ಪದ್ಯ ೧೫: ದೂರ್ವಾಸ ಮುನಿಗಳು ಕುಂತಿಯನ್ನೇಕೆ ಮೆಚ್ಚಿದರು?

ತರುಣಿಯೊಡಗೊಂಡೊಯ್ದು ಕನ್ಯಾ
ಪರಮಭವನದಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನರಸಾಯನಂಗಳಲಿ
ಹರಮಹಾದೇವೀ ಮಗುವಿನಾ
ದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ (ಆದಿ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕುಂತಿಯು ದೂರ್ವಾಸನನ್ನು ಕನ್ಯಾಭವನಕ್ಕೆ ಕರೆದುಕೊಂಡು ಹೋಗಿ ನಾನಾವಿಧವಾದ ಆಹಾರಗಳು, ರಸಾಯನಗಳು, ನೀರು ಮೊದಲಾದವುಗಲನ್ನು ಕೊಟ್ಟು ಉಪಚರಿಸಿದಳು. ದೂರ್ವಾಸನು ಆಕೆಯ ಆದರ, ವಿನಯ, ಉಪಚಾರಗಳಿಗೆ ಬಹಳವಾಗಿ ಮೆಚ್ಚಿ ತಲೆದೂಗಿದನು.

ಅರ್ಥ:
ತರುಣಿ: ಯುವತಿ, ಹೆಣ್ಣು; ಒಯ್ದು: ಕರೆದುಕೊಂಡು ಹೋಗು; ಕನ್ಯಾ: ಹೆಣ್ಣು; ಪರಮ: ಶ್ರೇಷ್ಠ; ಭವನ: ಆಲಯ; ಮುನಿ: ಋಷಿ; ಉಪಚರಿಸು: ಸೇವೆಮಾಡು; ವಿವಿಧ: ಹಲವಾರು; ಅನ್ನ: ಊಟ; ಪಾನ: ಕುಡಿಯುವ ದ್ರವ, ಪೇಯ; ರಸ: ಸಾರ; ಮಗು: ಚಿಕ್ಕವ; ಆದರಣೆ: ಸತ್ಕಾರ; ವಿನಯ: ಒಳ್ಳೆಯತನ; ಉಪಚಾರ: ಸತ್ಕಾರ; ಮೆಚ್ಚು: ಹೊಗಳು; ತಲೆದೂಗು: ಒಪ್ಪು; ಹಿರಿದು: ಹೆಚ್ಚು;

ಪದವಿಂಗಡಣೆ:
ತರುಣಿ+ಒಡಗೊಂಡ್+ಒಯ್ದು +ಕನ್ಯಾ
ಪರಮ+ಭವನದಲ್+ಆ+ ಮುನಿಯನ್+ಉಪ
ಚರಿಸಿದಳು +ವಿವಿಧ+ಅನ್ನ+ ಪಾನರಸ+ಆಯನಂಗಳಲಿ
ಹರ+ಮಹಾದೇವ +ಈ +ಮಗುವಿನ್
ಆದರಣೆಗ್+ಈ+ ವಿನಯ+ಉಪಚಾರಕೆ
ಹಿರಿದು +ಮೆಚ್ಚಿದೆನೆಂದು +ತಲೆದೂಗಿದನು +ದೂರ್ವಾಸ

ಅಚ್ಚರಿ:
(೧) ಕುಂತಿಯ ನಡತೆಯನ್ನು ಹೊಗಳಿದ ಪರಿ – ಹರಮಹಾದೇವೀ ಮಗುವಿನಾದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು

ಪದ್ಯ ೨೫: ಶಂತನು ಕಾಡಿನಲ್ಲಿ ಯಾರನ್ನು ಕಂಡನು?

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮವಚನವಲಂಘ್ಯವೆನೆ ಕಾ
ತರಿಸಿ ಭಗ್ನಮನೋರಥನು ಮರಳಿದನು ಮಂದಿರಕೆ (ಆದಿ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಂತನು ಬೇಟೆಯಾಡುತ್ತಿರುವಾಗ ಯೋಜನಗಮ್ಧಿಯ ಪದ್ಮಪುಷ್ಪದ ಸುವಾಸನೆಯು ಗಾಳಿಯಲ್ಲಿ ಬಂದಿತು. ಅವನು ಆ ದಾರಿಯನ್ನು ಹಿಡಿದು ಹೋಗಿ ಅವಳನ್ನು ಕಂಡು, ಮದನಶರಗಳಿಂದ ಗಾಯಗೊಂಡು ಅವಳಿಗೆ ನೀನು ಯಾರು? ಅರಮನೆಗೆ ಹೋಗೋಣ ಬಾ ಎಂದನು. ಅವಳು ನನ್ನ ತಂದೆಯ ಮಾತನ್ನು ದಾಟಲಾಗುವುದಿಲ್ಲ ಎಂದಳು. ಮನಸ್ಸು ಮುರಿದ ಶಂತನು ಕಾತರದಿಂದ ತನ್ನರಮನೆಗೆ ಹಿಂದಿರುಗಿದನು.

