ಪದ್ಯ ೪೩: ಕೋಪದಲ್ಲಿದ್ದ ಗಾಂಧಾರಿಯ ಮನೆಗೆ ಯಾರು ಬಂದರು?

ತನತನಗೆ ನಡುನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಹಲವಿದೇನೇನೆಂದು ಬೆಸಗೊಂಡ (ಆದಿ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಗಾಂಧಾರಿಯ ದಾಸಿಯರು ನಡನಡುಗುತ್ತಾ ಬಂದು, ಅಮ್ಮಾ ಏನಪ್ಪಣೆಯೆಂದು ಕೇಳಲು, ನೆಲದ ಮೇಲೆ ಬಿದ್ದದ್ದ ಮಾಂಸದ ತುಂಡುಗಳನ್ನು ಹೊರಗೆ ಬಿಸಾಡಿ ಎಂದಳು. ಆ ಸಮಯಕ್ಕೆ ಸರಿಯಾಗಿ ವೇದವ್ಯಾಸರು ಅಲ್ಲಿ ಬಂದು ಗಾಂಧಾರಿಯ ಬೊಬ್ಬೆಯನ್ನು ಕೇಳಿ, ಇದೇನು ಎಂದು ಕೇಳಿದರು.

ಅರ್ಥ:
ತನತನಗೆ: ಅವರವರಲ್ಲಿಯೇ; ನಡುಗು: ಹೆದರು, ಕಂಪಿಸು; ಕಾಂತಾಜನ: ದಾಸಿ, ಸ್ತ್ರೀಯರ ಗುಂಪು; ಬಂದು: ಆಗಮಿಸು; ತಾಯೆ: ಅಮ್ಮಾ; ಬೆಸಸು: ಅಪ್ಪಣೆ; ಬಿಸುಡು: ಹೊರಹಾಕು; ಊರು: ಪುರ; ಹೊರಗೆ: ಆಚೆ; ಮುಹೂರ್ತ: ಸಮಯ; ಮುನಿ: ಋಷಿ; ಮನೆ: ಆಲಯ; ಕಂಡು: ನೋಡು; ಕಾಮಿನಿ: ಹೆಣ್ಣು; ಕೋಲಾಹಲ: ಗೊಂದಲ; ಬೆಸಸು: ಕೇಳು;

ಪದವಿಂಗಡಣೆ:
ತನತನಗೆ+ ನಡುನಡುಗಿ +ಕಾಂತಾ
ಜನವು +ಬಂದುದು +ತಾಯೆ +ಬೆಸನೇನ್
ಎನಲು +ಬಿಸುಡಿವನ್+ಊರ +ಹೊರಗೆಂಬ್+ಆ+ ಮುಹೂರ್ತದಲಿ
ಮುನಿಪ+ವೇದವ್ಯಾಸನ್+ಆಕೆಯ
ಮನೆಗೆ+ ಬಂದನು +ಕಂಡನೀ +ಕಾ
ಮಿನಿಯ +ಕೋಲಹಲವ್+ಇದೇನೇನ್+ಎಂದು +ಬೆಸಗೊಂಡ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ತನತನಗೆ, ನಡುನಡುಗಿ
(೨) ಗಾಂಧಾರಿಯ ಕೋಪದ ನುಡಿಗಳು – ಬಿಸುಡಿವನೂರ ಹೊರಗೆ
(೩) ಹೆಣ್ಣನ್ನು ಕರೆದ ಪರಿ – ಕಾಂತಾಜನ, ತಾಯೆ, ಕಾಮಿನಿ

ಪದ್ಯ ೨೪: ಗಣಿಕೆಯರ ಸೌಂದರ್ಯವು ಹೇಗಿತ್ತು?

