ಪದ್ಯ ೫: ಜಗತ್ತು ಪಾಂಡುರಾಜನ ಆಳ್ವಿಕೆಯಲ್ಲಿ ಹೇಗೆ ತೋರಿತು?

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜನ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ (ಆದಿ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡುರಾಜನ ಶುದ್ಧವಾದ ಕಿರ್ತಿಯು ಹರಡಿ ಜಗತ್ತು ಬಿಳುಪಾಯಿತು. ನಿಷ್ಠುರತೆಯಿಂದ ಅವನು ಝಳಪಿಸುವ ಕತ್ತಿಯ ದೆಸೆಯಿಂದ ಜಗತ್ತು ಕೆಂಪಾಯಿತು. ಶತ್ರುಸೈನ್ಯವನ್ನು ಬಗ್ಗುಬಡಿಯುವ ಅವನ ಕೋಪದಿಂದ ಜಗತ್ತು ಕಪ್ಪಾಗಿ ಕಾಣಿಸುತ್ತಿತ್ತು.

ಅರ್ಥ:
ಪಸರಿಸು: ಹರಡು; ಧೌತ: ಬಿಳಿ, ಶುಭ್ರ; ಕೀರ್ತಿ: ಖ್ಯಾತಿ; ಬಿಳುಪು: ಬಿಳಿಯ ಬಣ್ಣ; ಜನ: ಮನುಷ್ಯರು; ನಿಪ್ಪಸರ: ಅತಿಶಯ, ಹೆಚ್ಚಳ; ಝಳಪಿಸು: ಬೀಸು, ಹೆದರಿಸು; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಸೊಂಪು: ಸೊಗಸು, ಚೆಲುವು; ಮಸಗು: ಹರಡು; ಅಗ್ಗ: ಶ್ರೇಷ್ಠ; ಪರಬಲ: ವೈರಿ; ವಿಸರ: ವಿಸ್ತಾರ, ವ್ಯಾಪ್ತಿ; ದಳ: ಸೈನ್ಯ; ಕ್ರೋಧ: ಕೋಪ; ತಾಮಸ: ಕತ್ತಲೆ, ಅಂಧಕಾರ, ನಿಧಾನ; ಅಸಿತ: ಕಪ್ಪಾದುದು; ಭಾಸ: ಕಾಣು; ಭುವನ: ಜಗತ್ತು; ವಿಸ್ತಾರ: ಹರಡು; ಆಭಾಸ: ಕಾಂತಿ, ಪ್ರಕಾಶ;

ಪದವಿಂಗಡಣೆ:
ಪಸರಿಸಿದ +ಪರಿಧೌತ+ಕೀರ್ತಿ
ಪ್ರಸರದಲಿ +ಬೆಳುಪಾಯ್ತು +ಜನ +ನಿ
ಪ್ಪಸರದಲಿ +ಝಳಪಿಸುವ +ಖಂಡೆಯ +ಸಿರಿಯ +ಸೊಂಪಿನಲಿ
ಮಸಗಿತ್+ಅಗ್ಗದ+ ಕೆಂಪು +ಪರಬಲ
ವಿಸರ+ ದಳನ +ಕ್ರೋಧಮಯ +ತಾ
ಮಸದಿನ್+ಅಸಿತ್+ಆಭಾಸಮಾದುದು +ಭುವನ+ವಿಸ್ತಾರ

ಅಚ್ಚರಿ:
(೧) ಪಸರಿಸಿ, ಪ್ರಸರ, ನಿಪ್ಪಸರ – ಪದಗಳ ಬಳಕೆ
(೨) ಬೆಳುಪು, ಕೆಂಪು, ಅಸಿತ – ಬಣ್ಣಗಳ ಬಳಕೆ
(೩) ರೂಪಕದ ಪ್ರಯೋಗ – ಪರಬಲ ವಿಸರ ದಳನ ಕ್ರೋಧಮಯ ತಾಮಸದಿನಸಿತಾಭಾಸಮಾದುದು

ಪದ್ಯ ೧೫: ಭೀಮಾರ್ಜುನರು ಹೇಗೆ ಗರ್ಜಿಸಿದರು?

ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ (ಗದಾ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಕುನಿಯ ದಳಕ್ಕೆ ಭೀಮಾರ್ಜುನರು ನುಗ್ಗಿ, ಕೌರವನು ಇದಿರಿಗೆ ಬಾರದೆ ತಪ್ಪಿಸಿಕೊಂಡು ಓಡಿದನೇ? ನಮಗೆ ಐದು ಊರುಗಳನ್ನೊ ಅಥವ ಒಂದು ಊರನ್ನು ಕೊಡಲಾಗದೆ ನಮ್ಮೊಡನೆ ಯುದ್ಧವನ್ನು ಮಾಡಿ ಸೋಲುಂಡನೇ? ತನ್ನ ಖಡ್ಗದ ಚಳಕವನ್ನು ತೊರಿಸುವುದಿಲ್ಲವೇ? ಅವನನ್ನು ಬರಹೇಳು ಎಂದು ಭೀಮಾರ್ಜುನರು ಗರ್ಜಿಸಿದರು.

ಅರ್ಥ:
ಜಾರು: ಬೀಳು, ಕುಸಿ; ಅಕಟ: ಅಯ್ಯೋ; ಮೈದೋರು: ಕಾಣಿಸಿಕೊ; ಊರು: ಪ್ರದೇಶ; ಕೊಡು: ನೀಡು; ಕಾಳೆಗ: ಯುದ್ಧ; ಕೊಟ್ಟು: ನೀಡು; ಕೊಂಡು: ಪಡೆದು; ತೋರು: ಕಾಣಿಸಿಕೋ, ಪ್ರದರ್ಶಿಸು; ಖಂಡೆಯ: ಕತ್ತಿ, ಖಡ್ಗ; ಸಿರಿ: ಐಶ್ವರ್ಯ; ಕರೆ: ಬರೆಮಾಡು; ತಲೆದೋರು: ಕಾಣಿಸಿಕೊ; ಥಟ್ಟು: ಗುಂಪು;

ಪದವಿಂಗಡಣೆ:
ಜಾರಿದನೆ +ಕುರುಪತಿ+ಅಕಟ +ಮೈ
ದೋರನೇ +ನಮಗ್+ಊರುಗಳ +ಕೊಡ
ಲಾರದೇ +ಕಾಳೆಗವ +ಕೊಟ್ಟನು +ಮತ್ತೆ +ಕೊಂಡನಲಾ
ತೋರಿಸನೆ +ಖಂಡೆಯದ +ಸಿರಿ +ಮೈ
ದೋರ+ಹೇಳೋ +ಕರೆಯೆನುತ+ ತಲೆ
ದೋರಿದರು+ ಭೀಮಾರ್ಜುನರು+ ಸೌಬಲನ+ ಥಟ್ಟಿನಲಿ

ಅಚ್ಚರಿ:
(೧) ದುರ್ಯೋಧನನನ್ನು ಹಂಗಿಸುವ ಪರಿ – ತೋರಿಸನೆ ಖಂಡೆಯದ ಸಿರಿ ಮೈದೋರಹೇಳೋ; ಜಾರಿದನೆ ಕುರುಪತಿಯಕಟ ಮೈದೋರನೇ
(೨) ಕ ಕಾರದ ತ್ರಿವಳಿ ಪದ – ಕೊಡಲಾರದೇ ಕಾಳೆಗವ ಕೊಟ್ಟನು

ಪದ್ಯ ೧೬: ವೈರಿಪಡೆಯವರು ಹೇಗೆ ಹಿಂದಿರುಗಿದರು?

ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ (ಗದಾ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕುದುರೆಗಳ ಮೇಲಿದ್ದ ರಾವುತರು ಹಿಂದಕ್ಕೆ ಹೋದರು. ಹಗ್ಗಗಳನ್ನು ಕತ್ತರಿಸಿ ಕುದುರೆಯ ಕವಚಗಳನ್ನು ಕತ್ತಿಯೀಮ್ದ ಹರಿದು ಹಾಕಿದರು. ಜೋದರು ತಮ್ಮ ಬಿರುದನ್ನು ಹೊಗಳುವ ವಂದಿಗಳನ್ನಿರಿದರು. ಆನೆಗಳನ್ನು ಹಿಂದಕ್ಕೆ ತಿರುಗಿಸಿ ಅದಕ್ಕೆ ಹೊದ್ದಿಸಿದ ಗುಳ ರೆಂಚೆಗಳನ್ನು ಕೊಯ್ದೆಸೆದರು.

