ಪದ್ಯ ೪೦: ಶಲ್ಯನು ಹೇಗೆ ಚೇತರಿಸಿಕೊಂಡನು?

ಅರಸ ಕೇಳೈ ಮರವೆಗಾತ್ಮನ
ನೆರೆವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ (ಶಲ್ಯ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಸಾಧನೆಯ ಕಾಲದಲ್ಲಿ ತಂದ್ರಾವಸ್ಥೆಯೊದಗಲು ಅಲ್ಲಿದ್ದವನೂ ಆತ್ಮನೇ ಎಂದು ನಿರ್ಧರಿಸಿ ಸಾಧನೆಯನ್ನು ಮುಂದುವರಿಸುವ ಆಧ್ಯಾತ್ಮ ಸಾಧಕನಂತೆ ಶಲ್ಯನು ಕಣ್ಣು ತೆರೆದು ನೋಡಿ, ಬಾಣವನ್ನು ಕಿತ್ತು ಔಷಧಿಯನ್ನು ಹಚ್ಚಿ ರಕ್ತವನ್ನು ತೊಳೆದು ಬೇರೆಯ ಹೊಸ ಬಟ್ಟೆಯನ್ನುಟ್ಟು, ನಗುತ್ತಾ ವೀಳೆಯವನ್ನು ಹಾಕಿಕೊಂಡನು.

ಅರ್ಥ:
ಅರಸ: ರಾಜ; ಕೇಳು ಆಲಿಸು; ಮರವು: ಜ್ಞಾಪಕವಿಲ್ಲದಿರುವುದು; ನೆರೆ: ಪಕ್ಕ, ಪಾರ್ಶ್ವ; ಕೊಟ್ಟು: ನೀಡು; ಮುಹೂರ್ತ: ಒಳ್ಳೆ ಸಮಯ; ಮರಳು: ಹಿಂದಿರುಗು; ಕಂದೆರೆದು: ನಯನವನ್ನು ಬಿಟ್ಟು; ನೋಡು: ವೀಕ್ಷಿಸು; ಕೆಲಬಲ: ಅಕ್ಕಪಕ್ಕ; ಸರಳು: ಬಾಣ; ಔಷಧಿ: ಮದ್ದು; ಲೇಪನ: ಹಚ್ಚು; ಒರಸು: ಸಾರಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ನೂತನ: ನವೀನ; ವರ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ಉಟ್ಟು: ತೊಡು; ನಗು: ಹರ್ಷ; ವೀಳೆ: ತಾಂಬೂಲ;

ಪದವಿಂಗಡಣೆ:
ಅರಸ+ ಕೇಳೈ +ಮರವೆಗ್+ಆತ್ಮನ
ನೆರೆವ +ಕೊಟ್ಟು +ಮುಹೂರ್ತಮಾತ್ರಕೆ
ಮರಳಿಚಿದವೊಲು+ ಕಂದೆರೆದು +ನೋಡಿದನು +ಕೆಲಬಲನ
ಸರಳ+ ಕಿತ್ತ್+ಔಷಧಿಯ +ಲೇಪವನ್
ಒರಸಿದನು +ತೊಳೆತೊಳೆದು +ನೂತನ
ವರ +ದುಕೂಲವನುಟ್ಟು +ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರವೆಗಾತ್ಮನ ನೆರೆವ ಕೊಟ್ಟು ಮುಹೂರ್ತಮಾತ್ರಕೆ ಮರಳಿಚಿದವೊಲು

ಪದ್ಯ ೪೫: ಆತ್ಮದ ಲಕ್ಷಣಗಳಾವುವು?

ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವನೊ ನಿಜ
ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತ ನಿಕರಕೆ
ಮೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಕೊಲ್ಲುವುದಾದರು ಯಾರನ್ನು? ನಿನ್ನಿಂದ ಸಾಯುವವರು ಯಾರು? ದೇಹವನ್ನು ಕೊಲ್ಲುವೆಯೋ ಆತ್ಮವನ್ನು ಕೊಲ್ಲುವೆಯೋ? ಏಹಕ್ಕೂ ಪಾಣಿಗಳಿಗೂ ವೈರವಿಲ್ಲ, ಆತ್ಮನಾದರೋ ವಿಕಾರರಹಿತನು, ಬದಲಾವಣೆಗೆ ಒಳಗಾಗದವನು, ಚಲಿಸದಿರುವವನು, ಮುಟ್ಟಲಾಗದವನು ತನಗೆ ಎರಡನೆಯದಿಲ್ಲದವನು.

