ಪದ್ಯ ೧೭: ಅಶ್ವತ್ಥಾಮನ ಬಾಣಗಳಿಗೆ ಯಾರು ತುತ್ತಾದರು?

ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ (ಶಲ್ಯ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇನ್ನೂರು ಆನೆಗಳು, ಸಾವಿರ ರಥಗಳು, ಸಾವಿರದ ಮುನ್ನೂರು ಕುದುರೆಗಳು, ಅರವತ್ತು ಸಾವಿರ ಕಾಲಾಳುಗಳು ಅಶ್ವತ್ಥಾಮನ ಬಾಣಗಳಿಗೆ ತುತ್ತಾದರು.

ಅರ್ಥ:
ಕಡಿ: ಸೀಳು; ಗಜ: ಆನೆ; ಧರೆ: ಭೂಮಿ; ಕುಡಿ: ತುದಿ, ಕೊನೆ; ಬಿದ್ದು: ಬೀಳು; ತೇರು: ಬಂಡಿ; ಸಾವಿರ: ಸಹಸ್ರ; ಅಶ್ವಚಯ: ಕುದುರೆಯ ಗುಂಪು; ಕಡುಗಲಿ: ಪರಾಕ್ರಮ; ಒಡಲು: ದೇಹ; ಪಾಯದಳ: ಸೈನಿಕ; ಉಗ್ಗಡ: ಉತ್ಕಟತೆ, ಅತಿಶಯ; ಡಾವರ: ಹಿಂಸೆ, ಕೋಟಲೆ; ಡಿಳ್ಳ: ಸಡಿಲು; ವೈರಿ: ಶತ್ರು; ಭಟ: ಸೈನಿಕ;

ಪದವಿಂಗಡಣೆ:
ಕಡಿವಡೆದುದ್+ಇನ್ನೂರು +ಗಜ +ಧರೆ
ಕುಡಿದು +ಬಿದ್ದುದು +ತೇರು +ಸಾವಿರ
ವಡಗುದರಿಯಾಯ್ತ್+ಅಶ್ವಚಯ+ ಸಾವಿರದ +ಮೂನೂರು
ಕಡುಗಲಿಗಳ್+ಅರುವತ್ತು +ಸಾವಿರ
ಒಡಲನಿಕ್ಕಿತು +ಪಾಯದಳವ್
ಉಗ್ಗಡದ+ ಡಾವರ +ಡಿಳ್ಳವಾದುದು +ವೈರಿ+ಸುಭಟರಿಗೆ

ಅಚ್ಚರಿ:
(೧) ಸಾವಿರ – ೨, ೪ ಸಾಲಿನ ಕೊನೆ ಪದ

ಪದ್ಯ ೨: ಸೂರ್ಯನು ಯಾವ ಯೋಚನೆಯಲ್ಲಿ ಹುಟ್ಟಿದನು?

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರೆಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ (ಶಲ್ಯ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಷ್ಮನು ನೆಗ್ಗಿಹೋದ, ದ್ರೋಣನು ದೇವತೆಗಳೊಡನೆ ಸೇರಿದನು. ನನ್ನ ಮಗನಿಗೆ ನನ್ನ ಸಂಗತಿಯನ್ನೇ ಹೇಳಿ ದುರ್ಬಲಗೊಳಿಸಿದನು. ಇಂದಿನ ಮಹಾಸಮರದಲ್ಲಿ ಶಲ್ಯನನ್ನು ಕಳೆದುಕೊಳ್ಳುವ ರೀತಿಯನ್ನು ನೋಡುತ್ತೇನೆ ಎಂದುಕೊಂಡನೋ ಎಂಬಂತೆ, ಸೂರ್ಯನು ಹುಟ್ಟಿದನು.

ಅರ್ಥ:
ನೆಗ್ಗು: ಕುಗ್ಗು, ಕುಸಿ; ಗಾಂಗೇಯ: ಭೀಷ್ಮ; ಅಮರ: ದೇವ; ಒಗ್ಗು: ಸೇರು; ಕಲಿ: ಶೂರ; ಅಗ್ಗಳಿಕೆ: ಶ್ರೇಷ್ಠ; ಊಣೆ: ನ್ಯೂನತೆ, ಕುಂದು; ಬೆರೆಸು: ಸೇರಿಸು; ಬಿಂಬ: ಕಾಂತಿ; ಉಗ್ಗಡ: ಉತ್ಕಟತೆ, ಅತಿಶಯ; ರಣ: ಯುದ್ಧರಂಗ; ನಗ್ಗು: ಕುಗ್ಗು, ಕುಸಿ; ಎಗ್ಗು: ದಡ್ಡತನ; ನೋಡು: ವೀಕ್ಷಿಸು; ರವಿ: ಸೂರ್ಯ; ಅಡರು: ಹೊರಬಂದ, ಮೇಲಕ್ಕೇರು; ಅಂಬರ: ಆಗಸ;

