ಪದ್ಯ ೧೩: ಭೀಮನು ಯಾರ ಮಕುಟವನ್ನು ಒದೆದನು?

ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯಲಿ ಮಕುಟವನು
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ (ಗದಾ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ನಮ್ಮನ್ನು ಹಲವು ರೀತಿಯಿಂದ ದುಃಖಪಡಿಸಿದ ಫಲವನ್ನು ತಲೆಯಲ್ಲಿಯೇ ಧರಿಸು ಎನ್ನುತ್ತಾ ಎಡಗಾಲಿನಿಂದ ಮಕುಟವನ್ನು ಕೆಳಕ್ಕೊದೆದು, ನಮ್ಮನ್ನು ನೋಡಿ ಗೌರ್ಗೌ ಎಂದು ಕೂಗಿದೆಯಲ್ಲಾ ಎನ್ನುತ್ತಾ ಮಕುಟವನ್ನು ಒದೆಯಲು ಅದರಲ್ಲಿ ಜೋಡಿಸಿದ್ದ ಮಣಿಗಳು ಸುತ್ತಲೂ ಹಾರಿದವು.

ಅರ್ಥ:
ಹಳುವ: ಕಾಡು; ನಾನಾ: ಹಲವಾರು; ಪ್ರಕಾರ: ರೀತಿ; ಅಳಲು: ದುಃಖಿಸು; ಫಲ: ಪರಿಣಾಮ; ಭೋಗ: ಸುಖವನ್ನು ಅನುಭವಿಸುವುದು; ತಲೆ: ಶಿರ; ಧರಿಸು: ಹಿಡಿ, ತೆಗೆದುಕೊಳ್ಳು; ವಾಮ: ಎಡಭಾಗ; ಅಂಘ್ರಿ: ಪಾದ; ಮಕುಟ: ಕಿರೀಟ; ಇಳುಹು: ಕೆಳಗೆ ಜಾರು; ಗೌರ್ಗೌ: ಶಬ್ದವನ್ನು ವರ್ಣಿಸುವ ಪರಿ; ಬಿಡು: ತೊರೆ; ಉಲಿ: ಕೂಗು; ಒದೆ:ತುಳಿ, ಮೆಟ್ಟು; ಕಳಚು: ಬೇರ್ಪಡಿಸು, ಬೇರೆಮಾಡು; ಕೀಲು: ಅಗುಳಿ, ಬೆಣೆ; ಮಣಿ: ಬೆಲೆಬಾಳುವ ಹರಳು; ಕೆದರು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಹಳುವದಲಿ +ನಾನಾ +ಪ್ರಕಾರದಲ್
ಅಳಲಿಸಿದ +ಫಲಭೋಗವನು +ನೀ
ತಲೆಯಲೇ +ಧರಿಸೆನುತ +ವಾಮಾಂಘ್ರಿಯಲಿ +ಮಕುಟವನು
ಇಳುಹಿದನು +ಗೌರ್ಗೌವೆನುತ +ಬಿಡದ್
ಉಲಿದೆಲಾ +ಎನುತೊದೆದು+ ಮಕುಟವ
ಕಳಚಿದನು +ಕೀಲಣದ +ಮಣಿಗಳು +ಕೆದರೆ+ ದೆಸೆದೆಸೆಗೆ

ಅಚ್ಚರಿ:
(೧) ಶಬ್ದವನ್ನು ವರ್ಣಿಸುವ ಪರಿ – ಗೌರ್ಗೌ

ಪದ್ಯ ೨೦: ದುರ್ಯೋಧನನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ (ಗದಾ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೌರವನು ಲೆಕ್ಕಹಾಕಿ ವೇಗದಿಂದ ಭೀಮನನ್ನು ಹೊಡೆಯಲು, ಅವನ ದುರದೃಷ್ಟದಿಂದ ಹೊಡೆತ ಭೀಮನಿಂದ ದೂರವಾಗಿತ್ತು. ಆ ಕ್ರೋಧದಿಂದ ಭೀಮನನ್ನು ಸೀಳಲು ಗದೆಯಿಂದ ಹೊಡೆಯಲು, ಭೀಮನು ಚಲಿಸಿ ವೇಗವಾಗಿ ತನ್ನ ಪಾದದ ಚಲನೆಯಿಂದ ಆ ಹೊಡೆತದಿಂದ ತಪ್ಪಿಸಿಕೊಂಡನು.

