ಪದ್ಯ ೧೦: ಕೃಷ್ಣನಿಗೆ ಭಕ್ತರಲ್ಲಿರುವ ಅಭಿಮಾನ ಎಂತಹುದು?

ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ (ಗದಾ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ಪಾಳೆಯದಲ್ಲಿರಲು ಬಿಡುವುದಿಲ್ಲ ಎನ್ನುವುದು ಒಂದು ವಾದವಾದರೆ, ಒಂದು ಪಕ್ಷ ಅವರನ್ನು ಇಲ್ಲಿಯೇ ಇರಲು ಬಿಟ್ಟಿದ್ದರೆ ತನ್ನ ಚಕ್ರವನ್ನು ಅಡ್ಡಹಿಡಿದು ಅವರು ಸಾಯುವುದನ್ನು ತಪ್ಪಿಸುತ್ತಾನೆ. ಹಗಲಾಗಲಿ, ರಾತ್ರಿಯಾಗಲಿ, ಮನೆ, ಕಾಡು, ಬೆಟ್ಟ, ಸಮುದ್ರ, ಅಗ್ನಿ, ಪಾಂಡವರು ಎಲ್ಲೇ ಇದ್ದರೂ ಅವರನ್ನು ರಕ್ಷಿಸುತ್ತಾನೆ. ತನ್ನ ಭಕ್ತರಲ್ಲಿ ಶ್ರೀಕೃಷ್ಣನಿಗೆ ಅಷ್ಟು ಅಭಿಮಾನ.

ಅರ್ಥ:
ಇರಿಸು: ಇರಲು ಬಿಡು; ಮುರಾರಿ: ಕೃಷ್ಣ; ಕೌಂತೇಯರು: ಪಾಂಡವರು; ನಿಧಾನ: ತಡೆ, ಆತುರವಿಲ್ಲದೆ; ಮೇಣ್: ಅಥವ; ಕೊಲು: ಸಾಯಿಸು; ಅಡ್ಡೈಸು: ಅಡ್ಡಪಡಿಸು; ಚಕ್ರ: ಸುದರ್ಶನ ಚಕ್ರ; ಇರುಳು: ರಾತ್ರಿ; ಹಗಲು: ಬೆಳಗ್ಗೆ; ಅಡವಿ: ಕಾಡು; ಮನೆ: ಆಲಯ; ಶರಧಿ: ಸಮುದ್ರ; ಪರ್ವತ: ಬೆಟ್ಟ; ಅಗ್ನಿ: ಬೆಂಕಿ; ಅವಧಾನ: ಎಚ್ಚರಿಕೆ ಹೇಳುವುದು, ಸ್ತುತಿಮಾಡು; ಬಲುಹು: ಶಕ್ತಿ, ದೃಢತೆ;

ಪದವಿಂಗಡಣೆ:
ಇರಿಸನ್+ಇಲ್ಲಿ +ಮುರಾರಿ +ಕೌಂತೇ
ಯರನ್+ಇದೊಂದು +ನಿಧಾನ +ಮೇಣ್+
ಇಲ್ಲಿರಿಸಿದಡೆ +ಕೊಲಲೀಯನ್+ಅಡ್ಡೈಸುವನು +ಚಕ್ರದಲಿ
ಇರುಳು +ಹಗಲ್+ಅಡವಿಯಲಿ +ಮನೆಯಲಿ
ಶರಧಿಯಲಿ +ಪರ್ವತದಲ್+ಅಗ್ನಿಯಲ್
ಇರಲಿ +ತನ್ನವರಲ್ಲಿ+ ಹರಿಗ್+ಅವಧಾನ +ಬಲುಹೆಂದ

ಅಚ್ಚರಿ:
(೧) ಕೃಷ್ಣನ ಶಕ್ತಿ – ತನ್ನವರಲ್ಲಿ ಹರಿಗವಧಾನ ಬಲುಹೆಂದ

ಪದ್ಯ ೨: ರಾವುತರು ಹೇಗೆ ನುಗ್ಗಿದರು?

ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು (ದ್ರೋಣ ಪರ್ವ, ೧೬ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಅಲ್ಲಲ್ಲಿ ಸೈನಿಕರು ಶತ್ರುವಿನ ಸುತ್ತಲೂ ಕವಿದರು. ಸಬಳ, ತೋಮರ, ಸಲ್ಲೆಹ, ಚಕ್ರ ಮೊದಲಾದ ಆಯುಧಗಲ ಮಳೆಗರೆದರು. ಆನೆಗಳು ನುಗ್ಗಿದವು. ರಥಿಕರು ಬಾಣಗಳನ್ನು ಬಿಟ್ಟರು. ತೇರಿನ ಆಯುಧ ತುಂಬುವ ಕಂಬುಗೆಯಲ್ಲಿ ಕುದುರೆಗಳ ಗೊರಸು ಕುಣಿಯುವಂತೆ ರಾವುತರು ನುಗ್ಗಿದರು.

ಅರ್ಥ:
ಚೆಲ್ಲು: ಹರಡು; ಬಲ: ಸೈನ್ಯ; ಜಲಧಿ: ಸಾಗರ; ಭಟ: ಸೈನಿಕ; ಮುಕ್ಕುರು: ಕವಿ, ಮುತ್ತು, ಆವರಿಸು; ಸಬಳ: ಈಟಿ; ಸೆಲ್ಲೆಹ: ಈಟಿ, ಭರ್ಜಿ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಕ್ರ: ತಿರುಗುವಂತಹ ಆಯುಧ; ಘಲ್ಲಿಸು: ಶಬ್ದಮಾಡು; ಆನೆ: ಗಜ; ತೇರು: ಬಂಡಿ; ಬಿಲ್ಲು: ಚಾಪ; ತುಡುಕು: ಹೋರಾಡು, ಸೆಣಸು; ಕಂಬುಗೆ: ಆಯುಧಗಳನ್ನು ತುಂಬುವ ರಥದ ಒಂದು ಭಾಗ; ಖುರ: ಕುದುರೆ ದನಕರು ಗಳ ಕಾಲಿನ ಗೊರಸು, ಕೊಳಗು; ಕುಣಿ: ನರ್ತಿಸು; ಹೊಕ್ಕು: ಸೇರು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಚೆಲ್ಲಿತ್+ಅರಿಬಲ+ಜಲಧಿ +ಭಟರ್
ಅಲ್ಲಲ್ಲಿ +ಮುಕ್ಕುರುಕಿದರು+ ಸಬಳದ
ಸೆಲ್ಲೆಹದ +ತೋಮರದ +ಚಕ್ರದ +ಸರಿಯ +ಸೈಗರೆದು
ಘಲ್ಲಿಸಿದವ್+ಆನೆಗಳು +ತೇರಿನ
ಬಿಲ್ಲವರು +ತುಡುಕಿದರು +ಕಂಬುಗೆ
ಯಲ್ಲಿ +ಖುರ +ಕುಣಿದಾಡೆ +ಹೊಕ್ಕರು +ರಾಯ+ರಾವುತರು

ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಸೆಲ್ಲೆಹ, ತೋಮರ, ಚಕ್ರ

ಪದ್ಯ ೫೯: ಭೀಮನು ಕರ್ಣನ ಮೇಲೆ ಏನನ್ನು ಹಾರಿಸಿದನು?

ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆಗ ಭೀಮನು ಅಲ್ಲಿ ಸತ್ತು ಬಿದ್ದಿದ್ದ ಆನೆ, ಕುದುರೆಗಳನ್ನು, ರಥಗಳ ಗಾಲಿಗಳನ್ನು, ಹಿಡಿದೆತ್ತಿ ಕರ್ಣನ ಮೇಲೆಸೆದನು. ಕರ್ಣನು ಆ ಆನೆಯ ದೇಹವನ್ನು, ಕುದುರೆಯ ಅಂಗವನ್ನು, ರಥದ ಚಕ್ರವನ್ನು ಮಧ್ಯದಲ್ಲೇ ಕತ್ತರಿಸಿ ಬಿಸಾಡಿದನು.

ಅರ್ಥ:
ಮಡಿ: ಸಾವು; ಕರಿ: ಆನೆ; ಕಾಯ: ದೇಹ; ಒಡಲು: ದೇಹ; ತುರಗ: ದೇಹ; ಅಂಗ: ದೇಹದ ಭಾಗ; ಮುಗ್ಗು: ಬಾಗು, ಮಣಿ; ಕೆಡೆ: ಬೀಳು, ಕುಸಿ; ತೇರು: ಬಂಡಿ, ರಥ; ಗಾಲಿ: ಚಕ್ರ; ಕೊಂಡು: ಬರೆಮಾಡು; ಎಡೆ: ಸುಲಿ, ತೆಗೆ; ಕರಿ: ಆನೆ; ಹಯ: ಕುದುರೆ; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ಹೊದ್ದು: ಆವರಿಸು, ಮುಸುಕು; ಅಳವಿ: ಯುದ್ಧ;

