ಪದ್ಯ ೩೬: ಕೌರವನು ಧರ್ಮಜನಿಗೇನು ಹೇಳಿದ?

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ (ಗದಾ ಪರ್ವ, ೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲವೋ ನಪುಂಸಕ ಧರ್ಮಜ, ತೊಲಗಿ ಉಳಿದುಕೋ, ಭೀಮನ ಶಕ್ತಿಯೇ ನಿನ್ನ ಶಕ್ತಿ, ಅರ್ಜುನನ ಪೌರುಷವೇ ನಿನ್ನ ಪೌರುಷ. ನನ್ನನ್ನಿದಿರಿಸಿ ಕ್ಷತ್ರಧರ್ಮವನ್ನು ಪಾಲಿಸು. ಹೆದರಿ ಓಡಬೇಡ, ನಿಲ್ಲು ಎಂದು ಕೌರವನು ಕೂಗುತ್ತಾ ಬರುವುದು ಭೀಮನಿಗೆ ಕೇಳಿಸಿತು.

ಅರ್ಥ:
ನಪುಂಸಕ: ಷಂಡ, ಖೋಜಾ; ಸುತ: ಮಗ; ಫಡ: ತಿರಸ್ಕಾರದ ಮಾತು; ತೊಲಗು: ದೂರ ಸರಿ; ಕರೆ: ಬರೆಮಾಡು; ಬಲುಹ: ಶಕ್ತಿ; ವಿಕ್ರಮ: ಶೂರ, ಸಾಹಸ; ಮಲೆತು: ಕೊಬ್ಬಿದ; ಮೆರೆ: ಹೊಳೆ, ಪ್ರಕಾಶಿಸು; ಕ್ಷತ್ರಧರ್ಮ: ಕ್ಷತ್ರಿಯ; ಧರ್ಮ: ಧಾರಣ ಮಾಡಿದುದು, ನಿಯಮ; ಅಳುಕು: ಹೆದರು; ನಿಲ್ಲು: ತಡೆ; ಇಟ್ಟಳಿಸು: ದಟ್ಟವಾಗು; ಊಳಿಗ: ಕೆಲಸ, ಕಾರ್ಯ; ಬೊಬ್ಬೆ: ಕೂಗು;

ಪದವಿಂಗಡಣೆ:
ಎಲೆ+ ನಪುಂಸಕ +ಧರ್ಮಸುತ +ಫಡ
ತೊಲಗು +ಕರೆಯಾ +ನಿನಗೆ +ಭೀಮನ
ಬಲುಹೆ +ಬಲುಹ್+ಅರ್ಜುನನ +ವಿಕ್ರಮ +ವಿಕ್ರಮವು +ನಿನಗೆ
ಮಲೆತು +ಮೆರೆಯಾ +ಕ್ಷತ್ರಧರ್ಮವನ್
ಅಳುಕದಿರು +ನೀ +ನಿಲ್ಲೆನುತಲ್
ಇಟ್ಟಳಿಸಿ+ ಬರಲ್+ಊಳಿಗದ +ಬೊಬ್ಬೆಯ +ಕೇಳಿದನು +ಭೀಮ

ಅಚ್ಚರಿ:
(೧) ಧರ್ಮಜನನ್ನು ಬಯ್ಯುವ ಪರಿ – ಎಲೆ ನಪುಂಸಕ ಧರ್ಮಸುತ ಫಡ ತೊಲಗು

ಪದ್ಯ ೧೫: ವಿರಾಟನು ಕಂಕನನ್ನು ಪಕ್ಷಪಾತಿಯೆಂದೇಕೆ ಕರೆದನು?

ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿತಾಟ ಖತಿಗೊಂಡ (ವಿರಾಟ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕಂಕನು ಸಾರಥಿಯನ್ನು ಹೊಗಳಿದುದನ್ನು ಕೇಳಿ, ಎಲೋ ಹುಚ್ಚ ಸನ್ಯಾಸಿ, ನಿನ್ನ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ತುಂಬಿದೆ, ಮಗನು ಗೆದ್ದುದರಲ್ಲಿ ಏನು ಅನುಮಾನ? ಇದರಲ್ಲಿ ಅದ್ಭುತವಾದುದೇನು? ಉತ್ತರನು ಯುದ್ಧವೆಂದರೆ ಅಳುಕುವವನೇ? ಬೃಹನ್ನಳೆಯು ಮಹಾಶಕ್ತನೇ ಅವನು ಒಬ್ಬ ನಪುಂಸಕ, ಆ ನಪುಂಸಕನಲ್ಲಿ ನೀನು ಯಾವಾಗಲೂ ಪಕ್ಷಪಾತ ಮಾಡುತ್ತಿರುವುದನ್ನು ಬಲ್ಲೆ ಎಂದು ವಿರಾಟನು ಹೇಳಿದನು.

ಅರ್ಥ:
ಮರುಳ: ಮೂಢ; ಸನ್ಯಾಸಿ: ಯೋಗಿ; ಮತ್ಸರ: ಹೊಟ್ಟೆಕಿಚ್ಚು; ಮುಳುಗು: ಮುಚ್ಚಿಹೋಗು, ಹುದುಗಿರು; ಚಿತ್ತ: ಮನಸ್ಸು; ಗೆಲವು: ಜಯ; ಸಂದೇಹ: ಸಂದೆಗ, ಸಂಶಯ; ಅದ್ಭುತ: ಆಶ್ಚರ್ಯ; ಅಳುಕು: ಹೆದರು; ಕುಮಾರ: ಮಗ; ಸಾರಥಿ: ಸೂತ; ಬಲುಹು: ಶಕ್ತಿ; ನಪುಂಸಕ: ಷಂಡ; ನಿರಂತರ: ಯಾವಾಗಲು; ಪಕ್ಷ: ಒಲವರ, ಪಕ್ಷಪಾತ; ಖತಿ: ಕೋಪ;

ಪದವಿಂಗಡಣೆ:
ಎಲೆ +ಮರುಳೆ +ಸನ್ಯಾಸಿ +ಮತ್ಸರ
ದೊಳಗೆ +ಮುಳುಗಿದ +ಚಿತ್ತ +ನಿನ್ನದು
ಗೆಲವಿನಲಿ +ಸಂದೇಹವೇ +ಹೇಳ್+ಆವುದ್+ಅದ್ಭುತವು
ಅಳುಕುವನೆ+ ಸುಕುಮಾರ +ಸಾರಥಿ
ಬಲುಹನುಳ್ಳವನೇ +ನಪುಂಸಕ
ನಲಿ +ನಿರಂತರ+ ಪಕ್ಷವೆಂದು +ವಿರಾಟ +ಖತಿಗೊಂಡ

ಅಚ್ಚರಿ:
(೧) ಕಂಕನನ್ನು ಬಯ್ಯುವ ಪರಿ – ಎಲೆ ಮರುಳೆ ಸನ್ಯಾಸಿ ಮತ್ಸರದೊಳಗೆ ಮುಳುಗಿದ ಚಿತ್ತ ನಿನ್ನದು

ಪದ್ಯ ೨೦: ಉತ್ತರನು ಅರ್ಜುನನ ಬಳಿ ಏನು ಬೇಡಿದನು?

ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ವೀರರಾದವರಿಗೆ ಛಲ ಬೇಡವೇ? ಜೀವಗಳ್ಳರಂತೆ ಓಡಿ ಹೋಗುವುದೇ? ನನ್ನನ್ನು ನೋಡು, ನಾನು ನಪುಂಸಕ, ಸಾಯಲು ಹೆದರಿದೆನೇ? ಎಂದು ಅರ್ಜುನನು ಹೇಳಲು, ಉತ್ತರನು ಅಯ್ಯಾ ಸಾರಥಿ ನೀನು ವೀರ, ನಾನು ನಪುಂಸಕ ತಿಳಿಯಿತಾ, ನಾನು ಸಾಯುವವನಲ್ಲ್, ಲೋಕದಲ್ಲಿರುವ ಜೀವಗಳ್ಳರಿಗೆ ನಾನೇ ಗುರು, ಒಪ್ಪಿಕೊಂಡೆ ಬಿಟ್ತು ಬಿಡು ಎಂದು ಹೇಳಿದನು.