ಅರ್ಥ:
ಲಾಗು: ನೆಗೆಯುವಿಕೆ, ಲಂಘನ; ಲಳಿ: ರಭಸ; ತಾಗು: ಮುಟ್ಟು; ಅವನೀಶ: ರಾಜ್; ಭಾಗದೇಯ: ಅದೃಷ್ಟ; ಹೊಯ್ಲು: ಹೊಡೆತ; ಹೊರಗೆ: ಆಚೆ, ದೂರ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ಉಬ್ಬು: ಹೆಚ್ಚು, ಅಧಿಕ; ನೃಪತಿ: ರಾಜ; ವಿಭಾಗಿಸು: ಒಡೆ, ಸೀಳು; ಅನಿಲಜ: ಭೀಮ; ತನು: ದೇಹ; ಬೇಗ: ಶೀಘ್ರ; ಕಳಚು: ಸಡಲಿಸು; ಪಯ: ಪಾದ; ಬವರಿ:ತಿರುಗುವುದು; ಬವರ: ಕಾಳಗ, ಯುದ್ಧ;

ಪದವಿಂಗಡಣೆ:
ಲಾಗಿಸುತ +ಲಳಿಯೆದ್ದು +ಭೀಮನ
ತಾಗಿಸಿದನ್+ಅವನೀಶನ್+ಆತನ
ಭಾಗಧೇಯವನ್+ಏನನೆಂಬೆನು +ಹೊಯ್ಲು+ ಹೊರಗಾಯ್ತು
ಬೇಗುದಿಯಲ್+ಉಬ್ಬೆದ್ದು+ ನೃಪತಿ +ವಿ
ಭಾಗಿಸಿದನ್+ಅನಿಲಜನ +ತನುವನು
ಬೇಗದಲಿ +ಕಳಚಿದನು +ಪವನಜ +ಪಯದ +ಬವರಿಯಲಿ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಲಾಗಿಸುತ ಲಳಿಯೆದ್ದು; ಹೊಯ್ಲು ಹೊರಗಾಯ್ತು; ಪವನಜ ಪಯದ
(೨) ಬ ಕಾರದ ಪದಗಳ ಬಳಕೆ – ಭಾಗಧೇಯ, ಬೇಗುದಿ, ಬೇಗ, ಬವರಿ

ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೧೯: ಭೀಮನ ಧೀರನುಡಿ ಹೇಗಿತ್ತು?

ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರಘಳಿಗೆಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ (ಗದಾ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೋ ದುಷ್ಬುದ್ಧೀ, ನಿನ್ನ ಕೌರವಕುಲವನ್ನು ರಕ್ಷಿಸಲು ಶಿಕ್ಷಿಸಲು ಬೇರೊಂದು ದೈವವಿದೆಯೇ? ನಾನೇ ಆ ದೈವ. ನೂರು ಜನರನ್ನು ಸಂಹರಿಸಿದೆ. ಇನ್ನರ್ಧಗಳಿಗೆಯಲ್ಲಿ ನಿನ್ನ ಹೆಡತಲೆಯನ್ನು ಕಡಿದು ಒದೆಯುತ್ತೇನೆ ಹೋಗು ಹೀಗೆಮ್ದು ಭೀಮನು ಗದೆಯಿಂದ ಕೌರವನ್ನು ಹೊಯ್ದನು.

ಅರ್ಥ:
ದುರ್ಮತಿ: ಕೆಟ್ಟ ಬುದ್ಧಿ; ಕುಲ: ವಂಶ; ಶಿಕ್ಷೆ: ದಂಡನೆ, ದಂಡ; ರಕ್ಷೆ: ಕಾಪಾಡು; ದೈವ: ಭಗವಂತ; ಹೊರಬಿ: ಹೊರಗಿನ; ಕಳಚು: ಬೇರ್ಪಡಿಸು; ಕೊಂದು: ಕೊಲ್ಲು, ಸಾಯಿಸು; ನೂರು: ಶತ; ತಲೆ: ಶಿರ; ಘಳಿಗೆ: ಸಮಯ, ಕಾಲ; ಹೆಡತಲೆ: ಹಿಂದಲೆ; ಒದೆ: ತಳ್ಳು, ನೂಕು; ಹೋಗು: ತೆರಳು; ಹೊಯ್ದು: ಹೊಡೆ;

ಪದವಿಂಗಡಣೆ:
ಎಲವೊ+ ದುರ್ಮತಿ+ ನಿನ್ನ+ ಕೌರವ
ಕುಲದ +ಶಿಕ್ಷಾ+ರಕ್ಷೆಗ್+ಇನ್ನಾ
ರೊಳರು +ಹೊರಬಿಗ +ದೈವವುಂಟೇ +ತಾನೆ +ದೈವ +ಕಣಾ
ಕಳಚಿದೆನಲಾ +ಕೊಂದು +ನೂರ್ವರ
ತಲೆಯನ್+ಇನ್ನ್+ಅರಘಳಿಗೆಯಲಿ +ಹೆಡ
ತಲೆಯನ್+ಒದೆವೆನು +ಹೋಗೆನುತ +ಹೊಯ್ದನು+ ಸುಯೋಧನನ

ಅಚ್ಚರಿ:
(೧) ಕೌರವನನ್ನು ಕರೆಯುವ ಪರಿ – ದುರ್ಮತಿ;
(೨) ಭೀಮನ ಧೀರ ನುಡಿ – ಇನ್ನರಘಳಿಗೆಯಲಿ ಹೆಡತಲೆಯನೊದೆವೆನು

ಪದ್ಯ ೫೧: ಕೌರವನೇಕೆ ಕಳವಳಿಸಿದನು?

ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ (ಗದಾ ಪರ್ವ, ೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಉಳಿದ ನಾನೂರು ಕುದುರೆಗಳು ಧರ್ಮಜನ ಬಾಣದ ಹೊಡೆತಕ್ಕೆ ಅಳಿದವು. ಹತ್ತು ಸಾವಿರ ಕಾಲಾಳುಗಳು ಮದಿದರು, ನೂರು ರಥಗಳು ಕಳಚಿ ಬಿದ್ದವು. ಶತ್ರುರಾಜನ ಪರಾಕ್ರಮದ ಹೆಚ್ಚಳಕ್ಕೆ ಕೌರವನು ಕೋಪಗೊಂಡು ಕಳವಳಿಸಿದನು.

ಅರ್ಥ:
ಉಳಿ: ಮಿಕ್ಕ; ಕಡಿ: ಸೀಳು; ಕುದುರೆ: ಅಶ್ವ; ಅಳಿ: ನಾಶ; ಅರಸ: ರಾಜ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಮುಮ್ಮುಳಿತ: ರೂಪಗೆಟ್ಟು ನಾಶವಾಗು; ಸಾವಿರ: ಸಹಸ್ರ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ಕಳಚು: ಬೇರ್ಪಡಿಸು; ಕೆಡೆ: ಸೀಳು; ರಥ: ಬಂಡಿ; ವೆಗ್ಗಳ: ಶ್ರೇಷ್ಠ; ರಾಯ: ರಾಜ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು; ಕಳವಳ: ಗೊಂದಲ; ಖಾತಿ: ಕೋಪ;

ಪದವಿಂಗಡಣೆ:
ಉಳಿಗಡಿಯ +ನಾನೂರು +ಕುದುರೆಗಳ್
ಅಳಿದವ್+ಅರಸನ +ಶರಹತಿಗೆ +ಮು
ಮ್ಮುಳಿತವಾದುದು +ಹತ್ತು +ಸಾವಿರ+ ವಿಗಡ +ಪಾಯದಳ
ಕಳಚಿ +ಕೆಡೆದವು +ನೂರು +ರಥ +ವೆ
ಗ್ಗಳೆಯತನವ್+ಅರಿ+ರಾಯರಲಿ +ಹೆ
ಕ್ಕಳಿಸೆ +ಕಳವಳಿಸಿದನು +ಕೌರವರಾಯ +ಖಾತಿಯಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಳವಳಿಸಿದನು ಕೌರವರಾಯ ಖಾತಿಯಲಿ

ಪದ್ಯ ೨೭: ಸೈನಿಕರು ಭೀಮನನ್ನು ಏಕೆ ತಡೆದರು?

ಕರದ ಬಿಲು ಕಳಚಿದರೆ ಖಾತಿಯೊ
ಳಿರದೆ ಹೊಸ ಹೊಂದೇರ ತರಿಸಲು
ತಿರುಗಿದನು ನಿಜಮೋಹರಕೆ ದುಗುಡದಲಿ ಕಲಿಕರ್ಣ
ತೆರಹು ಕೊಡದಿರಿ ಸೋತ ಕರ್ಣನ
ಹರಿಬವೆಮ್ಮದು ನೂಕು ನೂಕೆಂ
ದುರವಣಿಸಿದರು ಮತ್ತೆ ಕೌರವನನುಜರವಗಡಿಸಿ (ದ್ರೋಣ ಪರ್ವ, ೧೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೈಯ ಬಿಲ್ಲು ತುಂಡಾಗಿ ಬೀಳಲು, ಕರ್ನನು ಕೋಪದಿಂದ ಹೊಸರಥವನ್ನು ತರಿಸಲು ತನ್ನ ಸೈನ್ಯಕ್ಕೆ ಹೋದನು. ಕೌರವನ ತಮ್ಮಂದಿರು ಭೀಮನಿಗೆ ಜಾಗ ಕೊಡಬೇಡಿ, ಸೋತ ಕರ್ಣನ ಸೇಡು ನಮ್ಮದು, ನುಗ್ಗು ನುಗ್ಗು ಎನ್ನುತ್ತಾ ಭೀಮನನ್ನು ತಡೆದರು.

ಅರ್ಥ:
ಕರ: ಹಸ್ತ; ಬಿಲು: ಬಿಲ್ಲು; ಕಳಚು: ಸಡಲಿಸು; ಖಾತಿ: ಕೋಪ; ಹೊಸ: ನವೀನ; ಹೊಂದೇರು: ಚಿನ್ನದ ತೇರು; ತರಿಸು: ಬರೆಮಾಡು; ತಿರುಗು: ಸುತ್ತಾಡು; ಮೋಹರ: ಯುದ್ಧ; ದುಗುಡ: ದುಃಖ; ಕಲಿ: ಶೂರ; ತೆರಹು: ವಿಸ್ತಾರ, ಹರಹು; ಕೊಡು: ನೀಡು; ಸೋತು: ಪರಾಭವ; ಹರಿಬ: ಕೆಲಸ, ಕಾರ್ಯ; ನೂಕು: ತಳ್ಳು; ಉರವಣಿಸು: ಉತ್ಸಾಹದಿಂದಿರು; ಅನುಜ: ತಮ್ಮ; ಅವಗಡಿಸು: ಕಡೆಗಣಿಸು;

ಪದವಿಂಗಡಣೆ:
ಕರದ +ಬಿಲು +ಕಳಚಿದರೆ +ಖಾತಿಯೊಳ್
ಇರದೆ +ಹೊಸ +ಹೊಂದೇರ +ತರಿಸಲು
ತಿರುಗಿದನು +ನಿಜ+ಮೋಹರಕೆ+ ದುಗುಡದಲಿ +ಕಲಿ+ಕರ್ಣ
ತೆರಹು +ಕೊಡದಿರಿ+ ಸೋತ +ಕರ್ಣನ
ಹರಿಬವ್+ಎಮ್ಮದು +ನೂಕು +ನೂಕೆಂದ್
ಉರವಣಿಸಿದರು +ಮತ್ತೆ +ಕೌರವನ್+ಅನುಜರ್+ಅವಗಡಿಸಿ

ಪದ್ಯ ೩೩: ಕುದುರೆಗಳ ಲಗಾಮನ್ನು ಯಾರು ಸರಿಪಡಿಸಿದರು?

ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ (ದ್ರೋಣ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ತುಂಬಿಸಿದ ಕೊಳದ ದಡದಲ್ಲಿ ಬಾಣಗಳಿಂದ ಒಂದು ಚಪ್ಪರವನ್ನು ಕಟ್ಟಿದನು. ಅರ್ಜುನನ ಸತ್ವಾತಿಶಯವನ್ನು ಹೊಗಳುತ್ತಾ ಶ್ರೀಕೃಷ್ಣನು ಕುದುರೆಗಳ ನೊಗವನ್ನು ಕಳಚಿ ಕಡಿವಾಣವನ್ನಿಳಿಸಿ, ಬೇರೆಯ ಲಗಾಮುಗಲನ್ನು ಕಟ್ಟಿ ಹಿಡಿಯಲು, ಕುದುರೆಗಳು ಎಡಬಲಕ್ಕೆ ಸ್ವತಮ್ತ್ರವಾಗಿ ತಿರುಗಾಡಿದವು.

