ಪದ್ಯ ೪೧: ಭೀಮನು ನಡುಗಿಕೊಂಡು ಯಾರ ಪಾದಗಳ ಮೇಲೆ ಬಿದ್ದನು?

ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಿಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ (ಗದಾ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಶಕ್ತಿಯು ಇಮ್ಮಡಿಯಾಯಿತು. ಕೋಪ ಮತ್ಸರಗಳಿಂದ ಅವನು ಜೋರಾಗಿ ಬಿಗಿದಪ್ಪಿಕೊಳ್ಳಲು ಉಕ್ಕಿನ ಪ್ರತಿಮೆ ಪುಡಿಪುಡಿಯಾಯಿತು. ಆಗ ಕೃಷ್ಣನು, ಭೀಮ ಭಯವನ್ನು ಬಿಡು, ಧೃತರಾಷ್ಟ್ರನನ್ನು ನೋಡುಹೋಗು, ಎನ್ನಲು ಭೀಮನು ನಡುಗಿ ಧೃತರಾಷ್ಟ್ರನ ಪಾದಗಳ ಮೇಲೆ ಬಿದ್ದನು.

ಅರ್ಥ:
ತ್ರಾಣ: ಕಾಪು, ರಕ್ಷಣೆ, ಶಕ್ತಿ; ಇಮ್ಮಡಿಸು: ಹೆಚ್ಚಾಗು; ಕೋಪ: ರೋಷ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಎಚ್ಚರಿಸು: ಏಳು; ನೃಪ: ರಾಜ; ತನಿ: ಹೆಚ್ಚಾಗು, ಅತಿಶಯವಾಗು; ಬಿಗಿ: ಗಟ್ಟಿ; ನುಗ್ಗು: ನೂಕಾಟ, ನೂಕುನುಗ್ಗಲು; ಆಯಸ: ಕಬ್ಬಿಣದ ಆಯುಧ; ಪ್ರತಿಮೆ: ವಿಗ್ರಹ, ಬೊಂಬೆ; ಮಾಣು: ನಿಲ್ಲಿಸು; ಭಯ: ಅಂಜಿಕೆ; ಭೂಪ: ರಾಜ; ಕಾಣು: ತೋರು; ನಡುಗು: ಕಂಪನ, ಹೆದರು; ಭುವನ: ಜಗತ್ತು, ಪ್ರಪಂಚ; ಪ್ರಾಣ: ಜೀವ; ಆತ್ಮಜ: ಮಗ; ಬಿದ್ದು: ಎರಗು; ಅಂಘ್ರಿ: ಪಾದ;

ಪದವಿಂಗಡಣೆ:
ತ್ರಾಣವ್+ಇಮ್ಮಡಿಸಿತ್ತು +ಕೋಪದ
ಕೇಣವ್+ಎಚ್ಚರಿಸಿದಡೆ +ನೃಪ +ಸ
ತ್ರಾಣದಲಿ +ತನಿಬಿಗಿಯೆ +ನುಗ್ಗಾಯ್ತ +ಆಯಸ +ಪ್ರತಿಮೆ
ಮಾಣು +ಭಯವನು +ಭೀಮ +ಭೂಪನ
ಕಾಣು +ಹೋಗ್+ ಎನೆ +ನಡುಗಿ +ಭುವನ
ಪ್ರಾಣನ್+ಆತ್ಮಜ+ ಬಿದ್ದನಾ +ಧೃತರಾಷ್ಟ್ರನ್+ಅಂಘ್ರಿಯಲಿ

ಅಚ್ಚರಿ:
(೧) ಭೀಮನನ್ನು ಭುವನಪ್ರಾಣನಾತ್ಮಜ ಎಂದು ಕರೆದಿರುವುದು
(೨) ತ್ರಾಣ, ಕೇಣ, ಸತ್ರಾಣ, ಪ್ರಾಣ – ಪ್ರಾಸ ಪದಗಳು

ಪದ್ಯ ೪೮: ಭೀಮನು ತನ್ನ ದೇಹವನ್ನು ಹೇಗೆ ಸಂತೈಸಿಕೊಂಡನು?

ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ (ಗದಾ ಪರ್ವ, ೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನ ಸತ್ವವು ಇಮ್ಮಡಿಯಾಯಿತು ತಿಗುರಿದ್ದ ಕೊರಳು ಸರಿಯಾಯಿತು. ಕೋಪಾಗ್ನಿಗೆ ಸಾಣೆಹಿಡಿದಂತಾಯಿತು. ಕಣ್ಣುಗಳು ಕೆಂಪಾದ ಉರಿಯನ್ನು ಸೂಸಿದವು. ಭೀಮನ ಗದೆ ಕೈಯಿಮ್ದ ಹಾರಿಹೋಗಿತ್ತು. ಯುದ್ಧಚಾತುರ್ಯ ಮಾಸಿತ್ತು. ಮಾನಭಂಗವಾಗಿತ್ತು. ಭೀಮನು ಅವೆಲ್ಲವನ್ನು ಕಳೆದುಕೊಂಡು ದೇಹವನ್ನು ಸಂತೈಸಿಕೊಂಡನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಇಮ್ಮಡಿ: ಎರಡು ಪಟ್ಟು; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಗೋಣು: ಕಂಠ, ಕುತ್ತಿಗೆ; ಮರಳು: ಹಿಂದಿರುಗು; ರೋಷ: ಕೋಪ; ವಹ್ನಿ: ಬೆಂಕಿ; ಸಾಣೆ: ಉಜ್ಜುವ ಕಲ್ಲು; ಕಣ್ಣು: ನಯನ; ಉಗುಳು: ಹೊರಹೊಮ್ಮು; ಕೇಸುರಿ: ಕೆಂಪಾದ ಬಣ್ಣ; ಠಾಣ: ಜಾಗ, ಸ್ಥಳ; ಎಡಹು: ಜಾರಿಹೋಗು; ಗದೆ: ಮುದ್ಗರ; ರಣ: ಯುದ್ಧಭೂಮಿ; ಬಿನ್ನಾಣ: ಗಾಢವಾದ ತಿಳುವಳಿಕೆ; ಮಸುಳು: ಕಾಂತಿಹೀನವಾಗು, ಮಂಕಾಗು; ಮಾನ: ಮರ್ಯಾದೆ, ಗೌರವ; ಮರ್ದನ: ಪುಡಿ ಮಾಡುವುದು; ಊಣೆ: ನ್ಯೂನ್ಯತೆ; ವ್ಯಥೆ: ದುಃಖ; ಭಟ: ಪರಾಕ್ರಮಿ; ಸಂತೈಸು: ಸಮಾಧಾನ ಪಡಿಸು; ತನು: ದೇಹ;

ಪದವಿಂಗಡಣೆ:
ತ್ರಾಣವ್+ಇಮ್ಮಡಿಯಾಯ್ತು +ತಿರುಗಿದ
ಗೋಣು +ಮರಳಿತು +ರೋಷ+ವಹ್ನಿಗೆ
ಸಾಣೆವಿಡಿದವೊಲಾಯ್ತು +ಕಣ್ಣ್+ಉಗುಳಿದುವು +ಕೇಸುರಿಯ
ಠಾಣವೆಡಹಿದ+ ಗದೆಯ +ರಣ+ಬಿ
ನ್ನಾಣ +ಮಸುಳಿದ +ಮಾನ+ಮರ್ದನದ್
ಊಣೆಯದ +ಸವ್ಯಥೆಯ +ಭಟ +ಸಂತೈಸಿದನು + ತನುವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರೋಷವಹ್ನಿಗೆ ಸಾಣೆವಿಡಿದವೊಲಾಯ್ತು

ಪದ್ಯ ೨೨: ಮಹಾರಥರು ಹೇಗೆ ಸೋಲನ್ನುಂಡಿದರು?

ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯವು ಘಾಸಿಯಾಯಿತು. ಧೂ, ಈ ದುರ್ಗತಿಯನ್ನು ಸುಡಲಿ ಎಂದು ಸುಭಟರು ದ್ರೋಣನನ್ನೆದುರಿಸಿ ಕಾದಿದರು. ಅಷ್ಟೇ ಅವರ ಸತ್ವ ತ್ರಾಣಗಳು ಅಲ್ಲಿ ಏನೂ ಮಾಡಲಿಲ್ಲ. ಮುನ್ನುಗ್ಗುವ ಬಾಣಗಳ ಸೊಗಡು ಹೊಯ್ದು ಅವರು ನಗೆಗೀಡಾದರು. ಮಹಾರಥರು ಇಂತಹ ಸೋಲು ಅಪಮಾನಗಳನ್ನು ಎಂದೂ ಕಂಡಿರಲಿಲ್ಲ.

ಅರ್ಥ:
ಘಾಸಿ: ಆಯಾಸ, ದಣಿವು; ಸೇನೆ: ಸೈನ್ಯ; ಸುಡು: ದಹಿಸು; ಸುಭಟ: ಪರಾಕ್ರಮ; ಇದಿರು: ಎದುರು; ಕಾದು: ಹೋರಾಟ, ಯುದ್ಧ; ಐಸೆ: ಅಷ್ಟು; ಬಳಿಕ: ನಮ್ತರ; ಸತ್ವ: ಶಕ್ತಿ, ಬಲ; ತ್ರಾಣ: ಕಾಪು, ರಕ್ಷಣೆ; ಸೂಸು: ಎರಚು, ಚಲ್ಲು; ಕಣೆ: ಬಾಣ; ಸೊಗಡು: ಕಂಪು, ವಾಸನೆ; ಹೊಯ್ದು: ಹೊಡೆ; ಹಾಸ: ಸಂತೋಷ; ಮಹಾರಥ: ಪರಾಕ್ರಮಿ; ಭಂಗ: ಮುರಿಯುವಿಕೆ; ನೃಪಾಲ: ರಾಜ; ಕೇಳು: ಹೇಳು;

ಪದವಿಂಗಡಣೆ:
ಘಾಸಿಯಾದುದು+ ಸೇನೆ +ಸುಡಲೆನು
ತಾ +ಸುಭಟರ್+ಇದಿರಾಗಿ +ಕಾದಿದರ್
ಐಸೆ +ಬಳಿಕೇನ್+ಅವರ +ಸತ್ವತ್ರಾಣವೇನಲ್ಲಿ
ಸೂಸು+ಕಣೆಗಳ +ಸೊಗಡು +ಹೊಯ್ದ್+ಉಪ
ಹಾಸಕೊಳಗಾದರು+ ಮಹಾರಥರ್
ಈಸು +ಭಂಗಕೆ +ಬಂದುದಿಲ್ಲ +ನೃಪಾಲ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೇನೆ ಸುಡಲೆನುತಾ ಸುಭಟರಿದಿರಾಗಿ

ಪದ್ಯ ೩೮: ಅಶ್ವತ್ಥಾಮನು ಸೈನಿಕರಿಗೆ ಏನು ಹೇಳಿದ?