ಅರ್ಥ:
ಹೇವ: ಲಜ್ಜೆ, ಮಾನ, ನಾಚಿಕೆ; ಬೇಡ: ಸಲ್ಲದು; ವೀರ: ಶೂರ; ಪರಿ: ರೀತಿ; ಜೀವ: ಪ್ರಾಣ; ಕಳ್ಳ: ಚೋರ; ಪಥ: ಮಾರ್ಗ; ಹಿಡಿ: ಗ್ರಹಿಸು, ಕೈಕೊಳ್ಳು; ಸಾವು: ಮರಣ; ಅಂಜು: ಹೆದರು; ನಪುಂಸಕ: ಷಂಡ; ನೋಡು: ಕಾಣು; ಲೋಕ: ಜಗತ್ತು; ಗುರು: ಆಚಾರ್ಯ; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಹೇವ +ಬೇಡಾ +ವೀರರ್+ಈ+ ಪರಿ
ಜೀವಗಳ್ಳರ +ಪಥವ +ಹಿಡಿವರೆ
ಸಾವಿಗ್+ಅಂಜಿದೆವೇ+ ನಪುಂಸಕರ್+ಎಮ್ಮ +ನೋಡೆನಲು
ನೀವು +ವೀರರು+ ನೆರೆ+ ನಪುಂಸಕ
ರಾವು +ಸಾವವರಲ್ಲ +ಲೋಕದ
ಜೀವಗಳ್ಳರಿಗಾವು +ಗುರುಗಳು+ ಬಿಟ್ಟು +ಕಳುಹೆಂದ

ಅಚ್ಚರಿ:
(೧) ಉತ್ತರನು ಯಾರಿಗೆ ಗುರು – ನಪುಂಸಕರಾವು ಸಾವವರಲ್ಲ ಲೋಕದಜೀವಗಳ್ಳರಿಗಾವು ಗುರುಗಳು

ಪದ್ಯ ೧೫: ಕರ್ಣನು ಕೋಪದಿಂದ ಹೇಗೆ ನುಡಿದನು?

ಈತ ಸಾರಥಿಯಳವೈಯಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ತಾನೆತ್ತ
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ (ವಿರಾಟ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿನ ಕೆಲವು ಸೈನಿಕರು ಮಾತನಾಡುತ್ತಾ, ಅಟ್ಟಿಸಿಕೊಂಡು ಹೋಗುವವನು ಸಾರಥಿ, ಓಡಿ ಹೋಗುವವನು ಉತ್ತರ, ಎಂದರೆ, ಇನ್ನು ಕೆಲವರು ಅರ್ಜುನನಿಗೆ ಸಾರಥಿತನವೇಕೆ ಬಂತು? ನಪುಂಸಕ ವೇಷವಾದರು ಯಾಕೆ ತೊಟ್ಟಿದ್ದಾನೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು. ಕರ್ಣನಾದರೋ ಇವನು ಅರ್ಜುನನಾಗಲಿ, ಅವನಪ್ಪ ಇಂದ್ರನಾಗಲಿ, ಶ್ರೀರಾಮನೇ ಆಗಿರಲಿ ಯುದ್ಧಕ್ಕೆ ಬಂದರೆ ಅವನನ್ನು ಕೊಲ್ಲುತ್ತೇನೆ ಎಂದನು.

ಅರ್ಥ:
ಸಾರಥಿ: ಸೂತ; ಮಿಗು: ಮತ್ತು; ನಪುಂಸಕ: ಷಂಡ; ವೇಷ: ಉಡುಗೆ ತೊಡುಗೆ; ಪುರುಹೂತ: ಇಂದ್ರ; ಇರಿ: ಚುಚ್ಚು; ಬರಲಿ: ಆಗಮಿಸು; ಖಾತಿ: ಕೋಪ; ಅಳವು: ಸಾಮರ್ಥ್ಯ, ಶಕ್ತಿ;

