಡಿಯುವ ಸಿಡಿಲುಗಳು ಈ ಬಾಣಗಳ ತುದಿಯಲ್ಲಿ ಹುಟ್ಟಿದವೋ, ಸೈನ್ಯ ಸಮುದ್ರದಲ್ಲಿ ಈ ಬಾಣಗಳು ಉದಿಸಿ, ಬೆಟ್ಟಗಳಿಗೆ ಭೀತಿಯನ್ನು ತೋರಿದವೋ, ಈ ಬಾಣಗಳು ವೀರರ ಕುತ್ತಿಗೆಗಳಿಗೆ ಅಪ್ಪಳಿಸಿದವು.

ಅರ್ಥ:
ಪ್ರಳಯ: ಅಂತ್ಯಕಾಲ; ದಿವಸ: ದಿನ; ಪಟು: ಸಮರ್ಥ; ಪವನ: ವಾಯು; ಹಿಳುಕು: ಬಾಣದ ಹಿಂಭಾಗ; ಗಾಳಿ: ವಾಯು; ಉದಿಸು: ಹುಟ್ಟು; ಮಿಗೆ: ಹೆಚ್ಚು; ಮೊಳಗು: ಧ್ವನಿ, ಸದ್ದು ; ಮೋದು: ಪೆಟ್ಟು, ಹೊಡೆತ; ಸಿಡಿಲು: ಚಿಮ್ಮು, ಸಿಡಿ, ಗರ್ಜಿಸು; ಅಂಬು: ಬಾಣ; ಮೊನೆ: ತುದಿ; ಜಲಧಿ: ಸಾಗರ; ಜಂಗುಳಿ:ಸಮೂಹ; ಕುಧರ:ಬೆಟ್ಟ, ಪರ್ವತ; ಕುಲಿಶ: ವಜ್ರಾಯುಧ, ಬೆಟ್ಟ; ಭೀತಿ: ಭಯ; ಬೀರು: ಒಗೆ, ಎಸೆ, ತೂರು; ಕಣೆ: ಬಾಣ; ಬಳಿ: ಹತ್ತಿರ; ಸಲಿಸು: ದೊರಕಿಸಿ ಕೊಡು; ಹರಿದಾಡು: ಚಲಿಸು; ಸುಭಟ: ಪರಾಕ್ರಮಿ; ಗೋಣು: ಕುತ್ತಿಗೆ; ಗುರಿ: ಲಕ್ಷ್ಯ;

ಪದವಿಂಗಡಣೆ:
ಪ್ರಳಯ+ದಿವಸದ +ಪಟು+ಪವನನ್+ಈ+
ಹಿಳುಕು+ಗಾಳಿಯೊಳ್+ಉದಿಸಿದುದೊ +ಮಿಗೆ
ಮೊಳಗಿ +ಮೋದುವ +ಸಿಡಿಲ್ಗಳ್+ಅಂಬಿನ+ ಮೊನೆಯೊಳ್+ಉದಿಸಿದುದೊ
ಜಲಧಿಯಲಿ +ಜಂಗುಳಿಸಿ+ ಕುಧರಕೆ
ಕುಲಿಶ+ಭೀತಿಯ +ಬೀರಿ +ಕಣೆ +ಬಳಿ
ಸಲಿಸಿ+ ಹರಿದಾಡಿದವು +ಸುಭಟರ +ಗೋಣ +ಗುರಿಮಾಡಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪ್ರಳಯದಿವಸದ ಪಟುಪವನನೀ ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ

ಪದ್ಯ ೯೨: ಭೀಮನು ಏನೆಂದು ಘೋಷಿಸಿದನು?

