ಪದ್ಯ ೧೪: ಪಾಂಡು ಯಾವ ವಿಪತ್ತಿಗೆ ಗುರಿಯಾದ?

ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನೊಳೊಬ್ಬ ಮುನಿ ಮೃಗಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೃಗದ್ವಯ
ವೆಂದು ಹೂಡಿದನಂಬಿನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ (ಆದಿ ಪರ್ವ್, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ನಿನ್ನ ತಮ್ದೆಗೆ ವಿಪತ್ತು ಬಂದ ರೀತಿಯೇ ಪಾಂಡು ಮಹಾರಾಜನಿಗೂ ವಿಪತ್ತು ಬಂದೊದಗಿತು. ಪಾಂಡುವು ಒಂದು ಜಾಗದಲ್ಲಿ ಒಬ್ಬ ಮುನಿಯು ತನ್ನ ಪತ್ನಿಯೊಂದಿಗೆ ಜಿಂಕೆಗಳ ರೂಪವನ್ನು ತಾಳಿ ರಮಿಸುತ್ತಿದ್ದುದನ್ನು ಕಂಡನು. ಇವು ಸಾಧಾರಣ ಜಿಂಕೆಗಳೆಂದು ತಿಳಿದು ಒಂದೇ ಬಾಣದಿಂದ ಅವೆರಡನ್ನೂ ಹೊಡೆದನು. ಬಾನವು ನಟ್ಟೊಡನೆ ಅವರಿಬ್ಬರೂ ಮನುಷ್ಯರಾಗಿ ಚೀರಿದರು.

ಅರ್ಥ:
ಬಂದು: ಆಗಮಿಸು; ಠಾವು: ಎಡೆ, ಸ್ಥಳ, ಜಾಗ; ಮುನಿ: ಋಷಿ; ಮೃಗ: ಪ್ರಾಣಿ, ಜಿಂಕೆ; ಮಿಥುನ: ಜೋಡಿ; ರೂಪು: ಆಕಾರ; ನಿಂದು: ನಿಲ್ಲು; ರಮಿಸು: ಪ್ರೇಮಿಸು; ದ್ವಯ: ಎರಡು; ಹೂಡು: ತೊಡು; ಅಂಬು: ಬಾಣ; ಶರ: ಬಾಣ; ಕೀಲಿಸು: ನಾಟು, ಚುಚ್ಚು; ನರ: ಮನುಷ್ಯ;

ಪದವಿಂಗಡಣೆ:
ಬಂದುದಾ +ಪಾಂಡುವಿಗೆ +ನಿನ್ನಯ
ತಂದೆಗಾದ +ವಿಪತ್ತಿನಂದದಲ್
ಒಂದು +ಠಾವಿನೊಳೊಬ್ಬ+ ಮುನಿ +ಮೃಗಮಿಥುನ +ರೂಪಿನಲಿ
ನಿಂದು +ರಮಿಸುತ್ತಿರೆ+ ಮೃಗ+ದ್ವಯವ್
ಎಂದು +ಹೂಡಿದನ್+ಅಂಬಿನ್+ಇಬ್ಬರಿಗ್
ಒಂದು +ಶರದಲಿ+ ಕೀಲಿಸಿದಡ್+ಒರಲಿದರು +ನರರಾಗಿ

ಅಚ್ಚರಿ:
(೧) ಬಂದು, ನಿಂದು, ಎಂದು, ಒಂದು – ಪ್ರಾಸ ಪದಗಳು
(೨) ಶರ, ಅಂಬು – ಸಮಾನಾರ್ಥಕ ಪದ

ಪದ್ಯ ೭: ಗಾಂಧಾರಿಯು ಹೇಗೆ ಸಾಗಿದಳು?

ನಡೆದಳಾ ಗಾಂಧಾರಿ ಶೋಕದ
ಕಡಲೋಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ರೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ (ಗದಾ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಗಾಂಧಾರಿಯು ಶೋಕ ಸಮುದ್ರದಲ್ಲಿ ಮುಳುಗುತ್ತಾ ಏಳುತ್ತಾ, ಮೊಣಕಾಲೆತ್ತರದ ರಕ್ತದ ಮಡುವಿನಲ್ಲಿ ಕಾಲಿಟ್ಟು ರಕ್ತವನ್ನು ಕೊಡವಿಕೊಳ್ಳುತ್ತಾ ಮಾಂಸದ ನಡುವೆ ಕಾಲು ಸಿಕ್ಕಿಸಿಕೊಳ್ಳುತ್ತಾ ಬಂದಳು. ಆಗ ಶ್ರೀಕೃಷ್ಣನು ಅವಳನ್ನು ಮೇಲೆತ್ತುವನು. ನರಗಳು ಕಾಲಿಗೆ ಸಿಕ್ಕಿಕೊಂಡಾಗ ತೊಡಕನ್ನು ಬಿಡಿಸಿಕೊಳ್ಳುತ್ತಾ ಗಾಂಧಾರಿಯು ಹೆಣಗಳ ನಡುವೆ ಸಾಗಿದಳು.