ಪದವಿಂಗಡಣೆ:
ನೆಗ್ಗಿದನು +ಗಾಂಗೇಯನ್+ಅಮರರೊಳ್
ಒಗ್ಗಿದನು +ಕಲಿದ್ರೋಣನ್+ಎನ್ನವನ್
ಅಗ್ಗಳಿಕೆಗ್+ಊಣೆಯವ +ಬೆರೆಸಿದನ್+ಎನ್ನ +ಬಿಂಬದಲಿ
ಉಗ್ಗಡದ +ರಣವಿದಕೆ +ಶಲ್ಯನನ್
ಅಗ್ಗಿಸುವನ್+ಈ+ ಕೌರವೇಶ್ವರನ್
ಎಗ್ಗ +ನೋಡುವೆನ್+ಎಂಬವೊಲು +ರವಿ+ಅಡರ್ದನ್+ಅಂಬರವ

ಅಚ್ಚರಿ:
(೧) ಬೆಳಗಾಯಿತು ಎಂದು ಹೇಳಲು – ರವಿಯಡರ್ದನಂಬರವ ಪದಗುಚ್ಛದ ಬಳಕೆ

ಪದ್ಯ ೨೨: ಅರ್ಜುನನ ಕುದುರೆಗಳೇಕೆ ಬಾಯಾರಿದವು?

ಕೆಡಹಿದನು ವಿಂದಾನುವಿಂದರ
ನಡಗುದರಿಯಾಯ್ತಖಿಳಬಲದು
ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು
ನಡುಹಗಲು ಪರಿಯಂತ ಕಾಳೆಗ
ಬಿಡದೆ ಬಲುಹಾಯ್ತಖಿಳ ವೇಗದ
ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ (ದ್ರೋಣ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನು ವಿಮ್ದಾನುವಿಂದರನ್ನು ಸಂಹರಿಸಿದನು. ಸಮಸ್ತ ಸೈನ್ಯದ ಮಾಂಸ ತರಿದುಹೋಯಿತು. ತಮ್ಮ ದೇಹವನ್ನು ಮಾರಿಕೊಂಡ ವೀರರು ಯುದ್ಧದಲ್ಲಿ ಅಸುನೀಗಿದರು. ನಡುಹಗಲಿನವರೆಗೆ ಮಹಾಯುದ್ಧವಾಯಿತು. ಅರ್ಜುನನ ರಥಕ್ಕೆ ಕಟ್ಟಿದ್ದ ದಿವ್ಯಾಶ್ವಗಳೂ ಶ್ರೀಕೃಷ್ಣನ ಕೂಗನ್ನು ಲೆಕ್ಕಿಸದೆ ಬಾಯಾರಿದವು.

ಅರ್ಥ:
ಕೆಡಹು: ನಾಶಮಾಡು; ಅಡಗು: ಮಾಂಸ; ಅರಿ: ಶತ್ರು; ಅಖಿಳ: ಎಲ್ಲಾ; ಬಲ: ಸೈನ್ಯ; ಉಗ್ಗಡ: ಉತ್ಕಟತೆ, ಅತಿಶಯ; ವೀರ: ಶೂರ; ಕಾದಿ: ಹೋರಾಡಿ; ಬಿದ್ದು: ಬೀಳು; ಕಾಯ: ದೇಹ; ಮಾರಿ: ಕ್ಷುದ್ರ ದೇವತೆ; ಮಾರು: ವಿಕ್ರಯಿಸು; ನಡು: ಮಧ್ಯ; ಹಗಲು: ದಿನ; ಪರಿಯಂತ: ವರೆಗೆ, ತನಕ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಅಖಿಳ: ಎಲ್ಲಾ; ವೇಗ: ರಭಸ; ಕಡು: ವಿಶೇಷ, ಅಧಿಕ; ಕುದುರೆ: ಅಶ್ವ; ಬಳಲು: ಆಯಾಸಗೊಳ್ಳು; ಬಗೆ: ರೀತಿ, ತರಹ; ಹರಿ: ಕೃಷ್ಣ; ಗರ್ಜನೆ: ಕೂಗು;