ಪದವಿಂಗಡಣೆ:
ಮಡಿದ +ಕರಿಗಳ +ಕಾಯವನು +ನಿ
ಟ್ಟೊಡಲ +ತುರಗ್+ಅಂಗಳನು +ಮುಗ್ಗಿದ
ಕೆಡೆದ +ತೇರಿನ +ಗಾಲಿಗಳ+ ಕೊಂಡಿಟ್ಟನಾ +ಭೀಮ
ಎಡೆಯಲ್+ಆ+ ಕರಿ+ಒಡಲನ್+ಆ+ ಹಯದ್
ಒಡಲನ್+ಆ+ ರಥ +ಚಕ್ರವನು +ಕಡಿ
ಕಡಿದು +ಬಿಸುಟನು +ಹೊದ್ದಿದನು +ಕಟ್ಟಳವಿಯಲಿ +ಕರ್ಣ

ಅಚ್ಚರಿ:
(೧) ಕಾಯ, ಒಡಲು; ತುರಗ, ಹಯ; ಗಾಲಿ, ಚಕ್ರ – ಸಮಾನಾರ್ಥಕ ಪದ

ಪದ್ಯ ೧: ಅರ್ಜುನನು ಆಯುಧಶಾಲೆಯಲ್ಲಿ ಯಾವ ಆಯುಧಗಳನ್ನು ತೆಗೆಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ (ದ್ರೋಣ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ಆಯುಧಶಾಲೆಯನ್ನು ಹೊಕ್ಕು, ಬಿಲ್ಲು ಮೊದಲಾದ ಎಲ್ಲಾ ಆಯುಧಗಳನ್ನು ತೆಗೆಸಿದನು. ಚೂಪಾದ ಬಾಣಗಳು, ಬಿಲ್ಲು, ಗಂಡುಗೊಡಲಿ, ತ್ರಿಶೂಲ, ಕತ್ತಿ, ಮುದ್ಗರ, ಚಕ್ರ, ಶಲ್ಯ, ಶಕ್ತಿ, ತೋಮರಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹೊಕ್ಕು: ಸೇರು; ಆಯುಧ: ಶಸ್ತ್ರ; ಶಾಲೆ: ಪಾಠಶಾಲೆ, ಆಲಯ; ತೆಗೆಸು: ಹೊರತರು; ಧನು: ಬಿಲ್ಲು; ಕೈದು: ಆಯುಧ, ಶಸ್ತ್ರ; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಚಾಪ: ಬಿಲ್ಲು; ಕೃಪಾಣ: ಕತ್ತಿ, ಖಡ್ಗ; ಪರಶು: ಕೊಡಲಿ, ಕುಠಾರ; ತ್ರಿಶೂಲ: ಮೂರು ಮೊನೆಗಳುಳ್ಳ ಆಯುಧ, ಪಿನಾಕ; ಮುದ್ಗರ: ಗದೆ; ಶಕುತಿ: ಶಕ್ತಿ, ಬಲ; ತೋಮರ: ಈಟಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಫಲುಗುಣ +ಹೊಕ್ಕನ್+ಆಯುಧ
ಶಾಲೆಯನು +ತೆಗೆಸಿದನು +ಧನು+ ಮೊದಲಾದ +ಕೈದುಗಳ
ಸಾಲರಿದು +ನಿಲಿಸಿದನು +ನಿಶಿತ +ಶ
ರಾಳಿ +ಚಾಪ +ಕೃಪಾಣ +ಪರಶು +ತ್ರಿ
ಶೂಲ +ಮುದ್ಗರ+ ಚಕ್ರ +ಸೆಲ್ಲೆಹ +ಶಕುತಿ +ತೋಮರವ

ಅಚ್ಚರಿ:
(೧) ಆಯುಧಗಳ ಹೆಸರು – ಶರಾಳಿ, ಚಾಪ, ಕೃಪಾಣ, ಪರಶು, ತ್ರಿಶೂಲ, ಮುದ್ಗರ, ಚಕ್ರ, ತೋಮರ

ಪದ್ಯ ೫೬: ಕೌರವನೇಕೆ ಚಿಂತಿಸಿದನು?