ಅರ್ಥ:
ನಡೆ: ಚಲಿಸು; ಶೋಕ: ದುಃಖ; ಕಡಲು: ಸಾಗರ; ಏಳು: ಹತ್ತು; ಮುಳುಗು: ನೀರಿನಲ್ಲಿ ಮೀಯು; ಅಂಘ್ರಿ: ಪಾದ; ಕೊಡಹು: ಒದರು, ಜಾಡಿಸು; ಅರುಣಾಂಬ: ಕೆಂಪನೆಯ ನೀರು (ರಕ್ತ); ಹೊನಲು: ಪ್ರಕಾಶ; ಜಾನು: ಮಂಡಿ, ಮೊಳಕಾಲು; ಜಾನುದಘ್ನ: ಮೊಳಕಾಲಿನವರೆಗೆ ಮುಳುಗಿದವನು; ಅಡಗು: ಮಾಂಸ; ಕಾಲು: ಪಾದ; ಊರು: ಭದ್ರವಾಗಿ ನಿಲ್ಲಿಸು; ಸಿಲುಕು: ಬಂಧನಕ್ಕೊಳಗಾದುದು; ಹರಿ: ವಿಷ್ಣು; ನೆಗಹು: ಮೇಲೆತ್ತು; ನರ: ತಂತು, ಸೆರೆ, ತಂತಿ; ತೊಡಕು: ಸಿಕ್ಕು, ಗೋಜು; ಬಿಡಿಸು: ಸಡಲಿಸು; ಹೊಕ್ಕು: ಸೇರು; ಅಂಗನೆ: ಹೆಣ್ಣು; ಹೆಣ: ಜೀವವಿಲ್ಲದ ಶರೀರ; ಮಧ್ಯ: ನಡುವೆ;

ಪದವಿಂಗಡಣೆ:
ನಡೆದಳಾ+ ಗಾಂಧಾರಿ +ಶೋಕದ
ಕಡಲೋಳ್+ಏಳುತ +ಮುಳುಗುತ್+ಅಂಘ್ರಿಯ
ಕೊಡಹುತ್+ಅರುಣಾಂಬುಗಳ +ಹೊನಲಿನ +ಜಾನುದಘ್ನಗಳ
ಅಡಗಿನಲಿ+ ಕಾಲೂರಿ +ಸಿಲುಕಿದರ್
ಒಡನೆ +ಹರಿ +ನೆಗಹುವನು +ನರವಿನ
ತೊಡಕ +ಬಿಡಿಸುತ +ಹೊಕ್ಕಳ್+ಅಂಗನೆ +ಹೆಣನ +ಮಧ್ಯದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಶೋಕದಕಡಲೋಳೇಳುತ ಮುಳುಗುತಂಘ್ರಿಯ ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ

ಪದ್ಯ ೪೬: ಯುಧಿಷ್ಠಿರನೇಕೆ ದುಃಖಿತನಾದನು?

ನರ ಯುಧಿಷ್ಠಿರ ಭೀಮ ಸಹದೇ
ವರು ನಕುಲ ಸಾತ್ಯಕಿಸಹಿತ ಮುರ
ಹರನು ಹೊಕ್ಕನು ಕೌರವೇಂದ್ರನ ಶೂನ್ಯ ಶಿಬಿರವನು
ಅರಸ ಕರ್ಣ ದ್ರೋಣ ಮಾದ್ರೇ
ಶ್ವರನ ಭಗದತ್ತನ ನದೀಜಾ
ದ್ಯರ ನಿವಾಸಂಗಳನು ಕಂಡಳಲಿದನು ಯಮಸೂನು (ಗದಾ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರು ಮತ್ತು ಸಾತ್ಯಕಿಯೊಂದಿಗೆ ಶೂನ್ಯವಾಗಿದ್ದ ದುಯೋಧನ, ಕರ್ಣ, ದ್ರೋಣ, ಶಲ್ಯ, ಭಗದತ್ತ, ಭೀಷ್ಮರ ಶಿಬಿರಗಳನ್ನು ಹೊಕ್ಕನು, ಯುಧಿಷ್ಠಿರನು ಶೂನ್ಯವಾಗಿದ್ದ ಆ ಶಿಬಿರಗಳನ್ನು ಕಂಡು ಅತ್ತನು.

