ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೨೨: ಶಲ್ಯನು ಮೊದಲು ಯಾರೊಡನೆ ಹೋರಾಟ ಮಾಡಿದನು?

ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜ
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ (ಶಲ್ಯ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಇವರು ಯಾರು? ನಕುಲ ಸಹದೇವರೇ? ಮಹಾವೀರರೋ? ಬಾಣವಿದ್ಯೆಯ ಗುರು ದ್ರೋಣನ ಶಿಷ್ಯರಲ್ಲವೇ? ಯುದ್ಧದಲ್ಲಿ ನನ್ನ ಹೊಡೆತವನ್ನು ತಡೆದುಕೊಂಡರೆ ಆಗ ನೀವು ವೀರರೆಂದು ಒಪ್ಪಬಹುದು. ನಿಮ್ಮ ಶೌರ್ಯಕ್ಕೆ ಭೂಷನವೆನಿಸೀತು, ಎನ್ನುತ್ತಾ ಶಲ್ಯನು ನಕುಲ ಸಹದೇವರೊಡನೆ ಹೋರಾಡಿದನು.

ಅರ್ಥ:
ಭಾರಿ: ದೊಡ್ಡ; ಆಳು: ಸೇವಕ, ವೀರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನುರಿತನಾದ; ಕಳಶಸಿಂಧ: ದ್ರೋಣ; ಕೋಲು: ಬಾಣ; ಮಕ್ಕಳು: ಸುತರು; ಸೈರಿಸು: ತಳು; ಒಪ್ಪು: ಸಮ್ಮತಿ; ಜಜ್ಝಾರ: ಪರಾಕ್ರಮಿ, ಶೂರ; ಆಭರಣ: ಒಡವೆ; ಆರುಭಟೆ: ಆರ್ಭಟ; ಹಳಚು: ತಾಗು, ಬಡಿ; ಅನುಜ: ತಮ್ಮ;

ಪದವಿಂಗಡಣೆ:
ಆರಿವರು +ಸಹದೇವ +ನಕುಲರೆ
ಭಾರಿ+ಆಳುಗಳಹಿರಲೇ+ ಬಿಲು
ಗಾರರಲ್ಲಾ +ಕಳಶಸಿಂಧನ+ ಕೋಲ +ಮಕ್ಕಳಲೇ
ಸೈರಿಸಿದರ್+ಒಪ್ಪುವುದಲೇ +ಜ
ಜ್ಝಾರತನಕ್+ಆಭರಣವಹುದ್+ಎನುತ್
ಆರುಭಟೆಯಲಿ +ಶಲ್ಯ +ಹಳಚಿದನ್+ಅರ್ಜುನ+ಅನುಜರ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ – ಜ್ಝಾರತನಕಾಭರಣವಹುದೆನು

ಪದ್ಯ ೨೦: ಸಾತ್ಯಕಿಯನ್ನೇಕೆ ಅರ್ಜುನನು ರಕ್ಷಿಸಿದನು?

ಎನಗೆ ಸಾತ್ಯಕಿ ಕೋಲ ಮಗನಾ
ತನ ವಧೆಯನಾ ಕಾಣಲಾಗದು
ಮನಕೆ ಮತವೇ ನಮ್ಮ ಹರಿಬಕೆ ಬಂದು ಕಾದುವನ
ನಿನಗೆ ಕೊಡುವೆನೆ ನಮ್ಮ ಧರ್ಮವ
ಜನವರಿಯದೇ ಹೋಗು ಹೋಗೆನೆ
ಮನದೊಳಗೆ ನಗುತಿರ್ದನಾ ಭೂರಿಶ್ರವಕ್ಷಿತಿಪ (ದ್ರೋಣ ಪರ್ವ, ೧೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಭೂರಿಶ್ರವನೇ, ಸಾತ್ಯಕಿಯು ನನ್ನ ಬಳಿ ಬಿಲ್ಲು ವಿದ್ಯೆ ಕಲಿತ ಶಿಷ್ಯನಾದುದರಿಂದ ಮಗನ ಸಮಾನ. ಅವನ ವಧೆಯನ್ನು ನಾನು ನೊಡಲಾದೀತೇ? ಅಲ್ಲದೆ ಅವನು ನಮ್ಮ ಪಕ್ಷದಲ್ಲಿ ನಿಂತು ಹೋರಾಡುತ್ತಿದ್ದಾನೆ. ಅವನನ್ನು ನಿನಗೆ ಬಲಿಕೊಡಬಹುದೇ? ನಾವು ಧರ್ಮಿಷ್ಠರೇ ಅಲ್ಲವೇ ಎನ್ನುವುದು ಜನರು ಬಲ್ಲರು ಎಂದು ಅರ್ಜುನನು ಹೇಳುಲು, ಆ ಮಾತುಗಳನ್ನು ಕೇಳಿದ ಭೂರಿಶ್ರವನು ಮನಸ್ಸಿನಲ್ಲೇ ನಕ್ಕನು.