ಪದವಿಂಗಡಣೆ:
ಈತ +ಸಾರಥಿಯಳವೈಯಲಿ +ಮಿಗುವ್
ಆತನ್+ಉತ್ತರನ್+ಅರ್ಜುನಂಗೀ
ಸೂತತನವ್+ಎತ್ತಲು+ ನಪುಂಸಕ+ ವೇಷ +ತಾನೆತ್ತ
ಈತನ್+ಅರ್ಜುನನ್+ಆಗಲ್+ಆ+ ಪುರು
ಹೂತನಾಗಲಿ +ರಾಮನಾಗಲಿ
ಆತಡ್+ಇರಿವೆನು +ಬರಲಿ+ಎಂದನು +ಖಾತಿಯಲಿ +ಕರ್ಣ

ಅಚ್ಚರಿ:
(೧) ಕರ್ಣನ ಕೋಪ – ಈತನರ್ಜುನನಾಗಲಾ ಪುರುಹೂತನಾಗಲಿ ರಾಮನಾಗಲಿ ಆತಡಿರಿವೆನು

ಪದ್ಯ ೪೯: ಭೀಮನು ದ್ರೌಪದಿಯ ಹಂಗಿನ ಮಾತಿಗೆ ಹೇಗೆ ಉತ್ತರಿಸಿದನು?

ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದರೆ ಖಾತಿಯಿಲ್ಲೆನಗೆ
ಈ ನಪುಂಸಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ (ವಿರಾಟ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಆಗ ಭೀಮನು ಮನುಷ್ಯರಾಗಲೀ, ದೈತ್ಯರಾಗಲೀ, ನನ್ನ ಅಭಿಮಾನವನ್ನು ಲಘುವಾಗಿ ತೆಗೆದುಕೊಂಡವನ ಗತಿ ಏನಾದೀತೆಂದು ಗೊತ್ತೇ, ನೋವಿನಿಂದ ನೀನು ಬೈದರೆ ನನಗೇನೂ ಸಿಟ್ಟಿಲ್ಲ ನಾಲ್ವರು ನಪುಂಸಕರ ಸಹೋದರನಾಗಿ ಹುಟ್ಟಿದ ನನಗೆ ಮಾತ್ರ ಮೂಗಿದೆಯೇ? ಪರಾಕ್ರಮಿಯೆಂದು ನಾನು ಹೇಳಿಕೊಳ್ಳೋಣವೇ? ದ್ರೌಪದಿ ನೀನು ಮನಬಂದಂತೆ ಮಾತನಾಡು, ಹೆದರಬೇಡ ಎಂದನು.

ಅರ್ಥ:
ದಾನವ: ರಾಕ್ಷಸ; ಮಾನವ: ಮನುಷ್ಯ; ಅಭಿಮಾನ: ಹೆಮ್ಮೆ, ಅಹಂಕಾರ; ಹೆಸರು: ನಾಮ; ನೊಂದು: ನೋವು; ನುಡಿ: ಮಾತಾಡು; ಖಾತಿ: ಕೋಪ, ಕ್ರೋಧ; ನಪುಂಸಕ: ಷಂಡ; ಹುಟ್ಟು: ಜನಿಸು; ಮೂಗುಳ್ಳು: ಅಭಿಮಾನಿ; ಮಾನಿನಿ: ಹೆಣ್ಣು; ತೋರು: ಪ್ರದರ್ಶಿಸು; ಪರಿ: ರೀತಿ; ಭೀತಿ: ಭಯ; ಬೇಡ: ತೊರೆ, ತ್ಯಜಿಸು;

ಪದವಿಂಗಡಣೆ:
ದಾನವರು+ ಮಾನವರೊಳ್+ಎನ್ನ್+ಅಭಿ
ಮಾನವನು+ ಕೊಂಬವನ+ ಹೆಸರನದ್
ಏನನೆಂಬೆನು+ ನೊಂದು+ ನುಡಿದರೆ+ ಖಾತಿಯಿಲ್ಲೆನಗೆ
ಈ+ ನಪುಂಸಕರೊಡನೆ +ಹುಟ್ಟಿದ
ನಾನು +ಮೂಗುಳ್ಳವನೆ+ ಮಾನಿನಿ
ನೀನು +ತೋರಿದ +ಪರಿಯಲೆಂಬುದು+ ಭೀತಿ+ ಬೇಡೆಂದ

ಅಚ್ಚರಿ:
(೧) ಹಂಗಿಸುವ ಪರಿ – ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ
(೨) ದಾನವ, ಮಾನವ; ಖಾತಿ, ಭೀತಿ – ಪ್ರಾಸ ಪದಗಲು
(೩) ಮಾನವ ಪದದ ಬಳಕೆ – ಮಾನವರೊಳು, ಮಾನವನು

ಪದ್ಯ ೪೩: ಊರ್ವಶಿಯು ಅರ್ಜುನನ್ನು ಏನಾಗೆಂದು ಶಪಿಸಿದಳು?

