ಪದ್ಯ ೪೬: ಅರ್ಜುನನು ಯಾವುದನ್ನು ನೆನಪಿಸಲು ಹೇಳಿದನು?

ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೆ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ (ಗದಾ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ನುಡಿಯುತ್ತಾ, ಭೀಮನು ಪ್ರಾಣ ಸಹಿತನಾಗಲಿ, ವೈರಿಯ ತೊಡೆಯನ್ನು ಮುರಿವೆನೆಂಬುದೇ ಪ್ರತಿಜ್ಞೆಯಲ್ಲವೇ? ಸಭೆಯ ನಡುವೆ ಭೀಮನು ಶಪಥಮಾಡಲಿಲ್ಲವೇ? ಅದನ್ನು ಭೀಮನಿಗೆ ನೆನಪಿಸಿರಿ. ದ್ರೌಪದಿಗೆ ವಿಜಯಲಕ್ಷ್ಮಿಯು ಸವತಿಯಾಗುತ್ತಾಳೆ ಎಂದನು.

ಅರ್ಥ:
ಅನಿಲಸುತ: ಭೀಮ; ಸಪ್ರಾಣಿ: ಪ್ರಾಣ ಸಹಿತ; ರಿಪು: ವೈರಿ; ಜನಪ: ರಾಜ; ನೂರು: ಶತ; ಭಂಗ: ಮುರಿಯುವಿಕೆ; ಮುನ್ನಿನ: ಮುಂಚೆ; ಪ್ರತಿಜ್ಞೆ: ಶಪಥ, ಪಣ; ಸಭೆ: ಪರಿಷತ್ತು, ಗೋಷ್ಠಿ; ಮಧ್ಯ: ನಡುವೆ; ನೆನಸು: ಜ್ಞಾಪಿಸಿಕೋ; ಸಾಕು: ತಡೆ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಕುಮಾರಿ: ಪುತ್ರಿ; ಸವತಿ: ತನ್ನ ಗಂಡನ ಇನ್ನೊ ಬ್ಬಳು ಹೆಂಡತಿ, ಸಪತ್ನಿ;

ಪದವಿಂಗಡಣೆ:
ಅನಿಲಸುತ +ಸಪ್ರಾಣಿಸಲಿ +ರಿಪು
ಜನಪನ್+ಊರು+ವಿಭಂಗವೆ +ಮು
ನ್ನಿನ +ಪ್ರತಿಜ್ಞೆಯಲಾ +ಸಭಾಮಧ್ಯದಲಿ+ ಕುರುಪತಿಯ
ನೆನಸಿಕೊಡಿ +ಸಾಕಿನ್ನು+ ಬೇರೊಂದ್
ಅನುನಯವು +ತಾನೇನು +ವಿಜಯಾಂ
ಗನೆಗೆ +ದ್ರುಪದಕುಮಾರಿ +ತಪ್ಪದೆ+ ಸವತಿಯಹಳೆಂದ

ಅಚ್ಚರಿ:
(೧) ಗೆಲ್ಲಲಿ ಎಂದು ಹೇಳುವ ಪರಿ – ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ

ಪದ್ಯ ೩೨: ಭೀಮ ದುರ್ಯೋಧನರ ರಕ್ತವು ಹೇಗೆ ಭೂಮಿಯನ್ನು ತೋಯಿಸಿತು?

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ (ಗದಾ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಸಂತೈಸಿಕೊಂಡು ಕೌರವನನ್ನು ಹೊಡೆಯಲು ಬಿಸಿರಕ್ತ ಸುರಿದು ನೆಲದಧೂಳು ನೆನೆಯಿತು. ಕೌರವನು ಅದನ್ನು ಲೆಕ್ಕಿಸದೆ ಭೀಮನನ್ನು ಹೊಡೆಯಲು ಅವನ ಮೈಯಿಂದ ರಕ್ತ ಸುರಿಯಿತು.

ಅರ್ಥ:
ಸಂತೈಸು: ಸಮಾಧಾನ ಪಡಿಸು; ರಿಪು: ವೈರಿ; ಕೈ: ಹಸ್ತ; ತಾಗು: ಮುಟ್ಟು; ಅರಸ: ರಾಜ; ಘಾಯ: ಪೆಟ್ತು; ಬೇಗಡೆ: ಮಿಂಚುವ ಬಣ್ಣ; ಉಚ್ಚಳಿಸು: ಮೇಲಕ್ಕೆ ಹಾರು; ಬಿಸಿ: ಕಾವು, ಶಾಖ; ರಕುತ: ನೆತ್ತರು; ಹುಡಿ: ಹಿಟ್ಟು, ಪುಡಿ; ನನೆ: ತೋಯು, ಒದ್ದೆಯಾಗು; ಗರುವ: ಶ್ರೇಷ್ಠ; ಬಗೆ: ಎಣಿಸು, ಲಕ್ಷಿಸು, ಸೀಳು; ಭಾಗ: ಅಂಶ, ಪಾಲು; ರಕುತ: ನೆತ್ತರು; ಅನಿಲಸುತ: ವಾಯು ಪುತ್ರ (ಭೀಮ); ತೂಗು: ತೋಲನ ಮಾಡು, ಅಲ್ಲಾಡಿಸು; ಹೊಯ್ದು: ಹೊಡೆ; ನಂದನ: ಮಗ;

