ಪದ್ಯ ೪೩: ಭೀಮನ ಪರಾಕ್ರಮದ ಮಾತುಗಳು ಹೇಗಿದ್ದವು?

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ (ದ್ರೋಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ನುಡಿಯುತ್ತಾ, ದೇಹ ಕೀರ್ತಿಗಳಲ್ಲಿ ನಿಲ್ಲುವುದು ದೇಹವೋ ಕೀರ್ತಿಯೋ? ನಿನಗ ಬೇಕಾದುದನ್ನು ಹೇಳಿಕೊಂಡರೆ ನಾನು ಕೇಳುವವನಲ್ಲ. ನನ್ನ ರೀತಿ ನಿಮಗೆ ಗೊತ್ತಿದೆ, ಮೋಸದಿಂದ ಬದುಕಲು ಬಯಸುವ ಧರ್ಮದ್ರೋಹಿ ನಾನಲ್ಲ. ನನ್ನ ಸಾಹಸವನ್ನು ನೋಡು ಎಂದು ಭೀಮನು ಅಸ್ತ್ರವನ್ನಿದಿರಿಸಿದನು.

ಅರ್ಥ:
ದೇಹ: ಒಡಲು, ಶರೀರ; ಕೀರ್ತಿ: ಯಶಸ್ಸು; ನಿಲುವು: ನಿಂತುಕೊಳ್ಳು; ಮುರಾಂತಕ: ಕೃಷ್ಣ; ಬೇಹುದು: ಬೇಕಾದುದು; ಬೆಸಸು: ಹೇಳು, ಆಜ್ಞಾಪಿಸು; ಬಲ್ಲಿರಿ: ತಿಳಿದ; ಗಾಹು: ಮೋಸ; ಉಳಿವ: ಮಿಕ್ಕ; ಧರ್ಮ: ಧಾರಣೆ ಮಾಡಿದುದು; ದ್ರೋಹ: ಮೋಸ; ಸಾಹಸ: ಪರಾಕ್ರಮ; ಮುರಿ: ಸೀಳು; ಸರಳ: ಬಾಣ; ಸಮ್ಮುಖ: ಎದುರು; ಅನುವು: ರೀತಿ;

ಪದವಿಂಗಡಣೆ:
ದೇಹ +ಕೀರ್ತಿಗಳೊಳಗೆ +ನಿಲುವುದು
ದೇಹವೋ +ಕೀರ್ತಿಯೊ +ಮುರಾಂತಕ
ಬೇಹುದನು+ ಬೆಸಸಿದಡೆ+ ಮಾಡೆನು +ಬಲ್ಲಿರ್+ಎನ್ನ್+ಅನುವ
ಗಾಹುಗತಕದಲ್+ಉಳಿವ +ಧರ್ಮ
ದ್ರೋಹಿ +ತಾನಲ್ಲ್+ಇನ್ನು +ನೋಡಾ
ಸಾಹಸವನ್+ಎನುತ್+ಇತ್ತ +ಮುರಿದನು +ಸರಳ +ಸಮ್ಮುಖಕೆ

ಅಚ್ಚರಿ:
(೧) ಭೀಮನ ಸಾಹಸದ ನುಡಿ – ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ

ಪದ್ಯ ೧: ದ್ರೋಣನ ರಥದ ಬಳಿಗೆ ಯಾರು ಬಂದರು?

ಕೇಳು ಧೃತರಾಷ್ಟ್ರವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದ್ರೋಣನು ದೇಹತ್ಯಾಗ ಮಾಡಿದನು. ಅವನಿಗೆ ಬಂದ ವಿಧಿಯು ನಮ್ಮ ಸೋಲಿಗೆ ತವನಿಧಿ, ನಂತರ ವೈರಿರಾಜರಿಗೆ ಕಷ್ಟ ಬಂದಿತು. ದ್ರೋಣನ ದೇಹತ್ಯಾಗವನ್ನು ಕೇಳಿದ ಧೃಷ್ಟದ್ಯುಮ್ನನು ಕತ್ತಿಯನ್ನು ಝಳಪಿಸುತ್ತಾ ದ್ರೋಣನ ರಥದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಗುರು: ಆಚಾರ್ಯ; ಬೀಳುಕೊಡು: ತೆರಳು; ದೇಹ: ಶರೀರ; ಆಳು: ಸೇವಕ; ವಿಧಿ: ನಿಯಮ; ಅಪಜಯ: ಸೋಲು; ನಿಧಿ: ಐಶ್ವರ್ಯ; ಬಂದು: ಆಗಮಿಸು; ಕಷ್ಟ: ತೊಂದರೆ; ಅರಿ: ವೈರಿ; ಭೂಪಾಲ: ರಾಜ; ಕೇಳು: ಆಲಿಸು; ಖಳ: ದುಷ್ಟ; ಸುತ: ಮಗ; ಐತಂದು: ಬಂದು ಸೇರು; ಜಡಿ: ಬೆದರಿಕೆ; ಆಯುಧ: ಶಸ್ತ್ರ; ತವ: ನಿನ್ನ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ಗುರು
ಬೀಳುಕೊಟ್ಟನು +ದೇಹವನು +ನ
ಮ್ಮಾಳ +ವಿಧಿಯೇನ್+ಅಪಜಯದ +ತವನಿಧಿಯಲೇ +ನಮಗೆ
ಮೇಲೆ +ಬಂದುದು +ಕಷ್ಟವ್+ಅರಿ+ಭೂ
ಪಾಲರಿಗೆ +ಕೇಳ್+ಇದನು +ಖಳ+ ಪಾಂ
ಚಾಲಸುತನ್ +ಐತಂದನ್+ಅಲ್ಲಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೨) ದ್ರೋಣನು ಸತ್ತನು ಎಂದು ಹೇಳಲು – ಗುರು ಬೀಳುಕೊಟ್ಟನು ದೇಹವನು