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಹೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ (ಅರಣ್ಯ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲವೋ ನರರೂಪಿನಿಂದಿರುವ ಅಧಮ ಮೃಗವೇ, ಭಾರತ ವರ್ಷದಲ್ಲಿ ಒಂದು ವರ್ಷ ಕಾಲ ನಪುಂಸಕನಾಗಿರು, ವಿಷ್ಣುವಿನ ಮೊರೆಹೋಗು, ಶಿವನನ್ನು ಹಿಂಬಾಲಿಸು, ನಿಮ್ಮ ತಂದೆಗೆ ಹೇಳು, ನನ್ನ ಶಾಪವು ತಪ್ಪುವುದಿಲ್ಲ ಹೋಗು ಎಂದು ಊರ್ವಶಿಯು ಶಾಪವನ್ನು ಕೊಟ್ಟು ಅಲ್ಲಿಂದ ನಿರ್ಗಮಿಸಿದಳು.

ಅರ್ಥ:
ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು, ನೀಚ; ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಭೂಮಿ: ಇಳೆ; ವರುಷ: ಸಂವತ್ಸರ; ಅಂತರ: ವರೆಗೂ; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಚರಿಸು: ಓಡಾಡು; ನಿರಂತರ: ಎಡೆಬಿಡದ, ಸತತವಾಗಿ; ಆಯ: ಪರಿಮಿತಿ; ಹರಿ: ವಿಷ್ಣು; ಮರೆಹೋಗು: ಶರಣಿಗೆ ತೆರಳು, ಸಹಾಯ ಬೇಡು; ಹರ: ಶಿವ; ಅನುಸರಿಸು: ಹಿಂಬಾಲಿಸು; ಅಯ್ಯ: ತಂದೆ; ಹೇಳು: ತಿಳಿಸು; ನಿರುತ: ದಿಟ, ಸತ್ಯ, ನಿಶ್ಚಯ; ತಪ್ಪು: ಸರಿಯಿಲ್ಲದ; ಹೋಗು: ತೆರಳು; ಮೊಗ: ಮುಖ; ಚಪಲೆ: ಚಂಚಲೆ;

ಪದವಿಂಗಡಣೆ:
ನರ+ಮೃಗ+ಅಧಮ +ನಿಮ್ಮ +ಭಾರತ
ವರುಷ +ಭೂಮಿಯೊಳ್+ಒಂದು+ ವರುಷಾಂ
ತರ+ ನಪುಂಸಕನಾಗಿ+ ಚರಿಸು +ನಿರಂತರ್+ಆಯದಲಿ
ಹರಿಯ +ಮರೆಹೊಗು +ಹರನ +ನೀನ್+ಅನು
ಸರಿಸು +ನಿಮ್ಮಯ್ಯಂಗೆ +ಹೇಳಿದು
ನಿರುತ +ತಪ್ಪದು +ಹೋಗೆನುತ +ಮೊಗದಿರುಹಿದಳು +ಚಪಲೆ

ಅಚ್ಚರಿ:
(೧) ಊರ್ವಶಿಯ ಶಾಪ – ನಿಮ್ಮ ಭಾರತವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು ನಿರಂತರಾಯದಲಿ
(೨) ಊರ್ವಶಿಯು ಬಯ್ಯುವ ಪರಿ – ನರಮೃಗಾಧಮ
(೩) ವರುಷ – ೨ ಸಾಲಿನ ಮೊದಲ ಹಾಗು ಕೊನೆ ಪದ

ಪದ್ಯ ೪೦: ಊರ್ವಶಿಯು ಅರ್ಜುನನ್ನು ಏಕೆ ಶಪಿಸಿದಳು?