ಅರ್ಥ:
ಕೊಲು: ಸಾಯಿಸು;ಸಾವು: ಮರಣ; ದೇಹ: ಕಾಯ; ಧೀರ: ಪರಾಕ್ರಮಿ; ಆತ್ಮ: ಜೀವ, ಉಸಿರು; ಬಗೆ: ರೀತಿ; ಚಾರು: ಸುಂದರ; ಭೂತ: ಜೀವಾತ್ಮ, ಪ್ರಾಣಿ; ನಿಕರ: ಗುಂಪು; ವೈರ: ಶತ್ರು; ವಿಗತ: ಕಳೆದುಹೋದ, ವಿಕಾರ: ರೂಪಾಂತರ; ಅಚಲ: ಶಾಶ್ವತವಾದ; ಅಗಮ್ಯ: ಹೋಗಿಸೇರಲಾಗದ;ಅದ್ವಯ: ಎರಡನೆಯದಿಲ್ಲದ;

ಪದವಿಂಗಡಣೆ:
ಆರನೈ +ನೀ +ಕೊಲುವೆ +ನಿನ್ನಿಂದ್
ಆರು+ ಸಾವರು+ ದೇಹವನೊ+ ನಿಜ
ಧೀರನ್+ಆತ್ಮನ+ ಕೊಲುವೆಯೋ +ದಿಟ+ ನಿನ್ನ+ ಬಗೆಯೇನು
ಚಾರು+ದೇಹಕೆ+ ಭೂತ+ ನಿಕರಕೆ
ವೈರವಿಲ್ಲ್+ಉಳಿದಂತೆ+ ವಿಗತ+ವಿ
ಕಾರನ್+ಅಚಲನ್+ ಅಗಮ್ಯನ್+ಅದ್ವಯನ್+ಆತ್ಮ+ ನೋಡೆಂದ

ಅಚ್ಚರಿ:
(೧) ಆತ್ಮದ ಲಕ್ಷಣ – ವಿಗತವಿಕಾರನಚಲನಗಮ್ಯನದ್ವಯನಾತ್ಮ

ಪದ್ಯ ೬: ಯಾವುದರಿಂದ ಯಾವುದು ಹುಟ್ಟಿತು?

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಯಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಣಮನ್ನಾದಿ ಪುರುಷ ಪ್ರಕೃತಿ ವಿಕೃತಿಗಳು (ಉದ್ಯೋಗ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಮಹಾರಾಜ ಕೇಳು, ಆತ್ಮನಿಂದ ಆಕಾಶ ಹುಟ್ಟಿತು, ಆಗಸದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಭೂಮಿ, ಅದರಲ್ಲಿ ಔಷಧಿ, ಅದರಿಂದ ಅನ್ನ, ಅನ್ನದಿಂದ ಪುರುಷನೇ ಮುಂತಾದವರು ಹುಟ್ಟಿದರು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಸಂಭವಿಸು: ಹುಟ್ಟು; ಅಂಬರ: ಆಕಾಶ;ಆತ್ಮ: ಜೀವ, ಮನಸ್ಸು, ಪರಬ್ರಹ್ಮ; ಪವನ: ಗಾಳಿ, ವಾಯು; ಅಗ್ನಿ: ಬೆಂಕಿ; ಭುವನ: ನೀರು; ಧರೆ: ಭೂಮಿ; ಓಷಧಿ: ಔಷಧಿ; ಅವತರಣ: ಅವತಾರ; ಅನ್ನ: ಆಹಾರ; ಆದಿ: ಮುಂತಾದವು; ಪುರುಷ: ಮನುಷ್ಯ, ಮಾನವ, ನರ; ಪ್ರಕೃತಿ: ನಿಸರ್ಗ, ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಬಗೆಯ ಮೂಲಗುಣಗಳು; ವಿಕೃತಿ: ಬದಲಾವಣೆ, ವ್ಯತ್ಯಾಸ, ಮಾರ್ಪಾಡು;

