ಪದ್ಯ ೧೪: ಧರ್ಮಜನು ಕೌರವನನ್ನು ಹೇಗೆ ಹಂಗಿಸಿದನು?

ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ (ಗದಾ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಕೌರವ ರಾಜ, ನೀನೇನು ನೀರು ಹಾವೇ? ನೀರಿನಲ್ಲಿ ನೀನು ಹೊಕ್ಕು ಅಲ್ಲಿಯೇ ಇರುವೆನೆಂದರೆ ಅದು ಚಂದ್ರವಂಶದ ಹೆಸರನ್ನು ಕೆಡಿಸಿದಂತಾಗುವುದಿಲ್ಲವೇ? ಸಹೋದರರು, ಮಕ್ಕಳು, ಜ್ಞಾತಿಗಳು, ಬಂಧುಗಳಾದ ರಾಜರು ಇವರನ್ನೆಲ್ಲಾ ಕೊಲ್ಲಿಸಿ ನೀನು ನೀರಲ್ಲಿ ಮುಳುಗಿರುವುದು ನೀಚತನ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ರಾಯ: ರಾಜ; ಸಲಿಲ: ಜಲ; ವ್ಯಾಳ: ಸರ್ಪ; ಅಕಟ: ಅಯ್ಯೋ; ಜಲ: ನೀರು; ಆಳು: ಅಧಿಕಾರ ನಡೆಸು; ಕಾಳು: ಕೀಳಾದುದು; ಗರುವ: ಶ್ರೇಷ್ಠ; ಶಶಿ: ಚಂದ್ರ; ವಂಶ: ಕುಲ; ಕಾಳೆಗ: ಯುದ್ಧ; ಸಹೋದರ: ತಮ್ಮ; ಜಾಲ: ಸಮೂಹ; ಪುತ್ರ: ಸುತ; ಜ್ಞಾತಿ: ದಾಯಾದಿ; ಬಂಧು: ನೆಂಟ, ಸಂಬಂಧಿಕ; ನೃಪಾಲ: ರಾಜ; ನೀರು: ಜಲ; ಅಡಗು: ಮುಚ್ಚಿಟ್ಟುಕೊಳ್ಳು; ಕಷ್ಟ: ಕ್ಲಿಷ್ಟ;

ಪದವಿಂಗಡಣೆ:
ಏಳು +ಕೌರವರಾಯ +ಸಲಿಲ
ವ್ಯಾಳನೇ +ನೀನ್+ಅಕಟ +ಜಲದೊಳಗ್
ಆಳುವರೆ+ ಕಾಳಾಯ್ತು +ನಿನ್ನಲಿ +ಗರುವ +ಶಶಿವಂಶ
ಕಾಳೆಗದೊಳ್+ಅದ್ದಿದೆ +ಸಹೋದರ
ಜಾಲ+ ಪುತ್ರ+ಜ್ಞಾತಿ +ಬಂಧು +ನೃ
ಪಾಲರನು +ನೀ +ನೀರೊಳ್+ಅಡಗಿದೆ+ ಕಷ್ಟವಾಯ್ತೆಂದ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ

ಪದ್ಯ ೩೧: ಯಾರಿಂದ ಶಲ್ಯನನ್ನು ಗೆಲ್ಲಲು ಸಾಧ್ಯ?

ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೋಪ
ಇರಿವಡಾ ಮಾದ್ರೇಶನದು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ (ಶಲ್ಯ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನಿಂದ ಶಲ್ಯನನ್ನು ಗೆಲ್ಲುವುದು ಅಸಾಧ್ಯ. ಭೀಮನ ಶಕ್ತಿ ಶಲ್ಯನನ್ನು ನೋಯಿಸಲಾರದು. ನಕುಲನು ಶಲ್ಯನನ್ನು ನಿಭಾಯಿಸಲಾರ. ಸಹದೇವನ ಆಟೋಪವು ಶಲ್ಯನಿದಿರು ನಡೆಯುವುದಿಲ್ಲ. ಶಲ್ಯನೊಡನೆ ಯುದ್ಧಮಾಡಲು ಅವನನ್ನು ಸಂಹರಿಸಲು ನಿನಗೆ ಮಾತ್ರ ಸಾಧ್ಯ, ಏಕೆಂದರೆ ಧರ್ಮಿಷ್ಠನಾದ ನಿನ್ನನ್ನು ತಡೆದು ಯುದ್ಧಮಾಡಿದವರು ನಾಶಹೊಂದುತ್ತಾರೆ.