ಅಲರ್ದ ಹೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮವನವೊ ಕುಸುಮೋ
ಚ್ಚಳಿತ ಕೇತಕಿದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾಕಾರ ವದನೆಯರೊ (ಅರಣ್ಯ ಪರ್ವ, ೧೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಹೂ ಬಿಟ್ಟ ಕೆಂದಾವರೆಯ ಪಂಕ್ತಿಯೋ, ಚಿಗುರಿದ ಮಾವಿನ ತೋಪೋ, ದಟ್ಟವಾದ ನೆರಳನ್ನು ಹರಡುವ ಹೊಂಗೆಯ ತೋಪೋ, ಹೊಳೆಯುವ ಹವಳದ ವನವೋ, ಕೇದಗೆಯ ಹೂವಿನಿಂದ ಬಂದ ದಳವೋ, ಬಾಳೆಯ ವನವೋ, ಕೌರವನ ಪರಿವಾರದ ಸಖಿಯರೋ ಎಂಬಂತೆ ಗಣಿಕೆಯರು ತೋರಿದರು.

ಅರ್ಥ:
ಅಲರ್: ಹೂವ; ಅಲರ್ದ: ಹೂವು ಬಿಟ್ಟ; ಹೊಮ್ದಾವರೆ: ಕೆಂಪಾದ ತಾವರೆ; ಹಂತಿ: ಪಂಕ್ತಿ, ಸಾಲು; ತಳಿತ: ಚಿಗುರಿದ; ಮಾವು: ಚೂತ; ಬನ: ಕಾಡು; ಮಿಗೆ: ಮತ್ತು, ಅಧಿಕ; ಕತ್ತಲಿಪ: ನೆರಳು; ಬಹಳ: ತುಂಬ; ತಮಾಲ: ಹೊಂಗೆ; ಕಾನನ: ಕಾಡು; ದಿಗಂತ: ದಿಕ್ತಟ, ದಿಕ್ಕಿನ ತುದಿ; ಹೊಳೆ: ಪ್ರಕಾಶ; ವಿದ್ರುಮ: ಹವಳ; ವನ: ಕಾಡು; ಕುಸುಮ: ಹೂವು; ಉಚ್ಚಳಿತ: ಮೇಲಕ್ಕೆ ಹಾರು; ದಳ: ಎಸಳು, ರೇಕು; ರಂಭಾವಳಿ: ಬಾಳೆ ಗಿಡದ ಗುಂಪು; ಕಾಂತ: ಸುಂದರವಾದ ; ಕಮಲಾಕಾರ: ತಾವರೆಯಂತೆ; ವದನ: ಮುಖ;

ಪದವಿಂಗಡಣೆ:
ಅಲರ್ದ +ಹೊಂದಾವರೆಯ +ಹಂತಿಯೊ
ತಳಿತ +ಮಾವಿನ +ಬನವೊ +ಮಿಗೆ +ಕ
ತ್ತಲಿಪ +ಬಹಳ +ತಮಾಲ +ಕಾನನವೋ +ದಿಗಂತದಲಿ
ಹೊಳೆವ +ವಿದ್ರುಮ+ವನವೊ +ಕುಸುಮೋ
ಚ್ಚಳಿತ +ಕೇತಕಿ+ದಳವೊ+ ರಂಭಾ
ವಳಿಯೊ+ ಕಾಂತಾಜನವೊ+ ಕಮಲಾಕಾರ +ವದನೆಯರೊ

ಅಚ್ಚರಿ:
(೧) ಉಪಮಾನದ ಪ್ರಯೋಗಗಳು – ಅಲರ್ದ ಹೊಂದಾವರೆಯ ಹಂತಿಯೊ;
ತಳಿತ ಮಾವಿನ ಬನವೊ; ಮಿಗೆ ಕತ್ತಲಿಪ ಬಹಳ ತಮಾಲ ಕಾನನವೋ; ಹೊಳೆವ ವಿದ್ರುಮವನವೊ; ಕುಸುಮೋಚ್ಚಳಿತ ಕೇತಕಿದಳವೊ; ರಂಭಾವಳಿಯೊ;

ಪದ್ಯ ೩: ದುರ್ವಾಸ ಮುನಿಗಳನ್ನು ಹೇಗೆ ಬರೆಮಾಡಿಕೊಂಡರು?

