ಪದ್ಯ ೪: ಅಶ್ವತ್ಥಾಮನು ಹೇಗೆ ಎಚ್ಚರದಿಂದಿದ್ದನು?

ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ಜಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟ ಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ (ಗದಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಲಿಕೆಯಿಂದ ಕೃಪ ಮತ್ತು ಕೃತವರ್ಮರು ಮಲಗಿದರು. ರಾಜರಿಗೆ ಗರುಡಿಯಾಚಾರ್ಯನಾದ, ರಾಜ್ಯಕಾರ್ಯದ ಭಾರವನ್ನು ಹೊತ್ತ ಅಶ್ವತ್ಥಾಮನು ಜೋರಾಗಿ ಉಸಿರಾಡದೆ, ನಿದ್ರೆಗೆ ಅವಕಾಶ ಕೊಡದೆ ತನ್ನ ಇಷ್ಟಸಿದ್ಧಿಯನ್ನು ಸಾಧಿಸುವ ಬಗೆಯೇನೆಂದು ಸಾಧಕ ಬಾಧಕಗಳನ್ನು ಚಿಂತಿಸುತ್ತಾ ಎಚ್ಚರದಿಂದಿದ್ದನು.

ಅರ್ಥ:
ಕುಸಿ: ಕೆಳಕ್ಕೆ ಬೀಳು; ಜೊಮ್ಮು: ನಿದ್ರೆಯ ಆವರಿಸುವ ಸ್ಥಿತಿ; ಜಾಡ್ಯ: ಸೋಮಾರಿತನ; ಝೊಂಪಿಸು: ಮೈಮರೆ, ಎಚ್ಚರ ತಪ್ಪು; ರಾಯ: ರಾಜ; ಗರುಡಿ: ವ್ಯಾಯಾಮ ಶಾಲೆ; ಜಸ: ಯಶಸ್ಸು, ಕೀರ್ತಿ; ಜಹಿ: ಸೋಲಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಹೊತ್ತು: ಧರಿಸು; ಹೊರಿಗೆ: ಭಾರ; ಉಸುರು: ಶ್ವಾಸ; ಮಿಡುಕು: ಅಲುಗು, ಕದಲು; ನಿದ್ರೆ: ಶಯನ; ನಿನಹು: ಜ್ಞಾಪಕ; ಮುಸುಕ: ಆವರಿಸು; ಉಗಿ: ಹೊರಹಾಕು; ಇಷ್ಟ: ಇಚ್ಛಿಸು, ಆಸೆಪಡು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ವಿಷಮ: ಕಷ್ಟಕರವಾದುದು; ಸಂಧಿ: ಸೇರಿಕೆ, ಸಂಯೋಗ; ಸರವು: ಜಾಡು, ದಾರಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕುಸಿದು +ಜೊಮ್ಮಿನ +ಜಾಡ್ಯದಲಿ+ ಝೊಂ
ಪಿಸಿದರ್+ಇಬ್ಬರು +ರಾಯ+ಗರುಡಿಯ
ಜಸದ+ ಜಹಿಯಲಿ+ ಸ್ವಾಮಿ+ಕಾರ್ಯದ+ ಹೊತ್ತ+ಹೊರಿಗೆಯಲಿ
ಉಸುರು +ಮಿಡುಕದೆ +ನಿದ್ರೆ +ನೆನಹಿನ
ಮುಸುಕನ್+ಉಗಿಯದೆ+ಇಷ್ಟ+ ಸಿದ್ಧಿಯ
ವಿಷಮ +ಸಮಸಂಧಿಗಳ+ ಸರಿವಿನೊಳ್+ಇರ್ದನಾ ದ್ರೌಣಿ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದಗಳು – ಜೊಮ್ಮಿನ ಜಾಡ್ಯದಲಿ ಝೊಂಪಿಸಿದರಿಬ್ಬರು
(೨) ಎಚ್ಚರದಿಂದಿರುವ ಸ್ಥಿತಿಯನ್ನು ವರ್ಣಿಸುವ ಪರಿ – ನಿದ್ರೆ ನೆನಹಿನಮುಸುಕನುಗಿಯದೆ

ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೯: ಸಂಜಯನು ಯಾರ ನಡಿಗೆಯನ್ನು ನೋಡಿದನು – ೨?

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ (ಗದಾ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಡವಿ ಬೀಳುವಂತಹ ಜಾಗಗಳನ್ನು ದಾಟಿ, ರಕ್ತದ ಮಡುವುಗಳಲ್ಲಿ ಗದೆಯನ್ನೂರಿ ಕಾಲಿಡಲು ಜಾಗವನ್ನು ಹುಡುಕಿಕೊಂಡು ನಡುಗುತ್ತಾ ಕುಣೀಯುವ ಮೂಂಡಗಳನ್ನು ಗದೆಯಿಂದ ಅಪ್ಪಳಿಸಿ ದೊಡ್ಡ ಆನೆಗಳ ದೇಹವನ್ನು ಹತ್ತಿಳಿದು ಹೊಯ್ದಾಡಿ ಬಳಲಿ ಮೇಲುಸಿರು ಹತ್ತಿ ನಡುಗುತ್ತಾ ನಿಲ್ಲುತ್ತಿದ್ದನು.

ಅರ್ಥ:
ಎಡಹು: ಬೀಳು; ತಲೆ: ಶಿರ; ದಾಂಟಿ: ದಾಟು; ರಕುತ: ನೆತ್ತರು; ಮಡು: ಹಳ್ಳ, ಕೊಳ್ಳ; ಗದೆ: ಮುದ್ಗರ; ಊರು: ನೆಲೆಸು; ನೆಲೆ: ಭೂಮಿ, ಜಾಗ; ಪಡೆದು: ದೊರಕಿಸು; ಕಂಪಿಸು: ನಡುಗು; ಕುಣಿ: ನರ್ತಿಸು; ಮುಂಡ: ಶಿರವಿಲ್ಲದ ದೇಹ; ಅಪ್ಪಳಿಸು: ತಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಹೇರಾನೆ: ದೊಡ್ಡ ಗಜ; ಹೇರೊಡಲು: ದೊಡ್ಡದಾದ ಶರೀರ; ಹತ್ತಿಳಿ: ಮೇಲೇರಿ ಕೆಳಗಿಳಿ; ಝೊಂಪಿಸು: ಭಯಗೊಳ್ಳು; ಮಿಡುಕು: ನಡುಕ, ಕಂಪನ; ಬಳಲು: ಆಯಾಸಗೊಳ್ಳು; ಉರ್ಧ್ವಶ್ವಾಸ: ಏದುಸಿರು, ಮೇಲುಸಿರು; ಲಹರಿ: ರಭಸ, ಆವೇಗ;

ಪದವಿಂಗಡಣೆ:
ಎಡಹು+ತಲೆಗಳ +ದಾಂಟಿ +ರಕುತದ
ಮಡುವಿನಲಿ +ಗದೆಯೂರಿ +ನೆಲೆಗಳ
ಪಡೆದು +ಕಂಪಿಸಿ +ಕುಣಿವ +ಮುಂಡವ+ ಗದೆಯಲ್+ಅಪ್ಪಳಿಸಿ
ಅಡಿಗಡಿಗೆ +ಹೇರಾನೆಗಳ +ಹೇ
ರೊಡಲ +ಹತ್ತಿಳಿದ್+ಏರಿ+ ಝೊಂಪಿಸಿ
ಮಿಡುಕಿ +ನಿಲುವನು +ಬಳಲಿದ್+ಊರ್ಧ್ವಶ್ವಾಸ+ ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೇರಾನೆಗಳ ಹೇರೊಡಲ ಹತ್ತಿಳಿದೇರಿ
(೨) ನಿಲ್ಲಲು ಜಾಗವನ್ನು ವಿವರಿಸುವ ಪರಿ – ರಕುತದ ಮಡುವಿನಲಿ ಗದೆಯೂರಿ ನೆಲೆಗಳ ಪಡೆದು

ಪದ್ಯ ೬೩: ಧರ್ಮಜನು ದ್ರೋಣನಿಗೆ ಏನು ಹೇಳಿದ?

ಆದರಶ್ವತ್ಥಾಮನ ಗಜವಿದಿ
ರಾದುದಳಿದುದು ದಿಟವೆನಲು ಬಿಸು
ಸುಯ್ದನರಸನ ನುಡಿಗೆ ನಂಬಿದನಕಟ ಮಗನೆನುತ
ಕೈದು ಕಯ್ಯಲಿ ಜಾರೆ ಝೊಂಪಿಸಿ
ಖೇದದಲಿ ಕಾತರಿಸಿ ಚಿತ್ತವಿ
ಭೇದದಲಿ ಕಳವಳಿಸಿ ಕರೆದನು ರೋಷತಾಮಸವ (ದ್ರೋಣ ಪರ್ವ, ೧೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಗಜವು ಇದಿರಾಗಿ ಸತ್ತುಹೋದುದು ನಿಜ, ಎಂದು ಧರ್ಮಜನು ಹೇಳಲು ದ್ರೋಣನು ನಿಟ್ಟುಸಿರು ಬಿಟ್ಟನು. ಕೈಯಲ್ಲಿದ್ದ ಆಯುಧ ಜಾರಿತು. ದುಃಖದಿಂದ ಕಾತರನಾಗಿ, ಮನಸ್ಸು ಇಬ್ಭಾಗವಾಗಿ ಕಳವಳದಿಂದ ಅತಿಶಯ ಕೋಪೋದ್ರಿಕ್ತನಾದನು.

ಅರ್ಥ:
ಗಜ: ಆನೆ; ಇದಿರು: ಎದುರು; ಅಳಿ: ನಾಶ; ದಿಟ: ಸತ್ಯ; ಬಿಸುಸುಯ್: ನಿಟ್ಟುಸಿರು ಬಿಡು; ನುಡಿ: ಮಾತು; ನಂಬು: ವಿಶ್ವಾಸವಿಡು; ಅಕಟ: ಅಯ್ಯೋ; ಮಗ: ಸುತ; ಕೈದು: ಆಯುಧ; ಕೈ: ಹಸ್ತ; ಜಾರು: ಕಳಚು; ಝೊಂಪಿಸು: ಭಯಗೊಳ್ಳು; ಖೇದ: ದುಃಖ, ಉಮ್ಮಳ; ಕಾತರ: ಕಳವಳ; ಚಿತ್ತ: ಮನಸ್ಸು; ಭೇದ: ಮುರಿ, ಒಡೆ; ಕಳವಳ: ಗೊಂದಲ; ಕರೆ: ಬರೆಮಾಡು; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ;

ಪದವಿಂಗಡಣೆ:
ಆದರ್+ಅಶ್ವತ್ಥಾಮನ +ಗಜವ್+ಇದಿ
ರಾದುದ್+ಅಳಿದುದು +ದಿಟವೆನಲು+ ಬಿಸು
ಸುಯ್ದನ್+ಅರಸನ+ ನುಡಿಗೆ+ ನಂಬಿದನ್+ಅಕಟ +ಮಗನೆನುತ
ಕೈದು +ಕಯ್ಯಲಿ +ಜಾರೆ +ಝೊಂಪಿಸಿ
ಖೇದದಲಿ +ಕಾತರಿಸಿ+ ಚಿತ್ತವಿ
ಭೇದದಲಿ +ಕಳವಳಿಸಿ +ಕರೆದನು +ರೋಷ+ತಾಮಸವ

ಅಚ್ಚರಿ:
(೧) ದ್ರೋಣನ ಸ್ಥಿತಿ – ಕೈದು ಕಯ್ಯಲಿ ಜಾರೆ ಝೊಂಪಿಸಿ ಖೇದದಲಿ ಕಾತರಿಸಿ ಚಿತ್ತವಿ ಭೇದದಲಿ ಕಳವಳಿಸಿ
(೨) ಝೊಂಪಿಸಿ, ಕಾತರಿಸಿ, ಕಳವಳಿಸಿ – ಪದಗಳ ಬಳಕೆ

ಪದ್ಯ ೩೦: ಯುದ್ಧದ ಭೀಕರತೆ ಹೇಗಿತ್ತು?

ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ (ದ್ರೋಣ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಂಜಯನು ಹೇಳಿದನು, ದ್ರೋಣನ ತೇಜಸ್ಸು ಬಾಲ ಸೂರ್ಯನನಂತೆ ಪ್ರತಿಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಅವನ ಗೆಲುವಿನ ಝಳಕ್ಕೆ ಜಗತ್ತು ಅಳುಕಿತು. ಅರ್ಜುನನೂ ಭೀಮನೂ ಒಟ್ಟಾಗಿ ಕಾದಿ ಸೋತು ಹೋದುದು ಮರಣಕ್ಕೆ ಸಮಾನವಾದಂತಿತ್ತು. ದೇವ ದಾನವರ ಸೈನ್ಯಗಳ ಕಾಳಗಗಳಲ್ಲೂ ಇಂತಹ ಕಾಳಗವನ್ನು ನಾನು ಕೇಳಿಲ್ಲ ಎಂದು ಯುದ್ಧದ ಭೀಕರತೆಯನ್ನು ವಿವರಿಸಿದನು.

ಅರ್ಥ:
ಬಾಲ: ಚಿಕ್ಕ; ಸೂರ್ಯ: ರವಿ, ಭಾನು; ಪ್ರತಿಕ್ಷಣ: ಕ್ಷಣ ಕ್ಷಣ; ಏಳಿಗೆ: ಹೆಚ್ಚು; ತೇಜ: ಪ್ರಕಾಶ; ವಿಕಾರ: ಬದಲಾವಣೆ; ಚಡಾಳಿಸು: ವೃದ್ಧಿಹೊಂದು; ಝಳ: ಪ್ರಕಾಶ; ಜಗ: ಪ್ರಪಂಚ; ಅಳುಕು: ಹೆದರು; ಝೊಂಪಿಸು: ಭಯಗೊಳ್ಳು; ಹೇಳು: ತಿಳಿಸು; ಸೋಲು: ಪರಾಭವ; ಮೃತ್ಯು: ಸಾವು; ಕಾಳೆಗ: ಯುದ್ಧ; ಅರಿ: ತಿಳಿ; ಅಮರ: ದೇವತೆ; ಅಸುರ: ರಾಕ್ಷಸ; ಥಟ್ಟು: ಗುಂಪು;

ಪದವಿಂಗಡಣೆ:
ಬಾಲಸೂರ್ಯನವೊಲ್ +ಪ್ರತಿಕ್ಷಣದ್
ಏಳಿಗೆಯ +ತೇಜದ +ವಿಕಾರ +ಚ
ಡಾಳಿಸಿತು +ವಿಕ್ರಮದ +ಝಳ +ಜಗವ್+ಅಳುಕೆ +ಝೊಂಪಿಸಿತು
ಹೇಳಲೇನ್+ಅರ್ಜುನನ +ಭೀಮನ
ಸೋಲವದು+ ತಾ +ಮೃತ್ಯುವ್+ಈ+ ಪರಿ
ಕಾಳೆಗವ+ ನಾನರಿಯೆನ್+ಅಮರ+ಅಸುರರ +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲಸೂರ್ಯನವೊಲ್ ಪ್ರತಿಕ್ಷಣದೇಳಿಗೆಯ ತೇಜದ ವಿಕಾರ ಚಡಾಳಿಸಿತು
(೨) ಉದ್ಧದ ತೀವ್ರತೆ – ಈ ಪರಿ ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ

ಪದ್ಯ ೧೨: ಬೆಳಗಿನ ಜಾವ ಹೇಗೆ ಕಂಡಿತು?

ಎಲೆ ಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆ ಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರುದುವು ಹಿಮರುಚಿಯ ರಶ್ಮಿಗಳು (ದ್ರೋಣ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಧಯಾಮದ ಕಾಲ, ಎರಡೂ ಪಡೆಗಳು ಗೊಂಬೆಗಳಂತೆ ನಿದ್ದೆಯಲ್ಲಿ ಮುಳುಗಿದ್ದವು. ತಾನಾರೆಂಬ ಅಜ್ಞಾನದ ಪಾಳೆಯಕ್ಕೆ ಗುರೂಪದೇಶದ ದಾಳಿ ಕವಿಯುವಂತೆ ಬೆಳದಿಂಗಳು ಮೈದೋರಿತು.

ಅರ್ಥ:
ಲೆಪ್ಪ: ಬಳಿಯುವ ವಸ್ತು, ಲೇಪನ, ಎರಕ; ಬಲ: ಬಿಗಿ, ಗಟ್ಟಿ; ನಿದ್ರೆ: ಶಯನ; ಸಮುದ್ರ: ಸಾಗರ; ಮುಳುಗು: ಮಿಂದು; ಝೊಮ್ಮು:ಪುಳುಕ; ಝಾಡಿ: ಕಾಂತಿ; ಝೊಂಪಿಸು: ನಿದ್ರಿಸು; ಜಾವ: ಗಳಿಗೆ, ಸಮಯ; ತಳಿತ: ಚಿಗುರಿದ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಪಾಳೆಯ: ಬೀಡು, ಶಿಬಿರ; ಕಗ್ಗೊಲೆ: ಹತ್ಯೆ; ಕವಿ: ಆವರಿಸು; ಗುರು: ಆಚಾರ್ಯ; ಉಪದೇಶ: ಬೋಧಿಸುವುದು; ಆವಳಿ: ಸಾಲು; ಮೈದೋರು: ಕಾಣಿಸು; ಹಿಮ: ಮಂಜಿನ ಹನಿ; ರಶ್ಮಿ: ಕಿರಣ;

ಪದವಿಂಗಡಣೆ:
ಎಲೆ +ಮಿಡುಕದ್+ಎರಡ್+ಒಡ್ಡು +ಲೆಪ್ಪದ
ಬಲದವೊಲು +ನಿದ್ರಾ+ಸಮುದ್ರವ
ಮುಳುಗಿ +ಝೊಮ್ಮಿನ +ಝಾಡಿಯಲಿ +ಝೊಂಪಿಸಿದುದರೆ+ ಜಾವ
ತಳಿತ +ಮರವೆಯ +ಪಾಳೆಯದ +ಕ
ಗ್ಗೊಲೆಗೆ +ಕವಿವ +ಗುರು+ಉಪದೇಶ
ಆವಳಿಯವೊಲು +ಮೈದೋರುದುವು +ಹಿಮರುಚಿಯ +ರಶ್ಮಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಲೆ ಮಿಡುಕದೆರಡೊಡ್ಡು ಲೆಪ್ಪದ ಬಲದವೊಲು; ತಳಿತ ಮರವೆಯ ಪಾಳೆಯದ ಕಗ್ಗೊಲೆಗೆ ಕವಿವ ಗುರೂಪದೇಶಾವಳಿಯವೊಲು

ಪದ್ಯ ೪೬: ಘಟೋತ್ಕಚನು ಯುದ್ಧಕ್ಕೆ ಹೇಗೆ ಬಂದನು?

ಜಡಿದು ಝೊಂಪಿಸಿ ವೀಳೆಯವ ಕೊಂ
ಡೆಡದ ಕಯ್ಯಿಂದೆರಗಿ ಮದಮುಖ
ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ
ಸಿಡಿಲ ಸೆರೆ ಬಿಟ್ಟಂತೆ ಭುಜವನು
ಹೊಡೆದು ಮುಂಚಿತು ದೈತ್ಯಬಲವುಲಿ
ದದಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ (ದ್ರೋಣ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಎಡಗೈಯಿಂದ ವೀಳೆಯವನ್ನು ತೆಗೆದುಕೊಂಡು, ಧರ್ಮಜನಿಗೆ ನಮಸ್ಕರಿಸಿ, ಎಡಬಲಕ್ಕೆ ತಿರುಗಿ ನೋಡಿದನು. ಅಸಂಖ್ಯಾತ ರಾಕ್ಷಸರು ಜೀಯಾ ಎಂದು ಸಿಡಿಲಿನ ಸೆರೆ ಬಿಟ್ಟಂತೆ ತೋಳನ್ನು ತಟ್ಟಿ, ಅಬ್ಬರಿಸಿ ಯುದ್ಧಕ್ಕೆ ನಡೆಯಲು ಆದಿಶೇಷ ಕೂರ್ಮರಿಗೆ ಮೇಲುಸಿರಾಯಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಝೊಂಪಿಸು:ಭಯಗೊಳ್ಳು, ಬೆಚ್ಚಿಬೀಳು; ವೀಳೆ: ತಾಂಬೂಲ; ಕೊಂಡು: ಪಡೆದು; ಕೈ: ಹಸ್ತ; ಎರಗು: ಬೀಳು; ಮದ: ಅಹಂಕಾರ; ಮುಖ: ಆನನ; ನೋಡು: ವೀಕ್ಷಿಸು; ರಕ್ಕಸ: ರಕ್ತ; ಕೋಟಿ: ಅಸಂಖ್ಯಾತ; ಜೀಯ: ಒಡೆಯ; ಸಿಡಿಲು: ಅಶನಿ; ಸೆರೆ: ಬಂಧನ; ಭುಜ: ಬಾಹು; ಹೊಡೆ: ಏಟು, ಹೊಡೆತ; ಮುಂಚೆ: ಮುಂದೆ; ದೈತ್ಯ: ದಾನವ; ಉಲಿ: ಶಬ್ದ; ಅಡಿಯಿಡು: ಹೆಜ್ಜೆಹಾಕು, ಮುಂದುವರಿ; ಉಸುರು: ಮಾತನಾಡು; ಪ್ರಾಣ; ಮಸಗು: ಹರಡು; ಕೆರಳು; ಫಣಿಪ: ಆದಿಶೇಷ; ಕಮಠ: ಕೂರ್ಮ;

ಪದವಿಂಗಡಣೆ:
ಜಡಿದು +ಝೊಂಪಿಸಿ +ವೀಳೆಯವ +ಕೊಂಡ್
ಎಡದ +ಕಯ್ಯಿಂದ್+ಎರಗಿ +ಮದ+ಮುಖನ್
ಎಡಬಲನ +ನೋಡಿದರೆ +ರಕ್ಕಸಕೋಟಿ +ಜೀಯೆನುತ
ಸಿಡಿಲ +ಸೆರೆ +ಬಿಟ್ಟಂತೆ +ಭುಜವನು
ಹೊಡೆದು +ಮುಂಚಿತು +ದೈತ್ಯ+ಬಲವ್+ಉಲಿದ್
ಅಡಿಯಿಡಲು +ಮೇಲುಸುರು +ಮಸಗಿತು +ಫಣಿಪ +ಕಮಠರಿಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಸೆರೆ ಬಿಟ್ಟಂತೆ ಭುಜವನು ಹೊಡೆದು ಮುಂಚಿತು ದೈತ್ಯಬಲ

ಪದ್ಯ ೧೦: ಅಶ್ವತ್ಥಾಮನು ಯಾರ ಮೇಲೆ ಕತ್ತಿ ಹಿಡಿದು ಹೋದನು?

ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ (ದ್ರೋಣ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಎಲೋ ಕರ್ಣ, ಮಾವನನ್ನು ನಿಂದಿಸಿ ಬೊಗಳುತ್ತಿರುವ ನಿನ್ನ ನಾಲಗೆಯನ್ನು ಕೀಳುತ್ತೇನೆ, ಶಿವ ಶಿವ ನಮಗೆ ನೀನು ಸಮನೇ! ಎಂದು ಕತ್ತಿಯನ್ನು ಸೆಳೆದು ಕರ್ಣನ ಮೇಲೆ ನುಗ್ಗಲು, ಕರ್ಣನೂ ಕತ್ತಿಯನ್ನು ಸೆಳೆದು ಅಶ್ವತ್ಥಾಮನ ಮೇಲೆ ಹಾಯ್ದನು.

ಅರ್ಥ:
ಫಡ: ತಿರಸ್ಕಾರದ ಮಾತು; ವಿಭಾಡಿಸು: ನಾಶಮಾಡು; ಗಳಹ: ಮಾತಾಳಿ; ನಾಲಗೆ: ಜಿಹ್ವೆ; ಕೀಳು: ಎಳೆದು ಹಾಕು; ಮೇಳ: ಗುಂಪು; ಖಂಡೆಯ: ಕತ್ತಿ; ಸೆಳೆ: ಆಕರ್ಷಿಸು; ಝೊಂಪಿಸು: ಬೆಚ್ಚಿಬೀಳು; ತನುಜ: ಮಗ; ಅವ್ವಳಿಸು: ಆರ್ಭಟಿಸು; ಉಗಿ: ಹೊರಹಾಕು; ಆಯುಧ: ಶಸ್ತ್ರ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯನ ಪುತ್ರ (ಕರ್ಣ); ಮೇಲುವಾಯ್ದ: ಮೇಲೆಬೀಳು; ನಂದನ: ಮಗ;

ಪದವಿಂಗಡಣೆ:
ಎಲವೊ +ಫಡ +ಮಾವನ +ವಿಭಾಡಿಸಿ
ಗಳಹುವ್+ಈ +ನಾಲಗೆಯ +ಕೀಳುವೆನ್
ಎಲೆ +ಮಹಾದೇವ್+ಇಲ್ಲಿ +ಮೇಳವೆನುತ್ತ +ಖಂಡೆಯವ
ಸೆಳೆದು +ಝೊಂಪಿಸಿ +ಗುರು+ತನುಜನ್
ಅವ್ವಳಿಸಲ್+ಉಗಿದನಡ್+ಆಯುಧವನ್
ಅಗ್ಗಳೆಯ +ರವಿಸುತ +ಮೇಲುವಾಯ್ದನು +ದ್ರೋಣ+ನಂದನನ

ಅಚ್ಚರಿ:
(೧) ಕರ್ಣನನ್ನು ಬಯ್ಯುವ ಪರಿ – ಎಲವೊ ಫಡ ಮಾವನ ವಿಭಾಡಿಸಿ ಗಳಹುವೀ ನಾಲಗೆಯ ಕೀಳುವೆ
(೨) ತನುಜ, ನಂದನ, ಸುತ – ಸಮಾನಾರ್ಥಕ ಪದ
(೩) ಅಶ್ವತ್ಥಾಮನನನ್ನು ದ್ರೋಣನಂದನ, ಗುರುತನುಜ ಎಂದು ಕರೆದಿರುವುದು

ಪದ್ಯ ೩೦: ಕರ್ಣನು ಏಕೆ ಮೂರ್ಛೆ ಹೋದನು?

ಒದೆದು ಕವಚವನೊಡೆದು ಗರಿದೋ
ರಿದವು ವಕ್ಷದ ಮೇಲೆ ಮೊನೆಮೂ
ಡಿದವು ಬೆನ್ನಲಿ ಕರ್ಣ ನನೆದನು ರುಧಿರಧಾರೆಯಲಿ
ಉದುರಿದವು ಕಯ್ಯಂಬು ಬಲುಕಾ
ರಿದನು ರಕುತವ ಕಳವಳದ ಕಂ
ಪದಲಿ ಝೊಂಪಿಸಿ ಮಲಗಿದನು ಮಣಿಮಯದ ಗದ್ದುಗೆಯ (ಕರ್ಣ ಪರ್ವ, ೨೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳು ಕರ್ಣನ ಕವಚವನ್ನು ಭೇದಿಸಿ, ಎದೆಯ ಮೇಲೆ ನೆಟ್ಟು ಹಿಂಭಾಗದಲ್ಲಿ ಬಾಣದ ತುದಿ ಕಾಣಿಸಿತು, ಅವನು ರಕ್ತಧಾರೆಯಿಂದ ನನೆದನು, ಕರ್ಣನ ಕೈಯಲ್ಲಿದ್ದ ಬಾಣಗಳು ಕೆಳಗೆ ಬಿದ್ದವು. ರಕ್ತವನ್ನು ಕಾರಿ ಕಳವಳದಿಂದ ನಡುಗಿ ರಥದ ಮಣಿಪೀಠದ ಮೇಲೆ ಮಲಗಿ ಮೂರ್ಛೆ ಹೋದನು.

ಅರ್ಥ:
ಒದೆ: ತಳ್ಳು; ಕವಚ: ಹೊದಿಕೆ, ಉಕ್ಕಿನ ಅಂಗಿ; ಒಡೆದು: ಸೀಳು; ಗರಿ:ಬಾಣದ ಹಿಂಭಾಗ; ಊರು: ಭದ್ರವಾಗಿ ನಿಲ್ಲಿಸು; ವಕ್ಷ: ಎದೆ; ಮೊನೆ: ಚೂಪಾದ; ಮೂಡು: ಉದಯಿಸು, ಕಾಣಿಸಿಕೊ; ಬೆನ್ನು: ಹಿಂಭಾಗ; ನನೆ: ತೋಯು; ರುಧಿರ: ರಕ್ತ; ಧಾರೆ: ಚಿಲುಮೆ; ಉದುರು: ಕಳಚು; ಕಯ್ಯಂಬು: ಕೈಯ್ಯಲ್ಲಿದ್ದ ಬಾಣ; ಬಲು: ತುಂಬ; ಕಾರು: ಕೆಸರು; ಕಾರಿ: ಕೊಲ್ಲಿ, ಆಖಾತ; ರಕುತ: ನೆತ್ತರು; ಕಳವಳ: ಆತಂಕ; ಕಂಪಿಸು: ನದುಗು; ಝೊಂಪಿಸು: ಮೂರ್ಛೆ ಹೋಗು; ಮಲಗು: ನಿದ್ರಿಸು; ಮಣಿ: ಬೆಲೆಬಾಳುವ ಹರಳು; ಮಯ: ತುಂಬ; ಮಣಿಮಯ: ಮಣಿಗಳಿಂದ ಕೂಡಿದ ಗದ್ದುಗೆ: ಪೀಠ;

ಪದವಿಂಗಡಣೆ:
ಒದೆದು +ಕವಚವನ್+ಒಡೆದು +ಗರಿದ್
ಊರಿದವು +ವಕ್ಷದ +ಮೇಲೆ +ಮೊನೆ+ಮೂ
ಡಿದವು+ ಬೆನ್ನಲಿ +ಕರ್ಣ+ ನನೆದನು +ರುಧಿರ+ಧಾರೆಯಲಿ
ಉದುರಿದವು +ಕಯ್ಯಂಬು +ಬಲು+ಕಾ
ರಿದನು+ ರಕುತವ +ಕಳವಳದ +ಕಂ
ಪದಲಿ+ ಝೊಂಪಿಸಿ+ ಮಲಗಿದನು+ ಮಣಿಮಯದ +ಗದ್ದುಗೆಯ

ಅಚ್ಚರಿ:
(೧) ಬಾಣವು ನೆಟ್ಟಿದ ಬಗೆ – ಗರಿದೋರಿದವು ವಕ್ಷದ ಮೇಲೆ ಮೊನೆಮೂಡಿದವು ಬೆನ್ನಲಿ
(೨) ರುಧಿರ, ರಕುತ – ಸಮನಾರ್ಥಕ ಪದ