ಅರ್ಥ:
ನರ: ಅರ್ಜುನ; ಸಹಿತ: ಜೊತೆ; ಮುರಹರ: ಕೃಷ್ಣ; ಹೊಕ್ಕು: ಸೇರು; ಶಿಬಿರ: ಬೀಡು; ಆದಿ: ಮುಂತಾದ; ನಿವಾಸ: ಮನೆ; ಕಂಡು: ನೋಡು; ಅಳಲು: ದುಃಖ; ಸೂನು: ಮಗ;

ಪದವಿಂಗಡಣೆ:
ನರ +ಯುಧಿಷ್ಠಿರ+ ಭೀಮ +ಸಹದೇ
ವರು +ನಕುಲ +ಸಾತ್ಯಕಿಸಹಿತ +ಮುರ
ಹರನು +ಹೊಕ್ಕನು +ಕೌರವೇಂದ್ರನ+ ಶೂನ್ಯ+ ಶಿಬಿರವನು
ಅರಸ +ಕರ್ಣ +ದ್ರೋಣ +ಮಾದ್ರೇ
ಶ್ವರನ +ಭಗದತ್ತನ+ ನದೀಜಾ
ದ್ಯರ+ ನಿವಾಸಂಗಳನು+ ಕಂಡ್+ಅಳಲಿದನು +ಯಮಸೂನು

ಅಚ್ಚರಿ:
(೧) ಖಾಲಿಯಾಗಿದ್ದುದನ್ನು ಹೇಳುವ ಪರಿ – ಶೂನ್ಯ ಶಿಬಿರ

ಪದ್ಯ ೪೨: ಶಲ್ಯನು ಧರ್ಮಜನನ್ನು ಹೇಗೆ ಹಂಗಿಸಿದನು?

ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ (ಶಲ್ಯ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅಲ್ಲಿಯೇ ಅರ್ಜುನನ ರಥವಿದೆ, ಅದರ ಹಿಂದೆ ಹೋಗಿ ನಿಲ್ಲು, ಕೃಷ್ಣನ ಹಿಂದೆ ಅಡಗಿಕೋ, ನಿನ್ನ ಕೈಲಿ ಸಾಗುವುದಿಲ್ಲ, ಭೀಮನನ್ನು ಕರೆಸಿ ಯುದ್ಧಕ್ಕೆ ಬಿಡು. ಇಲ್ಲದಿದ್ದರೆ ಶಿಖಂಡಿ, ಸಾತ್ಯಕಿ, ಸೃಂಜಯನೇ ಮೊದಲಾದವರನ್ನು ಕಳಿಸಿ, ಕುರಿಯಂತಿರುವ ಅರಸರನ್ನು ನನ್ನ ಕೈಯಲ್ಲಿ ಕಡಿಸಿ ಹಾಕು, ಅಥವಾ ಗೆಲ್ಲುವೆನೆಂಬ ಸ್ವಾಭಿಮಾನವಿದ್ದರೆ ನನ್ನೆದುರಿನಲ್ಲಿ ನಿಲ್ಲು ಎಂದು ಶಲ್ಯನು ಧರ್ಮಜನನ್ನು ಬಾಣಗಳಿಂದ ಹೊಡೆದನು.

ಅರ್ಥ:
ನರ: ಅರ್ಜುನ; ರಥ: ಬಂಡಿ; ಮರೆ: ಕಾಣದಿರುವುದು; ಮುರಹರ: ಕೃಷ್ಣ; ಕರಸು: ಬರೆಮಾಡು; ನೂಕು: ತಳ್ಳು; ಆದಿ: ಮುಂತಾದ; ಅರಸು: ರಾಜ; ಕುರಿ: ಮೇಷ; ಹೊಯ್ಸು: ಹೊಡೆ; ಗೆಲುವು: ಜಯ; ಗರುವ: ಹಿರಿಯ, ಶ್ರೇಷ್ಠ; ನಿಲ್ಲು: ತಡೆ; ಉಬ್ಬರ: ಅತಿಶಯ, ಹೆಚ್ಚಳ; ಎಚ್ಚು: ಬಾಣ ಪ್ರಯೋಗ ಮಾಡು; ನಂದನ: ಮಗ;

