ಪದ್ಯ ೧೯: ಮುನಿಗಳು ಪಾಂಡು ರಾಜನಿಗೆ ಏನು ಹೇಳಿದರು?

ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ (ಆದಿ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅವರು ನಾವೇ ಪಾಪಿಗಳೇ? ನೀನೇ ಉತ್ತಮನೇ? ಇದೆಲ್ಲಾ ಏಕೆ ಎನ್ನುತ್ತಾ ತೇಲುಗಣ್ಣು ಮಾಡುತ್ತಾ, ಕ್ಷಣಕ್ಷಣಕ್ಕೂ ಮೇಲುಸಿರು ಬರುತ್ತಿರಲು, ಕತ್ತು ಮೇಲಕ್ಕೆ ಹೋಗುತ್ತಿರಲು, ಬಿಕ್ಕುಳಿಕೆ ಬರುತ್ತಿರಲು ರೋಷಗೊಂಡು ಉರಿಮಾತುಗಳನ್ನು ರಾಜನಿಗೆ ಹೇಳಿದರು.

ಅರ್ಥ:
ಮತ್ತೆ: ಪುನಃ; ಪಾಪಿ: ದುಷ್ಟ; ಉತ್ತಮ: ಶ್ರೇಷ್ಠ; ಸಾಕು: ನಿಲ್ಲು; ಮರಳು: ಹಿಂದಿರುಗು; ಕಂಗಳು: ಕಣ್ಣು; ಅಡಿಗಡಿಗೆ: ಮತ್ತೆ ಮತ್ತೆ; ಉಗಿ: ಹೊರಹಾಕು; ಉಸುರು: ವಾಯು; ಮೇಲುಸುರು: ನಿಟ್ಟುಸಿರು; ಹಾಯ್ಕು: ಇಡು, ಇರಿಸು; ಕೊರಳು: ಕಂಠ; ಬಿಕ್ಕುಳ: ಬಿಕ್ಕುಳಿಕೆ, ನೀರಿಗೆ ಕಾಯುವ ಸ್ಥಿತಿ; ಅಧರ: ತುಟಿ; ರೋಷ: ಕೋಪ; ಹೊಗೆ: ಧೂಮ; ಸುತ್ತು: ಆವರಿಸು; ಉರಿ: ಬೆಂಕಿ; ಸೂಸು: ಹರಡು; ಅವನಿಪ: ರಾಜ;

ಪದವಿಂಗಡಣೆ:
ಮತ್ತೆ +ನಾವೇ +ಪಾಪಿಗಳೆ +ನೀನ್
ಉತ್ತಮನಲಾ + ಸಾಕ್+ಇದೇತಕ್
ಎನುತ್ತ+ ಮರಳುವ +ಕಂಗಳ್+ಅಡಿಗಡಿಗ್+ಉಗಿವ +ಮೇಲ್+ಉಸುರ
ಎತ್ತಿ+ ಹಾಯ್ಕುವ +ಕೊರಳ +ಬಿಕ್ಕುಳ
ತೆತ್ತುವ್+ಅಧರದ +ರೋಷದಲಿ +ಹೊಗೆ
ಸುತ್ತಿದ್+ಉರಿವಾತುಗಳ +ಸೂಸಿದರ್+ ಅವನಿಪನ +ಮೇಲೆ

ಅಚ್ಚರಿ:
(೧) ಕೋಪದ ಲಕ್ಷಣವನ್ನು ವರ್ಣಿಸುವ ಪರಿ – ಮರಳುವ ಕಂಗಳಡಿಗಡಿಗುಗಿವ ಮೇಲುಸುರ ಎತ್ತಿ ಹಾಯ್ಕುವ ಕೊರಳ ಬಿಕ್ಕುಳತೆತ್ತುವಧರದ ರೋಷದಲಿ ಹೊಗೆ ಸುತ್ತಿದುರಿವಾತುಗಳ ಸೂಸಿದರ

ಪದ್ಯ ೩೪: ಯಾವುದು ಇಹಪರಲೋಕಕೆ ಸಾಧನ?

ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತೆ ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಪಾಂಡವರನ್ನು ಉಚಿತವಾಗಿ ಸತ್ಕರಿಸು, ನಿನ್ನ ಮಕ್ಕಳ ದುರಾಶೆ, ದುರ್ವರ್ತೆನೆಗಳನ್ನು ಅವರು ನೆನಪಿಡುವವರಲ್ಲ. ಅವರು ಐವರೂ ಉತ್ತಮರು. ಅವರಿಗೆ ಕೇಡನ್ನು ಬಯಸಬೇಡ. ದುಷ್ಟರು ಮಾಡಿದ ದುಷ್ಕೃತಕ್ಕೆ ತಕ್ಕ ಫಲವಾಯಿತು. ಇಹಕ್ಕೂ ಪರಲೋಕಕ್ಕೂ ಧರ್ಮದ ಮಾರ್ಗದಿ ನಡೆವುದೇ ಸಾಧನ ಎಂದು ವ್ಯಾಸರು ನುಡಿದರು.

ಅರ್ಥ:
ನೃಪ: ರಾಜ; ಕಾಣಿಸು: ತೋರು; ಅನಿಬರ: ಅಷ್ಟುಜನ; ಉಪಚರಿಸು: ಸಲಹು, ಸತ್ಕರಿಸು; ಮಕ್ಕಳು: ಪುತ್ರರು; ಕೃಪಣ: ದೈನ್ಯದಿಂದ ಕೂಡಿದುದು, ದುಷ್ಟ; ಅರಿ: ತಿಳಿ; ಉತ್ತಮ: ಶ್ರೇಷ್ಠ; ಉಪಹತಿ: ಹೊಡೆತ, ತೊಂದರೆ; ನೆನೆ: ಜ್ಞಾಪಿಸು; ದುರ್ಜನ: ದುಷ್ಟ; ಅಪಕೃತಿ: ಅಪಕಾರ; ಫಲ: ಪ್ರಯೋಜನ; ಧರ್ಮ: ಧಾರಣೆ ಮಾಡಿದುದು; ರಪಣ: ಆಸ್ತಿ, ಐಶ್ವರ್ಯ; ಇಹಪರ: ಈ ಲೋಕ ಮತ್ತು ಪರಲೋಕ; ಕೇಳು: ಆಲಿಸು;

ಪದವಿಂಗಡಣೆ:
ನೃಪನ+ ಕಾಣಿಸಿಕೊಂಬುದ್+ಅನಿಬರನ್
ಉಪಚರಿಸುವುದು +ನಿನ್ನ+ ಮಕ್ಕಳ
ಕೃಪಣತೆಯನ್+ಆರೈವರಲ್+ಅವರ್+ಐವರ್+ಉತ್ತಮರು
ಉಪಹತಿಯ +ನೆನೆಯದಿರು+ ದುರ್ಜನರ್
ಅಪಕೃತಿಗೆ+ ಫಲವಾಯ್ತೆ+ ಧರ್ಮವೆ
ರಪಣವ್+ಇಹ+ಪರಲೋಕಕ್+ಎಲೆ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ನೀತಿ ನುಡಿ – ಧರ್ಮವೆ ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ
(೨) ಒಂದೇ ಪದವಾಗಿ ರಚನೆ – ಕೃಪಣತೆಯನಾರೈವರಲ್ಲವರೈವರುತ್ತಮರು

ಪದ್ಯ ೧೦೨: ಮೃತ್ಯುದೇವತೆ ಯಾರನ್ನು ಬಿಡುವುದಿಲ್ಲ?

ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಹಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಉತ್ತಮರನ್ನು ನಿಂದಿಸುತ್ತಾ, ಎಣಿಸಲಾಗದಷ್ಟು ಅಧರ್ಮವನ್ನಾಚರಿಸುವುದೇ ತನ್ನ ನಿತ್ಯವಿಧಿಯಾಗಿ, ಧರ್ಮದ ತಾರತಮ್ಯವನ್ನು ಅರಿಯದೇ, ಜಡಾತ್ಮರಾಗಿರುವ ವೇದಗಳನ್ನು ದೂರುವವರನ್ನು ಮೃತ್ಯುದೇವತೆ ಮುರಿದು ಆನಂದಿಸದೆ ಬಿಡುವಳೇ ಹೇಳೆಂದು ಸನತ್ಸುಜಾತರು ಧೃತರಾಷ್ಟ್ರನನ್ನು ಕೇಳಿದರು.

ಅರ್ಥ:
ಉತ್ತಮ: ಶ್ರೇಷ್ಠ; ನಿಂದಿಸು: ಬಯ್ಗಳು, ದೂಷಣೆ; ದುರ್ವೃತ್ತ: ಕೆಟ್ಟ ನಡತೆ; ಅಧರ್ಮ: ನ್ಯಾಯವಲ್ಲದುದು; ಕೋಟಿ: ಬಹಳ; ನಿತ್ಯ: ಯಾವಾಗಲು; ವಿಧಿ:ನಿಯಮ; ಧರ್ಮ: ಧಾರಣೆ ಮಾದಿದುದು, ನಿಯಮ, ಆಚಾರ; ತಾರತಮ್ಯ: ಹೆಚ್ಚು-ಕಡಿಮೆ, ಭೇದಭಾವ; ಅರಿ: ತಿಳಿ; ಜಗ: ಜಗತ್ತು; ಜಡ: ಚಲನೆಯಿಲ್ಲದ; ವೇದ: ಶೃತಿ; ಬಾಹ್ಯ: ಹೊರಗೆ; ಮೃತ್ಯು: ಸಾವು; ದೇವತೆ: ಸುರರು; ಮುರಿ: ಸೀಳು; ಮೋದ: ಸಂತೋಷ; ಬಿಡು: ತೊರೆ;

ಪದವಿಂಗಡಣೆ:
ಉತ್ತಮರುಗಳ +ನಿಂದಿಸುತ +ದು
ರ್ವೃತ್ತ+ನಾಗಿ+ಅಧರ್ಮ+ಕೋಟಿಯೆ
ನಿತ್ಯವಿಧಿ+ ತನಗಾಗಿ+ ಧರ್ಮದ +ತಾರತಮ್ಯವನು
ಎತ್ತಲೆಂದ್+ಅರಿಯದೆ +ಜಗಕ್ಕೆ+ ಜ
ಡಾತ್ಮರಾಹಿಹ +ವೇದ+ಬಾಹ್ಯರ
ಮೃತ್ಯುದೇವತೆ +ಮುರಿದು +ಮೋದದೆ +ಬಿಡುವಳೇಯೆಂದ

ಅಚ್ಚರಿ:
(೧) ‘ಮ’ಕಾರದ ಸಾಲು ಪದಗಳು – ಮೃತ್ಯುದೇವತೆ ಮುರಿದು ಮೋದದೆ
(೨) ಧರ್ಮ, ಅಧರ್ಮ – ವಿರುದ್ಧ ಪದಗಳು

ಪದ್ಯ ೭೭: ಯಾರಿಗೆ ಅತಿಶಯವಾದ ಸಿದ್ಧಿ ಸಿಗುತ್ತದೆ?

ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೭೭ ಪದ್ಯ)