ಪದವಿಂಗಡಣೆ:
ಅವನಿಪತಿ +ಕೇಳ್+ಆತ್ಮನಿಂ +ಸಂ
ಭವಿಸಿತ್+ಅಂಬರವ್+ಅಂಬರದಲಾ
ಪವನ +ಪವನನಲ್+ಅಗ್ನಿ+ ಅಗ್ನಿಯಲ್+ಆದುದಾ +ಭುವನ
ಭುವನದಿಂ +ಧರೆ +ಧರಣಿಯಿಂದ್
ಉದ್ಭವಿಸಿತ್+ಓಷಧಿ+ ಓಷಧಿಗಳಿಂದ್
ಅವತರಣಮ್+ಅನ್ನಾದಿ +ಪುರುಷ +ಪ್ರಕೃತಿ +ವಿಕೃತಿಗಳು

ಅಚ್ಚರಿ:
(೧) ಪ್ರಕೃತಿ, ವಿಕೃತಿ – ಪ್ರಾಸ ಪದ
(೨) ಆತ್ಮ, ಅಂಬರ, ಪವನ, ಅಗ್ನಿ, ಭುವನ, ಭೂಮಿ, ಓಷದಿ, ಪುರುಷ, ಪ್ರಕೃತಿ – ಇದರ ಹುಟ್ಟುವಿನ ಬಗ್ಗೆ ತಿಳಿಸುವ ಪದ್ಯ

ಪದ್ಯ ೩೭: ಸುಪತ್ರನ ಲಕ್ಷಣವೇನು?

ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನವು ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳನು ದೇವರನು ವೃದ್ಧರ
ನತಿಥಿಗಳ ಯತಿಗಳನು ಪೂಜಿಸಿ
ವಿತತ ಧರ್ಮದ ಕೀರ್ತಿಯನು ಪಡೆದವನೆ ಸುತನೆಂದ (ಉದ್ಯೋಗ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ತಂದೆ, ಆಚಾರ್ಯ, ಅಗ್ನಿ, ಆತ್ಮ ಮತ್ತು ತಾಯಿಯೆಂಬ ಪಂಚಾಗ್ನಿಗಳಿಂದ ಒಳೆತನ್ನು ಬಯಸಿದರೆ, ಆತನು ಪ್ರತಿನಿತ್ಯ ಪಿತೃಗಳನ್ನು ಪೂಜಿಸಿ, ದೇವರನ್ನು ಆರಾಧಿಸಿ, ಹಿರಿಯರನ್ನು ಗೌರವಿಸಿ, ಅತಿಥಿಗಳನ್ನು ಸತ್ಕರಿಸಿ, ಯತಿಗಳಿಗೆ ನಮಸ್ಕರಿಸುತ್ತಾ ಧರ್ಮಿಷ್ಠನೆಂಬ ಕೀರ್ತಿಯನ್ನು ಪಡೆಯುವವನೇ ಸುಪುತ್ರನೆಂದು ಕರೆಸಿಕೊಳ್ಳುತ್ತಾನೆ.

ಅರ್ಥ:
ಪಿತ: ತಂದೆ; ಗುರು: ಆಚಾರ್ಯ; ಶಿಖಿ: ಅಗ್ನಿ; ಆತ್ಮ: ಜೀವ; ತಾಯಿ: ಮಾತೆ; ಪಂಚ: ಐದು; ಕ್ರಮ: ರೀತಿ; ಪ್ರತಿ: ಸಮ; ದಿನ: ವಾರ; ಪರಿಚಯ: ಗೊತ್ತುಮಾಡು; ಮಾಳ್ಪ: ಮಾಡುವ; ಲೇಸು: ಒಳ್ಳೆಯ; ಬಯಸು: ಆಸೆ, ಇಚ್ಛೆ; ಪಿತೃ: ಹಿರಿಯರು; ದೇವರು: ಭಗವಂತ; ವೃದ್ಧ: ಮುದುಕ; ಅತಿಥಿ: ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ; ಯತಿ: ಋಷಿ; ಪೂಜಿಸು: ಆರಾಧಿಸು; ವಿತತ:ವಿಸ್ತಾರ, ಉತ್ತಮ; ಧರ್ಮ: ಧಾರಣೆ ಮಾಡಿರುವುದು; ಕೀರ್ತಿ: ಯಶಸ್ಸು; ಪಡೆ: ದಕ್ಕಿಸು; ಸುತ: ಮಗ;