ಪದವಿಂಗಡಣೆ:
ನರನ +ರಥವದೆ +ಮರೆಯಹೊಗು +ಮುರ
ಹರನ +ಮರೆವೊಗು +ಭೀಮಸೇನನ
ಕರಸಿ +ನೂಕು +ಶಿಖಂಡಿ +ಸಾತ್ಯಕಿ +ಸೃಂಜಯಾದಿಗಳ
ಅರಸು+ಕುರಿಗಳ+ ಹೊಯ್ಸು +ಗೆಲುವಿನ
ಗರುವನಾದಡೆ +ನಿಲ್ಲೆನುತಲ್+
ಉಬ್ಬರಿಸಿ +ಮಾದ್ರಾಧೀಶನ್+ಎಚ್ಚನು +ಧರ್ಮ+ನಂದನನ

ಅಚ್ಚರಿ:
(೧) ನರ, ಮುರಹರ – ಪ್ರಾಸ ಪದಗಳು
(೨) ಹಂಗಿಸುವ ಪರಿ – ಗೆಲುವಿನ ಗರುವನಾದಡೆ ನಿಲ್ಲೆನುತಲುಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ

ಪದ್ಯ ೨೭: ದ್ರೋಣರು ಭೀಮಾರ್ಜುನರೊಂದಿಗೆ ಹೇಗೆ ಯುದ್ಧ ಮಾಡಿದರು?

ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ (ದ್ರೋಣ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಬಾಣಗಳಿಂದ ಹೊಡೆದನು. ಭೀಮನ ಮೈ ಬಿರಿಯುವಂತೆ ಹೊಡೆದನು. ಅವರ ದೇಹಗಳಲ್ಲಿ ಬಾಣಗಳನ್ನು ನೆಡಿಸಿದನು. ಅರ್ಜುನ ಭೀಮರ ಬಾಣಗಳನ್ನು ಕತ್ತರಿಸಿ ಎಸೆದು ಮತ್ತೆ ಅವರ ಮೈಗಳಲ್ಲಿ ಬಾಣಗಳು ನೆಡುವಂತೆ ದ್ರೋಣರು ಹೊಡೆದರು.

ಅರ್ಥ:
ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಪವನಜ: ಭೀಮ; ತನು: ದೇಹ; ಬಿರಿ: ಕಠಿಣ, ಕಷ್ಟ, ಸೀಳು; ಸಾರಥಿ: ಸೂತ; ಹೂಳು: ಹೂತು ಹಾಕು; ಅಂಬು: ಬಾಣ; ನೆರೆ: ಗುಂಪು; ನೋಯಿಸು: ಪೆಟ್ಟು; ರಥ: ಬಂಡಿ; ಹಯ: ಕುದುರೆ; ಕಣೆ: ಬಾಣ; ಹರೆ: ಚೆದುರು; ಕಡಿ: ಸೀಳು; ಮಗುಳು: ಪುನಃ, ಮತ್ತೆ; ಸರಳ: ಬಾಣ; ಪುನರಪಿ: ಪುನಃ; ಸವರು: ನಾಶಮಾಡು; ಸೆಕ್ಕು: ಒಳಸೇರಿಸು, ತುರುಕು; ಒಡಲು: ದೇಹ;

ಪದವಿಂಗಡಣೆ:
ನರನನ್+ಎಚ್ಚನು +ಪವನಜನ+ ತನು
ಬಿರಿಯಲ್+ಎಚ್ಚನು +ಸಾರಥಿಗಳ್
ಇಬ್ಬರಲಿ +ಹೂಳಿದನ್+ಅಂಬ +ನೆರೆ +ನೋಯಿಸಿದ+ ರಥ+ ಹಯವ
ನರನ +ಕಣೆಯನು +ಭೀಮನ್+ಅಂಬನು
ಹರೆ+ಕಡಿದು +ಮಗುಳ್+ಎಚ್ಚನವರನು
ಸರಳ +ಪುನರಪಿ+ ಸವರಿ+ ಸೆಕ್ಕಿದನ್+ಒಡಲೊಳ್+ಅಂಬುಗಳ

ಅಚ್ಚರಿ:
(೧) ಅಂಬು, ಸರಳ, ಕಣೆ; ಮಗುಳು, ಪುನರಪಿ; ಪವನಜ, ಭೀಮ – ಸಮಾನಾರ್ಥಕ ಪದಗಳು
(೨) ಎಚ್ಚನು – ೩ ಬಾರಿ ಪ್ರಯೋಗ

ಪದ್ಯ ೩೬: ಅರ್ಜುನನನ್ನು ತೋರಿದವಗೆ ಯಾವ ಬಹುಮಾನವನ್ನು ನೀಡುವೆನೆಂದು ಕರ್ಣ ತಿಳಿಸಿದನು?

ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತು ಸಾವಿರದ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ (ಕರ್ಣ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನನ್ನು ತೋರಿಸಿದವನಿಗೆ ಒಂದು ಲಕ್ಷ ವರಹ ವರಮಾನದ ಪಟ್ಟಣವನ್ನು ಕೊಡುತ್ತೇನೆ. ಅರ್ಜುನನ ಸೇನೆಯನ್ನು ತೋರಿಸಿದವನಿಗೆ ಹತ್ತು ಸಾವಿರ ವರಮಾನದ ಪಟ್ಟಣವನ್ನು ಕೊಡುತ್ತೇನೆ. ಅರ್ಜುನನನ್ನು ನನ್ನೆಡೆಗೆ ಎಳೆದು ತಂದವನಿಗೆ ನೂರಾನೆ ಕುದುರೆಗಳೊಡನೆ ಅವುಗಳನ್ನು ಸಲಹಲು ಬೇಕಾಗುವ ನೆಲವನ್ನು ಬರಿಸಿಕೊಡುತ್ತೇನೆ, ಇದು ಕೌರವರಾಜನ ಮೇಲಾಣೆ ಎಂದು ಘೋಷಿಸಿದನು.

ಅರ್ಥ:
ನರ: ಅರ್ಜುನ; ತೋರು: ಕಾಣಿಸು, ಗೋಚರ; ಶತ: ನೂರು; ಸಾವಿರ: ಸಹಸ್ರ; ಪಟ್ಟಣ:ಊರು; ಮೋಹರ: ಯುದ್ಧ, ಕಾಳಗ; ಕೊಡು: ನೀಡು; ತೆರಳು: ಹೋಗು, ನಡೆ; ತಂದು: ಬರೆಮಾಡು; ತನ್ನೊಡ: ಅರುಹು: ತಿಳಿಸು, ಹೇಳು; ಆನೆ: ಗಜ; ಹಯ: ಕುದುರೆ; ವಳಿತ: ಮಂಡಲ ಪ್ರದೇಶ; ಬರಸು: ಅನುಗ್ರಹಿಸು; ಕೊಡು: ನೀಡು; ರಾಯ: ರಾಜ; ಆಣೆ: ಪ್ರಮಾಣ;

ಪದವಿಂಗಡಣೆ:
ನರನ +ತೋರಿಸಿದವಗೆ+ ಶತ +ಸಾ
ವಿರದ +ಪಟ್ಟಣವ್+ಅರ್ಜುನನ +ಮೋ
ಹರವ್+ಇದೇ +ಎಂದವಗೆ +ಕೊಡುವೆನು +ಹತ್ತು +ಸಾವಿರದ
ನರನ+ ತೆರಳಿಚಿ +ತಂದು +ತನ್ನೊಡನ್
ಅರುಹಿದಗೆ +ನೂರಾನೆ +ಹಯ +ಸಾ
ವಿರದ +ವಳಿತವ +ಬರಸಿ+ ಕೊಡುವೆನು +ರಾಯನಾಣೆಂದ

ಅಚ್ಚರಿ:
(೧) ನರ, ಅರ್ಜುನ – ಸಮನಾರ್ಥಕ ಪದ
(೨) ಶತಸಾವಿರ, ಹತ್ತುಸಾವಿರ, ನೂರಾನೆ ಹಯ ಸಾವಿರದ ವಳಿತ – ಬಹುಮಾನಗಳ ವಿವರಣೆ

ಪದ್ಯ ೨೮: ಇದು ನನ್ನ ಯುದ್ಧ ಎಂದು ಯಾರು ಮುಂದೆ ಬಂದರು?

ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾಹವ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಫುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ (ಕರ್ಣ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯವು ರಭಸವಾಗಿ ಎಲ್ಲಾ ಸಿದ್ಧತೆಗಳಿಂದ ಮುನ್ನುಗ್ಗುತ್ತಿರುವುದನ್ನು ನೋಡಿದ ಯುಧಿಷ್ಠಿರನು ಅರ್ಜುನನನ್ನು ಹಿಂತೆಗೆಯಿರಿ, ಈ ದಿನದ ಯುದ್ಧ ನಮ್ಮ ಮೇಲೆ ಎಂದು ಮುಂದೆ ಬಂದನು. ಪಾಂಡವ ಸೇನೆಯು ಪ್ರಳಯ ಸಮುದ್ರದ ತೆರೆಗಳಂತೆ ರಭಸವಾಗಿ ಲಗ್ಗೆಯಿಟ್ಟಿತು.