ತಾತ್ಪರ್ಯ:
ಒಳ್ಳೆಯವರ ಸಂಗದಲ್ಲಿದ್ದು, ಕೆಟ್ಟವಿಷಯಗಳ ಹಿಂದೆ ಹೋಗದೆ, ಜೀವಿಸುವ ಮತ್ತು ನಿರ್ಜೀವದೆಲ್ಲದರ ಸುಖ ದುಃಖವೂ ತನ್ನದೇ ಎಂದು ಭಾವಿಸಿ, ಎಲ್ಲರಿಗೂ ಸುಖ ದುಃಖಗಳು ಕಲ್ಪಿತ ಎಂದು ತಿಳಿದು, ಅವರಿಗೆ ಸರಿಯಾದ ದಾರಿ ತನಗೆ ಪುಣ್ಯವೂ ಇಲ್ಲ ಪಾಪವೂ ಇಲ್ಲ ಎಂದರಿಯುವುದು ಅತಿಶಯವಾದ ಸಿದ್ಧಿ (ಆತ್ಮನಿಗೆ ಕರ್ಮಲೇಪವಿಲ್ಲವೆಂದು ತಿಳಿದರೆ ಪುಣ್ಯವೂ ಪಾಪವೂ ಅಂಟುವುದಿಲ್ಲ) ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಉತ್ತಮ: ಶ್ರೇಷ್ಠ; ಸಂಗ: ಜೊತೆ; ಓಲಾಡು: ಹಾರಾಡು, ಸುಖದಿಂದ ಆಡು; ದುರ್ವಿಷಯ: ಕೆಟ್ಟ ವಿಚಾರ; ಮುರಿ: ಸೀಳು; ಸಕಲ: ಎಲ್ಲಾ; ಚರಾಚರ: ಜೀವ ಮತ್ತು ನಿರ್ಜೀವ ವಸ್ತುಗಳು; ಸುಖ: ಸಂತೋಷ; ದುಃಖ: ದುಗುಡ; ಹೊತ್ತು: ಹೊರು; ನಡೆ: ಹೆಜ್ಜೆ ಹಾಕು; ಪುಣ್ಯ: ಸದಾಚಾರ, ಪರೋಪಕಾರ; ಪಾಪ: ಕೆಟ್ಟ ಕೆಲಸ; ಎತ್ತಣ: ಎಲ್ಲಿಯ; ತನಗೆ: ಅವನಿಗೆ; ಕಾಣಿಕೆ: ಉಡುಗೊರೆ; ಉತ್ತರೋತ್ತರ: ಹೆಚ್ಚು, ಬೆಳವಣಿಗೆ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಚಿತ್ತೈಸು: ಗಮನಿಸು; ಮುನಿ: ಋಷಿ;

ಪದವಿಂಗಡಣೆ:
ಉತ್ತಮರ +ಸಂಗದೊಳಗ್+ಓಲಾ
ಡುತ್ತ +ದುರ್ವಿಷಯಂಗಳನು +ಮುರಿ
ಯೊತ್ತಿ+ ಸಕಲ +ಚರಾಚರದ+ ಸುಖ +ದುಃಖವನು +ತಾನು
ಹೊತ್ತು +ನಡೆವುತ+ ಪುಣ್ಯ +ಪಾಪವಿದ್
ಎತ್ತಣದು +ತನಗೆಂಬ +ಕಾಣಿಕೆ
ಯುತ್ತರೋತ್ತರ +ಸಿದ್ಧಿ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಸುಖ, ದುಃಖ; ಪುಣ್ಯ, ಪಾಪ; ಚರ, ಅಚರ; – ವಿರುದ್ಧ ಪದಗಳ ಬಳಕೆ

ಪದ್ಯ ೨೬: ಜೀವಾತ್ಮ ಹೋದಮೇಲೆ ಏನೆಂದು ಸಂಭೋದಿಸುತ್ತಾರೆ?

ಅರಸನೊಡೆಯನು ದಂಡನಾಥನು
ಗುರುಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ಗುಣನಾಮದೊಳಹಂ
ಕರಿಸುವರು ಜೀವಾತ್ಮ ತೊಲಗಿದೊ
ಡಿರದೆ ಹೆಣನೆಂದೆಂಬರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾನು ರಾಜ, ಯಜಮಾನ, ಸೇನಾಧಿಪತಿ, ಆಚಾರ್ಯ, ದೊಡ್ಡವ, ಶ್ರೇಷ್ಠನು, ದೇವತ ಆರಾಧಕನು, ಸಾಹಿತಿಯು, ಸದಸ್ಯನು, ಒಳ್ಳೆಯ ಮನುಷ್ಯನು, ಹೀಗೆ ಹಲವಾರು ನಾಮಾವಳಿಯನ್ನು ಅಲಂಕರಿಸಿ ಅಹಂಕಾರದಿಂದ ಮೆರೆಯುತ್ತಿರುವ ದೇಹವು, ಅದರೊಳಗಿರುವ ಜೀವಾತ್ಮವು ಹೋದಮೇಲೆ ಹೆಣವೆಂಬ ಒಂದೇ ಪದದಿಂದ ಕರೆಯುತ್ತಾರೆ ಎಂದು ಸನತ್ಸುಜಾತರು ಜೀವಿತದ ಅರೆಕ್ಷಣದ ಬದುಕಿನ ಸತ್ಯವನ್ನು ಹೇಳಿದರು.

ಅರ್ಥ:
ಅರಸ: ರಾಜ; ಒಡೆಯ: ಯಜಮಾನ; ದಂಡನಾಥ: ಸೇನಾಧಿಪತಿ; ಗುರು: ಆಚಾರ್ಯ; ಹಿರಿಯ: ದೊಡ್ಡವ; ಉತ್ತಮ: ಶ್ರೇಷ್ಠ; ದೈವಾಪರ: ದೇವರಲ್ಲಿ ನಂಬಿಕೆಯಿರುವವ; ಸಾಹಿತಿ: ಸಾಹಿತ್ಯಕೃಷಿ ಮಾದುವವ; ಸದಸ್ಯ: ಸಂಘ, ಸಮಿತಿ ಘಟಕಗಳಲ್ಲಿ ಸಂಬಂಧವನ್ನು ಹೊಂದಿರುವವನು; ಸತ್ಪುರುಷ: ಒಳ್ಳೆಯ ಮನುಷ್ಯ; ಪರಿಪರಿ: ಹಲವಾರು; ಗುಣ: ನಡತೆ, ಸ್ವಭಾವ; ನಾಮ: ಹೆಸರು; ಅಹಂಕರಿಸು: ನಾನು ಎಂಬುದನ್ನು ಮೆರೆಸು, ಗರ್ವ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ತೊಲಗು: ಹೊರಹೋಗು, ತ್ಯಜಿಸು; ಹೆಣ: ಜೀವವಿಲ್ಲದ, ಚರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಒಡೆಯನು +ದಂಡನಾಥನು
ಗುರು+ಹಿರಿಯನ್+ಉತ್ತಮನು +ದೈವಾ
ಪರನು +ಸಾಹಿತ್ಯನು+ ಸದಸ್ಯನು+ ಸತ್ಪುರುಷನೆಂದು
ಪರಿಪರಿಯ +ಗುಣನಾಮದೊಳ್+ಅಹಂ
ಕರಿಸುವರು +ಜೀವಾತ್ಮ +ತೊಲಗಿದೊಡ್
ಇರದೆ +ಹೆಣನೆಂದ್+ಎಂಬರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ೧೦ ರೀತಿಯ ಗುಣವಾಚಕಗಳನ್ನು ದೇಹಕ್ಕೆ ಹೇಳುವ ಪರಿಯನ್ನು ತೋರಿಸುವ ಪದ್ಯ
(೨) ‘ಸ’ ಕಾರದ ತ್ರಿವಳಿ ಪದ – ಸಾಹಿತ್ಯನು ಸದಸ್ಯನು ಸತ್ಪುರುಷನೆಂದು;

ಪದ್ಯ ೧೨೬: ಉತ್ತಮ ಅಧಮನೆಂದು ಹೇಗೆ ನಿರ್ಧರಿಸಬೇಕು?