ಪದವಿಂಗಡಣೆ:
ಪಿತನು +ಗುರು +ಶಿಖಿ+ಆತ್ಮ +ತಾಯೆಂಬ್
ಅತುಳ +ಪಂಚಾಗ್ನಿಯನು +ಕ್ರಮದಿಂ
ಪ್ರತಿದಿನವು +ಪರಿಚರಿಯ+ ಮಾಳ್ಪುದು +ಲೇಸ +ಬಯಸುವರೆ
ಪಿತೃಗಳನು +ದೇವರನು +ವೃದ್ಧರನ್
ಅತಿಥಿಗಳ+ ಯತಿಗಳನು+ ಪೂಜಿಸಿ
ವಿತತ +ಧರ್ಮದ +ಕೀರ್ತಿಯನು +ಪಡೆದವನೆ +ಸುತನೆಂದ

ಅಚ್ಚರಿ:
(೧) ಪಿತ, ಗುರು, ಶಿಖಿ, ಆತ್ಮ, ತಾಯಿ – ಇವರ ಒಳಿತನ್ನು ಬಯಸಬೇಕು
(೨) ಪಿತೃ, ದೇವರು, ವೃದ್ಧ, ಅತಿಥಿ, ಯತಿ – ಇವರನ್ನು ಸೇವಿಸಬೇಕು

ಪದ್ಯ ೩೧: ಯಾವುದನ್ನು ಸಾಧಿಸಿಕೊಳ್ಳುವುದು ಸುಕ್ಷೇಮ?

ರಕ್ಷಿಸಿದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದೊಳು
ಲಕ್ಷಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮರಕ್ಷೆಯ
ಲಕ್ಷಿಸುವುದನುನಯವಲೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹಣ (ಐಶ್ವರ್ಯ)ವನ್ನು ರಕ್ಷಿಸಿ ಸಂಸಾರ (ಹೆಂಡತಿ)ಯನ್ನು ಕಾಪಾಡಿಕೊಳ್ಳಬೇಕು, ಪತ್ನಿಯ ದೆಸೆಯಿಂದ ತನ್ನನ್ನು ರಕ್ಷಿಸಿಕೊಳ್ಳಬೇಕು, ತನ್ನನ್ನು ಸಂರಕ್ಷಿಸಿಕೊಳ್ಳುವ ಗುರಿಯನ್ನು ಸಾಧಿಸಿ, ಅದಕ್ಕೆ ವ್ಯತಿರಿಕ್ತವಾದುದನ್ನು ಬಿಟ್ಟು ತನ್ನ ಸುಕ್ಷೇಮವನ್ನು ಸಾಧಿಸಿಕೊಳ್ಳುವುದು ಒಳ್ಳೆಯ ನೀತಿ ಎಂದು ವಿದುರ ಹೇಳಿದನು.

ಅರ್ಥ:
ರಕ್ಷಿಸು: ಕಾಪಾಡು; ಧನ: ಐಶ್ವರ್ಯ; ಪುರಂಧ್ರಿ: ಹಿರಿಯ ಮುತ್ತೈದೆ, ಸುಮಂಗಲಿ, ಮಾತೆ; ಆತ್ಮ: ಜೀವ, ಉಸಿರು; ಕಾಲ: ಸಮಯ; ಲಕ್ಷ: ಗುರಿ, ಧ್ಯೇಯ; ಭೇದ: ವ್ಯತ್ಯಾಸ, ಅಂತರ; ನಡೆ: ಮುಂದುವರಿ; ವಿಲಕ್ಷ್ಯ: ಭಿನ್ನ, ಅನ್ಯ; ಮುರಿ: ಸೀಳು; ಲಕ್ಷಿಸು: ಗಮನವಿಡು; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ;