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ (ಅರಣ್ಯ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಾವು ನಿನಗೆ ಒಲಿದು ಬಂದಿರುವವಳು, ಸೌಂದರ್ಯದಿಂದ ಆಕರ್ಷಿಸಿ ನಮ್ಮನ್ನು ಮರುಗಿಸುವ ಶೂರ ನೀನು, ಇಂದ್ರನ ಪರಿವಾರದಲ್ಲಿ ಬಹಳ ಶ್ರೇಷ್ಠಳಾದವಳು ನಾನು ಸುಲಭದಲ್ಲಿ ಸಿಗುವವಳೇ? ನೀನು ದುರ್ಲಭನಲ್ಲವೇ? ಎಲೈ ನಪುಂಸಕ, ಈ ಗಂಡು ವೇಷ ನಿನಗೇಕೆ? ಇದೋ ನಿನಗೆ ಶಾಪಕೊಡುತ್ತೇನೆ ಹಿಡಿ ಎಂದು ಊರ್ವಶಿಯು ತನ್ನ ಹಸ್ತವನ್ನೆತ್ತಿದಳು.

ಅರ್ಥ:
ಒಲಿದು: ಪ್ರೀತಿಸಿ; ಬಂದು: ಆಗಮಿಸು; ಸೊಬಗು: ಅಂದ; ಮರುಗು: ಕರುಣೆತೋರು; ಮಿಂಡ: ವೀರ, ಶೂರ; ಸುಲಭ: ನಿರಾಯಾಸ; ದುರ್ಲಭ: ಪಡೆಯಲಸಾಧ್ಯ; ದೇವೇಂದ್ರ: ಇಂದ್ರ; ಕಟಕ: ಗುಂಪು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಗಂಡು: ಪುರುಷ; ವೇಷ: ತೋರಿಕೆಯ ರೂಪ, ಸೋಗು; ಸುಳಿವು: ಗುರುತು, ಕುರುಹು; ಸತಿ: ಹೆಣ್ಣು; ಕಳವಳ: ಗೊಂದಲ, ಭ್ರಾಂತಿ; ಕರ: ಹಸ್ತ; ಎತ್ತು: ಮೇಲಕ್ಕೆ ಮಾಡು; ಹಿಡಿ: ಗ್ರಹಿಸು; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಒಲಿದು+ ಬಂದವರ್+ಆವು +ಸೊಬಗಿನೊಳ್
ಒಲಿಸಿ +ಮರುಗಿಪ +ಮಿಂಡ +ನೀನ್+ಅತಿ
ಸುಲಭರಾವ್+ ದುರ್ಲಭನು+ ನೀ +ದೇವೇಂದ್ರ+ ಕಟಕದಲಿ
ಎಲೆ +ನಪುಂಸಕ+ ಗಂಡು +ವೇಷದ
ಸುಳಿವು+ ನಿನಗೇಕ್+ಎನುತ +ಸತಿ +ಕಳ
ವಳಿಸಿ +ಕರವೆತ್ತಿದಳು +ಹಿಡಿ+ ಹಿಡಿ+ ಶಾಪವಿದೆ+ಎನುತ

ಅಚ್ಚರಿ:
(೧) ಸುಲಭ, ದುರ್ಲಭ – ವಿರುದ್ಧ ಪದ/ಪ್ರಾಸ ಪದ
(೨) ಅರ್ಜುನನನ್ನು ಬಯ್ಯುವ ಪರಿ – ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ

ಪದ್ಯ ೨೨: ಊರ್ವಶಿಯು ಏಕೆ ಕರಗಿದಳು?

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತದು ವಾಮಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನ ಭಾವನೆಯನ್ನು ಕಂಡು, ಊರ್ವಶಿಯು ಅರ್ಜುನನನ್ನು ನೋಡಿ, ಇವನೇನು ಮತಿಹೀನನೋ, ಅಥವ ನಪುಂಸಕನೋ, ತಿಳುವಳಿಕೆಯಿಲ್ಲದವನೋ, ಬ್ರಾಹ್ಮಣನೋ, ಪರರಿಗೆ ಬಾಧೆಕೊಡುವ ಸ್ವಭಾವದವನೋ, ನೀಚನೋ, ದುಷ್ಟನೋ, ಮಾನವಾಕಾರವಿರುವ ಇನ್ನೇನೋ? ಮಹಾ ತಪಸ್ಸನ್ನು ಮಾಡಿದ ದೇವ ದಾನವರು ಬಂದು ತಮ್ಮ ಕಿರೀಟವನ್ನು ಎಡಪಾದಕ್ಕೆ ಇಟ್ಟು ನನ್ನನ್ನು ಬೇಡಿಕೊಳ್ಳುತ್ತಿದ್ದರು, ಅಂತಹ ನಾನು ಈಗ ಕೆಟ್ಟೆನಲ್ಲಾ ಎಂದು ಚಿಂತಿಸುತ್ತಾ ಊರ್ವಶಿಯು ಕರಗಿಹೋದಳು.

ಅರ್ಥ:
ವಿಕಳ:ಭ್ರಮೆ, ಭ್ರಾಂತಿ; ಮತಿ: ಬುದ್ಧಿ; ಮೇಣ್: ಅಥವ; ನಪುಂಸಕ: ಕೊಜ್ಜೆ, ಷಂಡ, ಖೋಜಾ, ನಿರ್ವೀರ್ಯ; ಜಡ: ಆಲಸ್ಯ, ಅಚೇತನ; ಶ್ರೋತ್ರಿ: ಬ್ರಾಹ್ಮಣ; ಬಾಧಕ: ತೊಂದರೆ ಕೊಡುವವ; ಖಳ: ಕ್ರೂರ; ಖೂಳ: ದುಷ್ಟ; ಮಾನವ: ನರ; ವಿಕಾರ: ಕುರೂಪ; ವಿಕಟ: ವಿಕಾರ, ಸೊಕ್ಕಿದ; ತಪಸ್ಸು: ಧ್ಯಾನ; ದೇವ: ಸುರರು; ದೈತ್ಯ: ರಾಕ್ಷಸ; ಮಕುಟ: ಕಿರೀಟ; ವಾಮಪಾದ: ಎಡ ಕಾಲು; ಅಕಟ: ಅಯ್ಯೋ; ಕೆಟ್ಟೆ: ಹಾಳಾಗು; ಕರಗು: ನೀರಾಗಿಸು, ಕನಿಕರ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ವಿಕಳಮತಿಯೋ +ಮೇಣ್+ಇವ +ನಪುಂ
ಸಕನೊ+ ಜಡನೋ +ಶ್ರೋತ್ರಿಯನೊ +ಬಾ
ಧಕನೊ+ ಖಳನೋ +ಖೂಳನೋ+ ಮಾನವ+ ವಿಕಾರವಿದೊ
ವಿಕಟ +ತಪಸಿನ +ದೇವ +ದೈತ್ಯರ
ಮಕುಟವಾಂತದು +ವಾಮಪಾದವನ್
ಅಕಟ+ ಕೆಟ್ಟೆನಲಾ+ಎನುತ +ಕರಗಿದಳು +ನಳಿನಾಕ್ಷಿ

ಅಚ್ಚರಿ:
(೧) ಅರ್ಜುನನನ್ನು ನೋಡಿದ ಬಗೆ – ವಿಕಳಮತಿ, ನಪುಂಸಕ, ಜಡ, ಶ್ರೋತ್ರಿ, ಬಾಧಕ, ಖಳ, ಖೂಳ, ವಿಕಾರ
(೨) ಊರ್ವಶಿಯ ಹಿರಿಮೆ – ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ

ಪದ್ಯ ೧೧: ಶಿಶುಪಾಲನು ಭೀಷ್ಮರನ್ನು ಹೇಗೆ ನಿಂದಿಸಿದನು?

