ಪದ್ಯ ೨೦: ತ್ರಿಗರ್ತ ದೇಶದ ಪಡೆಯ ಸ್ಥಿತಿ ಏನಾಯಿತು?

ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ (ಗದಾ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ ಕೇಳು, ಏಳು ನೂರು ರಥಗಳು ಐನೂರು ಕುದುರೆಗಳು, ಐನೂರು ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು ಸತ್ತು ಬಿದ್ದರು. ಕುರುಕ್ಷೇತ್ರದಲ್ಲಿ ಅರ್ಜುನನನ್ನು ಕಡುಬಳಲಿಸಿದ ತ್ರಿಗರ್ತ ದೇಶದ ಪಡೆಯೆಲ್ಲವೂ ನಾಶವಾಯಿತು.

ಅರ್ಥ:
ಕಡಿ: ಸೀಳು; ರಥ: ಬಂಡಿ; ಮುರಿ: ಸೀಳು; ಅಶ್ವಚಯ: ಕುದುರೆಗಳ ಗುಂಪು; ಮುಂಗೆಡೆ: ಮುಂದೆ ಬೀಳು; ಗಜ: ಆನೆ; ಸಾವಿರ: ಸಹಸ್ರ; ಕಡುಗಲಿ: ಮಹಾ ಪರಾಕ್ರಮಿ; ಉದುರು: ಬೀಳು; ತ್ರಿಗರ್ತ: ಒಂದು ದೇಶದ ಹೆಸರು; ಪಡೆ: ಸೈನ್ಯ; ಬಿಡು: ತೊರೆ; ಬಳಲಿಸು: ಆಯಾಸಗೊಳ್ಳು; ಅನಿಬರ್: ಅಷ್ಟು ಜನ; ಅಳಿ: ನಾಶ; ಕೇಳು: ಆಲಿಸು; ಅಡೆ: ಮುಚ್ಚಿಹೋಗಿರು;

ಪದವಿಂಗಡಣೆ:
ಕಡಿವಡೆದವ್+ಏಳ್ನೂರು +ರಥ +ಮುರಿವ್
ಅಡೆದವ್+ಐನೂರ್+ಅಶ್ವಚಯ +ಮುಂ
ಗೆಡೆದವಂದ್+ಐನೂರು +ಗಜವ್+ಇಪ್ಪತ್ತು +ಸಾವಿರದ
ಕಡುಗಲಿಗಳ್+ಉದುರಿತು +ತ್ರಿಗರ್ತರ
ಪಡೆ +ಕುರುಕ್ಷೇತ್ರದಲಿ +ಪಾರ್ಥನ
ಬಿಡದೆ +ಬಳಲಿಸಿ+ಅನಿಬರ್+ಅಳಿದುದು +ಭೂಪ +ಕೇಳೆಂದ

ಪದ್ಯ ೮: ಕೌರವರ ಜೊತೆಗೆ ಯಾವ ದೇಶದ ಸೈನಿಕರು ಸೇರಿದರು?

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು (ಶಲ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಬೆಂಬಲಕ್ಕೆ ತ್ರಿಗರ್ತ ದೇಶದ ಸೈನಿಕರ ಬಲವು ನುಗ್ಗಿತು. ಅಶ್ವತ್ಥಾಮನು ಕೃಪ ಕೃತವರ್ಮರ ಸಂಗಡಿಗನಲ್ಲವೇ ಎಂದು ನುಗ್ಗಿ ಪಾಂಡವ ಬಲವನ್ನು ತಡೆದು ಭೀಮನನ್ನು ನಿಲ್ಲಿಸಿದರು. ಭೀಮನ ಪರಾಕ್ರಮಿಗಳು ಕಳವಳಗೊಂಡರು.