ಅರ್ಥ:
ಕೊಳ: ಸರೋವರ; ತಡಿ: ದಡ, ತೀರ; ಹೂಡು: ಸಿದ್ಧಗೊಳ್ಳು; ಶರ: ಬಾಣ; ಚಪ್ಪರ: ಚಾವಣಿ, ಮೇಲ್ಕಟ್ಟು; ಬಲುಹು: ಬಲ, ಶಕ್ತಿ; ಕಂಡು: ನೋಡು; ಅಸುರಾರಿ: ಕೃಷ್ಣ; ಮೆಚ್ಚು: ಹೊಗಳು; ಅಡಿಗಡಿಗೆ: ಮತ್ತೆ ಮತ್ತೆ; ಹೊಗಳು: ಪ್ರಶಂಶಿಸು; ಕಳಚು: ಬೇರ್ಪಡಿಸು; ನೊಗ: ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ತೆಗೆ: ಹೊರತರು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಇಳುಹಿ: ಕೆಳಗಿಳಿಸು; ಪಿಡಿ: ಗ್ರಹಿಸು; ಪಾಡಿ: ನಾಡು, ಪ್ರಾಂತ್ಯ ; ಐದು: ಬಂದು ಸೇರು; ಮರಳು: ಹಿಂದಿರುಗು; ಎಡಬಲ: ಅಕ್ಕಪಕ್ಕ;

ಪದವಿಂಗಡಣೆ:
ಕೊಳನ +ತಡಿಯಲಿ +ಹೂಡಿದನು +ಶರ
ವಳಯದಲಿ +ಚಪ್ಪರವನ್+ಆತನ
ಬಲುಹ +ಕಂಡ್+ಅಸುರಾರಿ +ಮೆಚ್ಚಿದನ್+ಅಡಿಗಡಿಗೆ +ಹೊಗಳಿ
ಕಳಚಿ +ನೊಗನನು +ತೆಗೆದು +ಕಬ್ಬಿಯ
ನಿಳುಹಿ+ ಪಡಿ+ವಾಘೆಗಳ +ಸರಿದನು
ಕೊಳಿಸಿ+ ಪಿಡಿಯಲು +ಪಾಡಿಗೈದವು +ಮರಳಿದ್+ಎಡಬಲಕೆ

ಅಚ್ಚರಿ:
(೧) ಅಡಿಗಡಿ, ಎಡಬಲ – ಪದಗಳ ಬಳಕೆ

ಪದ್ಯ ೩೬: ಭೀಮನು ಏನೆಂದು ಗರ್ಜಿಸಿದನು?

ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ (ಭೀಷ್ಮ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತುಗಳನ್ನು ಕೇಳುತ್ತಿದ್ದ ಭೀಮನು, ಎಲವೋ ಕೌರವ, ನೀನು ಭೀಷ್ಮರ ಮಾತುಗಳಿಗೆ ಒಪ್ಪಿದರೂ, ಸಂಧಾನ ಮಾಡಿಕೊಂಡರೂ, ಬದುಕಬೇಕೆಂದು ನಿರ್ಧರಿಸಿದರೂ, ನಿನ್ನ ಸಂಧಿಯನ್ನು ಕಿತ್ತುಹಾಕಿ, ನಿನ್ನ ಒಡಹುಟ್ಟಿದ ದುಶ್ಯಾಸನನ ತಿಳಿರಕ್ತವನ್ನು ಸುರಿದುಕೊಳ್ಳದೆ ಬಿಡುವುದಿಲ್ಲ ಎಂದು ಗರ್ಜಿಸಿದನು.

ಅರ್ಥ:
ಮಾತು: ನುಡಿ; ಒಲಿ: ಒಪ್ಪು, ಸಮ್ಮತಿಸು; ಸಂಧಾನ: ಸೇರಿಸುವುದು, ಹೊಂದಿಸುವುದು; ನಿಲು: ನಿಲ್ಲು, ಇರು, ಉಳಿ; ದೇಹ: ತನು, ಕಾಯ; ಅಭಿಲಾಷೆ: ಇಚ್ಛೆ; ಬಲಿ: ಗಟ್ಟಿ, ದೃಢ; ಮನ: ಮನಸ್ಸು; ಕಳಚು: ಬೇರ್ಪಡಿಸು, ಕೀಳು; ಒಡಹುಟ್ಟು: ಜೊತೆಗೆ ಹುಟ್ಟಿದ, ತಮ್ಮ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಚೆಲ್ಲು; ಬಿಡು: ತೊರೆ;

