ಪದ್ಯ ೧: ಭೀಮ ದುರ್ಯೋಧನರು ಹೇಗೆ ಕಾದಿದರು?

ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವಾಸ ಧೂಮಳಮುಖಭಯಂಕರರು
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು (ಗದಾ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಕರಾಳ ರೋಷದ ಉಸಿರಿನ ಹೊಗೆಯನ್ನು ಸೂಸುತ್ತಾ, ಶತ್ರುಗಳು ಸುತ್ತಮುತ್ತಿದರೂ ಇದಿರಿಸಿ ಗೆಲ್ಲಬಲ್ಲ ಪರಾಕ್ರಮಿಗಳಾದ ಭೀಮ ದುರ್ಯೋಧನರು, ಭಯಂಕರ ವಜ್ರಾಯುಧದ ಹೊಡೆತವನ್ನು ಹೋಲುವ ನಿಷ್ಠುರ ಗದಾಘಾತದಿಂದ ಅಸಮಾನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಕಾದಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಮೇಳವಿಸು: ಸೇರು, ಜೊತೆಯಾಗು; ಕೈ: ಹಸ್ತ; ಕೈಮೇಳವಿಸು: ಕೈ ಕೈ ಸೇರಿಸಿ ಹೋರಾಡು; ವಿಷಮ: ಕಷ್ಟವಾದ; ಸಮರ: ಯುದ್ಧ; ಕರಾಳ: ಭಯಂಕರ; ರೋಷ: ಕೋಪ; ಶ್ವಾಸ: ಉಸಿರು; ಧೂಮ: ಹೊಗೆ; ಮುಖ: ಆನನ; ಭಯಂಕರ: ಘೋರವಾದ; ಚಾಳನ: ಚಲನೆ; ಚೌಪಟ: ನಾಲ್ಕು ಕಡೆಯೂ ಕಾದಾಡುವ ವೀರ; ಶಸ್ತ್ರ: ಆಯುಧ; ವಜ್ರ: ಗಟ್ಟಿ; ಘಾತ: ಹೊಡೆತ; ನಿಷ್ಠುರ: ಕಠಿಣವಾದುದು; ಒದಗು: ಲಭ್ಯ, ದೊರೆತುದು; ವೃಕೋದರ: ಭೀಮ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಕೈ
ಮೇಳವಿಸಿದರು +ವಿಷಮ +ಸಮರ+ಕ
ರಾಳ+ರೋಷ+ಶ್ವಾಸ+ ಧೂಮಳ+ಮುಖ+ಭಯಂಕರರು
ಚಾಳನದ +ಚೌಪಟರು +ಶಸ್ತ್ರಾ
ಸ್ಫಾಳನದ +ವಜ್ರಾಭಿಘಾತಾ
ಭೀಳ+ನಿಷ್ಠುರರ್+ಒದಗಿದರು +ಕೌರವ +ವೃಕೋದರರು

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ವಿಷಮ ಸಮರ ಕರಾಳ ರೋಷಶ್ವಾಸ ಧೂಮಳಮುಖಭಯಂಕರರು

ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೫: ಕೃಷ್ಣನು ಕುದುರೆಯನ್ನು ಹೇಗೆ ನಡೆಸಿದನು?

ಚಟುಳ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂದರವ (ಭೀಷ್ಮ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರಥದ ಕುದುರೆಗಳ ಖುರಪಟಗಳಿಂದ ಎದ್ದ ಧೂಳು ಸುತ್ತಲೂ ಹಬ್ಬಿತು. ರಾಕ್ಷಾಸಾಂತಕನಾದ ಕೃಷ್ಣನು ಕುದುರೆಗಳ ಕತ್ತನ್ನು ಸವರಿ, ರಥವನ್ನು ಗಂಭೀರ ಗತಿಯಿಂದ ವೇಗವಾಗಿ ನಡೆಸಿದನು.