ಅರ್ಥ:
ಪಡಿಬಲ: ವೈರಿಸೈನ್ಯ; ಹೊಕ್ಕು: ಸೇರು; ತ್ರಿಗರ್ತ: ದೇಶದ ಹೆಸರು; ಗಡಣ: ಗುಂಪು; ಸಂಗಡಿ: ಜೊತೆಗಾರ; ಹೇರಾಳ: ದೊಡ್ಡ, ವಿಶೇಷ; ದಳ: ಸೈನ್ಯ; ಸಹಿತ: ಜೊತೆ; ಕೊಡಹು: ಚೆಲ್ಲು; ಬಲ: ಸೈನ್ಯ; ಅವಗಡಿಸು: ಕಡೆಗಣಿಸು; ಪವಮಾನಜ: ಭೀಮ; ಅಕ್ಕುಡರ್: ಸತ್ವಶಾಲಿ; ಬೆಬ್ಬಳೆ: ಸೋಜಿಗ, ಗಾಬರಿ; ಭಾರಣೆ: ಮಹಿಮೆ, ಗೌರವ; ಭಟ: ಸೈನಿಕ;

ಪದವಿಂಗಡಣೆ:
ಪಡಿಬಲಕೆ +ಹೊಕ್ಕುದು +ತ್ರಿಗರ್ತರ
ಗಡಣ+ ಕೃಪ +ಕೃತವರ್ಮರಿಗೆ+ ಸಂ
ಗಡಿಗನ್+ಅಶ್ವತ್ಥಾಮನ್+ಈ+ ಹೇರಾಳ +ದಳಸಹಿತ
ಕೊಡಹಿದರು +ಪಾಂಡವಬಲವನ್+ಅವ
ಗಡಿಸಿದರು +ಪವಮಾನಜನನ್
ಅಕ್ಕುಡಿಸಿ +ಬೆಬ್ಬಳೆವೋಯ್ತು +ಭೀಮನ +ಭಾರಣೆಯ +ಭಟರು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೀಮನ ಭಾರಣೆಯ ಭಟರು

ಪದ್ಯ ೨೮: ಅರ್ಜುನನು ತ್ರಿಗರ್ತರೊಡನೆ ಹೇಗೆ ಯುದ್ಧವನ್ನು ಮಾಡಿದನು?

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬಿತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ (ದ್ರೋಣ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಇತ್ತ ಅರ್ಜುನನು ತ್ರಿಗರ್ತರೊಡನೆ ಯುದ್ಧವನ್ನಾರಂಭಿಸಿದನು. ಯಮನ ದೂತರನ್ನು ಔತಣಕ್ಕೆ ಕರೆಸಿದನು. ಅವನ ಬಾಣಗಳು ಸೈನ್ಯವನ್ನು ದೊರೆಗಳನ್ನು ಮುತ್ತಿದವು. ನಿಮಿಷ ಗಳಿಗೆಯಲ್ಲಿ ಶತ್ರುಸೈನ್ಯ ಜಲಧಿ ಬತ್ತಿತು.

ಅರ್ಥ:
ಅವಸರ: ಸನ್ನಿವೇಶ, ಸಂದರ್ಭ; ಕೃತಾಂತ: ಯಮ; ತೆತ್ತಿಗ: ನಂಟ, ಬಂಧು; ಔತಣ: ವಿಶೇಷ ಊಟ; ಹೇಳು: ತಿಳಿಸು; ಶರ: ಬಾಣ; ಔಘ: ಗುಂಪು; ಕುತ್ತು: ತೊಂದರೆ, ಆಪತ್ತು; ಕೂರಂಬು: ಹರಿತವಾದ ಬಾಣ; ದೊರೆ: ರಾಜ; ಮುತ್ತು: ಆವರಿಸು; ಕೆದರು: ಹರಡು; ನಿಮಿಷ: ಕ್ಷಣ; ಬತ್ತು: ಒಣಗು, ಆರು; ಅಹಿತ: ವೈರಿ, ಶತ್ರು; ಸುಭಟ: ಪರಾಕ್ರಮಿ; ವೀರ: ಶೂರ; ಶರನಿಧಿ: ಸಮುದ್ರ;

ಪದವಿಂಗಡಣೆ:
ಇತ್ತಲ್+ಅರ್ಜುನನಾ+ ತ್ರಿಗರ್ತರಿಗ್
ಇತ್ತನ್+ಅವಸರವನು +ಕೃತಾಂತನ
ತೆತ್ತಿಗರಿಗ್+ಔತಣವ +ಹೇಳಿಸಿದನು +ಶರೌಘದಲಿ
ಕುತ್ತಿದವು +ಕೂರಂಬು +ದೊರೆಗಳ
ಮುತ್ತಿದವು +ಕೆದರಿದವು +ನಿಮಿಷಕೆ
ಬಿತ್ತಿಸಿದನಂದ್+ಅಹಿತ +ಸುಭಟರ +ವೀರ +ಶರನಿಧಿಯ