ಪದವಿಂಗಡಣೆ:
ಎಲವೊ +ಭೀಷ್ಮರ +ಮಾತುಗಳ +ನೀನ್
ಒಲಿವರೆಯು +ಸಂಧಾನದಲಿ +ನೀ
ನಿಲುವರೆಯು +ದೇಹಾಭಿಲಾಷೆಗೆ+ ಬಲಿವರೆಯು+ ಮನವ
ಒಲಿದ+ ಭೀಮನೆ+ ನಿನ್ನ+ ಸಂಧಿಯ
ಕಳಚಿ +ನಿನ್ನೊಡಹುಟ್ಟಿದ್+ಈತನ
ತಿಳಿರಕುತವನು +ಸುರಿವನಲ್ಲದೆ +ಬಿಡುವನಲ್ಲೆಂದ

ಅಚ್ಚರಿ:
(೧) ಭೀಮನ ಆಕ್ರೋಶ – ಭೀಮನೆ ನಿನ್ನ ಸಂಧಿಯ ಕಳಚಿ ನಿನ್ನೊಡಹುಟ್ಟಿದೀತನ ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ
(೨) ೧, ೨ ಸಾಲಿನ ಕೊನೆ ಪದ “ನೀ” ಎಂದಿರುವುದು

ಪದ್ಯ ೩೬: ಸೈನಿಕರು ಯಾವ ಕಾರ್ಯದಲ್ಲಿ ತೊಡಗಿದ್ದರು?

ಹಿಳಿದ ಲೋಹದ ಸೀಸಕಂಗಳ
ಬಲಿಸಿದರು ಹೋಳಾದ ಕವಚವ
ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು
ಕಳಚಿದಾಯುಧದಾಯತದ ಕೀ
ಲ್ಗೊಳಿಸಿದರು ಖಡ್ಗಕ್ಕೆ ಕುಂತವ
ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ (ಭೀಷ್ಮ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎರಡೂ ಪಾಳೆಯಗಳಲ್ಲಿ ಸೈನಿಕರು, ಬಿರಿದು ಹೋದ ಸೀಸಕಗಳನ್ನು ಬಲಪಡಿಸಿದರು. ಹರಿದ ಕವಚಗಳನ್ನು ಹೊಲಿಸಿದರು. ಬಾಹುರಕ್ಷೆ ಕವಚಗಳ ಬಿರುಕನ್ನು ಸರಿಮಾಡಿದರು. ಹಿಡಿಕೆಯಿಂದ ಕಿತ್ತ ಆಯುಧಗಳಿಗೆ ಕೀಲನ್ನು ಹಾಕಿ ಭ್ರದ್ರಪಡಿಸಿದರು. ಖಡ್ಗಕ್ಕೆ ಕುಂತದ ಹಿಡಿಕೆಯನ್ನು ತೊಡಿಸಿದರು.

ಅರ್ಥ:
ಹಿಳಿ: ಸುರಿಸು, ವರ್ಷಿಸು; ಲೋಹ: ಖನಿಜ ಧಾತು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಬಲಿಸು: ಭದ್ರಪಡಿಸು; ಹೋಳು: ಸೀಳು; ಕವಚ: ಹೊದಿಕೆ, ಉಕ್ಕಿನ ಅಂಗಿ; ಹೊಲಿಸು: ಸೇರಿಸು, ಹೆಣೆ; ಬಾಹು: ತೋಳು, ಭುಜ; ಸವಗ: ಕವಚ; ಬಿರುಕು: ಸೀಳು; ಬೆಸಸು: ಸೇರಿಸು; ಕಳಚು: ಸಡಲಿಸು; ಆಯುಧ: ಶಸ್ತ್ರ; ಆಯತ: ಉಚಿತವಾದ; ಕೀಲು:ಅಗುಳಿ; ಒಳಿಸು: ಸರಿಪಡಿಸು; ಖಡ್ಗ: ಕತ್ತಿ; ಕುಂತ: ಈಟಿ, ಭರ್ಜಿ; ಕಳೆ: ತೆಗೆ, ಹೊರತರು; ಕಾವು: ಶಾಖ; ತೊಡಿಸು: ಹೊದಿಸು; ಸೇನೆ: ಸೈನ್ಯ;