ಎಲೆ ನಪುಂಸಕ ಭೀಷ್ಮ ಸುಡು ಬೈ
ಗುಳಿನ ಭಂಡನು ನೀನಲಾ ಗೋ
ಕುಲದ ಗರ್ವನ ಗುಣವನಾರಿಸಿಕೊಂಡೆ ಬೇಸರದೆ
ಹಳಿವಿನಲಿ ಹೆಮ್ಮೆಯನು ಕುಂದಿನ
ಕುಲದೊಳಗ್ಗಳಿಕೆಯನು ತಮದಲಿ
ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಷ್ಮರ ಮಾತನ್ನು ಕೇಳಿದ ಶಿಶುಪಾಲನು ಕೋಪಗೊಂಡು, ಎಲವೋ ಷಂಡ ಭೀಷ್ಮನೇ, ನಿನ್ನನ್ನು ಸುಡಬೇಕು, ಬೈಗಳನ್ನು ಆಡುವ ಭಂಡ ನೀನು, ಗೋಕುಲದಲ್ಲಿ ಗರ್ವದಿಂದ ಬೀಗುವ ಇವನ ಗುಣವನ್ನು ಹೊಗಳಲು ನೀನು ಮುಂದೆ ಬಂದೆ, ಅನ್ಯಾಯವನ್ನು ಹೆಮ್ಮೆಯೆಂದು ದೋಷವನ್ನು ಹಿರಿಮೆಯೆಂದು ಕತ್ತಲನ್ನು ಬೆಳಕೆಂದು ನಿರಂತರವಾಗಿ ಹೊಗಳುತ್ತಿರುವೆ ಎಂದು ಭೀಷ್ಮನನ್ನು ನಿಂದಿಸಿದನು.

ಅರ್ಥ:
ನಪುಂಸಕ: ಷಂಡ; ಸುಡು: ಸುಟ್ಟು ಹಾಕು, ದಹಿಸು; ಬೈಗುಳು: ಜರೆ; ಭಂಡ: ನಾಚಿಕೆ, ಲಜ್ಜೆ; ಗೋಕುಲ: ಗೋವುಗಳ ಹಿಂಡು; ಗರ್ವ: ಸೊಕ್ಕು, ಹೆಮ್ಮೆ; ಗುಣ: ಸ್ವಭಾವ; ಬೇಸರ: ಹಳಿವು: ನಿಂದೆ; ಬೇಸರ: ಬೇಜಾರು; ಕುಂದು: ಕೊರತೆ, ನೂನ್ಯತೆ, ದೋಷ; ಕುಲ: ವಂಶ; ಅಗ್ಗಳಿಕೆ: ಶ್ರೇಷ್ಠತೆ; ಹಳಿವು: ಅನ್ಯಾಯದ ಆರೋಪ, ನಿಂದೆ; ಹೆಮ್ಮೆ: ಹೆಗ್ಗಳಿಕೆ, ಹಿರಿಮೆ; ತಮ: ಅಂಧಕಾರ; ಬೆಳಗ: ಬೆಳಕು; ಬಣ್ಣಿಸು: ವರ್ಣಿಸು; ನಿರಂತರ: ಯಾವಾಗಲು;

ಪದವಿಂಗಡಣೆ:
ಎಲೆ +ನಪುಂಸಕ +ಭೀಷ್ಮ +ಸುಡು +ಬೈ
ಗುಳಿನ +ಭಂಡನು +ನೀನಲಾ +ಗೋ
ಕುಲದ +ಗರ್ವನ +ಗುಣವನ್+ಆರಿಸಿಕೊಂಡೆ +ಬೇಸರದೆ
ಹಳಿವಿನಲಿ +ಹೆಮ್ಮೆಯನು +ಕುಂದಿನ
ಕುಲದೊಳ್+ಅಗ್ಗಳಿಕೆಯನು +ತಮದಲಿ
ಬೆಳಗ +ಬಣ್ಣಿಸುತಿಹೆ +ನಿರಂತರವೆಂದನಾ +ಚೈದ್ಯ

ಅಚ್ಚರಿ:
(೧) ಭೀಷ್ಮನನ್ನು ಬಯ್ಯುವ ಪರಿ – ನಪುಂಸಕ, ಸುಡು, ಬೈಗುಳಿನ ಭಂಡನು ನೀನ
(೨) ಉಪಮಾನದ ಪ್ರಯೋಗ – ತಮದಲಿ ಬೆಳಗ ಬಣ್ಣಿಸುತಿಹೆ