ಅರ್ಥ:
ಪರಿಮಳ: ಸುಗಂಧ; ಬಳಿ: ಹತ್ತಿರ; ಬಂದು: ಆಗಮಿಸು; ತರುಣಿ: ಹೆಣ್ಣು; ಕಂಡು: ನೋಡು; ಅರಸ: ರಾಜ; ಬೆಸಸು: ಹೇಳು; ಎಸು: ಬಾಣ ಪ್ರಯೋಗ; ಕಾಮ: ಮನ್ಮಥ; ಶರ: ಬಾಣ; ಮೈಯೊಡ್ಡು: ದೇಹವನ್ನು ತೋರು; ಅರಮನೆ: ರಾಜರ ಆಲಯ; ನಡೆ: ಚಲಿಸು; ತಂದೆ: ಪಿತ; ಪರಮ: ಶ್ರೇಷ್ಠ; ವಚನ: ಮಾತು; ಅಲಂಘ್ಯ: ದಾಟಲಸಾಧ್ಯವಾದ; ಕಾತರ: ಕಳವಳ; ಭಗ್ನ: ನಾಶ; ಮನೋರಥ: ಆಸೆ, ಬಯಕೆ; ಮರಳು: ಹಿಂದಿರುಗು; ಮಂದಿರ: ಆಲಯ, ಮನೆ;

ಪದವಿಂಗಡಣೆ:
ಪರಿಮಳದ +ಬಳಿವಿಡಿದು +ಬಂದ್ +ಈ
ತರುಣಿಯನು +ಕಂಡ್+ಆರು +ನೀನ್
ಎಂದ್+ಅರಸ +ಬೆಸಗೊಳುತ್+ಎಸುವ +ಕಾಮನ +ಶರಕೆ +ಮೈಯೊಡ್ಡಿ
ಅರಮನೆಗೆ +ನಡೆ+ಎನಲು +ತಂದೆಯ
ಪರಮ+ವಚನವ್+ಅಲಂಘ್ಯವ್+ಎನೆ +ಕಾ
ತರಿಸಿ +ಭಗ್ನ+ಮನೋರಥನು+ ಮರಳಿದನು +ಮಂದಿರಕೆ

ಅಚ್ಚರಿ:
(೧) ಮೋಹಗೊಂಡನು ಎಂದು ಹೇಳುವ ಪರಿ – ಎಸುವ ಕಾಮನ ಶರಕೆ ಮೈಯೊಡ್ಡಿ

ಪದ್ಯ ೨೦: ಗಾಳಿ ಬಿಸಿಲುಗಳೇಕೆ ರಾಣಿಯರ ಮೇಲೆರಗಿದವು?

ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನಪರಿಯಂತ ಕಂಡುದು ರಾಯ ರಾಣಿಯರ (ಗದಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ರಾಣಿಯರ ರೂಪವನ್ನು ಗಾಳಿ ಬಿಸಿಲುಗಳೇ ಈ ಮೊದಲು ಕಂಡಿರಲಿಲ್ಲ. ಇಂತಹ ಅಪೂರ್ವ ರೂಪವನ್ನ ಆವರಿಸುವೆವು ಎಂದು ಕಡು ಬಿಸಿಲೂ ಬಿರುಗಾಳಿಯೂ ಅವರನ್ನು ಹಿಂಸಿಸಿದವು. ಅವರೆಂದೂ ಕಾಣದ ಜಾಗಕ್ಕೆ ಅವರನ್ನು ದಬ್ಬಿದವು. ಸಮಾಜದ ಸಮಸ್ತರೂ ಅವರನ್ನು ಕಂಡರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ಮುನ್ನ: ಮೊದಲು; ರವಿ: ಸೂರ್ಯ; ಕಿರಣ: ರಶ್ಮಿ, ಬೆಳಕಿನ ಕದಿರು; ಆಳಿ: ಸಾಲು, ಸಮೂಹ; ಸೋಂಕು: ತಾಗು; ಅಪೂರ್ವ: ಹಿಂದೆಂದೂ ಕಾಣದ, ಅಪರೂಪವಾದ; ರೂಪ: ಆಕಾರ, ಚೆಲುವು; ಬೀಳು: ತಗುಲು; ಕಡು: ಬಹಳ; ವಿಸಿಲು: ಬಿಸಿಲು, ತಾಪ; ಬಿರುಗಾಳಿ: ಜೋರಾದ ಗಾಳಿ; ತೂಳು: ಆವೇಶ, ಉನ್ಮಾದ; ತರುಣಿ: ಹೆಣ್ಣು; ನೆಲೆ: ಭೂಮಿ; ಚಾಂಡಾಲ: ದುಷ್ಟ; ಪರಿಯಂತ: ಅಲ್ಲಿಯವರೆಗೂ; ಕಂಡು: ನೋಡು; ರಾಯ: ರಾಜ; ರಾಣಿ: ಅರಸಿ; ಆಲಿ: ಕಣ್ಣು;