ಹರಿಯ ಚಕ್ರದ ಸತ್ವವೀತನ
ದುರದೊಳಾತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ (ದ್ರೋಣ ಪರ್ವ, ೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ವಿಷ್ಣುವಿನ ಸುದರ್ಶನ ಚಕ್ರವು ಇವನು ಹಿಡಿದ ಚಕ್ರಕ್ಕೆ ಬಂದಿತೇನೋ ಎನ್ನುವಂತೆ ಅವನು ಹಿಡಿದ ಚಕ್ರದ ಹೊಡೆತಕ್ಕೆ ಕೌರವರ ಅಪಾರ ಸೈನ್ಯವು ಉರುಳಿತು. ಅವನನ್ನು ಎದುರಿಸಿ ಯುದ್ಧಮಾಡುವವರೇ ಇಲ್ಲ, ಆರು ರಥದಲ್ಲಿದ್ದ ಪರಾಕ್ರಮರ ಜೋರು ಇಲ್ಲವಾಯಿತು. ರಾಜನ ಜೀವನನ್ನುಳಿಸುವವರು ಕಾಣುತ್ತಿಲ್ಲ ಎಂದು ಕೌರವನು ಚಿಂತಿಸಿದನು.

ಅರ್ಥ:
ಹರಿ: ವಿಷ್ಣು; ಚಕ್ರ: ಸುದರ್ಶನ ಚಕ್ರ; ಸತ್ವ: ಸಾರ, ರಸ; ಧುರ: ಯುದ್ಧ; ರಥ: ಬಂಡಿ; ಚಕ್ರ: ಗಾಲಿ; ಅರಿ: ವೈರಿ; ಬಲ: ಸೈನ್ಯ; ಮುಗ್ಗು: ಮುನ್ನುಗ್ಗು; ಕೆಡೆ: ಬೀಳು, ಕುಸಿ; ಬಹಳ: ತುಂಬ; ತಳ: ಕೆಳಗು, ಪಾತಾಳ; ತಳತಂತ್ರ: ಕೈಕೆಳಗಿನ ಸೈನ್ಯ; ಬಿರುದು: ಗೌರವ ಸೂಚಕ ಪದ; ಉರವಣೆ: ಆತುರ, ಅವಸರ; ಹಿಂದೆ: ಹಿಂಭಾಗ; ರಾಯ: ರಾಜ; ಗುರು: ಆಚಾರ್ಯ; ಕಂಡು: ನೋಡು; ಚಿಂತಿಸು: ಯೋಚಿಸು;

ಪದವಿಂಗಡಣೆ:
ಹರಿಯ +ಚಕ್ರದ + ಸತ್ವವ್+ಈತನ
ದುರದೊಳಾತ್+ಎನೆ+ ರಥದ +ಚಕ್ರದೊಳ್
ಅರಿ+ಬಲವನ್+ಇಡೆ +ಮುಗ್ಗಿ +ಕೆಡೆದುದು +ಬಹಳ +ತಳತಂತ್ರ
ಬಿರುದರ್+ಆನುವರಿಲ್ಲ+ ಷಡುರಥರ್
ಉರವಣಿಯು +ಹಿಂದಾಯ್ತು +ರಾಯರ
ಗುರುವ +ಕಂಡವರಿಲ್ಲೆನುತ+ ಕುರುರಾಯ +ಚಿಂತಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಚಕ್ರದ ಸತ್ವವೀತನದುರದೊಳಾತೆನೆ

ಪದ್ಯ ೩೧: ಶ್ರೀಕೃಷ್ಣನು ಯಾವುದನ್ನು ನೋಡಿದನು?

ಮುರಮಥನ ಕೆಲ್ಲೈಸಿ ನೋಡಿದ
ನುರುಭಯಂಕರ ಚಕ್ರವನು ದು
ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು
ತರಳ ತರಣೀಚಕ್ರವನು ಸಂ
ಗರ ವಿನಿರ್ಜಿತ ಚಕ್ರವನು ಭಯ
ಭರ ವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು (ಭೀಷ್ಮ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೋಪ ವಿಹ್ವಲನಾದ ಶ್ರೀಕೃಷ್ಣನು ಮಹಾಭಯಂಕರವೂ, ಸದಾ ಸಾಣೆಹಿಡಿದು ಚೂಪಾದ ಎದುರಿಸಲಸಾಧ್ಯವಾದ, ಉದಯರವಿಯ ವರ್ಣವನ್ನುಳ್ಳ, ಯುದ್ಧದಲ್ಲಿ ಭಯವನ್ನೇ ಕಾಣದ, ಗೆಲುವನ್ನೇ ಸದಾ ಸಾಧಿಸುವ ಸುದರ್ಶನ ಚಕ್ರವನ್ನು ಮಹಾಕೋಪದಿಂದ ನೋಡಿದನು.