ಅರ್ಥ:
ಸರಕಟಿಸು: ರಭಸದಿಂದ ನುಗ್ಗು; ದಳ: ಸೈನ್ಯ; ಸರ್ವ: ಎಲ್ಲಾ; ಲಗ್ಗೆ: ಮುತ್ತಿಗೆ; ಉರವಣೆ: ಆತುರ, ಅವಸರ; ಯಮಸೂನು: ಧರ್ಮರಾಯ; ಕಂಡು: ನೋಡು; ನರ: ಅರ್ಜುನ; ತೆಗೆ: ಈಚೆಗೆ ತರು, ಹೊರತರು; ಇಂದಿನ: ಇವತ್ತು; ಆಹವ: ಯುದ್ಧ; ಅರಸ: ರಾಜ; ನಡೆ: ಮುನ್ನುಗ್ಗು; ಮೋಹರ:ಯುದ್ಧ, ಕಾಳಗ; ಹೊರ: ಆಚೆ; ಅಟ್ಟು: ಧಾವಂತ, ಅಟ್ಟಣೆ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ; ಸಮರ: ಯುದ್ಧ; ಸ್ಫುರಿತ: ಗೋಚರಿಸಿದ; ಬಹಳ: ಹಲವಾರು; ಅರ್ಣವ: ಸಮುದ್ರ; ಲಹರಿ: ಕಾಂತಿ, ಪ್ರಭೆ; ಅಳಿ: ನಾಶ; ಲಳಿ: ರಭಸ, ಆವೇಶ;

ಪದವಿಂಗಡಣೆ:
ಸರಕಟಿಸಿ +ದಳ +ಸರ್ವ+ಲಗ್ಗೆಯಲ್
ಉರವಣಿಸೆ +ಯಮಸೂನು +ಕಂಡನು
ನರನ +ತೆಗೆತೆಗೆ +ಇಂದಿನ್+ಆಹವ +ನಮ್ಮ +ಮೇಲೆನುತ
ಅರಸ +ನಡೆದನು +ರಾಜ +ಮೋಹರ
ಹೊರಳಿಗಟ್ಟಿತು +ಪ್ರಳಯ+ ಸಮರ
ಸ್ಫುರಿತ +ಬಹಳ+ಅರ್ಣವದ+ ಲಹರಿಯ+ಲಳಿಯ +ಲಗ್ಗೆಯಲಿ

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಹರಿಯ ಲಳಿಯ ಲಗ್ಗೆಯಲಿ
(೨) ಉಪಮಾನದ ಪ್ರಯೋಗ – ಪ್ರಳಯ ಸಮರ ಸ್ಫುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ
(೩) ಲಳಿ, ಸರಕಟಿಸಿ; ಆಹವ, ಮೋಹರ – ಸಮನಾರ್ಥಕ ಪದಗಳು
(೪) ಅರ್ಜುನನನ್ನು ನರ, ಯುಧಿಷ್ಠಿರನನ್ನು ಯಮಸೂನು ಎಂದು ಕರೆದಿರುವುದು

ಪದ್ಯ ೧೩೦: ರಾಜಪುತ್ರರಾದರು ಪಾಂಡವರಿಗೆ ಯಾವ ಗತಿ ಬಂತು?

ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೦ ಪದ್ಯ)

ತಾತ್ಪರ್ಯ:
ಶಂಕರನ ಕೊರಳಲ್ಲಿ ಆಭರಣವಾಗಿದ್ದರೂ ಹಾವಿಗೆ ಗಾಳಿಯೇ ಆಹಾರವಾದ ಹಾಗೆ, ನಿನ್ನ ಮಕ್ಕಳಾದರೂ ಪಾಂಡವರಿಗೆ ಯಾವ ಗತಿ ಬಂದದ್ದು ನೀನು ಕಾಣೆಯ? ಮನುಷ್ಯ ರೂಪದಲ್ಲಿರುವ ಪಶುಗಳಂತೆ ಅವರು ವನವಾಸದಲ್ಲಿರುವಾಗ ಸೊಪ್ಪು ತಿನ್ನಲಿಲ್ಲವೆ ಎಂದು ವಿದುರ ಹೇಳಿದ.