ಇವನ ನೆತ್ತರ ಕುಡಿವ ರಿಪುಕೌ
ರವರ ನೂರ್ವರ ಕಡಿವ ಭಾಷೆಗ
ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ
ಅವನಿ ಜಳ ಶಿಖಿ ಪವನ ಪುಷ್ಕರ
ದಿವಿಜ ದನುಜೋರಗಮುಖಾಖಿಳ
ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ (ಕರ್ಣ ಪರ್ವ, ೧೯ ಸಂಧಿ, ೯೨ ಪದ್ಯ)

ತಾತ್ಪರ್ಯ:
ನಾನು ಮಾಡಿದ ಪ್ರತಿಜ್ಞೆಯಂತೆ ದುಶ್ಯಾಸನನ ರಕ್ತವನ್ನು ಕುಡಿದು, ನೂರುಜನ ಕೌರವರರನ್ನು ಸಂಹಾರಮಾಡಿದ್ದೇನೆ, ಇನ್ನು ಉಳಿದಿರುವುದು ಸುಯೋಧನನ ವಧೆ ಮಾತ್ರ ಇದಕ್ಕೆ ಭೂಮಿ, ಜಲ, ಅಗ್ನಿ, ವಾಯು, ಆಕಾಶಗಳು, ಸುರ, ಅಸುರ, ಪನ್ನಗ ಮೊದಲಾದ ವಿಶ್ವದ ಸಮಸ್ತ ಜನರೇ ಕೇಳಿ ಎಂದು ಮುಖಮೇಲೆತ್ತಿ ಘೋಷಿಸಿದನು.

ಅರ್ಥ:
ನೆತ್ತರ: ರಕ್ತ; ಕುಡಿ: ಪಾನ; ರಿಪು: ವೈರಿ; ಕಡಿ: ಸೀಳು, ಸಾವು; ಭಾಷೆ: ನುಡಿ; ಪೂರಾಯ: ಪರಿಪೂರ್ಣ; ಹರಣ: ಅಪಹರಿಸುವದು; ಅವನಿ: ಭೂಮಿ; ಜಳ: ನೀರು; ಶಿಖಿ: ಅಗ್ನಿ; ಪವನ: ವಾಯು; ಪುಷ್ಕರ: ಆಕಾಶ, ದಿವಿಜ: ದೇವತೆ; ‍ದನುಜ: ದಾನವ; ಉರಗ: ಹಾವು; ಮುಖ: ಆನನ; ಅಖಿಳ: ಸರ್ವ, ಎಲ್ಲಾ; ಭುವನ: ಭೂಮಿ; ಜನ: ಪ್ರಜೆ, ಮಾನುಷ; ಕೇಳಿ: ಆಲಿಸಿ ಮೊಗ: ಮುಖ; ನೆಗಹು: ಮೇಲಕ್ಕೆತ್ತು; ಮೊಗನೆಗಹಿ: ಮುಖಮೇಲೆತ್ತು;

ಪದವಿಂಗಡಣೆ:
ಇವನ +ನೆತ್ತರ +ಕುಡಿವ +ರಿಪುಕೌ
ರವರ +ನೂರ್ವರ +ಕಡಿವ +ಭಾಷೆಗ
ಳೆವಗೆ +ಪೂರಾಯವು +ಸುಯೋಧನ+ಹರಣ+ಒಂದುಳಿಯೆ
ಅವನಿ +ಜಳ +ಶಿಖಿ +ಪವನ+ ಪುಷ್ಕರ
ದಿವಿಜ +ದನುಜ+ಉರಗ+ಮುಖ+ಅಖಿಳ
ಭುವನಜನ +ನೀವ್ +ಕೇಳಿಯೆಂದನು+ ಭೀಮ +ಮೊಗನೆಗಹಿ

ಅಚ್ಚರಿ:
(೧) ಪಂಚಭೂತಗಳನ್ನು ಕರೆದ ಬಗೆ – ಅವನಿ, ಜಳ, ಶಿಖಿ, ಪವನ, ಪುಷ್ಕರ

ಪದ್ಯ ೨೦: ಕೃಷ್ಣನ ಲೀಲೆ ಎಂತಹದು?