ಪದವಿಂಗಡಣೆ:
ಆಗಳೇ +ಸಂತೈಸಿ +ರಿಪು +ಕೈ
ತಾಗಿಸಿದನ್+ಅರಸನನು+ ಘಾಯದ
ಬೇಗಡೆಯಲ್+ಉಚ್ಚಳಿಸಿದುದು +ಬಿಸಿರಕುತ +ಹುಡಿ +ನನೆಯೆ
ಆ +ಗರುವನದ +ಬಗೆವನೇ +ಸರಿ
ಭಾಗ+ರಕುತವನ್+ಅನಿಲಸುತನಲಿ
ತೂಗಿ +ತೆಗೆದವೊಲಾಯ್ತು+ ಹೊಯ್ದನು +ಪವನ+ನಂದನನ

ಅಚ್ಚರಿ:
(೧) ಅರಸ, ಗರುವನ, ರಿಪು – ದುರ್ಯೋಧನನನ್ನು ಕರೆದ ಪರಿ

ಪದ್ಯ ೪೨: ಕೃಷ್ಣನು ಭೀಮನಿಗೆ ಏನು ಮಾಡಲು ಹೇಳಿದನು?

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಅವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ (ದ್ರೋಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಎಲ್ಲರೂ ಶಸ್ತ್ರವನ್ನು ತ್ಯಜಿಸಿರುವುದನ್ನು ಕಂಡ ನಾರಾಯಣಾಸ್ತ್ರವು, ಶಸ್ತ್ರವನ್ನು ಹಿಡಿದವರನ್ನು ಹುಡುಕುತ್ತಾ ಬರುತ್ತಿತ್ತು. ಆಗ ಕೃಷ್ಣನು ಭೀಮನಿಗೆ ಕೋಪದಿಂದ, ತನ್ನ ಕೈಯಲ್ಲಿರುವ ಆಯುಧವನ್ನು ಭೂಮಿಗೆ ಎಸೆದು ನನ್ನನ್ನೇ ನೋಡೆಂದು ಹೇಳಲು ಭೀಮನು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಕೈದು: ಶಸ್ತ್ರ; ಒತ್ತ: ಹಿಡಿದ; ಅಸರು: ಹುಡುಕು; ಬರಲು: ಆಗಮಿಸು; ಪವನಸುತ: ಭೀಮ; ಸುತ: ಮಗ; ಥಟ್ಟು: ಪಕ್ಕ, ಕಡೆ, ಗುಂಪು; ದನುಜರಿಪು: ಕೃಷ್ಣ; ಮುಳಿ: ಸಿಟ್ಟು, ಕೋಪ; ಅವನಿ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಕಳೆ: ಬೀಡು, ತೊರೆ; ಕೈದು: ಆಯುಧ; ಮೊದಲು: ಮುಂಚೆ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅನಿಲಸುತ: ಭೀಮ; ನಸುನಗು: ಹಸನ್ಮುಖ;

ಪದವಿಂಗಡಣೆ:
ಇವರೊಳ್+ಉಂಟೇ +ಕೈದು+ ವೊತ್ತವರ್
ಅವರನ್+ಅರಸುವೆನ್+ಎನುತ +ಬರಲ್+ಆ
ಪವನಸುತನನು+ ಥಟ್ಟಿಸಿದನಾ +ದನುಜರಿಪು+ ಮುಳಿದು
ಅವನಿಗ್+ಇಳಿದ್+ಈಡಾಡಿ +ಕಳೆ +ಕೈ
ದುವನು +ತಾ +ಮೊದಲಾಗಿ +ನಿಂದಂದ್
ಅವನು+ ನೋಡೆನಲ್+ಅನಿಲಸುತ +ನಸುನಗುತಲ್+ಇಂತೆಂದ

ಅಚ್ಚರಿ:
(೧) ಪವನಸುತ, ಅನಿಲಸುತ – ಭೀಮನನ್ನು ಕರೆದ ಪರಿ

ಪದ್ಯ ೪೭: ಘಟೋತ್ಕಚನ ಸೈನ್ಯವು ಹೇಗಿತ್ತು?