ಅರ್ಥ:
ಹರಿ: ಸೀಳು; ಎರವು: ದೂರವಾಗುವಿಕೆ; ನೋವು: ಪೆಟ್ಟು; ಹೊರಿಗೆ: ಭಾರ, ಹೊರೆ; ಒದಗು: ಲಭ್ಯ, ದೊರೆತುದು; ಸೈರಿಸು: ತಾಳು, ಸಹನೆ; ಆಟೋಪ: ಆವೇಶ; ಇರಿ: ಚುಚ್ಚು; ನೆರೆ: ಗುಂಪು; ಮುರಿ: ಸೀಳು; ತರುಬು: ತಡೆ, ನಿಲ್ಲಿಸು; ಕಷ್ಟ: ಕಠಿಣ; ನಗು: ಹರ್ಷ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಹರಿಯದ್+ಅರ್ಜುನನಿಂದ +ಭೀಮನನ್
ಎರವಣಿಗೆ +ನೋಯಿಸದು +ನಕುಲನ
ಹೊರಿಗೆ+ಒದಗದು +ಸೈರಿಸದು +ಸಹದೇವನ್+ಆಟೋಪ
ಇರಿವಡಾ +ಮಾದ್ರೇಶನದು +ನೆರೆ
ಮುರಿವಡೆಯು +ನಿನಗಹುದು +ನಿನ್ನನು
ತರುಬಿದವರೇ +ಕಷ್ಟರೆಂದನು +ನಗುತ +ಮುರವೈರಿ

ಅಚ್ಚರಿ:
(೧) ನ ಕಾರದ ಸಾಲು ಪದ – ನೆರೆಮುರಿವಡೆಯು ನಿನಗಹುದು ನಿನ್ನನು
(೨) ಹರಿ, ಇರಿ, ಮುರಿ – ಪ್ರಾಸ ಪದಗಳು

ಪದ್ಯ ೨೩: ಭೂರಿಶ್ರವನ ಸಂಬಂಧಿಕರು ಯಾರಿಗೆ ಬೈದರು?

ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೋಳ್ಲದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ (ದ್ರೋಣ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇದು ಕಷ್ಟದ ಕಾರ್ಯ. ಬೇಡ, ಬೇಡ, ಬಿಡು ಎಂದು ಕೃಷ್ಣಾರ್ಜುನರು ಹೇಳಿದರೂ ಲೆಕ್ಕಿಸದೆ ಭೂರಿಶ್ರವನ ಕೊರಳನ್ನು ಕತ್ತರಿಸಿದನು. ಭೂರಿಶ್ರವನ ಪರಿವಾರದವರು ಸಾತ್ಯಕಿಯು ಎಲೋ ಪಾಪಿ, ಹೋಗು ತೆರಳು, ನೀನು ಪುಣ್ಯವನ್ನು ಕಳೆದುಕೊಂಡು ಹುಟ್ಟಿದವನು. ಭೂರಿಶ್ರವನು ನಿನಗೇನು ಮಾಡಿದನು ಎಂದು ಜರೆದರು.

ಅರ್ಥ:
ಕಷ್ಟ: ಕಠಿಣ; ತೀ: ಹೊರತರು; ಬೇಗ: ಶೀಘ್ರ; ಅರಿ: ಸೀಳು; ಗೋಣು: ಕುತ್ತಿಗೆ; ನೃಪ: ರಾಜ; ಹೋಗು: ತೆರಳು; ಪಾಪಿ: ದುಷ್ಟ; ಸುಕೃತ: ಒಳ್ಳೆಯ ಕೆಲಸ; ನೀಗು: ನಿವಾರಿಸಿಕೊಳ್ಳು; ಹುಟ್ಟು: ಜನಿಸು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ಏಗು: ಸಾಗಿಸು, ನಿಭಾಯಿಸು; ಬೈದು: ಜರಿ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ;