ಅರ್ಥ:
ಕೋಲ: ಬಾಣ; ಮಗ: ಪುತ್ರ; ವಧೆ: ಸಾವು; ಕಾಣು: ತೋರು; ಮನ: ಮನಸ್ಸು; ಮತ: ವಿಚಾರ; ಹರಿಬ: ಕೆಲಸ, ಕಾರ್ಯ; ಕಾದು: ಹೋರಾಡು; ಧರ್ಮ: ಧಾರಣೆ ಮಾಡಿದುದು; ಜನ: ಮನುಷ್ಯ; ಅರಿ: ತಿಳಿ; ಹೋಗು: ತೆರಳು; ಮನ: ಮನಸ್ಸು; ನಗು: ಹರ್ಷಿಸು; ಕ್ಷಿತಿಪ: ರಾಜ;

ಪದವಿಂಗಡಣೆ:
ಎನಗೆ +ಸಾತ್ಯಕಿ +ಕೋಲ +ಮಗನ್
ಆತನ +ವಧೆಯ+ನಾ +ಕಾಣಲಾಗದು
ಮನಕೆ +ಮತವೇ +ನಮ್ಮ +ಹರಿಬಕೆ +ಬಂದು +ಕಾದುವನ
ನಿನಗೆ +ಕೊಡುವೆನೆ +ನಮ್ಮ +ಧರ್ಮವ
ಜನವ್+ಅರಿಯದೇ +ಹೋಗು +ಹೋಗೆನೆ
ಮನದೊಳಗೆ +ನಗುತಿರ್ದನಾ+ ಭೂರಿಶ್ರವ+ಕ್ಷಿತಿಪ

ಅಚ್ಚರಿ:
(೧) ಅರ್ಜುನನಿಗೆ ಸಾತ್ಯಕಿಯ ಸಂಬಂಧ – ಎನಗೆ ಸಾತ್ಯಕಿ ಕೋಲ ಮಗನಾತನ ವಧೆಯನಾ ಕಾಣಲಾಗದು
(೨) ಎನಗೆ, ನಿನಗೆ – ಪ್ರಾಸ ಪದಗಳು

ಪದ್ಯ ೪೦: ಭೀಮನು ದುರ್ಜಯನನ್ನು ಹೇಗೆ ಖಂಡಿಸಿದನು?

ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಮನು ಎಂಟು ಬಾಣಗಳಿಂದ ದುರ್ಜಯನ ಕುದುರೆಗಳನ್ನು ಸಾರಥಿಯನ್ನು ಕೊಂದು, ಮೂರು ಬಾಣಗಳಿಂದ ಅವನ ಬಿಲ್ಲನ್ನು ಮುರಿದನು. ಮೂರು ಬಾಣಗಳಿಂದ ಅವನ ನೇರವಾದ ಮೂಳೆಯನ್ನು ಕತ್ತರಿಸಿ ಅವನೊಡನಿದ್ದ ಪರಾಕ್ರಮಿ ರಾಜರನ್ನು ಸೋಲಿಸಿ ಮತ್ತೆ ಕರ್ಣನನ್ನು ಕರೆಯಿರಿ ಎಂದು ಗರ್ಜಿಸಿದನು.