ಪದ್ಯ ೬೭: ದ್ರೊಣರು ಶಸ್ತ್ರತ್ಯಾಗವೇಕೆ ಮಾಡಿದರು?

ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರತ್ಯಾಗ ತನಗೆಂದು (ದ್ರೋಣ ಪರ್ವ, ೧೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಭೀಮನ ಮಾತುಗಳನ್ನು ಕೇಳಿ ದ್ರೋಣನು ಬಹಳವಾಗಿ ದುಃಖಿತನಾದನು. ಕ್ಷಣ ಕ್ಷಣಕ್ಕೂ ಕಣ್ಣು ನೀರು ಬಂದವು. ಕೈಯಲ್ಲಿದ್ದ ಬಿಲ್ಲು ಬಾಣಗಳ ಹಿಡಿತ ಸಡಲಿತು. ಹೆಚ್ಚಿದ ದುಃಖದಿಂದ ಮುಖವು ಬಾಡಲು ಸುಯೋಧನ ಕರ್ಣ ಕೃಪ ಮೊದಲಾದ ವೀರರಿಗೆ ನನ್ನ ಮಗನು ಸತ್ತನು, ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದನು.

ಅರ್ಥ:
ಕೇಳು: ಆಲಿಸು; ಕಡುನೊಂದು: ಬಹಳ ವ್ಯಥೆಪಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗು; ಆಲಿ: ಕಣ್ಣು; ನೀರು: ಜಲ; ಕೈ: ಹಸ್ತ; ಕೋಲು: ಬಾಣ; ಬಿಲು: ಚಾಪ; ಸಡಲು: ಕಳಚು; ಸಾಕು: ನಿಲ್ಲು, ತಡೆ; ದೇಹ: ಶರೀರ; ದುಗುಡ: ದುಃಖ; ಮೊಗ: ಮುಖ; ಅವನೀಪಾಲ: ರಾಜ; ಭಟ: ಸೈನಿಕ; ಹೇಳು: ತಿಳಿಸು; ಮಗ: ಪುತ್ರ; ಅಳಿ: ಸತ್ತುಹೋಗು; ಅಸ್ತ್ರ: ಶಸ್ತ್ರ; ತ್ಯಾಗ: ಬಿಡು, ತೊರೆ;

ಪದವಿಂಗಡಣೆ:
ಕೇಳಿದನು +ಕಡುನೊಂದನ್+ಅಡಿಗಡಿಗ್
ಆಲಿ +ನೀರೇರಿದವು +ಕೈಯಲಿ
ಕೋಲು +ಬಿಲು +ಸಡಲಿದವು +ಸಾಕೀ +ದೇಹವೇಕೆನುತ
ಮೇಲು +ದುಗುಡದ +ಮೊಗದಲ್+ಅವನೀ
ಪಾಲ +ಕರ್ಣ +ಕೃಪಾದಿ +ಭಟರಿಗೆ
ಹೇಳಿದನು +ಮಗನ್+ಅಳಿದನ್+ಅಸ್ತ್ರತ್ಯಾಗ +ತನಗೆಂದು

ಅಚ್ಚರಿ:
(೧) ದುಃಖದ ಚಿತ್ರಣ – ಆಲಿ ನೀರೇರಿದವು ಕೈಯಲಿ ಕೋಲು ಬಿಲು ಸಡಲಿದವು

ಪದ್ಯ ೫೯: ದ್ರೋಣರಿಗೆ ಯಾವುದು ನಿಜ ಸ್ವರೂಪವೆಂದು ಹೇಳಿದರು?