ಪದವಿಂಗಡಣೆ:
ಹಿಳಿದ +ಲೋಹದ +ಸೀಸಕಂಗಳ
ಬಲಿಸಿದರು +ಹೋಳಾದ +ಕವಚವ
ಹೊಲಿಸಿದರು +ಬಾಹುರಕೆ+ ಸವಗದ +ಬಿರುಕ+ ಬೆಸಸಿದರು
ಕಳಚಿದ್+ಆಯುಧದ್+ಆಯತದ+ ಕೀಲ್ಗ್
ಒಳಿಸಿದರು +ಖಡ್ಗಕ್ಕೆ +ಕುಂತವ
ಕಳೆದು +ಕಾವನು +ತೊಡಿಸುತಿರ್ದುದು +ಸೇನೆ+ಎರಡರಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಖಡ್ಗಕ್ಕೆ ಕುಂತವ ಕಳೆದು ಕಾವನು

ಪದ್ಯ ೧೯: ಸುರರು ಶಿವನಿಗೆ ಉಘೇ ಎನಲು ಕಾರಣವೇನು?

ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ (ಅರಣ್ಯ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಿವನು ದಂಡೆಯೊಡ್ಡಿ ಬಿಲ್ಲಿನ ಹೊಡೆತವನ್ನು ತಪ್ಪಿಸಿಕೊಂಡನು. ಇವನು ಹೆದರಿದನೆಂದು ಭಾವಿಸಿ ಶಿವನನ್ನು ಜರೆದು ಮೇಲೆ ಆಕ್ರಮಿಸಿ ಬಿಲ್ಲನ್ನು ತೂಗಿ ಮತ್ತೆ ಅಪ್ಪಳಿಸಿದನು. ಕಿರಾತರೂಪಿಯಾದ ಶಿವನು ನಸುನಗುತ್ತಾ ಗಾಂಡೀವ ಧನಸ್ಸನ್ನು ಸೆಳೆದುಕೊಂಡನು. ಹೀಗೆ ಅರ್ಜುನನು ನಿರಾಯುಧನಾದರೂ ಶಿವನ ಕರುಣೆಗೆ ಪಾತ್ರನಾಗಿ ಅಭಿವೃದ್ಧಿ ಹೊಂದಿದನು. ಇದನ್ನು ನೋಡಿದ ದೇವತೆಗಳು ಉಘೇ ಎಂದು ಶಿವನನ್ನು ಹೊಗಳಿದರು.

ಅರ್ಥ:
ಕಳಚು: ಬೇರ್ಪಡಿಸು, ಬೇರೆಮಾಡು; ದಂಡೆ: ಬಿಲ್ಲನ್ನು ಹಿಡಿಯುವ ಒಂದು ವರಸೆ; ಗಾಯ: ಪೆಟ್ಟು; ಅಳುಕು: ಹೆದರಿಕೆ; ಮಗುಳು: ಮತ್ತೆ; ಅಪ್ಪಳಿಸು: ತಟ್ಟು, ತಾಗು; ಮೇಲೆ: ಹೊಯ್ದು: ಹೊಡೆದು; ಜರೆ: ಬಯ್ಯು; ಝೋಂಪಿಸು: ಭಯಗೊಳ್ಳು; ಮೆಲುನಗೆ: ಮಂದಸ್ಮಿತ; ಚಾಪ: ಬಿಲ್ಲು; ಸೆಳೆ: ಜಗ್ಗು, ಎಳೆ; ಭಕ್ತ: ಆರಾಧಕ; ಬೆಳವು: ಏಳಿಗೆ; ಉಘೇ: ಜೈ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಕಳಚಿದನು +ದಂಡೆಯಲಿ +ಗಾಯದಲ್
ಅಳುಕಿದನಲಾ+ಎನುತ +ಮಗುಳ್
ಅಪ್ಪಳಿಸಿದನು +ಮೇಲ್ವಾಯ್ದು +ಹೊಯ್ದನು +ಜರೆದು +ಝೋಂಪಿಸುತ
ಮೆಲುನಗೆಯಲ್+ಅರ್ಜುನನ +ಚಾಪವ
ಸೆಳೆದುಕೊಂಡನು+ ತನ್ನ+ ಭಕ್ತನ
ಬೆಳವಿಗೆಯ +ಮಾಡಿದನ್+ಉಘೇ+ಎಂದುದು+ ಸುರಸ್ತೋಮ