ಅಚ್ಚರಿ:
(೧) ಶರೌಘ, ಶರನಿಧಿ – ಪದಗಳ ಬಳಕೆ
(೨) ಸೈನ್ಯದವರು ಸತ್ತರು ಎಂದು ಹೇಳಲು – ಕೃತಾಂತನ ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ

ಪದ್ಯ ೧೫: ಅರ್ಜುನನ ಮುಂದೆ ಯಾರ ಬಿರುದುಗಳನ್ನು ಹೇಳಿದರು?

ಉದಯವಾಗುವ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ (ದ್ರೋಣ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವಾಗುವ ಮೊದಲೇ ತ್ರಿಗರ್ತರು ಗುಂಪಾಗಿ ತಮ್ಮೊಡನೆ ಕಾಳಗಕ್ಕೆ ಬರಬೇಕೆಂದು ಮದೋನ್ಮತ್ತ ಶತ್ರುಭಟ ಭೈರವನಾದ ಅರ್ಜುನನಿಗೆ ದೂತರೊಡನೆ ಹೇಳಿಕಳುಹಿಸಿದರು. ಅವರು ಬಂದು ಅರ್ಜುನನ ಮುಂದೆ ಸಂಶಪ್ತಕರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ:ರಣರಂಗ; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಕದನ: ಯುದ್ಧ; ಅಳವಿ: ಯುದ್ಧ; ಕೊಡು: ನೀಡು; ಬೇಗ: ಶೀಘ್ರ; ಮದ:ಅಹಂಕಾರ; ಅರಿ: ವೈರಿ; ಭಟ: ಸೈನಿಕ; ಭೈರವ: ಶಿವನ ರೂಪ; ಅಟ್ಟು: ಹಿಂಬಾಲಿಸು; ಭಟ್ಟ: ಪರಾಕ್ರಮಿ; ಬಂದು: ಆಗಮಿಸು; ಒದರು: ಹೇಳು; ಬಿರುದು: ಗೌರವಸೂಚಕ ಪದ;

ಪದವಿಂಗಡಣೆ:
ಉದಯವಾಗುವ +ಮುನ್ನ +ಕಳನೊಳು
ಹೊದರು+ಕಟ್ಟಿದರ್+ಈ+ ತ್ರಿಗರ್ತರು
ಕದನಕ್+ಎಮ್ಮೊಳಗ್+ಅಳವಿ+ಕೊಡುವುದು +ಬೇಗ +ಬಹುದೆಂದು
ಮದವದ್+ಅರಿಭಟ+ ಭೈರವಂಗ್
ಅಟ್ಟಿದರು +ಭಟ್ಟರನ್+ಅವರು +ಬಂದ್+ಒದ
ರಿದರು +ಪಾರ್ಥನ +ಮುಂದೆ+ ಸಮಸಪ್ತಕರ +ಬಿರುದುಗಳ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಅರಿಭಟ ಭೈರವ

ಪದ್ಯ ೪: ಸಭೆಯಲ್ಲಿ ಯಾರು ಎದ್ದು ನಿಂತರು?

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ (ದ್ರೋಣ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ವೀರರಿದ್ದು ಏನು ಮಾಡಿಯಾರು? ದೈವದ ಪ್ರೀತಿ ಬೇರೆ ಕಡೆಗಿದೆ. ನಮಗೊಲಿದು ಯಾರು ತಾನೇ ಏನು ಮಾಡಿಯಾರು? ಹೀಗೆಂದು ಕರ್ಣನು ನಿಟ್ಟುಸಿರಿಟ್ಟನು. ಸಭೆಯಲ್ಲಿದ್ದ ಮಹಾವೀರರಾದ ರಾಜರು ಸದ್ದಿಲ್ಲದ ಸಾಗರದಮ್ತೆ ಮೌನವಾಗಿದ್ದರು. ಆಗ ರಣಧೀರರಾದ ತ್ರಿಗರ್ತರು ಸಭೆಯಲ್ಲಿ ಎದ್ದು ನಿಂತರು.

