ಪದ್ಯ ೫೮: ಶಲ್ಯನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು?

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲವೋ ಯುಧಿಷ್ಠಿರ, ಬಾಣಗಳಿಂದ ನನ್ನ ಖಡ್ಗ ಗುರಾಣಿಗಳನ್ನು ಕತ್ತರಿಸಿಹಾಕು, ನೀನು ಬಿಲ್ಲು ವಿದ್ಯೆಯಲ್ಲಿ ಚತುರನೆನ್ನುತ್ತಾರೆ, ನನಗೆ ಕವಚವಿಲ್ಲ, ರಥವಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಓಡಿ ಹೋಗುವುದೊಂದೇ ದಾರಿ. ಕ್ಷತ್ರಿಯನಾದುದರಿಂದ ಓಡಿ ಹೋಗುವಂತಿಲ್ಲ. ನಿನ್ನಲ್ಲಿ ಸಾಹಸವಿದ್ದುದೇ ಆದರೆ ನಿಲ್ಲು ಎಂದು ಶಲ್ಯನು ಮೂದಲಿಸಿದನು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಎಸು: ಬಾಣ ಪ್ರಯೋಗ; ಖಡ್ಗ: ಕತ್ತಿ; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಚಾಪ: ಬಿಲ್ಲು ಕುಶಲ: ಚಾತುರ್ಯ; ತನುತ್ರ: ಕವಚ; ರಥ: ಬಂಡಿ; ಅಸು: ಪ್ರಾಣ; ತಡೆ: ನಿಲ್ಲು; ರಣ: ಯುದ್ಧಭೂಮಿ; ಪಲಾಯನ: ಓಡು; ಸಾಹಸಿ: ಪರಾಕ್ರಮಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಎಸು+ ಯುಧಿಷ್ಠಿರ +ಹಲಗೆ +ಖಡ್ಗವ
ಕುಸುರಿದ್+ಅರಿ+ಆ +ಚಾಪವಿದ್ಯಾ
ಕುಶಲನೆಂಬರಲೈ +ತನುತ್ರ +ರಥಂಗಳಿಲ್ಲ್+ಎಮಗೆ
ಅಸುವ +ತಡೆವರೆ +ರಣ+ಪಲಾಯನವ್
ಎಸೆವುದೇ +ಕ್ಷತ್ರಿಯರಿಗ್+ಅತಿ+ಸಾ
ಹಸಿಕನಾದಡೆ +ನಿಲ್ಲೆನುತ +ಮೂದಲಿಸಿದನು +ಶಲ್ಯ

ಅಚ್ಚರಿ:
(೧) ಎಸು, ಅಸು – ಪ್ರಾಸ ಪದ
(೨) ಹಲಗೆ, ಖಡ್ಗ, ಚಾಪ – ಆಯುಧಗಳನ್ನು ಹೆಸರಿಸುವ ಶಬ್ದ
(೩) ಕ್ಷತ್ರಿಯರ ಧರ್ಮ – ಅಸುವ ತಡೆವರೆ ರಣಪಲಾಯನವೆಸೆವುದೇ ಕ್ಷತ್ರಿಯರಿಗ್

ಪದ್ಯ ೨೧: ಎರಡೂ ಸೈನ್ಯದ ಯುದ್ಧವು ಹೇಗೆ ನಡೆಯಿತು?

ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾ
ಗಿದರು ನೀಗಿದರಸುವ ನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ (ದ್ರೋಣ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪ್ರಳಯಕಾಲದಲ್ಲಿ ಸಮುದ್ರವು ಸಮುದ್ರವನ್ನು ಸೇರುವಂತೆ ಎರಡೂ ಸೈನ್ಯಗಳು ಒಂದನ್ನೊಂದನ್ನು ತಾಗಿದವು. ವೀರರು ಕೈಮಾಡಿದರು. ಪ್ರಾಣಗಳನ್ನು ಕಳೆದುಕೊಂಡರು. ಅಲ್ಪಸ್ವಲ್ಪ ಗಾಯಗಳಿಂದ ಬಲಹೀನರಾದವರು ತಲೆ ಕೊಡವಿ ಕಂಪಿಸಿದರು. ತಲೆಕೊಯ್ದು ಸತ್ತರು, ಕರುಳನ್ನು ಹೊರಹಾಕಿದರು. ಬಾಳೆಯಗಿಡದಂತೆ ಮೈಯ ಮಾಂಸ ಖಂಡಗಳು ಕೊಚ್ಚಿದಂತಾಗಲು ಗುಂಪಾಗಿ ನೆಲಕ್ಕೆ ಬಿದ್ದವು.