ಕಾಳರಾತ್ರಿಯ ಕಟಕವೋ ಮೇಣ್
ಕಾಲರುದ್ರನ ಪಡೆಯೊ ದಾನವ
ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು
ಆಳ ಬೋಳೈಸಿದನು ಕಪ್ಪುರ
ವೀಳೆಯವ ಹಾಯ್ಕಿದನು ಲೋಹದ
ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು (ದ್ರೋಣ ಪರ್ವ, ೧೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಳರಾತ್ರಿಯ ಸೈನ್ಯವೋ, ಕಾಲರುದ್ರನ ಸೈನ್ಯವೋ ಎಂಬಂತೆ ಘಟೋತ್ಕಚನ ಸೈನಿಕರ ಹೆಚ್ಚಳವನ್ನು ಯಾವ ಕವಿತಾನೆ ವರ್ಣಿಸಲು ಸಾಧ್ಯ? ಸೈನಿಕರೆಲ್ಲರನ್ನೂ ಮನ್ನಿಸಿ ಕರ್ಪೂರ ವೀಳೆಯವನ್ನು ಕೊಟ್ಟು, ರಥದ ಚಕ್ರಗಳು ಘೀಳಿಡುತ್ತಿರಲು, ರಥವನ್ನು ಹತ್ತಿದನು.

ಅರ್ಥ:
ಕಾಳರಾತ್ರಿ: ಭಯಂಕರವಾದ ಇರುಳು, ದಟ್ಟವಾದ ರಾತ್ರಿ; ಕಟಕ: ಸೈನ್ಯ; ಮೇಣ್: ಅಥವ; ಕಾಲರುದ್ರ: ಶಿವನ ಒಂದು ರೂಪ; ಪಡೆ: ಗುಂಪು; ದಾನವ: ರಾಕ್ಷಸ; ಆಳಿ: ಗುಂಪು; ಅಗ್ಗಳಿಕೆ: ಶ್ರೇಷ್ಠತೆ; ಬಣ್ಣಿಸು: ವರ್ಣಿಸು; ಕವಿ: ಕಬ್ಬಿಗ; ಆಳ: ಸೈನಿಕ; ಬೋಳೈಸು: ಸಂತೈಸು, ಸಮಾಧಾನ ಮಾಡು; ವೀಳೆ: ತಾಂಬೂಲ; ಹಾಯ್ಕು: ಇಡು, ಇರಿಸು; ಲೋಹ: ಕಬ್ಬಿಣ, ಉಕ್ಕು; ಗಾಲಿ: ಚಕ್ರ; ಘೀಳಿಡು: ಕಿರಿಚು, ಅರಚು; ರಥ: ಬಂಡಿ; ಏರು: ಮೇಲೆ ಹತ್ತು; ಅನಿಲ: ವಾಯು; ಸುತ: ಮಗ; ಸೂನು: ಮಗ;

ಪದವಿಂಗಡಣೆ:
ಕಾಳರಾತ್ರಿಯ+ ಕಟಕವೋ +ಮೇಣ್
ಕಾಲರುದ್ರನ +ಪಡೆಯೊ +ದಾನವನ್
ಆಳಿನ್+ಅಗ್ಗಳಿಕೆಗಳ +ಬಣ್ಣಿಸಬಲ್ಲ +ಕವಿಯಾರು
ಆಳ +ಬೋಳೈಸಿದನು +ಕಪ್ಪುರ
ವೀಳೆಯವ +ಹಾಯ್ಕಿದನು +ಲೋಹದ
ಗಾಲಿ +ಘೀಳಿಡೆ +ರಥವನ್+ಏರಿದನ್+ಅನಿಲಸುತ+ಸೂನು

ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಸೈನ್ಯವನ್ನು ಹೋಲಿಸುವ ಪರಿ – ಕಾಳರಾತ್ರಿಯ ಕಟಕವೋ ಮೇಣ್ ಕಾಲರುದ್ರನ ಪಡೆಯೊ

ಪದ್ಯ ೪೪: ಕರ್ಣನೇಕೆ ಮೌನದಿಂದ ಹಿಮ್ಮೆಟ್ಟಿದನು?