ಅರ್ಥ:
ಕೀಲಿಸು: ಜೋಡಿಸು; ಅಂಬು: ಬಾಣ; ತುರಗ: ಅಶ್ವ, ಕುದುರೆ; ಆಳಿ: ಗುಂಪು; ಸಾರಥಿ: ಸೂತ; ಕೋಲು: ಬಾಣ; ಖಂಡಿಸು: ಸೀಳು; ಧನು: ಬಿಲ್ಲು; ಕಡಿ: ಕತ್ತರಿಸು; ಬಾಣ: ಸರಳು; ಹೋಳು: ತುಂಡು; ಸುಭಟ: ಪರಾಕ್ರಮಿ; ಮೂಳೆ: ಎಲುಬು; ಮುಂಕೊಂಡು: ಮೊದಲಾದ; ಬಿರುದರ: ಬಿರುದನ್ನು ಹೊಂದಿದವ; ಸೀಳು: ಖಂಡಿಸು; ಕರೆ: ಬರೆಮಾಡು; ಮತ್ತೆ: ಪುನಃ; ಬೊಬ್ಬಿರಿ: ಆರ್ಭಟಿಸು; ನಿಟ್ಟೆಲವು: ನೇರವಾದ ಮೂಳೆ;

ಪದವಿಂಗಡಣೆ:
ಕೀಲಿಸಿದನ್+ಎಂಟಂಬಿನಲಿ +ತುರ
ಗಾಳಿಯನು +ಸಾರಥಿಯನ್+ಆತನ
ಕೋಲ +ಖಂಡಿಸಿ +ಧನುವ +ಕಡಿದನು +ಮೂರು+ಬಾಣದಲಿ
ಹೋಳು+ಕಳೆದನು +ಸುಭಟ+ನಿಟ್ಟೆಲು
ಮೂಳೆಯನು +ಮುಂಕೊಂಡ +ಬಿರುದರ
ಸೀಳಿದನು +ಕರೆ +ಮತ್ತೆ +ಕರ್ಣನನ್+ಎನುತ +ಬೊಬ್ಬಿರಿದ

ಅಚ್ಚರಿ:
(೧)ಆಂಬು, ಬಾಣ, ಕೋಲ – ಸಮಾನಾರ್ಥಕ ಪದ
(೨) ಕೀಲಿಸಿ, ಖಂಡಿಸು, ಸೀಳು, ಕಡಿ, ಹೋಳು – ಸಾಮ್ಯಾರ್ಥ ಪದಗಳು

ಪದ್ಯ ೫: ಭೀಷ್ಮನ ಸಾರಥ್ಯದಲ್ಲಿ ಯುದ್ಧವು ಎಷ್ಟು ದಿನ ತಲುಪಿತು?

ಏಳನೆಯ ದಿವಸದ ಮಹಾರಥ
ರೂಳಿಗವು ಹಿರಿದಾಯ್ತು ಕುರು ಭೂ
ಪಾಲಕನ ತಮ್ಮಂದಿರಳಿದುದು ದಿವಸವೆಂಟರಲಿ
ಕೋಲ ಮೊನೆಯಲಿ ಕೃಷ್ಣರಾಯನ
ನೋಲಗಿಸಿ ಮೆಚ್ಚಿಸಿದನಾ ಕ
ಟ್ಟಾಳು ಭೀಷ್ಮನದಿವಸವೊಂಬತ್ತಾಯ್ತು ಸಮರದಲಿ (ಭೀಷ್ಮ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಏಳನೆಯ ದಿನ ಮಹಾರಥರ ಕಾಳಗವು ಭಯಂಕರವಾಗಿತು. ಎಂಟನೆಯ ದಿನ ಕೌರವನ ಕೆಲವರು ತಮ್ಮಂದಿರ ಅವಸಾನವಾಯ್ತು, ಒಂಬತ್ತನೆಯ ದಿನವೂ ಭೀಷ್ಮನು ಶ್ರೀಕೃಷ್ಣನ ಮೇಲೆ ಬಾಣಗಲನ್ನು ಬಿಟ್ಟು ಮೆಚಿಸಿದನು. ಆ ದಿನದ ಯುದ್ಧವೂ ಮುಗಿಯಿತು.