ಅರ್ಥ:
ಮುರಮಥನ: ಕೃಷ್ಣ (ಮುರನೆಂಬ ರಾಕ್ಷಸನನ್ನು ಕೊಂದವ); ಕೆಲ್ಲೈಸು: ತುರಿಸಿಕೊಳ್ಳುವಿಕೆ, ಕೆರೆತ; ನೋಡು: ವೀಕ್ಷಿಸು; ಉರು: ಹೆಚ್ಚಾದ; ಭಯಂಕರ: ಭಯವನ್ನುಂಟು ಮಾಡುವ, ಘೋರವಾದ; ಚಕ್ರ: ಸುದರ್ಶನ ಚಕ್ರ; ದುರ್ಧರ: ತಾಳಲು ಅಸಾಧ್ಯವಾದ; ಉಷಧಾರಾ: ಸೂರ್ಯನ ಉದಯ ವರ್ಣವನ್ನುಳ್ಳ; ಲೂಯಮಾನ: ಕೆದರಿದ ಗರಿಗಳು ಗಾಳಿಯಲ್ಲಿ ಆಡುವಂತೆ; ನಿಶಾತ: ಹರಿತವಾದ; ತರಳ:ಚಂಚಲವಾದ; ತರಣಿ: ಸೂರ್ಯ, ನೇಸರು; ಸಂಗರ: ಯುದ್ಧ; ವಿನಿರ್ಜಿತ: ಸಂಪೂರ್ಣವಾಗಿ ಗೆಲ್ಲಲ್ಪಟ್ಟ; ಭಯ: ಹೆದರಿಕೆ; ಭರ: ಭಾರ, ಹೊರೆ; ವಿವರ್ಜಿತ: ದೂರವಾದುದು; ಕಡುಗೋಪ: ಬಹಳ ಕೋಪ; ಕೋಪ: ಸಿಟ್ಟು, ಮುಳಿ; ಕುಡಿ:ತುದಿ, ಕೊನೆ;

ಪದವಿಂಗಡಣೆ:
ಮುರಮಥನ +ಕೆಲ್ಲೈಸಿ +ನೋಡಿದನ್
ಉರು+ಭಯಂಕರ+ ಚಕ್ರವನು +ದು
ರ್ಧರ್+ಉಷಧಾರಾ +ಲೂಯಮಾನ +ನಿಶಾತ+ಚಕ್ರವನು
ತರಳ+ ತರಣೀ+ಚಕ್ರವನು +ಸಂ
ಗರ +ವಿನಿರ್ಜಿತ +ಚಕ್ರವನು +ಭಯ
ಭರ +ವಿವರ್ಜಿತ +ಚಕ್ರವನು +ಕಡುಗೋಪ +ಕುಡಿಯಿಡಲು

ಅಚ್ಚರಿ:
(೧) ಸುದರ್ಶನ ಚಕ್ರದ ವರ್ಣನೆ – ಉರುಭಯಂಕರ ಚಕ್ರವನು, ದುರ್ಧರುಷಧಾರಾ ಲೂಯಮಾನ ನಿಶಾತಚಕ್ರವನು, ತರಳ ತರಣೀಚಕ್ರವನು, ಸಂಗರ ವಿನಿರ್ಜಿತ ಚಕ್ರವನು, ಭಯಭರ ವಿವರ್ಜಿತ ಚಕ್ರವನು

ಪದ್ಯ ೫೭: ಜಂಬೂದ್ವೀಪದಲ್ಲಿ ಎಷ್ಟು ವರುಷಗಳಿವೆ?

ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತ ಸಂಖ್ಯೆಯಾದ್ವೀಪ
ನಿರುತಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ನಡುವಿಹುದು ಚಕ್ರದ ಕಂಬಿಯಂದದಲಿ (ಅರಣ್ಯ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜಂಬೂದ್ವೀಪದಲ್ಲಿ ಒಂಬತ್ತು ವರ್ಷಗಳಿವೆ. ಉಳಿದವುಗಳಲ್ಲಿ ಹಲವು ದ್ವೀಪಗಳಿವೆ. ಕಡೆಯ ದ್ವೀಪದಲ್ಲಿ ಎರಡು ವರ್ಷಗಳಿವೆ. ಅಲ್ಲಿ ಚಕ್ರದ ಕಂಬಿಯಂತೆ ಮಾನಸಗಿರಿಯಿದೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ವಿಸ್ತರ: ವಿಸ್ತಾರ, ಅಗಲ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ನಿರುತ: ನಿಶ್ಚಯ; ಗಿರಿ: ಬೆಟ್ಟ; ನಡು: ಮಧ್ಯ; ಚಕ್ರ: ಗಾಲಿ; ಕಂಬಿ: ಉಕ್ಕಿನ ಸಲಾಕಿ;