ಧನುವನಿಕ್ಕಡಿಗಳೆದು ರಿಪು ಸೂ
ತನ ಶಿರವ ಹರಿಯೆಸಲು ಸಾರಥಿ
ತನವ ತಾನೇ ಮಾಡುತಿದಿರಾದನು ಕೃಪಾಣದಲಿ
ಕನಲಿ ಖಡ್ಗವ ಮುರಿಯೆಸಲು ಮು
ಮ್ಮೊನೆಯ ಶೂಲದಲಿಟ್ಟನಂತದ
ನನಿಲಸುತ ಖಂಡಿಸಲು ಮುರಿದನು ಮೋನದಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಕರ್ನನ ಧನುಸ್ಸನ್ನು ಎರಡು ತುಂಡಾಗಿ ಮುರಿದು, ಸಾರಥಿಯ ತಲೆ ಹಾರಿ ಹೋಗುವಂತೆ ಹೊಡೆಯಲು, ತಾನೇ ಸಾರಥಿತನವನ್ನು ಮಾಡುತ್ತಾ ಕರ್ಣನು ಕತ್ತಿಯನ್ನು ಹಿಡಿದು ಬರಲು, ಭೀಮನು ಅದನ್ನು ತುಂಡರಿಸಿದನು. ತ್ರಿಶೂಲವನ್ನು ಕರ್ಣನು ಪ್ರಯೋಗಿಸಲು, ಭೀಮನು ಅದನ್ನು ತುಂಡುಮಾಡಿದನು. ಕರ್ಣನು ಮೌನದಿಂದ ಹಿಮ್ಮೆಟ್ಟಿದನು.

ಅರ್ಥ:
ಧನು: ಬಿಲ್ಲು; ಇಕ್ಕಡಿ: ಎರಡೂ ಬದಿ; ರಿಪು: ವೈರಿ; ಸೂತ: ಸಾರಥಿ; ಶಿರ: ತಲೆ; ಹರಿ: ಸೀಳು; ಸಾರಥಿ: ಸೂತ; ಇದಿರು: ಎದುರು; ಕೃಪಾಣ: ಕತ್ತಿ, ಖಡ್ಗ; ಕನಲು: ಬೆಂಕಿ, ಉರಿ; ಖಡ್ಗ: ಕತ್ತಿ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಮುಮ್ಮೊನೆ: ಮೂರು ಚೂಪಾದ ತುದಿಯುಳ್ಳ; ಶೂಲ: ತ್ರಿಶೂಲ; ಅನಿಲಸುತ: ಭೀಮ, ವಾಯುಪುತ್ರ; ಖಂಡಿಸು: ಕಡಿ, ಕತ್ತರಿಸು; ಮುರಿ: ಸೀಳು; ಮೋನ: ಮೌನ;

ಪದವಿಂಗಡಣೆ:
ಧನುವನ್+ಇಕ್ಕಡಿಗಳೆದು +ರಿಪು +ಸೂ
ತನ +ಶಿರವ +ಹರಿ+ಎಸಲು +ಸಾರಥಿ
ತನವ+ ತಾನೇ +ಮಾಡುತ್+ಇದಿರಾದನು +ಕೃಪಾಣದಲಿ
ಕನಲಿ +ಖಡ್ಗವ +ಮುರಿ+ಎಸಲು +ಮು
ಮ್ಮೊನೆಯ +ಶೂಲದಲಿಟ್ಟ್+ಅನಂತದನ್
ಅನಿಲಸುತ +ಖಂಡಿಸಲು +ಮುರಿದನು +ಮೋನದಲಿ +ಕರ್ಣ

ಅಚ್ಚರಿ:
(೧) ತಾನೇ ರಥವನ್ನೋಡಿಸಿದ ಎಂದು ಹೇಳುವ ಪರಿ – ಸಾರಥಿ ತನವ ತಾನೇ ಮಾಡುತಿದಿರಾದನು ಕೃಪಾಣದಲಿ

ಪದ್ಯ ೮: ದ್ರೊಣನು ಭೀಮನಿಗೆ ಏನು ಹೇಳಿದನು?

ಅನಿಲಸುತ ಫಡ ಮರಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತುಶರವನು ಕಡಿದು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮ, ಛೇ, ಮೋಸದ ವಿನಯವನ್ನು ನಮ್ಮೊಡನೆ ತೋರಿಸುವೆಯಾ? ಕೌರವನ ತಮ್ಮಂದಿರನ್ನು ಕೊಂದ ಗರ್ವದ ಗಿರಿಯನ್ನಿಳಿದು ಮರಳಿ ಹೋಗು ಎನ್ನುತ್ತಾ ದ್ರೋಣನು ಕಿಡಿ ಸುರಿಯುವ ಬಾಣಗಳನ್ನು ಮೇಲೆ ಮೇಲೆ ಬಿಡಲು, ಭೀಮನು ಆ ಬಾಣಗಳನ್ನು ಕಡಿದು ನಗುತ್ತಾ ಬಿನ್ನಹ ಮಾಡಿದನು.