ಅರ್ಥ:
ದಿವಸ: ದಿನ; ಮಹಾರಥ: ಪರಾಕ್ರಮಿ; ಊಳಿಗ: ಕಾರ್ಯ; ಹಿರಿದು: ಹೆಚ್ಚು; ಭೂಪಾಲಕ: ರಾಜ; ತಮ್ಮ: ಅನುಜ; ಅಳಿ: ಸಾವು, ನಾಶ; ಕೋಲ: ಬಾಣ; ಮೊನೆ: ತುದಿ; ಓಲಗಿಸು: ಸೇವೆ ಮಾಡು; ಮೆಚ್ಚು: ಒಲುಮೆ, ಪ್ರೀತಿ; ಕಟ್ಟಾಳು: ಶೂರ, ಪರಾಕ್ರಮಿ; ಸಮರ: ಯುದ್ಧ;

ಪದವಿಂಗಡಣೆ:
ಏಳನೆಯ +ದಿವಸದ+ ಮಹಾರಥರ್
ಊಳಿಗವು +ಹಿರಿದಾಯ್ತು +ಕುರು +ಭೂ
ಪಾಲಕನ +ತಮ್ಮಂದಿರ್+ಅಳಿದುದು +ದಿವಸವ್+ಎಂಟರಲಿ
ಕೋಲ +ಮೊನೆಯಲಿ +ಕೃಷ್ಣ+ರಾಯನನ್
ಓಲಗಿಸಿ +ಮೆಚ್ಚಿಸಿದನ್+ಆ+ ಕ
ಟ್ಟಾಳು +ಭೀಷ್ಮನ+ದಿವಸ+ಒಂಬತ್ತಾಯ್ತು +ಸಮರದಲಿ

ಅಚ್ಚರಿ:
(೧) ೩ ದಿನದ ಯುದ್ಧವನ್ನು ಒಂದೇ ಪದ್ಯದಲ್ಲಿ ಹೇಳಿರುವ ಪರಿ

ಪದ್ಯ ೪೪: ಅರ್ಜುನನೇಕೆ ಕೊಲ್ಲಲು ಒಪ್ಪುತ್ತಿರಲಿಲ್ಲ?

ಲಾಲಿಸದೆ ಕುಲಛಲವ ನೀತಿಯ
ಪಾಲಿಸದೆ ಕೊಲೆಗಡುಕತನದೊಳು
ಮೇಲುಗಾಣದೆ ಬಂಧುಗಳ ಗುರುಗಳ ಸಹೋದರರ
ಕೋಲ ಮೊನೆಯಲಿ ಕೊಂದು ನೆತ್ತರ
ಗೂಳನುಂಬವೊಲಖಿಳ ರಾಜ್ಯದ
ಮೇಲೆ ಸೊಗಸುವ ಸಿರಿಯನೊಲ್ಲೆನು ಕೊಲುವನಲ್ಲೆಂದ (ಭೀಷ್ಮ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕ್ಷತ್ರಿಯ ಕುಲಕ್ಕೆ ಸಹಜವಾದ ನೀತಿಯನ್ನು ಪಾಲಿಸದೆ, ಕೊಲೆಗಡುಕನಂತೆ ಬಂಧುಗಳು, ಗುರುಗಳು, ಸಹೋದರರನ್ನು ಬಾಣಗಳಿಂದ ಕೊಂದು, ಅವರ ನೆತ್ತರನ್ನು ಕುಳಿದು ರಾಜ್ಯದ ಐಶ್ವರ್ಯವನ್ನು ಅನುಭವಿಸಲು ನಾನು ಒಪ್ಪಲಾರೆ, ಅಂತಹ ಐಶ್ವರ್ಯ ನನಗೆ ಬೇಡ, ಅವರನ್ನು ಕೊಲ್ಲಲಾರೆ ಎಂದು ಹೇಳಿದನು.

ಅರ್ಥ:
ಲಾಲಿಸು: ಅಕ್ಕರೆಯನ್ನು ತೋರಿಸು, ಮುದ್ದಾಡು; ಕುಲ: ವಂಶ; ಛಲ: ನೆಪ, ವ್ಯಾಜ, ದೃಢನಿಶ್ಚಯ; ನೀತಿ: ಮಾರ್ಗ ದರ್ಶನ; ಪಾಲಿಸು: ಕಾಪಾಡು; ಕೊಲೆಗಡುಕ: ಸಾಯಿಸಿದ; ಮೇಲು: ಮುಂದೆ; ಕಾಣು: ತೋರು; ಬಂಧು: ಸಂಬಂಧಿಕರು; ಗುರು: ಆಚಾರ್ಯ; ಸಹೋದರ: ಅಣ್ಣ ತಮ್ಮ; ಕೋಲ: ಬಾಣ; ಮೊನೆ: ಚೂಪಾದತುದಿ; ಕೊಂದು: ಸಾಯಿಸು; ನೆತ್ತರು: ರಕ್ತ; ಕೂಳ: ಊಟ, ಅನ್ನ; ಅಂಬು: ಬಾಣ; ಅಖಿಳ: ಎಲ್ಲಾ; ರಾಜ್ಯ: ರಾಷ್ಟ್ರ; ಸೊಗಸು: ಚೆಲುವು, ಸಿರಿ: ಐಶ್ವರ್ಯ; ಒಲ್ಲೆ: ಮಾಡೆನು, ವಿರುದ್ಧ; ಕೊಲು: ಸಾಯಿಸು;

ಪದವಿಂಗಡಣೆ:
ಲಾಲಿಸದೆ +ಕುಲ+ಛಲವ +ನೀತಿಯ
ಪಾಲಿಸದೆ+ ಕೊಲೆಗಡುಕತನದೊಳು
ಮೇಲು+ಕಾಣದೆ+ ಬಂಧುಗಳ+ ಗುರುಗಳ+ ಸಹೋದರರ
ಕೋಲ +ಮೊನೆಯಲಿ +ಕೊಂದು +ನೆತ್ತರ
ಕೂಳನ್+ಉಂಬವೊಲ್+ಅಖಿಳ +ರಾಜ್ಯದ
ಮೇಲೆ +ಸೊಗಸುವ +ಸಿರಿಯನ್+ಒಲ್ಲೆನು +ಕೊಲುವನಲ್ಲೆಂದ

ಅಚ್ಚರಿ:
(೧) ರಕ್ತದ ಊಟ ಎಂದು ಹೇಳುವ ಪರಿ – ಕೋಲ ಮೊನೆಯಲಿ ಕೊಂದು ನೆತ್ತರಗೂಳನುಂಬವೊಲ್

ಪದ್ಯ ೩೭: ಕೀಚಕನು ದ್ರೌಪದಿಯನ್ನು ಏನೆಂದು ಬೇಡಿದನು?

ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳ್ದುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲುವಿಂದ ಬಲುಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈರಂಧ್ರಿ, ನಿನ್ನ ತೋಳಿನ ತೆಕ್ಕೆಯಲ್ಲಿ ನನ್ನನ್ನು ಮುಚ್ಚಿ ಕಾಮಬಾಣಗಳು ತಾಗುವುದನ್ನು ತಪ್ಪಿಸು, ಆ ನೀಚನು ನನ್ನನ್ನು ಕೊಲ್ಲಲು ಬಂದಿರುವುದನ್ನು ಕೇಳಿಯೂ, ಕೊಲೆಯನ್ನು ತಪ್ಪಿಸಲು ಸಮರ್ಥಳಾದ ನೀನು ಸುಮ್ಮನಿರುವುದೇ? ನನ್ನನ್ನು ಸೋಲಿಸಿದೆನೆಂಬ ಬಿಂಕದಿಂದ ಇವನ ಮಾತು ಬಹಳವಾಯಿತೆನ್ನಬೇಡ, ನನ್ನ ಪ್ರಾಣದ ಪ್ರಶ್ನೆಯಿದು, ತರುಣಿ, ನನ್ನನ್ನು ಕಾಪಾಡು ಎಂದು ಕೀಚಕನು ಬೇಡಿದನು.

ಅರ್ಥ:
ತೋಳು: ಬಾಹು; ತೆಕ್ಕೆ: ಅಪ್ಪುಗೆ, ಆಲಿಂಗನ; ತೊಡಿಸು: ಧರಿಸು; ಕಾಮ: ಮನ್ಮಥ; ಕೋಲ: ಬಾಣ; ತಪ್ಪಿಸು: ದೂರಮಾಡು; ಖಳ: ದುಷ್ಟ; ಕಗ್ಗೊಲೆ: ಸಾವು; ಊಳಿಗ: ಕೆಲಸ, ಕಾರ್ಯ; ಕೇಳು: ಆಲಿಸು; ಉಸುರು: ಹೇಳು, ಪ್ರಾಣ; ಸಮರ್ಥ: ಬಲಶಾಲಿ, ಗಟ್ಟಿಗ; ಸೋಲಿಸು: ಪರಾಭವಗೊಳಿಸು; ಗೆಲುವು: ಜಯ; ಬಲು: ಹೆಚ್ಚು; ಮಾತಾಳಿ: ಬಾಯಿಬಡುಕ; ಹರಣ: ಜೀವ, ಪ್ರಾಣ; ಸರಸ: ಚೆಲ್ಲಾಟ; ಕಾಯು: ರಕ್ಷಿಸು; ಕಾಂತೆ: ಚೆಲುವೆ; ಕೇಳು: ಆಲಿಸು;