ದೇಹವಿದು ಭೂತೇಂದ್ರಿಯಾದಿಯ
ಗೇಹವುಪಚಿತ ಕರ್ಮ ಫಲಸಂ
ದೋಹದಲಿ ತಿರುಗುವುವು ಸುರ ನರ ತಿರ್ಯಗಾದಿಯಲಿ
ದೇಹ ಕರಣಾದಿ ಪ್ರಪಂಚವು
ನಾಹಮೆನಲಳಿದುಳಿದ ನಿತ್ಯ ನಿ
ರೀಹ ವಿಮಳ ಜ್ಞಾನರೂಪನು ನಿನ್ನ ನೋಡೆಂದ (ದ್ರೋಣ ಪರ್ವ, ೧೮ ಸಂಧಿ, ೫೯ ಪದ್ಯ)

ತಾತ್ಪರ್ಯ:
ಭಾರಧ್ವಾಜ ಮುನಿಗಳು ನುಡಿಯುತ್ತಾ, ಪಂಚಮಹಾಭೂತಗಳು ಇಂದ್ರಿಯಗಳು ಮೊದಲಾದುವಕ್ಕೆ ಈ ದೇಹವೇ ಮನೆ. ಕೂಡಿಟ್ಟುಕೊಂಡ ಕರ್ಮಫಲಗಳ ದೆಸ್ಯಿಂದ ದೇವ, ಮನುಷ್ಯ ತಿರ್ಯಗ್ಯೋನಿಗಳಲ್ಲಿ ಕೊನೆಯಿಲ್ಲದೆ ತಿರುಗಾದುತ್ತದೆ. ದೇಹ, ಇಂದ್ರಿಯಗಳಾವುವು ನಾನಲ್ಲವೆಂದು ಅಲ್ಲಗಳೆದ ಮೇಲೆ ಉಳಿಯುವ ಕರ್ಮದ ಲೇಪವಿಲ್ಲದ ನಿತ್ಯ ನಿರ್ಮಲ ಜ್ಞಾನರೂಪನೇ ನೀನು. ನಿನ್ನನ್ನು ನೀನು ನೋಡಿಕೋ ಎಂದು ಉಪದೇಶಿಸಿದರು.

ಅರ್ಥ:
ದೇಹ: ಒಡಲು; ಭೂತ: ಪಂಚಭೂತಗಳು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಆದಿ: ಮೊದಲಾದ; ಗೇಹ: ದೇಹ; ಉಪಚಿತ: ಯೋಗ್ಯವಾದ; ಕರ್ಮ: ಕಾರ್ಯ; ಫಲ: ಲಾಭ; ಸಂದೋಹ: ಗುಂಪು; ತಿರುಗು: ಸುತ್ತು; ಸುರ: ದೇವತೆ; ನರ: ಮನುಷ್ಯ; ತಿರ್ಯಕ್: ಪಶು ಪಕ್ಷಿಗಳ ಜನ್ಮ; ಕರಣ: ಕೆಲಸ; ಪ್ರಪಂಚ: ಜಗತ್ತು; ನಾಹಂ: ನಾನಲ್ಲ; ಅಳಿ: ನಾಶ; ಉಳಿದ: ಮಿಕ್ಕ; ನಿತ್ಯ: ಯಾವಾಗಲು; ನಿರೀಹ: ಇಚ್ಛಾರಹಿತ; ವಿಮಳ: ನಿರ್ಮಲ; ಜ್ಞಾನ: ಬುದ್ಧಿ; ರೂಪ: ಆಕಾರ; ನೋಡು: ವೀಕ್ಷಿಸು;

ಪದವಿಂಗಡಣೆ:
ದೇಹವಿದು +ಭೂತೇಂದ್ರಿ+ಆದಿಯ
ಗೇಹವ್+ಉಪಚಿತ +ಕರ್ಮ +ಫಲಸಂ
ದೋಹದಲಿ +ತಿರುಗುವುವು +ಸುರ +ನರ +ತಿರ್ಯಗಾದಿಯಲಿ
ದೇಹ +ಕರಣಾದಿ +ಪ್ರಪಂಚವು
ನಾಹಂ+ಎನಲ್+ ಅಳಿದುಳಿದ +ನಿತ್ಯ +ನಿ
ರೀಹ +ವಿಮಳ +ಜ್ಞಾನರೂಪನು +ನಿನ್ನ +ನೋಡೆಂದ

ಅಚ್ಚರಿ:
(೧) ದೇಹವು ತಿರುಗುವ ಪರಿ – ಗೇಹವುಪಚಿತ ಕರ್ಮ ಫಲಸಂದೋಹದಲಿ ತಿರುಗುವುವು ಸುರ ನರ ತಿರ್ಯಗಾದಿಯಲಿ
(೨) ದೇಹ, ಗೇಹ – ಸಮಾನಾರ್ಥಕ ಪದ

ಪದ್ಯ ೨೭: ವ್ಯಾಸರು ಯಾವ ಉಪದೇಶವನ್ನು ನೀಡಿದರು?

ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ (ದ್ರೋಣ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರು ಉಪದೇಶಿಸುತ್ತಾ, ಆ ದೇಹವು ಅಭಿಮನ್ಯುವೋ, ಆ ದೇಹವನ್ನು ಧರಿಸಿದ ಆತ್ಮನು ಅಭಿಮನ್ಯುವೋ? ದೇಹವು ಅಭಿಮನ್ಯುವಲ್ಲ, ಅದು ಹೋದರೇನಾಯಿತು? ದೇಹವು ಅನಿತ್ಯ ಯುದ್ಧದಲ್ಲಿ ಸತ್ತ ನಿನ್ನವರನ್ನು ಬಿಟ್ಟುಬಿಡು. ಈ ದುಃಖಕ್ಕೆ ನಾನು ಎಂಬ ಅಹಂಕಾರ, ನನ್ನದೆಂಬ ಮಮಕಾರಗಳೇ ಕಾರಣ. ಅಹಂಕಾರ ಮಮಕಾರಗಳನ್ನು ಬಿಟ್ಟು ಆಲೋಚಿಸು.

ಅರ್ಥ:
ದೇಹ: ತನು; ದಿಟ: ಸತ್ಯ; ಜಡ: ಅಚೇತನವಾದುದು; ಕೆಡು: ಹಾಳಾಗು; ಅನಿತ್ಯ: ಶಾಶ್ವತವಲ್ಲದ; ಆಹವ: ಯುದ್ಧ; ಅಳಿ: ಸಾವು; ಬಿಡು: ತೊರೆ; ಸಂದೇಹ: ಸಂಶಯ; ಮಮತೆ: ಪ್ರೀತಿ; ಬೀಳ್ಕೊಡು: ತೊರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ದೇಹ +ತಾನ್+ ಅಭಿಮನ್ಯುವೋ +ದಿಟ
ದೇಹಿ+ ತಾನ್+ಅಭಿಮನ್ಯುವೋ +ಜಡ
ದೇಹ +ತಾನ್+ಅಭಿಮನ್ಯುವಲ್ಲದು+ ಕೆಟ್ಟರೇನಾಯ್ತು
ದೇಹವೆಂಬುದ್+ಅನಿತ್ಯ +ನಿನ್ನವರ್
ಆಹವದೊಳ್+ಅಳಿದವರ +ಬಿಡು +ಸಂ
ದೇಹವ್+ಅಹಮ್+ಮಮತೆಗಳ+ ಬೀಳ್ಕೊಟ್ಟು +ನೋಡೆಂದ

ಅಚ್ಚರಿ:
(೧) ದೇಹ, ಸಂದೇಹ – ಪ್ರಾಸ ಪದಗಳು
(೨) ವ್ಯಾಸರ ಉಪದೇಶ – ದೇಹವೆಂಬುದನಿತ್ಯ; ಬಿಡು ಸಂದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ

ಪದ್ಯ ೩೧: ದ್ರೋಣರು ಏನು ಹೇಳುತ್ತಾ ಮುನ್ನುಗ್ಗಿದರು?

ಸಾಹಸಿಕರೈ ದ್ರುಪದರಿವದಿರ
ಚೋಹದೋಲೆಯಕಾರತನ ಮನ
ಗಾಹಿನಲಿ ಹೆಮ್ಮಕ್ಕಳಿವದಿರು ಶಿವಶಿವಿವದಿರಿಗೆ
ಆಹವದೊಳೋಸರಿಸಿದರೆ ಭಟ
ಸಾಹಸಕೆ ಕಲೆ ಹೊದ್ದದೇ ಸುಡು
ದೇಹವೇತಕೆ ದೆಸೆಯೆ ಸಾಕೆನುತೈದಿದನು ದ್ರೋಣ (ಭೀಷ್ಮ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರುಪದನೇ ಮೊದಲಾದವರು ಪಾಂಡವರ ಸೇವಕರು, ಇವರು ವೀರರಲ್ಲ, ಶಿವಶಿವಾ ಇಂತಹವರಿಗೆ ಹೆದರಿ ಹಿಮ್ಮೆಟ್ಟಿದರೆ ನಿಮ್ಮ ಸಾಹಸಕ್ಕೆ ಶೌರ್ಯಕ್ಕೆ ಕುಂದಲ್ಲವೇ? ಅಂತಹ ದೇಹವಿದ್ದರೇನು ಹೋದರೇನು ಎನ್ನುತ್ತಾ ದ್ರೋಣನು ಮುನ್ನುಗ್ಗಿದನು.