ಅರ್ಥ:
ಅನಿಲಸುತ: ವಾಯುಪುತ್ರ (ಭೀಮ); ಫಡ: ತಿರಸ್ಕಾರದ ಮಾತು; ಮರಳು: ಹಿಂದಿರುಗು; ಠಕ್ಕು: ಮೋಸ; ವಿನಯ: ಒಳ್ಳೆಯತನ, ಸೌಜನ್ಯ; ಅನುಜ: ಮಗ; ಹೊಯ್ದು: ಹೊಡೆ; ಗರ್ವ: ಅಹಂಕಾರ; ಗಿರಿ: ಬೆಟ್ಟ; ಇಳಿ: ಕೆಳಗೆ ನಡೆ; ಕನಲು: ಬೆಂಕಿ, ಉರಿ; ಕಿಡಿ: ಬೆಂಕಿ; ಸುರಿ: ವರ್ಷಿಸು; ಅಂಬು: ಬಾಣ; ತೆಗೆ: ಹೊರತರು; ಉಬ್ಬು: ಹಿಗ್ಗು; ಕವಿದು: ಆವರಿಸು; ವೃಕೋದರ: ಭೀಮ; ಶರ: ಬಾಣ; ಕಡಿ: ಸೀಳು; ಬಿನ್ನಹ: ಕೋರಿಕೆ; ನಗು: ಹರ್ಷ;

ಪದವಿಂಗಡಣೆ:
ಅನಿಲಸುತ +ಫಡ +ಮರಳು +ಠಕ್ಕಿನ
ವಿನಯವೇ +ನಮ್ಮೊಡನೆ +ಕೌರವನ್
ಅನುಜರನು +ಕೆಡೆಹೊಯ್ದ +ಗರ್ವದ +ಗಿರಿಯನ್+ಇಳಿಯೆನುತ
ಕನಲಿ +ಕಿಡಿ+ ಸುರಿವಂಬ+ ತೆಗೆದ್
ಉಬ್ಬಿನಲಿ +ಕವಿದೆಸುತಿರೆ+ ವೃಕೋದರನ್
ಅನಿತು+ಶರವನು+ ಕಡಿದು +ಬಿನ್ನಹ +ಮಾಡಿದನು +ನಗುತ

ಅಚ್ಚರಿ:
(೧) ಅನಿಲಸುತ, ವೃಕೋದರ – ಭೀಮನನ್ನು ಕರೆದ ಪರಿ

ಪದ್ಯ ೭೬: ಭೀಮನನ್ನು ಯಾರು ಕೆಣಕಿದರು?

ವರವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತು
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ (ದ್ರೋಣ ಪರ್ವ, ೨ ಸಂಧಿ, ೭೬ ಪದ್ಯ)

ತಾತ್ಪರ್ಯ:
ವಿಕರ್ಣ, ಸುಲೋಚನ, ದುರ್ಮರ್ಷಣ ದುಶ್ಯಾಸನರು ಭೀಮನನ್ನು ಕೆಣಕಿ ಯುದ್ಧಾರಂಭಮಾಡಿದರು. ನುಸಿಗಳು ಒಟ್ಟಾಗಿ ಬೆಟ್ಟವನ್ನು ಕಾದುತ್ತಿವೆ, ನೋಡಿರಿ ಭಲೇ ಎಂದು ಗರ್ಜಿಸಿ ಭೀಮನೂ ನಗುತ್ತಾ ಮುಂದೆ ಬಂದನು.

ಅರ್ಥ:
ವರ: ಶ್ರೇಷ್ಠ; ಸಂಗರ: ಯುದ್ಧ; ಕೆಣಕು: ರೇಗಿಸು; ಅನಿಲ: ವಾಯು; ಸುತ: ಮಗ; ನೃಪ: ರಾಜ; ಹರಿಬ: ಕೆಲಸ, ಕಾರ್ಯ; ನೆರೆ: ಗುಂಪು; ನುಸಿ: ಹುಡಿ, ಸಣ್ಣಪುಟ್ಟ, ನೊರಜು; ಗಿರಿ: ಬೆಟ್ಟ; ಕಾಡು: ಹಿಂಸಿಸು, ಪೀಡಿಸು; ಸರಿ: ಸಮಾನ, ಸದೃಶ; ನೋಡು: ವೀಕ್ಷಿಸು; ಪೂತ: ಪವಿತ್ರ; ಉಬ್ಬರಿಸು: ಗರ್ಜಿಸು; ಕೈದೋರು: ಶಕ್ತಿ ಪ್ರದರ್ಶನ ಮಾಡು; ಕಲಿ: ಶೂರ; ಪವಮಾನ: ಗಾಳಿ, ವಾಯು; ಸುತ: ಮಗ; ನಗು: ಹರ್ಷಿಸು;

ಪದವಿಂಗಡಣೆ:
ವರ+ವಿಕರ್ಣ +ಸುಲೋಚನನು +ದು
ರ್ಮರುಷಣನು +ದುಶ್ಯಾಸನನು +ಸಂ
ಗರವ+ ಕೆಣಕಿದರ್+ಅನಿಲಸುತನೊಳು +ನೃಪನ +ಹರಿಬದಲಿ
ನೆರೆದ +ನುಸಿಗಳು +ಗಿರಿಯ +ಕಾಡುವ
ಸರಿಯ +ನೋಡೈ +ಪೂತುರೆನುತ್
ಉಬ್ಬರಿಸಿ +ಕೈದೋರಿದನು +ಕಲಿ +ಪವಮಾನಸುತ +ನಗುತ

ಅಚ್ಚರಿ:
(೧) ಅನಿಲಸುತ, ಪವಮಾನಸುತ – ಭೀಮನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ನೆರೆದ ನುಸಿಗಳು ಗಿರಿಯ ಕಾಡುವಸರಿಯ ನೋಡೈ

ಪದ್ಯ ೯: ಭೀಮನ ಪೌರುಷವು ಹೇಗಿತ್ತು?

ಕಡಿದರರಿಭಟಪಾದಪವನಡ
ಗೆಡಹಿದರು ಗಜಗಿರಿಗಳನು ರಥ
ದೆಡೆದೆವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ
ಕಡಿದು ಹರಹಿದರನಿಲಸುತ ಕಾ
ಲಿಡಲು ತೆರಹಾಯ್ತಹಿತವಿಪಿನದ
ಕಡಿತ ತೀರಿತು ಹೊಕ್ಕನರನೆಲೆಗಾಗಿ ಕಲಿಭೀಮ (ಭೀಷ್ಮ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ಸೈನಿಕರೆಂಬ ಮರಗಳನ್ನು ಕಡಿದು, ಬೆಟ್ಟದಂತಿದ್ದ ಆನೆಗಳನ್ನು ಅಡ್ಡಗೆಡವಿ, ರಥಗಳೆಂಬ ದಿನ್ನೆಗಳನ್ನು ಕೊಚ್ಚಿ ಸಮ ಮಾಡಿ, ಕುದುರೆಗಳ ಮಳೆಗಳನ್ನು ಕತ್ತರಿಸಿ ಹರಡಿದರು. ಭೀಮನು ಕಾಲೆತ್ತಿ ಇಟ್ಟೊಡನೆ ಶತ್ರು ಸೈನ್ಯದ ಅರಣ್ಯವು ತೆರವಾಯಿತು. ಭೀಮನು ರಾಜನ ಬೀಡಿನತ್ತ ನಡೆದನು.

ಅರ್ಥ:
ಕಡಿ: ಸೀಳು, ಕತ್ತರಿಸು; ಅರಿ: ವೈರಿ; ಭಟ: ಸೈನಿಕ; ಪಾದಪ: ಮರಗಿಡ; ಪವನ; ಕೆಡಹು: ಬೀಳಿಸು; ಗಜ: ಆನೆ; ಗಿರಿ: ಬೆಟ್ಟ; ರಥ: ಬಂಡಿ; ಕೊಚ್ಚು: ಕತ್ತರಿಸುವ ಸಾಧನ, ಕತ್ತರಿ; ತುರಗ: ಕುದುರೆ; ವ್ರಜ: ಗುಂಪು; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ಹರಹು: ವಿಸ್ತಾರ, ವೈಶಾಲ್ಯ; ಅನಿಲಸುತ: ವಾಯುಪುತ್ರ (ಭೀಮ); ಕಾಲಿಡು: ತುಳಿ; ತೆರವು: ಎಡೆ, ಜಾಗ; ಅಹಿತ: ವೈರಿ; ವಿಪಿನ: ಕಾಡು; ಕಡಿತ: ಸೀಳು; ತೀರು: ಅಂತ್ಯ; ಹೊಕ್ಕು: ಸೇರು; ನೆಲೆ: ಭೂಮಿ; ಕಲಿ: ಶೂರ;

ಪದವಿಂಗಡಣೆ:
ಕಡಿದರ್+ಅರಿಭಟ+ಪಾದಪವನ್+ಅಡ
ಕೆಡಹಿದರು +ಗಜಗಿರಿಗಳನು +ರಥದ್
ಎಡೆದೆವರ+ ಕೊಚ್ಚಿದರು+ ತುರಗ+ವ್ರಜದ +ಬಲುಮೆಳೆಯ
ಕಡಿದು+ ಹರಹಿದರ್+ಅನಿಲಸುತ +ಕಾ
ಲಿಡಲು +ತೆರಹಾಯ್ತ್+ಅಹಿತ+ವಿಪಿನದ
ಕಡಿತ +ತೀರಿತು +ಹೊಕ್ಕ+ನರ+ನೆಲೆಗಾಗಿ +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾದಪ, ಗಜಗಿರಿ, ಬಲುಮೆಳೆ, ಅಹಿತವಿಪಿನ

ಪದ್ಯ ೬: ಭೀಮನು ಏಕೆ ಬೇಸತ್ತನು?

ಕಲಹದೊಳು ಕರಿಘಟೆಯ ಹೊಯ್ ಹೊ
ಯ್ದಲಸಿ ಕೌರವನನುಜನನು ಮುಂ
ಕೊಳಿಸಿ ಕೊಳ್ಳದೆ ಕಳುಹಿ ಬೇಸರುತನಿಲಸುತ ಮಸಗಿ
ನೆಲನ ಲೋಭಿಯ ಬುದ್ಧಿ ಮರಣಕೆ
ಫಲಿಸಬೇಹುದು ಕರೆ ಸುಯೋಧನ
ನಿಲಲಿ ಬವರಕ್ಕೆನುತ ಗದೆಯನು ತೂಗಿದನು ಭೀಮ (ಭೀಷ್ಮ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಭೀಮನು ಯುದ್ಧದಲ್ಲಿ ಆನೆಗಳನ್ನು ಕೊಂದು ಕೊಂದು ಬೇಸತ್ತನು. ದುಶ್ಯಾಸನನು ಎದುರಿಸಿದರೂ ಲೆಕ್ಕಿಸದೆ ಬೇಸತ್ತು ಕೋಪಗೊಂಡು, ರಾಜ್ಯ ಲೋಭದ ಬುದ್ಧಿಯು ಮರಣದಿಂದಲೇ ಫಲಿಸಬೇಕು, ದುರ್ಯೋಧನನು ಯುದ್ಧಕ್ಕೆ ಬರಲಿ ಕರೆಯಿರಿ ಎಂದು ಗದೆಯನ್ನು ತೂಗಿ ಗರ್ಜಿಸಿದನು.

ಅರ್ಥ:
ಕಲಹ: ಯುದ್ಧ; ಕರಿಘಟೆ: ಆನೆಗಳ ಗುಂಪು; ಹೊಯ್ದು: ಹೊಡೆದು; ಅಲಸು: ಬಳಲಿಕೆ; ಅನುಜ: ತಮ್ಮ; ಮುಂಕೊಳಿಸು: ಎದುರಿಸು; ಕಳುಹು: ತೆರಳು; ಬೇಸರ: ಬೇಜಾರು; ಅನಿಲಸುತ: ವಾಯುಪುತ್ರ; ಮಸಗು:ಹರಡು, ತಿಕ್ಕು; ನೆಲ: ಭೂಮಿ; ಲೋಭಿ: ಕೃಪಣ, ಜಿಪುಣ; ಬುದ್ಧಿ: ತಿಳಿವು, ಅರಿವು; ಮರಣ: ಸಾವು; ಫಲಿಸು: ಕೈಗೂಡು; ಬವರ: ಕಾಳಗ, ಯುದ್ಧ; ಗದೆ: ಒಂದು ಬಗೆಯ ಆಯುಧ, ಮುದ್ಗರ; ತೂಗು:ತೂಗಾಡಿಸು;

ಪದವಿಂಗಡಣೆ:
ಕಲಹದೊಳು +ಕರಿಘಟೆಯ +ಹೊಯ್ +ಹೊ
ಯ್ದ್+ಅಲಸಿ +ಕೌರವನ್+ಅನುಜನನು +ಮುಂ
ಕೊಳಿಸಿ +ಕೊಳ್ಳದೆ +ಕಳುಹಿ +ಬೇಸರುತ್+ಅನಿಲಸುತ +ಮಸಗಿ
ನೆಲನ +ಲೋಭಿಯ +ಬುದ್ಧಿ +ಮರಣಕೆ
ಫಲಿಸಬೇಹುದು +ಕರೆ+ ಸುಯೋಧನ
ನಿಲಲಿ+ ಬವರಕ್ಕೆನುತ +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಭೀಮನ ಖಾರವಾದ ಮಾತು – ನೆಲನ ಲೋಭಿಯ ಬುದ್ಧಿ ಮರಣಕೆ ಫಲಿಸಬೇಹುದು ಕರೆ ಸುಯೋಧನ

ಪದ್ಯ ೬೭: ಅರ್ಜುನನ್ನು ರಥದೊಳಗೆ ಯಾರು ನಿಲಿಸಿದರು?