ಅರ್ಥ:
ಕದಡು: ಕಲಕು; ಬಲ: ಶಕ್ತಿ; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಉದಧಿ: ಸಾಗರ; ಒದೆ: ನೂಕು; ತಾಗು: ಮುಟ್ಟು; ನೀಗು: ನಿವಾರಿಸಿಕೊಳ್ಳು; ಅಸು: ಪ್ರಾಣ; ನಸೆಮಸೆ: ಕೈತೀಟೆಯ ಯುದ್ಧ; ಬಿದಿರು: ಕೆದರು, ಚೆದರು; ಕೊಯ್: ಸೀಳು; ತಲೆ: ಶಿರ; ಕಾರು: ಕೊಡವು; ಕರುಳು: ಪಚನಾಂಗ; ಕುಸುರಿ: ತುಂಡು; ಖಂಡ: ತುಂಡು, ಚೂರು; ಕದಳಿ: ಬಾಳೆಗಿಡ; ಮೈ: ತನು, ದೇಹ; ಚೂಣಿ: ಮೊದಲು; ಮಲಗು: ನಿದ್ರಿಸು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಕದಡಿದವು +ಬಲವ್+ಎರಡು +ಕಲ್ಪದೊಳ್
ಉದಧಿ+ಉದಧಿಯನ್+ಒದೆವವೊಲು +ತಾ
ಗಿದರು +ನೀಗಿದರ್+ಅಸುವ +ನಸೆಮಸೆಗಕ್ಕುಡಿಸಿದವರು
ಬಿದಿರಿದರು +ಕೊಯ್+ತಲೆಗಳನು +ಕಾ
ರಿದರು +ಕರುಳನು +ಕುಸುರಿ +ಖಂಡದ
ಕದಳಿ +ಮೈಗಳ +ಚೂಣಿ +ಮಲಗಿತು +ತಾರು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಡಿದವು ಬಲವೆರಡು ಕಲ್ಪದೊಳುದಧಿಯುದಧಿಯನೊದೆವವೊಲು

ಪದ್ಯ ೩: ದ್ರೋಣನು ಭೀಮನ ಪರಾಕ್ರಮವನ್ನು ಹೇಗೆ ಕಂಡನು?

ಕಡಿದ ಖಡೆಯದ ಕುಸುರಿಗಳ ಚಿನ
ಕಡಿಯ ಹೀರಾವಳಿಯ ಮುಕುಟದ
ಸಡಿಲದನುಪಮ ರತುನರಾಜಿಯ ಮುರಿದ ಕಂಕಣದ
ಕಡಿಕು ಪಸರಿಸೆ ಕೌರವಾನುಜ
ರಡೆಗೆಡೆದ ರಣ ಕಾಂಚನಾದ್ರಿಯ
ಸಿಡಿಲ ಕಾಳೆಗದಂತೆ ಮೆರೆದಿರೆ ಕಂಡನಾ ದ್ರೋಣ (ದ್ರೋಣ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಕಾಲುಗಳಿಗೆ ಹಾಕಿದ ಕಡಗಗಳು ತುಂಡಾಗಿದ್ದವು. ವಜ್ರಕಿರೀಟಗಳು ಬಿಗಿಯಿಲ್ಲದ ನೆಲಕ್ಕುರುಳಿದ್ದವು. ಕಂಕಣಗಳು ಮುರಿದು ಬಿದ್ದಿದ್ದವು. ಇದರ ನಡುವೆ ಕೌರವನ ತಮ್ಮಂದಿರು ಸತ್ತುಬಿದ್ದಿದ್ದರು. ಇದನ್ನು ನೋಡಿದರೆ ವಜ್ರಾಯುಧವು ಕಾಂಚನಗಿರಿಯೊಡನೆ ಇಲ್ಲಿ ಯುದ್ಧಮಾಡಿರಬೇಕೆನ್ನಿಸುತ್ತದೆ ಎಂದು ದ್ರೋಣನು ನೋಡುತ್ತಾ ಮುಂದುವರೆದನು.