ಅವನೊಬ್ಬನ ಬೆಳಗಿನಿಂದವೆ
ಜೀವನವು ರವಿಶಶಿಗಳಿಗೆ ಮಗು
ಳಾವನೊಬ್ಬನ ನೇಮದಿಂದವೆ ಪವನ ಪಾವಕರು
ಜೀವಿಸುವರಿಂತೊಬ್ಬನುರುಲೀ
ಲಾ ವಿನೋದದೆ ಬ್ರಹ್ಮ ವಿಷ್ಣು ಶಿ
ವಾವಳಿಗಳುದ್ಭವಿಸಿ ತೋರುವುವಾತ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಷ್ಣನೊಬ್ಬನ ಬೆಳಕಿನಿಂದ ಜಗತ್ತಿನಲ್ಲಿ ಜೀವನವು ನಡೆಯುವುದು, ಸೂರ್ಯ ಚಂದ್ರರು ಪುನಃ ಬೆಳಗುವರು ಅವನ ನಿಯಮದಿಂದ ಗಾಳಿ, ಅಗ್ನಿಗಳು ಚಲಿಸುವವು, ಹೀಗೆ ಒಬ್ಬರಿಂತೊಬ್ಬರು ಬದುಕುವುದಕ್ಕೆ ಕಾರಣನಾದ, ಯಾರ ಲೀಲೆಯಿಂದ ಬ್ರಹ್ಮ ವಿಷ್ಣು ಶಿವರು ಹುಟ್ಟಿ ತೋರುವರೋ ಅಂತಹ ಪರಬ್ರಹ್ಮ ವಸ್ತುವೇ ಇವನು ಎಂದು ಕೃಷ್ಣನ ಲೀಲೆಯ ಮಹಿಮೆಯನ್ನು ವಿದುರ ತಿಳಿಸಿದನು.

ಅರ್ಥ:
ಬೆಳಗು: ಹಗಲು; ಜೀವನ:ಬಾಳು, ಬದುಕು; ಮಗುಳು: ಹಿಂತಿರುಗು, ಪುನಃ; ರವಿ: ಭಾನು, ಸೂರ್ಯ; ಶಶಿ: ಚಂದ್ರ; ನೇಮ: ನಿಯಮ, ವ್ರತ; ಪವನ: ವಾಯು; ಪಾವಕ: ಅಗ್ನಿ ; ಜೀವಿಸು: ಬದುಕು; ಉರು: ಶ್ರೇಷ್ಠವಾದ; ಲೀಲೆ: ವಿಲಾಸ; ವಿನೋದ: ವಿಹಾರ, ಕ್ರೀಡೆ; ಆಳಿ: ಸಾಲು, ಗುಂಪು; ಉದ್ಭವಿಸು: ಹುಟ್ಟು; ತೋರು: ಗೋಚರಿಸು; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನೊಬ್ಬನ +ಬೆಳಗಿನಿಂದವೆ
ಜೀವನವು +ರವಿ+ಶಶಿಗಳಿಗೆ+ ಮಗುಳ್
ಆವನೊಬ್ಬನ +ನೇಮದಿಂದವೆ+ ಪವನ +ಪಾವಕರು
ಜೀವಿಸುವರ್+ಇಂತ್+ಒಬ್ಬನ್+ಉರು+ಲೀ
ಲಾ +ವಿನೋದದೆ +ಬ್ರಹ್ಮ +ವಿಷ್ಣು +ಶಿವ
ಆವಳಿಗಳ್+ಉದ್ಭವಿಸಿ +ತೋರುವುವ್+ಆತ +ನೋಡೀತ

ಅಚ್ಚರಿ:
(೧) ತೋರುವುವಾತ ನೋಡೀತ – ಪ್ರಾಸ ಪದಗಳ ಬಳಕೆ
(೨) ಪವನ ಪಾವಕ – ಪ ಕಾರದ ಜೋಡಿ ಪದ
(೩) ಅವನೊಬ್ಬನ – ೧, ೩ ಸಾಲಿನ ಮೊದಲ ಪದ

ಪದ್ಯ ೬: ಯಾವುದರಿಂದ ಯಾವುದು ಹುಟ್ಟಿತು?

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಯಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಣಮನ್ನಾದಿ ಪುರುಷ ಪ್ರಕೃತಿ ವಿಕೃತಿಗಳು (ಉದ್ಯೋಗ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಮಹಾರಾಜ ಕೇಳು, ಆತ್ಮನಿಂದ ಆಕಾಶ ಹುಟ್ಟಿತು, ಆಗಸದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಭೂಮಿ, ಅದರಲ್ಲಿ ಔಷಧಿ, ಅದರಿಂದ ಅನ್ನ, ಅನ್ನದಿಂದ ಪುರುಷನೇ ಮುಂತಾದವರು ಹುಟ್ಟಿದರು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಸಂಭವಿಸು: ಹುಟ್ಟು; ಅಂಬರ: ಆಕಾಶ;ಆತ್ಮ: ಜೀವ, ಮನಸ್ಸು, ಪರಬ್ರಹ್ಮ; ಪವನ: ಗಾಳಿ, ವಾಯು; ಅಗ್ನಿ: ಬೆಂಕಿ; ಭುವನ: ನೀರು; ಧರೆ: ಭೂಮಿ; ಓಷಧಿ: ಔಷಧಿ; ಅವತರಣ: ಅವತಾರ; ಅನ್ನ: ಆಹಾರ; ಆದಿ: ಮುಂತಾದವು; ಪುರುಷ: ಮನುಷ್ಯ, ಮಾನವ, ನರ; ಪ್ರಕೃತಿ: ನಿಸರ್ಗ, ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಬಗೆಯ ಮೂಲಗುಣಗಳು; ವಿಕೃತಿ: ಬದಲಾವಣೆ, ವ್ಯತ್ಯಾಸ, ಮಾರ್ಪಾಡು;

ಪದವಿಂಗಡಣೆ:
ಅವನಿಪತಿ +ಕೇಳ್+ಆತ್ಮನಿಂ +ಸಂ
ಭವಿಸಿತ್+ಅಂಬರವ್+ಅಂಬರದಲಾ
ಪವನ +ಪವನನಲ್+ಅಗ್ನಿ+ ಅಗ್ನಿಯಲ್+ಆದುದಾ +ಭುವನ
ಭುವನದಿಂ +ಧರೆ +ಧರಣಿಯಿಂದ್
ಉದ್ಭವಿಸಿತ್+ಓಷಧಿ+ ಓಷಧಿಗಳಿಂದ್
ಅವತರಣಮ್+ಅನ್ನಾದಿ +ಪುರುಷ +ಪ್ರಕೃತಿ +ವಿಕೃತಿಗಳು

ಅಚ್ಚರಿ:
(೧) ಪ್ರಕೃತಿ, ವಿಕೃತಿ – ಪ್ರಾಸ ಪದ
(೨) ಆತ್ಮ, ಅಂಬರ, ಪವನ, ಅಗ್ನಿ, ಭುವನ, ಭೂಮಿ, ಓಷದಿ, ಪುರುಷ, ಪ್ರಕೃತಿ – ಇದರ ಹುಟ್ಟುವಿನ ಬಗ್ಗೆ ತಿಳಿಸುವ ಪದ್ಯ

ಪದ್ಯ ೧೧: ಕೌರವ ಸೈನ್ಯದ ಬಲವನ್ನು ಹೇಗೆ ವರ್ಣಿಸಬಹುದು?

ಒಡ್ಡಿದರೊ ಪಡಿನೆಲವನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ
ಅಡ್ಡಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ (ವಿರಾಟ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ನೆಲಕ್ಕೆ ಪ್ರತಿ ನೆಲವೋ, ಭೂಮಿಗೆ ಹಾಕಿದ ಮುಸುಕೋ ಎಂಬಂತೆ ವಾದ್ಯ, ಚಾಮರ, ಸೀಗುರಿಗಳು ಕಾಣುತ್ತಿದ್ದವು. ಸೂರ್ಯ ಕಿರಣಗಳು, ಗಾಳಿಯೂ ನಡುವೆ ಸುಳಿಯಲು ಬಂದು ನಗೆಗೀಡಾದವು. ಕೌರವರ ಸೈನ್ಯವನ್ನು ಹೇಗೆ ವರ್ಣಿಸಲಿ.