ಜಾತರೂಪದ ಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತನೆಂಬುದನರಸ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೬ ಪದ್ಯ)

ತಾತ್ಪರ್ಯ:
ಬಂಗಾರದ ಗುಣವನ್ನು ಅಗ್ನಿಯಲ್ಲಿಟ್ಟು ಪರೀಕ್ಷೆಮಾಡಿ ತಿಳಿದುಕೊಳ್ಳುವಂತೆ, ಸತ್ಯ ಅಸತ್ಯಗಳೆಂಬ ಭೇದವನ್ನು ಅವರವರ ನೀತಿಯನ್ನು ಗಮನಿಸಿ ಇವನು ಉತ್ತಮ, ಈತ ಮಧ್ಯಮ ಮತ್ತು ಈತ ಅಧಮನೆಂದು ನಿರ್ಧರಿಸಬೇಕು.

ಅರ್ಥ:
ಜಾತ:ಹುಟ್ಟಿದುದು; ರೂಪ:ಆಕಾರ, ಜಾತರೂಪ: ಬಂಗಾರ; ಸ್ವಭಾವ; ಲೇಸು: ಒಳಿತು; ಹೊಲ್ಲೆಹ: ದೋಷ; ವೀತಿಹೋತ್ರ: ಅಗ್ನಿ; ದೇಹ: ತನು; ಕಾರಣ: ನಿಮಿತ್ತ; ಭೂತ:ಹಿಂದೆ ಆದುದು, ಪರಮಾತ್ಮ; ಸದಸತ್ತು: ಸತ್ಯ ಮತ್ತು ಅಸತ್ಯ; ಭೇದ: ಬಿರುಕು; ನೀತಿ: ಮಾರ್ಗ ದರ್ಶನ, ಒಳ್ಳೆಯ ನಡತೆ; ಮುಖ: ಆನನ; ಅರಿವು: ತಿಳಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದುದು; ಕನಿಯ: ಕೆಳಮಟ್ಟದ; ಅರಸ: ರಾಜ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಜಾತರೂಪದ +ಲೇಸು +ಹೊಲ್ಲೆಹ
ವೀತಿಹೋತ್ರನ+ ದೇಹಕಾರಣ
ಭೂತವಾಗಿಹುದ್+ಅವಗೆ +ಸತ್+ಅಸತ್ತುಗಳ+ ಭೇದವನು
ನೀತಿ+ ಮುಖದಿಂದ್+ಅರಿವುದ್+ಉತ್ತಮನ್
ಈತ +ಮಧ್ಯಮನ್+ಈತ +ಕನಿಯಸನ್
ಈತನ್+ಎಂಬುದನ್+ಅರಸ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಾತರೂಪದ ಲೇಸು ಹೊಲ್ಲೆಹ ವೀತಿಹೋತ್ರನ ದೇಹಕಾರಣ ಭೂತವಾಗಿಹುದವಗೆ ಸದಸತ್ತುಗಳ ಭೇದವನು
(೨) ಸದಸತ್ತು – ಸತ್ಯ ಮತ್ತು ಸುಳ್ಳನ್ನು ಒಂದೇ ಪದದಲ್ಲಿ ಮೂಡಿಸಿರುವುದು
(೩) ಉತ್ತಮ, ಮಧ್ಯಮ, ಅಧಮ – ಮನುಷ್ಯನ ಸ್ಥರಗಳನ್ನು ಹೇಳಿರುವುದು
(೪) ಜಾತ, ಭೂತ, ವೀತಿ, ನೀತಿ – ಪ್ರಾಸ ಪದಗಳು

ಪದ್ಯ ೫೧: ಮನುಷ್ಯರಲ್ಲಿ ಉತ್ತಮನಾದವನ ಲಕ್ಷಣಗಳೇನು?