ಅರ್ಥ:
ಸಾಹಸ: ಪರಾಕ್ರಮ; ಇವದಿರು: ಇಷ್ಟು ಜನ; ಚೋಹ: ಅಚ್ಚರಿ; ಓಲೆಯಕಾರ: ಸೇವಕ; ಮನ: ಮನಸ್ಸು; ಕಾಹು: ಸಂರಕ್ಷಣೆ; ಹೆಮ್ಮಕ್ಕಳು: ಹಿರಿಯ ಮಕ್ಕಳು; ಆಹವ: ಯುದ್ಧ; ಓಸರಿಸು: ಹಿಂಜರಿ; ಭಟ: ಸೈನಿಕ; ಕಲೆ: ಕೂಡು; ಹೊದ್ದು: ಪರಿಣಮಿಸು, ಹೊಂದು; ಸುಡು: ದಹಿಸು; ದೇಹ: ತನು; ದೆಸೆ: ದಿಕ್ಕು; ಸಾಕು: ನಿಲ್ಲಿಸು; ಐದು: ಬಂದುಸೇರು;

ಪದವಿಂಗಡಣೆ:
ಸಾಹಸಿಕರೈ +ದ್ರುಪದರ್+ಇವದಿರ
ಚೋಹದ್+ಓಲೆಯಕಾರತನ +ಮನ
ಕಾಹಿನಲಿ+ ಹೆಮ್ಮಕ್ಕಳ್+ಇವದಿರು +ಶಿವಶಿವ್+ಇವದಿರಿಗೆ
ಆಹವದೊಳ್+ಓಸರಿಸಿದರೆ +ಭಟ
ಸಾಹಸಕೆ +ಕಲೆ +ಹೊದ್ದದೇ +ಸುಡು
ದೇಹವೇತಕೆ+ ದೆಸೆಯೆ+ ಸಾಕೆನುತ್+ಐದಿದನು +ದ್ರೋಣ

ಅಚ್ಚರಿ:
(೧) ದ್ರೋಣನ ಮಾತು – ಆಹವದೊಳೋಸರಿಸಿದರೆ ಭಟ ಸಾಹಸಕೆ ಕಲೆ ಹೊದ್ದದೇ

ಪದ್ಯ ೬೬: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ಹೋಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಚೇಷ್ಟಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು (ವಿರಾಟ ಪರ್ವ, ೧೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗೊಂಬೆಗೆಲ್ಲಿಂದ ದರ್ಪ ಬರುತ್ತದೆ? ಮನುಷ್ಯನ ಸಾಹಸ ಎನ್ನುವುದು ಬೇರೆಯಿದೆಯೇ? ಯಂತ್ರದ ಗೊಂಬೆಯು ಯಂತ್ರವನ್ನು ಬಿಟ್ಟು ತಾನೇ ಚಲಿಸಬಲ್ಲದೆ? ಕೃಷ್ಣ ನೀನು ದೇಹದಲ್ಲಿರುವವನು, ನಾವು ದೇಹಿಗಳು, ನಮಗೆ ಗರ್ವವು ಸಲ್ಲದೆಂದು ಯುಧಿಷ್ಠಿರನು ಬಿನ್ನವಿಸಿಕೊಂಡನು.

ಅರ್ಥ:
ಹೂಹೆ: ಹಸುಳೆ, ಶಿಶು; ದರ್ಪ: ಅಹಂಕಾರ; ಮನುಜ: ಮಾನವ; ಸಾಹಸ: ಪರಾಕ್ರಮ; ಬೇರೆ: ಅನ್ಯ; ಯಂತ್ರ: ಉಪಕರಣ; ಹಾಹೆ: ಗೊಂಬೆ, ಪುತ್ತಳಿ; ಉಳಿದು: ಮಿಕ್ಕಿ; ಚೇಷ್ಟೆ: ಕಾರ್ಯ; ಅರಿ: ತಿಳಿ; ದೇಹಿ: ನೀಡು; ದೇಹ: ತನು; ಗರ್ವ: ಅಹಂಕಾರ; ಗಾಹು: ಪ್ರಭಾವ, ಮೋಸ; ಸೂನು: ಮಗ; ಬಿನ್ನವಿಸು: ಹೇಳು;