ತ್ರಾಣ ಕೋಮಲವಾಯ್ತು ತೆಗೆಯಲಿ
ದ್ರೋಣನಾವೆಡೆ ಪಾಯದಳ ಬಿಡು
ಹೂಣಿಗರ ಬರಹೇಳು ಬಾಣದ ಬಂಡಿ ಸಾವಿರವ
ಶೋಣಿತದ ಸಾಗರದಿನವನಿಯ
ಕಾಣೆ ಹೂಳಲಿ ಪಾದರಜದಲಿ
ಕೇಣಿಗೊಂಡನು ವೈರಿಸೇನೆಯನಮಮ ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ದ್ರೋಣನು ಆಯಾಸಗೊಂಡಿರಲು, ಅಶ್ವತ್ಥಾಮನು ತಂದೆಯು ತ್ರಾನಗುಂದಿದ್ದಾನೆ, ಅವನನ್ನು ತೆಗೀಸಿ, ಕಾಲಾಳುಗಳನ್ನು ಮುಂದೆ ಬಿಡಿ, ಸಾವಿರ ಬಾಣದ ಬಂಡಿಗಳನ್ನೂ, ವೀರರನ್ನೂ ಬರಹೇಳಿ, ರಕ್ತ ಸಾಗರದಲ್ಲಿ ಭೂಮಿಯೇ ಕಾಣುತ್ತಿಲ್ಲ, ನಮ್ಮ ಸೈನ್ಯದ ಕಾಲು ತುಳಿತದಿಂದೆದ್ದ ಧೂಳು ಆ ರಕ್ತವನ್ನು ಕುಡಿಯಲಿ, ಅಬ್ಬ, ಅರ್ಜುನನು ಸಂಹಾರ ಮಾಡಲು ಶತ್ರು ಸೈನ್ಯದ ಗೆಳೆಯರನ್ನು ತೆಗೆದುಕೊಂಡಿದ್ದಾನೆ ಎಂದು ನುಡಿದನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಕೋಮಲ: ಮೃದು; ತೆಗೆ: ಹೊರತರು; ಪಾಯದಳ: ಸೈನಿಕ; ಬಿಡು: ತೊರೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಬರಹೇಳು: ಆಗಮಿಸು; ಬಾಣ: ಅಂಬು; ಬಂಡಿ: ರಥ; ಸಾವಿರ: ಸಹಸ್ರ; ಶೋಣಿತ: ರಕ್ತ; ಸಾಗರ: ಸಮುದ್ರ; ಅವನಿ: ಭೂಮಿ; ಕಾಣೆ: ತೋರದು; ಹೂಳು: ಮುಚ್ಚು; ಪಾದ: ಚರಣ; ರಜ: ಧೂಳು; ಕೇಣಿ: ಮೈತ್ರಿ, ಗೆಳೆತನ; ವೈರಿ: ಶತ್ರು; ಸೇನೆ: ಸೈನ್ಯ; ಅಮಮ: ಅಬ್ಬಬ್ಬ; ಕಲಿ: ಶೂರ;

ಪದವಿಂಗಡಣೆ:
ತ್ರಾಣ +ಕೋಮಲವಾಯ್ತು +ತೆಗೆಯಲಿ
ದ್ರೋಣನ್+ಆವೆಡೆ +ಪಾಯದಳ +ಬಿಡು
ಹೂಣಿಗರ +ಬರಹೇಳು +ಬಾಣದ +ಬಂಡಿ +ಸಾವಿರವ
ಶೋಣಿತದ +ಸಾಗರದಿನ್+ಅವನಿಯ
ಕಾಣೆ +ಹೂಳಲಿ +ಪಾದ+ರಜದಲಿ
ಕೇಣಿ+ಕೊಂಡನು +ವೈರಿ+ಸೇನೆಯನ್+ಅಮಮ +ಕಲಿ +ಪಾರ್ಥ

ಅಚ್ಚರಿ:
(೧) ಯುದ್ಧದ ತೀವ್ರತೆ – ಶೋಣಿತದ ಸಾಗರದಿನವನಿಯ ಕಾಣೆ

ಪದ್ಯ ೪೭: ಧರ್ಮಜನು ನಹುಷನಿಗೆ ಏನು ಹೇಳಿದನು?

ಉಸುರಬಹುದೇ ಧರ್ಮತತ್ತ್ವ
ಪ್ರಸರಣವಿದೇಯೆಂದು ನೀ ಶಂ
ಕಿಸಲು ವೇದಸ್ಮೃತಿ ಪುರಾಣ ತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮವನರುಹುವೆನು ನೀ
ಬೆಸಗೊಳೆಂದನು ಧರ್ಮಸುತ ನಹುಷಂಗೆ ವಿನಯದಲಿ (ಅರಣ್ಯ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಸರ್ಪನ ರೂಪದಲ್ಲಿದ್ದ ನಹುಷನನ್ನುದ್ದೇಶಿಸಿ ಧರ್ಮಜನು ತನ್ನ ವಿಚಾರವನ್ನು ಹೇಳಲು ಪ್ರಾರಂಭಿಸಿದನು. ಧರ್ಮ ತತ್ತ್ವವು ಇದೇ, ಇದರ ವ್ಯಾಪ್ತಿಯಿಷ್ಟೇ ಎಂದು ಹೇಳಲು ಸಾಧ್ಯವೇ? ವೇದಗಳು ಸ್ಮೃತಿಗಳು, ಪುರಾಣಗಳು ಇದೇ ಧರ್ಮವೆಂದು ಹೇಳುವವನ ಮಾತನ್ನು ತಿರಸ್ಕರಿಸುವುದಿಲ್ಲವೇ? ವಿಪ್ರರಾದವರ ಮತಿಗೆ ಗೋಚರವಾದ ಧರ್ಮಮಾರ್ಗವನ್ನು ಅವರಿಂದ ಕೇಳಿ ತಿಳಿದ ವಿಷಯವನ್ನು ಹೇಳುತ್ತೇನೆ, ನೀನು ಕೇಳು ಎಂದು ಧರ್ಮಜನು ಹೇಳಿದನು.

ಅರ್ಥ:
ಉಸುರ: ಹೇಳು, ಮಾತನಾಡು; ಧರ್ಮ: ಧಾರಣೆ ಮಾಡಿದುದು; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ಸಾರ; ಪ್ರಸರಣ: ಹರಡುವಿಕೆ, ಪ್ರಸಾರ; ಶಂಕೆ: ಸಂದೇಹ, ಸಂಶಯ; ವೇದ: ಶೃತಿ; ಸ್ಮೃತಿ: ಧರ್ಮಶಾಸ್ತ್ರ; ಪುರಾಣ: ಇತಿಹಾಸ; ತ್ರಾಣ: ಕಾಪು, ರಕ್ಷಣೆ, ಶಕ್ತಿ; ತುಟ್ಟಿಸು: ಕಡಿಮೆಯಾಗು, ಕುಂದು; ಎಸೆ: ಶೋಭಿಸು; ಒಗೆ; ವಿಪ್ರ: ಬ್ರಾಹ್ಮಣ; ಮತಿ: ಬುದ್ಧಿ; ಸಂಭಾವಿಸು: ಯೋಚಿಸು, ತೃಪ್ತಿಪಡಿಸು; ಅರುಹು: ತಿಳಿಸು; ಬೆಸ: ಅಪ್ಪಣೆ, ಕೇಳು; ಸುತ: ಮಗ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಉಸುರಬಹುದೇ+ ಧರ್ಮತತ್ತ್ವ
ಪ್ರಸರಣವ್+ಇದೇ+ಎಂದು +ನೀ +ಶಂ
ಕಿಸಲು +ವೇದಸ್ಮೃತಿ +ಪುರಾಣ +ತ್ರಾಣ +ತುಟ್ಟಿಸದೆ
ಎಸೆವ +ವಿಪ್ರರ +ಮತಿಗೆ +ಸಂಭಾ
ವಿಸುವ +ಧರ್ಮವನ್+ಅರುಹುವೆನು +ನೀ
ಬೆಸಗೊಳೆಂದನು +ಧರ್ಮಸುತ +ನಹುಷಂಗೆ +ವಿನಯದಲಿ

ಅಚ್ಚರಿ:
(೧) ಧರ್ಮದ ಬಗ್ಗೆ ಧರ್ಮಜ ಹೇಳಿದುದು – ಎಸೆವ ವಿಪ್ರರ ಮತಿಗೆ ಸಂಭಾವಿಸುವ ಧರ್ಮವನರುಹುವೆನು

ಪದ್ಯ ೩೪: ಶಿವನು ಪಾರ್ವತಿಗೆ ಅರ್ಜುನನ ಸಾಹಸದ ಬಗ್ಗೆ ಏನು ಹೇಳಿದ?

ತ್ರಾಣವೆಂತುಟೊ ಶಿವ ಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝಪೂತು ಜಗಜಟ್ಟಿ
ಕಾಣೆ ನಿನಗೆ ಸಮಾನರನು ಶಿವ
ನಾಣೆ ಗುಣದಲಸೂಯ ತವೇ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಿವ ಶಿವಾ ನಿನಗೆ ಶಕ್ತಿ ಎಷ್ಟು ಇದೆಯೋ ಏನೋ? ನೀನು ಮಹಾ ಸತ್ವಶಾಲಿ, ಬಹು ದಿವಸ ನಿನಗೆ ಗಾಳಿಯೇ ಆಹಾರವಲ್ಲವೇ? ಭಲೇ ಭಲೇ ಎಲೈ ಜಗಜಟ್ಟಿ, ನಿನಗೆ ಸಮಾನರಿಲ್ಲ ಎಂದು ಅರ್ಜುನನಿಗೆ ಹೇಳಿ ಪಾರ್ವತಿಯ ಕಡೆಗೆ ತಿರುಗಿ, ಶಬರೀ ನನ್ನಾಣೆ, ಶಿವನಾಣೆ ಇವನ ಗುಣಕ್ಕೆ ಮತ್ಸರವೇ ಎಂದು ನಗುತ್ತಾ ಹೇಳಿದನು.

ಅರ್ಥ:
ತ್ರಾಣ: ಶಕ್ತಿ, ಬಲ; ಸತ್ರಾಣ: ಸಶಕ್ತ, ಬಲಶಾಲಿ; ಬಹು: ಬಹಳ; ದಿವಸ: ದಿನ; ಭುವನ: ಜಗತ್ತು, ಪ್ರಪಂಚ; ಪ್ರಾಣ: ವಾಯು; ಪೋಷಣ: ಆಹಾರ; ಮಝುಪೂತು: ಭಲೇ, ಕೊಂಡಾಟದ ನುಡಿ; ಜಗಜಟ್ಟಿ: ವೀರ; ಕಾಣೆ: ತೋರದು; ಸಮಾನ: ಸರಿಹೊಂದುವ; ಆಣೆ: ಪ್ರಮಾಣ; ಗುಣ: ನಡತೆ, ಸ್ವಭಾವ; ಅಸೂಯೆ: ಮತ್ಸರ; ನೋಡು: ವೀಕ್ಷಿಸು; ಶಬರಿ: ಬೇಡತಿ; ನಗು: ಸಂತಸ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ತ್ರಾಣವೆಂತುಟೊ+ ಶಿವ +ಶಿವಾ +ಸ
ತ್ರಾಣನಹೆ+ ಬಹುದಿವಸ +ಭುವನ
ಪ್ರಾಣವೇ +ಪೋಷಣವಲಾ+ ಮಝಪೂತು +ಜಗಜಟ್ಟಿ
ಕಾಣೆ+ ನಿನಗೆ+ ಸಮಾನರನು+ ಶಿವ
ನಾಣೆ +ಗುಣದಲ್+ಅಸೂಯ +ತವ
ಎನ್ನಾಣೆ +ನೋಡೌ +ಶಬರಿ+ಎಂದನು +ನಗುತ+ ಮದನಾರಿ

ಅಚ್ಚರಿ:
(೧) ತ್ರಾಣ, ಸತ್ರಾಣ, ಪ್ರಾಣ; ಆಣೆ, ಕಾಣೆ – ಪ್ರಾಸ ಪದಗಳು