ಪದವಿಂಗಡಣೆ:
ಕೆಡಹಿದನು +ವಿಂದಾನುವಿಂದರನ್
ಅಡಗುದ್+ಅರಿಯಾಯ್ತ್+ಅಖಿಳ+ಬಲದ್
ಉಗ್ಗಡದ +ವೀರರು +ಕಾದಿ +ಬಿದ್ದುದು +ಕಾಯ+ಮಾರಿಗಳು
ನಡುಹಗಲು +ಪರಿಯಂತ +ಕಾಳೆಗ
ಬಿಡದೆ +ಬಲುಹಾಯ್ತ್+ಅಖಿಳ +ವೇಗದ
ಕಡುಗುದುರೆ +ಬಳಲಿದವು +ಬಗೆಯದೆ +ಹರಿಯ +ಗರ್ಜನೆಯ

ಅಚ್ಚರಿ:
(೧) ಅಖಿಳ – ೨, ೫ ಸಾಲಿನಲ್ಲಿ ಬರುವ ಪದ

ಪದ್ಯ ೧: ಕೌರವ ಪಾಂಡವ ಸೈನ್ಯದಲ್ಲಿ ಏನು ತೋರುತ್ತಿತ್ತು?

ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ನೀನು ಗಳಿಸಿದ ಪುಣ್ಯದ ಫಲವನ್ನು ಏನೆಂದು ಹೇಳಲಿ, ಮಹಾಗಜವಾದ ಸುಪ್ರತೀಕವು ಸತ್ತುಬಿದ್ದಿತು. ಯುದ್ಧದಲ್ಲಿ ಶತ್ರುಗಳ ಸೈನ್ಯಕ್ಕೆ ಸ್ವಲ್ಪ ಹಾನಿಯಾಯಿತು, ಅವರ ಸೈನ್ಯದಲ್ಲಿ ಅತಿ ಸಂತೋಷವಿದ್ದರೆ, ನಮ್ಮಲ್ಲಿ ಚಿಂತೆ, ಅಲ್ಲಿ ರಭಸ ಆವೇಶವಿದ್ದರೆ ಇಲ್ಲಿ ಮೌನ, ಅಲ್ಲಿ ಏಳಿಗೆ ಅಭ್ಯುದಯ ಕಾಣಿಸಿದರೆ ಇಲ್ಲಿ ಹಾನಿ ತೋರುತ್ತಿತ್ತು.

ಅರ್ಥ:
ನೆರಹು: ಗುಂಪು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಹೇಳು: ತಿಳಿಸು; ಉಗ್ಗಡ: ಉತ್ಕಟತೆ, ಅತಿಶಯ; ಆನೆ: ಗಜ; ಬಿದ್ದು: ಉರುಳು; ಕಾದು: ಹೋರಾಡು; ನಸು: ಕೊಂಚ, ಸ್ವಲ್ಪ; ಸೊಪ್ಪಾದು: ಹಾನಿಯಾಗು; ಅರಿ: ವೈರಿ; ಸೇನೆ: ಸೈನ್ಯ; ಧ್ಯಾನ: ಆತ್ಮಚಿಂತನೆ; ರಾಗ:ಹಿಗ್ಗು, ಸಂತೋಷ; ಮೋನ: ಮೌನ; ರಭಸ: ವೇಗ; ಹಾನಿ: ನಾಶ; ವೃದ್ಧಿ: ಹೆಚ್ಚಳ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀನು +ನೆರಹಿದ +ಸುಕೃತ+ ಫಲವದನ್
ಏನ +ಹೇಳುವೆನ್+ಇತ್ತಲ್+ಉಗ್ಗಡದ್
ಆನೆ +ಬಿದ್ದುದು +ಕಾದಿ +ನಸು +ಸೊಪ್ಪಾದುದ್+ಅರಿಸೇನೆ
ಧ್ಯಾನವಿತ್ತಲು +ರಾಗವತ್ತಲು
ಮೋನವಿತ್ತಲು +ರಭಸವತ್ತಲು
ಹಾನಿಯಿತ್ತಲು +ವೃದ್ಧಿಯತ್ತಲು +ಭೂಪ +ಕೇಳೆಂದ

ಅಚ್ಚರಿ:
(೧) ಇತ್ತಲು ಅತ್ತಲು ಪದದ ಬಳಕೆ
(೨) ಎಂಥಾ ಪುಣ್ಯನಿನ್ನದು ಎಂದು ಹಂಗಿಸುವ ಪರಿ – ನೀನು ನೆರಹಿದ ಸುಕೃತ ಫಲವದನೇನ ಹೇಳುವೆನ್

ಪದ್ಯ ೨೭: ಜಯದ್ರಥನು ಯಾವ ಆಜ್ಞೆಯನ್ನು ಮಾಡಿದನು?