ಅರ್ಥ:
ಕಡಿ: ಕತ್ತರಿಸು; ಖಡೆ: ಕಾಲ ಕಡಗ; ಕುಸುರಿ: ಚೂರು; ಕಡಿ: ತುಂಡು; ಹೀರಾವಳಿ: ವಜ್ರದ ಹಾರ; ಮುಕುಟ: ಕಿರೀಟ; ಸಡಿಲು: ಬಿಗಿಯಿಲ್ಲದಿರುವುದು; ಅನುಪಮ: ಉತ್ಕೃಷ್ಟವಾದುದು; ರತುನ: ರತ್ನ; ರಾಜಿ: ಸಮೂಹ; ಮುರಿ: ಸೀಳು; ಕಂಕಣ: ಬಳೆ; ಪಸರಿಸು: ಹರಡು; ಅನುಜ: ತಮ್ಮ; ರಣ: ಯುದ್ಧಭೂಮಿ; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಸಿಡಿಲು: ಅಶನಿ; ಕಾಳೆಗ: ಯುದ್ಧ; ಮೆರೆ: ಹೊಳೆ; ಕಂಡು: ನೋಡು;

ಪದವಿಂಗಡಣೆ:
ಕಡಿದ +ಖಡೆಯದ +ಕುಸುರಿಗಳ +ಚಿನ
ಕಡಿಯ +ಹೀರಾವಳಿಯ +ಮುಕುಟದ
ಸಡಿಲದ್+ಅನುಪಮ +ರತುನರಾಜಿಯ +ಮುರಿದ +ಕಂಕಣದ
ಕಡಿಕು +ಪಸರಿಸೆ +ಕೌರವ+ಅನುಜರ್
ಅಡೆಗೆಡೆದ +ರಣ+ ಕಾಂಚನ+ಅದ್ರಿಯ
ಸಿಡಿಲ +ಕಾಳೆಗದಂತೆ +ಮೆರೆದಿರೆ +ಕಂಡನಾ +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೌರವಾನುಜರಡೆಗೆಡೆದ ರಣ ಕಾಂಚನಾದ್ರಿಯ ಸಿಡಿಲ ಕಾಳೆಗದಂತೆ ಮೆರೆದಿರೆ

ಪದ್ಯ ೨೦: ಭೀಮನು ಹೇಗೆ ತೋರಿದನು?

ಹೊಸರಥವ ತಾ ಹೋದನೇ ಸಂ
ಧಿಸುವೆನಿನ್ನನಿಲಜನು ಕುಂತಿಯ
ಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ
ಕುಸುರಿದರಿದನು ಮುಂದೆ ವೈರಿ
ಪ್ರಸರವನು ಸಂವರ್ತರುದ್ರನೊ
ಹೊಸಬನಿವನಾರೆಂದು ತಲ್ಲಣಿಸಿತ್ತು ರಿಪುಸೇನೆ (ದ್ರೋಣ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ದ್ರೋಣನು ನುಡಿಯುತ್ತಾ, ಭೀಮನು ಹೋದನೋ, ಹೊಸ ರಥವನ್ನು ತನ್ನಿ, ಅವನನ್ನು ಸಂಧಿಸುತ್ತೇನೆ, ಅವನು ಕುಂತಿಯ ಹೊಟ್ಟೆಯನ್ನು ಹೊಕ್ಕು ಅವಿತರೂ ನಾನು ಅಲ್ಲಿ ಹೋಗುತ್ತೇನೆ ಎಂದನು. ಭೀಮನು ಕಾಲರುದ್ರನಂತೆ ಎದುರು ಸಿಕ್ಕವರನ್ನೆಲ್ಲಾ ಕೊಲ್ಲುತ್ತಾ ಹೋಗಲು, ಇವನು ಕಾಲರುದ್ರನೋ, ಅಥವಾ ಇನ್ನಾರೋ ಎಂದು ಕುರುಸೇನೆ ತಲ್ಲಣಗೊಂಡಿತು.

ಅರ್ಥ:
ಹೊಸ: ನವೇನ; ರಥ: ಬಂಡಿ; ತಾ: ಬರೆಮಾಡು; ಹೋಗು: ತೆರಳು; ಸಂಧಿಸು: ಕೂಡಿಸು; ಅನಿಲಜ: ವಾಯುಪುತ್ರ (ಭೀಮ); ಬಸುರು: ಹೊಟ್ಟೆ; ಹೊಕ್ಕು: ಸೇರು; ಗಜಬಜ: ಗಲಾಟೆ, ಕೋಲಾಹಲ; ಕುಸುರಿ: ಚೂರು; ಅರಿ: ಚುಚ್ಚು; ಮುಂದೆ: ಎದುರು; ವೈರಿ: ಶತ್ರು; ಪ್ರಸರ: ಸಮೂಹ; ಸಂವರ್ತ: ಅಳಿವು, ನಾಶ; ರುದ್ರ: ಶಿವನ ರೂಪ; ತಲ್ಲಣ: ಅಂಜಿಕೆ, ಭಯ; ರಿಪು: ವೈರಿ;

ಪದವಿಂಗಡಣೆ:
ಹೊಸರಥವ +ತಾ +ಹೋದನೇ +ಸಂ
ಧಿಸುವೆನಿನ್+ಅನಿಲಜನು +ಕುಂತಿಯ
ಬಸುರ +ಹೊಕ್ಕರೆ +ಹೊಗುವೆನ್+ಎನುತಾ +ದ್ರೋಣ +ಗಜಬಜಿಸೆ
ಕುಸುರಿದ್+ಅರಿದನು +ಮುಂದೆ +ವೈರಿ
ಪ್ರಸರವನು +ಸಂವರ್ತ+ರುದ್ರನೊ
ಹೊಸಬನ್+ಇವನಾರೆಂದು +ತಲ್ಲಣಿಸಿತ್ತು +ರಿಪುಸೇನೆ

ಅಚ್ಚರಿ:
(೧) ವೈರಿ, ರಿಪು – ಸಮಾನಾರ್ಥಕ ಪದ
(೨) ದ್ರೋಣರ ಕ್ರೋಧದ ನುಡಿ – ಅನಿಲಜನು ಕುಂತಿಯಬಸುರ ಹೊಕ್ಕರೆ ಹೊಗುವೆನೆನುತಾ ದ್ರೋಣ ಗಜಬಜಿಸೆ

ಪದ್ಯ ೧೮: ಅರ್ಜುನನು ಮತ್ತಾವ ರಾಜರನ್ನು ಕೆಡಹಿದನು?

ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ (ದ್ರೋಣ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆನೆಗಳನ್ನೂ, ಅಂಬಟ್ಟರಾಜನ ತಲೆಯನ್ನೂ, ಅರ್ಜುನನು ಕತ್ತರಿಸಿದನು. ಪಾರಸೀಕರ ಕೋಟಿ ಸಂಖ್ಯೆಯ ಕುದುರೆಗಳನ್ನೂ ಚೂರು ಚೂರಾಗುವಂತೆ ಕತ್ತರಿಸಿದನು. ತಮ್ಮ ರಾಜರ ಹಣವನ್ನು ತಿಂದು ಬಿರುದನ್ನು ಹೊಗಳಿಸಿಕೊಳ್ಳುತ್ತಾ ಬಂದ ರಾವುತರನ್ನು ನಿಮಿಷಮಾತ್ರದಲ್ಲಿ ಕೆಡಹಿದನು.

ಅರ್ಥ:
ಕರಿ: ಆನೆ; ಘಟೆ: ಗುಂಪು; ಭೂಪ: ರಾಜ; ಶಿರ: ತಲೆ; ಎಚ್ಚು: ಬಾಣ ಪ್ರಯೋಗ ಮಾಡು; ತುರಗ: ಅಶ್ವ; ಕವಿ: ಆವರಿಸು; ಕುಸುರಿ: ತುಂಡು; ಅರಿ: ಸೀಳು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಬಿರುದು: ಗೌರವ ಸೂಚಕ ಪದ; ಹೊಗಳು: ಪ್ರಶಂಸೆ; ದಾತಾರ: ಕೊಡುವವನು, ದಾನಿ; ಹಣ: ಐಶ್ವರ್ಯ; ಸಲೆ: ಒಂದೇ ಸಮನೆ; ತಿಂದು: ಉಂಡು; ಹೆಚ್ಚು: ಅಧಿಕ; ಹಿರಿಯ: ದೊಡ್ಡವ; ಡೊಳ್ಳು:ಚರ್ಮದ ವಾದ್ಯ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೆಡಹು: ನಾಶಗೊಳಿಸು; ನಿಮಿಷ: ಕ್ಷಣಮಾತ್ರದಲಿ;

ಪದವಿಂಗಡಣೆ:
ಕರಿಘಟೆಯನ್+ಅಂಬಟ್ಟ+ಭೂಪನ
ಶಿರವನ್+ಎಚ್ಚನು +ಪಾರಸೀಕರ
ತುರಗ +ಕವಿಯಲು +ಕುಸುರಿದ್+ಅರಿದನು +ಕೋಟಿ+ಸಂಖ್ಯೆಗಳ
ಬಿರುದ +ಹೊಗಳಿಸಿಕೊಂಡು +ದಾತಾ
ರರ +ಹಣವ +ಸಲೆ +ತಿಂದು +ಹೆಚ್ಚಿದ
ಹಿರಿಯ +ಡೊಳ್ಳಿನ +ರಾವುತರ +ಕೆಡಹಿದನು +ನಿಮಿಷದಲಿ

ಅಚ್ಚರಿ:
(೧) ಪರಾಕ್ರಮಿಗಳು ಎಂದು ಹೇಳುವ ಪರಿ – ಬಿರುದ ಹೊಗಳಿಸಿಕೊಂಡು ದಾತಾರರ ಹಣವ ಸಲೆ ತಿಂದು ಹೆಚ್ಚಿದಹಿರಿಯ ಡೊಳ್ಳಿನ ರಾವುತರ

ಪದ್ಯ ೩: ಅರ್ಜುನನ ಬಾಣದ ಪ್ರಭಾವ ಹೇಗಿತ್ತು?

ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಲಿನಲಿ
ನೊಸಲ ಸೀಸಕ ನುಗ್ಗು ನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ವೀರರ ಜೋಡು, ಸೀಸಕ, ಬಾಹುರಕ್ಷೆ, ಶಿರಸ್ತ್ರಾಣಗಳು ಅರ್ಜುನನು ಬಾಣಗಳಿಂದ ಸೀಳಿ ನುಗ್ಗು ನುಸಿಯಾದವು. ಕಿರೀಟಗಳಲ್ಲಿದ್ದ ವಜ್ರಗಳು ಹೊಳೆಯುತ್ತಾ ಹಾರಿದವು. ಅವಗಳನ್ನು ದೇಹಕ್ಕೆ ಬಂಧಿಸಿದ್ದ ಸರಪಣಿಗಳು ತುಂಡಾದವು.

ಅರ್ಥ:
ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡು: ಜೊತೆ; ವಜ್ರ:ಗಟ್ಟಿಯಾದ; ರಸುಮೆ: ರಶ್ಮಿ, ಕಿರಣ; ಹಾರು: ಚಲಿಸು, ಉಡ್ಡಾಣ ಮಾಡು; ರಿಪು: ವೈರಿ; ಎಸೆ: ಬಾಣ ಪ್ರಯೋಗ ಮಾದು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಕವಚ: ಹೊದಿಕೆ; ಸೀಳು: ಚೂರು, ತುಂಡು; ತೋಳು: ಬಾಹು; ನೊಸಲ: ಹಣೆ; ನುಗ್ಗು: ನೂಕಾಟ, ನೂಕುನುಗ್ಗಲು; ನುಸಿ: ಹುಡಿ, ಧೂಳು; ಬಂಧ: ಕಟ್ಟು, ಬಂಧನ; ಸರಪಣಿ: ಸಂಕೋಲೆ, ಶೃಂಖಲೆ; ಹಿಳಿ: ಹಿಂಡು ; ಅರಿ: ವೈರಿ; ಬಲ: ಸೈನ್ಯ; ಎಸಕ: ಕಾಂತಿ; ವೈರಿ: ರಿಪು; ಮೋಹರ: ಯುದ್ಧ;

ಪದವಿಂಗಡಣೆ:
ಕುಸುರಿದ್+ಅರಿದವು +ಜೋಡು +ವಜ್ರದ
ರಸುಮೆಗಳು +ಹಾರಿದವು+ ರಿಪುಗಳ
ಎಸೆವ+ ಸೀಸಕ +ಕವಚವನು +ಸೀಳಿದನು +ತೋಳಿನಲಿ
ನೊಸಲ+ ಸೀಸಕ +ನುಗ್ಗು +ನುಸಿ +ಬಂ
ಧಿಸಿದ +ಸರಪಣಿ +ಹಿಳಿದವ್+ಅರಿಬಲ
ದೆಸಕ+ ನಿಂದುದು +ಪಾರ್ಥನ್+ಎಚ್ಚನು +ವೈರಿ+ಮೋಹರವ

ಅಚ್ಚರಿ:
(೧) ವೈರಿ, ರಿಪು, ಅರಿ – ಸಮಾನಾರ್ಥಕ ಪದಗಳು
(೨) ಸೀಸಕ – ೩, ೪ ಸಾಲಿನ ಎರಡನೇ ಪದ

ಪದ್ಯ ೨೨: ಧರ್ಮಜನು ಅರ್ಜುನನಿಗೆ ಏನು ಹೇಳಿದ?