ಅಹುದಹುದು ತಪ್ಪೇನು ತಪ್ಪೇ
ನಹಿತದುಶ್ಯಾಸನನ ಸಲಹುವೆ
ನಹಿತಬಲವೆನಗನಿಲಸುತನೆನುತೈದೆ ಬರೆ ಕಂಡು
ಬಹಳ ಭೀತಿಯೊಳಸುರರಿಪು ಸ
ನ್ನಿಹಿತ ಚಾಪವ ಹಿಡಿದು ಮನದು
ಮ್ಮಹವ ಕೆಡಿಸಿ ಕೀರೀಟಿಯನು ನಿಲಿಸಿದನು ರಥದೊಳಗೆ (ಕರ್ಣ ಪರ್ವ, ೧೯ ಸಂಧಿ, ೬೭ ಪದ್ಯ)

ತಾತ್ಪರ್ಯ:
ಅರ್ಜುನನು ಭೀಮನಿಗೆ ಉತ್ತರಿಸುತ್ತಾ, ಇದರಲ್ಲಿ ತಪ್ಪೇನು, ಏನು ತಪ್ಪು, ಶತ್ರುವಾದ ದುಶ್ಯಾಸನನನ್ನು ಕಾಪಾಡುತ್ತೇನೆ, ಭೀಮನೇ ನನಗೆ ಶತ್ರು ಎನ್ನುತ್ತಾ ಬರುತ್ತಿರಲು ಶ್ರೀಕೃಷ್ನನು ಬಹಳವಾಗಿ ಬೆದರಿ, ಅರ್ಜುನನು ಎತ್ತಿ ಹಿಡಿದಿದ್ದ ಗಾಂಡಿವವನ್ನು ಹಿಡಿದು, ಅರ್ಜುನನ ಮಹೋತ್ಸಾಹವನ್ನು ತಡೆದು ಅವನನ್ನು ರಥದಲ್ಲೇ ನಿಲ್ಲಿಸಿದನು.

ಅರ್ಥ:
ಅಹುದಹುದು: ಹೌದು; ತಪ್ಪು: ಸರಿಯಿಲ್ಲದ; ಅಹಿತ: ಶತ್ರು; ಸಲಹು: ಕಾಪಾಡು; ಅನಿಲಸುತ: ವಾಯುಪುತ್ರ (ಭೀಮ); ಐದೆ:ವಿಶೇಷವಾಗಿ; ಐದು: ಹೋಗಿಸೇರು; ಬರೆ: ಆಗಮನ; ಕಂಡು: ನೋಡಿ; ಬಹಳ: ತುಂಬ; ಭೀತಿ: ಭಯಂಕರ; ಅಸುರರಿಪು: ದಾನವರ ವೈರಿ (ಕೃಷ್ಣ); ಸನ್ನಿಹಿತ: ಹತ್ತಿರದಲ್ಲಿರುವ, ಸಮೀಪದ; ಚಾಪ: ಬಿಲ್ಲು; ಹಿಡಿ: ಗ್ರಹಿಸು, ಬಂಧನ; ಮನ: ಮನಸ್ಸು; ಉಮ್ಮಹವ: ಉತ್ಸಾಹ, ಸಂತೋಷ; ಕೆಡಿಸು: ಹಾಳುಮಾಡು; ನಿಲಿಸು: ತಡೆ; ರಥ: ಬಂಡಿ;

ಪದವಿಂಗಡಣೆ:
ಅಹುದಹುದು +ತಪ್ಪೇನು +ತಪ್ಪೇನ್
ಅಹಿತ+ ದುಶ್ಯಾಸನನ +ಸಲಹುವೆನ್
ಅಹಿತ+ಬಲವೆನಗ್+ಅನಿಲಸುತನ್+ಎನುತ್+ಐದೆ+ ಬರೆ +ಕಂಡು
ಬಹಳ +ಭೀತಿಯೊಳ್+ಅಸುರರಿಪು+ ಸ
ನ್ನಿಹಿತ+ ಚಾಪವ +ಹಿಡಿದು +ಮನದ್
ಉಮ್ಮಹವ +ಕೆಡಿಸಿ +ಕೀರೀಟಿಯನು+ ನಿಲಿಸಿದನು +ರಥದೊಳಗೆ

ಅಚ್ಚರಿ:
(೧) ತಪ್ಪೇನು, ಅಹಿತ – ೨ ಬಾರಿ ಪ್ರಯೋಗ
(೨) ಭೀಮ, ಅರ್ಜುನ, ಕೃಷ್ಣರನ್ನು – ಅನಿಲಸುತ, ಕಿರೀಟಿ, ಅಸುರರಿಪು ಎಂದು ಬಣ್ಣಿಸಿರುವುದು