ಪದವಿಂಗಡಣೆ:
ವರುಷವ್+ಒಂಬತ್ತಾಗಿಹುದು +ವಿ
ಸ್ತರದ +ಜಂಬೂ+ದ್ವೀಪವ್+ಒಂದೇ
ವರುಷವ್+ಏಳಾಗಿಹವು +ತಾ +ಶತ+ ಸಂಖ್ಯೆಯಾ+ದ್ವೀಪ
ನಿರುತಕಡೆಯ+ ದ್ವೀಪವೆಂಬುದು
ವರುಷವ್+ಎರಡಾಗಿರಲು +ಮಾನಸ
ಗಿರಿ+ಅದರ +ನಡುವಿಹುದು +ಚಕ್ರದ +ಕಂಬಿಯಂದದಲಿ

ಪದ್ಯ ೧೨: ಕೃಷ್ಣನು ಕರ್ಣನನ್ನು ಕೊಲ್ಲಲ್ಲು ಏನುಪಾಯ ಮಾಡಿದ?

ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಥಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ (ಕರ್ಣ ಪರ್ವ, ೨೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನಿಗೆ ನೀನು ಕರಗುವೆಯಾ? ನಾನು ಬೇಡವೆನ್ನುವುದಿಲ್ಲ, ಭೀಮನನ್ನು ಕರೆಸಿ ಕೊಲ್ಲಿಸುತ್ತೇನೆ, ನೀನೇಕೆ ಇಷ್ಟು ನಿಷ್ಠುರನಾಗಿರುವೆ ಎನ್ನಬೇಡ. ಕರ್ಣನನ್ನು ಕೊಲ್ಲಲು ನನ್ನಿಂದ ನಿನ್ನಿಂದ ನನ್ನಿಂದ ಆಗುವುದಿಲ್ಲವೇ? ಬೇಡ, ಸುದರ್ಶನ ಚಕ್ರದಿಂದ ಕರ್ಣನನ್ನು ಸಂಹರಿಸುತ್ತೇನೆ. ಯುಧಿಷ್ಠಿರನ ಚಕ್ರವರ್ತಿ ಪದವಿ ನಿಲ್ಲಲಿ, ನೀನು ಹೆದರುವುದಾದರೆ ನೀನು ಹೋಗು ಎಂದು ಕೃಷ್ಣನು ಅರ್ಜುನನಿಗೆ ಹೇಳಿದ

ಅರ್ಥ:
ಕರಗು: ಕನಿಕರ ಪಡು; ಸಾರು: ಹತ್ತಿರಕ್ಕೆ ಬರು, ಘೋಷಿಸು; ಕರೆ: ಬರೆಮಾಡಿ; ಕೊಲಿಸು: ಸಾಯಿಸುತ್ತೇನೆ; ನಿಷ್ಠುರ: ಕಠಿಣವಾದುದು, ಒರಟು; ತೆಗೆ: ಹೊರತರು; ಹರಿ: ಕಡಿ, ಕತ್ತರಿಸು; ಹಗೆ: ವೈರ; ಚಕ್ರ: ಸುದರ್ಶನ ಚಕ್ರ; ಅರಿ: ವೈರಿ; ಭಟ: ಪರಾಕ್ರಮ; ಮುರಿ: ಸೀಳು; ಅರಸು: ರಾಜ; ನಿಲು: ನಿಲ್ಲು, ಸುಮ್ಮನಿರು; ಅಂಜು: ಹೆದರು;

ಪದವಿಂಗಡಣೆ:
ಕರಗುವರೆ +ನೀ +ಸಾರು +ಭೀಮನ
ಕರೆದು +ಕೊಲಿಸುವೆನ್+ಈತನನು +ನಿ
ಷ್ಠುರನಲಾ+ ನೀನ್+ಎನ್ನದಿರು +ತೆಗೆ +ನಿನ್ನ +ತನ್ನಿಂದ
ಹರಿಯದೇ +ಹಗೆ+ ನಮ್ಮ +ಚಕ್ರದಲ್
ಅರಿಭಟನ+ ಮುರಿವೆನು +ಯುಧಿಷ್ಥಿರನ್
ಅರಸುತನವದು +ನಿಲಲಿ +ನೀನಂಜುವರೆ+ ಸಾರೆಂದ