ಅರ್ಥ:
ಚಟುಳ: ವೇಗ, ತ್ವರಿತ; ಹಯ: ಕುದುರೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಖಂಡಿತ: ನಿಶ್ಚಿತವಾಗಿ; ಊರ್ವಿ:ಭೂಮಿ; ನಿಟಿಲ: ಹಣೆ, ಫಾಲ; ನಿರ್ಗತ: ಹೋದ; ಬಹಳ: ದೊಡ್ಡ; ಧೂಳೀಪಟಲ: ಧೂಳಿನ ಸಮೂಹ; ಧೂಸರ: ಕಂದ ಬಣ್ಣ; ಸಕಲ: ಎಲ್ಲಾ; ಜಗ: ಪ್ರಪಂಚ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ); ನಲವು: ಸಂತೋಷ; ಪಟು: ಸಮರ್ಥನಾದವನು; ಗತಿ: ವೇಗ; ಗರುವಾಯಿ: ದೊಡ್ಡತನ, ಠೀವಿ; ಸಂಘಟಿಸು: ಕೂಡು, ಸೇರು; ಹಯ: ಕುದುರೆ; ಸುಳಿಸು: ಸುತ್ತುವಂತೆ ಮಾಡು, ತಿರುಗಿಸು; ಚೌಪಟ: ನಾಲ್ಕು ಕಡೆ; ಒಯ್ಯಾರ: ಬೆಡಗು, ಬಿನ್ನಾಣ; ಬೋಳಯಿಸು: ಸಂತೈಸು; ಕಂದರ: ಕುತ್ತಿಗೆ;

ಪದವಿಂಗಡಣೆ:
ಚಟುಳ+ ಹಯಖುರ +ಖಂಡಿತ+ಊರ್ವೀ
ನಿಟಿಲ +ನಿರ್ಗತ +ಬಹಳ +ಧೂಳೀ
ಪಟಲ +ಧೂಸರ +ಸಕಲ +ಜಗದ್+ಅಸುರಾರಿ +ನಲವಿನಲಿ
ಪಟುಗತಿಯ +ಗರುವಾಯಿಯಲಿ +ಸಂ
ಘಟಿಸಿ+ ಹಯವನು +ಸುಳಿಸಿದನು +ಚೌ
ಪಟದೊಳ್+ಒಯ್ಯಾರಿಸುತ +ಬೋಳಯಿಸಿದನು +ಕಂದರವ

ಅಚ್ಚರಿ:
(೧) ಕುದುರೆಯನ್ನು ಓಡಿಸಿದ ಪರಿ – ಪಟುಗತಿಯ ಗರುವಾಯಿಯಲಿ ಸಂಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂದರವ

ಪದ್ಯ ೧೩: ಘಟೋತ್ಕಚನ ಬಳಿ ಯಾರಿದ್ದಾರೆ?

ಭೀಮಸೇನನ ಮಗನವನು ಸಂ
ಗ್ರಾಮಚೌಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದುಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರಪರಿವಾರ (ಭೀಷ್ಮ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಘಟೋತ್ಕಚನು ಭೀಮಸೇನನ ಮಗ. ಅವನ ಬಳಿ ಕಾಮರೂಪಿಗಳಾದ ಕುಂಭಕರ್ಣರ ಗುಂಪಿನಂತೆಸೆಯುವ, ಹೊಳೆಯುವ ಕೋರೆದಾಡೆಗಳ ಒಂದು ಕೋಟಿ ರಾಕ್ಷಸರಿದ್ದಾರೆ. ಅವರು ಪ್ರಳಯಕಾಲದ ಯಮನ ಪರಿವಾರದಂತಿದ್ದಾರೆ.

ಅರ್ಥ:
ಮಗ: ಪುತ್ರ; ಸಂಗ್ರಾಮ: ಯುದ್ಧ; ಚೌಪಟ: ನಾಲ್ಕುಪಟ್ಟು; ಬಳಿ: ಹತ್ತಿರ; ತಾಮಸ: ಕತ್ತಲೆ, ಅಂಧಕಾರ; ಮೊಗ: ಮುಖ; ಹೊಗರು: ಕಾಂತಿ, ಪ್ರಕಾಶ; ಹೊಳೆ: ಪ್ರಕಾಶ; ದಾಡೆ: ಹಲ್ಲು; ಕಾಮ: ವಿಷಯಾಭಿಲಾಷೆ; ರೂಪ: ಆಕಾರ; ಸನಾಮ: ಹೆಅಸರು; ದೈತ್ಯರು: ರಾಕ್ಷಸ; ಸ್ತೋಮ: ಗುಂಪು; ಲಯ: ನಾಶ; ಕೃತಾಂತ: ಶಿವ; ಕ್ರೂರ: ನಿರ್ದಯಿ; ಪರಿವಾರ: ಪರಿಜನ;