ಪದವಿಂಗಡಣೆ:
ಆಗದ್+ಆಗದು +ಕಷ್ಟವಿದು+ ತೆಗೆ
ಬೇಗವೆನಲ್+ಅರ್ಜುನನ +ಕೃಷ್ಣನನ್
ಆಗಳವ +ಕೈಕೋಳ್ಳದ್+ಅರಿದನು +ಗೋಣನಾ +ನೃಪನ
ಹೋಗು +ಹೋಗ್+ಎಲೆ+ ಪಾಪಿ +ಸುಕೃತವ
ನೀಗಿ +ಹುಟ್ಟಿದೆ +ರಾಜಋಷಿಯವನ್
ಏಗಿದನು +ನಿನಗೆನುತ +ಬೈದುದು +ನಿಖಿಳ+ಪರಿವಾರ

ಅಚ್ಚರಿ:
(೧) ಭೂರಿಶ್ರವನನ್ನು ಸಂಬಂಧಿಕರು ಕರೆದ ಪರಿ – ರಾಜಋಷಿ
(೨) ಆಗದಾಗದು, ಹೋಗು ಹೋಗು – ಜೋಡಿ ಪದಗಳ ಬಳಕೆ

ಪದ್ಯ ೫೧: ಯಾರನ್ನು ದುಷ್ಟರು ಮುಟ್ಟಲ್ಲಿಕ್ಕಾಗುವುದಿಲ್ಲ?

ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟಕೌರವ ನಮ್ಮ ಕಳುಹಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ಕೌರವನು ಮೃಷ್ಟಾನ್ನ ಭೋಜನದಿಂದ ನಮ್ಮನ್ನು ತೃಪ್ತಿಪಡಿಸಿದಾಗ ಏನು ಬೇಕೋ ಕೇಳು ಎಂದು ನಾವು ಹೇಳಿದೆವು. ದ್ರೌಪದಿಯ ಊಟವಾದ ಮೇಲೆ ನಿಮ್ಮಲ್ಲಿಗೆ ಹೋಗಿ ಭೋಜನವನ್ನು ಬೇಡಿರಿ ಎಂದು ಧೂರ್ತನಾದ ಅವನು ನಮ್ಮನ್ನು ಕಳಿಸಿದನು. ನಿಮಗೆ ಕಷ್ಟವನ್ನು ಕೊಡುವುದು ಅವನ ಉದ್ದೇಶ. ಆದರೆ ಆ ಕಷ್ಟದ ಕೈಗಳು ಕಟ್ಟಿ ಹೋದವೇ ಹೊರತು ಪಾಂಡವರು ಕೆಡಲಿಲ್ಲ. ಹರಿಭಕ್ತರನ್ನು ದುರ್ಜನರು ಮುಟ್ಟಲು ಸಾಧ್ಯವೇ? ಎಂದು ದೂರ್ವಾಸ ಮುನಿಗಳು ಹೇಳಿದರು.

ಅರ್ಥ:
ಮೃಷ್ಟ: ಸವಿಯಾದ; ಭೋಜನ: ಊಟ; ಸಂತುಷ್ಟ: ಸಂತಸ; ಒಲಿ: ಸಮ್ಮತಿಸು, ಬಯಸು; ಬೇಡ: ತ್ಯಜಿಸು; ದುಷ್ಟ: ದುರುಳ; ಕಳುಹು: ತೆರಳು; ಧೂರ್ತ: ಕೆಟ್ಟವ; ವಿದ್ಯೆ: ಬುದ್ಧಿ; ಕಷ್ಟ: ಕಠಿಣ; ಕೈಗಟ್ಟು: ನೀಡು; ಕೆಟ್ಟರು: ಹಾಳಾಗು; ಹರಿ: ಕೃಷ್ಣ; ಪದ: ಚರಣ; ನಿಷ್ಠ: ಶ್ರದ್ಧೆಯುಳ್ಳವನು; ನಿಲುಕು: ಎಟುಕಿಸಿಕೊಳ್ಳು; ದುರ್ಜನ: ದುಷ್ಟ; ಮುನಿ: ಋಷಿ;

