ಪದ್ಯ ೧೮: ಅಶ್ವತ್ಥಾಮನು ಭೀಮನಿಗೆ ಹೇಗೆ ಉತ್ತರಿಸಿದನು?

ಎಲವೊ ಶರಸಂನ್ಯಾಸವನು ಕುರು
ತಿಲಿಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಮ್ಮೀ ಸ್ವಾಮಿಕಾರ್ಯದಲಿ
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ (ಗದಾ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ಎಲೇ ಭೀಮ ಕೌರವನ ಪ್ರಾಣವು ಹೋಗಲು, ನಾನು ಶಸ್ತ್ರ ಸಂನ್ಯಾಸವನ್ನು ಮಾಡಿದ್ದೇನೆ. ಈಗ ಅತ್ತು ಫಲವೇನು. ನಿನ್ನವರ ತಲೆಗಲನ್ನು ಹೊಯ್ದೆ, ನೀವು ಬೆದರಿ ಅಡಗಿಕೊಂಡು ಜೀವವನ್ನುಳಿಸಿಕೊಂದಿರಿ. ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುತ್ತಿದ್ದೆ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಶರ: ಬಾಣ; ಸಂನ್ಯಾಸ: ವಿರಕ್ತಿ, ವೈರಾಗ್ಯ; ತಿಲಕ: ಶ್ರೇಷ್ಠ; ಅವಸಾನ: ಸಾವು; ಅಳಲು: ದುಃಖಿಸು; ಫಲ: ಪ್ರಯೋಜನ; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತಲೆ: ಶಿರ; ಹೊಯ್ದೆ: ಹೊಡೆ; ಅಳುಕು: ಹೆದರು; ರಣ: ಯುದ್ಧ; ಅಡಗು: ಬಚ್ಚಿಟ್ಟುಕೋ; ಜೀವನ: ಪ್ರಾಣ; ಉಳುಹಿ: ಕಾಪಾಡು; ಕೊಲು: ಸಾಯಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಎಲವೊ +ಶರ+ಸಂನ್ಯಾಸವನು+ ಕುರು
ತಿಲಿಕನ್+ಅವಸಾನದಲಿ +ಮಾಡಿದೆನ್
ಅಳಲಿದಡೆ +ಫಲವೇನು+ ನಮ್ಮೀ +ಸ್ವಾಮಿಕಾರ್ಯದಲಿ
ತಲೆಯ +ಹೊಯ್ದೆನು +ನಿನ್ನವರ+ ನೀವ್
ಅಳುಕಿ +ರಣದೊಳಗ್+ಅಡಗಿ +ಜೀವವನ್
ಉಳುಹಿಕೊಂಡಿರಿ +ಕೊಲುವೆನ್+ಅಲ್ಲದೊಡ್+ಎಂದನಾ +ದ್ರೌಣಿ

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ನೀವಳುಕಿ ರಣದೊಳಗಡಗಿ ಜೀವವನುಳುಹಿಕೊಂಡಿರಿ
(೨) ದುರ್ಯೋಧನನನ್ನು ಕುರುತಿಲಕ ಎಂದು ಕರೆದಿರುವುದು

ಪದ್ಯ ೫೯: ಅಶ್ವತ್ಥಾಮನು ಏನು ಪ್ರತಿಜ್ಞೆ ಮಾಡಿದನು?

ಶೋಕವಡಗಿದುದವರಿಗಂತ
ರ್ವ್ಯಾಕುಳತೆ ಬೀಳ್ಕೊಂಡುದಹುದಿ
ನ್ನೇಕೆ ಸಂವೇಶಾನುಭೂತಾನುಭವ ದುರ್ವ್ಯಸನ
ಸಾಕದಂತಿರಲಿನ್ನು ಬಿಡು ನೀ
ಸಾಕಿತಕೆ ಫಲವೆನಿಸಿ ರಜನಿಯೊ
ಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ (ಗದಾ ಪರ್ವ, ೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಗಳ ದುಃಖವು ಅಡಗಿತು. ಮನಸ್ಸಿನ ವ್ಯಾಕುಲತೆಯು ಇಲ್ಲವಾಯಿತು. ಇನ್ನೇಕೆ ಆಗಿ ಹೋದುದನ್ನು ನೆನೆಸಿ ದುಃಖಿಸಬೇಕು? ಅದು ಹಾಗಿರಲಿ, ನೀನು ನಮ್ಮನ್ನು ಸಾಕಿದುದು ಸಾರ್ಥಕವೆನ್ನಿಸಲು, ಈ ರಾತ್ರಿ ಆ ಕುಠಾರರ ತಲೆಗಳನ್ನು ಕಡಿದು ತರುತ್ತೇನೆ ಎಂದು ಅಶ್ವತ್ಥಾಮನು ಹೇಳಿದನು.

ಅರ್ಥ:
ಶೋಕ: ದುಃಖ; ಅಡಗು: ಮುಚ್ಚು; ವ್ಯಾಕುಲ: ದುಃಖ, ವ್ಯಥೆ; ಬೀಳ್ಕೊಡು: ತೆರಳು; ಸಂವೇಶ: ಒಳಹೊಕ್ಕು; ಅನುಭೂತ: ಕಂಡು ಕೇಳಿದ, ಅನುಭವಿಸಿದ; ದುರ್ವ್ಯಸನ: ಕೆಟ್ಟ ಚಟ, ದುರಭ್ಯಾಸ; ಸಾಕು: ಸಲಹು; ಬಿಡು: ತೊರೆ; ಫಲ: ಪ್ರಯೋಜನ; ರಜನಿ: ರಾತ್ರಿ; ಕುಠಾರ: ಕೊಡಲಿ, ಗುದ್ದಲಿ; ತಲೆ: ಶಿರ; ತಹೆ: ತರುವೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಶೋಕವ್+ಅಡಗಿದುದ್+ಅವರಿಗ್+ಅಂತ
ರ್ವ್ಯಾಕುಳತೆ +ಬೀಳ್ಕೊಂಡುದ್+ಅಹುದ್
ಇನ್ನೇಕೆ +ಸಂವೇಶ+ಅನುಭೂತ+ಅನುಭವ +ದುರ್ವ್ಯಸನ
ಸಾಕ್+ಅದಂತಿರಲ್+ಇನ್ನು+ ಬಿಡು +ನೀ
ಸಾಕಿತಕೆ+ ಫಲವೆನಿಸಿ +ರಜನಿಯೊಳ್
ಆ+ ಕುಠಾರರ +ತಲೆಗಳನು +ತಹೆನೆಂದನಾ +ದ್ರೌಣಿ

ಅಚ್ಚರಿ:
(೧) ಸಾಕು, ಸಾಕಿತಕೆ – ಪದಗಳ ಪ್ರಯೋಗ
(೨) ಅಶ್ವತ್ಥಾಮನ ಪ್ರಮಾಣ – ನೀ ಸಾಕಿತಕೆ ಫಲವೆನಿಸಿ ರಜನಿಯೊಳಾ ಕುಠಾರರ ತಲೆಗಲನು ತಹೆನೆಂದನಾ ದ್ರೌಣಿ

ಪದ್ಯ ೫೬: ಪಾಂಡವರು ಹೇಗೆ ಯುದ್ಧಕ್ಕೆ ತಯಾರಾದರು?

ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿ ಸವರ್ಗತನಹುದೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯ ರಭಸ, ಸಂತೋಷ, ವಿವಿಧ ವಾದ್ಯಗಳ ಧ್ವನಿ, ರಥದ ಚೀತ್ಕೃತಿ, ಕುದುರೆಯ ಹೇಷಾರವ, ಆನೆಯ ಬೃಂಹಿತಗಳನ್ನು ಕೃಪ ಅಶ್ವತ್ಥಾಮ ಕೃತವರ್ಮರು ಕೇಳಿದರು. ಅಶ್ವತ್ಥಾಮನು, ಕೌರವನ ನೆಲೆ ಪ್ರಕಟ

ಅರ್ಥ:
ಸುಮ್ಮಾನ: ಸಂತಸ; ನಿವಹ: ಗುಂಪು; ರಭಸ: ವೇಗ; ಭೂರಿ: ಹೆಚ್ಚು, ಅಧಿಕ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಧ್ವನಿ: ಶಬ್ದ; ರಥ: ಬಂಡಿ; ಗಜ: ಆನೆ; ಹಯ: ಕುದುರೆ; ಗರ್ಜನೆ: ಆರ್ಭಟ; ಕೇಳು: ಆಲಿಸು; ಅಕಟಕಟ: ಅಯ್ಯಯ್ಯೋ; ಗುಪ್ತ: ರಹಸ್ಯ; ಪ್ರಕಟ: ತೋರು; ಹರಿ: ವಿಷ್ಣು; ಸರ್ವಗ: ಎಲ್ಲಾ ಕಡೆಯಲ್ಲೂ ವ್ಯಾಪಿಸಿರುವ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಅವರ +ಸುಮ್ಮಾನವನು +ಸೇನಾ
ನಿವಹ +ರಭಸದ +ಭೂರಿ+ಭೇರಿಯ
ವಿವಿಧ +ವಾದ್ಯ+ಧ್ವನಿಯ +ರಥ+ಗಜ+ಹಯದ +ಗರ್ಜನೆಯ
ಇವರು +ಕೇಳಿದರ್+ಅಕಟಕಟ +ಕೌ
ರವನ +ಗುಪ್ತ +ಪ್ರಕಟವಾದುದೆ
ಶಿವಶಿವಾ +ಹರಿ+ ಸವರ್ಗತನ್+ಅಹುದೆಂದನಾ +ದ್ರೌಣಿ

ಅಚ್ಚರಿ:
(೧) ಹರಿಯ ಹಿರಿಮೆ – ಹರಿ ಸವರ್ಗತನಹುದೆಂದನಾ ದ್ರೌಣಿ

ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೩೧: ಯಾರು ಯಾರನ್ನು ನಿಲ್ಲಿಸಿದರು?

ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ (ಗದಾ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಈ ಸೈನ್ಯವು ಧರ್ಮಜನ ಮೇಲೆ ಬಿದ್ದಿತು. ಒಂದು ಪಕ್ಕದಲ್ಲಿ ಸಾವಿರ ಆನೆಗಳು ಭೀಮನನ್ನು ತಡೆದವು. ಸಾವಿರ ಕುದುರೆಗಳು ಅರರೆ ರಾವುತ ಎನ್ನುತ್ತಾ ನಕುಲ ಸಹದೇವರನ್ನು ತಡೆದವು. ಅಶ್ವತ್ಥಾಮನು ಸಾತ್ಯಕಿಯನ್ನು ನಿಲ್ಲಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಸೇನೆ: ಸೈನ್ಯ; ಬಿರು: ಜೋರು, ರಭಸ; ತಡೆ: ನಿಲ್ಲಿಸು; ಸಾವಿರ: ಸಹಸ್ರ; ಆನೆ: ಗಜ; ಬಾಹೆ: ಪಕ್ಕ, ಪಾರ್ಶ್ವ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕವಿ: ಆವರಿಸು; ತುರಗ: ಅಶ್ವ; ಬಿಟ್ಟು: ತೊರೆ; ರಥ: ಬಂಡಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಅರಸ +ಕೇಳು +ಯುಧಿಷ್ಠಿರನ +ಮೇಲ್
ಉರವಣಿಸಿತ್+ಈ+ ಸೇನೆ+ ಭೀಮನ
ಬಿರುದ +ತಡೆದವು +ಸಾವಿರಾನೆಗಳೊಂದು +ಬಾಹೆಯಲಿ
ಅರರೆ +ರಾವುತ+ಎನುತ್ತ +ಕವಿದುದು
ತುರಗ+ ಸಾವಿರ +ನಕುಲ +ಸಹದೇ
ವರಿಗೆ +ಸಾತ್ಯಕಿಗಾಗಿ +ಬಿಟ್ಟನು +ರಥವನಾ +ದ್ರೌಣಿ

ಅಚ್ಚರಿ:
(೧) ಭೀಮನ ಶಕ್ತಿಯನ್ನು ವಿವರಿಸಿದ ಪರಿ – ಭೀಮನ ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
(೨) ಅಶ್ವತ್ಥಾಮನನ್ನು ದ್ರೌಣಿ ಎಂದು ಕರೆದಿರುವುದು

ಪದ್ಯ ೬: ಅಶ್ವತ್ಥಾಮನು ಏನೆಂದು ಚಿಂತಿಸಿದನು?

ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವನನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದು ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶಿವ ಶಿವಾ ಏನಿದಾಶ್ಚರ್ಯ, ಕೌರವ ಸೈನ್ಯವು ಬುಡಬ್ಮೇಲಾಗಿದೆ, ಪಾಂಡವ ಸೇನೆಯು ಜೋರಾಗಿ ಗರ್ಜಿಸುತ್ತಿದೆ. ಯಾರು ಯುದ್ಧದಲ್ಲಿ ಮಡಿದರೋ ಏನೋ, ನನ್ನ ತಂದೆಯೇ ಸೇನಾಧಿಪತಿ, ಅವನ ರಥ ಬರಿದಾಗಿ ಬರುತ್ತಿದೆ, ತಂದೆಗೆ ಹಾನಿಯಾಯಿತೇ ಎಂದು ಅಶ್ವತ್ಥಾಮನು ಚಿಂತಿಸಿದನು.

ಅರ್ಥ:
ಅಚ್ಚರಿ: ಆಶ್ಚರ್ಯ; ಸೇನೆ: ಸೈನ್ಯ; ತಲೆಕೆಳಗೆ: ಉಲ್ಟ, ಏರುಪೇರು; ರಿಪು: ವೈರಿ; ಬೊಬ್ಬಿರಿ: ಗರ್ಜಿಸು; ಮಡಿ: ಸಾವು; ಒಡೆಯ: ನಾಯಕ; ಬೊಪ್ಪ: ತಂದೆ; ರಥ: ಬಂಡಿ; ಬರಿ: ಕಾಲಿ; ಬರುತಿದೆ: ಆಗಮಿಸು; ಹಾನಿ: ನಷ್ಟ; ಜನಕ: ತಂದೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಏನಿದಚ್ಚರಿ +ಕೌರವೇಂದ್ರನ
ಸೇನೆ +ತಲೆಕೆಳಗಾಗುತಿದೆ +ರಿಪು
ಸೇನೆ +ಬೊಬ್ಬಿರಿದಾರುತಿದೆ +ಮಡಿದಾತನ್+ಆವನನೊ
ಸೇನೆಗ್+ಒಡೆಯನು +ಬೊಪ್ಪನಿದು +ತಾ
ನೇನು +ರಥವೇ +ಬರಿದು +ಬರುತಿದೆ
ಹಾನಿ+ ಜನಕಂಗಾಯ್ತೊ +ಶಿವ+ ಶಿವ +ಎಂದನಾ +ದ್ರೌಣಿ

ಅಚ್ಚರಿ:
(೧) ಬೊಪ್ಪ, ಜನಕ – ಸಮಾನಾರ್ಥಕ ಪದ

ಪದ್ಯ ೫: ದ್ರೋಣನ ಸಾರಥಿ ಯಾರ ಬಳಿಗೆ ರಥವನ್ನು ತಿರುಗಿಸಿದನು?

ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೋಣನ ದೇಹದ ತುಂಡುಗಳನ್ನಾಯ್ದು, ರಥವನ್ನು ಗುಡಿಸಿ, ಧ್ವಜವನ್ನೆತ್ತಿ ಕಟ್ಟಿ, ಸಾರಥಿಯು ರಥದ ಕುದುರೆಗಳನ್ನು ಹಿಂದಕ್ಕೆ ತಿರುಗಿಸಿ ತಕ್ಷಣವೇ ಅಶ್ವತ್ಥಾಮನ ಬಳಿಗೆ ಹೋದನು. ಅವನ ಆಗಮನವನ್ನು ನೋಡಿ ಅಶ್ವತ್ಥಾಮನು ಅತಿಶಯ ವ್ಯಥೆಯಿಂದ ಹೀಗೆಂದು ಚಿಂತಿಸಿದನು.

ಅರ್ಥ:
ಕಡಿಕು: ತುಂಡು; ಆಯ್ದು: ಆರಿಸು; ರಥ: ಬಂದಿ; ಗುಡಿಸು: ಕಸವನ್ನು ಬಳಿ; ಸಿಂಧ: ಪತಾಕೆ, ಬಾವುಟ; ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ವಾಘೆ: ಲಗಾಮು; ಮುರುಹು: ತಿರುಗಿಸು; ಮರಳಿ: ಮತ್ತೆ; ಕುದುರೆ: ಅಶ್ವ; ತಡೆ: ನಿಲ್ಲಿಸು; ನಡೆ: ಚಲಿಸು; ಬರುತಿರೆ: ಆಗಮಿಸು; ಕಂಡು: ನೋಡು; ಮನ: ಮನಸ್ಸು; ಕಡು: ತುಂಬ; ನಿರೋಧ: ಪ್ರತಿಬಂಧ, ನಿರಾಶ; ಹಿಡಿ: ಗ್ರಹಿಸು; ಚಿಂತಿಸು: ಯೋಚಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕಡಿಕುಗಳನ್+ಆಯ್ದ್+ಅರಸಿ +ರಥದೊಳು
ಗುಡಿಸಿ +ಸಿಂಧವನೆತ್ತಿ +ಸಾರಥಿ
ತುಡುಕಿ +ವಾಘೆಯ +ಮುರುಹಿ +ಮರಳಿಚಿ +ರಥದ +ಕುದುರೆಗಳ
ತಡೆಯದ್+ಅಶ್ವತ್ಥಾಮನಲ್ಲಿಗೆ
ನಡೆದು +ಬರುತಿರೆ +ಕಂಡು +ಮನದಲಿ
ಕಡು +ನಿರೋಧವ +ಹಿಡಿದು +ಚಿಂತಿಸುತಿರ್ದನಾ +ದ್ರೌಣಿ

ಅಚ್ಚರಿ:
(೧) ಅಶ್ವತ್ಥಾಮನನ್ನು ದ್ರೌಣಿ ಎಂದು ಕರೆದಿರುವುದು