ಅರ್ಥ:
ಒಡ್ಡು:ಸೈನ್ಯ, ಪಡೆ; ಪಡಿ: ಒಂದು ಅಳತೆ; ನೆಲ: ಭೂಮಿ; ಅವನಿ: ಭೂಮಿ; ಅಡ್ಡಿ: ದೊಡ್ಡಸ್ತಿಕೆ, ತೊಂದರೆ; ಮೇಣ್: ಮತ್ತು; ಝಲ್ಲರಿ: ಒಂದು ಬಗೆಯ ಚರ್ಮವಾದ್ಯ; ತಳಿತ: ಚಿಗುರಿದ; ಚಮರ:ಬಾಲದಲ್ಲಿ ಉದ್ದವಾದ ಕೂದಲುಳ್ಳ ಒಂದು ಮೃಗ; ಸೀಗುರಿ: ಒಂದು ಬಗೆಯ ಕೊಡೆ, ಚಾಮರ; ಪತಾಕ: ಧ್ವಜ, ಬಾವುಟ; ಅಡ್ಡ:ತಡೆ; ಹಾಯ್ದು: ಮೇಲೆಬಿದ್ದು, ದಾಟಿಹೋಗು; ಕಿರಣ: ರಶ್ಮಿ, ಬೆಳಕಿನ ಕದಿರು; ಪವನ: ಗಾಳಿ; ಖಡ್ಡ: ದಿಟ್ಟತನ; ನಗೆ: ಸಂತೋಷ; ಒಡ್ಡು:ಸೈನ್ಯ; ವರ್ಣಿಸು:ವಿವರಿಸು; ಅರಿ: ತಿಳಿ; ಜೀಯ: ಒಡೆಯ; ಕೇಳು: ಆಲಿಸು; ಇನ: ಸೂರ್ಯ;

ಪದವಿಂಗಡಣೆ:
ಒಡ್ಡಿದರೊ +ಪಡಿನೆಲವನ್+ಅವನಿಯದ್
ಅಡ್ಡಿಯೋ +ಮೇಣ್+ಎನಲು +ಝಲ್ಲರಿ
ಯೊಡ್ಡು +ತಳಿತುದು +ಚಮರ +ಸೀಗುರಿಗಳ+ ಪತಾಕೆಯಲಿ
ಅಡ್ಡಹಾಯ್ದ್+ಇನ+ ಕಿರಣ +ಪವನನ
ಖಡ್ಡತನ+ ನಗೆಯಾಯ್ತು +ಕೌರವನ್
ಒಡನ್+ಅಭಿವರ್ಣಿಸುವಡ್+ಅರಿಯೆನು +ಜೀಯ +ಕೇಳೆಂದ

ಅಚ್ಚರಿ:
(೧) ಕೌರವರ ಸೈನ್ಯದ ದಟ್ಟತೆಯನ್ನು ವಿವರಿಸುವ ಉಪಮಾನ – ಅಡ್ಡಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು- ಸೂರ್ಯನ ಕಿರಣಗಳು, ಗಾಳಿಯು ನುಸುಳಲಾಗದೆ ನಗೆಗೀಡಾದವು
(೨) ನೆಲ, ಅವನಿ – ಭೂಮಿ ಅರ್ಥದ ಸಮನಾರ್ಥಕ ಪದ

ಪದ್ಯ ೧೧೬: ಕೃಷ್ಣನು ಭೀಮನಿಗೆ ಏನು ಹೇಳಿದನು?