ಪದವಿಂಗಡಣೆ:
ಹೋಹೆಗೆಲ್ಲಿಯ +ದರ್ಪ +ಮನುಜನ
ಸಾಹಸವು +ಬೇರೇನು +ಯಂತ್ರದ
ಹಾಹೆ +ಯಂತ್ರವನ್+ಉಳಿದು +ಚೇಷ್ಟಿಸಲ್+ ಅರಿವುದೇ+ ಬೇರೆ
ದೇಹಿ +ನೀ +ನಾವೆಲ್ಲ+ ನಿನ್ನಯ
ದೇಹವಿದರೊಳಗ್+ಎಮಗೆ+ ಗರ್ವದ
ಗಾಹಿದೆಲ್ಲಿಯದೆಂದು +ಬಿನ್ನವಿಸಿದನು+ ಯಮಸೂನು

ಅಚ್ಚರಿ:
(೧) ಹೋಹೆ, ಹಾಹೆ – ಪದಗಳ ಬಳಕೆ
(೨) ಕೃಷ್ಣನ ಹಿರಿಮೆ – ದೇಹಿ ನೀ ನಾವೆಲ್ಲ ನಿನ್ನಯ ದೇಹವಿದರೊಳಗೆಮಗೆ ಗರ್ವದ ಗಾಹಿದೆಲ್ಲಿಯದೆಂದು

ಪದ್ಯ ೩೯: ಭೀಮನು ಹೇಗೆ ಬಂದು ವಿರಾಟನ ಮುಂದೆ ನಿಂತನು?

ಮುರಿದ ಮೀಸೆಯ ಹೊದರುದಲೆ ಕೆಂ
ಪೊರೆದ ಕಂಗಳ ಹೊಗರು ಮೋರೆಯ
ತುರುಗಿದುಬ್ಬಿನ ರೋಮಪುಳಕದ ಬಿಗಿದ ಹುಬ್ಬುಗಳ
ಹೊರೆದ ದೇಹದ ನಿರುತ ರೌದ್ರದ
ಮರುತಜನು ಕದನಕ್ಕೆ ಕಾಲನ
ಕರೆವವೊಲು ನಡೆತಂದು ನಿಂದನು ಮತ್ಸ್ಯನಿದಿರಿನಲಿ (ವಿರಾಟ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ತಿರುವಿದ ಮೀಸೆಗಳು, ಬಾಚದ ತಲೆಗೂದಲುಗಳು, ಕೆಂಪು ಕಣ್ಣುಗಳು, ಕಾಂತಿಭರಿತ ಮುಖ, ಹಿಗ್ಗಿದ ರೋಮ, ರೋಮಾಂಚನಗೊಂಡು ಬಿಗಿದಿದ್ದ ಹುಬ್ಬುಗಳು, ಸುಸ್ಥಿತಿಯಲ್ಲಿದ್ದ ದೇಹದಿಂದ ಭಯಂಕರನಾಗಿ ಕಾಣುತ್ತಿದ್ದ ಭೀಮನು ಯುದ್ಧಕ್ಕೆ ಕಾಲಯಮನನ್ನು ಕರೆಸಿದರೋ ಎಂಬಂತೆ ರಾಜನೆದುರಿನಲ್ಲಿ ಬಂದು ನಿಮ್ತನು.

ಅರ್ಥ:
ಮುರಿ: ತಿರುವು; ಹೊದರು: ಪೊದೆ, ಹಿಂಡಲು; ತಲೆ: ಶಿರ; ಒರೆ: ಸಾಮ್ಯತೆ; ಕಂಗಳು: ಕಣ್ಣು; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ತುರುಗು: ಸಂದಣಿ, ದಟ್ಟಣೆ; ಉಬ್ಬು: ಹಿಗ್ಗು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬಿಗಿ: ಒತ್ತು, ಅಮುಕು; ಹುಬ್ಬು: ಕಣ್ಣಿನ ಮೇಲಿರುವ ಕೂದಲು; ಹೊರೆ: ರಕ್ಷಣೆ, ಭಾರ; ದೇಹ: ಕಾಯ, ತನು; ನಿರುತ: ದಿಟ, ಸತ್ಯ; ರೌದ್ರ: ಭಯಂಕರ; ಮರುತಜ: ಭೀಮ, ವಾಯುಪುತ್ರ; ಕದನ: ಯುದ್ಧ; ಕಾಲ: ಯಮ; ಕರೆ: ಬರೆಮಾಡು; ನಡೆ: ಚಲಿಸು; ನಡೆತಂದು: ನಡೆದುಕೊಂಡು ಬಂದು; ನಿಂದನು: ನಿಲ್ಲು; ಇದಿರು: ಎದುರು;