ಪದವಿಂಗಡಣೆ:
ತೋಳ +ತೆಕ್ಕೆಯ +ತೊಡಿಸಿ+ ಕಾಮನ
ಕೋಲ +ತಪ್ಪಿಸು +ಖಳನ+ ಕಗ್ಗೊಲೆ
ಯೂಳಿಗವ+ ಕೇಳ್ದ್+ಉಸುರದಿಹರೆ+ ಸಮರ್ಥರಾದವರು
ಸೋಲಿಸಿದ+ ಗೆಲುವಿಂದ +ಬಲು+ಮಾ
ತಾಳಿ+ಇವನೆನ್ನದಿರು +ಹರಣದ
ಮೇಲೆ +ಸರಸವೆ+ ಕಾಯಬೇಹುದು+ ಕಾಂತೆ +ಕೇಳೆಂದ

ಅಚ್ಚರಿ:
(೧) ತ ಕಾರದ ಪದಗಳು – ತೋಳ ತೆಕ್ಕೆಯ ತೊಡಿಸಿ ಕಾಮನ ಕೋಲ ತಪ್ಪಿಸು

ಪದ್ಯ ೩೭: ಕೌರವನನ್ನು ಯಾರ ಆಜ್ಞೆಯ ಮೇಲೆ ಬಂಧಿಸಲಾಗಿತ್ತು?

ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥನುಡಿದನು ಚಿತ್ರಸೇನಂಗೆ (ಅರಣ್ಯ ಪರ್ವ, ೨೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ವ್ಯರ್ಥವಾಗಿ ನೀನು ಬಾಣಗಳನ್ನು ನಷ್ಟಮಾಡಿಕೊಳ್ಳ ಬೇಡ. ನೀನು ಹಿಂದಿರುಗು, ನಿಮ್ಮ ತಂದೆಯಾದ ಇಂದ್ರನ ಆಜ್ಞೆಯ ಮೇಲೆ ನಾವಿವನನ್ನು ಬಂಧಿಸಿದ್ದೇವೆ. ನಿಮ್ಮ ತಂದೆಯ ಆಜ್ಞೆಯನ್ನು ಕೇಳು ಎಂದು ಚಿತ್ರಸೇನನು ಹೇಳಲು, ಅರ್ಜುನನು ಕೆಂಪಾದ ಬಾಣವನ್ನು ತೆಗೆದು ಕೈಯಲ್ಲಿ ತೂಗುತ್ತಾ ಅವನಿಗೆ ಹೀಗೆಂದನು.

ಅರ್ಥ:
ಕೋಲ: ಬಾಣ; ಬರಿದು: ವ್ಯರ್ಥ; ಬೀಯ: ನಷ್ಟ, ಹಾಳು; ಮರಳು: ಹಿಂದಿರುಗು; ದಿಟ: ಸತ್ಯ; ಕೇಳು: ಆಲಿಸು; ಕಟ್ಟು: ಬಂಧಿಸು; ಇಂದ್ರ: ಶಕ್ರ; ಆಜ್ಞೆ: ಅಪ್ಪಣೆ; ಪಾಲಿಸು: ರಕ್ಷಿಸು, ಕಾಪಾಡು; ಅಯ್ಯ: ತಂದೆ; ಬೆಸ: ಕೆಲಸ, ಕಾರ್ಯ; ಕೆಂಗರಿಕೋಲು: ಕೆಂಪಾದ ಬಾಣ; ತೂಗು: ಅಲ್ಲಾಡಿಸು; ನುಡಿ: ಮಾತಾಡು;