ಸೆರೆ ಸಹಿತ ತಾನೈದುವೆನು ನಿಜ
ಪುರವ ನೀವಾನುವುದು ಭೀಮನ
ನಿರಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು
ಇರಿತಕಂಜದ ಸ್ವಾಮಿಕಾರ್ಯದ
ಹೊರಿಗೆಯುಳ್ಳ ನವಾಯ ಬಿರುದಿನ
ಮುರುಕವುಳ್ಳ ಭಟಾಳಿ ನಿಲುವುದು ತಡೆವುದರಿಭಟರ (ಅರಣ್ಯ ಪರ್ವ, ೨೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಸೆರೆ ಹಿಡಿದಿರುವ ದ್ರೌಪದಿಯೊಡನೆ ಊರಿಗೆ ಹೋಗುತ್ತೇನೆ, ನೀವು ಭೀಮನನ್ನು ಇರಿದು ಹಾಕಿರಿ, ಅರ್ಜುನನೊಡನೆ ನಿರ್ಣಾಯಕ ಯುದ್ಧವಿದು, ಶತ್ರುವಿನ ಇರಿತಕ್ಕೆ ಅಂಜದೆ, ಸ್ವಾಮಿ ಕಾರ್ಯದ ಹೊಣೆ ಹೊತ್ತ ಬಿರುದಿರುವ ಯೋಧರು ನಿಂತು ಶತ್ರುಗಳನ್ನು ತಡೆಯಿರಿ ಎಂದು ಜಯದ್ರಥನು ಆಜ್ಞೆಮಾಡಿದನು.

ಅರ್ಥ:
ಸೆರೆ: ಬಂಧನ; ಸಹಿತ: ಜೊತೆ; ಐದು: ಬಂದು ಸೇರು; ನಿಜ: ತನ್ನ; ಪುರ: ಊರು; ಆನು: ಎದುರಿಸು; ಇರಿ: ತಿವಿ, ಚುಚ್ಚು; ಉಗ್ಗಡ: ಉತ್ಕಟತೆ, ಅತಿಶಯ; ಸಮರ: ಯುದ್ಧ; ಅಂಜು: ಹೆದರು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಹೊರಿಗೆ: ಭಾರ, ಹೊರೆ; ನವಾಯ: ಹೊಸದಾದ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಮುರುಕ:ಸೊಕ್ಕು, ಗರ್ವ; ಭಟಾಳಿ: ಸೈನಿಕರ ಗುಂಪು; ನಿಲು: ನಿಲ್ಲು; ತಡೆ: ಅಡ್ಡಹಾಕು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ಸೆರೆ +ಸಹಿತ +ತಾನ್+ಐದುವೆನು+ ನಿಜ
ಪುರವ+ ನೀನ್+ಆನುವುದು +ಭೀಮನನ್
ಇರಿವುದ್+ಅರ್ಜುನನೊಡನೆ +ನಿಮಗ್+ಉಗ್ಗಡದ +ಸಮರವಿದು
ಇರಿತಕ್+ಅಂಜದ +ಸ್ವಾಮಿ+ಕಾರ್ಯದ
ಹೊರಿಗೆಯುಳ್ಳ +ನವಾಯ +ಬಿರುದಿನ
ಮುರುಕವುಳ್ಳ +ಭಟಾಳಿ +ನಿಲುವುದು +ತಡೆವುದ್+ಅರಿ+ಭಟರ

ಅಚ್ಚರಿ:
(೧) ಸೈನ್ಯವನ್ನು ಹುರಿದುಂಬಿಸುವ ಪರಿ – ಇರಿತಕಂಜದ ಸ್ವಾಮಿಕಾರ್ಯದಹೊರಿಗೆಯುಳ್ಳ ನವಾಯ ಬಿರುದಿನ ಮುರುಕವುಳ್ಳ ಭಟಾಳಿ ನಿಲುವುದು