ಅಸಮ ಪದ್ಮವ್ಯೂಹವನು ಭೇ
ದಿಸುವನಾವನನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ (ದ್ರೋಣ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಸಾಮಾನ್ಯವಾದ ಪದ್ಮವ್ಯೂಹವನ್ನು ದ್ರೋಣನು ರಚಿಸಲು, ಅದನ್ನು ಭೇದಿಸಲು ನಮ್ಮಲ್ಲಿ ಯಾರಿಗೂ ತಿಳಿಯದ ಸಮಯದಲ್ಲಿ ತಾನು ಭೇದಿಸುವೆನೆಂದು ನಾವು ಬೇಡವೆಂದರೂ ಹುಡುಗತನದಿಂದ ಯುದ್ಧಕ್ಕೆ ಹೋದನು. ಆಗ ತಾನೇ ಮದಧಾರೆಯಿಳಿದ ಕಾಡಾನೆಯು ಬಾಳೆಯ ತೋಟಕ್ಕೆ ನುಗ್ಗಿದಂತೆ ಶತ್ರು ಸೈನ್ಯವನ್ನು ಕೊಚ್ಚಿಕೊಚ್ಚಿಕೊಂಡು ಪೌರುಷವನ್ನು ಮೆರೆದನು.

ಅರ್ಥ:
ಅಸಮ: ಸಮವಲ್ಲದ; ಭೇದ: ಮುರಿ; ಕೇಳು: ಪ್ರಶ್ನಿಸು; ಶಿಶು: ಮಗು; ಆಹವ: ಯುದ್ಧ; ನಡೆ: ಚಲಿಸು; ಬೇಡ: ತ್ಯಜಿಸು; ಹೊಸ: ನವೀನ; ಮದ: ಅಹಂಕಾರ, ಗರ್ವ; ವನ: ಕಾಡು; ದಂತಿ: ಆನೆ; ಕದಳಿ: ಬಾಳೆ; ಕುಸುರಿ: ನಾಜೂಕಾದ ಕೆಲಸ; ಅರಿ: ಸೀಳು; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಅವನೀಪಾಲ: ರಾಜ; ಅನುಜ: ತಮ್ಮ;

ಪದವಿಂಗಡಣೆ:
ಅಸಮ +ಪದ್ಮವ್ಯೂಹವನು +ಭೇ
ದಿಸುವನ್+ಆವನನ್+ಎನಲು+ ಕೇಳಿದು
ಶಿಶುತನದಲ್+ಆಹವಕೆ +ನಡೆದನು +ನಾವು +ಬೇಡೆನಲು
ಹೊಸ +ಮದದ +ವನದಂತಿ +ಕದಳಿಯ
ಕುಸುರಿದ್+ಅರಿದಂದದಲಿ+ ಘನ+ಪೌ
ರುಷವ +ಮಾಡಿದನ್+ಎಂದನ್+ಅವನೀಪಾಲನ್+ಅನುಜಂಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೊಸ ಮದದ ವನದಂತಿ ಕದಳಿಯ ಕುಸುರಿದರಿದಂದದಲಿ

ಪದ್ಯ ೪೦: ಅಭಿಮನ್ಯುವು ನಿಶಸ್ತ್ರವಾಗಿ ಹೇಗೆ ಹೋರಾಡಿದನು?

ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ (ದ್ರೋಣ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ವಿಷ ತುಂಬಿದ ಜೀನುಗೂಡಿಗೆ ಎರಗಿ ನೊಣವು ಬದುಕಿ ಉಳಿಯಬಲ್ಲುದೇ? ಶಿವ ಶಿವಾ, ಅಭಿಮನ್ಯುವಿನ ಮುಂದೆ ಬಂದವರು ಬದುಕಿ ಉಳಿಯುವುದುಂಟೇ? ನಿಷ್ಠುರನಾಗಿ ಆನೆ, ಕುದುರೆ ಕಾಲಾಳುಗಳನ್ನು ಕೊಚ್ಚಿ ಕೊಂದು ಯಮನಪುರಿಗೆ ಕಳುಹಿಸಿದನು.