ಅರ್ಥ:
ವೀರ: ಶೂರ; ಏಗು: ಸಾಗಿಸು, ನಿಭಾಯಿಸು; ದೈವ: ಭಗವಂತ; ಕೂರು: ಪ್ರೀತಿ, ಮೆಚ್ಚು; ನೆಲೆ: ಭೂಮಿ; ಬೇರೆ: ಅನ್ಯ; ಒಲಿ: ಪ್ರೀತಿ; ಕಲಿ: ಶೂರ; ಬಿಸುಸುಯ್: ನಿಟ್ಟುಸಿರುಬಿಡು; ಭೂರಿ: ಹೆಚ್ಚು, ಅಧಿಕ; ಭೂಪ: ರಾಜ; ವಿಸ್ತರ: ವಿಶಾಲ; ಗಂಭೀರ: ಆಳವಾದುದು; ಸಾಗರ: ಸಮುದ್ರ; ರಣ: ಸಮುದ್ರ; ಧೀರ: ಶೂರ; ವರ: ಶ್ರೇಷ್ಠ; ತ್ರಿಗರ್ತ: ಒಂದು ದೇಶದ ಹೆಸರು; ಎದ್ದು: ಮೇಲೇಳು; ಸಭೆ: ಓಲಗ;

ಪದವಿಂಗಡಣೆ:
ವೀರರಿದ್+ಏಗುವರು +ದೈವದ
ಕೂರುಮೆಯ +ನೆಲೆ +ಬೇರೆ +ನಮಗ್+ಒಲಿದ್
ಆರು +ಮಾಡುವುದೇನ್+ಎನುತ +ಕಲಿಕರ್ಣ+ ಬಿಸುಸುಯ್ಯೆ
ಭೂರಿ +ಭೂಪರು +ವಿಸ್ತರದ +ಗಂ
ಭೀರ +ಸಾಗರದಂತಿರಲು +ರಣ
ಧೀರರ್+ಎದ್ದರು +ವರ +ತ್ರಿಗರ್ತರು +ರಾಜಸಭೆಯೊಳಗೆ

ಅಚ್ಚರಿ:
(೧) ಕೆಲಸಕ್ಕೆ ದೈವದ ಮಹತ್ವ – ವೀರರಿದ್ದೇಗುವರು ದೈವದ ಕೂರುಮೆಯ ನೆಲೆ ಬೇರೆ
(೨) ಉಪಮಾನದ ಪ್ರಯೋಗ – ಭೂರಿ ಭೂಪರು ವಿಸ್ತರದ ಗಂಭೀರ ಸಾಗರದಂತಿರಲು

ಪದ್ಯ ೩೪: ಅರ್ಜುನನು ಏನನ್ನು ಗಮನಿಸಿ ಪ್ರಶ್ನಿಸಿದನು?

ಉಳಿದ ಮೂವರು ಕಲಿತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲಕೆ ಭಂಗವ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ (ವಿರಾಟ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮ ನಕುಲ ಸಹದೇವರು ತ್ರಿಗರ್ತರನ್ನು ಗೆದ್ದ ರೀತಿಯನ್ನೂ, ಕೌರವ ಸೈನ್ಯದ ಪರಾಜಯವನ್ನು ಅರ್ಜುನನು ಹೇಳುತಿರಲು, ಧರ್ಮಜನ ಹಣೆಯ ಗಾಯವನು ನೋಡಿದನು. ಇದೇನು ಅಣ್ಣನ ಹಣೆಯಿಂದ ಚಿಕ್ಕ ರಕ್ತ ಬಿಂದುಗಳು ಒಸರುತ್ತಿವೆ ಎಂದು ಅರ್ಜುನನು ಕೇಳಿದನು.