ಅಚ್ಚರಿ:
(೧) ಕೃಷ್ಣನ ದೃಢ ನಿರ್ಣಯ – ಭೀಮನ ಕರೆದು ಕೊಲಿಸುವೆ; ನಮ್ಮ ಚಕ್ರದಲರಿಭಟನ ಮುರಿವೆನು

ಪದ್ಯ ೩೨: ರಣಭೂಮಿ ಹೇಗೆ ರಂಜಿಸಿತು?

ಮುರಿದ ದೂಹತ್ತಿಗಳ ನೆಗ್ಗಿದ
ಸುರಗಿಗಳ ಚಿನಕಡಿಯ ತೋಮರ
ಪರಶು ಸೆಲ್ಲೆಹ ಚಕ್ರ ಸಬಳ ಮುಸುಂಡಿ ಲೌಡೆಗಳ
ಹರಿದ ಹೊದೆಯಂಬುಡಿದ ಬಿಲ್ಲಿನ
ಬಿರಿದ ಬತ್ತಳಿಕೆಗಳ ಸೀಳಿದ
ಹರಿಗೆಗಳ ಹೇರಾಳದಲಿ ರಂಜಿಸಿತು ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಚೂಪಾದ ಕತ್ತಿಗಳು, ನುಗ್ಗಾದ ಸಣ್ಣ ಕತ್ತಿಗಳು, ಪುಡಿಯಾದ ತೋಮರ, ಕೊಡಲಿ, ಕುಠಾರ, ಈಟಿ, ಚಕ್ರ, ಉದ್ದಮಚ್ಚು, ಮುಸುಂಡಿ, ಲೌಡಿ, ತುಂಡಾದ ಬಾಣಗಳ ರಾಶಿಗಳು, ಹೆದೆ ಹರಿದ ಬಿಲ್ಲುಗಳು, ಬಿರಿದು ಹೋದ ಬತ್ತಳಿಕೆಗಳು, ಸೀಳಿದ ಗುರಾಣಿಗಳಿಂದ ರಣಭೂಮಿ ರಂಜಿಸಿತು.

ಅರ್ಥ:
ಮುರಿ: ಸೀಳು; ದೂಹತ್ತಿ: ಎರಡು ಕಡೆ ಚೂಪಾದ ಕತ್ತಿ, ಒಂದು ಆಯುಧ; ನೆಗ್ಗು: ಕುಗ್ಗು, ಕುಸಿ; ಸುರಗಿ: ಸಣ್ಣ ಕತ್ತಿ, ಚೂರಿ; ಚಿನಕಡಿ: ಚಿನ್ನದ ತುಂಡು; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಪರಶು: ಕೊಡಲಿ, ಕುಠಾರ; ಸೆಲ್ಲೆಹ: ಈಟಿ, ಭರ್ಜಿ; ಚಕ್ರ: ತಿರುಗುವ ಒಂದು ಆಯುಧ; ಸಬಳ: ಈಟಿ, ಭರ್ಜಿ; ಮುಸುಂಡಿ: ಮುಖಹೇಡಿ, ಮಕೇಡಿ, ಅಂಜುಬುರುಕ; ಲೌಡೆ: ಒಂದು ಬಗೆಯ ಕಬ್ಬಿಣದ ಆಯುಧ; ಹರಿ: ಸೀಳು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಅಂಬು: ಬಾಣ; ಬಿಲ್ಲು: ಚಾಪ; ಬಿರಿ: ಬಿರುಕು, ಸೀಳು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಸೀಳು: ಚೂರಾಗು; ಹರಿಗೆ: ಚಿಲುಮೆ, ತಲೆಪೆರಿಗೆ; ಹೇರಾಳ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಮುರಿದ+ ದೂಹತ್ತಿಗಳ +ನೆಗ್ಗಿದ
ಸುರಗಿಗಳ +ಚಿನಕಡಿಯ +ತೋಮರ
ಪರಶು +ಸೆಲ್ಲೆಹ +ಚಕ್ರ+ ಸಬಳ +ಮುಸುಂಡಿ +ಲೌಡೆಗಳ
ಹರಿದ +ಹೊದೆಯಂಬುಡಿದ +ಬಿಲ್ಲಿನ
ಬಿರಿದ+ ಬತ್ತಳಿಕೆಗಳ+ ಸೀಳಿದ
ಹರಿಗೆಗಳ+ ಹೇರಾಳದಲಿ +ರಂಜಿಸಿತು +ರಣಭೂಮಿ