ಪದವಿಂಗಡಣೆ:
ಭೀಮಸೇನನ +ಮಗನವನು +ಸಂ
ಗ್ರಾಮ+ಚೌಪಟನವನ+ ಬಳಿಯಲಿ
ತಾಮಸದ +ಬಲುಮೊಗದ+ ಹೊಗರಿನ+ ಹೊಳೆವ +ದಾಡೆಗಳ
ಕಾಮರೂಪಿಗಳ್+ಒಂದುಕೋಟಿ+ ಸ
ನಾಮ+ದೈತ್ಯರು +ಕುಂಭಕರ್ಣ
ಸ್ತೋಮವೆನಲದೆ+ ಲಯ+ಕೃತಾಂತನ+ ಕ್ರೂರ+ಪರಿವಾರ

ಅಚ್ಚರಿ:
(೧) ಘಟೋತ್ಕಚನ ಸೈನ್ಯ – ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ ಕಾಮರೂಪಿಗಳೊಂದುಕೋಟಿ ಸನಾಮದೈತ್ಯರು

ಪದ್ಯ ೩: ಜಯದ್ರಥನು ಯುದ್ಧಕ್ಕೆ ಹೇಗೆ ಸಜ್ಜಾದನು?

ನೆರಹಿದನು ಹದಿನಾರು ಸಾವಿರ
ಕರಿಘಟೆಯನೈವತ್ತು ಸಾವಿರ
ತುರಗವನು ಹದಿನಾಲ್ಕು ಸಾವಿರ ಕನಕಮಯ ರಥವ
ಚರಣ ಚೌಪಟರೈದು ಲಕ್ಷವ
ಬರಿಸಿದನು ಬಹುವಾದ್ಯರವದಿಕ್
ಶಿರವೊಡೆಯೆ ಸೂಳೈಸೆ ಮೇಳೈಸಿದನು ಮೋಹರವ (ಅರಣ್ಯ ಪರ್ವ, ೨೪ ಸಂಧಿ, ೩ ಪದ್ಯ)

ತಾತ್ಪರ್ಯ:
ಹದಿನಾರು ಸಾವಿರ ಆನೆಗಳು, ಐವತ್ತು ಸಾವಿರ ಕುದುರೆಗಳು, ಹದಿನಾಲ್ಕು ಸಾವಿರ ಕನಕಮಯ ರಥಗಳು, ಐದು ಲಕ್ಷದ ಕಾಲಾಳುಗಳು ಅವನ ಸೈನ್ಯದಲ್ಲಿ ಸಜ್ಜಾಗಿನಿಂತರು. ದಿಕ್ಕುಗಳ ತಲೆಯೊಡೆಯುವಷ್ಟು ರಭಸದಿಂದ ವಾದ್ಯಗಳು ಮೊರೆದವು.

ಅರ್ಥ:
ನೆರಹು: ಒಟ್ಟುಗೂಡು; ಸಾವಿರ: ಸಹಸ್ರ; ಕರಿ: ಆನೆ; ಘಟೆ: ಆನೆಗಳ ಗುಂಪು; ತುರಗ: ಕುದುರೆ; ಕನಕ: ಚಿನ್ನ; ರಥ: ತೇರು, ಬಂಡಿ; ಚರಣ: ಪಾದ; ಚೌಪಟ: ನಾಲ್ಕು ಪಟ್ಟು ಹೆಚ್ಚು ವೀರ; ಬರಿಸು: ತುಂಬು; ಬಹು: ಬಹಳ; ವಾದ್ಯ: ಸಂಗೀತದ ಸಾಧನ; ಶಿರ: ತಲೆ, ಶಿರಸ್ಸು; ಒಡೆ: ಸೀಳು; ಸೂಳೈಸು: ಆಧಿಕವಾಗು; ಮೇಳೈಸು: ಸೇರು, ಜೊತೆಯಾಗು; ಮೋಹರ: ಯುದ್ಧ, ಕಾಳಗ;

ಪದವಿಂಗಡಣೆ:
ನೆರಹಿದನು +ಹದಿನಾರು +ಸಾವಿರ
ಕರಿಘಟೆಯನ್+ಐವತ್ತು +ಸಾವಿರ
ತುರಗವನು +ಹದಿನಾಲ್ಕು +ಸಾವಿರ +ಕನಕಮಯ +ರಥವ
ಚರಣ +ಚೌಪಟರ್+ಐದು +ಲಕ್ಷವ
ಬರಿಸಿದನು +ಬಹುವಾದ್ಯರವದಿಕ್
ಶಿರವೊಡೆಯೆ +ಸೂಳೈಸೆ +ಮೇಳೈಸಿದನು+ ಮೋಹರವ

ಅಚ್ಚರಿ:
(೧) ಒಟ್ಟು ೫೮೦೦೦೦ ದಷ್ಟು ಸೈನ್ಯದ ಬಲ
(೨) ಸೂಳೈಸೆ, ಮೇಳೈಸೆ – ಪ್ರಾಸ ಪದಗಳು

ಪದ್ಯ ೪: ಭಾನುಮತಿಯ ಏನೆಂದು ಒರಲಿದಳು?

ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಚೌಪಟದಲೊದರಿದ
ರರಸನುಪಹತಿಗೊಪ್ಪುತೊಟ್ಟರೆ ಕರ್ಣಶಕುನಿಗಳು
ಗುರುನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದೊರಲಿದಳು ಭಾನುಮತಿ (ಅರಣ್ಯ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನಾದ ದುಶ್ಯಾಸನ ಮತ್ತು ಇತರರ ಪತ್ನಿಯರು, ಕೌರವನಿಗೆ ಇಂತಹ ಪರಿಸ್ಥಿತಿ ಒದಗಿದಾಗ ಶಕುನಿ, ಕರ್ಣ ಮುಂತಾದ ವೀರರು ಎಲ್ಲಿದ್ದರು, ಅವರೆಲ್ಲ ಸುಮ್ಮನಿದ್ದರೆ ಎಂದು ಕೂಗಿದರು, ಭೀಷ್ಮ ದ್ರೋಣರಿದ್ದರೆ ಇಂತಹ ಸೋಲು ಬರುತ್ತಿತ್ತೇ, ಯುಧಿಷ್ಠಿರನಿರುವ ಕಾಡು ಯಾವುದು ಎಂದು ಭಾನುಮತಿಯು ಕಣ್ಣೀರಿಟ್ಟಳು.

ಅರ್ಥ:
ಆದಿ: ಮುಂತಾದ; ಅರಸಿ: ರಾಣಿ; ಚೌಪಟ: ನಾಲ್ಕು ಕಡೆ; ಒದರು: ಕಿರುಚು; ಅರಸ: ರಾಜ; ಉಪಹತಿ: ಹೊಡೆತ; ಒಪ್ಪು: ಸಮ್ಮತಿಸು; ಗುರು: ಆಚಾರ್ಯ; ನದೀಸುತ: ಭೀಷ್ಮ; ಪರಿ: ರೀತಿ; ಪರಿಭವ: ಸೋಲು; ಪಾಡ: ರೀತಿ, ಬಗೆ, ಸ್ಥಿತಿ; ವನ: ಕಾಡು; ಒರಲು: ಗೋಳಿಡು;

ಪದವಿಂಗಡಣೆ:
ಕುರುಪತಿಯ+ ದುಶ್ಯಾಸನ+ಆದಿಗಳ್
ಅರಸಿಯರು +ಚೌಪಟದಲ್+ಒದರಿದರ್
ಅರಸನ್+ಉಪಹತಿಗ್+ಒಪ್ಪುತೊಟ್ಟರೆ+ ಕರ್ಣ+ಶಕುನಿಗಳು
ಗುರು+ನದೀಸುತರ್+ಇದ್ದರೀ +ಪರಿ
ಪರಿಭವಕೆ+ ಪಾಡಹುದೆ +ಪಾಂಡವರ್
ಅರಸನಿಹ +ವನವಾವುದ್+ಎಂದ್+ಒರಲಿದಳು +ಭಾನುಮತಿ

ಅಚ್ಚರಿ:
(೧) ಪ ಕಾರದ ಸಾಲು ಪದ – ಪರಿ ಪರಿಭವಕೆ ಪಾಡಹುದೆ ಪಾಂಡವರರಸನಿಹ
(೨) ನಾಲ್ಕು ಕಡೆ ಎಂದು ಹೇಳಲು – ಚೌಪಟ ಪದದ ಬಳಕೆ
(೩) ಪರಿ ಪರಿಭವ – ಪದಗಳ ಬಳಕೆ

ಪದ್ಯ ೧೫: ಭೀಷ್ಮರು ಕೃಷ್ಣನನ್ನು ಯಾವುದಕ್ಕೆ ಹೋಲಿಸಿದರು?

ಗುಣಮಯದ ಗರುವಾಯಿಯಲಿ ಝೇ
ವಣಗೆಗೊಂಬನು ಭೂತದಿಂದ್ರಿಯ
ಗಣದೊಡನೆ ನಿಜ ಪೌರುಷದಲೊದಗಿದ ಪವಾಡಿಗಳ
ಗುಣವ ಝಾಡಿಸಿದರೆ ಸಮಷ್ಟಿಯ
ಹಣಿತದಲಿ ಮುರಿದಿದಿರನಗಲಕೆ
ಕುಣಿವ ಚೌಪಟ ಬೊಮ್ಮಗಜವಿದನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪರಬ್ರಹ್ಮ ಗಜವು, ಗುಣಗಳ ಜೊತೆಗಿರುವಾಗ ಪ್ರಾಣ ಇಂದ್ರಿಯಗಳ ಸಹಿತವಾಗಿ ಪುರುಷನಂತೆ ತನ್ನನ್ನೋಲೈಸುವ ಹೊಗಳುಭಟರಾದ ಸುಖದುಃಖಗಳು, ಜೀವಭಾರದಿಮ್ದ ಊಟಮಾಡುತ್ತಾನೆ. ಜೀವತ್ವವನ್ನು ಸಮಷ್ಟಿಭಾವದ ಅಂಕುಶದಿಂದ ತಿವಿದಗ ಈ ಪರಬ್ರಹ್ಮ ಗಜವು ಇದಿರಾದ ಮಿಥ್ಯಾ ಜಗತ್ತನ್ನು ದಿಟ್ಟತನದಿಂದ ಮುರಿದು ತಾನೇ ತಾನಾಗಿ ವಿಜೃಂಭಿಸುತ್ತದೆ. ಇದನ್ನು ತಿಳಿದವರು ಯಾರು ಎಂದು ಭೀಷ್ಮರು ಕೇಳಿದರು.

ಅರ್ಥ:
ಗುಣ: ನಡತೆ, ಸ್ವಭಾವ; ಮಯ: ತುಂಬಿರುವುದು, ವ್ಯಾಪಿಸಿರುವುದು; ಗರುವ: ಹಿರಿಯ, ಶ್ರೇಷ್ಠ; ಝೇವಣಗೆ: ತುತ್ತು, ಗ್ರಾಸ; ಭೂತ: ಚರಾಚರಾತ್ಮಕ ಜೀವರಾಶಿ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಗಣ: ಗುಂಪು; ನಿಜ: ದಿಟ; ಪೌರುಷ: ಮನುಷ್ಯ ಪ್ರಯತ್ನ, ಸಾಹಸ; ಒದಗು: ಲಭ್ಯ, ದೊರೆತುದು; ಪವಾಡಿ: ಹೊಗಳುಭಟ್ಟ, ಸ್ತುತಿಪಾಠಕ; ಗುಣ: ಸ್ವಭಾವ; ಝಾಡಿಸು: ಅಲುಗಾಡಿಸು, ಒದರು; ಸಮಷ್ಟಿ: ಸಮಗ್ರವಾದುದು; ಹಣಿತ: ಹೊಡೆತ; ಮುರಿ: ಸೀಳು; ಕುಣಿ: ನರ್ತಿಸು; ಚೌಪಟ: ನಾಲ್ಕು ಕಡೆ; ಬೊಮ್ಮ: ಬ್ರಹ್ಮ; ಗಜ: ಆನೆ; ಅರಿ: ತಿಳಿ;

ಪದವಿಂಗಡಣೆ:
ಗುಣಮಯದ +ಗರುವಾಯಿಯಲಿ +ಝೇ
ವಣಗೆಗೊಂಬನು +ಭೂತದ್+ಇಂದ್ರಿಯ
ಗಣದೊಡನೆ+ ನಿಜ+ ಪೌರುಷದಲ್+ಒದಗಿದ +ಪವಾಡಿಗಳ
ಗುಣವ+ ಝಾಡಿಸಿದರೆ+ ಸಮಷ್ಟಿಯ
ಹಣಿತದಲಿ+ ಮುರಿದ್+ಇದಿರನಗಲಕೆ
ಕುಣಿವ +ಚೌಪಟ +ಬೊಮ್ಮ+ಗಜವಿದನ್+ಅರಿವರಾರೆಂದ

ಅಚ್ಚರಿ:
(೧) ಗುಣ, ಝೇವಣ, ಗಣ – ಪ್ರಾಸ ಪದಗಳು