ಪದ್ಯ ೨೩: ಭೀಮನೇಕೆ ದುಃಖಿಸಿದನು?

ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ (ಗದಾ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇತ್ತ ನಿನ್ನ ಮಗನಾದ ಸುದರ್ಶನನು ಅಹಂಕಾರದಿಮ್ದ ನುರರುವತ್ತು ಆನೆಗಳೊಡನೆ ಭೀಮನನ್ನು ಇದಿರಿಸಿದನು. ಭೀಮನಾದರೋ ಶತ್ರು ಸೈನ್ಯದ ಆನೆಗಳನ್ನು ಕೊಲ್ಲಲೆಂದೇ ಕುಂತಿಯು ನನ್ನನ್ನು ಹೆತ್ತಿದ್ದಾಳೆ, ಇವನ್ನು ಕೊಂದರೆ ಮತ್ತೆ ಇವು ಸಿಕ್ಕಲಾರವು ಎಂದು ದುಃಖಿಸಿದನು.

ಅರ್ಥ:
ಕೂಡೆ: ಜೊತೆ; ಗಜ: ಆನೆ; ಸಹಿತ: ಜೊತೆ; ಅರಿಭಟ: ವೈರಿ; ಇದಿರು: ಎದುರು; ಅಂಧನೃಪ: ಕಣ್ಣಿಲ್ಲದ ರಾಜ (ಧೃತರಾಷ್ಟ್ರ) ಸೂನು: ಮಗ; ಹೆತ್ತು: ಜನ್ಮನೀಡು; ಅವ್ವೆ: ತಾಯಿ; ವಿರೋಧಿ: ವೈರಿ; ಸೇನೆ: ಸೈನ್ಯ; ಗಜಘಟೆ: ಆನೆಗಳ ಗುಂಪು; ಓಸುಗ: ಓಸ್ಕರ; ದೊರಕು: ಪಡೆ; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು;

ಪದವಿಂಗಡಣೆ:
ಇತ್ತ+ ಭೀಮನ +ಕೂಡೆ +ನೂರ್+ಅರು
ವತ್ತು +ಗಜ +ಸಹಿತ್+ಅರಿಭಟರೊಳು
ದ್ವೃತ್ತನ್+ಇದಿರಾದನು+ ಸುದರ್ಶನನ್+ಅಂಧನೃಪಸೂನು
ಹೆತ್ತಳವ್ವೆ +ವಿರೋಧಿ+ಸೇನೆಯ
ಮತ್ತ +ಗಜಘಟೆಗ್+ಓಸುಗರವ್+ಇವು
ಮತ್ತೆ +ದೊರಕವು+ ಕೊಂದಡೆಂದ್+ಉಮ್ಮಳಿಸಿದನು +ಭೀಮ

ಅಚ್ಚರಿ:
(೧) ಭೀಮನು ತನ್ನ ಶಕ್ತಿಯ ಬಗ್ಗೆ ಹೇಳುವ ಪರಿ – ಹೆತ್ತಳವ್ವೆ ವಿರೋಧಿಸೇನೆಯಮತ್ತ ಗಜಘಟೆಗೋಸುಗ

ಪದ್ಯ ೪೭: ಧರ್ಮಜನ ಸೈನ್ಯದ ಸ್ಥಿತಿ ಹೇಗಾಯಿತು?

ನೂರು ರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ
ಮೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ (ಗದಾ ಪರ್ವ, ೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ನೂರು ರಥಗಲ, ನಾಲ್ಕುನೂರು ಕುದುರೆಗಳ ಸಹಾಯದಿಂದ ಕೌರವನು ಮುನ್ನುಗ್ಗಿದನು. ಧರ್ಮಜನ ಸೈನ್ಯ ನಿಮಿಷದಲ್ಲಿ ಪುಡಿಯಾಯಿತು. ಆನೆಗಳು ಮುನ್ನುಗ್ಗಿದವು, ಜೋದರು ದೊರೆಗಳಲ್ಲಿ ತೋರಿಸಿರಿ ಎಂದು ಗರ್ಜಿಸಿ ಧರ್ಮಜನ ಮೇಲೆ ಬಾಣಗಳನ್ನು ಬಿಟ್ಟರು.

ಅರ್ಥ:
ನೂರು: ಶತ; ರಥ: ಬಂಡಿ; ಬಲು: ಭಾರೀ; ಕುದುರೆ: ಅಶ್ವ; ಸೂಠಿ: ವೇಗ; ಏರು: ಮೇಲೆ ಹತ್ತು; ದಳ: ಸೈನ್ಯ; ನುಗ್ಗು: ತಳ್ಳು; ನಿಮಿಷ: ಕಾಲದ ಪ್ರಮಾಣ; ಮೀರು: ಅತಿಕ್ರಮಿಸು, ದಾಟು; ಗಜಘಟೆ: ಆನೆಗಳ ಗುಂಪು; ತೋರು: ಗೋಚರಿಸು; ದೊರೆ: ರಾಜ; ಬೊಬ್ಬಿರಿ: ಗರ್ಜಿಸು; ಅರಿ: ವೈರಿ; ಭಟ: ಸೈನಿಕ; ನೃಪ: ರಾಜ; ಜೋದ: ಆನೆಮೇಲೆ ಕುಳಿತು ಯುದ್ಧ ಮಾಡುವವ; ಅಂಬು: ಬಾಣ;

ಪದವಿಂಗಡಣೆ:
ನೂರು +ರಥದಲಿ +ಬಲು+ಕುದುರೆ +ನಾ
ನೂರರಲಿ +ಕುರುರಾಯ+ ಸೂಠಿಯಲ್
ಏರಿದನು +ಧರ್ಮಜನ +ದಳ +ನುಗ್ಗಾಯ್ತು +ನಿಮಿಷದಲಿ
ಮೀರಿದವು +ಗಜಘಟೆಗಳ್+ಆವೆಡೆ
ತೋರು +ದೊರೆಗಳನ್+ಎನುತ +ಬೊಬ್ಬಿರಿದ್
ಏರಿಸಿದರ್+ಅರಿಭಟರು +ನೃಪತಿಗೆ +ಜೋದರ್+ಅಂಬುಗಳ

ಅಚ್ಚರಿ:
(೧) ನೂರು, ತೋರು – ಪ್ರಾಸ ಪದಗಳು
(೨) ದೊರೆ, ರಾಯ – ಸಮಾನಾರ್ಥಕ ಪದ

ಪದ್ಯ ೬: ಅಶ್ವತ್ಥಾಮನ ಬೆಂಬಲಕ್ಕೆ ಯಾರು ಬಂದರು?

ಅರಸ ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ (ಶಲ್ಯ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನು ಅರ್ಜುನನ ರಥವನ್ನು ಹಿಂದಿಟ್ಟು, ಅಡ್ಡಹಾದು ಅಶ್ವತ್ಥಾಮನನ್ನಿದಿರಿಸಿದನು. ನಕುಲ ಸಾತ್ಯಕಿಗಳೂ ಬಂದು ಅವನ ಮೇಲೆ ಬಾಣಗಲನ್ನು ಬಿಡಲು ಅವರ ಬಾಣಗಳಿಂದ ಗುರುಸುತನು ನೆನೆದುಹೋದನು. ಉಗ್ರವಾದ ಈ ಯುದ್ಧವನ್ನು ಕಂಡು ಕೌರವನು ಅತಿವೇಗದಿಂದ ಅಶ್ವತ್ಥಾಮನಿಗೆ ಬೆಂಬಲವಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅಡಹಾಯ್ದು: ಮಧ್ಯಪ್ರವೇಶಿಸು; ವರ: ಶ್ರೇಷ್ಠ; ರಥ: ಬಂಡಿ; ಹಿಂದೆ: ಹಿಂಭಾಗ; ಪವನಜ: ಭೀಮ; ಉರವಣೆ: ಅವಸರ; ಸಹಿತ: ಜೊತೆ; ಸುತ: ಮಗ; ಸರಳ: ಬಾಣ; ಸರಿವಳೆ: ಜೋರಾದ ಮಳೆ; ಸಘಾಡ: ರಭಸ, ವೇಗ; ಅರಿ: ವೈರಿ; ಭಟ: ಸೈನಿಕ; ನನೆ: ತೋಯು, ಒದ್ದೆಯಾಗು; ಮಹೋಗ್ರ: ತುಂಬಾ ತೀಕ್ಷ್ಣವಾದ; ಧುರ: ಯುದ್ಧ, ಕಾಳಗ; ಕಂಡು: ನೋಡು; ನೃಪತಿ: ರಾಜ; ಬಂದನು: ಆಗಮಿಸು; ಸೂಠಿ: ವೇಗ;

ಪದವಿಂಗಡಣೆ:
ಅರಸ +ಕೇಳ್+ಅಡಹಾಯ್ದು +ಪಾರ್ಥನ
ವರ +ರಥವ +ಹಿಂದಿಕ್ಕಿ +ಪವನಜನ್
ಉರವಣಿಸಿದನು +ನಕುಲ +ಸಾತ್ಯಕಿ +ಸಹಿತ +ಗುರುಸುತನ
ಸರಳ +ಸರಿವಳೆಗಳ +ಸಘಾಡದಲ್
ಅರಿಭಟನು +ನನೆದನು +ಮಹೋಗ್ರದ
ಧುರವ +ಕಂಡನು +ನೃಪತಿ +ಬಂದನು +ಬಿಟ್ಟ +ಸೂಠಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರಳ ಸರಿವಳೆಗಳ ಸಘಾಡದ

ಪದ್ಯ ೪೧: ಅಭಿಮನ್ಯುವಿನ ಹಿಂದೆ ಯಾರು ಹೋಗುತ್ತಿದ್ದರು?

ಅರಿಭಟರ ಬೊಬ್ಬೆಗಳ ಮೊಳಗಿನೊ
ಳರುಣಜಲ ವರುಷದಲಿ ರಿಪುಗಳ
ಕೊರಳ ಬನದಲಿ ಕುಣಿದುವೀತನ ಖಡ್ಗವನಕೇಕಿ
ಸುರಿವ ಖಂಡದ ರಕುತ ಧಾರೆಗೆ
ತರತರದಿ ಬಾಯ್ದೆಗೆದು ಶಾಕಿನಿ
ಯರ ಸಮೂಹವು ಬಳಿಯಲೈದಿತು ಪಾರ್ಥನಂದನನ (ದ್ರೋಣ ಪರ್ವ, ೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶತ್ರು ಸೈನಿಕರ ಗರ್ಜನೆಯೇ ಗುಡುಗು, ಸಿಡಿಲು, ಅವರ ದೇಹದಿಂದ ಹೊರಹೊಮ್ಮುವ ರಕ್ತವೇ ಮಳೆ, ಶತ್ರುಗಳ ಕುತ್ತಿಗೆಗಳೇ ಅರಣ್ಯ, ಅಭಿಮನ್ಯುವಿನ ಖಡ್ಗವೆಂಬ ನವಿಲು ಈ ಮಳೆಗಾಲದಲ್ಲಿ ಕುಣಿಯಿತು. ಸುರಿಯುವ ರಕ್ತ ಮಾಂಸ ಖಂಡಗಳಿಗೆ ಬಾಯೊಡ್ಡಿ ಶಾಕಿನಿಯರು ಅವನ ಹಿಂದೆ ಹೋಗುತ್ತಿದ್ದರು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಬೊಬ್ಬೆ: ಕೂಗಾಟ; ಮೊಳಗು: ಧ್ವನಿ, ಸದ್ದು; ಅರುಣಜಲ: ಕೆಂಪಾದ ನೀರು (ರಕ್ತ); ವರುಷ: ಮಳೆ; ರಿಪು: ವೈರಿ; ಕೊರಳು: ಕತ್ತು; ಬನ: ಕಾದು; ಕುಣಿ: ನರ್ತಿಸು; ಖಡ್ಗ: ಕತ್ತಿ; ಕೇಕಿ: ನವಿಲು, ಮಯೂರ; ವನ: ಕಾಡು; ಸುರಿ: ವರ್ಷಿಸು; ಖಂಡ: ತುಂಡು, ಚೂರು; ರಕುತ: ನೆತ್ತರು; ಧಾರೆ: ಪ್ರವಾಹ; ತರತರ: ಹಲವಾರು; ಶಾಕಿನಿ: ಒಂದು ಕ್ಷುದ್ರ ದೇವತೆ; ಸಮೂಹ: ಗುಂಪು; ಬಳಿ: ಹತ್ತಿರ; ಐದು: ಬಂದು ಸೇರು; ನಂದನ: ಮಗ;

ಪದವಿಂಗಡಣೆ:
ಅರಿಭಟರ +ಬೊಬ್ಬೆಗಳ +ಮೊಳಗಿನೊಳ್
ಅರುಣಜಲ +ವರುಷದಲಿ +ರಿಪುಗಳ
ಕೊರಳ +ಬನದಲಿ +ಕುಣಿದುವ್+ಈತನ +ಖಡ್ಗ+ವನಕೇಕಿ
ಸುರಿವ +ಖಂಡದ +ರಕುತ +ಧಾರೆಗೆ
ತರತರದಿ +ಬಾಯ್+ತೆಗೆದು +ಶಾಕಿನಿ
ಯರ +ಸಮೂಹವು +ಬಳಿಯಲ್+ಐದಿತು +ಪಾರ್ಥ+ನಂದನನ

ಅಚ್ಚರಿ:
(೧) ಅಭಿಮನ್ಯುವಿನ ಖಡ್ಗವನ್ನು ನವಿಲಿಗೆ ಹೋಲಿಸುವ ಪರಿ – ಅರಿಭಟರ ಬೊಬ್ಬೆಗಳ ಮೊಳಗಿನೊ
ಳರುಣಜಲ ವರುಷದಲಿ ರಿಪುಗಳ ಕೊರಳ ಬನದಲಿ ಕುಣಿದುವೀತನ ಖಡ್ಗವನಕೇಕಿ

ಪದ್ಯ ೫: ಕೌರವನೇಕೆ ನಿಟ್ಟುಸಿರು ಬಿಟ್ಟನು?

ದುಗುಡವೇಕೈ ನಿಮಗೆ ಕರ್ಣಾ
ದಿಗಳು ನೀವಕ್ಕುಡರೆ ಬಲುಗಾ
ಳೆಗದೊಳಗೆ ಕೈಮಾಡಿ ನೊಂದಿರಿ ಕೊಂದಿರರಿಭಟರ
ಹಗೆಯ ಕಟ್ಟಲು ಕೊಟ್ಟ ಭಾಷೆಯ
ಬಿಗುಹು ಬೀತುದು ಗುರುಗಳಲಿ ನಂ
ಬುಗೆ ನಿರರ್ಥಕವಾಯ್ತೆನುತ ಕುರುರಾಯ ಬಿಸುಸುಯ್ದ (ದ್ರೋಣ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಕೌರವನು, ಕರ್ಣಾ, ನಾಯಕರೇ, ನೀವೇಕೆ ದುಃಖಿಸುವಿರಿ? ಮಹಾಯುದ್ಧದಲ್ಲಿ ಕಾದು ಶತ್ರುವೀರರನ್ನು ಕೊಂದಿರಿ, ನೀವೂ ಆಯಾಸಗೊಂಡು ನೊಂದಿರಿ, ಶತ್ರುವನ್ನು ಕಟ್ಟಿ ಹಾಕುವೆನೆಂದು ಗುರುಗಳು ನೀಡಿದ ಭಾಷೆಯನ್ನು ನಡೆಸಿಕೊಡಲಿಲ್ಲ. ಅವರ ಮೇಲಿಟ್ಟ ನಂಬಿಕೆ ನಿರರ್ಥಕವಾಯಿತು ಎಂದು ಕೌರವನು ನಿಟ್ಟುಸಿರು ಬಿಟ್ಟನು.

ಅರ್ಥ:
ದುಗುಡ: ದುಃಖ; ಆದಿ: ಮುಂತಾದ; ಅಕ್ಕುಡರ್: ಸತ್ವಶಾಲಿಗಳು; ಬಲು: ಬಹಳ, ಶಕ್ತಿ; ಕಾಳೆಗ: ಯುದ್ಧ; ಕೈಮಾಡು: ಹೋರಾದು; ನೊಂದು: ನೋವು; ಕೊಂದು: ಸಾವು; ಅರಿ: ವೈರಿ; ಭಟ: ಸೈನಿಕ; ಹಗೆ: ವೈರಿ; ಕೊಟ್ಟ: ನೀಡಿದ; ಭಾಷೆ: ನುಡಿ; ಬಿಗುಹು: ಬಿಗಿ; ಬೀತುದು: ಕ್ಷಯವಾಯಿತು; ಗುರು: ಆಚಾರ್ಯ; ನಂಬು: ವಿಶ್ವಾಸವಿಡು; ನಿರರ್ಥಕ: ಪ್ರಯೋಜನವಿಲ್ಲದ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ದುಗುಡವೇಕೈ +ನಿಮಗೆ +ಕರ್ಣಾ
ದಿಗಳು +ನೀವ್+ಅಕ್ಕುಡರೆ +ಬಲು+ಕಾ
ಳೆಗದೊಳಗೆ +ಕೈಮಾಡಿ +ನೊಂದಿರಿ +ಕೊಂದಿರ್+ಅರಿಭಟರ
ಹಗೆಯ +ಕಟ್ಟಲು +ಕೊಟ್ಟ +ಭಾಷೆಯ
ಬಿಗುಹು +ಬೀತುದು +ಗುರುಗಳಲಿ +ನಂ
ಬುಗೆ +ನಿರರ್ಥಕವಾಯ್ತೆನುತ +ಕುರುರಾಯ +ಬಿಸುಸುಯ್ದ

ಅಚ್ಚರಿ:
(೧) ಗುರುಗಳನ್ನು ದೂಷಿಸುವ ಪರಿ – ಹಗೆಯ ಕಟ್ಟಲು ಕೊಟ್ಟ ಭಾಷೆಯ ಬಿಗುಹು ಬೀತುದು ಗುರುಗಳಲಿ
(೨) ಹಗೆ, ಅರಿ – ಸಮಾನಾರ್ಥಕ ಪದ

ಪದ್ಯ ೫೦: ಪಾಂಡವ ಸೈನ್ಯವು ಹೇಗೆ ಒಟ್ಟುಗೂಡಿತು?

ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ (ದ್ರೋಣ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಚೆಲ್ಲಾಪಿಲ್ಲಿಯಾಗಿದ್ದ ಪಾಂಡವ ಸೈನ್ಯವು ಒಟ್ಟುಗೂಡಿತು. ರಾಜನನ್ನು ಯುದ್ಧಕ್ಕೆ ಬಿಡದೆ ವೈರಿಸೈನ್ಯವು ಕಾಲಭೈರವನಾದ ದ್ರೋಣನನ್ನು ತಡೆದು ನಿಂತರು. ಸಾಲುಗಳು ತಪ್ಪದೆ ವ್ಯೂಹವು ಛಿದ್ರವಾಗದಂತೆ ಕಲ್ಪಾಂತದ ಕಡಲಿನಂತೆ ಕೌರವ ಸೈನ್ಯವನ್ನೂ ದ್ರೋಣನನ್ನೂ ತಡೆದು ನಿಲ್ಲಿಸಿದರು.

ಅರ್ಥ:
ಹರೆದ: ವ್ಯಾಪಿಸಿದ; ಬಲ: ಸೈನ್ಯ; ಒಗ್ಗು: ಗುಂಪು; ರಾಯ: ರಾಜ; ಉರವಣೆ:ಆತುರ, ಅವಸರ; ನೃಪಾಲ: ರಾಜ; ಉರುಬು: ಅತಿಶಯವಾದ ವೇಗ; ತರುಬು: ತಡೆ, ನಿಲ್ಲಿಸು; ಪರಬಲ: ವೈರಿ ಸೈನ್ಯ; ಕಾಲಭೈರವ: ಶಿವನ ಒಂದು ರೂಪ; ಹೊರಳು: ತಿರುವು, ಬಾಗು; ಒಡೆ: ಸೀಳು; ಭಾರಣೆ: ಮಹಿಮೆ, ಗೌರವ; ಉತ್ತರ: ಪರಿಹಾರ; ಕಲ್ಪ: ಸಹಸ್ರಯುಗ, ಪ್ರಳಯ; ಕಡೆ: ಕೊನೆ; ಕಡಲು: ಸಾಗರ; ಗರುವಿಕೆ: ಗರ್ವ, ಜಂಭ; ಗಾಢ: ಹೆಚ್ಚಳ; ನಡೆ: ಚಲಿಸು; ತಡೆ: ನಿಲ್ಲಿಸು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ಹರೆದ +ಬಲವ್+ಒಗ್ಗಾಯ್ತು +ರಾಯನನ್
ಉರವಣಿಸಲ್+ಈಯದೆ +ನೃಪಾಲಕರ್
ಉರುಬಿದರು +ತರುಬಿದರು +ಪರಬಲ+ ಕಾಲಭೈರವನ
ಹೊರಳಿ+ಒಡೆಯದೆ +ಭಾರಣೆಯಲ್
ಉತ್ತರಿಸಿ+ ಕಲ್ಪದ +ಕಡೆಯ +ಕಡಲಿನ
ಗರುವಿಕೆಯ +ಗಾಢದಲಿ +ನಡೆದರು +ತಡೆದರ್+ಅರಿಭಟರ

ಅಚ್ಚರಿ:
(೧) ಉರುಬಿದರು, ತರುಬಿದರು – ಪ್ರಾಸ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲ್ಪದ ಕಡೆಯ ಕಡಲಿನ

ಪದ್ಯ ೧೫: ಅರ್ಜುನನ ಮುಂದೆ ಯಾರ ಬಿರುದುಗಳನ್ನು ಹೇಳಿದರು?

ಉದಯವಾಗುವ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ (ದ್ರೋಣ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವಾಗುವ ಮೊದಲೇ ತ್ರಿಗರ್ತರು ಗುಂಪಾಗಿ ತಮ್ಮೊಡನೆ ಕಾಳಗಕ್ಕೆ ಬರಬೇಕೆಂದು ಮದೋನ್ಮತ್ತ ಶತ್ರುಭಟ ಭೈರವನಾದ ಅರ್ಜುನನಿಗೆ ದೂತರೊಡನೆ ಹೇಳಿಕಳುಹಿಸಿದರು. ಅವರು ಬಂದು ಅರ್ಜುನನ ಮುಂದೆ ಸಂಶಪ್ತಕರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ:ರಣರಂಗ; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಕದನ: ಯುದ್ಧ; ಅಳವಿ: ಯುದ್ಧ; ಕೊಡು: ನೀಡು; ಬೇಗ: ಶೀಘ್ರ; ಮದ:ಅಹಂಕಾರ; ಅರಿ: ವೈರಿ; ಭಟ: ಸೈನಿಕ; ಭೈರವ: ಶಿವನ ರೂಪ; ಅಟ್ಟು: ಹಿಂಬಾಲಿಸು; ಭಟ್ಟ: ಪರಾಕ್ರಮಿ; ಬಂದು: ಆಗಮಿಸು; ಒದರು: ಹೇಳು; ಬಿರುದು: ಗೌರವಸೂಚಕ ಪದ;

ಪದವಿಂಗಡಣೆ:
ಉದಯವಾಗುವ +ಮುನ್ನ +ಕಳನೊಳು
ಹೊದರು+ಕಟ್ಟಿದರ್+ಈ+ ತ್ರಿಗರ್ತರು
ಕದನಕ್+ಎಮ್ಮೊಳಗ್+ಅಳವಿ+ಕೊಡುವುದು +ಬೇಗ +ಬಹುದೆಂದು
ಮದವದ್+ಅರಿಭಟ+ ಭೈರವಂಗ್
ಅಟ್ಟಿದರು +ಭಟ್ಟರನ್+ಅವರು +ಬಂದ್+ಒದ
ರಿದರು +ಪಾರ್ಥನ +ಮುಂದೆ+ ಸಮಸಪ್ತಕರ +ಬಿರುದುಗಳ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಅರಿಭಟ ಭೈರವ

ಪದ್ಯ ೫೬: ದ್ರೋಣರು ಧೃಷ್ಟದ್ಯುಮ್ನನನ್ನು ಹೇಗೆ ಸೋಲಿಸಿದರು?

ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ (ದ್ರೋಣ ಪರ್ವ, ೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬಿಲ್ಲಿನ ಯುದ್ಧದಲ್ಲಿ ಶಿವನಾದ ನಾನು ಕೋಪಗೊಂಡಾಗ ನನ್ನೊಡನೆ ಹೋರಾಡಿ ಬದುಕುವವರಾರು? ಹೋಗು, ಎನ್ನುತ್ತಾ ದ್ರೋಣನು ಮತ್ತೆ ಮತ್ತೆ ಧೃಷ್ಟದ್ಯುಮ್ನನನ್ನು ಬಾಣಗಳಿಂದ ಹೊಡೆದು ಅವನ ಬಿಲ್ಲನ್ನೂ, ಸಾರಥಿಯನ್ನೂ ಕತ್ತರಿಸಿ ಅರ್ಧ ಚಂದ್ರ ಬಾಣವನ್ನು ಹಣೆಯೊಡೆಯುವಂತೆ ಪ್ರಯೋಗಿಸಿದನು.

ಅರ್ಥ:
ಕಡಗು: ಉತ್ಸಾಹಗೊಳ್ಳು; ಕೋದಂಡ: ಬಿಲ್ಲು; ರುದ್ರ: ಶಿವ; ತೊಡಕು: ಸಿಕ್ಕು, ಗೋಜು; ಬದುಕು: ಜೀವಿಸು; ಸಾರು: ಪ್ರಕಟಿಸು; ಒಡನೊಡನೆ: ಒಮ್ಮೆಲೆ; ನಾರಾಚ: ಬಾಣ, ಸರಳು; ಜಾಲ: ಗುಂಪು; ಅರಿ: ವೈರಿ; ಭಟ: ಸೈನಿಕ; ಬಿಗಿ: ಭದ್ರ, ಗಟ್ಟಿ; ಕಡಿ: ಸೀಳು; ಬಿಸುಟು: ಹೊರಹಾಕು; ತನಯ: ಮಗ; ಹಿಡಿ: ಗ್ರಹಿಸು; ಬಿಲ್ಲು: ಚಾಪ; ಸಾರಥಿ: ಸೂತ; ಅಡೆಗೆಡಹು: ತಳ್ಳು, ಕತ್ತರಿಸು; ಶರ: ಬಾಣ; ನೊಸಲು: ಹಣೆ; ಎಚ್ಚು: ಬಾಣ ಪ್ರಯೋಗ ಮಾಡು; ಒಡೆ: ಸೀಳು;

ಪದವಿಂಗಡಣೆ:
ಕಡಗಿದಡೆ +ಕೋದಂಡ +ರುದ್ರನ
ತೊಡಕಿ +ಬದುಕುವರಾರು +ಸಾರೆಂದ್
ಒಡನೊಡನೆ +ನಾರಾಚ+ಜಾಲದಲ್+ಅರಿಭಟನ +ಬಿಗಿದು
ಕಡಿದು +ಬಿಸುಟನು+ ದ್ರುಪದ+ತನಯನು
ಹಿಡಿದ+ ಬಿಲ್ಲನು +ಸಾರಥಿಯನ್+ಅಡೆ
ಕೆಡಹಿದನು +ಚಂದ್ರಾರ್ಧ+ಶರದಲಿ +ನೊಸಲನ್+ಒಡೆ+ಎಚ್ಚ

ಅಚ್ಚರಿ:
(೧) ದ್ರೋಣನ ಹಿರಿಮೆ – ಕಡಗಿದಡೆ ಕೋದಂಡ ರುದ್ರನತೊಡಕಿ ಬದುಕುವರಾರು
(೨) ಹೋರಾಟವನ್ನು ವಿವರಿಸುವ ಪದಗಳು – ಬಿಗಿದು, ಕಡಿದು, ಬಿಸುಟನು, ಕೆಡಹು;

ಪದ್ಯ ೨೮: ಕರ್ಣನು ಹಿಂದಕ್ಕೆ ಹೇಗೆ ಸರಿದನು?

ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ (ವಿರಾಟ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನು ಕರ್ಣನ ಬಾಣಗಳನ್ನು ನಿಮಿಷದೊಳಗೆ ಸಂಹರಿಸಿ, ಎರಡು ಬಾಣಗಳಿಂದ ಕರ್ನನ ಸಾರಥಿಯನ್ನೂ, ಐದು ಬಾಣಗಳಿಂದ ಅವನ ಕುದುರೆಗಳನ್ನೂ, ನಾಲ್ಕು ಬಾಣಗಳಿಂದ ಅವನ ಕೈಯಲ್ಲಿದ್ದ ಬಿಲ್ಲನ್ನೂ ಕಡಿದು ಹಾಕಲು, ಗೆಲುವಿನ ಆವೇಶದಲ್ಲಿದ್ದ ಕರ್ಣನು ಮೌನದಿಂದ ಹಿಂದಕ್ಕೆ ಸರಿದನು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಶರ: ಬಾಣ; ಜಾಲ: ಬಲೆ; ಸಂಹರಿಸು: ನಾಶಮಾದು; ನಿಮಿಷ: ಕ್ಷಣಮಾತ್ರ; ಸಾರಥಿ: ಸೂತ; ಅಂಬು: ಬಾಣ; ಹಯ: ಕುದುರೆ; ಕರ: ಕೈ; ಬಿಲ್ಲು: ಚಾಪ; ಕಡಿ: ಸೀಳು; ಭಗ್ನ: ನಾಶ; ಉತ್ಕರ್ಷ:ಹೆಚ್ಚಳ, ಮೇಲ್ಮೆ; ಭಂಗ: ನಾಶ; ಮುರಿ: ಸೀಳು; ಮೌನ: ಸುಮ್ಮನಿರುವಿಕೆ;

ಪದವಿಂಗಡಣೆ:
ಅರಿಭಟನ +ಶರಜಾಲವನು +ಸಂ
ಹರಿಸಿದನು +ನಿಮಿಷದಲಿ +ಫಲುಗುಣನ್
ಎರಡು +ಶರದಲಿ +ಸಾರಥಿಯನ್+ಐದ್+ಅಂಬಿನಲಿ +ಹಯವ
ಶರ +ಚತುಷ್ಟಯದಿಂದ +ಕರ್ಣನ
ಕರದ +ಬಿಲ್ಲನು +ಕಡಿಯೆ +ಭಗ್ನ
ಉತ್ಕರುಷ+ ಭಂಗಿತನಾಗಿ +ಮುರಿದನು +ಮೌನದಲಿ +ಕರ್ಣ

ಅಚ್ಚರಿ:
(೧) ಕರ್ಣನು ಹಿಂದಕ್ಕೆ ಸರಿದ ಪರಿ – ಭಗ್ನೋತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ

ಪದ್ಯ ೩೯: ಚಿತ್ರಸೇನನು ಹೇಗೆ ಕಂಡನು?

ಮತ್ತೆಕೊಂಡನು ಬಿಲು ಸರಳ ನಭ
ಕೊತ್ತಿದನು ರಣಭಯವನಹಿತನ
ಕುತ್ತಿದನು ಕಣ್ಣಿನಲಿ ಕಡಿದನು ಮನದೊಳರಿಭಟನ
ಕೆತ್ತಿದನು ಕೂರಲಗಿನಲಿ ಮುಳು
ಮುತ್ತ ಹೂತಂದದಲಿ ಹುದುಗಿದ
ನೆತ್ತರಿನ ನೆಣವಸೆಯೊಳೆಸೆದನು ರಥದೊಳಾ ಖಚರ (ಅರಣ್ಯ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕರ್ಣನು ಮತ್ತೆ ಬಿಲ್ಲು ಬಾಣಗಳನ್ನು ಹಿಡಿದು, ತನಗೊದಗಿದ ಸೋಲಿನ ಭಯವನ್ನು ತೂರಿ, ಚಿತ್ರಸೇನನನ್ನು ಕಣ್ಣಿನಲ್ಲೇ ಕೊಂದು, ಮನಸ್ಸಿನಲ್ಲೇ ಅವನನ್ನು ವಧಿಸಿದನು. ಬಾಣಗಳಿಂದ ಅವನನ್ನು ಘಾತಿಸಲು, ಬಾಣಗಳು ಗಂಧರ್ವನ ಮೈಯಲ್ಲಿ ನೆಟ್ಟವು. ರಕ್ತವೋಸರಿ, ಮಾಂಸ ಖಂಡಾಗಳು ಹೊರಬಂದು, ಗಂಧರ್ವನು ಮುಳ್ಳೂ ಮುತ್ತುಗದ ಮರದಲ್ಲಿ ಹೂಬಿಟ್ಟಿದೆಯೋ ಎಂಬಂತೆ ರಥದಲ್ಲಿ ಕಾಣಿಸಿದ

ಅರ್ಥ:
ಬಿಲು: ಬಿಲ್ಲು, ಚಾಪ; ಸರಳ: ಬಾಣ; ನಭ: ಆಗಸ; ರಣ: ಯುದ್ಧ; ಭಯ: ಅಂಜಿಕೆ; ಅಹಿತ: ಶತ್ರು; ಕುತ್ತು: ಸೀಳು; ಕಣ್ಣು: ನಯನ; ಕಡಿ: ಸೀಳು; ಮನ: ಮನಸ್ಸು; ಅರಿ: ವೈರಿ; ಭಟ: ಸೈನಿಕ; ಕೆತ್ತು: ಅದಿರು, ನಡುಗು; ಕೂರಲಗು: ಹರಿತವಾದ ಬಾಣ; ಮುಳು: ಮುಳ್ಳು; ಮುತ್ತ: ಮುತ್ತುಗದ ಮರ; ಹೂ: ಪುಷ್ಪ; ಹುದುಗು: ಅಡಗು; ನೆತ್ತರು: ರಕ್ತ; ನೆಣವಸೆ: ಹಸಿಯಾದ ಕೊಬ್ಬು; ಎಸೆ: ತೋರು; ರಥ: ಬಂಡಿ; ಖಚರ: ಗಂಧರ್ವ;

ಪದವಿಂಗಡಣೆ:
ಮತ್ತೆ+ಕೊಂಡನು +ಬಿಲು +ಸರಳ +ನಭಕ್
ಒತ್ತಿದನು +ರಣಭಯವನ್+ಅಹಿತನ
ಕುತ್ತಿದನು+ ಕಣ್ಣಿನಲಿ+ ಕಡಿದನು+ ಮನದೊಳ್+ಅರಿ+ಭಟನ
ಕೆತ್ತಿದನು+ ಕೂರಲಗಿನಲಿ +ಮುಳು
ಮುತ್ತ +ಹೂ+ತಂದದಲಿ+ ಹುದುಗಿದ
ನೆತ್ತರಿನ +ನೆಣವಸೆಯೊಳ್+ಎಸೆದನು +ರಥದೊಳಾ+ ಖಚರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೆತ್ತಿದನು ಕೂರಲಗಿನಲಿ ಮುಳುಮುತ್ತ ಹೂತಂದದಲಿ