ದಿನವ ಬಂಜೆಯ ಮಾಡದಾವಗ
ವಿನಯಪರನಹ ದೈವ ಗುರು ಪೂ
ಜನೆಯ ಬುಧಸೇವನೆಯ ಕಾಲೋಚಿತದಿ ವಿವರಿಸುವ
ಮನನದಿಂದಾ ಶ್ರವಣ ನಿಧಿ ಧ್ಯಾ
ಸನದೆ ದಿನವನು ಕಳೆಯುವಾತನು
ಮನುರರೊಳಗುತ್ತಮನಲೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮನುಷ್ಯರಲ್ಲಿ ಶ್ರೇಷ್ಠನಾದವನ ಲಕ್ಷಣಗಳನ್ನು ವಿದುರ ಇಲ್ಲಿ ವಿವರಿಸುತ್ತಾನೆ. ದಿನವನ್ನು ನಿಷ್ಪ್ರಯೋಜವಾಗಿ ಕಳೆಯದೆ, ವಿನಯ ಸಂಪನ್ನನು, ದೇವರ ಗುರುಗಳ ಆರಾಧನೆಯನ್ನು ಮಾಡುವ, ವಿದ್ವಾಂಸರ ಗೋಷ್ಠಿಗಳನ್ನು ಉಚಿತ ಕಾಲದಲ್ಲಿ ಮಾಡುತ್ತಾ, ಆತ್ಮ ವಿಚಾರದ ಶ್ರವಣ, ಮನನ, ಅದರ ಮೇಲೆ ಏಕಾಗ್ರಚಿತ್ತನಾಗಿ ಆಲೋಚಿಸುವವನು ಹೀಗೆ ಉಪಯುಕ್ತವಾಗಿ ದಿನವನ್ನು ಕಳೆಯುವವನು ಮನುಷ್ಯರಲ್ಲಿ ಉತ್ತಮನಾದವನು ಎಂದು ವಿದುರ ನುಡಿದ.

ಅರ್ಥ:
ದಿನ: ವಾರ; ಬಂಜೆ:ನಿಷ್ಫಲ; ವಿನಯ: ಒಳ್ಳೆಯತನ, ಸೌಜನ್ಯ; ದೈವ: ದೇವರು; ಗುರು: ಆಚಾರ್ಯ; ಪೂಜನೆ: ಆರಾಧನೆ, ಪೂಜೆ; ಬುಧ: ವಿದ್ವಾಂಸ; ಸೇವನೆ: ಉಪಚಾರ, ಶುಶ್ರೂಷೆ; ಕಾಲ: ಸಮಯ; ಉಚಿತ: ಸರಿಯಾದ; ವಿವರ: ವಿಸ್ತಾರ; ಮನನ: ಅಂತರಂಗದಲ್ಲಿ ಆಲೋಚಿಸುವುದು; ಶ್ರವಣ: ಕೇಳುವುದು; ನಿಧಿಧ್ಯಾಸನ: ಏಕಾಗ್ರತೆ; ಕಳೆಯುವ: ವ್ಯಯಿಸುವ; ಮನುಜ: ಮನುಷ್ಯ; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ದಿನವ +ಬಂಜೆಯ +ಮಾಡದ್+ಆವಗ
ವಿನಯಪರನಹ +ದೈವ +ಗುರು +ಪೂ
ಜನೆಯ +ಬುಧ+ಸೇವನೆಯ +ಕಾಲ+ಉಚಿತದಿ +ವಿವರಿಸುವ
ಮನನದಿಂದಾ +ಶ್ರವಣ +ನಿಧಿ ಧ್ಯಾ
ಸನದೆ +ದಿನವನು +ಕಳೆಯುವ್+ಆತನು
ಮನುರರೊಳಗ್+ಉತ್ತಮನಲೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ವ್ಯರ್ಥವಾಗಿ ಕಳೆಯಬಾರದು ಎಂದು ಹೇಳಲು ಬಂಜೆಯ ಮಾಡದ ಪದದ ಪ್ರಯೋಗ
(೨) ಶ್ರವಣ, ಮನನ, ನಿಧಿಧ್ಯಾಸನ – ಪದಗಳ ಪ್ರಯೋಗ
(೩) ದಿನವ – ೨ ಬಾರಿ ಪ್ರಯೋಗ

ಪದ್ಯ ೨೭: ಯಾವ ಮೂವರು ಸ್ವತಂತ್ರರಲ್ಲ?