ಪದವಿಂಗಡಣೆ:
ಮುರಿದ +ಮೀಸೆಯ +ಹೊದರು+ತಲೆ +ಕೆಂ
ಪೊರೆದ+ ಕಂಗಳ +ಹೊಗರು +ಮೋರೆಯ
ತುರುಗಿದ್+ಉಬ್ಬಿನ +ರೋಮ+ಪುಳಕದ+ ಬಿಗಿದ +ಹುಬ್ಬುಗಳ
ಹೊರೆದ +ದೇಹದ +ನಿರುತ +ರೌದ್ರದ
ಮರುತಜನು +ಕದನಕ್ಕೆ +ಕಾಲನ
ಕರೆವವೊಲು +ನಡೆತಂದು +ನಿಂದನು +ಮತ್ಸ್ಯನ್+ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುತಜನು ಕದನಕ್ಕೆ ಕಾಲನ ಕರೆವವೊಲು ನಡೆತಂದು ನಿಂದನು

ಪದ್ಯ ೨೦: ಭೀಮಾರ್ಜುನರು ಶಕುನಿಗೆ ಹೇಗೆ ಉತ್ತರಿಸಿದರು?

ದೇಹಿಗೆರವೇ ದೇಹವೆಲವೋ
ದೇಹಿಭೂಪತಿ ಧರ್ಮಪುತ್ರನ
ದೇಹವಾವಿದರೊಳಗೆ ನಿನ್ನ ಕುಮಂತ್ರಭಾಷಿತದ
ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ ಸಾಕಿನ್ನು ಮೇಲಣ
ಗಾಹುಗತಕಗಳೆಮ್ಮೊಳೆಂದರು ಜರೆದು ಸೌಬಲನ (ಸಭಾ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲವೋ ಶಕುನಿ, ದೇಹವು ದೇಹವನ್ನು ಧರಿಸಿರುವ ಜೀವವನ್ನು ಬಿಟ್ಟಿರುವುದೇ? ನಮ್ಮ ಅಣ್ಣನೇ ನಮಗೆ ಜೀವು ಅವನ ದೇಹಗಳು ನಾವು. ನಿನ್ನ ದುರ್ಮಂತ್ರದ ಮಾತು ಈ ನಮ್ಮ ನಿಲುವನ್ನು ತಿಳಿದೀತೇ? ನೀನು ಎಲ್ಲವನ್ನೂ ಕಪಟ ದೃಷ್ಟಿಯಿಂದ ನೋಡುವೆ. ಇನ್ನು ನಿನ್ನ ಭ್ರಮೆಯನ್ನು ಬಿಡು. ನಮ್ಮ ಮೇಲೆ ನಿನ್ನ ಪ್ರಯೋಗವೇನೂ ನಡೆಯುವುದಿಲ್ಲ ಎಂದು ಭೀಮಾರ್ಜುನರು ಶಕುನಿಯನ್ನು ಜರೆದರು.

ಅರ್ಥ:
ದೇಹ: ತನು, ಒಡಲು; ಎರವು: ಸಾಲು; ದೇಹಿ: ಶರೀರವನ್ನುಳ್ಳದ್ದು; ಭೂಪತಿ: ರಾಜ; ಪುತ್ರ: ಮಗ; ಒಳಗೆ: ಅಂತರ್ಯ; ಕುಮಂತ್ರ: ಕೆಟ್ಟ ವಿಚಾರ; ಭಾಷಿತ: ಹೇಳಿದ, ಪ್ರತಿಜ್ಞಮಾಡಿದ; ಊಹೆ: ಎಣಿಕೆ, ಅಂದಾಜು; ಕಪಟ: ಮೋಸ; ಅವಗಾಹ: ಮಗ್ನ, ಮುಳುಗು; ಸಾಕು: ತಡೆ; ಮೇಲಣ: ಮೇಲೆ ಹೇಳಿದ; ಗಾಹುಗತಕ: ಮೋಸ, ಭ್ರಾಂತಿ; ಜರೆ: ಬಯ್ಯು; ಸೌಬಲ: ಶಕುನಿ;

ಪದವಿಂಗಡಣೆ:
ದೇಹಿಗ್+ಎರವೇ+ ದೇಹವ್+ಎಲವೋ
ದೇಹಿಭೂಪತಿ +ಧರ್ಮಪುತ್ರನ
ದೇಹವಾವ್+ಇದರೊಳಗೆ +ನಿನ್ನ +ಕುಮಂತ್ರ+ಭಾಷಿತದ
ಊಹೆಗೊಂಬುದೆ +ಕಪಟದಿಂದ್+ಅವ
ಗಾಹಿಸುವೆ +ಸಾಕಿನ್ನು +ಮೇಲಣ+
ಗಾಹುಗತಕಗಳ್+ಎಮ್ಮೊಳ್+ಎಂದರು +ಜರೆದು +ಸೌಬಲನ