ಪದವಿಂಗಡಣೆ:
ಕೋಲ +ಬರಿದೇ +ಬೀಯ +ಮಾಡದಿರ್
ಏಳು+ ಫಲುಗುಣ+ ಮರಳು+ ನೀ +ದಿಟ
ಕೇಳುವರೆ +ನಾವಿವನ +ಕಟ್ಟಿದೆವ್+ಇಂದ್ರನಾಜ್ಞೆಯಲಿ
ಪಾಲಿಸಾ +ನಿಮ್ಮಯ್ಯ +ಬೆಸಸಿದನ್
ಏಳಿಸದೆ +ಕೇಳ್+ಎನಲು +ಕೆಂಗರಿ
ಕೋಲ +ತೂಗುತ +ಪಾರ್ಥ+ನುಡಿದನು +ಚಿತ್ರಸೇನಂಗೆ

ಅಚ್ಚರಿ:
(೧) ಕೋಲ – ೧, ೬ ಸಾಲಿನ ಮೊದಲ ಪದ
(೨) ಫಲುಗುಣ, ಪಾರ್ಥ – ಅರ್ಜುನನನ್ನು ಕರೆದ ಪರಿ

ಪದ್ಯ ೪೨: ವಿದುರನು ಮುಂದಾಗುವ ಅನಾಹುತವನ್ನು ಹೇಗೆ ತಿಳಿಸಿದನು?

ಸೋಲಿಸಿದೆ ನೀನೀಗಳೀ ನರ
ಪಾಲರನು ಜೂಜಿನಲಿ ಮೇಲಣ
ಕಾಳಗದ ಕಳನೊಳಗೆ ಕವಿತಹ ಕೋಲ ತೋಹಿನಲಿ
ಸೋಲವೊಂದಕೆ ನೂರ ನೂರರ
ಮೇಲೆ ಸಾವಿರ ಸಾವಿರದ ಮೈ
ಸಾಲ ಲಕ್ಷವನಂತವಾಗಿಯೆ ತೆಗೆವರವರೆಂದ (ಸಭಾ ಪರ್ವ, ೧೫ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಈಗ ಇವರನ್ನು ಜೂಜಿನಲ್ಲಿ ಸೋಲಿಸಿರಬಹುದು, ಆದರೆ ಮುಂದೆ ಬರುವ ಯುದ್ಧರಂಅದಲ್ಲಿ ಅವರ ಬಾಣಗಳು ನಿಮ್ಮನ್ನು ಲಕ್ಷ್ಯವನ್ನಾಗಿಸಿಕೊಂಡಿ ಕೆಡುವದೇ ಬಿಡದು. ಒಂದು ಸೋಲಿಗೆ ನೂರು, ನೂರಕ್ಕೆ ಸಾವಿರ, ಸಾವಿರಕ್ಕೆ ಲಕ್ಷ, ಲಕ್ಷಕ್ಕೆ ಅನಂತವಾಗಿ ಬಡ್ಡಿ ಸಮೇತವಾಗಿ ನಿನ್ನಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ನಿನ್ನನ್ನು ಪರಾಭವಗೊಳಿಸುತ್ತಾರೆ ಎಂದನು.

ಅರ್ಥ:
ಸೋಲು: ಪರಾಭವ; ನರಪಾಲ: ರಾಜ; ಜೂಜು: ದ್ಯೂತ; ಮೇಲಣ: ಮುಂದೆ; ಕಾಳಗ: ಯುದ್ಧ; ಕಳ: ರಣರಂಗ; ಕವಿತಹ: ಮುತ್ತಿಗೆ ಹಾಕು; ಕೋಲ: ಬಾಣ; ತೋಹು: ಬೇಟೆಯಲ್ಲಿ ಒಡ್ಡುವ ಆಕರ್ಷಣೆ; ನೂರು: ಶತ; ಸಾವಿರ: ಸಹಸ್ರ; ಅನಂತ: ಅಸಂಖ್ಯವಾದ; ತೆಗೆ: ಹೊರತರು; ಸಾಲ; ಎರವು;