ಅರ್ಥ:
ಉಳಿದ: ಮಿಕ್ಕ; ಕಲಿ: ಶೂರ; ತ್ರಿಗರ್ತ: ಒಂದು ದೇಶ; ಗೆಲಿದು: ಜಯಿಸು; ಪರಿ: ರೀತಿ; ಬಲ: ಸೈನ್ಯ; ಭಂಗ: ತುಂಡು, ಚೂರು; ನಿಲುಕಿ: ಮುಟ್ಟು, ತಾಗು; ರಾಯ: ರಾಜ; ಹಣೆ: ಲಲಾಟ; ಗಾಯ: ಪೆಟ್ಟು; ಬಳಿಕ: ನಂತರ; ಕಂಡು: ನೋಡು; ನೊಸಲು: ಹಣೆ; ಇಳಿ: ಕೆಳಕ್ಕೆ ಜಾರು; ನಸು: ಕೊಂಚ, ಸ್ವಲ್ಪ; ರಕ್ತ: ನೆತ್ತರು; ಬಿಂದು: ಹನಿ, ತೊಟ್ಟು;

ಪದವಿಂಗಡಣೆ:
ಉಳಿದ +ಮೂವರು +ಕಲಿ+ತ್ರಿಗರ್ತರ
ಗೆಲಿದ +ಪರಿಯನು +ಪಾರ್ಥ +ಕೌರವ
ಬಲಕೆ+ ಭಂಗವ +ತಂದ +ಪರಿಯನು +ಹೇಳುತಿರುತಿರಲು
ನಿಲುಕಿ+ ರಾಯನ +ಹಣೆಯ +ಗಾಯವ
ಬಳಿಕ+ ಕಂಡನ್+ಇದೇನು +ನೊಸಲಿಂದ್
ಇಳಿವುತಿದೆ +ನಸು +ರಕ್ತಬಿಂದುಗಳ್+ಎಂದನಾ +ಪಾರ್ಥ

ಅಚ್ಚರಿ:
(೧) ತ್ರಿಗರ್ತರ ಗೆಲಿದ ಪರಿ, ಕೌರವ ಬಲಕೆ ಭಂಗ ತಂದ ಪರಿ – ಪರಿ ಪದದ ಬಳಕೆ
(೨) ಹಣೆ, ನೊಸಲು – ಸಮನಾರ್ಥಕ ಪದ

ಪದ್ಯ ೪: ಅರ್ಜುನನ ಯೋಚನಾ ಲಹರಿ ಹೇಗಿತ್ತು?

ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲವಿರಾಟಂಗವನ ದೆಸೆಯಿಂ ಭಯವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ (ವಿರಾಟ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕೀಚಕನು ಕೌರವರ ರಾಜ್ಯದಲ್ಲಿ ನುಗ್ಗಿ ಗೋಗ್ರಹಣ ಮಾದಿ ಅವರಿಗೆ ಶತ್ರುವಾಗಿರುವ ಬಲಶಾಲಿ, ಅವನ ದೆಸೆಯಿಂದ ವಿರಾಟನಿಗೆ ಬಲ ಬಂದಿದೆ. ಕರ್ನ, ತ್ರಿಗರ್ತರು ಮೊದಲಾದ ಕೌರವರ ಮಾಂಡಲಿಕರನ್ನು ಲೆಕ್ಕಿಸದೆ ವಿರಾಟನು ಪಶ್ಚಿಮದಲ್ಲಿ ಆಳುತ್ತಾನೆ, ಆದ್ದರಿಂದ ನಾವು ಮತ್ಸ್ಯನಗರಿಯಲ್ಲಿ ಅಜ್ಞಾತವಾಸವನ್ನು ಕಳೆಯಬಹುದೆಂದು ಅರ್ಜುನನು ಹೇಳಿದನು.

ಅರ್ಥ:
ವಳಿ: ತಿರುಗಿದುದು; ಹೊಕ್ಕು: ನುಗ್ಗು; ಹಗೆ: ವೈರಿ; ಬಲ: ಸೈನ್ಯ; ದೆಸೆ: ರೀತಿ, ಕಾರಣ, ನಿಮಿತ್ತ; ಭಯ: ಅಂಜಿಕೆ; ವಿಹೀನ: ಇಲ್ಲದಿರುವ; ಮುಳಿ: ಸಿಟ್ಟು, ಕೋಪ; ರವಿಸುತ: ಸೂರ್ಯನ ಮಗ (ಕರ್ಣ); ಕಲಿ: ಶೂರ; ಆದಿ: ಮುಂತಾದ; ಮಂಡಳಿಕ: ಸಾಮಂತ ರಾಜ; ಕೈಕೊಳ್ಳು: ಸ್ವೀಕರಿಸು; ಆಳು: ಅಧಿಕಾರ ನಡೆಸು; ಪಶ್ಚಿಮ: ಪಡುವಣ;

