ಪದ್ಯ ೧೫: ಅರ್ಜುನನನ್ನು ಯಾರು ಅಡ್ಡ ತಡೆದರು?

ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ (ದ್ರೋಣ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರುತಾಯುಧನು ಸತ್ತನು. ಮಹಾಭಯಂಕರವಾದ ಕದನವಾಯಿತು. ಕಾಂಭೋಜದ ದೊರೆಯು ಅರ್ಜುನನನ್ನು ತಡೆದು ಬಾಣಗಳ ಮಳೆಗೆರೆದನು. ಅವನ ಸಾಹಸಕ್ಕೆ ಮೆಚ್ಚಿ ಅವನೊಡನೆ ಬೇಸರವಿಲ್ಲದೆ ಅರ್ಜುನನು ಕಾದಿದನು.

ಅರ್ಥ:
ಮಡಿ: ಮರಣ ಹೊಂದು; ರಣ: ಯುದ್ಧಭೂಮಿ; ಈಶ: ಒಡೆಯ; ತುಡುಕು: ಬೇಗನೆ ಹಿಡಿಯುವುದು: ಆತುರದಿಂದ ಕೂಡಿರುವಿಕೆ, ಗಡಿಬಿಡಿ; ಕದನ: ಯುದ್ಧ; ಸುತ: ಮಗ; ಸೂಸು: ಹರಡು; ಸರಳು: ಬಾಣ; ಸಾಸ: ಸಾಹಸ, ಪರಾಕ್ರಮ; ಮನ್ನಿಸು: ಗೌರವಿಸು; ಬೇಸರ: ನೋವು; ಕೊಂಡಾಡು: ಹೊಗಳು; ಕಾದಿ: ಹೋರಾಡು; ನಿಮಿಷ: ಕ್ಷಣ;

ಪದವಿಂಗಡಣೆ:
ಆ+ ಶ್ರುತಾಯುಧ +ಮಡಿದನ್+ಅಲ್ಲಿ +ಮ
ಹಾಸುರದ +ರಣವಾಯ್ತು +ಕಾಂಭೋ
ಜೇಶ +ಕೈ+ತುಡುಕಿದನು+ ಕದನವನ್+ಇಂದ್ರಸುತನೊಡನೆ
ಸೂಸಿದನು +ಸರಳುಗಳನ್+ಆತನ
ಸಾಸವನು +ಮನ್ನಿಸುತ +ಫಲುಗುಣ
ಬೇಸರದೆ +ಕೊಂಡಾಡಿ +ಕಾದಿದನ್+ಒಂದು +ನಿಮಿಷದಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೂಸಿದನು ಸರಳುಗಳನಾತನ ಸಾಸವನು

ಪದ್ಯ ೫೧: ಅಭಿಮನ್ಯುವು ಕರ್ಣನನ್ನು ಹೇಗೆ ಹಿಂದಕ್ಕಟ್ಟಿದನು?

ಕರದ ಕರವಾಲುಡಿಯೆ ಬಿಡೆ ಹ
ಲ್ಮೊರೆದು ಭರದಲಿ ಗದೆಯ ಕೊಂಡ
ಬ್ಬರಿಸಿ ಕೋಪದಲಗಿದು ಹರಿಗೆಯ ಹಿಡಿದು ಮುಂದಣಿಗೆ
ಅರರೆ ಸಮ್ಮುಖವಾಗೆನುತ ಸಂ
ಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲಿಂದ್ರಸುತ ಸೂನು (ದ್ರೋಣ ಪರ್ವ, ೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಖಡ್ಗವು ತುಂಡಾಗಿ ಬೀಳಲು, ಹಲ್ಲುಕಡಿದು ಅಭಿಮನ್ಯುವು ರಭಸದಿಂದ ಗದೆಯನ್ನು ಹಿಡಿದು ಕೋಪದಿಂದ ಗುರಾಣಿಯನ್ನು ಹಿಡಿದು ಎದುರಿಗೆ ಬಾ ಎಂದು ಕೂಗಿ ಕರ್ಣನನ್ನು ಅಪ್ಪಳಿಸಿ ಐನೂರು ಹೆಜ್ಜೆಯಷ್ಟು ಹಿಂದಕ್ಕಟ್ಟಿದನು.