ಪದವಿಂಗಡಣೆ:
ಸೋಲಿಸಿದೆ +ನೀನ್+ಈಗಳ್+ಈ+ ನರ
ಪಾಲರನು +ಜೂಜಿನಲಿ +ಮೇಲಣ
ಕಾಳಗದ+ ಕಳನೊಳಗೆ+ ಕವಿತಹ +ಕೋಲ +ತೋಹಿನಲಿ
ಸೋಲವೊಂದಕೆ+ ನೂರ +ನೂರರ
ಮೇಲೆ +ಸಾವಿರ +ಸಾವಿರದ +ಮೈ
ಸಾಲ +ಲಕ್ಷವ್+ಅನಂತವಾಗಿಯೆ+ ತೆಗೆವರ್+ಅವರೆಂದ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಾಳಗದ ಕಳನೊಳಗೆ ಕವಿತಹ ಕೋಲ

ಪದ್ಯ ೧: ಕರ್ಣನಿಗೆ ಎಷ್ಟು ಬಾಣಗಳನ್ನು ದುರ್ಯೋಧನನು ಕಳುಹಿಸಿದನು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಮೊಗದಿರುಹಿದೊಡೆ ಬಳಿಕೀ
ಕೋಲಗುರುವಿನಸೂನು ಮುರಿದನು ಬಿಗಿದ ದುಗುಡದಲಿ
ಕೋಲ ಹೊದೆಯೆಂಬತ್ತು ಬಂಡಿಯ
ಹೇಳಿದನು ಕರ್ಣಂಗೆ ಕುರುಭೂ
ಪಾಲ ತಾನೊತ್ತಾಗಿ ನಿಂದನು ಸಕಳದಳಸಹಿತ (ಕರ್ಣ ಪರ್ವ, ೨೩ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವೃತ್ತಾಂತವನ್ನು ಮುಂದುವರಿಸುತ್ತಾ, ದುರ್ಯೋಧನನು ಸಂಧಿಗೆ ಒಪ್ಪದಿರಲು ಅಶ್ವತ್ಥಾಮನು ದುಃಖಭರಿತನಾಗಿ ಹಿಂದಿರುಗಿದನು. ದುರ್ಯೋಧನನು ಎಂಬತ್ತು ಬಂಡಿಗಳಲ್ಲಿ ಬಾಣಗಳ ಹೊರೆಗಳನ್ನು ಕರ್ಣನಿಗೆ ಆಣಿಮಾಡಿ ಒದಗಿಸಲು ಹೇಳಿ ತಾನೇ ಅವನಿಗೆ ಸಹಾಯಕನಾಗಿ ನಿಂತನು.

ಅರ್ಥ:
ಕೇಳು: ಆಲಿಸು; ಅವನಿ: ಭೂಮಿ; ಅವನಿಪ: ರಾಜ; ಭೂಪಾಲ: ರಾಜ; ಮೊಗ: ಮುಖ; ತಿರುಗು: ದಿಕ್ಕನ್ನು ಬದಲಾಯಿಸು; ಬಳಿಕ: ನಂತರ; ಕೋಲ: ಬಾಣ; ಗುರು:ಆಚಾರ್ಯ; ಸೂನು: ಮಗ; ಮುರಿ: ಸೀಳು; ಬಿಗಿ: ಒತ್ತು, ಅಮುಕು; ದುಗುಡು: ದುಃಖ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಂಡಿ: ರಥ; ಭೂಪಾಲ: ರಾಜ; ಒತ್ತು: ಹತ್ತಿರ; ಸಕಲ: ಎಲ್ಲಾ; ದಳ: ಸೈನ್ಯ; ಸಹಿತ: ಜೊತೆ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ಭೂ
ಪಾಲ +ಮೊಗ+ತಿರುಹಿದೊಡೆ +ಬಳಿಕೀ
ಕೋಲಗುರುವಿನಸೂನು+ ಮುರಿದನು +ಬಿಗಿದ +ದುಗುಡದಲಿ
ಕೋಲ +ಹೊದೆಯೆಂಬತ್ತು+ ಬಂಡಿಯ
ಹೇಳಿದನು +ಕರ್ಣಂಗೆ +ಕುರುಭೂ
ಪಾಲ +ತಾನೊತ್ತಾಗಿ +ನಿಂದನು +ಸಕಳದಳ+ಸಹಿತ

ಅಚ್ಚರಿ:
(೧) ಅವನಿಪ, ಭೂಪಾಲ – ಸಮನಾರ್ಥಕ ಪದ
(೨) ಅಶ್ವತ್ಥಾಮನನ್ನು ಕೋಲಗುರುವಿನಸೂನು ಎಂದು ಕರೆದಿರುವುದು