ಪದ್ಯ ೩೬: ಅರ್ಜುನನು ರಥವನ್ನು ಹೇಗೆ ಏರಿದನು?

ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಮ್ಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚಾ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ರಥದ ಕುದುರೆಗಳ ಖುರಪುಟಗಳಿಗೆ ರತ್ನಗಳನ್ನು ಅರ್ಪಿಸಿ ನಮಸ್ಕರಿಸಿ, ಧ್ವಜದಲ್ಲಿದ್ದ ಹನುಮಂತನಿಗೆ ವಂದಿಸಿ, ದೇವತಾ ಸಮೂಹಕ್ಕೆ ಕೈಮುಗಿದು, ರಥವನ್ನು ಪ್ರದಕ್ಷಿಣೆ ಮಾಡಿ, ಕವಚವನ್ನು ಧರಿಸಿ ಕೈಗೆ ವಜ್ರದ ಖಡೆಯವನ್ನು ಹಾಕಿಕೊಂಡು ರಥವನ್ನೇರಿದನು.

ಅರ್ಥ:
ಖುರ:ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ರತುನ: ಮಣಿ; ಸುರಿ: ಚೆಲ್ಲು; ತೇರು: ಬಂಡಿ; ತುರಗ: ಅಶ್ವ; ವಂದಿಸು: ನಮಸ್ಕರಿಸು; ಪಳಹರ: ಬಾವುಟ; ಹನುಮ: ಆಂಜನೇಯ; ಎರಗು: ನಮಸ್ಕರಿಸು; ಸುರಕುಲ: ದೇವತೆ; ಕೈಮುಗಿ: ನಮಸ್ಕರಿಸು; ವರ: ಶ್ರೇಷ್ಠ; ರಥ: ಬಂಡಿ; ಕವಚ: ಉಕ್ಕಿನ ಅಂಗಿ; ಬರಿ: ಪಕ್ಕ, ಬದಿ; ಬಿಗಿ: ಕಟ್ಟು; ಕೈ: ಹಸ್ತ; ವಜ್ರ: ಗಟ್ಟಿಯಾದ; ಅವಚು: ಅಪ್ಪಿಕೊಳ್ಳು; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ಖುರಕೆ +ರತುನವ +ಸುರಿದು +ತೇರಿನ
ತುರಗವನು +ವಂದಿಸಿದನಾ +ಪಳ
ಹರದ +ಹನುಮಂಗ್+ಎರಗಿದನು +ಸುರಕುಲಕೆ +ಕೈಮುಗಿದು
ವರರಥವ+ ಬಲಗೊಂಡು +ಕವಚವ
ಬರಿಗೆ +ಬಿಗಿದನು +ಕೈಗೆ +ವಜ್ರದ
ತಿರುವೊಡೆಯನ್+ಅವಚಿದನು +ರಥವೇರಿದನು +ಕಲಿಪಾರ್ಥ

ಅಚ್ಚರಿ:
(೧) ವಂದಿಸು, ಎರಗು, ಕೈಮುಗಿ – ಸಾಮ್ಯಾರ್ಥ ಪದಗಳು

ಪದ್ಯ ೬: ದೇವತೆಗಳ ಸ್ಥಿತಿ ಹೇಗಿತ್ತು?

ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ತ್ಮಿಕದೊಳಿಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯಹುಡಿ
ಹುಡಧುದು ಸುರವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೬ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಹೊಡೆವ ಬರಸಿಡಿಲಿನಂತೆ, ಕಲ್ಪಾಂತದಲ್ಲಿಸಮುದ್ರವು ಉಕ್ಕುವಂತೆ, ಆಕಸ್ಮಿಕವಾಗಿ ಭೂಮಿಯು ರಸಾತಳಕ್ಕಿಳಿಯುವಂತೆ ನಿವಾತಕವಚರೆಂಬ ರಾಕ್ಷಸರ ಭಯವು ನಮನ್ನು ಕಾಡುತ್ತಿದೆ. ದೇವತಾವೈಭವವು ಪುಡಿಪುಡಿಯಾಗುತ್ತದೆ, ಅವರು ನಮಗಿಂತ ಎರಡುಪಟ್ಟು ಬಲಿಷ್ಠರು ಎಂದು ದೇವತೆಗಳ ಸ್ಥಿತಿಯನ್ನು ಹೇಳಿದನು.