ಅರ್ಥ:
ಹರ: ಶಿವ, ಶಂಕರ; ಕೊರಳು: ಕತ್ತು; ಆಭರಣ: ಒಡವೆ; ಉರಗ: ಹಾವು; ಪವನ: ಗಾಳಿ; ಅಶನ: ಅನ್ನ, ಆಹಾರ, ಊಟ; ಅರಸ: ರಾಜ; ಬಸುರು: ಹೊಟ್ಟೆ; ಬಂದು: ಆಗಮನ; ನರ: ರಾಜ; ಪಶು: ಪ್ರಾಣಿ; ವನವಾಸ: ಕಾಡಿನಲ್ಲಿರುವುದು; ಸೊಪ್ಪು: ಎಲೆ, ಪರ್ಣ; ಮೆಲು:ತಿನ್ನು, ಕಬಳಿಸು, ಜಗಿ; ರಾಯ: ರಾಜ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಹರನ +ಕೊರಳಿಂಗ್+ಆಭರಣವಾದ್
ಉರಗ +ಪವನ+ಅಶನವೆನಿಸುವಂತ್
ಅರಸ +ನಿನ್ನಯ +ಬಸುರ +ಬಂದೇನಹರು +ಪಾಂಡವರು
ನರ+ಪಶುಗಳಾದರು +ಕಣಾ +ನೀ
ನಿರಲು +ವನವಾಸದಲಿ +ಸೊಪ್ಪನ
ವರತ+ ಮೆಲುವುದೆ +ರಾಯ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಹರನ, ನರ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ಹರನ ಕೊರಳಿಂಗಾಭರಣವಾ ದುರಗ ಪವನಾಶನವೆನಿಸುವಂತ್
(೩) ಅರಸ, ರಾಯ – ಸಮಾನಾರ್ಥಕ ಪದ

ಪದ್ಯ ೯: ನಕುಲನು ಹಸ್ತಿನಾಪುರಕ್ಕೆ ಬಂದಾಗ ಯಾರನ್ನು ಭೇಟಿ ಮಾಡಿದನು?

ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ (ಸಭಾ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ನಕುಲನ ಸೈನ್ಯವು ತನ್ನ ವಿಜಯಪತಾಕೆಯನ್ನು ಹಾರಿಸಿ ಮರಳಿ ಹಸ್ತಿನಾಪುರಕ್ಕೆ ಹಿಂದಿರುಗಿತು. ಹಸ್ತಿನಾಪುರಕ್ಕೆ ಬಂದ ನಂತರ ಯುಧಿಷ್ಠಿರನನ್ನು ನೋಡಿ ಅವನ ಪಾದಗಳಿಗೆರಗಿ ಆಶೀರ್ವಾದವನ್ನು ಪಡೆದು ತಾನು ತಂದ ಸಮಸ್ತ ವಸ್ತುಗಳನ್ನು ಅವನ ಪಾದದಲ್ಲಿ ಸಮರ್ಪಿಸಿದನು. ಈ ಸಂತಸದ ಕ್ಷಣವನ್ನು, ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವರ ಅಂತಃಪುರದ ಹರ್ಷಲಕ್ಷ್ಮಿಯನ್ನು ಏನೆಂದು ವರ್ಣಿಸಲಿ.

ಅರ್ಥ:
ಮರಳು: ಹಿಂದಿರುಗು; ಸೇನೆ: ಸೈನ್ಯ; ಪುರ: ಊರು; ಕಂಡನು: ನೋಡಿದನು; ಪುತ್ರ: ಸುತ; ಚರಣ: ಪಾದ; ಎರಗು: ನಮಸ್ಕರಿಸು; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ತೋರಿಸು: ತೋರ್ಪಡಿಸು; ಅರಸು: ರಾಜ; ಉತ್ಸವ: ಹರ್ಷ; ವೃಕ: ತೋಳ; ಉದರ: ಹೊಟ್ಟೆ; ವೃಕೋದರ: ಭೀಮ; ನರ: ಅರ್ಜುನ; ಅಂತಃಪುರ: ರಾಣಿಯರ ವಾಸಸ್ಥಾನ; ಹರುಷ: ಸಂತೋಷ; ಸಿರಿ: ಐಶ್ವರ್ಯ; ವಣ್ಣಿಸುವೆ: ವಿವರಿಸು, ಬಣ್ಣಿಸು;

ಪದವಿಂಗಡಣೆ:
ಮರಳಿತ್+ಈತನ +ಸೇನೆ +ಬಂದನು
ಪುರಕೆ+ ಕಂಡನು +ಧರ್ಮ+ಪುತ್ರನ
ಚರಣಕ್+ಎರಗಿದನ್+ಅಖಿಳ+ವಸ್ತುವ +ಬೇರೆ +ತೋರಿಸಿದ
ಅರಸನ್+ಉತ್ಸವವನು +ವೃಕೋದರ
ನರ+ ನಕುಲ+ ಸಹದೇವನ್+ಅಂತಃ
ಪುರದ +ಹರುಷದ +ಸಿರಿಯನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಪಾಂಡವರ ಹೆಸರುಗಳನ್ನು ಹೇಳಿರುವ ಪರಿ – ಧರ್ಮಪುತ್ರ, ವೃಕೋದರ, ನರ
(೨) ಪುರ – ೨, ೬ ಸಾಲಿನ ಮೊದಲ ಪದ

ಪದ್ಯ ೬೩: ಅರ್ಜುನನಿಗೆ ದೂತರು ಯಾವ ಎಚ್ಚರಿಕೆ ನೀಡಿದರು?

ನೆರದರಲ್ಲಿಯ ನೃಪರು ದೂತರ
ಹರಿಯ ಬಿಟ್ಟರು ಪಾರ್ಥನಿದ್ದೆಡೆ
ಗರಸ ಕೇಳವರುಗಳು ಬಂದರು ಕಂಡರರ್ಜುನನ
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸಂಸ್ಥಾನವಿದು ಗೋ
ಚರಿಸಲಿರಿಯದು ನರರ ಕಾಲ್ದುಳಿಗೆಂದರವರಂದು (ಸಭಾ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಸೈನ್ಯವು ಜೋರಾಗಿ ಗರ್ಜಿಸಲು ಆ ಪರ್ವತದ ತಪ್ಪಲಲ್ಲಿದ್ದ ರಾಜರು ತಮ್ಮ ದೂತರನ್ನು ಅರ್ಜುನನ ಬಳಿಗೆ ಕಳುಹಿಸಿದರು. ದೂತರು ಅರ್ಜುನನ ಬಳಿ ಬಂದು, “ಈ ಪರ್ವತವನ್ನಿಳಿಯಬೇಏಅ, ಇದು ಉತ್ತರ ಕುರುಗಳಿರುವ ಪ್ರದೇಶ, ಮನುಷ್ಯರ ಕಾಲ್ತುಳಿತಕ್ಕೆ ಇದು ವಶವಾಗುವುದಿಲ್ಲ” ಎಂದು ಹೇಳಿದರು.

ಅರ್ಥ:
ನೆರೆದು: ಸೇರಿ; ನೃಪ: ರಾಜ; ದೂತ: ಸೇವಕ; ಹರಿ: ಕಳಿಸು; ಪಾರ್ಥ: ಅರ್ಜುನ; ಬಂದು: ಆಗಮಿಸು; ಕಂಡು: ನೋಡು; ಗಿರಿ: ಬೆಟ್ಟ; ಸಂಸ್ಥಾನ: ರಾಜ್ಯ, ಪ್ರಾಂತ್ಯ; ಗೋಚರಿಸು: ಗೊತ್ತುಮಾಡು; ನರ: ಮನುಷ್ಯ; ಕಾಲು: ಪಾದ;

ಪದವಿಂಗಡಣೆ:
ನೆರದರ್+ಅಲ್ಲಿಯ +ನೃಪರು +ದೂತರ
ಹರಿಯ +ಬಿಟ್ಟರು +ಪಾರ್ಥನ್+ಇದ್ದೆಡೆಗ್
ಅರಸ+ ಕೇಳ್+ಅವರುಗಳು+ ಬಂದರು +ಕಂಡರ್+ಅರ್ಜುನನ
ಗಿರಿಯನ್+ಇಳಿಯದಿರ್+ಇತ್ತಲ್+ಉತ್ತರ
ಕುರುಗಳಿಹ +ಸಂಸ್ಥಾನವಿದು+ ಗೋ
ಚರಿಸಲ್+ಅರಿಯದು+ ನರರ+ ಕಾಲ್+ತುಳಿಗ್+ಎಂದರ್+ಅವರಂದು

ಅಚ್ಚರಿ:
(೧) ನೃಪ, ಅರಸ – ಸಮನಾರ್ಥಕ ಪದ, ನೃಪ – ಪರ್ವತದ ತಪ್ಪಲಲ್ಲಿದ್ದ ರಾಜರ ಬಗ್ಗೆ, ಅರಸ – ಜನಮೇಜಯ
(೨) ಪಾರ್ಥ, ಅರ್ಜುನ – ೨, ೩ ಸಾಲಿನ ಕೊನೆ ಪದ