ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ

ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೫೯: ಭೀಮನು ಕರ್ಣನ ಮೇಲೆ ಏನನ್ನು ಹಾರಿಸಿದನು?

ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆಗ ಭೀಮನು ಅಲ್ಲಿ ಸತ್ತು ಬಿದ್ದಿದ್ದ ಆನೆ, ಕುದುರೆಗಳನ್ನು, ರಥಗಳ ಗಾಲಿಗಳನ್ನು, ಹಿಡಿದೆತ್ತಿ ಕರ್ಣನ ಮೇಲೆಸೆದನು. ಕರ್ಣನು ಆ ಆನೆಯ ದೇಹವನ್ನು, ಕುದುರೆಯ ಅಂಗವನ್ನು, ರಥದ ಚಕ್ರವನ್ನು ಮಧ್ಯದಲ್ಲೇ ಕತ್ತರಿಸಿ ಬಿಸಾಡಿದನು.

ಅರ್ಥ:
ಮಡಿ: ಸಾವು; ಕರಿ: ಆನೆ; ಕಾಯ: ದೇಹ; ಒಡಲು: ದೇಹ; ತುರಗ: ದೇಹ; ಅಂಗ: ದೇಹದ ಭಾಗ; ಮುಗ್ಗು: ಬಾಗು, ಮಣಿ; ಕೆಡೆ: ಬೀಳು, ಕುಸಿ; ತೇರು: ಬಂಡಿ, ರಥ; ಗಾಲಿ: ಚಕ್ರ; ಕೊಂಡು: ಬರೆಮಾಡು; ಎಡೆ: ಸುಲಿ, ತೆಗೆ; ಕರಿ: ಆನೆ; ಹಯ: ಕುದುರೆ; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ಹೊದ್ದು: ಆವರಿಸು, ಮುಸುಕು; ಅಳವಿ: ಯುದ್ಧ;

ಪದವಿಂಗಡಣೆ:
ಮಡಿದ +ಕರಿಗಳ +ಕಾಯವನು +ನಿ
ಟ್ಟೊಡಲ +ತುರಗ್+ಅಂಗಳನು +ಮುಗ್ಗಿದ
ಕೆಡೆದ +ತೇರಿನ +ಗಾಲಿಗಳ+ ಕೊಂಡಿಟ್ಟನಾ +ಭೀಮ
ಎಡೆಯಲ್+ಆ+ ಕರಿ+ಒಡಲನ್+ಆ+ ಹಯದ್
ಒಡಲನ್+ಆ+ ರಥ +ಚಕ್ರವನು +ಕಡಿ
ಕಡಿದು +ಬಿಸುಟನು +ಹೊದ್ದಿದನು +ಕಟ್ಟಳವಿಯಲಿ +ಕರ್ಣ

ಅಚ್ಚರಿ:
(೧) ಕಾಯ, ಒಡಲು; ತುರಗ, ಹಯ; ಗಾಲಿ, ಚಕ್ರ – ಸಮಾನಾರ್ಥಕ ಪದ

ಪದ್ಯ ೧೬: ದ್ರೋಣರು ತಮ್ಮ ಹಿರಿಮೆಯನ್ನು ಭೀಮನೆದುರು ಹೇಗೆ ಹೇಳಿದರು?

ಫಡ ಫಡೆಲವೋ ಭೀಮ ಬಣಗುಗ
ಳೊಡನೆ ಸರಿಗಂಡೆನ್ನ ಬಗೆಯದೆ
ಕಡುಗುವೈ ಕಾಳೆಗಕೆ ತಪ್ಪೇನಾದಡನುವಾಗು
ಒಡಲನೀವೆನು ವಿನಯದೆಡೆಗವ
ಗಡಿಸಿದರೆ ಕೊಲುವೆನು ರಿಪುವ್ರಜ
ಮೃಡನರಿಯಾ ದ್ರೋಣ ತಾನೆನುತೆಚ್ಚನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ಭೀಮನಿಗುತ್ತರಿಸುತ್ತಾ, ಎಲವೋ ಭೀಮ, ಕೈಲಾಗದ ಕ್ಷುಲ್ಲಕರಿಗೆ ನಾನು ಸಮವೆಂದು ತಿಳಿದು ವಿಚಾರಿಸದೆ ಯುದ್ಧಕ್ಕೆ ಬರುವೆಯಾ? ತಪ್ಪೇನು, ಸಿದ್ಧನಾಗು, ವಿನಯಕ್ಕೆ ನನ್ನ ದೇಹವನ್ನೇ ಕೊಡುತ್ತೇನೆ, ಪ್ರತಿಭಟಿಸಿದರೆ ಕೊಲ್ಲುತ್ತೇನೆ, ಶತ್ರುಗಳಿಗೆ ರುದ್ರನಾದ ದ್ರೋಣ ನಾನು ಎಂದು ಭೀಮನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಣಗು: ಅಲ್ಪವ್ಯಕ್ತಿ; ಕಂಡು: ನೋಡು; ಬಗೆ: ತಿಳಿ; ಕಡುಗು: ಶಕ್ತಿಗುಂದು; ಕಾಳೆಗ: ಯುದ್ಧ; ಅನುವು: ರೀತಿ, ಅವಕಾಶ; ಒಡಲು: ದೇಹ; ವಿನಯ: ಸೌಜನ್ಯ; ಅವಗಡಿಸು: ಕಡೆಗಣಿಸು; ಕೊಲು: ಸಾಯಿಸು; ರಿಪು: ವೈರಿ; ವ್ರಜ: ಗುಂಪು; ಮೃಡ: ಶಿವ; ಅರಿ: ತಿಳಿ; ಎಚ್ಚು: ಬಾಣ ಪ್ರಯೋಗ ಮಾಡು; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಫಡ +ಫಡ+ಎಲವೋ +ಭೀಮ +ಬಣಗುಗಳ್
ಒಡನೆ +ಸರಿಕಂಡ್+ಎನ್ನ +ಬಗೆಯದೆ
ಕಡುಗುವೈ +ಕಾಳೆಗಕೆ +ತಪ್ಪೇನ್+ಆದಡ್+ಅನುವಾಗು
ಒಡಲನ್+ಈವೆನು +ವಿನಯದೆಡೆಗ್+ಅವ
ಗಡಿಸಿದರೆ +ಕೊಲುವೆನು +ರಿಪು+ವ್ರಜ
ಮೃಡನರಿಯಾ +ದ್ರೋಣ +ತಾನೆನುತ್+ಎಚ್ಚನ್+ಅನಿಲಜನ

ಅಚ್ಚರಿ:
(೧) ದ್ರೋಣರು ತಮ್ಮನ್ನು ಹೊಗಳಿಕೊಂಡ ಪರಿ – ರಿಪುವ್ರಜ ಮೃಡನರಿಯಾ ದ್ರೋಣ ತಾನ್

ಪದ್ಯ ೨೪: ಪಾಂಡವ ಸೈನ್ಯದವರು ಏನು ಮಾತಾಡಿದರು?

ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವೆ
ವೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ (ಭೀಷ್ಮ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯದ ಯೋಧರು ಭೀಷ್ಮನ ರಭಸವು ಬಹಳ ಹೆಚ್ಚಾಗಿದೆ, ಇವನು ಕಾಲರುದ್ರನ ಸೈನ್ಯದ ವೀರನೇ ಇರಬೇಕು, ಇವನ ಹೊಡೆತಕ್ಕೆ ನಿಮ್ಮ ದೇಹವನ್ನು ಅರ್ಪಿಸಿಕೊಳ್ಳಬೇಡಿ, ಸೈನ್ಯವು ವ್ಯೂಹವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಲಿ, ಭೀಷ್ಮನನ್ನು ತಡೆಯಲು ಆಗುವುದಿಲ್ಲ, ತಡ ಮಾಡದೆ ಓಡಿ ಹೋಗಿ, ಈಗ ಬದುಕಿಕೊಳ್ಳೋಣ, ಆಮೇಲೆ ನಮ್ಮ ಒಡೆಯರಿಗೆ ಒಂದು ಸಬೂಬು ಹೇಳಿದರಾಯಿತು ಎಂದು ಪಾಂಡವರ ಸೈನ್ಯದವರು ಮಾತಾಡಿದರು.

ಅರ್ಥ:
ಕಡುಹು: ಸಾಹಸ, ಹುರುಪು, ಉತ್ಸಾಹ; ಹಿರಿದು: ಹೆಚ್ಚಿನದು; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಪಡೆ: ಸೈನ್ಯ; ಮೈಗೊಡು: ಶರೀರವನ್ನು ನೀಡು; ಬಲ: ಸೈನ್ಯ; ಹೊರಳು: ಉರುಳಾಡು, ಉರುಳು; ಒಡೆ: ಸೀಳು; ದೆಸೆ: ದಿಕ್ಕು; ತಡೆ: ನಿಲ್ಲು; ಅರಿ: ತಿಳಿ; ತಡವು: ಕೆಣಕು; ತಡೆ; ಮಾಡು: ಈಡೇರಿಸು; ಒಡಲು: ದೇಹ; ಬದುಕು: ಜೀವಿಸು; ನೋಡು: ವೀಕ್ಷಿಸು; ಒಡೆಯ: ರಾಜ; ಬಳಿಕ: ನಂತರ; ಮುರಿ: ಸೀಳು; ಸುತ: ಮಕ್ಕಳು; ಸೇನೆ: ಸೈನ್ಯ;

ಪದವಿಂಗಡಣೆ:
ಕಡುಹು+ ಹಿರಿದೋ +ಕಾಲರುದ್ರನ
ಪಡೆಯಲ್+ಆಡುವನ್+ಈತನೋ +ಮೈ
ಗೊಡದಿರೋ+ ಬಲ+ಹೊರಳಿ+ಒಡೆಯಲಿ +ಹೋಗಿ +ದೆಸೆದೆಸೆಗೆ
ತಡೆಯಲ್+ಅರಿದೋ +ತಡವು +ಮಾಡದಿರ್
ಒಡಲ +ಬದುಕಿಸಿಕೊಳ್ಳಿ +ನೋಡುವೆ
ಒಡೆಯರನು +ಬಳಿಕ+ಎನುತ +ಮುರಿದುದು +ಪಾಂಡುಸುತ+ಸೇನೆ

ಅಚ್ಚರಿ:
(೧) ಜೀವ ಉಳಿಸಿಕೊಳ್ಳಿ ಎಂದು ಹೇಳುವ ಪರಿ – ಒಡಲ ಬದುಕಿಸಿಕೊಳ್ಳಿ ನೋಡುವೆ ಒಡೆಯರನು ಬಳಿಕ
(೨) ಭೀಷ್ಮನ ರೌದ್ರವನ್ನು ವಿವರಿಸುವ ಪರಿ – ಕಡುಹು ಹಿರಿದೋ ಕಾಲರುದ್ರನಪಡೆಯಲಾಡುವನೀತನೋ

ಪದ್ಯ ೬೦: ಅರ್ಜುನನ ಬಾಣಗಳು ಕೌರವರನ್ನು ಹೇಗೆ ನಾಶಮಾಡಿದವು?

ಸರಳ ಕವಿಸಿದರಿವರು ಮತ್ತದ
ಪರಿಹರಿಸಿದನು ಪಾರ್ಥನಾತನ
ಸರಳುಗಳ ಸಂವರಿಸಿ ಮುಸುಕಿದರರ್ಜುನನ ರಥವ
ತೆರಳೆಗಡಿದನು ಮತ್ತೆ ದ್ರೋಣನ
ಗುರುಸುತನ ಸೈಂಧವನ ಮಾದ್ರೇ
ಶ್ವರನ ಚಾಪವ ಕಡಿದು ಹೂಳಿದನೊಡಲೊಳಂಬುಗಳ (ಭೀಷ್ಮ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೌರವ ವೀರರು ಮತ್ತೆ ಬಾಣಗಳನ್ನು ಬಿಟ್ಟರು. ಅರ್ಜುನನು ಮತ್ತೆ ಕಡಿದನು. ಅರ್ಜುನನ ಬಾಣಗಳನ್ನು ಕಡಿದು ಅವರು ಮತ್ತೆ ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟರು. ಅರ್ಜುನನು ಅವನ್ನು ಕಡಿದು ದ್ರೋಣ ಅಶ್ವತ್ಥಾಮ ಸೈಂಧವ ಶಲ್ಯರ ಧನಸ್ಸುಗಳನ್ನು ಕತ್ತರಿಸಿ ಅವರ ಮೈಗಳಲ್ಲಿ ತನ್ನ ಬಾಣಗಳನ್ನು ನಾಟಿಸಿದನು.

ಅರ್ಥ:
ಸರಳ: ಬಾಣ; ಕವಿ: ಆವರಿಸು; ಪರಿಹರಿಸು: ನಿವಾರಿಸು; ಸಂವರಿಸು: ಸಂಗ್ರಹಿಸು; ಮುಸುಕು: ಹೊದಿಕೆ; ರಥ: ಬಂಡಿ; ತೆರಳೆಗಡಿ: ಒಟ್ಟೊಟ್ಟಾಗಿ ಕತ್ತರಿಸು; ಸುತ: ಪುತ್ರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಹೂಳು: ಮುಚ್ಚು; ಒಡಲು: ದೇಹ; ಅಂಬು: ಬಾಣ;

ಪದವಿಂಗಡಣೆ:
ಸರಳ +ಕವಿಸಿದರ್+ಇವರು+ ಮತ್ತದ
ಪರಿಹರಿಸಿದನು +ಪಾರ್ಥನ್+ಆತನ
ಸರಳುಗಳ +ಸಂವರಿಸಿ+ ಮುಸುಕಿದರ್+ಅರ್ಜುನನ +ರಥವ
ತೆರಳೆಗಡಿದನು +ಮತ್ತೆ +ದ್ರೋಣನ
ಗುರುಸುತನ +ಸೈಂಧವನ +ಮಾದ್ರೇ
ಶ್ವರನ +ಚಾಪವ +ಕಡಿದು +ಹೂಳಿದನ್+ಒಡಲೊಳ್+ಅಂಬುಗಳ

ಅಚ್ಚರಿ:
(೧) ಸರಳ, ಅಂಬು – ಪದ್ಯದ ಮೊದಲ ಹಾಗು ಕೊನೆಯ ಪದ ಸಮಾನಾರ್ಥಕವಾಗಿರುವುದು

ಪದ್ಯ ೪೩: ಅರ್ಜುನನು ಎದುರಾಳಿಗಳನ್ನು ಹೇಗೆ ಎದುರಿಸಿದನು?

ಎಸುವನೊಬ್ಬನೆ ಪಾರ್ಥನನಿತುವ
ಕುಸರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ (ಭೀಷ್ಮ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಇತ್ತ, ಬಾಣಗಳನ್ನು ಬಿಡುವವನು ಅರ್ಜುನನೊಬ್ಬನೇ, ಅವನ ಬಾಣಗಳನ್ನು ತುಂಡುಮಾದುವವರು ಅಶ್ವತ್ಥಾಮನೇ ಮೊದಲಾದ ಅನೇಕರು. ಎದುರಾಳಿಗಳ ಬಾಣಗಳು ಅರ್ಜುನನನ್ನು ಸೋಕುತ್ತಿರಲಿಲ್ಲ. ಅವರೆಲ್ಲರ ಬಾಣಗಳನ್ನು ಅರ್ಜುನನು ಕಡಿದು ಅವರೆಲ್ಲರ ಮೈಗಳನ್ನು ತನ್ನ ಬಾಣಗಳಿಂದ ಕೆತ್ತುವನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಗುರು: ಆಚಾರ್ಯ; ಸುತ: ಮಗ; ಆದಿ: ಮುಂತಾದ; ಅನಿಬರು: ಅಷ್ಟುಜನ; ತರಿ: ಕಡಿ, ಕತ್ತರಿಸು; ಅಮರಪತಿ: ಇಂದ್ರ; ಸೂನು: ಮಗ; ಮೈ: ತನು; ಮಸೆ: ಹರಿತವಾದುದು; ಕಾಣು: ತೋರು; ವಿಶಿಖ: ಬಾಣ; ನೆರೆ: ಗುಂಪು; ಕಡಿದು: ಕತ್ತರಿಸು; ಕೆತ್ತು: ಅದಿರು, ನಡುಗು; ಒಡಲು: ದೇಹ;

ಪದವಿಂಗಡಣೆ:
ಎಸುವನ್+ಒಬ್ಬನೆ +ಪಾರ್ಥನ್+ಅನಿತುವ
ಕುಸರಿದರ್+ಇವರು +ಗುರುಸುತಾದಿಗಳ್
ಎಸುವರ್+ಅನಿಬರು +ತರಿವನ್+ಒಬ್ಬನೆ +ಅಮರಪತಿಸೂನು
ಎಸುವರ್+ಇವರ್+ಅರ್ಜುನನ +ಮೈಯ್ಯಲಿ
ಮಸೆಯ +ಕಾಣೆನು +ಪಾರ್ಥನ್+ಅನಿಬರ
ವಿಶಿಖವನು +ನೆರೆ+ಕಡಿದು +ಕೆತ್ತುವನ್+ಅನಿಬರ್+ಒಡಲುಗಳ

ಅಚ್ಚರಿ:
(೧) ಪಾರ್ಥ, ಅಮರಪತಿಸೂನು – ಅರ್ಜುನನನ್ನು ಕರೆದ ಪರಿ
(೨) ಮೈ, ಒಡಲು – ಸಮನಾರ್ಥಕ ಪದ
(೩) ಎಸು- ೧, ೩,೪ ಸಾಲಿನ ಮೊದಲ ಪದ

ಪದ್ಯ ೪೨: ಯುದ್ಧದಲ್ಲಿ ಮಡಿದವರ ದೃಶ್ಯ ಹೇಗಿತ್ತು?

ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತಧಾರೆಗಳು (ವಿರಾಟ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಒಟ್ಟಾಗಿ ಬಂದ ರಾಜರು ಮುರಿದು ಬಿದ್ದರು. ಯೋಧರ ಗುಂಪಿನಲ್ಲಿ ಬಂದ ಹೆಸರಾಂತ ವೀರರು ದೇಹವನ್ನು ಬಿಟ್ಟು ಹೋದರು. ಅತಿರಥರು ಚೂರು ಚೂರಾದರು, ಆನೆಯ ಹಿಂಡುಗಳು ಪೆಟ್ಟು ತಿಂದು ಯಮನ ಪಾತ್ರೆಯನ್ನು ತುಂಬಿಸುವಂತೆ ರಕ್ತಧಾರೆಯನ್ನು ಸುರಿಸಿದವು.

ಅರ್ಥ:
ಒಗ್ಗೊಡೆ: ಜೊತೆ, ಒಗ್ಗಟ್ಟು; ಔಕು: ಅದುಮು, ಒತ್ತು; ಮಹೀಶ: ರಾಜ; ಮುಗ್ಗು: ಬಾಗು, ಮಣಿ; ಮುನ್ನಾಳು: ಹೆಸರಾಂತ ಪರಾಕ್ರಮಿ; ಮೇಳ: ಗುಂಪು; ಮುಂಕೊಂಡು: ಮುಂದೆ ಬಂದ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿರಿ: ಸೀಳು; ಬಿಸುಟು: ಹೊರಹಾಕು; ಒಡಲು: ದೇಹ; ನುಗ್ಗು: ತಳ್ಳು; ನುಗ್ಗುನುಸಿ: ನುಚ್ಚುನೂರು; ಅತಿರಥ: ಮಹಾ ಪರಾಕ್ರಮಿ; ಗಜ: ಆನೆ; ಮೊಗ್ಗರ: ಗುಂಪು, ಸಮೂಹ, ಸೈನ್ಯ; ಮೊನೆ: ಯುದ್ಧ, ಮುಂಭಾಗ; ಮುರಿ: ಸೀಳು; ಕಾಲ: ಯಮನ; ಸಗ್ಗಳೆ: ಚೊಂಬು; ಸೆಳೆ: ಆಕರ್ಷಿಸು,ಎಳೆತ, ಸೆಳೆತ; ಸುರಿ: ಹರಿ; ರಕ್ತ: ನೆತ್ತರು; ಧಾರೆ: ವರ್ಷ, ಪ್ರವಾಹ;

ಪದವಿಂಗಡಣೆ:
ಒಗ್ಗೊಡೆಯದ್+ಔಕಿದ+ ಮಹೀಶರು
ಮುಗ್ಗಿದರು+ ಮುನ್ನಾಳ +ಮೇಳದವ್
ಒಗ್ಗಿನಲಿ +ಮುಂಕೊಂಡು +ಬಿರುದರು+ ಬಿಸುಟರ್+ಒಡಲುಗಳ
ನುಗ್ಗುನುಸಿಯಾಯ್ತ್+ಅತಿರಥರು +ಗಜ
ಮೊಗ್ಗರದ +ಮೊನೆ +ಮುರಿದು +ಕಾಲನ
ಸಗ್ಗಳೆಯ+ ಸೆಳೆದಂತೆ+ ಸುರಿದವು+ ರಕ್ತಧಾರೆಗಳು

ಅಚ್ಚರಿ:
(೧) ಮ ಕಾರದ ಸಾಲು ಪದ – ಮಹೀಶರು ಮುಗ್ಗಿದರು ಮುನ್ನಾಳ ಮೇಳದವೊಗ್ಗಿನಲಿ ಮುಂಕೊಂಡು
(೨) ಸ ಕಾರದ ತ್ರಿವಳಿ ಪದ – ಸಗ್ಗಳೆಯ ಸೆಳೆದಂತೆ ಸುರಿದವು

ಪದ್ಯ ೨೭: ಅರ್ಜುನನು ಯಾವ ಕಿವಿಮಾತನ್ನು ಉತ್ತರನಿಗೆ ಹೇಳಿದನು?

ಒಡಲು ಕಿಡುವುದು ನಾಳೆ ನಾಡಿದು
ಪೊಡವಿಯುಳ್ಳನ್ನ ಬರ ಲೋಕದೊ
ಳಡಗದಿಹುವಪಕೀರ್ತಿ ಕೀರ್ತಿಗಳೆಂಬುವಿದು ನಿರುತ
ಸುಡಲಿ ಜೀವನದಾಶೆಯನು ಕಿಡು
ವೊಡಲ ಭುಕ್ತಿಯ ಭೋಗಕೋಸುಗ
ಕಿಡಿಬೇಡಿಹಪರದ ಕೀರ್ತಿಯನೆಂದನಾ ಪಾರ್ಥ (ವಿರಾಟ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರಿಸಿ, ದೇಹವು ಇಂದೋ ನಾಳೆಯೋ ಬಿದ್ದು ಹೋಗುತ್ತದೆ. ಅಪಕೀರ್ತಿ, ಕೀರ್ತಿಗಳು ಭೂಮಿಯಿರುವವರೆಗೆ ಇರುತ್ತವೆ ಎನ್ನುವುದು ಸತ್ಯ. ಬದುಕಬೇಕೆಂಬಾಶೆಯನ್ನು ಸುಡಬೇಕು, ನಶ್ವರ ದೇಹದ ಭೋಗಕ್ಕಾಗಿ ಇಹಪರದ ಕೀರ್ತಿಗಳನ್ನು ಹಾಳುಮಾಡಿಕೊಳ್ಳಬೇಡ ಎಂದು ಉಪದೇಶಿಸಿದನು.

ಅರ್ಥ:
ಒಡಲು: ದೇಹ; ಕಿಡು: ಅಳಿ, ನಾಶವಾಗು; ಪೊಡವಿ: ಪೃಥ್ವಿ, ಭೂಮಿ; ಬರ: ಅಭಾವ, ಕೊರತೆ; ಅಡಗು: ಅವಿತುಕೊಳ್ಳು; ಕೀರ್ತಿ: ಯಶಸ್ಸು; ನಿರುತ: ದಿಟ, ಸತ್ಯ; ಸುಡು: ದಹಿಸು; ಜೀವನ: ಬಾಳು, ಬದುಕು; ಆಶೆ: ಆಸೆ, ಬಯಕೆ; ಭುಕ್ತಿ: ಸುಖಾನುಭವ, ಭೋಗ; ಭೋಗ: ಸುಖವನ್ನು ಅನುಭವಿಸುವುದು; ಓಸುಗ: ಓಸ್ಕರ; ಇಹಪರ: ಈ ಲೋಕ ಮತ್ತು ಪರಲೋಕ;

ಪದವಿಂಗಡಣೆ:
ಒಡಲು +ಕಿಡುವುದು +ನಾಳೆ +ನಾಡಿದು
ಪೊಡವಿಯುಳ್ಳನ್ನ+ ಬರ+ ಲೋಕದೊಳ್
ಅಡಗದಿಹುವ್+ಅಪಕೀರ್ತಿ +ಕೀರ್ತಿಗಳೆಂಬುವ್+ಇದು +ನಿರುತ
ಸುಡಲಿ +ಜೀವನದಾಶೆಯನು +ಕಿಡು
ವೊಡಲ+ ಭುಕ್ತಿಯ+ ಭೋಗಕೋಸುಗ
ಕಿಡಿಬೇಡ್+ಇಹಪರದ +ಕೀರ್ತಿಯನೆಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಉಪದೇಶ – ಅಡಗದಿಹುವಪಕೀರ್ತಿ ಕೀರ್ತಿಗಳೆಂಬುವಿದು ನಿರುತ

ಪದ್ಯ ೫: ಉತ್ತರನು ಸೈನ್ಯದ ಬಲವನ್ನು ಹೇಗೆ ಕಂಡನು?

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವಿಲಾಡಲಾರದು
ಒಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವಶಿವ ಕಾದಿಗೆಲಿದೆವು ಬಲಕೆ ನಮೊ ಎಂದ (ವಿರಾಟ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಕಣ್ಣೂಗಳು ಈ ಸೈನ್ಯದ ಕಡೆಗೆ ಹಾಯುವುದೇ ಇಲ್ಲ. ಈ ಸೈನ್ಯ ಸಮುದ್ರವನ್ನು ಮನಸ್ಸು ಈಜಿ ದಾಟಲು ಸಾಧ್ಯವಿಲ್ಲ. ಬದುಕಿದ್ದರೆ ಎಂತೆಂತಹ ಅದ್ಭುತಗಳನ್ನೋ ನೋಡಬಹುದು. ಭೂಮಿಯೇ ಈ ಸೈನ್ಯವನ್ನು ಈದಿರಬೇಕು. ಇದರೊಡನೆ ಯಾರು ಯುದ್ಧ ಮಾಡುವನೋ ಅವನೇ ಶಿವ, ಶಿವ ಶಿವಾ ಇದರೊಡನೆ ಯುದ್ಧ ಮಾಡಿದೆ, ಗೆದ್ದೆ, ಈ ಸೈನ್ಯಕ್ಕೆ ನಮೋ ಎಂದು ಚಿಂತಿಸಿದನು.

ಅರ್ಥ:
ಕಡೆ: ಕೊನೆ; ಹಾಯು: ಕೊಂಡೊಯ್ಯು; ಕಂಗಳು: ಕಣ್ಣು; ಬಲ: ಸೈನ್ಯ; ಕಡಲು: ಸಾಗರ; ಮನ: ಮನಸ್ಸು; ಈಸು: ಈಜು; ಒಡಲು: ದೇಹ; ಕಾಣು: ತೋರು; ಅದ್ಭುತ: ಆಶ್ಚರ್ಯ; ಪೊಡವಿ: ಪೃಥ್ವಿ, ಭೂಮಿ; ಮೋಹರ: ಯುದ್ಧ; ಕಾದು: ಯುದ್ಧ; ಮೃಡ: ಶಿವ; ಗೆಲುವು: ಜಯ;

ಪದವಿಂಗಡಣೆ:
ಕಡೆಗೆ +ಹಾಯವು +ಕಂಗಳ್ +ಈ+ಬಲ
ಕಡಲ +ಮನವ್+ಈಸ್+ಆಡಲಾರದು
ಒಡಲುವ್+ಇಡಿದಿರಲ್+ಏನ +ಕಾಣಲು +ಬಾರದ್+ಅದ್ಭುತವ
ಪೊಡವಿ+ಈದುದೊ +ಮೋಹರವನ್+ಇದರ್
ಒಡನೆ +ಕಾದುವನ್+ಆವನ್+ಆತನೆ
ಮೃಡನು+ ಶಿವಶಿವ+ ಕಾದಿ+ಗೆಲಿದೆವು +ಬಲಕೆ+ ನಮೊ+ ಎಂದ

ಅಚ್ಚರಿ:
(೧) ಉತ್ತರನ ಹೋಲಿಸುವ ಪರಿ – ಪೊಡವಿಯೀದುದೊ ಮೋಹರವನಿದರೊಡನೆ ಕಾದುವನಾವನಾತನೆ
ಮೃಡನು