ಪದವಿಂಗಡಣೆ:
ಗಾಳಿ+ಅರಿಯದು +ಮುನ್ನ+ ರವಿ+ಕಿರ
ಣಾಳಿ +ಸೋಂಕದ್+ಅಪೂರ್ವ+ರೂಪಿನ
ಮೇಲೆ +ಬೀಳುವವ್+ಎಂಬವೊಲು +ಕಡು+ಬಿಸಿಲು +ಬಿರುಗಾಳಿ
ತೂಳಿದವು +ತರುಣಿಯರನ್+ಆವವರ್
ಆಲಿ + ಅರಿಯದ+ ನೆಲೆಯನ್+ಆ+ ಚಾಂ
ಡಾಲ+ಜನ+ಪರಿಯಂತ +ಕಂಡುದು +ರಾಯ +ರಾಣಿಯರ

ಅಚ್ಚರಿ:
(೧) ಕವಿಯ ಕಲ್ಪನೆಯ ಸೊಬಗು – ಗಾಳಿಯರಿಯದು ಮುನ್ನ ರವಿಕಿರಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು

ಪದ್ಯ ೩೮: ಯಾರು ನಿಜವಾದ ಶೂರರು?

ತರುಣಿಯರ ಮುಂದಸ್ತ್ರ ಶಸ್ತ್ರವ
ತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು
ಕರಿತುರಂಗದ ಬಹಳಶಸ್ತ್ರೋ
ತ್ಕರ ಕೃಪಾಣದ ಹರಹಿನಲಿ ಮೊಗ
ದಿರುಹದಿಹ ಕಲಿಯಾರು ಕುಂತೀಸೂನು ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನಾ ಹೆಂಗಸರ ಮುಂದೆ ಶಸ್ತ್ರಗಳ ವರಸೆಯನ್ನು ತೋರಿಸಿ ಜಂಬಕೊಚ್ಚಿಕೊಳ್ಳಬಹುದು, ನಾನು ಧೀರ ಎಂದು ಹೊಗಳಿಕೊಳ್ಳಬಹುದು, ಆದರೆ ಎದುರು ನಿಂತ ಆನೆ ಕುದುರೆಗಳ ಸೈನ್ಯ, ಶಸ್ತ್ರ ಕತ್ತಿಗಳನ್ನು ಕಂಡು ಹಿಂಜರಿಯದಿರುವವರಾರು ಶೂರನೇ ಅರ್ಜುನ ಎಂದು ಕೃಷ್ಣನು ಹೇಳಿದನು.

ಅರ್ಥ:
ತರುಣಿ: ಹೆಣ್ಣು; ಮುಂದೆ: ಎದುರು; ಅಸ್ತ್ರ: ಆಯುಧ; ತಿರುಹು: ತಿರುಗಿಸು, ವರಸೆಗಳು; ಉಬ್ಬೆಳು: ಜಂಬಕೊಚ್ಚಿಕೋ; ಅಬ್ಬರಿಸು: ಕೂಗು; ಸರಿ: ಸಮಾನ; ಧೀರ: ಶೂರ; ಕರಿ: ಆನೆ; ತುರಂಗ: ಕುದುರೆ; ಬಹಳ: ತುಂಬ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಕೃಪಾಣ: ಕತ್ತಿ, ಖಡ್ಗ; ಹರಹು: ವಿಸ್ತಾರ, ವೈಶಾಲ್ಯ; ಮೊಗ: ಮುಖ; ತಿರುಹು: ತಿರುಗಿಸು, ಹಿಂದೆ ಸರಿ; ಕಲಿ: ಶೂರ; ಸೂನು: ಮಗ; ಕೇಳು: ಆಲಿಸು;

ಪದವಿಂಗಡಣೆ:
ತರುಣಿಯರ +ಮುಂದ್+ಅಸ್ತ್ರ+ ಶಸ್ತ್ರವ
ತಿರುಹಬಹುದ್+ಉಬ್ಬೇಳಬಹುದ್
ಅಬ್ಬರಿಸಬಹುದ್+ಎನಗಾರು+ ಸರಿ+ ನಾ +ಧೀರನೆನಬಹುದು
ಕರಿ+ತುರಂಗದ +ಬಹಳ+ಶಸ್ತ್ರೋ
ತ್ಕರ +ಕೃಪಾಣದ+ ಹರಹಿನಲಿ +ಮೊಗ
ತಿರುಹದಿಹ+ ಕಲಿಯಾರು +ಕುಂತೀ+ಸೂನು +ಕೇಳೆಂದ