ಅರ್ಥ:
ಕರ: ಕೈ, ಹಸ್ತ; ಕರವಾಳ: ಕತ್ತಿ; ಉಡಿ: ಮುರಿ; ಬಿಡು: ತೊರೆ; ಹಲ್ಲು: ದಂತ; ಮೊರೆ: ಗರ್ಜಿಸು, ಅಬ್ಬರಿಸು; ಭರ: ವೇಗ; ಗದೆ: ಮುದ್ಗರ; ಕೊಂಡು: ಧರಿಸು, ಪಡೆ; ಅಬ್ಬರಿಸು: ಗರ್ಜಿಸು; ಕೋಪ: ಖತಿ; ಅಗಿ: ಕಚ್ಚು; ಹರಿಗೆ: ತಲೆಪೆರಿಗೆ, ಗುರಾಣಿ; ಹಿಡಿ: ಗ್ರಹಿಸು; ಮುಂದಣಿ: ಮುಂಭಾಗ; ಅರರೆ: ಅಬ್ಬಾ; ಸಮ್ಮುಖ: ಎದುರು; ಸಂಗರ: ಯುದ್ಧ; ಉರವಣಿಸು: ಆತುರಿಸು; ತೆರಳು: ಹೋಗು; ಹಜ್ಜೆ: ಪಾದ; ಸುತ: ಮಗ; ಸೂನು: ಮಗ;

ಪದವಿಂಗಡಣೆ:
ಕರದ +ಕರವಾಲ್+ಉಡಿಯೆ +ಬಿಡೆ +ಹಲ್
ಮೊರೆದು +ಭರದಲಿ +ಗದೆಯ +ಕೊಂಡ್
ಅಬ್ಬರಿಸಿ +ಕೋಪದಲ್+ಅಗಿದು +ಹರಿಗೆಯ +ಹಿಡಿದು +ಮುಂದಣಿಗೆ
ಅರರೆ+ ಸಮ್ಮುಖವಾಗೆನುತ +ಸಂ
ಗರದೊಳ್+ಉರವಣಿಸಿದನು +ಕರ್ಣನ
ತೆರಳಿಚಿದನ್+ಐನೂರು +ಹಜ್ಜೆಯಲ್+ಇಂದ್ರಸುತ+ ಸೂನು

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತ ಸೂನು ಎಂದು ಕರೆದಿರುವುದು
(೨) ಅಭಿಮನ್ಯುವಿನ ಶೌರ್ಯ – ಅರರೆ ಸಮ್ಮುಖವಾಗೆನುತ ಸಂಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲ್

ಪದ್ಯ ೪೫: ದುಶ್ಯಾಸನು ಅಭಿಮನ್ಯುವನ್ನು ಹೇಗೆ ಆಕ್ರಮಣ ಮಾಡಿದನು?

ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಲುವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ (ದ್ರೋಣ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಉತ್ತರಿಸುತ್ತಾ, ಸಲ್ಲದ ಮಾತಾಡಬೇಡ, ನಿನ್ನ ಬಿಲ್ಲುಗಾರಿಕೆಯ ಚಾತುರ್ಯವಿದ್ದರೆ ಅದನ್ನು ತೋರಿಸು, ಹೆದರುಪುಕ್ಕರನು ಸೋಲಿಸಿ ಅಹಂಕಾರದ ಅತಿರೇಕಕ್ಕೆ ತೆರಳುವ ಜಾಗವಿದಲ್ಲ ಎಂದು ನೂರುಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಕಾತರ: ಕಳವಳ, ಉತ್ಸುಕತೆ; ಬಾಲ: ಚಿಕ್ಕವ, ಮಗು; ಭಾಷೆ: ಮಾತು; ಕಲಿತ: ಅಭ್ಯಾಸಮಾಡಿದ; ಬಲು: ಶಕ್ತಿ; ಅತಿಶಯ: ಹೆಚ್ಚು, ಅಧಿಕ; ತೋರು: ಪ್ರದರ್ಶಿಸು; ಕೈಗುಣ: ಚಾಣಾಕ್ಷತೆ; ಭೀತ: ಭಯ; ಭಟ: ಸೈನಿಕ; ಹೊಳ್ಳು: ಸಾರವಿಲ್ಲದ; ಮದ: ಅಹಂಕಾರ; ಅತಿರೇಕ: ಅತಿಶಯ, ರೂಢಿಗೆ ವಿರೋಧವಾದ ನಡೆ; ಠಾವು: ಎಡೆ, ಸ್ಥಳ, ತಾಣ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಬಾಣ: ಅಂಬು, ಶರ; ಇಂದ್ರ: ಸುರೇಶ; ಸುತ: ಮಗ;

ಪದವಿಂಗಡಣೆ:
ಕಾತರಿಸದಿರು +ಬಾಲ +ಭಾಷೆಗಳ್
ಏತಕಿವು +ನೀ +ಕಲಿತ +ಬಲುವ್
ಇದ್ +ಅತಿಶಯವುಂಟಾದಡ್+ಎಮ್ಮೊಳು +ತೋರು +ಕೈಗುಣವ
ಭೀತ +ಭಟರನು +ಹೊಳ್ಳು+ಕಳೆದ +ಮದ
ಅತಿರೇಕದ +ಠಾವಿದಲ್ಲೆಂದ್
ಈತನ್+ಎಚ್ಚನು +ನೂರು +ಬಾಣದಲ್+ಇಂದ್ರಸುತ+ ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತಸುತನ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹಂಗಿಸುವ ಪರಿ – ಭೀತ ಭಟರನು ಹೊಳ್ಳುಗಳೆದ ಮದಾತಿರೇಕದ ಠಾವಿ

ಪದ್ಯ ೧೯: ಕರ್ಣನು ದುರ್ಯೋಧನನ ಮಾತನ್ನು ಹೇಗೆ ಸಮರ್ಥಿಸಿದನು?

ಭಾಷೆಯೇಕಿವನೊಡನೆ ದ್ರೌಪದಿ
ದಾಸಿಯಲ್ಲೆಂಬವನ ದಿವಸವ
ದೇಸು ಬಲಹೋ ಪೂತು ಮಝತಾನಿಂದ್ರಸುತನೆಂಬ
ಐಸರಲಿ ದೇವೇಂದ್ರ ತೃಣಗಡ
ವೈಸಲೇ ನೀ ಮುನಿದಡೀ ನುಡಿ
ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ (ಸಭಾ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನು ದುರ್ಯೋಧನನ ಗರ್ಜನೆಯನ್ನು ಕೇಳಿ, ರಾಜಾ, ಇವನೊಡನೆ ಏನು ಮಾತು, ದ್ರೌಪದಿ ದಾಸಿಯಲ್ಲ ಎನ್ನುವವನು ಇನ್ನೆಷ್ಟು ದಿನ ಉಳಿದಾನು? ತಾನು ಇಂದ್ರನ ಮಗನಾದ ಮಾತ್ರಕ್ಕೆ ದೇವೇಂದ್ರನು ಇವನೆದುರು ಹುಲ್ಲುಕಡ್ಡಿಯಾದನೋ? ನೀನು ಸಿಟ್ಟಾದರೆ ನಿನ್ನ ದಾಸರಾಗಿರುವ ಈ ಕ್ಷುಲ್ಲಕರಿಗೆ ಇದಾವುದೂ ದಕ್ಕುವುದಿಲ್ಲ ಎಂದು ಹೇಳಿದನು.

ಅರ್ಥ:
ಭಾಷೆ: ನುಡಿ, ಮಾತು; ದಾಸಿ: ಸೇವಕಿ, ತೊತ್ತು; ದಿವಸ: ದಿನ; ಏಸು: ಎಷ್ಟು; ಬಲಹು: ಶಕ್ತಿ; ಪೂತು: ಭಲೇ, ಭೇಷ್; ಮಝ: ಕೊಂಡಾಟದ ಒಂದು ಮಾತು; ಸುತ: ಮಗ; ಐಸರ್: ಅಷ್ಟರಲ್ಲಿ; ದೇವೇಂದ್ರ: ಇಂದ್ರ; ತೃಣ: ಹುಲ್ಲು; ಗಡ: ಅಲ್ಲವೇ; ಐಸಲೇ:ಅಲ್ಲವೇ; ಮುನಿ: ಕೋಪ; ನುಡಿ: ಮಾತು; ಭಾವ: ಭಾವನೆ, ಚಿತ್ತವೃತ್ತಿ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ;

ಪದವಿಂಗಡಣೆ:
ಭಾಷೆಯೇಕ್+ಇವನೊಡನೆ +ದ್ರೌಪದಿ
ದಾಸಿಯಲ್ಲೆಂಬವನ+ ದಿವಸವದ್
ಏಸು +ಬಲಹೋ +ಪೂತು +ಮಝತಾನ್+ಇಂದ್ರಸುತನೆಂಬ
ಐಸರಲಿ+ ದೇವೇಂದ್ರ +ತೃಣ+ಗಡವ್
ಐಸಲೇ +ನೀ +ಮುನಿದಡೀ +ನುಡಿ
ದಾಸಭಾವದ+ ಬಣಗುಗಳಿಗ್+ಏಕೆಂದನಾ ಕರ್ಣ

ಅಚ್ಚರಿ:
(೧) ಏಸು, ಐಸಲೇ, ಐಸರಲಿ – ಪದಗಳ ಬಳಕೆ
(೨) ಅರ್ಜುನನನ್ನು ಹಂಗಿಸುವ ಪರಿ – ಪೂತು ಮಝತಾನಿಂದ್ರಸುತನೆಂಬ ಐಸರಲಿ ದೇವೇಂದ್ರ ತೃಣಗಡ

ಪದ್ಯ ೩೬: ಅರ್ಜುನನು ಹೇಗೆ ಪರ್ವತಾಸ್ತ್ರವನ್ನು ಕಡಿದನು?