ಮುನಿಯ ಬರವನು ಕೇಳ್ದು ದುರ್ಯೋ
ಧನನು ಭೀಷ್ಮದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊಂಡು
ವಿನುತ ಭೂಸುರ ನಿವಹ ಕಾಂತಾ
ಜನದ ಕನ್ನಡಿ ಕಲಶವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು (ಅರಣ್ಯ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ದುರ್ವಾಸರ ಆಗಮನವನ್ನು ತಿಳಿದ ಬಳಿಕ ದುರ್ಯೋಧನನು, ಭೀಷ್ಮ, ದ್ರೋಣ, ಕೃಪಾಚಾರ್ಯ, ಕರ್ಣ, ಅಶ್ವತ್ಥಾಮ, ವಿದುರರನ್ನು ಒಡಗೂಡಿ ಬ್ರಾಹ್ಮಣರು, ಕಳಸ ಕನ್ನಡಿ ಹಿಡಿದ ಸ್ತ್ರೀಯರು ವಾದ್ಯ ಧ್ವನಿ ಸಹಿತವಾಗಿ ಅವರನ್ನೆದುರುಗೊಂಡರು, ದುರ್ಯೋಧನನು ಕಾಣಿಕೆಗಳನ್ನು ನೀಡಿ ನಮಸ್ಕರಿಸಿದನು.

ಅರ್ಥ:
ಮುನಿ: ಋಷಿ; ಬರವು: ಆಗಮನ; ಕೇಳಿ: ಆಲಿಸಿ; ಇನ: ಸೂರ್ಯ; ತನಯ: ಮಗ; ಸೂನು: ಮಗ; ಗುರು: ಆಚಾರ್ಯ; ಆದಿ: ಮುಂತಾದ; ವಿನುತ: ಸ್ತುತಿಗೊಂಡ; ಭೂಸುರ: ಬ್ರಾಹ್ಮಣ; ನಿವಹ: ಗುಂಪು; ಕಾಂತ: ಹೆಣ್ಣು; ಜನ: ಗುಂಪು; ಕನ್ನಡಿ: ಮುಕುರ; ಕಲಶ: ಕೊಡ, ಕುಂಭ, ಮಂಗಳಕಾರ್ಯಗಳಲ್ಲಿ ನೀರು ತುಂಬಿ ಅಲಂಕರಿಸಿದ ಬಿಂದಿಗೆ; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ಸಹಿತ: ಜೊತೆ; ಇದಿರು: ಎದುರು; ಕಾಣಿಕೆ: ಉಡುಗೊರೆ; ನಮಿಸು: ನಮಸ್ಕರಿಸು;

ಪದವಿಂಗಡಣೆ:
ಮುನಿಯ +ಬರವನು+ ಕೇಳ್ದು +ದುರ್ಯೋ
ಧನನು +ಭೀಷ್ಮ+ದ್ರೋಣ +ಗೌತಮರ್
ಇನ+ತನಯ +ಗುರುಸೂನು +ವಿದುರಾದಿಗಳನ್+ಒಡಗೊಂಡು
ವಿನುತ +ಭೂಸುರ +ನಿವಹ +ಕಾಂತಾ
ಜನದ +ಕನ್ನಡಿ +ಕಲಶ+ವಾದ್ಯ
ಧ್ವನಿ +ಸಹಿತಲ್+ಇದಿರಾಗಿ +ಕಾಣಿಕೆಯಿತ್ತು +ನಮಿಸಿದನು

ಅಚ್ಚರಿ:
(೧) ಬರೆಮಾಡಿಕೊಳ್ಳುವ ಪರಿ – ಕಾಂತಾಜನದ ಕನ್ನಡಿ ಕಲಶವಾದ್ಯ ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು