ಪದ್ಯ ೪೫: ಶಲ್ಯನು ವೈರಿಸೈನ್ಯವನ್ನು ಹೇಗೆ ನಾಶಮಾಡಿದನು?

ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ (ಶಲ್ಯ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಲೆವರಿಗೆ ಹಿಡಿದ ಪದಾತಿದಳವನ್ನು ಶಲ್ಯನು ಕಡಿದು ಬಿಸುಟನು. ಮುತ್ತಿದ ಕುದುರೆಗಳ ಕಾಲ್ಗೊರಸುಗಳನ್ನು ಕತ್ತರಿಸಿದನು. ಬೆಟ್ಟದಂತಹ ಆನೆಗಳನ್ನೂ, ರಥದ ಕುದುರೆಗಳನ್ನೂ, ಶತ್ರುಸೈನಿಕರನ್ನು ರಕ್ತದ ಕಡಲಿನಲ್ಲಿ ಮುಳುಗಿಸು ನಾಶಮಾಡಿದನು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತಲೆವರಿಗೆ: ಗುರಾಣಿ; ಅಡಸು: ಬಿಗಿಯಾಗಿ ಒತ್ತು, ಚುಚ್ಚು; ಪಯದಳ: ಕಾಲಾಳು; ಒಗ್ಗು: ಗುಂಪು, ಸಮೂಹ; ತುಡುಕು: ಹೋರಾಡು, ಸೆಣಸು; ಕುದುರೆ: ಅಶ್ವ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ತರಿ: ಕಡಿ, ಕತ್ತರಿಸು; ನಗ: ಬೆಟ್ಟ; ನಾಟಕ: ತೋರಿಕೆ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ಆನೆ: ಕರಿ; ಥಟ್ಟು: ಗುಂಪು; ಉಪ್ಪರ: ಅತಿಶಯ; ಕುಡಿ: ತುದಿ, ಕೊನೆ; ರಥ: ಬಂಡಿ; ವಾಜಿ: ಕುದುರೆ; ರುಧಿರ: ರಕ್ತ; ಕಡಲು: ಸಾಗರ; ಅದ್ದು: ತೋಯು; ಉದ್ದು: ಒರಸು, ಅಳಿಸು; ಮಾರ್ಬಲ: ಶತ್ರು ಸೈನ್ಯ; ಗರ್ವಿತ: ಸೊಕ್ಕಿದ;

ಪದವಿಂಗಡಣೆ:
ಕಡಿದು+ ಬಿಸುಟನು +ತಲೆವರಿಗೆಗಳಲ್
ಅಡಸಿದಾ +ಪಯದಳವನ್+ಒಗ್ಗಿನ
ತುಡುಕು+ಕುದುರೆಯ +ಖುರವ +ತರಿದನು +ನಗದ +ನಾಟಕದ
ಗಡಣದ್+ಆನೆಯ +ಥಟ್ಟನ್+ಉಪ್ಪರ
ಕುಡಿಯ +ರಥವಾಜಿಗಳ +ರುಧಿರದ
ಕಡಲೊಳ್+ಅದ್ದಿದನ್+ಉದ್ದಿದನು +ಮಾರ್ಬಲದ +ಗರ್ವಿತರ

ಅಚ್ಚರಿ:
(೧) ರಣರಂಗದ ಚಿತ್ರಣ – ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ

ಪದ್ಯ ೪: ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ (ದ್ರೋಣ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಬಾಣಗಳನ್ನು ನೋಡಿ, ದಿಕ್ಕು ದಿಕ್ಕುಗಳಲ್ಲಿ ಕವಿದು ಬರುವ ಬಾಣಗಳ ಅರಣ್ಯಕ್ಕೆ ತಲೆಗೆ ಹರಿಗೆಯನ್ನು ಹಿಡಿದು ತಮ್ಮ ಪ್ರಾಣವನ್ನು ಮಾರಿಕೊಂಡ ರಾಜರ ರಾವುತರು ಅಭಿಮನ್ಯುವನ್ನು ಹೊಡೆದರು. ಅಭಿಮನ್ಯುವಿನ ಬಾಣಗಳ ನೀರಿನಲ್ಲಿ ಅವರು ತೇಲಿಹೋದರು. ನಾಚಿಕೆಪಟ್ಟು ಓಡಿಹೋದರು. ಯುದ್ಧವು ಅಸಮವಾಯಿತು, ಅಭಿಮನ್ಯುವಿನ ಪರಾಕ್ರಮಕ್ಕೆ ಅವರು ಯಾರೂ ಸಮವಾಗಲಿಲ್ಲ.

ಅರ್ಥ:
ಎಸಲು: ಚಿಗುರು; ತಲೆವರಿಗೆ: ಗುರಾಣಿ; ಕವಿ: ಆವರಿಸು; ದೆಸೆ: ದಿಕ್ಕು; ಹಳುವು: ಕಾಡು; ಔಕು: ತಳ್ಳು; ಅತಿರಥ: ಪರಾಕ್ರಮಿ; ಉಸುರು: ಜೀವ; ಮಾರಿ: ಕ್ಷುದ್ರ ದೇವತೆ; ಹೊಯ್ದು: ಹೊಡೆ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನುಸುಳು: ಇಕ್ಕಟ್ಟಾದ ಸಂದಿಯಲ್ಲಿ ತೂರುವಿಕೆ; ನಾಚಿಕೆ: ಲಜ್ಜೆ; ವಿಶಿಖ: ಬಾಣ, ಅಂಬು; ಜಲ: ನೀರು; ತೊಳೆ: ಸ್ವಚ್ಛಮಾಡು; ಅಸಮ: ಸಮವಲ್ಲದ; ಸಂಗರ: ಯುದ್ಧ; ಇದಿರು: ಎದುರು;

ಪದವಿಂಗಡಣೆ:
ಎಸಲು +ತಲೆವರಿಗೆಯಲಿ +ಕವಿದುದು
ದೆಸೆಯ +ಹಳುವಿಂಗ್+ಔಕುವ್+ಅತಿರಥರ್
ಉಸುರು+ಮಾರಿಗಳ್+ಏರಿ +ಹೊಯ್ದರು +ರಾಯ +ರಾವುತರು
ನುಸುಳಿದರು +ನಾಚಿಕೆಯಲ್+ಆತನ
ವಿಶಿಖ+ಜಲದಲಿ +ತೊಳೆದರ್+ಅತಿರಥರ್
ಅಸಮ +ಸಂಗರವಾಯ್ತು +ಮತ್ತ್+ಅಭಿಮನ್ಯುವ್+ಇದಿರಿನಲಿ

ಅಚ್ಚರಿ:
(೧) ಬಾಣದ ನೀರಿನಲ್ಲಿ ತೇಲಿದರು ಎಂದು ಹೇಳುವ ಪರಿ – ನುಸುಳಿದರು ನಾಚಿಕೆಯಲಾತನ ವಿಶಿಖಜಲದಲಿ ತೊಳೆದರತಿರಥ

ಪದ್ಯ ೩೭: ದ್ರೋಣನ ಆಕ್ರಮಣ ಹೇಗಿತ್ತು?

ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿವ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ (ದ್ರೋಣ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ನಾಗಾಲೋಟದಿಂದ ಬರುವ ಕುದುರೆಗಳ ನಾಲ್ಕು ಗೊರಸುಗಳನ್ನು ಕತ್ತರಿಸಿದನು. ಆನೆಗಳು ಬೀಳುವಂತೆ ಹೊಡೆದನು. ತೇರುಗಳ ಸಮೂಹವನ್ನು ಚದುರಿಹೋಗುವಂತೆ ಮಾಡಿದನು. ತಲೆವರಿಗೆಗಳನ್ನು ಹಿಡಿದು ಬರುವ ಕಾಲಾಳುಗಲನ್ನು ಸೀಳಿದನು. ಪಾಂಡವ ಸೈನ್ಯ ಸಾಗರವನ್ನು ಜಯ ಸಮುದ್ರನಾದ ದ್ರೋಣನು ಕಲಕಿದನು.

ಅರ್ಥ:
ನೂಕು: ತಳ್ಳು; ಹರಿತ: ಚೂಪಾಗಿರುವಿಕೆ; ತೇಜಿ: ಕುದುರೆ; ಖುರ: ಕುದುರೆಗಳ ಕಾಲಿನ ಗೊರಸು; ನಾಕ: ನಾಲ್ಕು; ಖಂಡಿಸು: ಕಡಿ, ಕತ್ತರಿಸು; ಕವಿ: ಆವರಿಸು; ನಾಗ: ಆನೆ; ಆನೀಕ: ಗುಂಪು; ನೆರೆ: ಗುಂಪು; ಕೆಡಹು: ಬೀಳಿಸು; ತೇರು: ಬಂಡಿ; ಹೊದರು: ಗುಂಪು, ಸಮೂಹ; ಹರೆ:ವ್ಯಾಪಿಸು, ವಿಸ್ತರಿಸು; ಕಡಿ: ಕತ್ತರಿಸು; ಔಕು: ತಳ್ಳು; ತಲೆವರಿಗೆ: ಗುರಾಣಿ; ತೆರಳು: ಹೋಗು, ನಡೆ; ಅನೇಕ: ಬಹಳ; ಸುಭಟ: ಪರಾಕ್ರಮಿ; ಸೀಳು: ಚೂರು, ತುಂಡು; ಜಯ: ಗೆಲುವು; ರತ್ನಾಕರ: ಸಮುದ್ರ; ಕಲಕು: ಅಲ್ಲಾಡಿಸು; ಸಾಗರ: ಸಮುದ್ರ;

ಪದವಿಂಗಡಣೆ:
ನೂಕಿ +ಹರಿತಹ +ತೇಜಿಗಳ +ಖುರ
ನಾಕ +ಖಂಡಿಸಿ +ಕವಿವ +ನಾಗ
ಆನೀಕವನು +ನೆರೆ +ಕೆಡಹಿ +ತೇರಿನ +ಹೊದರ +ಹರೆ+ಕಡಿದು
ಔಕಿ +ತಲೆವರಿಗೆಯಲಿ +ತೆರಳಿದ್
ಅನೇಕ +ಸುಭಟರ +ಸೀಳಿ +ಜಯ +ರ
ತ್ನಾಕರನು +ಕಲಕಿದನು +ಪಾಂಡವ +ಸೈನ್ಯ+ಸಾಗರವ

ಅಚ್ಚರಿ:
(೧) ನೂಕಿ, ಔಕಿ – ಪ್ರಾಸ ಪದಗಳು
(೨) ರೂಪಕದ ಪ್ರಯೋಗ – ಜಯ ರತ್ನಾಕರನು ಕಲಕಿದನು ಪಾಂಡವ ಸೈನ್ಯಸಾಗರವ

ಪದ್ಯ ೨೪: ಅರ್ಜುನನು ಗಂಧರ್ವರಿಗೆ ಏನು ಹೇಳಿದ?

ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ತಿದೊಡೆ ನೃಪನಾಣೆಯೆನುತೊಡಹಾಯ್ಸಿದನು ರಥವ (ಅರಣ್ಯ ಪರ್ವ, ೨೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಗಂಧರ್ವರು ಅತಿಶಯ ಧೈರ್ಯದಿಂದ ಒಂದಾಗಿ ಹೆಣಗಳನ್ನು ಮೆಟ್ಟಿ, ತಲೆಯನ್ನೇ ಮರೆಮಾಡಿ, ಅರ್ಜುನನಿಗೆ ಅತಿಹತ್ತಿರ ಬಂದು, ಉದ್ದನೆಯ ಮಚ್ಚುಗಳಿಂದ ಆಕ್ರಮಿಸಿದರು. ಅರ್ಜುನನು ನೀವು ನಿಜಕ್ಕೂ ವೀರರು ಧೀರರು, ನಿಮ್ಮನ್ನು ಧರ್ಮಜನಾಣೆ ಮುಟ್ಟುವುದಿಲ್ಲ. ಕೌರವನನ್ನು ಸೆರೆಹಿಡಿದವನನ್ನು ಕರೆಯಿರಿ ಎನ್ನುತ್ತಾ ರಥವನ್ನು ನಡೆಸಿದನು.

ಅರ್ಥ:
ಮೆಟ್ಟು: ತುಳಿತ; ಹೆಣ: ಮೃತದೇಹ; ಖಚರ: ಗಂಧರ್ವ; ಹುರಿ: ಕಟ್ಟು, ಪಾಶ; ಕಟ್ಟು: ಬಂಧಿಸು; ತಲೆ: ಶಿರ; ಕಟ್ಟಳೆ: ನಿಯಮ; ಉಬ್ಬಣ: ಚೂಪಾದ ಆಯುಧ; ಮೊನೆ:ಹರಿತವಾದುದು; ದಿಟ್ಟ: ಸಾಹಸಿ; ಕರೆ: ಬರೆಮಾಡು; ಮುಟ್ಟು: ಸೋಕು; ನೃಪ: ರಾಜ; ಆಣೆ: ಪ್ರಮಾಣ; ಹಾಯಿಸು: ಓಡಿಸು; ರಥ: ಬಂಡಿ;

ಪದವಿಂಗಡಣೆ:
ಮೆಟ್ಟಿ +ಹೆಣನನು +ಖಚರ+ಬಲ+ ಹುರಿ
ಗಟ್ಟಿ+ ತಲೆವರಿಗೆಯಲಿ +ಪಾರ್ಥನ
ಕಟ್ಟಳವಿಯಲಿ +ಚೂರಿಸಿದರ್+ಉಬ್ಬಣದ +ಮೊನೆಗಳಲಿ
ದಿಟ್ಟರಹಿರೋ +ಕೌರವೇಂದ್ರನ
ಕಟ್ಟಿದಾತನ+ ಕರೆಯಿ+ ನಿಮ್ಮನು
ಮುಟ್ಟಿದೊಡೆ +ನೃಪನಾಣೆ+ಎನುತ್+ಒಡಹಾಯ್ಸಿದನು +ರಥವ

ಅಚ್ಚರಿ:
(೧) ಮೆಟ್ತಿ, ಗಟ್ಟಿ, ಕಟ್ಟಿ, ಮುಟ್ಟಿ – ಪ್ರಾಸ ಪದಗಳು

ಪದ್ಯ ೩೪: ಗಂಧರ್ವ ಸೈನ್ಯವು ಹೇಗೆ ಯುದ್ಧವನ್ನು ಮುಂದುವರೆಸಿದರು?

ಹೊಡಕರಿಸಿ ಹೊದರೆದ್ದು ಬಲ ಸಂ
ಗಡಿಸಿ ತಲೆವರಿಗೆಯಲಿ ಕರ್ಣನ
ಬಿಡುಸರಳ ಬೆದರಿಕೆಗೆ ಬೆದರದೆ ನೂಕಿತಳವಿಯಲಿ
ಫಡ ಸುಯೋಧನ ತೊಲಗು ಕರ್ಣನ
ಕಡುಹಿನಲಿ ಫಲವೇನು ನಿನ್ನಯ
ಪಡೆಯು ಬಂದರೆ ಕೆಡದೆಯೆಂದುದು ಕೂಡೆ ಸುರಸೇನೆ (ಅರಣ್ಯ ಪರ್ವ, ೨೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಗಂಧರ್ವ ಸೈನ್ಯವು ಗರ್ಜಿಸಿ ಕರ್ಣನ ಬಾಣಗಳಿಗೆ ತಮ್ಮ ತಲೆಗಳನ್ನೇ ಗುರಾಣಿಗಳಂತೆ ಒಡ್ಡಿ, ಭಯವಿಲ್ಲದೆ ಮುಂದುವರಿಯಿತು. ಕೌರವ ಸುಮ್ಮನೆ ತೊಲಗು, ಕರ್ಣನ ಪರಾಕ್ರಮದಿಂದ ಏನೂ ಆಗುವುದಿಲ್ಲ ನಿನ್ನ ಸೈನ್ಯವು ಯುದ್ಧದಲ್ಲಿ ಹಾಳಾಗಿ ಹೋಗದೆ ಬಿಡದು ಎಂದು ಗರ್ಜಿಸಿದರು.

ಅರ್ಥ:
ಹೊಡಕರಿಸು: ಕಾಣಿಸು, ಬೇಗಬೆರೆಸು; ಹೊದರು: ಬಿರುಕು; ಎದ್ದು: ಮೇಲೇಳು; ಬಲ: ಸೈನ್ಯ; ಸಂಗಡಿಸು: ಒಟ್ಟಾಗು, ಗುಂಪಾಗು; ತಲೆ: ಶಿರ; ಬಿಡುಸರಳು: ಪ್ರಯೋಗಿಸಿದ ಬಾಣ; ಬೆದರಿಕೆ: ಅಂಜಿಕೆ; ನೂಕು: ತಳ್ಳು; ಅಳವಿ: ಯುದ್ಧ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ತೊಲಗು: ಹೊರಹೋಗು; ಕಡುಹು: ಸಾಹಸ, ಹುರುಪು; ಫಲ: ಪ್ರಯೋಜನ; ಪಡೆ: ಸೈನ್ಯ; ಬಂದರೆ: ಆಗಮಿಸಿದರೆ; ಕೆಡು: ಹಾಳಾಗು; ಸುರಸೇನೆ: ದೇವತೆಗಳ ಸೈನ್ಯ;

ಪದವಿಂಗಡಣೆ:
ಹೊಡಕರಿಸಿ +ಹೊದರೆದ್ದು+ ಬಲ+ ಸಂ
ಗಡಿಸಿ+ ತಲೆವರಿಗೆಯಲಿ+ ಕರ್ಣನ
ಬಿಡುಸರಳ+ ಬೆದರಿಕೆಗೆ+ ಬೆದರದೆ+ ನೂಕಿತ್+ಅಳವಿಯಲಿ
ಫಡ+ ಸುಯೋಧನ +ತೊಲಗು +ಕರ್ಣನ
ಕಡುಹಿನಲಿ +ಫಲವೇನು +ನಿನ್ನಯ
ಪಡೆಯು +ಬಂದರೆ +ಕೆಡದೆ+ಎಂದುದು +ಕೂಡೆ +ಸುರಸೇನೆ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿಡುಸರಳ ಬೆದರಿಕೆಗೆ ಬೆದರದೆ

ಪದ್ಯ ೨೩: ವಿಘಳಿಗೆಯಲ್ಲಿ ಭೀಮನು ಹೇಗೆ ಸೈನ್ಯವನ್ನು ಸದೆಬಡಿದನು?

ತುಡುಕುವಾನೆಯನೀಸಿನಲಿ ಖುರ
ವಿಡುವ ಕುದುರೆಯನೊತ್ತಿ ಹಾಯ್ಸುವ
ಬಿಡು ರಥವ ತಲೆವರಿಗೆಯಲಿ ತವಿಕುಸುವ ಕಾಲಾಳ
ಕಡಿದನಂಬಿನೊಳಾ ಗಜವನಾ
ಕಡುಹಯವನಾ ರಥವನಾ ವಂ
ಗಡದ ಕಾಲಾಳುಗಳನೊಂದು ವಿಘಳಿಗೆ ಮಾತ್ರದಲಿ (ಕರ್ಣ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬಳಿಗೆ ದಾಳಿ ಮಾಡಿದ ಆನೆಗಳನ್ನು ಸದೆಬಡಿದು, ಮುಂದೆ ಬಂದ ಕುದುರೆಗಳನ್ನು ನೆಲಕ್ಕೆ ಅಪ್ಪಳಿಸಿ, ವೇಗದಿಂದ ಬಂದ ರಥವನ್ನು ಗುರಾಣಿಯಲ್ಲಿ ಕಡಿದು, ಆತುರದಿ ಬಂದ ಸೈನಿಕರನ್ನು ಬಾಣಗಳಿಂದ ಸಾಯಿಸಿ, ಕೇವಲ ಕ್ಷಣಾರ್ಧದಲ್ಲಿ ಆನೆ, ಕುದುರೆ, ರಥ ಕಾಲಾಳುಗಳನ್ನು ತನ್ನ ಬಾಣದಿಂದ ಕಡಿದು ಹಾಕಿದನು.

ಅರ್ಥ:
ತುಡುಕು: ಮುಟ್ಟು, ತಾಗು, ಬೇಗನೆ ಹಿಡಿ; ಆನೆ: ಗಜ, ಕರಿ; ಈಸು: ಇಷ್ಟು; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಕುದುರೆ: ಅಶ್ವ; ಒತ್ತು: ಆಕ್ರಮಿಸು, ಮುತ್ತು; ಹಾಯ್ಸು: ಓಡಿಸು; ಬಿಡು: ತೊರೆ, ತ್ಯಜಿಸು; ರಥ: ಬಂಡಿ; ತಲೆವರಿಗೆ: ತಲೆಯಡಾಲು, ಗುರಾಣಿ; ತವಕ: ಬಯಕೆ, ಆತುರ;ಕಾಲಾಳ: ಸೈನಿಕ; ಕಡಿ: ತುಂಡು, ಹೋಳು; ಅಂಬು: ಬಾಣ; ಗಜ: ಆನೆ; ಕಡು:ವಿಶೇಷವಾಗಿ, ಹೆಚ್ಚಾಗಿ; ಹಯ: ಕುದುರೆ; ವಂಗಡ: ಭೇದ, ವ್ಯತ್ಯಾಸ; ವಿಘಳಿಗೆ: ಗಳಿಗೆಯ ಅರು ವತ್ತನೆಯ ಒಂದು ಭಾಗ; ಮಾತ್ರ: ಅಷ್ಟು, ಕೇವಲ;

ಪದವಿಂಗಡಣೆ:
ತುಡುಕುವ್+ಆನೆಯನ್+ಈಸಿನಲಿ+ ಖುರ
ವಿಡುವ +ಕುದುರೆಯನ್+ಒತ್ತಿ +ಹಾಯ್ಸುವ
ಬಿಡು+ ರಥವ +ತಲೆವರಿಗೆಯಲಿ +ತವಿಕುಸುವ +ಕಾಲಾಳ
ಕಡಿದನ್+ಅಂಬಿನೊಳ್+ಆ+ ಗಜವನ್
ಆ+ಕಡುಹಯವನ್+ಆ+ ರಥವನ್+ಆ+ ವಂ
ಗಡದ +ಕಾಲಾಳುಗಳನ್+ಒಂದು +ವಿಘಳಿಗೆ +ಮಾತ್ರದಲಿ

ಅಚ್ಚರಿ:
(೧) ಗಜ, ಆನೆ; ಹಯ, ಕುದುರೆ – ಸಮನಾರ್ಥಕ ಪದ