ಅಚ್ಚರಿ:
(೧) ಶೂರನೆಂದು ಸುಲಭದಿ ಹೇಳುವ ಪರಿ – ತರುಣಿಯರ ಮುಂದಸ್ತ್ರ ಶಸ್ತ್ರವತಿರುಹಬಹುದುಬ್ಬೇಳಬಹುದ
ಬ್ಬರಿಸಬಹುದೆನಗಾರು ಸರಿ ನಾ ಧೀರನೆನಬಹುದು

ಪದ್ಯ ೯೪: ದ್ರೌಪದಿ ಕಾವಲುಗಾರರಿಗೆ ಏನು ಹೇಳಿದಳು?

ತರುಣಿ ಬಿಡು ಸಾರೆನುತ ಪವನಜ್
ಸರಿದನತ್ತಲು ದ್ರುಪದ ನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದಳವರೊಡನೆ (ವಿರಾಟ ಪರ್ವ, ೩ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿ, ನನ್ನನ್ನು ಬಿಡು, ಹೋಗು, ಎಂದು ಭೀಮನು ಹೊರಟು ಹೋದನು. ದ್ರೌಪದಿಯು ಕಾವಲಿನವರನ್ನು ಕರೆದು, ಈ ದುಷ್ಟನು ನನ್ನನ್ನು ಎಳೆದುದರಿಂದ ನನ್ನ ಪತಿಗಳಾದ ಗಂಧರ್ವರು ಕೆರಳಿ ಇವನನ್ನು ಕೊಂದರು ನೋಡಿ ಎಂದು ಕೀಚಕನ ಮೃತ ದೇಹವನ್ನು ತೋರಿಸಿದಳು.

ಅರ್ಥ:
ತರುಣಿ: ಹೆಣ್ಣು; ಬಿಡು: ತೊರೆ; ಸಾರು: ಹತ್ತಿರಕ್ಕೆ ಬರು; ಪವನಜ: ವಾಯು ಪುತ್ರ; ಸರಿ: ದೂರ ಹೋಗು; ನಂದನೆ: ಮಗಳು; ಕರೆ: ಬರೆಮಾಡು; ನುಡಿ: ಮಾತು; ಕಾಹಿ: ರಕ್ಷಿಸುವ; ಹದ: ಸ್ಥಿತಿ; ದುರುಳ: ದುಷ್ಟ; ಬಲು: ಬಲ, ಶಕ್ತಿ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೆರಳು: ಕೋಪಗೊಳ್ಳು; ಹರುವ: ನಾಶ, ಕೊನೆ; ಕಂಡು: ನೋಡು; ಹರಿ: ಪ್ರವಹಿಸು, ಹೇಳು;

ಪದವಿಂಗಡಣೆ:
ತರುಣಿ+ ಬಿಡು +ಸಾರೆನುತ+ ಪವನಜ
ಸರಿದನ್+ಅತ್ತಲು +ದ್ರುಪದ+ ನಂದನೆ
ಕರೆದು+ ನುಡಿದಳು +ಕಾಹಿನವರಿಗೆ+ ಕೀಚಕನ +ಹದನ
ದುರುಳ +ಬಲುಹಿಂದ್+ಎನ್ನನ್+ಎಳೆದೊಡೆ
ಕೆರಳಿದರು +ಗಂಧರ್ವರ್+ಈತಗೆ
ಹರುವ+ ಕಂಡರು +ನೋಡಿ+ಎನೆ +ಹರಿತಂದಳ್+ಅವರೊಡನೆ

ಅಚ್ಚರಿ:
(೧) ತರುಣಿ, ದ್ರುಪದ ನಂದನೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೭೩: ದ್ರೌಪದಿಯ ಸಂತೋಷವೇಕೆ ಹಿಗ್ಗಿತು?

ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ತರುಣಿ ಕಾಂತನ ಬೀಳುಕೊಂಡಳು
ಮರಳಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ (ವಿರಾಟ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ, ಅವನಿತ್ತ ಅಭಯವನ್ನು ತಿಳಿದು ದ್ರೌಪದಿಗೆ ಬಹಳ ಸಂತೋಷವಾಯಿತು, ಭೀಮನು ಪುರುಷರಲ್ಲಿ ಪುರುಷನು ನನ್ನ ಪುಣ್ಯೋದಯವೇ ನೀನು, ಎಂದು ಹೊಗಳಿ ಭೀಮನನ್ನು ಬೀಳ್ಕೊಂಡು ತನ್ನ ಮನೆಗೆ ಬರಲು, ಸೂರ್ಯನು ತಾವರೆಯ ಬಾಗಿಲಿನ ಬೀಗವನ್ನು ತೆಗೆದನು.