ಅಚ್ಚರಿ:
(೧) ಭಯಂಕರವಾದ ರಣಭೂಮಿ ಕುಮಾರವ್ಯಾಸನಿಗೆ ರಂಜನೆಯಾಗಿ ಕಂಡದ್ದು
(೨) ದೂಹತ್ತಿ, ಸುರಗಿ, ತೋಮರ, ಪರಶು, ಚಕ್ರ, ಸಬಳ, ಮುಸುಂಡಿ, ಲೌಡೆ, ಬಿಲ್ಲು, ಬತ್ತಳಿಕೆ, ಹರಿಗೆ – ಆಯುಧಗಳ ಪರಿಚಯ

ಪದ್ಯ ೯: ಕೌರವ ಸೇನೆಯು ಭೀಮನನ್ನು ಹೇಗೆ ಆವರಿಸಿತು?

ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ (ಕರ್ಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ರಣದುತ್ಸಾಹಿಗಳಾಗಿ ಕರ್ಣದ್ರೋಹಿಯೆಲ್ಲಿ ತೋರಿಸಿ ಎಂದು ಕೂಗುತ್ತಾ ಬಂದು ಎದುರಾಳಿ ಸೈನ್ಯವನ್ನು ಮುತ್ತಿದರು. ಭಲ್ಲೆಹಗಳ ತಿವಿತ, ಎಸೆದ ಚಕ್ರ, ಮುತ್ತುವ ಬಾಣ, ಬೀಸಿದ ಖಡ್ಗಗಳು ಭೀಮನನ್ನು ಮುತ್ತಿದವು.

ಅರ್ಥ:
ಕವಿದು: ಆವರಿಸು; ಗರಿಗಟ್ಟು: ಸಂಭ್ರಮಗೊಳ್ಳು; ನಿವಹ: ಗುಂಪು; ಮೋಡಾಮೋಡಿ: ಆಶ್ಚರ್ಯಕರ; ರಣ: ಯುದ್ಧ; ರಣದವಕಿ: ಯುದ್ಧದಲ್ಲಿ ಉತ್ಸುಕನಾದವ; ದ್ರೋಹಿ: ವೈರಿ; ತೋರು: ಗೋಚರ, ಕಾಣಿಸು; ತಿವಿ: ಚುಚ್ಚು; ಬಲ್ಲೆ:ಈಟಿ; ಚಕ್ರ: ಗಾಲಿ; ಕವಿ: ಮುಚ್ಚು; ಬಾಣ: ಶರ; ಹೊಯ್ವ: ಹೊಡೆಯುವ; ಖಡ್ಗ: ಕತ್ತಿ; ವಿವಿಧ: ಹಲವಾರು; ಬಲ; ಶಕ್ತಿ; ಔಕು: ಒತ್ತು; ಮುತ್ತು: ಆವರಿಸು; ಪವನ: ವಾಯು; ನಂದನ: ಮಗ;

ಪದವಿಂಗಡಣೆ:
ಕವಿದುದಿದು +ಗರಿಗಟ್ಟಿ+ ಕೌರವ
ನಿವಹ +ಮೋಡಾಮೋಡಿಯಲಿ +ರಣ
ದವಕಿ+ ಕರ್ಣ+ದ್ರೋಹಿಯಾವೆಡೆ+ ತೋರು +ತೋರೆನುತ
ತಿವಿವ+ ಬಲ್ಲೆಹದ್+ಇಡುವ +ಚಕ್ರದ
ಕವಿವ +ಬಾಣದ +ಹೊಯ್ವ +ಖಡ್ಗದ
ವಿವಿಧಬಲ+ ಬಿಡದೌಕಿ+ ಮುತ್ತಿತು+ ಪವನ+ನಂದನನ

ಅಚ್ಚರಿ:
(೧) ಉತ್ಸಾಹದ ಮಾತುಗಳು – ತೋರು ತೋರೆನುತ
(೨) ಬಲ್ಲೆಹ, ಚಕ್ರ, ಬಾಣ, ಖಡ್ಗ – ಆಯುಧಗಳ ವಿವರ