ಪದವಿಂಗಡಣೆ:
ವಳಿತವನು +ಹೊಕ್ಕ್+ಇರಿದು +ಕೌರವ
ರೊಳಗೆ+ ಹಗೆಯಾಗಿಹನು +ಕೀಚಕ
ಬಲ+ವಿರಾಟಂಗ್+ಅವನ+ ದೆಸೆಯಿಂ +ಭಯ+ವಿಹೀನವದು
ಮುಳಿದು +ಹೇಳಿಕೆಯಾದ +ರವಿಸುತ
ಕಲಿ+ತ್ರಿಗರ್ತಾದಿಗಳ್+ಎನಿಪ +ಮಂ
ಡಳಿಕರನು +ಕೈಕೊಳ್ಳದ್+ಆಳುವರ್+ಅವರು+ ಪಶ್ಚಿಮವ

ಅಚ್ಚರಿ:
(೧) ವಿರಾಟನಿಗೆ ಧೈರ್ಯ ಬರಲು ಕಾರಣ – ಕೀಚಕ ಬಲ ವಿರಾಟಂಗವನ ದೆಸೆಯಿಂ ಭಯವಿಹೀನವದು

ಪದ್ಯ ೪೫: ಆಸ್ಥಾನದಲ್ಲಿ ಯಾವ ದೇಶದ ರಾಜರಿದ್ದರು?

ಮುರಿದು ನೋಡಿದರಖಿಳ ರಾಯರು
ಶಿರವ ಬಾಗಲು ಲಾಳ ಮಾಳವ
ತುರುಕ ಕೊಂಕಣ ಗೌಳ ಗೂರ್ಜರ ವಂಗ ಹಮ್ಮೀರ
ವರತ್ರಿಗರ್ತರು ನೆರೆದು ಜೀಯೆನು
ತಿರಲು ಕೋಮಲಿಕೆಯರು ಸಿತ ಚಾ
ಮರವ ಚಿಮ್ಮಲು ಭೂಪ ಮೆರೆದನು ಸಿಂಹಪೀಠದಲಿ (ಉದ್ಯೋಗ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿ ನೆರೆದಿದ್ದ ಎಲ್ಲಾ ರಾಜರು ತಮ್ಮ ಶಿರವನ್ನು ಬಾಗಿ ನೋಡಲು, ಲಾಳ, ಮಾಳವ, ತುರುಕ, ಕೊಂಕಣ, ಗೌಳ, ಗೂರ್ಜರ, ವಂಗ, ಹಮ್ಮೀರ, ತ್ರಿಗರ್ತ ಹೀಗೆ ಹಲವಾರು ದೇಶದಿಂದ ಬಂದಿದ್ದ ರಾಜರು ಜಯಘೋಷನುಡಿಯುತ್ತಿರಲು, ಸುಂದರಿಯರು ಬಿಳಿಯ ಚಾಮರವನ್ನು ಬೀಸುತ್ತಾ ಗಾಳಿಯನ್ನು ಎಲ್ಲೆಡೆ ಪಸರಿಸಲು, ಧೃತರಾಷ್ಟ್ರನು ಸಿಂಹಾಸನದಮೇಲೆ ಆಸಿನನಾದನು.

ಅರ್ಥ:
ಮುರಿ: ತಿರುಗಿಸು, ಬಾಗು; ನೋಡು: ವೀಕ್ಷಿಸು; ಅಖಿಳ: ಎಲ್ಲಾ, ಸರ್ವ; ರಾಯ: ರಾಜ; ಶಿರ: ತಲೆ; ಬಾಗು: ಕೆಳಗೆ ನೋಡು; ವರ: ಶ್ರೇಷ್ಠ; ನೆರೆದು: ಸೇರು; ಜೀ: ಜಯಘೋಷ; ಕೋಮಲಿಕೆ: ಸುಂದರಿ; ಸಿತ: ಬಿಳಿ; ಚಾಮರ: ಬೀಸಣಿಕೆ; ಚಿಮ್ಮು: ಹೊರಹೊಮ್ಮು; ಭೂಪ: ರಾಜ; ಮೆರೆ: ಶೋಭಿಸು; ಸಿಂಹಪೀಠ: ಸಿಂಹಾಸನ;

ಪದವಿಂಗಡಣೆ:
ಮುರಿದು +ನೋಡಿದರ್+ಅಖಿಳ +ರಾಯರು
ಶಿರವ +ಬಾಗಲು +ಲಾಳ +ಮಾಳವ
ತುರುಕ+ ಕೊಂಕಣ+ ಗೌಳ +ಗೂರ್ಜರ+ ವಂಗ +ಹಮ್ಮೀರ
ವರ+ ತ್ರಿಗರ್ತರು +ನೆರೆದು+ ಜೀಯೆನು
ತಿರಲು+ ಕೋಮಲಿಕೆಯರು+ ಸಿತ+ ಚಾ
ಮರವ +ಚಿಮ್ಮಲು +ಭೂಪ +ಮೆರೆದನು+ ಸಿಂಹಪೀಠದಲಿ

ಅಚ್ಚರಿ:
(೧) ದೇಶದ ಹೆಸರುಗಳ ಪರಿಚಯ ಮಾಡಿಸುವ ಪದ್ಯ – ಲಾಳ, ಮಾಳವ, ತುರುಕ, ಕೊಂಕಣ, ಗೌಳ, ಗೂರ್ಜರ, ವಂಗ, ಹಮ್ಮೀರ, ತ್ರಿಗರ್ತ
(೨) ರಾಯ, ಭೂಪ, ಜೀಯ – ಸಮಾನಾರ್ಥಕ ಪದ

ಪದ್ಯ ೫೫: ಸುಶರ್ಮನ ಸೇನೆಯು ಹೇಗೆ ಭಂಗಹೊಂದಿತು?

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲುದಳ ಕವಿದುದು ಮಹಾರಥ
ರೇಳುಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು (ವಿರಾಟ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಮುಂಭಾಗದ ಸೈನ್ಯವನ್ನು ನಾಶವಾಗಿ, ನಾಯಕರು ಯುದ್ಧಕ್ಕಿಳಿದರು. ರಥಗಳು ಯುದ್ಧಕ್ಕೆ ನುಗ್ಗಿದವು. ಏಳು ಸಾವಿರ ಮಹಾ ಪರಾಕ್ರಮಶಾಲಿಗಳು ಕಾಳಗದಲ್ಲಿ ಹಿಮ್ಮೆಟ್ಟಲು ಸುಶರ್ಮನ ಸೈನ್ಯವು ಭಂಗ ಹೊಂದಿತು.

ಅರ್ಥ:
ಚೂಳಿಕೆ: ಮುಡಿಗೆ ಸಿಕ್ಕಿಸುವ ಹೂವಿನ ಅಥವ ಮುತ್ತಿನ ಗೊಂಡೆ; ಬಲ: ಶಕ್ತಿ; ಮುರಿ: ಸೀಳು; ದೊರೆ: ರಾಜ; ಬಿದ್ದು: ಬೀಳು, ಆಕ್ರಮಣ ಮಾಡು; ಬವರ:ಕಾಳಗ, ಯುದ್ಧ; ಬಳಿಕ: ನಂತರ; ಕೆಚ್ಚು: ಧೈರ್ಯ, ಸಾಹಸ; ಹೊಕ್ಕು: ಸೇರು, ಓತ; ದುವ್ವಾಳಿ:ತೀವ್ರಗತಿ, ವೇಗವಾದ ನಡೆ, ಓಟ; ನಿಜ: ತನ್ನ; ರಥ: ಬಂಡಿ; ಮೇಲು: ಅಗ್ರಭಾಗ; ಕವಿ: ಮುಸುಕು; ಮಹಾ: ಶ್ರೇಷ್ಠ; ಭೂಪ: ರಾಜ; ಕಾಳಗ: ಯುದ್ಧ; ತೆಗೆ: ಹೊರತರು; ಸೇನೆ: ಸೈನ್ಯ; ಮುರಿ:ಬಗ್ಗು;