ಪದವಿಂಗಡಣೆ:
ಮೃಷ್ಟ+ಭೋಜನದಿಂದ +ನಾವ್ +ಸಂ
ತುಷ್ಟರಾಗ್+ಒಲಿದುದನು+ ಬೇಡ್+ಎನೆ
ದುಷ್ಟಕೌರವ +ನಮ್ಮ +ಕಳುಹಿದ+ ಧೂರ್ತ+ವಿದ್ಯೆಯಲಿ
ಕಷ್ಟವೇ +ಕೈಗಟ್ಟಿತಲ್ಲದೆ
ಕೆಟ್ಟರೇ +ಪಾಂಡವರು +ಹರಿಪದ
ನಿಷ್ಠರನು +ನಿಲುಕುವನೆ +ದುರ್ಜನನ್+ಎಂದನಾ+ ಮುನಿಪ

ಅಚ್ಚರಿ:
(೧) ಹರಿಭಕ್ತರ ಹಿರಿಮೆ – ಹರಿಪದನಿಷ್ಠರನು ನಿಲುಕುವನೆ ದುರ್ಜನ
(೨) ಮೃಷ್ಟ, ಸಂತುಷ್ಟ, ದುಷ್ಟ, ಕಷ್ಟ, ನಿಷ್ಠ – ಪ್ರಾಸ ಪದಗಳು

ಪದ್ಯ ೫೩: ನಹುಷನು ಯಾವ ಪ್ರಶ್ನೆಗಳನ್ನು ಕೇಳಿದನು?

ಧೀರನಾವನು ದಿಟ್ಟನಾರು ವಿ
ಕಾರಿಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಪ್ರಶ್ನಮಾಲಿಕೆಯನ್ನು ಮುಂದುವರೆಸುತ್ತಾ, ಧೀರನಾರು, ದಿಟ್ಟನಾರು, ಯಾರು ವಿಕಾರಿ, ವಿನೀತನ ಗುಣವಾವುದು, ಆಚಾರ ಹೀನನಾರು, ಸುವ್ರತಿಯಾರು, ಯಾರು ದುಷ್ಟ, ಯಾರು ಕ್ರೂರಿ, ಯಾರು ಕಠಿಣರಾದವರು, ಯಾರು ಮುಕ್ತ ಇಹಪರಗಳೆರಡಕ್ಕೂ ಹೊರಗಿನವನಾರು ಎಂದು ನಹುಷನು ಕೇಳಿದನು.

ಅರ್ಥ:
ಧೀರ: ಶೂರ, ಪರಾಕ್ರಮಿ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ವಿಕಾರ: ಮನಸ್ಸಿನ ವಿಕೃತಿ;ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ: ಕೆಟ್ಟ, ದುಷ್ಟ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಶಠ: ದುಷ್ಟ, ಧೂರ್ತ; ಕ್ರೂರ: ದುಷ್ಟ; ಕಷ್ಟ: ಕಠಿಣವಾದದ್ದು; ವಿಚಾರ: ಪರ್ಯಾಲೋಚನೆ, ವಿಮರ್ಶೆ, ವಿವೇಕ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿದೂರ: ಪಡೆಯಲಸಾಧ್ಯವಾದ; ಇಹಪರ: ಈ ಲೋಕ ಮತ್ತು ಪರಲೋಕ; ಭೂಮೀಪಾಲ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಧೀರನಾವನು +ದಿಟ್ಟನಾರು +ವಿ
ಕಾರಿಯಾರು +ವಿನೀತನಾರ್
ಆಚಾರ +ಹೀನನದಾರು +ಸುವ್ರತಿ+ ಯಾರು +ಶಠನಾರು
ಕ್ರೂರನಾರ್+ಅತಿಕಷ್ಟನಾರು +ವಿ
ಚಾರಿಯಾರು +ವಿಮುಕ್ತನಾರು +ವಿ
ದೂರನಾರ್+ಇಹಪರಕೆ+ ಭೂಮೀಪಾಲ+ ಹೇಳೆಂದ

ಅಚ್ಚರಿ:
(೧) ಮನುಷ್ಯರ ಗುಣಗಳು – ವಿಕಾರಿ, ದಿಟ್ಟ, ಧೀರ, ಆಚಾರಹೀನ, ಸುವ್ರತಿ, ಶಠ, ಕ್ರೂರ, ಕಷ್ಟ, ವಿಚಾರಿ, ವಿಮುಕ್ತ, ವಿದೂರ

ಪದ್ಯ ೨೬: ದುರ್ಯೋಧನನು ತನ್ನ ಸ್ಥಿತಿಯನ್ನು ಹೇಗೆ ವಿವರಿಸಿದನು?

ಹೇಳಲಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ (ಸಭಾ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಗೆ ಮರುಕು ಹುಟ್ಟುವಂತೆ ತನ್ನ ಸ್ಥಿತಿಯನ್ನು ವಿವರಿಸುತ್ತಾ, ಅಪ್ಪಾ ನಿಮಗೆ ನಾನು ಏನೆಂದು ಹೇಳಲಿ, ನೀವು ಧರ್ಮವೆಂಬ ಮೀನು ಹಿಡಿಯುವ ಬುಟ್ಟಿಯಲ್ಲಿ ಸಿಲುಕಿಕೊಂಡಿದ್ದೀರಿ, ನನ್ನನ್ನು ದುಷ್ಟ, ನೀಚ, ಹೊಟ್ಟೆಕಿಚ್ಚಿನವನೆಂದು ಹೇಳುತ್ತೀರಿ, ನನ್ನ ಬಾಳ್ವೆಯು ಅಣಕವಾಯಿತು, ನಾನು ಮನುಷ್ಯನಲ್ಲ, ಸಾಲುಗೊಂಬೆ ನನ್ನನ್ನು ಏಕೆ ಕೇಳುತ್ತೀರಿ ಎಂದು ಕಣ್ಣೀರಿಡುತ್ತಾ ನಿಟ್ಟುಸಿರನ್ನು ಬಿಟ್ಟನು.

ಅರ್ಥ:
ಹೇಳು: ತಿಳಿಸು; ಧರ್ಮ: ಧಾರಣೆ ಮಾಡಿದುದು; ಕೂಳಿ: ಗುಣಿ, ತಗ್ಗು; ಸಿಲುಕು: ಸಿಕ್ಕುಹಾಕಿಕೋ, ಸೆರೆಯಾದ ವಸ್ತು; ಖೂಳ: ದುಷ್ಟ; ಕಷ್ಟ: ನೀಚ; ಅಸೂಯ: ಹೊಟ್ಟೆಕಿಚ್ಚು; ಸಾಲ:ಎರವು; ಭಂಜಿಕೆ: ಮೂರ್ತಿ, ವಿಗ್ರಹ; ಬಾಳಿಕೆ: ಬಾಳು; ಬೇಳಂಬ: ವಿಡಂಬನೆ; ಕೇಳು: ಆಲಿಸು; ಸುಯ್ದನು: ನಿಟ್ಟುಸಿರು; ಕಂಬನಿ: ಕಣ್ಣೀರು;

ಪದವಿಂಗಡಣೆ:
ಹೇಳಲಮ್ಮೆನು +ನೀವು+ ಧರ್ಮದ
ಕೂಳಿಯಲಿ+ ಸಿಲುಕಿದವರ್+ಎನ್ನನು
ಖೂಳನ್+ಎಂಬಿರಿ+ ಕಷ್ಟನ್+ಎಂಬಿರ್+ಅಸೂಯನ್+ಎಂಬಿರಲೆ
ಸಾಲ+ ಭಂಜಿಕೆಯಾಯ್ತು +ತನ್ನಯ
ಬಾಳಿಕೆಯ +ಬೇಳಂಬವ್+ಏತಕೆ
ಕೇಳುವಿರಿ+ ನೀವೆಂದು +ಸುಯ್ದನು +ತುಂಬಿ +ಕಂಬನಿಯ

ಅಚ್ಚರಿ:
(೧) ಖೂಳ, ಕಷ್ಟ, ಅಸೂಯ – ದುರ್ಯೋಧನ ತನ್ನನ್ನು ಹೆಸರಿಸಿದ ಪರಿ