ಅರ್ಥ:
ಹರುಷ: ಸಂತೋಷ; ಹೆಚ್ಚು: ಅಧಿಕ; ಪುರುಷ: ಗಂಡು; ಪರಮ: ಶ್ರೇಷ್ಥ; ಸುಕೃತ: ಒಳ್ಳೆಯ ಕೆಲಸ; ಉದಯ: ಹುಟ್ಟು; ತರುಣಿ: ಹೆಣ್ಣು; ಕಾಂತ: ಪ್ರಿಯತಮ; ಬೀಳುಕೊಂಡು: ಕಳುಹಿಸು; ಮರಳು: ಹಿಂದಿರುಗು; ನಿಜ: ತನ್ನ; ಭವನ: ಆಲಯ; ತರಣಿ: ಸೂರ್ಯ; ತೆಗೆ: ಹೊರತರು; ತಾವರೆ: ಕಮಲ; ಬಾಗಿಲು: ಕದ; ಬೀಯಗ: ಬೀಗ;

ಪದವಿಂಗಡಣೆ:
ಹರುಷದಲಿ +ಹೆಚ್ಚಿದಳು +ಪುರುಷರ
ಪುರುಷನಲ್ಲಾ +ಭೀಮ +ತನ್ನಯ
ಪರಮ+ ಸುಕೃತ+ಉದಯವಲಾ +ನೀನೊಬ್ಬನೆಂದೆನುತ
ತರುಣಿ+ ಕಾಂತನ +ಬೀಳುಕೊಂಡಳು
ಮರಳಿದಳು +ನಿಜ+ಭವನಕ್+ಇತ್ತಲು
ತರಣಿ+ ತೆಗೆದನು +ತಾವರೆಯ +ಬಾಗಿಲಿನ+ ಬೀಯಗವ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳಲು – ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ
(೨) ಭೀಮನನ್ನು ಹೊಗಳುವ ಪರಿ – ಪುರುಷರಪುರುಷನಲ್ಲಾ ಭೀಮ ತನ್ನಯ ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
(೩) ಹರುಷ, ಪುರುಷ; ತರಣಿ, ತರುಣಿ – ಪ್ರಾಸ ಪದಗಳು

ಪದ್ಯ ೫೩: ದ್ರೌಪದಿಯು ಯಾರ ಬಳಿ ಹೋಗಬೇಕೆಂದು ಭೀಮನು ಹೇಳಿದನು?

ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನಂ ಪ್ರಾರ್ಥಿಸುವುದರ್ಜುನ
ವರನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳುವುದೆನ್ನೊಡನೆ ಫಲಸಿದ್ಧಿಯಿಲ್ಲೆಂದ (ವಿರಾಟ ಪರ್ವ, ೩ ಸಂಧಿ ೫೩ ಪದ್ಯ)

ತಾತ್ಪರ್ಯ:
ಎಲೈ ದ್ರೌಪದಿ ನಾನು ನಿಜವಾಗಿ ಹೇಳುತ್ತಿದ್ದೇನೆ ಕೇಳು, ಇಂದಿನಿಂದ ನೀನು ನನ್ನನ್ನು ಬಿಟ್ಟು ಉಳಿದ ಪಾಂಡವರಿಗೆ ಪತ್ನಿ, ನಾನು ನಿನ್ನ ಸರದಿ ಪಾಳೆಯವನ್ನು ಬಿಟ್ಟು ಬಿಟ್ಟಿದ್ದೇನೆ. ಧರ್ಮಜನನ್ನು ಬೇಡಿಕೋ, ಅರ್ಜುನ, ನಕುಲ ಸಹದೇವರಿಗೆ ನಿನ್ನ ಕಷ್ಟವನ್ನು ಹೇಳಿಕೋ, ನನಗೆ ಹೇಳಿದರೆ ನಿನ್ನ ಇಷ್ಟಾರ್ಥ ಸಿದ್ಧಿಸುವುದಿಲ್ಲ ಎಂದು ಭೀಮನು ಹೇಳಿದನು.

ಅರ್ಥ:
ತರುಣಿ: ಹೆಣ್ಣು, ಸ್ತ್ರೀ; ದಿಟ: ನಿಜ; ಕೇಳು: ಆಲಿಸು; ಎಡೆ: ಹತ್ತಿರ; ಮೊದಲು: ಮುಂಚೆ; ಅರಸಿ: ರಾಣಿ; ಮುರಿ: ಸೀಳು; ಬಿಟ್ಟು: ತೊರೆ; ಸೂಳು: ಸರದಿ, ಸಮಯ; ಪಾಳೆಯ: ಬೀಡು, ಶಿಬಿರ; ಅರಸ: ರಾಜ; ಪ್ರಾರ್ಥಿಸು: ಆರಾಧಿಸು; ವರ: ಶ್ರೇಷ್ಠ; ವಿಸ್ತರ: ಹರಡು; ಹೇಳು: ತಿಳಿಸು ಫಲ: ಪ್ರಯೋಜನ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ;

ಪದವಿಂಗಡಣೆ:
ತರುಣಿ+ ದಿಟ +ಕೇಳ್+ಇಂದು +ಮೊದಲಾಗ್
ಅರಸಿ +ನೀ+ ನಾಲ್ವರಿಗೆ+ ನಾವ್+ಎಡೆ
ಮುರಿದವರು +ಬಿಟ್ಟವರು+ ನಿನ್ನಯ +ಸೂಳು +ಪಾಳೆಯವ
ಅರಸನಂ +ಪ್ರಾರ್ಥಿಸುವುದ್+ಅರ್ಜುನ
ವರ+ನಕುಲ+ ಸಹದೇವರಿಗೆ+ ವಿ
ಸ್ತರಿಸಿ +ಹೇಳುವುದ್+ ಎನ್ನೊಡನೆ +ಫಲಸಿದ್ಧಿಯಿಲ್ಲೆಂದ

ಅಚ್ಚರಿ:
(೧) ಭೀಮನ ನೇರ ನುಡಿ – ಅರಸಿ ನೀನಾಲ್ವರಿಗೆ ನಾವೆಡೆ ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ

ಪದ್ಯ ೬: ಸೈರಂಧ್ರಿಯು ಯಾರ ಮನೆಗೆ ಬಂದಳು?

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಗಿ
ದರಘಳಿಗೆ ನಿಂದಬುಜಮಿತ್ರನ ಭಜಿಸಿ ಕಣ್ದೆರೆಯೆ
ಮುರಿವ ದೈತ್ಯನ ಕಾಹಕೊಟ್ಟನು
ತರಣಿ ತರುಣಿಗೆ ಮಂದಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ (ವಿರಾಟ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಕೀಚಕನ ಮನೆಗೆ ಹೋಗಲೇ ಬೇಕಾದ ಸ್ಥಿತಿ ಬಂದೊದಗಿದ ಸೈರಂಧ್ರಿಯು, ಇಂದ್ರ, ಅಗ್ನಿ, ಯಮ, ನಿರುತಿ, ವಾಯು ಮುಂತಾದ ದಿಕ್ಪಾಲಕರನ್ನು ಸ್ಮರಿಸಿದಳು, ಅರ್ಧಗಳಿಗೆ ನಿಂತು ಕಣ್ಮುಚ್ಚಿ ಸೂರ್ಯನನ್ನು ಪ್ರಾರ್ಥಿಸಿ ಕಣ್ದೆರೆದಳು. ಯಾರನ್ನು ಬೇಕಿದ್ದರೂ ಸೋಲಿಸಬಲ್ಲ ರಾಕ್ಷಸನೊಬ್ಬನನ್ನು ಸೂರ್ಯನು ದ್ರೌಪದಿಗೆ ಕಾವಲಾಗಿ ಕೊಟ್ಟನು ಎಂದು ತಿಳಿದು ಮೆಲ್ಲ ಮೆಲ್ಲನೆ ನಡೆಯುತ್ತಾ ಸೈರಂಧ್ರಿಯು ಕೀಚಕನ ಮನೆಗೆ ಬಂದಳು.

ಅರ್ಥ:
ಸುರಪ: ಇಂದ್ರ; ಶಿಖಿ: ಅಗ್ನಿ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಆದಿ: ಮುಂತಾದ; ವಂದಿಸು: ನಮಸ್ಕರಿಸು; ಕಣ್ಣೆವೆ: ಕಣ್ಣಿನ ರೆಪ್ಪೆ; ಬಿಗಿ: ಬಂಧಿಸು; ಘಳಿಗೆ: ಸಮಯ; ಅಬುಜಮಿತ್ರ: ಕಮಲದ ಸಖ (ಸೂರ್ಯ); ಭಜಿಸು: ಪ್ರಾರ್ಥಿಸು; ಕಣ್ಣು: ನಯನ; ತೆರೆ: ಬಿಚ್ಚು; ಮುರಿ: ಸೀಳು; ದೈತ್ಯ: ರಾಕ್ಷಸ; ಕಾಹು: ರಕ್ಷಿಸು; ತರಣಿ: ಸೂರ್ಯ; ತರುಣಿ: ಹೆಣ್ಣು; ಮಂದ: ಮೆಲ್ಲನೆ; ಗಮನ: ಚಲನೆ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಮನೆ: ಆಲಯ;

ಪದವಿಂಗಡಣೆ:
ಸುರಪ +ಶಿಖಿ+ ಯಮ +ನಿರುತಿ +ವರುಣಾ
ದ್ಯರಿಗೆ+ ವಂದಿಸಿ +ಕಣ್ಣೆವೆಯ +ಬಗಿದ್
ಅರಘಳಿಗೆ+ ನಿಂದ್+ಅಬುಜಮಿತ್ರನ+ ಭಜಿಸಿ +ಕಣ್ದೆರೆಯೆ
ಮುರಿವ+ ದೈತ್ಯನ +ಕಾಹಕೊಟ್ಟನು
ತರಣಿ+ ತರುಣಿಗೆ+ ಮಂದ+ಮಂದ
ಉತ್ತರದ +ಗಮನದಲ್+ಅಬಲೆ +ಬಂದಳು +ಕೀಚಕನ+ ಮನೆಗೆ

ಅಚ್ಚರಿ:
(೧) ಯಾರು ರಕ್ಷಣೆ ನೀಡಿದರು – ಮುರಿವ ದೈತ್ಯನ ಕಾಹಕೊಟ್ಟನು ತರಣಿ ತರುಣಿಗೆ
(೨) ಅಬುಜಮಿತ್ರ, ತರಣಿ – ಸಮನಾರ್ಥಕ ಪದ

ಪದ್ಯ ೪೯: ಸುದೇಷ್ಣೆಯು ತಮ್ಮನಿಗೆ ಏನೆಂದಳು?

ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ (ವಿರಾಟ ಪರ್ವ, ೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ತಮ್ಮನ ಮಾತುಗಳನ್ನು ಕೇಳಿ ಸುದೇಷ್ಣೆಯ ಮನಸ್ಸಿನಲ್ಲಿ ನೀರು ತುಂಬಿದವು. ತಮ್ಮನ ಮೇಲಿನ ಮೋಹ ಚಿಗುರೊಡೆಯಿತು. ಕೀಚಕನನ್ನು ಯಮನ ಪರಿವಾರದಲ್ಲಿ ಸೇರಿಸಲು ಕೈಚಾಚಿದಳು. ಎಲೈ ಕೀಚಕ ಏಳು, ಮನೆಗೆ ಹೋಗು, ಸೈರಂಧ್ರಿಯನ್ನು ನಾಳೆ ನಿನ್ನ ಬಳಿಗೆ ಕಳಿಸುತ್ತೇನೆ, ಆದರೆ ಪರಸ್ತ್ರೀ ವ್ಯಾಮೋಹ ಒಳಿತಲ್ಲ ಎಂದು ಹೇಳಿ ತಮ್ಮನನ್ನು ಬೀಳ್ಕೊಟ್ಟಳು.

ಅರ್ಥ:
ಆಲಿ: ಕಣ್ಣು; ನೀರು: ಜಲ; ತಮ್ಮ: ಸಹೋದರ; ತಳಿತ: ಚಿಗುರು; ಮೋಹ: ಆಸೆ; ಕಾಲ: ಯಮ; ಪಾಳಯ: ಬಿಡಾರ; ಕೈಗೊಟ್ಟು: ಹಸ್ತವನ್ನು ಚಾಚು; ಅಂಗನೆ: ಹೆಣ್ಣು; ನೆಗಹು: ಮೇಲೆತ್ತು; ಖಳ: ದುಷ್ಟ; ಏಳು: ಮೇಲೆ ಬಾ; ಭವನ: ಆಲಯ; ಹೋಗು: ತೆರಳು; ತರುಣಿ: ಹೆಣ್ಣು, ಚೆಲುವೆ; ಕಳುಹು: ತೆರಳು, ಬರುವಂತೆ ಮಾಡು; ಪರಸತಿ: ಅನ್ಯ ಹೆಣ್ಣು; ಮೇಳ:ಸೇರುವಿಕೆ; ಲೇಸು: ಒಳಿತು; ಬೀಳ್ಕೊಡು: ತೆರಳು; ಅನುಜ: ತಮ್ಮ;

ಪದವಿಂಗಡಣೆ:
ಆಲಿ +ನೀರ್+ಏರಿದವು +ತಮ್ಮನ
ಮೇಲೆ +ತಳಿತುದು +ಮೋಹ +ಕಾಲನ
ಪಾಳಯಕೆ +ಕೈಗೊಟ್ಟಳ್+ಅಂಗನೆ +ನೆಗಹಿದಳು +ಖಳನ
ಏಳು +ಭವನಕೆ+ ಹೋಗು +ತರುಣಿಯ
ನಾಳೆ +ನಾ +ಕಳುಹುವೆನು +ಪರಸತಿ
ಮೇಳ +ಲೇಸಲ್ಲೆನುತ+ ಬೀಳ್ಕೊಟ್ಟಳು +ನಿಜಾನುಜನ

ಅಚ್ಚರಿ:
(೧) ಕಣ್ಣೀರಿಡು/ದುಃಖಿಸು ಎಂದು ಹೇಳಲು – ಆಲಿ ನೀರೇರಿದವು
(೨) ಸಾಯಿಸಲು ಎಂದು ಹೇಳಲು – ಕಾಲನಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
(೩) ಬುದ್ಧಿವಾದದ ಮಾತು – ಪರಸತಿ ಮೇಳ ಲೇಸಲ್ಲೆನುತ

ಪದ್ಯ ೩೩: ಭೀಮನನ್ನು ಕಂಡು ದುಶ್ಯಾಸನ ಎಲ್ಲಿಗೆ ಓಡಿದನು?

ಒಡೆಯನೈತರಲಿಕ್ಷು ತೋಟದ
ಬಡನರಿಗಳೋಡುವವೊಲೀಕೆಯ
ಹಿಡಿದೆಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ನನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಬ್ಬಿನ ಗದ್ದೆಯ ಒಡೆಯನು ತೋಟವನ್ನು ಕಾಯಲು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದು ಬಡನರಿಗಳ ಗುಂಪು ಓಡುವಂತೆ, ದ್ರೌಪದಿಯ ಸೆರಗನ್ನು ಹಿಡಿದಿದ್ದ ದುಶ್ಯಾಸನನು ಕೈಬಿಟ್ಟು ಕೌರವನ ಕಡೆಗೆ ಓಡಿಹೋದನು. ಭೀಮನು ದ್ರೌಪದಿ ನನ್ನಾಣೆ ಹೇಳು, ನಿನಗೆ ಬಂದಿದ್ದ ಭೀತಿಯನ್ನು ನಾನು ಬಿಡಿಸಲಿಲ್ಲವೇ? ಅಣ್ಣನಾಜ್ಞೆಯ ತಡಿಕೆಬಲೆ ಪುಡಿಯಾಯಿತು ಹೋಗಲಿ ಬಿಡು ಎಂದು ನುಡಿದನು.

ಅರ್ಥ:
ಒಡೆಯ: ರಾಜ, ಯಜಮಾನ; ಐತರು: ಬಾ, ಬಂದು ಸೇರು; ಇಕ್ಷು: ಕಬ್ಬು; ತೋಟ: ಗದ್ದೆ; ಬಡ: ಪಾಪ, ಸೊರಗು; ಓಡು: ಪಲಾಯನ; ಹಿಡಿ: ಬಂಧಿಸು; ಖಳ: ದುಷ್ಟ; ಹಾಯ್ದು: ಓಡು; ಹೊರೆ: ಆಸರೆ; ನುಡಿ: ಮಾತು; ತರುಣಿ: ಹೆಣ್ಣು; ಭೀತಿ: ಭಯ; ಆಣೆ: ಪ್ರಮಾಣ; ಬಿಡಿಸು: ಕಳಚು, ಸಡಿಲಿಸು; ರಾಯ: ಒಡೆಯ; ಆಜ್ಞೆ: ಆದೇಶ; ತಡಿಕೆ: ಚಪ್ಪರ, ಹಂದರ; ನುಗ್ಗು: ಒಳಹೊಕ್ಕು; ಹೋಗು: ತೆರಳು;

ಪದವಿಂಗಡಣೆ:
ಒಡೆಯನ್+ಐತರಲ್+ಇಕ್ಷು +ತೋಟದ
ಬಡನರಿಗಳ್+ಓಡುವವೊಲ್+ಈಕೆಯ
ಹಿಡಿದ್+ಎಳೆವ +ಖಳ +ಹಾಯ್ದನಾ +ಕೌರವನ+ ಹೊರೆಗಾಗಿ
ನುಡಿ +ತರುಣಿ +ನನ್ನಾಣೆ +ಭೀತಿಯ
ಬಿಡಿಸಿದೆನಲಾ+ ರಾಯನ್+ಆಜ್ಞೆಯ
ತಡಿಕೆವಲೆ +ನುಗ್ಗಾಯ್ತು +ಹೋಗಿನ್+ಎಂದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಡೆಯನೈತರಲಿಕ್ಷು ತೋಟದ ಬಡನರಿಗಳೋಡುವವೊಲ್
(೨) ಅಣ್ಣನ ಆಜ್ಞೆಯನ್ನು ಧಿಕ್ಕರಿಸುವ ಪರಿ – ರಾಯನಾಜ್ಞೆಯತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