ಪದವಿಂಗಡಣೆ:
ಚೂಳಿಕೆಯ +ಬಲ +ಮುರಿದು +ದೊರೆಗಳ
ಮೇಲೆ +ಬಿದ್ದುದು +ಬವರ +ಬಳಿ+ಕೆ
ಚ್ಚಾಳು+ತನದಲಿ+ ಹೊಕ್ಕು +ದುವ್ವಾಳಿಸುವ +ನಿಜರಥದ
ಮೇಲುದಳ+ ಕವಿದುದು +ಮಹಾರಥರ್
ಏಳುಸಾವಿರ+ ಮತ್ಸ್ಯಭೂಪನ
ಕಾಳಗಕೆ+ ತೆಗೆದರು+ ತ್ರಿಗರ್ತರ +ಸೇನೆ +ಮುರಿವಡೆದು

ಅಚ್ಚರಿ:
(೧) ‘ಬ’ ಕಾರದ ಜೋಡಿ ಪದ – ಬಿದ್ದುದು ಬವರ ಬಳಿಕೆ
(೨) ನಿಜರಥ, ಮಹಾರಥ – ರಥ ಪದದ ಬಳಕೆ

ಪದ್ಯ ೪: ಕೌರವನು ಏಕೆ ಮೌನಕ್ಕೆ ಶರಣಾದನು?

ಒಂದು ವಾರ್ತೆಯಲೈ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೌನವ ಹಿಡಿದು ಬೆರಗಾದ (ವಿರಾಟ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಒಬ್ಬ ದೂತನು, “ತ್ರಿಗರ್ತರಿಗೆ ಆನಂದಕರವಾದ ಒಂದು ಸುದ್ದಿಯಿದೆ. ಅವರ ಶತ್ರುವಾದ ಕೀಚಕನನ್ನು ಗಂಧರ್ವರು ಒಂದು ರಾತ್ರಿಯಲ್ಲಿ ಕೊಂದು ಹೋದರು. ಹಿಂದೆ ರಾವಣನಿಗಾದ ಗತಿಯೇ ಈಗ ಕೀಚಕನಿಗಾಯಿತು”, ಎಂದು ಹೇಳಲು ದುರ್ಯೋಧನನು ಬೆರಗಾಗಿ ಒಂದು ನಿಮಿಷ ಮೌನದಿಂದಿದ್ದನು.

ಅರ್ಥ:
ವಾರ್ತೆ: ಸುದ್ದಿ; ತ್ರಿ: ಮೂರು; ನಂದಕ: ಸಂತೋಷ, ಆನಂದ; ಜೀಯ: ಒಡೆಯ; ವೃಂದ: ಗುಂಪು; ಇರುಳು: ರಾತ್ರಿ; ಖಾತಿ: ಕೋಪ; ಕೊಂದು: ಸಾಯಿಸಿ; ವಿಧಿ: ನಿಯಮ; ನಿಮಿಷ: ಕಾಲದ ಒಂದು ಪ್ರಮಾಣ; ಮಹೀಶ: ರಾಜ; ಮೌನ: ಮಾತನಾಡದೆ ಇರುವುದು; ಹಿಡಿದು: ತಾಳಿ; ಬೆರಗು: ಆಶ್ಚರ್ಯ; ತ್ರಿಗರ್ತ: ಒಂದು ದೇಶ;

ಪದವಿಂಗಡಣೆ:
ಒಂದು +ವಾರ್ತೆಯಲೈ +ತ್ರಿಗರ್ತ
ಆನಂದಕರವಿದು+ ಜೀಯ +ಕೀಚಕ
ವೃಂದವನು +ಗಂಧರ್ವರ್+ಇರುಳ್+ಐತಂದು +ಖಾತಿಯಲಿ
ಕೊಂದು +ಹೋದರು +ರಾವಣನ +ವಿಧಿ
ಯಿಂದು +ಕೀಚಕಗಾಯಿತ್+ಎನೆ+ ಕೇಳ್ದ್
ಒಂದು +ನಿಮಿಷ+ ಮಹೀಶ+ ಮೌನವ+ ಹಿಡಿದು+ ಬೆರಗಾದ

ಅಚ್ಚರಿ:
(೧) ಮಹೀಶ, ಜೀಯ – ದುರ್ಯೋಧನನನ್ನು ಸಂಭೋದಿಸುವ ಬಗೆ
(೨) ಒಂದು – ೧, ೬ ಸಾಲಿನ ಮೊದಲ ಪದ
(೩) ಒಂದು, ಕೊಂದು, ಇಂದು – ಪ್ರಾಸ ಪದಗಳು