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹಕೊಂಡೀ ರಿಪುವ ಮುರಿ ನೆನೆನೆನೆ ಸಮೀರಣನ
ಬಲುಮುಗಿಲ ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗಮಾಡೆನೆ
ಕಲಿ ವೃಕೋದರನನಿಲರೂಪಧ್ಯಾನ ಪರನಾದ (ಸಭಾ ಪರ್ವ, ೨ ಸಂಧಿ, ಪದ್ಯ ೧೧೬)

ತಾತ್ಪರ್ಯ:
ಕೃಷ್ಣನು ಜರಾಸಂಧನ ಬಲವು ಜಾರುವುದನ್ನು ಅರಿತು, ಭೀಮನಿಗೆ “ಎಲೈ ಭೀಮನೆ, ಜರಾಸಂಧನ ರೀತಿಯನ್ನು ತಿಳಿದುಕೊಂಡೆಯಾ? ನಿನ್ನ ತಂದೆಯಾದ ವಾಯುದೇವನನ್ನು ಆಹ್ವಾನಿಸಿ ಅವನ ಬಲವನ್ನು ತಂದುಕೊಂಡು ಶತ್ರುಸಂಹಾರ ಮಾಡು, ಮೋಡಗಳು ಎಷ್ಟು ದಟ್ಟವಾಗಿದ್ದರೂ ಗಾಳಿಯ ಹೊಡೆತಕ್ಕೆ ಚದುರಿ ಹೋಗುವುದಿಲ್ಲವೇ? ಹೆದರದೆ ಬೇಗ ನಾನು ಹೇಳಿದಂತೆ ಮಾಡು, ವಾಯುದೇವರನ್ನು ನೆನೆ” ಎಂದು ಕೃಷ್ಣನು ಹೇಳಲು ಭೀಮನು ವಾಯುದೇವರನ್ನು ಧ್ಯಾನಿಸಿದನು.

ಅರ್ಥ:
ಪವನ: ಗಾಳಿ, ವಾಯು; ಪವನಜ; ಭೀಮ; ಈಶ್ವರ: ಪ್ರಭು, ಒಡೆಯ; ಅರಿ: ತಿಳಿ; ತಂದೆ: ಪಿತ; ಬಲುಹ: ಬಲ; ರಿಪು: ವೈರಿ; ಕೊಂಡು: ತೆಗೆದುಕೊಳ್ಳು; ಮುರಿ: ನಾಶ; ಸಮೀರಣ:ವಾಯುದೇವರು; ನೆನೆ: ಜ್ಞಾಪಿಸಿಕೊ; ಮುಗಿಲು: ಆಗಸ; ಬಿರುಗಾಳಿ: ಜೋರಾದ ಗಾಳಿ; ಅಳುಕು: ಭಯ; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬೇಗ:
ತ್ವರೆ; ಶೀಗ್ರ; ಕಲಿ: ಶೂರ; ವೃಕೋದರ: ಭೀಮ; ಉದರ: ಹೊಟ್ಟೆ; ಅನಿಲ: ಗಾಳಿ; ರೂಪ: ಆಕಾರ; ಪರ: ಕಡೆ, ಪಕ್ಷ;

ಪದವಿಂಗಡಣೆ:
ಎಲೆಲೆ +ಪವನಜ +ಮಾಗಧೇಶ್ವರನ್
ಅಳವನ್+ಅರಿದ್+ಆ+ ನಿನ್ನ+ ತಂದೆಯ
ಬಲುಹ+ಕೊಂಡ್+ಈ+ ರಿಪುವ +ಮುರಿ +ನೆನೆನೆನೆ +ಸಮೀರಣನ
ಬಲುಮುಗಿಲ +ಬಿರುಗಾಳಿಯೊಡ್ಡಿನೊಳ್
ಅಳುಕದೇ +ಫಡ +ಬೇಗಮಾಡ್+ಎನೆ
ಕಲಿ +ವೃಕೋದರನ್+ಅನಿಲರೂಪಧ್ಯಾನ +ಪರನಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ: ಎಲೆಲೆ, ನೆನೆನೆನೆ
(೨) ಪವನ, ಸಮೀರಣ, ಅನಿಲರೂಪ – ವಾಯುದೇವನ ಸಮನಾರ್ಥಕ ಪದಗಳ ಬಳಕೆ