ಅರ್ಥ:
ಸಿಡಿಲು: ಅಶನಿ, ಗರ್ಜಿಸು; ಕಾಲ ಸಮಯ; ಎರಗು: ಮೇಲೆ ಬೀಳು; ಕಡಲು: ಸಾಗರ; ಕಲ್ಪ: ಸಹಸ್ರ ಯುಗ, ಪ್ರಳಯ; ಉಕ್ಕು: ಹಿಗ್ಗುವಿಕೆ, ಉತ್ಸಾಹ; ಪೊಡವಿ: ಪೃಥ್ವಿ, ಭೂಮಿ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ, ಅಪಘಾತ; ಇಳಿ: ಕೆಳಕ್ಕೆ ಬಾ; ರಸಾತಳ: ಭೂಮಿಯ ಮೇಲ್ಭಾಗ; ತುಡುಕು: ಹೋರಾಡು, ಸೆಣಸು; ರಕ್ಕಸ: ರಾಕ್ಷಸ; ಭಯ: ಅಂಜಿಕೆ; ಹುಡಿ: ಹಿಟ್ಟು, ಪುಡಿ; ಸುರವಿಭವ: ದೇವತೆಗಳ ವೈಭವ; ಇಮ್ಮಡಿ: ಎರಡರಷ್ಟು; ಕೇಳು: ಆಲಿಸು;

ಪದವಿಂಗಡಣೆ:
ಸಿಡಿಲ+ ಕಾಲದೊಳ್+ಎರಗುವಂತಿರೆ
ಕಡಲು+ ಕಲ್ಪದೊಳ್+ಉಕ್ಕುವಂತಿರೆ
ಪೊಡವಿ+ಆಕಸ್ತ್ಮಿಕದೊಳ್+ಇಳಿವಂತಿರೆ+ ರಸಾತಳಕೆ
ತುಡುಕುವುದು +ರಕ್ಕಸರ+ ಭಯ+ಹುಡಿ
ಹುಡಿದುದು+ ಸುರವಿಭವವ್+ಎಮಗ್
ಇಮ್ಮಡಿಯಲ್+ಅವರು +ನಿವಾತಕವಚರು+ ಪಾರ್ಥ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲಕಾಲದೊಳೆರಗುವಂತಿರೆಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ತ್ಮಿಕದೊಳಿಳಿವಂತಿರೆ ರಸಾತಳಕೆ

ಪದ್ಯ ೨೬: ಪರಮೇಶ್ವರನು ಮುನಿಗಳಿಗೆ ಏನು ಹೇಳಿದನು?

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿ ಕೊಡುವೆನೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶಿವನು ಮುನಿಗಳಿಗೆ, ಅವನಾರೆಂದು ತಿಳಿಯಿತು. ನೀವು ಹೆದರಬೇಡಿ, ನಿಮ್ಮ ತಪಸ್ಸನ್ನು ನಿರ್ವಿಘ್ನವಾಗಿ ಮಾಡಬಿಡುವವನು ಅವನಲ್ಲ. ಅವನ ರೀತಿಯೇ ಬೇರೆ. ಹೆಚ್ಚೇನು ಹೇಳಲಿ, ನಿಮ್ಮ ತಪೋವನದಲ್ಲಿಯೇ ನೀವು ತಪಸ್ಸು ಮಾಡಿರಿ, ನಾನು ಅವನನ್ನೆಬ್ಬಿಸಿ ತಪೋಭೂಮಿಯನ್ನು ನಿಮಗೆ ತೆರವು ಮಾಡಿಸಿಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಅರಿ: ತಿಳಿ; ಅಂಜು: ಹೆದರು; ಹುಯ್ಯಲು: ಪೆಟ್ಟು, ಹೊಡೆತ; ಬರಿ: ಸುಮ್ಮನೆ, ಕೇವಲ; ಗೆಲವು: ಜಯ; ಎರಗು: ಬೀಳು, ನಮಸ್ಕರಿಸು; ಬೇರೆ: ಅನ್ಯ; ಅಂಗವಣೆ: ರೀತಿ, ವಿಧಾನ; ಅರುಹ: ಅರ್ಹ; ಭವತ್: ನಿಮ್ಮ; ತಪೋವನ: ತಪಸ್ಸು ಮಾಡುವ ಸ್ಥಳ; ನೆರೆ: ಪಕ್ಕ; ಎಬ್ಬಿಸು: ಮೇಲೇಳಿಸು; ತೆರವು: ಖಾಲಿ,ಬರಿದಾದುದು; ಕೊಡು: ನೀಡು; ನಗು: ಸಂತಸ; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಶಂಕರ;

ಪದವಿಂಗಡಣೆ:
ಅರಿದೆ +ನಾನ್+ಅಂಜದಿರಿ+ ಹುಯ್ಯಲ
ಬರಿದೆ +ತಂದಿರಿ+ ನಿಮ್ಮ +ಗೆಲವಿಂಗ್
ಎರಗುವವನವನಲ್ಲ+ ಬೇರಿಹುದ್+ಆತನ್+ಅಂಗವಣೆ
ಅರುಹಲೇಕೆ +ಭವತ್+ತಪೋವನ
ನೆರೆ +ನಿಮಗೆ +ನಾನ್+ಅವನನ್+ಎಬ್ಬಿಸಿ
ತೆರಹ +ಮಾಡಿಸಿ +ಕೊಡುವೆನ್+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಸಾಮರ್ಥ್ಯವನ್ನು ಹೇಳುವ ಪರಿ – ನಿಮ್ಮ ಗೆಲವಿಂಗೆರಗುವವನವನಲ್ಲ ಬೇರಿಹುದಾತನಂಗವಣೆ

ಪದ್ಯ ೧೯: ಯುದ್ಧಕ್ಕೂ ಮುಂಚೆ ಪಾರ್ಥನು ಯಾರಿಗೆ ನಮಿಸಿದನು?

ಹರಿಗೆ ಕೈಮುಗಿದೆರಗಿ ತೇರಿನ
ಹರಿಗಳಿಗೆ ವಂದಿಸಿ ಪತಾಕೆಯ
ಹರಿಗೆ ನಮಿಸಿ ನಿಜಾಯುಧಕೆ ಕೈಮುಗಿದು ಜೇವೊಡೆದು
ಹರಿ ಧನಂಜಯ ಧರ್ಮ ನೈರುತಿ
ವರುಣ ಮಾರುತ ವೈಶ್ರವಣ ಶಂ
ಕರ ವಿರಿಂಚಾದಿಗಳಿಗಭಿವಂದಿಸಿದನಾ ಪಾರ್ಥ (ಕರ್ಣ ಪರ್ವ, ೨೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅರ್ಜುನನು ಶ್ರೀ ಕೃಷ್ಣನಿಗೆ ಕೈಮುಗಿದು ನಮಸ್ಕರಿಸಿ, ರಥಕ್ಕೆ ಕಟ್ಟಿದ ಕುದುರೆಗಳಿಗೆ ವಂದಿಸಿ, ಧ್ವಜದಲ್ಲಿದ್ದ ಹನುಮಂತನಿಗೆ ನಮಿಸಿ, ತನ್ನ ಆಯುಧಗಳಿಗೆ ಕೈಮುಗಿದು ಗಾಂಡಿವವನ್ನು ಹೆದೆಯೇರಿಸಿ ಝೇಂಕರಿಸಿ, ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ ಬ್ರಹ್ಮ ಇವರಿಗೆ ಅರ್ಜುನನು ಅಭಿವಂದಿಸಿದನು.

ಅರ್ಥ:
ಹರಿ: ವಿಷ್ಣು; ಕೈಮುಗಿದು: ಎರಗು, ನಮಸ್ಕರಿಸು; ತೇರು: ರಥ; ಹರಿ: ಕುದುರೆ; ವಂದಿಸು: ನಮಸ್ಕರಿಸು; ಪತಾಕೆ: ಬಾವುಟ; ಹರಿ: ಕೋತಿ; ನಮಿಸಿ: ನಮಸ್ಕರಿಸಿ; ನಿಜಾಯುಧ: ತನ್ನ ಅಸ್ತ್ರ; ಜೇವೊಡೆ:ಧನುಷ್ಟಂಕಾರ ಮಾಡು; ಹರಿ: ಇಂದ್ರ; ಧರ್ಮ: ಯಮ; ನೈರುತಿ: ದಿಕ್ಪಾಲಕ; ವರುಣ: ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಮಾರುತ: ವಾಯು; ವೈಶ್ರವಣ: ಕುಬೇರ; ಶಂಕರ: ಶಿವ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ಅಭಿವಂದಿಸು: ನಮಸ್ಕರಿಸು;

ಪದವಿಂಗಡಣೆ:
ಹರಿಗೆ+ ಕೈಮುಗಿದ್+ಎರಗಿ +ತೇರಿನ
ಹರಿಗಳಿಗೆ +ವಂದಿಸಿ +ಪತಾಕೆಯ
ಹರಿಗೆ+ ನಮಿಸಿ +ನಿಜಾಯುಧಕೆ+ ಕೈಮುಗಿದು +ಜೇವೊಡೆದು
ಹರಿ+ ಧನಂಜಯ +ಧರ್ಮ +ನೈರುತಿ
ವರುಣ +ಮಾರುತ +ವೈಶ್ರವಣ+ ಶಂ
ಕರ+ ವಿರಿಂಚಾದಿಗಳಿಗ್+ಅಭಿವಂದಿಸಿದನಾ +ಪಾರ್ಥ

ಅಚ್ಚರಿ:
(೧) ಹರಿ ಪದದ ಬಳಕೆ – ಕೃಷ್ಣ, ಕುದುರೆ, ಹನುಮ, ಇಂದ್ರ
(೨) ಎರಗು, ವಂದಿಸಿ, ನಮಿಸಿ, ಕೈಮುಗಿದು, ಅಭಿವಂದಿಸು – ಸಮನಾರ್ಥಕ ಪದಗಳು

ಪದ್ಯ ೩: ಧರ್ಮರಾಯನು ಕೃಷ್ಣನೊಂದಿಗೆ ಯಾವ ವಿಚಾರದಿಂದ ಮಾತನ್ನು ಪ್ರಾರಂಭಿಸಿದನು?

ದರುಶನವ ನೀಡಿದನು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮ ಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರು ತನುಜ ಧೃತರಾಷ್ತ್ರರೆಂದನು ಧರ್ಮನಂದನನು (ಉದ್ಯೋಗ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಎಲ್ಲರಿಗೂ ದರ್ಶನವನ್ನಿತ್ತನು. ಪಾಂಡವರು ಮತ್ತುಳಿದ ರಾಜರಾದ ದ್ರುಪದ ಮುಂತಾದವರು ಅವನಿಗೆ ನಮಸ್ಕರಿಸಿದರು ಬಳಿಕ ಧರ್ಮರಾಯನು ಪರಮ ಬಾಂಧವರಾದ ಭೀಷ್ಮ, ವಿದುರ, ದ್ರೋಣ, ದುರ್ಯೋಧನ, ಅಶ್ವತ್ಥಾಮ, ಕುಶಲದಿಂದ ಜೀವಿಸಿರುವರೆ ಎಂದು ಕೇಳುವ ಮೂಲಕ ಮಾತನ್ನು ಪ್ರಾರಂಭಿಸಿದನು.

ಅರ್ಥ:
ದರುಶನ: ನೋಡು; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ಮಿಕ್ಕ: ಉಳಿದ; ಅರಸು: ರಾಜರು; ಆದಿ: ಮುಂತಾದ; ನಾಯಕ: ಒಡೆಯ; ಎರಗು: ನಮಸ್ಕರಿಸು; ಪದ: ಚರಣ; ಪರಮ: ಶ್ರೇಷ್ಠ; ಬಾಂಧವ: ಬಂಧುಜನ; ಜೀವ: ಬದುಕು; ನದೀಸುತ: ಭೀಷ್ಮ; ಸುತ: ಮಗ; ಗುರು: ಆಚಾರ್ಯ; ನೃಪ: ರಾಜ; ತನುಜ: ಮಗ;

ಪದವಿಂಗಡಣೆ:
ದರುಶನವ +ನೀಡಿದನು +ಕೃಷ್ಣನ
ಚರಣದಲಿ +ಮೈಯಿಕ್ಕಿದರು +ಮಿ
ಕ್ಕರಸುಗಳು +ದ್ರುಪದಾದಿ +ನಾಯಕರ್+ಎರಗಿದರು +ಪದಕೆ
ಪರಮ +ಬಾಂಧವರೆಲ್ಲ+ ಜೀವಂ
ತರೆ +ನದೀಸುತ +ವಿದುರ +ಗುರು +ನೃಪ
ಗುರು ತನುಜ +ಧೃತರಾಷ್ತ್ರರೆಂದನು +ಧರ್ಮನಂದನನು

ಅಚ್ಚರಿ:
(೧) ಭೀಷ್ಮ – ನದೀಸುತ, ನೃಪ – ದುರ್ಯೋಧನ, ಗುರುತನುಜ- ಅಶ್ವತ್ಥಾಮ
(೨) ಮೈಯಿಕ್ಕು, ಎರಗು – ನಮಸ್ಕರಿಸಿದರು ಎಂದು ಹೇಳಲು ಬಳಸಿರುವ ಪದ

ಪದ್ಯ ೨೬: ಪುರುಷಾಮೃಗನು ಭೀಮನ ಕಾಲುಗಳನ್ನು ಬಿಟ್ಟನೆ?

ಎಂದು ಧರ್ಮಕಥಾ ಪ್ರಸಂಗ
ಕ್ಕಿಂದು ಪುರುಷಾಮೃಗವ ತಿಳುಹಲಿ
ಕಂದು ನಗುತನಿಲಜನ ಕಾಲ್ಗಳ ಬಿಟ್ಟು ಹೆರೆಹಿಂಗಿ
ನಿಂದಿರಲು ಕಲಿಭೀಮನೆದ್ದು ಮು
ಕುಂದನಂಘ್ರಿಗೆ ನಮಿಸಿ ಕಾಲನ
ನಂದನಂಗೆರಗಿದನು ಮುನಿಸಂಕುಲಕೆ ಕೈಮುಗಿದು (ಸಭಾ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧರ್ಮರಾಯನು ಧರ್ಮದ ಸೂಕ್ಷ್ಮಗಳನ್ನು ಪುರುಷಮೃಗನಿಗೆ ವಿವರಿಸಲು, ಅವನು ಒಪ್ಪಿ ಭೀಮನ ಕಾಲುಗಳನ್ನು ಬಿಟ್ಟು ಹಿಂದೆಸರಿದು ಸಮೀಪದಲ್ಲಿ ನಿಂತಿತು. ಭೀಮನು ಎದ್ದು ಕೃಷ್ಣನಿಗೆ ನಮಸ್ಕರಿಸಿ ಮುನಿಗಳಿಗೆ ಕೈಮುಗಿದು ಧರ್ಮರಾಯನಿಗೆ ವಂದಿಸಿದನು.

ಅರ್ಥ:
ಧರ್ಮ: ಆಚಾರ, ನಿಯಮ; ಕಥಾ: ಪ್ರಸಂಗವನ್ನು ವಿವರಿಸುವ ರೀತಿ; ಪ್ರಸಂಗ: ಸಂದರ್ಭ; ತಿಳುಹಲಿ: ಅರ್ಥೈಸು; ನಗುತ: ಸಂತೋಷ; ಅನಿಲಜ: ಭೀಮ; ಅನಿಲ: ವಾಯು; ಕಾಲು: ಪಾದ; ಹೆರೆಹಿಂಗೆ: ದೂರಸರಿ; ನಿಂದು: ನಿಲ್ಲು; ಕಲಿ: ಶೂರ; ಎದ್ದು: ಮೇಲೇಳಿ; ಅಂಘ್ರಿ: ಪಾದ; ನಮಿಸು: ಎರಗು; ಕಾಲ: ಯಮ; ನಂದನ: ಮಗ; ಮುನಿ: ಋಷಿ; ಸಂಕುಲ: ಗುಂಪು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಎಂದು +ಧರ್ಮಕಥಾ +ಪ್ರಸಂಗ
ಕ್ಕಿಂದು +ಪುರುಷಾಮೃಗವ+ ತಿಳುಹಲಿ
ಕಂದು +ನಗುತ್+ಅನಿಲಜನ +ಕಾಲ್ಗಳ +ಬಿಟ್ಟು +ಹೆರೆಹಿಂಗಿ
ನಿಂದಿರಲು +ಕಲಿ+ಭೀಮನೆದ್ದು+ ಮು
ಕುಂದನ್+ಅಂಘ್ರಿಗೆ +ನಮಿಸಿ +ಕಾಲನ
ನಂದನಂಗ್+ಎರಗಿದನು+ ಮುನಿ+ಸಂಕುಲಕೆ +ಕೈಮುಗಿದು

ಅಚ್ಚರಿ:
(೧) ಭೀಮನನ್ನು ಅನಿಲಜ, ಧರ್ಮರಾಯನನ್ನು ಕಾಲನನಂದನ ಎಂದು ಕರೆದಿರುವುದು
(೨) ನಮಿಸಿ, ಎರಗು, ಕೈಮುಗಿ – ನಮಸ್ಕರಿಸಿದನು ಎನ್ನಲು ಉಪಯೋಗಿಸಿರುವ ಪದಗಳು