ಅರ್ಥ:
ಮರಳು: ಮತ್ತೆ, ಹಿಂದಿರುಗು; ವಾಘೆ: ಲಗಾಮು; ಕೊಂಡು: ಪಡೆದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತಿರುಗು: ಸುತ್ತು; ಹಮ್ಮುಗೆ: ಹಗ್ಗ, ಪಾಶ; ನೇಣು: ಹಗ್ಗ, ಹುರಿ; ಹರಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಬಿಸುಟು: ಹೊರಹಾಕು; ಹಾಯ್ಕು: ಬೀಸು, ಕೆಡೆಯಿಸು; ಖಂಡೆಯ: ಕತ್ತಿ, ಖಡ್ಗ; ಬಿರುದು: ಗೌರವ ಸೂಚಕ ಹೆಸರು; ಸಂಭಾಳಿಸು: ಸರಿದೂಗಿಸು; ಭಟ್ಟ: ಸೈನಿಕ; ಇರಿ: ಸೀಳು; ಆರೋಹಕ: ಮೇಲೇರುವವ; ಕರಿ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಕೊಯ್ದು: ಸೀಳು; ಈಡಾಡು: ಹರಡು; ನೆಲ: ಭೂಮಿ;

ಪದವಿಂಗಡಣೆ:
ಮರಳಿ +ವಾಘೆಯ +ಕೊಂಡು +ರಾವ್ತರು
ತಿರುಗಿದರು +ಹಮ್ಮುಗೆಯ +ನೇಣ್ಗಳ
ಹರಿದು +ಹಕ್ಕರಿಕೆಗಳ +ಬಿಸುಟರು +ಹಾಯ್ಕಿ +ಖಂಡೆಯವ
ಬಿರುದ +ಸಂಭಾಳಿಸುವ +ಭಟ್ಟರನ್
ಇರಿದರ್+ಆರೋಹಕರು +ಕರಿಗಳ
ತಿರುಹಿ +ಗುಳ +ರೆಂಚೆಗಳ +ಕೊಯ್ದ್+ಈಡಾಡಿದರು +ನೆಲಕೆ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳುವ ಪರಿ – ಬಿರುದ ಸಂಭಾಳಿಸುವ ಭಟ್ಟ

ಪದ್ಯ ೪೭: ವರುಣಾಸ್ತ್ರವು ಹೇಗೆ ನಾರಾಯಣಾಸ್ತ್ರದ ತಾಪವನ್ನು ತಗ್ಗಿಸಿತು?

ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ವರುಣಾಸ್ತ್ರವು ಹೊಗೆಯನ್ನು ಭೇದಿಸಿ ಒಳಹೊಕ್ಕು, ಭೀಮನ ರಥದ ಸುತ್ತಲೂ ನೀರಿನ ತೆರೆಯನ್ನು ನಿರ್ಮಿಸಿತು. ವರುಣಾಸ್ತ್ರದ ನೀರನ್ನು ಇದಿರು ಬಿಟ್ಟು ಜಾರಿಕೊಳ್ಳಲು ನೋಡುತ್ತಿದ್ದಾರೆ. ನನ್ನ ಕತ್ತಿಯ ಅಲುಗು ಕತ್ತರಿಸುವುದನ್ನು ಇವರು ತಪ್ಪಿಸುವರೋ ಎನ್ನುತ್ತಾ ನಾರಾಯಣಾಸ್ತ್ರವು ಮುನ್ನುಗ್ಗಿತು.

ಅರ್ಥ:
ಹೊಗೆ: ಧೂಮ; ಒದೆ: ನೂಕು; ಕಿಡಿ: ಬೆಂಕಿ; ಉಗಿ: ಹೊರಹಾಕು; ದಳ್ಳುರಿ: ದೊಡ್ಡಉರಿ; ತನಿ: ಹೆಚ್ಚಾಗು; ಬಿಗಿ: ಭದ್ರವಾಗಿರುವುದು; ರಥ: ಬಂಡಿ; ಸುತ್ತಲು: ಎಲ್ಲಾ ಕಡೆ; ಸೂಸು: ಎರಚು, ಚಲ್ಲು; ತೆರೆ: ತೆಗೆ, ಬಿಚ್ಚು; ಮಸಗು: ರೇಗು, ಸಿಟ್ಟುಗೊಳ್ಳು; ಹಗೆ: ವೈರಿ; ಜುಣುಗು: ಜಾರು; ಬಗೆ: ತಿಳಿ; ಖಂಡೆಯ: ಕತ್ತಿ, ಖಡ್ಗ; ಮೊನೆ: ತುದಿ, ಕೊನೆ; ಮಗುಳು: ಪುನಃ, ಮತ್ತೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹೊಗೆಯನೊದೆದ್+ಒಳಬಿದ್ದು +ಕಿಡಿಗಳನ್
ಉಗಿದು +ದಳ್ಳುರಿದ್+ಉರುಗಲನು +ತನಿ
ಬಿಗಿದು +ಭೀಮನ +ರಥದ +ಸುತ್ತಲು +ಸೂಸಿ +ತೆರೆ +ಮಸಗೆ
ಹಗೆಯನ್+ಎನಗ್+ಇದಿರೊಡ್ಡಿ +ಜುಣುಗಲು
ಬಗೆದರೇ +ಖಂಡೆಯದ +ಮೊನೆಯಲಿ
ಮಗುಳಿಚುವರೇ +ತನ್ನನ್+ಎನುತ್+ಉರವಣಿಸಿತ್+ಅಮಳಾಸ್ತ್ರ

ಅಚ್ಚರಿ:
(೧) ಹೊಗೆ, ಹಗೆ, ಬಗೆ – ಪ್ರಾಸ ಪದಗಳು

ಪದ್ಯ ೨೭: ಧೃಷ್ಟದ್ಯುಮ್ನನು ಸಾತ್ಯಕಿಗೆ ಏನು ಹೇಳಿದನು?

ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ (ದ್ರೋಣ ಪರ್ವ, ೧೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ಸೆರೆಯಿಂದ ಕತ್ತಿಯನ್ನು ಹೊರಗೆಳೆದು, ಭೀಮ ಈ ಬಾಯಿಬಡಕನನ್ನು ಬಿಡು, ಅವನಿಗೆ ಕತ್ತಿಯನ್ನು ಕೊಡು, ಎಲವೋ ಸಾತ್ಯಕಿ, ಕೃಷ್ಣನಿಗೆ ಹೆದರಿ ನಾನು ಸುಮ್ಮನಿದ್ದೆ. ನೀನು ನನ್ನನ್ನು ನಿಂದಿಸುವೆಯಾ? ನಿನ್ನ ನಾಲಗೆಯನ್ನು ಹಿಂದಲೆಯಿಂದ ಹೊರಗೆಳೆಯುತ್ತೇನೆ ಎಂದು ವೀರಾವೇಶದಿಂದ ನುಡಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಒರೆ: ಉಜ್ಜು, ತಿಕ್ಕು; ಆಯುಧ: ಶಸ್ತ್ರ; ಅವ್ವಳಿಸು: ತಟ್ಟು, ತಾಗು; ಸುತ: ಮಗ; ಗಳಹ: ಬಾಯಿಬಡಕ; ಬಿಡು: ತೊರೆ; ಕೊಡು: ನೀಡು; ಖಂಡೆಯ: ಕತ್ತಿ; ಅಳುಕು: ಹೆದರು; ಸೈರಿಸು: ತಾಳ್ಮೆ; ದೊಠಾರ: ಶೂರ, ಕಲಿ; ನುಡಿ: ಮಾತು; ಹೆಡತಲೆ: ಹಿಂದಲೆ; ಅಲುಗು: ಅಳ್ಳಾಡು, ಅದುರು; ನಾಲಗೆ: ಜಿಹ್ವೆ;

ಪದವಿಂಗಡಣೆ:
ಸೆಳೆದನ್+ಒರೆಯಲಡ್+ಆಯುಧವನ್
ಅವ್ವಳಿಸಿದನು +ಪಾಂಚಾಲಸುತನ್+ಈ
ಗಳಹನನು +ಬಿಡು +ಭೀಮ +ಕೊಡು +ಸಾತ್ಯಕಿಯ +ಖಂಡೆಯವ
ಎಲವೊ +ಸಾತ್ಯಕಿ +ಕೃಷ್ಣ+ದೇವರಿಗ್
ಅಳುಕಿ +ಸೈರಿಸಿದರೆ +ದೊಠಾರಿಸಿ
ಗೆಲನುಡಿವೆ +ಹೆಡತಲೆ+ಅಲುಗಿವೆನು +ನಿನ್ನ +ನಾಲಗೆಯ

ಅಚ್ಚರಿ:
(೧) ಬಿಡು, ಕೊಡು – ಪ್ರಾಸ ಪದಗಳು
(೨) ಸಾತ್ಯಕಿಯನ್ನು ಗದರಿಸುವ ಪರಿ – ದೊಠಾರಿಸಿ ಗೆಲನುಡಿವೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ

ಪದ್ಯ ೨೬: ಸಾತ್ಯಕಿಯನ್ನು ಯಾರು ತಡೆದರು?

ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಕಿದನು ಕೊಂಡನು ಕಯ್ಯ ಖಂಡೆಯವ (ದ್ರೋಣ ಪರ್ವ, ೧೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಈ ಕಲಹವನ್ನು ಕೇಳಿದ ಧರ್ಮಜನು, ಸಾತ್ಯಕಿಯನ್ನು ಈಚೆಗೆಳೆ, ನಮ್ಮ ಸೈನ್ಯದಲ್ಲಿ ಕೌರಾ ಸೈನ್ಯದಲ್ಲಿ ಆಗುವಂತೆ ಸ್ವೇಚ್ಛಾಚಾರ ಆರಂಭವಾಯಿತೇ? ನಿಲ್ಲಿಸು, ಎಂದು ಕೂಗಿದನು. ಭೀಮನು ಸಾತ್ಯಕಿಯ ಬಲಭುಜವನ್ನು ಅವುಚಿ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡನು.

ಅರ್ಥ:
ಹಿಡಿ: ಬಂಧಿಸು; ತೋಟಿ: ಕಲಹ, ಜಗಳ; ಜಾಗು: ಬಾಗು, ಒಲೆದಾಡು, ಎಚ್ಚರ; ಬಲ: ಸೈನ್ಯ; ಬೂತಾಟ: ಸ್ವೇಚ್ಛಾಚಾರ; ಥಟ್ಟು: ಗುಂಪು; ನಿಲಿಸು: ನಿಲ್ಲು, ತಡೆ; ನೃಪ: ರಾಜ; ಒರಲು: ಕೂಗು; ಕವಿ: ಆವರಿಸು; ಗಲಿಸು: ಅವುಚು, ಗಟ್ಟಿಯಾಗಿ; ಹಿಡಿ: ಬಂಧಿಸು, ಗ್ರಹಿಸು; ಔಕು: ನೂಕು, ತಳ್ಳು; ಕೊಂಡು: ಪಡೆದು; ಕಯ್ಯ: ಹಸ್ತ; ಖಂಡೆ: ಕತ್ತಿ, ಖಡ್ಗ;

ಪದವಿಂಗಡಣೆ:
ಎಲೆಲೆ +ಹಿಡಿಹಿಡಿ +ಸಾತ್ಯಕಿಯನ್+ಒಳ
ಗೊಳಗೆ +ತೋಟಿಯೆ +ಜಾಗು +ಕೌರವ
ಬಲದವರ +ಬೂತಾಟವಾಯಿತೆ +ನಮ್ಮ +ಥಟ್ಟಿನಲಿ
ನಿಲಿಸ್+ಎನುತ +ನೃಪನ್+ಒರಲೆ +ಕವಿದೆಡೆ
ಗಲಿಸಿ +ಹಿಡಿದನು +ಭೀಮನ್+ಈತನ
ಬಲುಭುಜವನ್+ಔಕಿದನು +ಕೊಂಡನು +ಕಯ್ಯ +ಖಂಡೆಯವ

ಅಚ್ಚರಿ:
(೧) ಹೋಲಿಸುವ ಪರಿ – ಕೌರವ ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ

ಪದ್ಯ ೪೫: ಘಟೋತ್ಕಚನು ಧರ್ಮಜನ ಬಳಿ ಏನು ಹೇಳಿದನು?

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ (ದ್ರೋಣ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನನ್ನನ್ನು ಏಕೆ ಕರೆಸಿದಿರಿ? ಕೌರವ ಸೈನ್ಯವು ಇದಿರಾಯಿತೇ? ತಡಮಾಡದೆ ನನ್ನನ್ನು ಬಿಡು, ದೇವ ದಾನವರಲ್ಲಿ ನಿನ್ನ ಮಗನಿಗೆ ಸರಿಯಾದವರೇ ಇಲ್ಲವೆನ್ನುವಮ್ತೆ ನಾನು ಯುದ್ಧಮಾಡಬಲ್ಲೆ. ನೋಡು, ತಡವೇಕೆ, ಮೊದಲು ವೀಳೆಯವನ್ನು ನೀಡು ಎಂದು ತನ್ನ ಕತ್ತಿಯನ್ನು ಹೊರತೆಗೆದು ಝಳಪಿಸುತ್ತಾ, ವೀಳೆಯನ್ನು ತೆಗೆದುಕೊಳ್ಳಲು ತನ್ನ ಎಡಗೈಯನ್ನು ಒಡ್ಡಿದನು.

ಅರ್ಥ:
ಕರಸು: ಬರೆಮಾಡು; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಬಿಡು: ತೊರೆ; ತಡ: ನಿಧಾನ; ವೀಳೆ: ತಾಂಬೂಲ; ಕಯ್ಯ್: ಹಸ್ತ; ಅರಳಿಚು: ಬಿರಿಯುವಂತೆ ಮಾಡು; ದಾನವ: ರಾಕ್ಷಸ; ಅಮರ: ದೇವತೆ; ಸೂನು: ಮಗ; ನಿಲಲು: ಎದುರು ನಿಲ್ಲು; ಬಲ್ಲೆ: ತಿಳಿ; ನೋಡು: ವೀಕ್ಷಿಸು; ಬಿದಿರು: ಕೊಡಹು, ಒದರು; ಖಂಡೆಯ: ಕತ್ತಿ;

ಪದವಿಂಗಡಣೆ:
ಏನು+ ಧರ್ಮಜ+ ಕರಸಿದೈ+ ಕುರು
ಸೇನೆ +ಮಲೆತುದೆ+ ಬಿಡು +ಬಿಡಾ+ ತಡ
ವೇನು +ತಾ +ವೀಳೆಯವನ್+ಎನುತ್+ಎಡಗಯ್ಯನ್+ಅರಳಿಚುತ
ದಾನವ+ಅಮರರೊಳಗೆ +ನಿನ್ನಯ
ಸೂನುವಿಗೆ +ಸರಿಯಿಲ್ಲೆನಿಸಿ+ ನಿಲಲ್
ಆನು +ಬಲ್ಲೆನು +ನೋಡೆನುತ +ಬಿದಿರಿದನು +ಖಂಡೆಯವ

ಅಚ್ಚರಿ:
(೧) ಘಟೋತ್ಕಚನ ಧೈರ್ಯದ ನುಡಿ – ದಾನವಾಮರರೊಳಗೆ ನಿನ್ನಯಸೂನುವಿಗೆ ಸರಿಯಿಲ್ಲೆನಿಸಿ ನಿಲಲಾನು ಬಲ್ಲೆನು

ಪದ್ಯ ೧೦: ಅಶ್ವತ್ಥಾಮನು ಯಾರ ಮೇಲೆ ಕತ್ತಿ ಹಿಡಿದು ಹೋದನು?

ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ (ದ್ರೋಣ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಎಲೋ ಕರ್ಣ, ಮಾವನನ್ನು ನಿಂದಿಸಿ ಬೊಗಳುತ್ತಿರುವ ನಿನ್ನ ನಾಲಗೆಯನ್ನು ಕೀಳುತ್ತೇನೆ, ಶಿವ ಶಿವ ನಮಗೆ ನೀನು ಸಮನೇ! ಎಂದು ಕತ್ತಿಯನ್ನು ಸೆಳೆದು ಕರ್ಣನ ಮೇಲೆ ನುಗ್ಗಲು, ಕರ್ಣನೂ ಕತ್ತಿಯನ್ನು ಸೆಳೆದು ಅಶ್ವತ್ಥಾಮನ ಮೇಲೆ ಹಾಯ್ದನು.

ಅರ್ಥ:
ಫಡ: ತಿರಸ್ಕಾರದ ಮಾತು; ವಿಭಾಡಿಸು: ನಾಶಮಾಡು; ಗಳಹ: ಮಾತಾಳಿ; ನಾಲಗೆ: ಜಿಹ್ವೆ; ಕೀಳು: ಎಳೆದು ಹಾಕು; ಮೇಳ: ಗುಂಪು; ಖಂಡೆಯ: ಕತ್ತಿ; ಸೆಳೆ: ಆಕರ್ಷಿಸು; ಝೊಂಪಿಸು: ಬೆಚ್ಚಿಬೀಳು; ತನುಜ: ಮಗ; ಅವ್ವಳಿಸು: ಆರ್ಭಟಿಸು; ಉಗಿ: ಹೊರಹಾಕು; ಆಯುಧ: ಶಸ್ತ್ರ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯನ ಪುತ್ರ (ಕರ್ಣ); ಮೇಲುವಾಯ್ದ: ಮೇಲೆಬೀಳು; ನಂದನ: ಮಗ;

ಪದವಿಂಗಡಣೆ:
ಎಲವೊ +ಫಡ +ಮಾವನ +ವಿಭಾಡಿಸಿ
ಗಳಹುವ್+ಈ +ನಾಲಗೆಯ +ಕೀಳುವೆನ್
ಎಲೆ +ಮಹಾದೇವ್+ಇಲ್ಲಿ +ಮೇಳವೆನುತ್ತ +ಖಂಡೆಯವ
ಸೆಳೆದು +ಝೊಂಪಿಸಿ +ಗುರು+ತನುಜನ್
ಅವ್ವಳಿಸಲ್+ಉಗಿದನಡ್+ಆಯುಧವನ್
ಅಗ್ಗಳೆಯ +ರವಿಸುತ +ಮೇಲುವಾಯ್ದನು +ದ್ರೋಣ+ನಂದನನ

ಅಚ್ಚರಿ:
(೧) ಕರ್ಣನನ್ನು ಬಯ್ಯುವ ಪರಿ – ಎಲವೊ ಫಡ ಮಾವನ ವಿಭಾಡಿಸಿ ಗಳಹುವೀ ನಾಲಗೆಯ ಕೀಳುವೆ
(೨) ತನುಜ, ನಂದನ, ಸುತ – ಸಮಾನಾರ್ಥಕ ಪದ
(೩) ಅಶ್ವತ್ಥಾಮನನನ್ನು ದ್ರೋಣನಂದನ, ಗುರುತನುಜ ಎಂದು ಕರೆದಿರುವುದು

ಪದ್ಯ ೭: ಯುದ್ಧದಲ್ಲಿ ಯಾವ ಚಿತ್ರಣ ಕಾಣುತ್ತಿತ್ತು?

ತಳಿತ ಮಿಂಚಿನ ಮುರಿವುಗಳೊ ತನಿ
ಹೊಳಹುಗಳೊ ಖಂಡೆಯದ ಧಾರೆಯ
ಕೊಳುಗಿಡಿಯೊ ಖದ್ಯೋತರಾಸಿಯೊ ಹೇಳಲೇನದನು
ಖಳಿಕಟಿಲ ಬಿರುವೊಯಿಲೊ ಸಿಡಿಲಿನ
ಸುಳಿಯೊ ಮೈಮಸೆಯರುಣವಾರಿಯೊ
ಮಳೆಗಳಿಲ್ಲದ ಹೊನಲೊ ರಣದಲಿ ಚಿತ್ರವಾಯ್ತೆಂದ (ದ್ರೋಣ ಪರ್ವ, ೧೪ ಸಂಧಿ, ೭ ಸಂಧಿ)

ತಾತ್ಪರ್ಯ:
ಖಡ್ಗಗಳ ಹೊಳಪೋ ಅಥವ ಮಿಂಚಿನ ಹೊಳಪೋ, ಖಡ್ಗಗಳು ತಾಕಿ ಉಂಟಾದ ಕಿಡಿಗಳೋ ಅಥವ ಮಿಂಚು ಹುಳುಗಳ ಗುಂಪೋ, ಅದನ್ನು ಹೇಗೆ ಹೇಳಲಿ. ಖಳಿ ಖಟಿಲೆಂಬ ಕತ್ತಿಗಳ ಸದ್ದೋ ಅಥವ ಸಿಡಿಲೋ, ರಕ್ತ ಪ್ರವಾಹದ ಹರಿವೊ ಅಥವ ಮಳೆಯಿಲ್ಲದ ಪ್ರವಾಹವೋ, ರಣರಂಗದಲ್ಲಿ ಈ ವಿಚಿತ್ರ ಚಿತ್ರಣವು ಕಾಣುತ್ತಿತ್ತು.

ಅರ್ಥ:
ತಳಿತ: ಚಿಗುರು; ಮಿಂಚು: ಹೊಳಪು, ಕಾಂತಿ; ಮುರಿ: ಸೀಳು; ತನಿ: ಹೆಚ್ಚಾಗು; ಹೊಳಹು: ಕಾಂತಿ; ಖಂಡೆಯ: ಕತ್ತಿ; ಧಾರೆ: ವರ್ಷ; ಖದ್ಯೋತ: ಸೂರ್ಯ, ಮಿಂಚುಹುಳು; ರಾಶಿ: ಗುಂಪು; ಹೇಳು: ತಿಳಿಸು; ಖಳಿಕಟಿಲ: ಕತ್ತಿಯ ಹೋರಾಟದ ಶಬ್ದ; ಬಿರುವೊಯ್ಲು: ಜೋರಾದ ಹೊಡೆತ; ಸಿಡಿಲು: ಅಶನಿ; ಸುಳಿ: ಬೀಸು, ತೀಡು; ಮಸೆ: ಹರಿತವಾದುದು; ಮೈ: ತನು; ಅರುಣವಾರಿ: ಕೆಂಪಾದ ನೀರು (ರಕ್ತ); ಮಳೆ: ವರ್ಷ; ಹೊನಲು: ಹೊಳೆ; ರಣ: ಯುದ್ಧ; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ತಳಿತ +ಮಿಂಚಿನ +ಮುರಿವುಗಳೊ +ತನಿ
ಹೊಳಹುಗಳೊ +ಖಂಡೆಯದ +ಧಾರೆಯ
ಕೊಳು+ಕಿಡಿಯೊ +ಖದ್ಯೋತ+ರಾಸಿಯೊ +ಹೇಳಲೇನದನು
ಖಳಿಕಟಿಲ+ ಬಿರುವೊಯಿಲೊ +ಸಿಡಿಲಿನ
ಸುಳಿಯೊ +ಮೈಮಸೆ+ಅರುಣವಾರಿಯೊ
ಮಳೆಗಳಿಲ್ಲದ +ಹೊನಲೊ +ರಣದಲಿ+ ಚಿತ್ರವಾಯ್ತೆಂದ

ಅಚ್ಚರಿ:
(೧) ರಣರಂಗವನ್ನು ಮಳೆಯ ಸನ್ನಿವೇಶಕ್ಕೆ ಹೋಲಿಸಿರುವ ಪರಿ

ಪದ್ಯ ೨: ಸೇವಕರು ಯಾರನ್ನು ನೋಡಿದರು?

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು (ದ್ರೋಣ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನ ಖಡ್ಗ, ಭೀಮ ನಕುಲರ ಕಠಾರಿಗಳು, ಉಳಿದವರ ಆಯುಧಗಳನ್ನು ಮುಚ್ಚಿಟ್ಟರು. ಅಭಿಮನ್ಯುವು ಅಳಿದಣೊ, ಕೌರವರಿಗೆ ಸೆರೆಸಿಕ್ಕನೋ ಏನಾಯಿತು ಎಂದು ಕೊಳ್ಳುತ್ತಿದ್ದ ಧರ್ಮಜನನ್ನು ಕಂಡರು.

ಅರ್ಥ:
ಅವನಿಪ: ರಾಜ; ಖಂಡೆಯ: ಕತ್ತಿ, ಖಡ್ಗ; ಪವನಸುತ: ವಾಯುಪುತ್ರ (ಭೀಮ); ಕಠಾರಿ: ಚೂರಿ, ಕತ್ತಿ; ನೃಪ: ರಾಜ; ನಿವಹ: ಗುಂಪು; ಆಯುಧ: ಶಸ್ತ್ರ; ತತಿ: ಗುಂಪು; ಒಯ್ಯು: ತೆರಳು; ತೆಗೆ: ಹೊರತರು; ಬೈಚಿಟ್ಟು: ಮುಚ್ಚಿಟ್ಟು; ಬವರ: ಯುದ್ಧ; ಸುತ: ಪುತ್ರ; ಅಳಿ: ಮರಣ; ಸಂಭವಿಪ: ಸಾಧ್ಯತೆ, ಶಕ್ಯತೆ; ಹದ: ಸ್ಥಿತಿ; ನೃಪತಿ: ರಾಜ; ಕಂಡು: ನೋಡು; ಐತಂದು: ಬಂದು ಸೇರು;

ಪದವಿಂಗಡಣೆ:
ಅವನಿಪನ +ಖಂಡೆಯವ +ನಕುಲನ
ಪವನಸುತನ+ ಕಠಾರಿಯನು+ ನೃಪ
ನಿವಹದ್+ಆಯುಧ+ತತಿಯನ್+ಒಯ್ಯನೆ +ತೆಗೆದು +ಬೈಚಿಟ್ಟು
ಬವರದಲಿ +ಸುತನಳಿದನೋ +ಕೌ
ರವರ+ ಕೈವಶವಾದನೋ +ಸಂ
ಭವಿಪ +ಹದನೇನೆಂಬ+ ನೃಪತಿಯ +ಕಂಡರ್+ಐತಂದು

ಅಚ್ಚರಿ:
(೧) ಅವನಿಪ, ನೃಪ – ಸಮಾನಾರ್ಥಕ ಪದ