ಪದವಿಂಗಡಣೆ:
ರಕ್ಷಿಸಿದ +ಧನದಿಂ +ಪುರಂಧ್ರಿಯ
ರಕ್ಷಿಸುವುದು +ಪುರಂಧ್ರಿಯಿಂದವೆ
ರಕ್ಷಿಸುವುದ್+ಆತ್ಮನನು +ಧನವ್+ಇಡಿದ್+ಆವ +ಕಾಲದೊಳು
ಲಕ್ಷ+ಭೇದವನ್+ಅರಿದು +ನಡೆದು +ವಿ
ಲಕ್ಷವನು +ಮುರಿದ್+ಆತ್ಮರಕ್ಷೆಯ
ಲಕ್ಷಿಸುವುದ್+ಅನುನಯವಲೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ರಕ್ಷಿಸು, ಲಕ್ಷಿಸು – ಪದಗಳ ಬಳಕೆ, ಪ್ರತಿ ಸಾಲಿನ ಮೊದಲ ಪದ
(೨) ಪುರಂಧ್ರಿ, ಆತ್ಮ – ೨ ಬಾರಿ ಪ್ರಯೋಗ

ಪದ್ಯ ೭: ನೀತಿಯನ್ನು ತಿಳಿದವರು ಹೇಗೆ ಚಿಂತಿಸುತ್ತಾರೆ?

ತನ್ನ ಕಾರಿಯ ಕಾರಣವನುಳಿ
ದನ್ನಿಗರ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ನೀತಿಯನ್ನು ತಿಳಿದವರು ತಾನು ಯಾರು ಹೀಗೆ ತಾನಿರಲು ಕಾರಣವೇನು ಎಂದು ಚಿಂತಿಸುವುದನ್ನು ಬಿಟ್ಟು, ಬೇರೆಯವರನ್ನೇ ಕುರಿತು ಚಿಂತಿಸುವುದು ಸರಿಯಲ್ಲ. ಆದ್ದರಿಂದ ಅವರಿಗೆ ಹೆಗ್ಗಳಿಕೆ ಬರುವುದಿಲ್ಲ. ಆತ್ಮ ವಿಚಾರವನ್ನು ಮೊದಲು ಮಾಡಿ ವ್ಯವಹಾರದಲ್ಲಿ ಅನ್ಯ ವಿಷಯವನ್ನು ಗಮನಿಸಬೇಕು. ತಾನು ಯಾರೆಂದು ಮರೆತು ವರ್ತಿಸುವುದು ನನಗೆ ಒಪ್ಪಿಗೆಯಿಲ್ಲ ಎಂದು ವಿದುರ ಹೇಳಿದ.

ಅರ್ಥ:
ಕಾರಿಯ: ಕಾರ್ಯ; ಕಾರಣ: ಉದ್ದೇಶ, ನಿಮಿತ್ತ; ಉಳಿದು: ಮಿಕ್ಕ; ಚಿಂತೆ: ಯೋಚನೆ; ಮಾಡು: ನಡೆದುಕೊಳ್ಳು; ಉನ್ನತಿ: ಮೇಲ್ಮೆ, ಹಿರಿಮೆ; ನೀತಿ: ಮಾರ್ಗ ದರ್ಶನ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಮನ್ನಿಸು: ಗೌರವಿಸು; ಆತ್ಮ:ಜೀವ ; ಮಿಕ್ಕು: ಉಳಿದ; ಅನ್ಯ: ಉಳಿದ; ಮರೆ: ನೆನಪಿನಿಂದ ದೂರ ಮಾಡು; ಮತ:ಅಭಿಪ್ರಾಯ, ಆಶಯ;

ಪದವಿಂಗಡಣೆ:
ತನ್ನ +ಕಾರಿಯ +ಕಾರಣವನ್+ ಉಳಿದ್
ಅನ್ನಿಗರ+ ಚಿಂತೆಯನು +ಮಾಡುವುದ್
ಉನ್ನತಿಕೆ+ ತಾನಲ್ಲ+ ನೀತಿಜ್ಞರಿಗೆ +ಭಾವಿಸಲು
ಮನ್ನಿಸುವುದ್+ಆತ್ಮನನು +ಮಿಕ್ಕುದನ್
ಅನ್ಯರಿಗೆ +ಮಾಡುವುದದ್+ಅಲ್ಲದೆ
ತನ್ನ+ ತಾ +ಮರೆದಿಹುದು +ಮತವಲ್ಲೆಂದನಾ+ ವಿದುರ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ‘ಕ’- ಕಾರಿಯ ಕಾರಣ; ‘ಮ’- ಮರೆದಿಹುದು ಮತವಲ್ಲೆಂದ