ಅರ್ಥ:
ವಿಷ: ಗರಳು; ಹುಟ್ಟಿ: ಗೂಡು; ಎರಗು: ಬಾಗು; ನೊಣ: ಕೀಟ; ಜೀವಿಸು: ಬದುಕು; ಶಿವ: ಶಂಕರ; ಕುಮಾರ: ಪುತ್ರ; ಮುಸುಡು: ಮುಖ; ಬಿದ್ದು: ಬೀಳು; ಬದುಕು: ಜೀವಿಸು; ಭಟ: ಸೈನಿಕ; ನಿಕರ: ಗುಂಪು; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಕರಿಘಟೆ: ಆನೆಗಳ ಗುಂಪು; ನಿಪ್ಪಸರ: ಅತಿಶಯ; ಕಾಲಾಳು: ಸೈನಿಕ; ಕುದುರೆ: ಅಶ್ವ; ಅಸು: ಪ್ರಾಣ; ಸೂರೆ: ಕೊಳ್ಳೆ, ಲೂಟಿ; ಅಂತಕ: ಯಮ; ದೂತ: ಸೇವಕ; ಸಂತತಿ: ವಂಶ;

ಪದವಿಂಗಡಣೆ:
ವಿಷದ +ಹುಟ್ಟಿಯೊಳ್+ಎರಗಿ+ ನೊಣ+ ಜೀ
ವಿಸುವುದೇ +ಶಿವ+ ಶಿವ+ ಕುಮಾರನ
ಮುಸುಡ +ಮುಂದಕೆ +ಬಿದ್ದು +ಬದುಕುವುದುಂಟೆ +ಭಟನಿಕರ
ಕುಸುರಿದ್+ಅರಿದನು +ಕರಿಘಟೆಯ
ನಿಪ್ಪಸರದಲಿ +ಕಾಲಾಳು +ಕುದುರೆಗಳ್
ಅಸುವ +ಸೂರೆಯ +ಬಿಟ್ಟನ್+ಅಂತಕ +ದೂತ +ಸಂತತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿಷದ ಹುಟ್ಟಿಯೊಳೆರಗಿ ನೊಣ ಜೀವಿಸುವುದೇ
(೨) ಸಾಯಿಸಿದನು ಎಂದು ಹೇಳುವ ಪರಿ – ಅಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ

ಪದ್ಯ ೧೧: ಭೀಷ್ಮರು ಎಲ್ಲಿ ಮಲಗಿದರು?

ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ (ಭೀಷ್ಮ ಪರ್ವ, ೧೦ ಸಂಧಿ, ೧೧ ಪದ್ಯ
)

ತಾತ್ಪರ್ಯ:
ಮೈ ತೋಳು ತೊಡೆಗಳು ರಕ್ತ ಧಾರೆಗಳಿಂದ ಕೊಳಕಾಗಿ, ಕರುಳಿಂದ ಸುರಿಯುವ ನೆಣವಸೆ, ಮೂಳೆಯ ಒಟ್ಟಿಲುಗಳಿಂದ ಕೂಡಿ, ಕೆಂಗರಿಯ ಬಾಣಗಳ ಮಂಚದ ಮೇಲೆ ರಣರಂಗ ಮಧ್ಯದಲ್ಲಿ ಭೀಷ್ಮನು ಮಲಗಿದನು.

ಅರ್ಥ:
ಹೂಳು: ಹೂತು ಹಾಕು; ಬಾಣ: ಅಂಬು; ಮೈ: ತನು; ತೋಳು: ಬಾಹು; ತೊಡೆ: ಊರು; ಜೊಂಡು:ತಲೆಯ ಹೊಟ್ಟು, ನೀರಿನಲ್ಲಿ ಕೊಳೆತು ನಾರುವ ಕಸ; ರಕುತ: ನೆತ್ತರು; ಸಾಲು: ಗುಂಪು,ಆವಳಿ; ಕೊಳಚೆ: ಕೆಸರು; ಕರುಳ: ಪಚನಾಂಗ; ಕುಸುರಿ: ತುಂಡು, ಎಂಜಿಲು; ಬಸಿ: ಒಸರು, ಸ್ರವಿಸು, ಜಿನುಗು; ನೆಣವಸೆ: ಹಸಿಯಾದ ಕೊಬ್ಬು; ಮೂಳೆ: ಎಲುಬು; ನೆಲ: ಭೂಮಿ; ಮುಟ್ಟು: ತಾಗು; ಹೊಗರು: ಕಾಂತಿ, ಪ್ರಕಾಶ; ಕೆಂಗರಿಕೋಲು: ಕೆಂಪು ಗರಿಯುಳ್ಳ ಬಾಣ; ಮಂಚ: ಪಲ್ಲಂಗ; ರಣ: ಯುದ್ಧಭೂಮಿ; ಪವಡಿಸು: ಮಲಗು;