ಗಿರಿಯ ಡೆಂಕಣಿಜಂತ್ರವನು ತರ
ಹರಿಸುವವರಾರರಸ ಢಾವಣಿ
ಗಿರಿಯ ಧಾಳಿಗೆ ಧಾತುಗೆಟ್ಟುದು ಪಾಂಡುಸುತಸೇನೆ
ಅರರೆ ಕೆಡೆಕೆಡೆಯೆನುತ ವಜ್ರದ
ಸರಳನುಗಿದನದಾವ ವಹಿಲದೊ
ಳುರುಳೆಗಡಿದನು ಪರ್ವತಾಸ್ತ್ರವನಿಂದ್ರಸುತ ನಗುತ (ಕರ್ಣ ಪರ್ವ, ೨೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನು ಬಿಟ್ಟ ಪರ್ವತಾಸ್ತ್ರದ ಡೆಂಕಣಿಯಂತ್ರವನ್ನು ತಡೆದುಕೊಳ್ಳಲು ಯಾರಿಗೆ ಸಾಧ್ಯವಾದೀತು? ಪಾಂಡವ ಸೇನೆಯು ಪರ್ವತಗಳ ಆಕ್ರಮಣಕ್ಕೆ ಸತ್ವಗುಂದಿತು. ಅರ್ಜುನನು ಪರ್ವತಾಸ್ತ್ರಗಳನ್ನು ನೋಡಿ ಅದಕ್ಕೆ ಅಣುಕಿಸುವಂತೆ ಬೀಳು ಬೀಳು ಎನ್ನುತ್ತಾ ಅತಿವೇಗದಿಂದ ವಜ್ರಾಸ್ತ್ರವನ್ನು ಹೂಡಿ ಪರ್ವತಾಸ್ತ್ರವನ್ನು ಕಡಿದು ಹಾಕಿದನೆಂದು ಸಂಜಯನು ವಿವರಿಸಿದನು.

ಅರ್ಥ:
ಗಿರಿ: ಬೆಟ್ಟ; ಡೆಂಕಣಿ: ಒಂದುಬಗೆಯ ಆಯುಧ; ಜಂತ್ರ: ಯಂತ್ರ; ತರಹರಿಸು: ಸೈರಿಸು; ಅರಸ: ರಾಜ; ಢಾವಣಿ: ಜೋರಾದ; ಧಾಳಿ: ಆಕ್ರಮಣ; ಧಾತುಗೆಟ್ಟು: ಶಕ್ತಿಗುಂದು; ಸುತ: ಮಕ್ಕಳು; ಸೇನೆ: ಸೈನ್ಯ; ಅರರೆ: ಅಯ್ಯೋ, ಓಹೋ; ಕೆಡೆ: ಬೀಳು; ವಜ್ರ: ಗಟ್ಟಿಯಾದ, ಅಸ್ತ್ರದ ಹೆಸರು; ಸರಳು: ಬಾಣ; ಉಗಿ: ಹೊರಹಾಕು; ವಹಿಲ: ಬೇಗ, ತ್ವರೆ; ಉರುಳು: ಕಡಿದುಹಾಕು, ಕೆಳಕ್ಕೆ ಬೀಳಿಸು; ಪರ್ವತ: ಬೆಟ್ಟ; ಅಸ್ತ್ರ: ಆಯುಧ; ಇಂದ್ರ: ಶಕ್ರ; ಸುತ: ಮಗ; ನಗು: ಸಂತೋಷ;

ಪದವಿಂಗಡಣೆ:
ಗಿರಿಯ +ಡೆಂಕಣಿ+ಜಂತ್ರವನು +ತರ
ಹರಿಸುವವರ್+ಆರ್+ಅರಸ +ಢಾವಣಿ
ಗಿರಿಯ +ಧಾಳಿಗೆ +ಧಾತುಗೆಟ್ಟುದು +ಪಾಂಡುಸುತಸೇನೆ
ಅರರೆ+ ಕೆಡೆಕೆಡೆ+ಎನುತ +ವಜ್ರದ
ಸರಳನ್+ಉಗಿದನ್+ಅದಾವ +ವಹಿಲದೊಳ್
ಉರುಳೆ +ಕಡಿದನು +ಪರ್ವತಾಸ್ತ್ರವನ್+ಇಂದ್ರಸುತ+ ನಗುತ

ಅಚ್ಚರಿ:
(೧) ಅರ್ಜುನನನ್ನು ಇಂದ್ರ ಸುತ ಎಂದು ಕರೆದಿರುವುದು
(೨) ಪರ್ವತಾಸ್ತ್ರವನ್ನು ನೋಡಿ ಅರ್ಜುನನ ಮಾತು – ಅರರೆ ಕಡೆಕಡೆ
(೩) ಅರ್ಜುನ ಬಾಣಪ್ರಯೋಗದ ವೇಗ – ವಜ್ರದ ಸರಳನುಗಿದನದಾವ ವಹಿಲದೊಳುರುಳೆಗಡಿದನು