ಪಿತನಿರಲು ದಾತಾರನಿರೆ ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾವ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ತಂದೆಯಿದ್ದರೆ ಮಗ, ಕೊಡುವವನಿದ್ದರೆ (ಒಡೆಯ) ದಾಸ, ಪತಿಯಿದ್ದರೆ ಸತಿ, ಈ ರೀತಿಯಾಗಿ, ಮಗ, ಸೇವಕ, ಹೆಂಡತಿ ಈ ಮೂವರು ಯಾವಕಾಲದಲ್ಲೂ ಸ್ವತಂತ್ರ್ಯರಲ್ಲ. ಭೂಮಿಯಲ್ಲಿ ಉತ್ತಮ, ಮಧ್ಯಮ, ಅಧಮ ಮನುಷ್ಯರ ಮನಸ್ಸಿನ ಇಂಗಿತ ಅವರ ಪ್ರಭಾವ, ಅವರ ವ್ಯಾಪ್ತಿಯನ್ನು ನೀನು ತಿಳಿಯೆಯಾ ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.

ಅರ್ಥ:
ಪಿತ: ತಂದೆ; ದಾತಾರ: ಕಾಪಾಡುವವ, ದಾನಿ; ನಿಜ: ಸತ್ಯ, ನೈಜ; ಪತಿ: ಗಂಡ; ಸುತ: ಮಗ; ದಾಸ: ಸೇವಕ, ಸತಿ: ಪತ್ನಿ; ತ್ರಿ: ಮೂರು; ಸ್ವಾತಂತ್ರ್ಯ: ಬಿಡುಗಡೆ; ಕಾಲ: ಸಮಯ; ಕ್ಷಿತಿ: ಭೂಮಿ; ಉತ್ತಮ: ಶ್ರೇಷ್ಠ; ಮಧ್ಯಮ: ಸಾಧಾರಣವಾದ; ಅಧಮ: ಕೀಳು; ಗತಿ: ಇರುವ ಸ್ಥಿತಿ; ಪುರುಷ:ಮನುಷ್ಯ, ಮಾನವ, ನರ, ವಿವೇಕ; ತ್ರಯ: ಮೂರು; ಇಂಗಿತ: ಆಶಯ, ಅಭಿಪ್ರಾಯ; ಆಯತ: ಉಚಿತವಾದ ಕ್ರಮ, ವಿಶಾಲವಾದ;ಅರಿ: ತಿಳಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪಿತನಿರಲು +ದಾತಾರನಿರೆ+ ನಿಜ
ಪತಿಯಿರಲು +ಸುತ +ದಾಸ +ಸತಿ+ಯೀ
ತ್ರಿತಯರುಂ +ಸ್ವಾತಂತ್ರ್ಯದವರಲ್+ಆವ +ಕಾಲದಲಿ
ಕ್ಷಿತಿಯೊಳ್+ಉತ್ತಮ +ಮಧ್ಯಮ+ಅಧಮ
ಗತಿಯ +ಪುರುಷ+ತ್ರಯವನ್+ಅವರ್+ಇಂ
ಗಿತವನ್+ಅವರ್+ಆಯತವನ್+ಅರಿವೈ+ ಭೂಪ +ಕೇಳೆಂದ

ಅಚ್ಚರಿ:
(೧) ಸುತ, ದಾಸ, ಸತಿ ಯರು ಸ್ವತಂತ್ರ್ಯರಲ್ಲ ಎಂದು ತಿಳಿಸುವ ಪದ್ಯ
(೨) ಉತ್ತಮ, ಮಧ್ಯಮ, ಅಧಮ ರೀತಿಯ ಪುರುಷರ ವರ್ಗವನ್ನು ಹೇಳುವ ಪದ್ಯ
(೩) ತ್ರಿತಯ, ತ್ರಯ – ಮೂರನ್ನು ಸೂಚಿಸುವ ಪದ
(೨) ಅವರ ಇಂಗಿತ ಅವರ ಆಯತ – ಅವರ್ ಪದದ ಬಳಕೆ