ಪದವಿಂಗಡಣೆ:
ಹೂಳಿ +ಹೋಯಿತು +ಬಾಣದಲಿ+ ಮೈ
ತೋಳು +ತೊಡೆ +ಜೊಂಡೆದ್ದು+ ರಕುತದ
ಸಾಲು+ಕೊಳಚೆಯ +ಕರುಳ +ಕುಸುರಿಯ +ಬಸಿವ +ನೆಣವಸೆಯ
ಮೂಳೆಯೊಟ್ಟಿಲ +ನೆಲನ +ಮುಟ್ಟದ
ಜಾಳಿಗೆಯ +ಹೊಗರೊಗುವ+ ಕೆಂಗರಿ
ಕೋಲ+ ಮಂಚದ +ಮೇಲೆ +ರಣದಲಿ +ಭೀಷ್ಮ +ಪವಡಿಸಿದ

ಅಚ್ಚರಿ:
(೧) ಭೀಷ್ಮರು ಮಲಗಿದ ಪರಿ – ಕೆಂಗರಿಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ

ಪದ್ಯ ೪೨: ಭೀಷ್ಮಾರ್ಜುನರ ಕಾಳಗದಲ್ಲಿ ಬಾಣಗಳ ಸ್ಥಿತಿ ಏನಾಯಿತು?

ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ (ಭೀಷ್ಮ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ಎಚ್ಚ ಬಾಣಗಳನ್ನು ಅರ್ಜುನನು ಕತ್ತರಿಸಿ ಕಿಡಿಯುಗುಳುವ ಬಾಣಗಳ ಬಲೆಯನ್ನು ಭೀಷ್ಮನ ಮೇಲೆ ಬೀಸಿದನು. ಭೀಷ್ಮನು ಅರ್ಜುನನ ಬಾಣಗಳನ್ನು ತುಂಡು ತುಂಡಾಗಿ ಕತ್ತರಿಸಿ ಮತ್ತೆ ಬಾಣಗಳನ್ನು ಬಿಟ್ಟನು. ಲೆಕ್ಕವಿಲ್ಲದಷ್ಟು ಬಾಣಗಳು ಅವರ ಯುದ್ಧದಲ್ಲಿ ತುಂಡಾಗಿ ಬಿದ್ದವು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ವಿಶಿಖ: ಬಾಣ, ಅಂಬು; ತರಿ: ಕಡಿ, ಕತ್ತರಿಸು; ಕಿಡಿ: ಬೆಂಕಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಧಾರೆ: ಪ್ರವಾಹ; ಭೂರಿ: ಹೆಚ್ಚು, ಅಧಿಕ; ಬಾಣ: ಅಂಬು; ಬಲೆ: ಜಾಲ, ಬಂಧನ; ಬೀಸು: ಹರಾದು; ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡಿಸು: ಕೂಡಿಸು; ನಿಶಿತ: ಹರಿತವಾದುದು; ಶರ: ಬಾಣ; ಬಳಿಕ: ನಂತರ; ಹಸುಗೆ: ವಿಭಾಗ, ಪಾಲು; ಸವೆ: ತೀರು; ಸರಳು: ಬಾಣ; ಸಮರ: ಯುದ್ಧ;

ಪದವಿಂಗಡಣೆ:
ಎಸಲು +ಕಡಿದನು +ಪಾರ್ಥನ್+ಈತನ
ವಿಶಿಖವನು +ತರಿದ್+ಅವನು +ಕಿಡಿ +ದ
ಳ್ಳಿಸುವ +ಧಾರೆಯ +ಭೂರಿ +ಬಾಣದ +ಬಲೆಯ +ಬೀಸಿದನು
ಕುಸುರಿದ್+ಅರಿದನು +ಮತ್ತೆ +ಜೋಡಿಸಿ
ನಿಶಿತ +ಶರದಲಿ +ಬಳಿಕಲ್+ಅವನಿಗೆ
ಹಸುಗೆ +ಮಾಡಿದನ್+ಇತ್ತ +ಸವೆದವು +ಸರಳು +ಸಮರದಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೂರಿ ಬಾಣದ ಬಲೆಯ ಬೀಸಿದನು
(೨) ಸ ಕಾರದ ತ್ರಿವಳಿ ಪದ – ಸವೆದವು ಸರಳು ಸಮರದಲಿ