ಅಚ್ಚರಿ:
(೧) ದೇಹಿ, ದೇಹ – ೧-೩ ಸಾಲಿನ ಮೊದಲ ಪದ
(೨) ಉಪಮಾನದ ಪ್ರಯೋಗ – ದೇಹಿಗೆರವೇ ದೇಹ
(೩) ಶಕುನಿಯನ್ನು ಬಯ್ಯುವ ಪರಿ – ನಿನ್ನ ಕುಮಂತ್ರಭಾಷಿತದ ಊಹೆಗೊಂಬುದೆ ಕಪಟದಿಂದವ
ಗಾಹಿಸುವೆ

ಪದ್ಯ ೪೨: ದೇಹದ ಮಹತ್ವವೇನು?

ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಮನುಷ್ಯ ದೇಹವು ಎಷ್ಟು ಅಮೂಲ್ಯವೆಂದು ತಿಳಿಸುವ ಪದ್ಯ. ಮನುಷ್ಯ ದೇಹವನ್ನು ಆಶ್ರಯಿಸಿ ಧರ್ಮವನ್ನು ಆಚರಿಸಬೇಕು. ದೇಹವು ಬಿದ್ದಮೇಲೆ ಯಾವ ಧರ್ಮವನ್ನು ತಾನೆ ಆತ ಮಾಡಲು ಸಾಧ್ಯ. ಆದ್ದರಿಂದ ಮನುಷ್ಯ ದೇಹವೇ ಪುರುಷಾರ್ಥಗಳನ್ನು ಸಾಧಿಸಲು ಸಾಧನ. ದೇಹದಿಂದಲೇ ಇಹಪರಲೋಕಗಳ ಗತಿಯು ಸಾಧ್ಯ. ಇದಕ್ಕೆ ಅನುಮಾನವಿಲ್ಲ ರಾಜ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ದೇಹ: ತನು, ಕಾಯ, ಶರೀರ; ಹಿಡಿ: ಬಂಧನ; ಧರ್ಮ: ಧಾರಣೆ ಮಾಡುವುದು, ನಿಯಮ, ಆಚಾರ; ನಿರ್ದೇಹ: ದೇಹ ವಿಲ್ಲದ; ದೊರಕು: ಪಡೆ; ಮಾನವ: ಮನುಷ್ಯ; ಸಾಧನ: ಗುರಿಮುಟ್ಟುವ ಪ್ರಯತ್ನ; ಸಕಲ: ಎಲ್ಲಾ; ಪುರುಷಾರ್ಥ: ಮನುಷ್ಯನು ಸಾಧಿಸಬೇಕಾದ ಧರ್ಮ; ಐಹಿಕ: ಇಹಲೋಕ; ಆಮುಷ್ಮಿಕ: ಪರಲೋಕ; ಗತಿ: ಗಮನ, ಸಂಚಾರ; ಸಂಮೋಹಿಸು: ಅತಿಶಯವಾದ ಮೋಹವನ್ನು ಹೊಂದು; ಸಂದೇಹ: ಸಂಶಯ, ಅನುಮಾನ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ದೇಹವ್ +ಇಡಿದಿಹ +ಧರ್ಮವದು +ನಿ
ರ್ದೇಹದಲಿ +ದೊರಕುವುದೆ +ಮಾನವ
ದೇಹವೇ +ಸಾಧನ +ಸಕಲ +ಪುರುಷಾರ್ಥಶೀಲರಿಗೆ
ಐಹಿಕ+ಆಮುಷ್ಮಿಕದ+ ಗತಿ +ಸಂ
ಮೋಹಿಸುವುದು +ಶರೀರದಲಿ+ ಸಂ
ದೇಹವೇ +ಧೃತರಾಷ್ಟ್ರ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಐಹಿಕ, ಆಮುಷ್ಮಿಕ; ದೇಹ, ನಿರ್ದೇಹ; – ಜೋಡಿ ಪದಗಳು (ವಿರುದ್ಧ ಪದವೂ ಕೂಡ)
(೨) ದೇಹ – ೧ – ೩ ಸಾಲಿನ ಮೊದಲ ಪದ;
(೩) ದೇಹ, ಸಂದೇಹ – ಪದಗಳ ಬಳಕೆ
(೪) ಧ್ಯೇಯ ವಾಕ್ಯದ ರಚನೆ – ಮಾನವ ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